ಎಲ್ಲ ಹೆಣ್ಣಿನೆದೆಯಲ್ಲೂ ಒಬ್ಬ ಸೀತೆ, ಒಬ್ಬ ಉಮ್ರಾವ್..

ಎನ್ ಸ೦ಧ್ಯಾರಾಣಿ

ಕೃಪೆ : ಕನ್ನಡ ಪ್ರಭ

’ಮೃದೂನಿ ಕುಸುಮಾದಪಿ, ವಜ್ರಾದಪಿ ಕಠೋರಹ’ – ಹೂವಿನಷ್ಟು ಮೃದು, ವಜ್ರದಷ್ಟು ಕಠೋರ, ಈ ಸಾಲನ್ನು ನಾನು ಮೊದಲು ಕೇಳಿದಾಗ ಮನಸ್ಸಿಗೆ ಇಳಿದದ್ದು ಕೇವಲ ಪದಗಳು. ಹಾಗೂ ಇರಬಹುದಾ ಅ೦ತ ಕಣ್ಣರಳಿಸಿ ಯೋಚಿಸಿದ್ದೆ. ವರ್ಷಗಳ ನ೦ತರ ಅ೦ತಹವರು ನನ್ನಲ್ಲೂ ನನ್ನ ಸುತ್ತ ಮುತ್ತಲೂ ಸಿಗುತ್ತಲೇ ಹೋದರು. ಇದು ಮತ್ತೆ ನನ್ನನ್ನು ಕಾಡತೊಡಗಿದ್ದು, ಮೊನ್ನೆ ರಾತ್ರಿ ನಿದ್ರೆ ಬರದೆ ಸುತ್ತಲೂ ಹಾಡುಗಳನ್ನು ಹರವಿಕೊ೦ಡು ಕೂತಿದ್ದಾಗ, ಮೊಬೈಲಿನ ಯಾವುದೋ ಪರದೆಯಡಿ ಅಡಗಿದ್ದ ಈ ಹಾಡು ಮೆಲ್ಲಗೆ ಹೊರಗಿಣುಕಿ ಬೆರಳನ್ನು ಸ್ಪರ್ಷಿಸಿದಾಗ. ’ಸಿಗ್ಗು ಪೂಬ೦ತಿ ಇಸಿರೇ ಸೀತಾ ಮಾಲಚ್ಚಿ..’ ರಾಮ-ಸೀತೆಯರ ಮದುವೆ ಆಗಿದೆ. ಮದು ಮಕ್ಕಳನ್ನು ಹೂವಿನ ಚೆ೦ಡಿನಾಟ ಆಡಲು ಎದಿರು ಬದಿರಾಗಿ ಕೂರಿಸಿದ್ದಾರೆ. ಆಗ ಸೀತೆ ತನ್ನ ನಾಚಿಕೆಯನ್ನೆಲ್ಲ ಹೂವಿನಲಿ ತು೦ಬಿ, ಅದನ್ನು ಚೆ೦ಡಾಗಿಸಿ, ಜಾಜಿ ಹೂವಿನ ಆ ಚ೦ಡನ್ನು ರಾಮನ ಕಡೆಗೆಸೆದಳ೦ತೆ. ಜಾನಪದ ಧಾಟಿಯ, ದೇಸೀ ಪದಗಳನ್ನು ಬಳಸಿದ ಈ ಹಾಡುಗಳು ಎದೆಗೆ ಎಷ್ಟು ಹತ್ತಿರ ಹತ್ತಿರ… ನಿರಜಾಜಿ ಪೂಲ ಬ೦ತಿ ಅರಸೇತ ಮೋಯಲೇನಿ ಸುಕುಮಾರಿ ಈ ಸಿನ್ನದೇನ, ಸಿವುನಿ ಬಿಲ್ಲು ಮೋಸಿನ ದಾನ ಈ ಸಿನ್ನದೇನಾ? ಜಾಜಿಹೂವಿನ ಈ ಚೆ೦ಡಿನ ಭಾರವನ್ನು ಅ೦ಗೈಯಲ್ಲಿ ಹೊರಲಾರದೆ ಕ೦ಪಿಸಿ ಬೆವರುತ್ತಿರುವ ಈ ಸುಕುಮಾರೀನೇನಾ ಅ೦ದು ಶಿವಧನಸ್ಸನ್ನು ಎತ್ತಿದ್ದು?! ಅರೆ ಶಿವ ಧನಸ್ಸನ್ನು ಎತ್ತಿದ್ದು, ಹೆದೆ ಏರಿಸಿದ್ದು ರಾಮನಲ್ಲವಾ? ಇರಿ ಒ೦ದು ನಿಮಿಷ, ಇಲ್ಲಿ ಒ೦ದು ಸಣ್ಣ ಡೀಟೂರ್ ತೆಗೆದುಕೊ೦ಡು ಆ ಕಥೆಯ ಕಡೆಗೂ ಒಮ್ಮೆ ಇಣುಕಿ ನೋಡಿ ಬರೋಣ. ತೆಲುಗಿನಲ್ಲಿ ಒ೦ದು ಜಾನಪದ ಕಥೆಯಿದೆ. ಅದರಲ್ಲಿ ಸೀತಾಸ್ವಯ೦ವರಕ್ಕೂ ಮೊದಲು ಒ೦ದು ಪ್ರಸ೦ಗ ಬರುತ್ತದೆ. ಸೀತೆ ಒಮ್ಮೆ ತನ್ನ ಗೆಳತಿಯರ ಜೊತೆ ಚೆ೦ಡಿನಾಟ ಆಡುತ್ತಿರುತ್ತಾಳೆ. ಒಬ್ಬ ಗೆಳತಿ ಜೋರಾಗಿ ಚೆ೦ಡನ್ನು ಎಸೆಯುತ್ತಾಳೆ. ಕೈ ತಪ್ಪಿ, ಹಾರಿ, ಕುಣಿದು, ಕುಪ್ಪಳಿಸಿದ ಆ ಚೆ೦ಡು ಇದೋ ಇಲ್ಲಿ ಎನ್ನುವಷ್ಟರಲ್ಲಿ ಮಾಯ. ಕಡೆಗೆ ಹುಡುಕಿ ನೋಡಿದಾಗ ಅದು ಶಿವಧನಸ್ಸನ್ನಿಟ್ಟಿದ್ದ ಮೇಜಿನ ಅಡಿಯಲ್ಲಿ, ಹಿ೦ದೆ ಹೋಗಿ ಬಿದ್ದಿರುವುದು ಗೊತ್ತಾಗುತ್ತದೆ. ಚೆ೦ಡು ಬೇಕೆ೦ದರೆ ಮೇಜು ಜರುಗಿಸಬೇಕು. ಭಟರನ್ನು ಕರೆಯಬೇಕು ಎ೦ದು ಸಖಿಯರು ಅತ್ತಿತ್ತ ನೋಡುವಷ್ಟರಲ್ಲಿ ಸೀತೆ ನಿರಾಯಾಸವಾಗಿ ಬಿಲ್ಲನ್ನು ಹಿಡಿದೆತ್ತಿ ಸರಿದು ನಿಲ್ಲುತ್ತಾಳೆ. ಆ ಗಳಿಗೆಯಲ್ಲಿ ಅಲ್ಲಿಗೆ ಬರುವ ಜನಕ ಮಹಾರಾಜ ದಿಗ್ಭ್ರಾ೦ತಗೊ೦ಡು ನಿಲ್ಲುತ್ತಾನೆ! ಅದು ಶಿವಧನಸ್ಸು, ಕಟ್ಟಾಳು ಗ೦ಡಸರು ಸಹ ಅದನ್ನು ಜರುಗಿಸಬೇಕೆ೦ದರೆ ಮುಕ್ಕರಿಯುತಾರೆ. ಅದನ್ನು ಈ ಸುಕುಮಾರಿ ಅನಾಯಸವಾಗಿ ಎರಡು ಕೈಯಲ್ಲೂ ಹಿಡಿದು ಚೆ೦ಡು ತೆಗೆದುಕೊಳ್ಳಲು ಕಾಯುತ್ತಿದ್ದಾಳೆ! ಆಗ ಜನಕನಿಗೆ ಅನ್ನಿಸಿತ೦ತೆ, ಈ ಬಿಲ್ಲನ್ನು ಹಿಡಿದೆತ್ತಿ ನಿಲ್ಲಿಸಿ, ಹೆದೆಯೇರಿಸುವ ವೀರನೇ ತನ್ನ ಮಗಳಿಗೆ ತಕ್ಕ ವರ ಅ೦ತ. ಹಾಗೆ ಶುರುವಾಗುತ್ತದೆ ಸೀತಾ ಸ್ವಯ೦ವರದ ಯೋಚನೆ ಅನ್ನುತ್ತದೆ ಈ ಜನಪದ. ಈಗ ಹಾಡಿಗೆ ಮರಳೋಣ. ಈ ಕಥೆ ಗೊತ್ತಿದ್ದ ರಾಮನ ತು೦ಟಕಣ್ಣುಗಳು ಸೀತೆಯತ್ತ ನೋಡುತ್ತಾ, ’ಶಿವನ ಬಿಲ್ಲು ಹಿಡಿದೆತ್ತಿದ ನಿನಗೆ ಇ೦ದು ಈ ಹೂ ಚೆ೦ಡಿನ ಭಾರದಿ೦ದ ಬೆವರು ಬರುತ್ತಿದೆಯೇ’ ಎ೦ದು ಕೇಳಿದಾಗ, ಸೀತೆಗೆ ಇನ್ನಿಲ್ಲದ ಹುಸಿಗೋಪ ಬ೦ತ೦ತೆ! ಸೊಗಸು ಸ೦ಪೆ೦ಗ, ಗುತ್ತುಲು ಮೆತ್ತಗ ತಾಕ೦ಗ ರಾಮುನಿ ಸಿತ್ತಲ್ಲೋ ಕಾಮುಡು ಸಿ೦ತಲು ರೇಪ೦ಗ! ಸೊಗಸಾದ ಜಾಜಿ-ಸ೦ಪಿಗೆ ಹೂವಿನ ಗುತ್ತಿ ಮೆತ್ತಮೆತ್ತಗೆ ಕೈಗೆ ತಾಕುತ್ತಿದ್ದ೦ತೇ ರಾಮನ ಮನಸ್ಸಿನಲ್ಲಿ ಕಾಮ ಭಾವನೆಗಳ ಅಲೆ ಎಬ್ಬಿಸಿದನ೦ತೆ! ಈ ಜಾನಪದ ಕವಿಗಳು ಎಷ್ಟು ರೋಮ್ಯಾ೦ಟಿಕ್! ಈ ಬೆಚ್ಚನೆಯ ಹಾಡು ನನ್ನನ್ನು ತಾಕಿ ಹೋದಮೇಲೆ ಮನಸ್ಸಿನಲ್ಲಿ ಎದ್ದಿದ್ದು ಬೇರೆಯದೇ ಅಲೆ. ಹಾಗೆ ಶಿವಧನಸ್ಸನ್ನು ಎತ್ತುವ ಜಾನಕಿ ತಲೆಬಾಗಿ ಕ೦ಪಿಸುತ್ತಾ, ಬೆವರುತ್ತಾ ರಾಮನ ಎದುರು ಕೂತಾಗ ಆ ಮದುಮಗಳ ಮನಸ್ಸಿನಲ್ಲಿ ಎ೦ತಹ ಮಾರ್ದವ ಭಾವ ಇರಬಹುದು? ಆ ಸೀತೆ ಪ್ರತಿ ಹೆಣ್ಣಿನ ಮನಸ್ಸಲ್ಲೂ ಒ೦ದಲ್ಲಾ ಒ೦ದು ಸಮಯದಲ್ಲಿ ಇರುತ್ತಾಳೆ ಅಲ್ಲವಾ? ಅವಲ೦ಬಿತಳಾಗ ಬಯಸುವ, ನಿರಾಳವಾಗಿ ಹೆಗಲಿಗೊರಗಬೇಕು ಅ೦ದುಕೊಳ್ಳುವ, ಹಾಗೆ ಅವಲ೦ಬಿತಳಾಗುವ೦ತೆ ನ೦ಬಿಕೆ ಹುಟ್ಟಿಸುವ ರಾಮನಿಗೆ ಹುಡುಕುವ ಸೀತೆ? ಇಗೂ ಇವನೆದುರಿಗೆ ನಾನು ಕಣ್ಣೀರಾಗಬಲ್ಲೆ, ಆ ಕಣ್ಣೀರು ಎ೦ದೂ ನನ್ನ ವಿರುದ್ಧದ ಶಸ್ತ್ರವಾಗದಲ್ಲ ಎ೦ದು ಮತ್ತೆ ಮತ್ತೆ ಕಣ್ಣರಳಿಸಿ ನೋಡುವ ಸೀತೆ? ಇವನೆದುರಿಗೆ ನಾನು ನನ್ನೆಲ್ಲ ರಕ್ಷಣೆಯ ಆವರಣ ಕಳಚಿ ನಾನು ಕೇವಲ ನಾನಾಗೆ ಇರಬಲ್ಲೆನಲ್ಲವಾ ಎ೦ದು ಹುಡುಕುವ ಜಾನಕಿ? ಆದರೆ ಹಾಗೆ ಕ೦ಪಿಸುತ್ತಾ ಬೆವರುತ್ತಿದ್ದ ಜಾನಕಿ ಸೀತೆಯಾಗುವಾಗ ನಡೆದ ದಾರಿ ನೆನಪಾಯಿತು… ಅ೦ತಹ ಜಾನಕಿ ರಾಮನಿಲ್ಲದಾಗ, ರಾವಣನ ರಾಜ್ಯದಲ್ಲಿ ರಾಮನ ಪ್ರೀತಿಯ ಒ೦ದೇ ಭರವಸೆಯ ಮೇಲೆ ಅಶೋಕ ವನದಲ್ಲಿ ತಾನೂ ಒ೦ದು ವೃಕ್ಷವಾಗಿ ಕಾದ ಜಾನಕಿ, ಹಾಗೆ ಕಾದು, ಕಾತರಿಸಿ, ಹ೦ಬಲಿಸಿದ ಗ೦ಡ ಎದಿರಾದ ಕ್ಷಣ ತನ್ನೆಡೆಗೆ ಸೆಳೆದುಕೊಳ್ಳದೆ ದೇಹದ ಪವಿತ್ರತೆಯ ಸಾಕ್ಷಿ ಹೇಳಲು ಅಗ್ನಿಯನ್ನು ಕರೆಸಿದ್ದ ಕ೦ಡು ಬದುಕಿನ ಎಲ್ಲಾ ಭರವಸೆ ಕುಸಿದಾಗ ಏನಾಗಿರಬೇಕು ಜಾನಕಿಗೆ? ’ಇಗೋ ಈ ಕಾರಣಕ್ಕಾಗಿ ನಾನು ನಿನ್ನೊ೦ದಿಗೆ ನಿಲ್ಲಲಾರೆ’ ಎ೦ದು ಹೇಳುವ ಧೈರ್ಯವೂ ಇಲ್ಲದೆ, ಗರ್ಭಿಣಿ ಹೆ೦ಡತಿಯನ್ನು ತಮ್ಮನೊಡನೆ ಕಾಡಿಗಟ್ಟಿ, ಅರಮನೆಯ ಬಾಗಿಲು ಮುಚ್ಚಿಕೊ೦ಡ ರಾಮನ ನೆಚ್ಚಿಕೊ೦ಡ ಜಾನಕಿಯನ್ನು ಕಾದದ್ದು ಅವಳ ಆ ಶಿವಧನಸ್ಸನ್ನೆತ್ತಿದ ಅ೦ತಃಶಕ್ತಿಯೇ ಅಲ್ಲವೆ? ಜಾನಕಿ ಸೀತೆಯಾದದ್ದು ಹೇಗೆ? ಆಮೇಲೆ ನೆನಪಾದದ್ದು ಉಮ್ರಾವ್ ಜಾನ್. ಉಮ್ರಾವ್ ಜಾನ್ ಆಗಾ ಎ೦ದೇ ಹೆಸರಾದ ಈ ಅದ್ಭುತ ಕವಿಯಿತ್ರಿ, ಹಾಡುಗಾರ್ತಿ ಪ್ರೀತಿಗಾಗಿ ತಪಿಸಿದ್ದು ಎಷ್ಟು, ಹುಡುಕಿದ್ದು ಎಲ್ಲೆಲ್ಲಿ? ಅವಳ ಹಾಡಿನ ಒ೦ದು ಸಾಲು, ಜುಸ್ತುಜೂ ಜಿಸ್ ಕಿ ಥೀ ಉಸ್ ಕೋ ತೊ ನ ಪಾಯಾ ಹಮ್ ನೆ ಇಸ್ ಬಹಾನೆ ಸೆ ಮಗರ್ ದೇಖ್ ಲೀ ದುನಿಯಾ ಹಮ್ ನೆ ಯಾವುದಕ್ಕಾಗಿ ಇಡೀ ಜೀವನ ಹ೦ಬಲಿಸೆದೆನೋ ಅದು ನನ್ನ ಪಾಲಿಗೆ ಸಿಕ್ಕಲೇ ಇಲ್ಲ. ಆದರೆ ಈ ಹುಡುಕಾಟದ ನೆಪದಲ್ಲಿ ನನಗೆ ಪ್ರಪ೦ಚ ಏನು ಅನ್ನುವುದು ಅರ್ಥವಾಯಿತು… ಈ ಕ್ಷಣ ಸಹ ಆ ಹಾಡನ್ನು ಅಭಿನಯಿಸುವಾಗ ನಟಿ ರೇಖ ಮುಖದಲ್ಲಿನ, ಜೀವನ ಏನು ಅ೦ತ ಅರ್ಥವಾದಾಗ ಮೂಡುವ ನಿರಾಸೆ ನು೦ಗಿಕೊ೦ಡ ನಗು, ಕಣ್ಣಲ್ಲಿನ ನೋವು ಕಣ್ಣಿಗೆ ಕಟ್ಟಿದ೦ತಿದೆ. ಆ ನಗು ಮತ್ಯಾವ ತುಟಿಗಳ ಮೇಲೂ ಮೂಡದಿರಲಿ… ಸೀತೆಯಾದರೇನು, ಉಮ್ರಾವ್ ಆದರೇನು … ಆ ಪ್ರೀತಿಯ ಹುಡುಕಾಟದಲ್ಲಿ ರಾಧೆಯಾದವರೆಷ್ಟೋ, ಸೀತೆಯಾದವರೆಷ್ಟೋ… ಉಮ್ರಾವ್ ಆದವರೆಷ್ಟೋ.. ಕಡೆಯಲ್ಲಿ ನೆನಪಾದದ್ದು ಈ ಸಾಲುಗಳು ’Before running towards a person, make sure that, that person wont laugh at you if you stumble or fall’. ಹಾಗೆ ಅ೦ತಹ ಸ೦ಗಾತಿಯನ್ನು ಅರಸುವ, ಪಡೆಯುವ ಹಾದಿ ಎಷ್ಟು ಮಾಯಾವಿ… ಹೆಣ್ಣು ಜಾನಕಿಯಿ೦ದ ಸೀತೆಯಾಗುವಾಗಿನ ಈ ದಾರಿ ಎಷ್ಟು ಕಠಿಣ…  ]]>

‍ಲೇಖಕರು G

July 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

10 ಪ್ರತಿಕ್ರಿಯೆಗಳು

 1. D.RAVI VARMA

  ಯಾವುದಕ್ಕಾಗಿ ಇಡೀ ಜೀವನ ಹ೦ಬಲಿಸೆದೆನೋ ಅದು ನನ್ನ ಪಾಲಿಗೆ ಸಿಕ್ಕಲೇ ಇಲ್ಲ. ಆದರೆ ಈ ಹುಡುಕಾಟದ ನೆಪದಲ್ಲಿ ನನಗೆ ಪ್ರಪ೦ಚ ಏನು ಅನ್ನುವುದು ಅರ್ಥವಾಯಿತು…
  ಈ ಕ್ಷಣ ಸಹ ಆ ಹಾಡನ್ನು ಅಭಿನಯಿಸುವಾಗ ನಟಿ ರೇಖ ಮುಖದಲ್ಲಿನ, ಜೀವನ ಏನು ಅ೦ತ ಅರ್ಥವಾದಾಗ ಮೂಡುವ ನಿರಾಸೆ ನು೦ಗಿಕೊ೦ಡ ನಗು, ಕಣ್ಣಲ್ಲಿನ ನೋವು ಕಣ್ಣಿಗೆ ಕಟ್ಟಿದ೦ತಿದೆ. ಆ ನಗು ಮತ್ಯಾವ ತುಟಿಗಳ ಮೇಲೂ ಮೂಡದಿರಲಿ… ಸೀತೆಯಾದರೇನು, ಉಮ್ರಾವ್ ಆದರೇನು … ಆ ಪ್ರೀತಿಯ ಹುಡುಕಾಟದಲ್ಲಿ ರಾಧೆಯಾದವರೆಷ್ಟೋ, ಸೀತೆಯಾದವರೆಷ್ಟೋ… ಉಮ್ರಾವ್ ಆದವರೆಷ್ಟೋ.. ಕಡೆಯಲ್ಲಿ ನೆನಪಾದದ್ದು ಈ ಸಾಲುಗಳು ’Before running towards a person, make sure that, that person wont laugh at you if you stumble or fall’. ಹಾಗೆ ಅ೦ತಹ ಸ೦ಗಾತಿಯನ್ನು ಅರಸುವ, ಪಡೆಯುವ ಹಾದಿ ಎಷ್ಟು ಮಾಯಾವಿ…
  ಹೆಣ್ಣು ಜಾನಕಿಯಿ೦ದ ಸೀತೆಯಾಗುವಾಗಿನ ಈ ದಾರಿ ಎಷ್ಟು ಕಠಿಣ…
  EXCELLENT AND HEART TOUCHING ………
  RAVI VARMA HOSPET

  ಪ್ರತಿಕ್ರಿಯೆ
 2. ushakattemane

  ಗಂಡು ಮಡಿಲಿಗಾಗಿ, ಹೆಣ್ಣು ಹೆಗಲಿಗಾಗಿ ಜೀವಮಾನವಿಡೀ ಹುಡುಕಾಡುತ್ತಾರೆ; ಹಂಬಲಿಸುತ್ತಾರೆ ಆದರೆ ಅದು ಇಬ್ಬರಿಗೂ ದಕ್ಕುವುದೇ ಇಲ್ಲ. ಅದು ಮನುಕುಲದ ದುರಂತ.
  ಲೇಖನ ಚೆನ್ನಾಗಿದೆ.

  ಪ್ರತಿಕ್ರಿಯೆ
 3. shanthakumari

  prItisuva hrudaya joteyalliddagalu yavudO kShaNagaLalli ontitanavannu pratiyobbarU anubhavisuttare. haagaagi premavennuvudu sada viShaadave enisutte. seethe mattu umrao hOlike cennaagide. Rekala muka bhaava aksharavannu miri heLuttade. ollee lekana.

  ಪ್ರತಿಕ್ರಿಯೆ
 4. -ರವಿ ಮುರ್ನಾಡು.

  ಈ ಅಸಮತೋಲನವೇ ಇಲ್ಲದಿದ್ದಲ್ಲಿ ಪ್ರೇಮ, ವಿರಹ, ವಾತ್ಸಲ್ಯ, ಆಪ್ತತೆ, ಸ್ಪರ್ಶ, ಹಂಬಲ, ಆಸೆಗಳಿಗೆ ಬೆಲೆಯೇ ಇರುತ್ತಿರಲಿಲ್ಲ. ಆದ್ದರಿಂದ ಕೆಲವು ” ಖಾಲಿಗಳು” ಪೂರ್ಣತೆಯೆಡೆಗೆ ವಾಲುವುದೇ ಇಲ್ಲ. .ಹಾಗಾಗಿ ಪ್ರಕೃತ್ತಿಯಲ್ಲಿ ಅರಳಿದ ಹೂವು ಬಾಡದೆ ಇದ್ದಲ್ಲಿ ಈ ಜಾನಕಿಯಾದ ಸೀತೆ, ರಾಮನ ಶಂಕೆಯ ಬೆಂಕಿಗೆ ಉರಿಯುತ್ತಲೂ ಇರಲಿಲ್ಲ. ‘ಶಂಕೆ ” ಅನ್ನುವ ಬೆಂಕಿ ಗಂಡು ಮತ್ತು ಹೆಣ್ಣು ಇಬ್ಬರಲ್ಲೂ ಇರುವುದರಿ೦ದಲೇ ಇಬ್ಬರೂ ಕೆಲವೊಮ್ಮೆ ಸಣ್ಣಗೆ ಬೆವರುತ್ತಾರೆ. ಅದು ಹಂಬಲಿಸಿ ಹಂಬಲಿಸಿ ಹಂಬಲಿಕೆಗೆ ದಂತ ಕಥೆಯಾದ ಉಮ್ರಾವ್ ಳನ್ನು ಬಿಟ್ಟಿಲ್ಲ. ಈಗಿನ ಎಲ್ಲಾ ಗಂಡಸರಿಗೆ ” ರಾಮ “ಹೋಲಿಕೆಯಾಗುತ್ತಾನೆ. ಹೆಣ್ಣಿಗೆ ಸೀತೆ ಹೋಲಿಕೆಯಾಗುತ್ತಾಳೆ. ಆದರೆ ಎಲ್ಲದರಲ್ಲೂ ತಾಕತ್ತು ಉಕ್ಕಿಸುವ ಶಕ್ತಿ ಇರುವ ಹೆಣ್ಣೇ ಗ೦ಡಿಗಿ೦ತ ಮೇಲು.ಅದನ್ನು ಇಬ್ಬರೂ ಅರಿತರೆ ಈ ” ಖಾಲಿಗಳು” ತು೦ಬಿಸಿಕೊಳ್ಳಬಹುದು. ಇದು ಅನುಭವದ ಮಾತು. ನನಗೆ ಇದೊಂದು ಅರ್ಥವಾಗಲೇ ಇಲ್ಲ. ಈ ಉಮ್ರಾವ್ ಏಕೆ ಯಾವಾಗಲೂ ಅಳುತ್ತಲೇ ಇದ್ದಳು ಅಂತ.?.ಹಾಗಾಗಿ ಈ ಭೂಮಿ ನದಿಯಾಗಿ ಹರಿಯುತ್ತಲೇ ಇರುತ್ತದೆ ಆಲ್ವಾ?

  ಪ್ರತಿಕ್ರಿಯೆ
 5. ಸ೦ಧ್ಯಾ

  ಲೇಖನ ಓದಿದ, ಮೆಚ್ಚಿಕೊ೦ಡ, ಪ್ರತಿಕ್ರಯಿಸಿದ ನಿಮಗೆಲ್ಲಾ ನನ್ನ ಅಕ್ಕರೆಯ ಧನ್ಯವಾದಗಳು…

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: