ಎಷ್ಟು ನಗ್ತಿ ನಗು – ಚಿಂದೋಡಿ ಕಂಪನಿ ಚಾಲೆಂಜ್

-ಶ್ರೀಕಾಂತ್ ಕಲಕೋಟಿ
ಜಗತ್ತು ನನ್ನ ಕಣ್ಣಲ್ಲಿ
ಎಷ್ಟು ನಗ್ತಿ ನಗು ಮಗನ ..ಆಮೇಲೆ ನೋಡ್ಕೊತೆನಿ ಅಂತ ಸಿಟ್ಟಿಗೆದ್ದು ಹೇಳಲಿಕತ್ತೆನಿ ಅಂದ್ಕೊಂಡ್ರಿ ಏನು…?ಹ ಹ ಹಾ ಇಲ್ಲ ಹಂಗೇನೂ ಇಲ್ಲ..೨೦೦೭ ಅಕ್ಟೋಬರ್ ಬೆಂಗಳೂರಿನ ನಮ್ಮ ಐ ಎಫ್ ಬಿ ಆಫೀಸ್ ಕ್ಯಾಂಟೀನ್ ನ್ಯಾಗ ನಾನು ಮತ್ತ ನನ್ನ ಗೆಳ್ಯಾ ವಿಜ್ಯಾ (ವಿಜಯ ಕುಲಕರ್ಣಿ)ಏನೇನೋ ಮಾತಾಡ್ಕೊತ ಕುತ್ತಾಗ ಒಂದು ನಾಟಕದ ಪ್ರಸಂಗ ಹೇಳಿದ, ಬಿದ್ದು ಬಿದ್ದು ನಕ್ವಿ..
ಲೇ ಶೀಕ್ಯಾ ಯಾವುದರೆ ನಾಟಕಾ ನೋಡೀ ಏನ್ಲೇ ಅಂದ?
ಇಲ್ಲ ಅಂದೆ.
ಒಂದೂ ನೋಡಿಲ್ಲ ಏನ್ಲೇ
ಇಲ್ಲೋಲೆ ಅಂದೆ..
ಆದ್ರ ನಾವು ಸಾಲಿನ್ಯಾಗ ಒಂದು ನಾಟಕಾ ಮಾಡಿದ್ವಿ ಒಂಭತ್ತೋ ಎನು ಹತ್ತನೆತ್ತದಾಗ ಇದ್ದಾಗ ..ಅದು ಒಂದು ಸಂಸ್ಕೃತ ನಾಟಕ. ಹೆಸರು ನೆನಪಿಲ್ಲ ಈಗ. ನನ್ನದು ಒಂದು ಚಿಕ್ಕ ಪಾತ್ರ ಇತ್ತು. ಹಾಲು ಮಾರುವವನದ್ದು ! ಅಷ್ಟೆ ಅಂದೆ.
ಚಿಂದೋಡಿ ಲೀಲಾ ಅವರ ‘ಪೊಲೀಸನ ಮಗಳು’ ಭಾಳ ಪ್ರಸಿದ್ಧಿ ಆಗಿತ್ತು. ಆದ್ರ ಎಂದೂ ನೋಡ್ಬೇಕು ಅಂತ ಅನಸ್ಲೇ ಇಲ್ಲ..ಯಾಕ ಗೊತ್ತಿಲ್ಲ..ಗೆಳೆಯಾರು ಎಲ್ಲಾರು ಕೂಡಿ ಸಿನೆಮಾಕ್ಕೆ ಹೋಗ್ತಿದ್ವಿ ನಾಟಕಾ ಎಂದೂ ಹೋಗಿಲ್ಲ ಅಂದೆ..

ಸರಿ ಅವತ್ತ ನಿರ್ಣಯ ಆತು ಅಲ್ಲೇ.ವಾರಾಂತ್ಯ ನಾಟಕ ನೋಡ್ಲಿಕ್ಕೆ ಹೋಗೋದು ಅಂತ.
ಶನಿವಾರ ಮಧ್ಯಾಹ್ನ ೨-೩೦ ರ ಆಟ. ಮೆಜೆಸ್ಟಿಕ್ ನ ಗುಬ್ಬಿ ವೀರಣ್ಣ ಸಭಾಗೃಹದಲ್ಲಿ. ಅದರ ಹೆಸರು ಎಷ್ಟು ನಗ್ತಿ ನಗು..ಚಿಂದೋಡಿ ಕಲಾ ಸಂಘದವರ ನಾಟಕ. ನನ್ನ ಮೊದಲ ನಾಟಕ ನೋಡಿದ ಅನುಭವ. ಹೊರಗಡೆ ಚಿಂದೋಡಿ ಲೀಲಾ ಅವರೇ ಕುಳಿತಿದ್ರು..
ನಾಟಕ ಒಂದು ಸುಸ್ವಾಗತ ಹಾಡಿನ ಜೊತೆ ಶುರುವಾಯಿತು .ಒಂದು ಕೌಟುಂಬಿಕ ನಾಟಕ. ಅದರ ಕಥೆ ಹೇಳುವುದು ನನ್ನ ಉದ್ದೇಶವಲ್ಲ. ಆದರೆ ಪಾತ್ರಗಳ ಬಗ್ಗೆ ನಾಟಕದ ಬಗ್ಗೆ ಹೇಳಲೇ ಬೇಕು.ಈಗ ಒಂದೂವರೆ ವರ್ಷದ ನಂತರ ನನಗೆ ಯಾವ ಪಾತ್ರಧಾರಿಗಳ ಹೆಸರೂ ನೆನಪಿಲ್ಲ. ಆದರೆ ಆ ಪಾತ್ರಗಳ ಅಭಿನಯ ಇನ್ನೂ ಕಣ್ಣಿಗೆ ಕಟ್ಟಿದ ಹಾಗೆ ಇದೆ.ಎಷ್ಟು ನೈಜ ಅಭಿನಯ ಅದು.ಅದಕ್ಕೆ ತಕ್ಕ ಹಾಗೆ ಹಾಸ್ಯ,ಮಧುರವಾದ ಸಂಗೀತ,ನೃತ್ಯ ಎಲ್ಲವೂ ಇದ್ದವು.ಸನ್ನಿವೇಶಕ್ಕೆ ತಕ್ಕ ಹಾಗೆ ಬೇರೆ ಬೇರೆ ಉಡುಪು ಹಾಕಿಕೊಂಡು ಸರಿಯಾದ ಸಮಯಕ್ಕೆ ರಂಗ ಪ್ರವೇಶ ಮಾಡ್ತಾ ಇದ್ರು.
ಎಲ್ಲಿಯೂ ತಡವರಿಸದ ಮಾತುಗಳಿಗೆ ಸನ್ನಿವೇಶಕ್ಕೆ ತಕ್ಕಂತಹ ನವರಸಗಳು ಆಯಾಸವೇ ಇಲ್ಲದೇ ಇಮ್ಮಡಿಯಾಗುತ್ತಿದ್ದ ಹುರುಪು..
ಇದೆಲ್ಲ ನಾನು ಯದಕ್ಕ ಹೇಳಿದೆ ಅಂದ್ರ ಈಗ ನಾವು ನೀವೆಲ್ಲ ಸಿನೇಮಾದ ಬಗ್ಗೆ ಅಲ್ಪ ಸ್ವಲ್ಪ ತಿಳಿದುಕೊಂದೇವಿ.ಸನ್ನಿವೇಶಗಳ ಹೊಂದಾಣಿಕೆ ,ಸಂಗೀತ ಮಿಶ್ರಣ ,ಮಾತುಗಳ ಹೊಂದಾಣಿಕೆ ಅವುಗಳಿಗೆ ಹೋಲಿಸಿದರೆ ನಾಟಕದಲ್ಲಿ ಎಲ್ಲವೂ ಎಷ್ಟು ಕಾಳಜೀವಹಿಸಿ ಮಾಡ್ತಾರೆ ಅಂತ ಅನಿಸ್ತು.ಅಷ್ಟೆ ಅಲ್ಲ ಅವರು ವಾರಾಂತ್ಯ ೩ ಆಟ ಮತ್ತು ಬೇರೆ ದಿನ ೨ ಆಟ ಆಡ್ತಾರ.ನಮ್ಮ ಸಿನೆಮಾದವ್ರು ಒಂದು ಸಿನೆಮಾ ಮಾಡಿ ಮಕಾಡೆ ಮಲಗಿ ಬಿಡ್ತಾರೆ.
ನೀವು ಕೇಳಬಹುದು ಅದು ಅವರ ಕಸುಬು ಅಂತ ..ಒಪ್ತೇನಿ ..ಆದ್ರ ಖಂಡಿತ ಹೊಟ್ಟೆ ತುಂಬೋ ಅಂತಹುದು ಅಲ್ಲವೇ ಅಲ್ಲ.ಎಲ್ಲ ನೈಪುಣ್ಯತೆ,ಹೆಚ್ಚಿನ ಅನುಭವ ಮತ್ತು ಶ್ರಮ ಇದ್ದಾಗಲೂ ಸಹ.ಟಿಕೆಟ್ ದರ ೨೫ -೪೦ ರೂಪಾಯಿ ಅಬ್ಬಬ್ಬ ಅಂದ್ರೆ ಒಂದು ಆಟಕ್ಕೆ ೧೦೦ ರಿಂದ ೧೨೦ ಜನ ಪ್ರೇಕ್ಷಕರು .ಮುಂದ ನೀವ ಲೆಕ್ಕಾ ಹಾಕಿ..ಸಭಾಗ್ರಹ ಭಾಡಿಗೆ, ಕಲಾವಿದರ ಬಾಬ್ತು ಇತರೆ ಎಲ್ಲ ಖರ್ಚು ಕಳೆದು ಎಷ್ಟು ಉಳಿಯುತ್ತೆ ಅಂತ..ಮತ್ತೆ ಅದೂ ಬರೀ ಒಂದೇ ಸಭಾಗ್ರಹದ ಆಟ.ಎಲ್ಲಾ ಕಡೆ ಪ್ರದರ್ಶನಾನೂ ಇಲ್ಲ..ಈ ದೂರದರ್ಶನ,ಅಂತರ್ಜಾಲಗಳ ನಡುವೆ ಸೊರಗುತ್ತಿರುವ ಒಂದು ಕಲೆ ಅದು ಅಂತ ಕೊರಗು.
ಆದರೆ ನಾಟಕ ನೋಡಿ ನನಗೆ ಒಂದು ತೃಪ್ತಿ ನಿಜವಾಗಲೂ ಸಿಕ್ತು .ನಕ್ಕು ನಕ್ಕು ಮನಸ್ಸು ನಿಜವಾಗಲೂ ಹಗುರ ಆತು.
ಆಮೀರ್ ಖಾನ್ ನಮಗೆ ಮಿ. ಪರ್ಫೆಕ್ಷನಿಷ್ಟ ಅಂತ ಅನಿಸ್ತಾನ ,ನನಗೂ ಅವನ ಅಭಿನಯ ಸೇರುತ್ತದೆ, ಆದ್ರೆ ಇಲ್ಲೇ ಇವರ ಮುಂದೆ ಅವನನ್ನ ನಿವಾಳಿಸಿ ಒಗೆಯಬೇಕು ಅಂತ ಅನಿಸಿತು.ಏಕೆಂದರೆ ಇವರು ಪ್ರತೀಸಲವೂ ನೇರವಾಗಿ ಸಭಿಕರ ಮುಂದೆಯೇ ಅಭಿನಯಿಸುವವರು..ಮಾತುಗಳನ್ನ ಬಾಯಿಪಾಠ ಮಾಡಿ ಬಂದು ಒದರಿ ಹೋಗಬಹುದು ಆದ್ರೆ ಭಾವನೆಗಳನ್ನ ? ಇದೆ ಕಾರಣಕ್ಕೋ ಏನೊ ಡಾ.ರಾಜಕುಮಾರ ,ಹಿಂದಿಯ ಪೃಥ್ವಿ ರಾಜಕಪೂರ್ ನಮಗೆ ಹತ್ರ ಅನಿಸುತ್ತಾರೆ.
ನಾವು ಸಣ್ಣವರು ಇದ್ದಾಗ ಹಿರಿಯರು ನಾಟಕಕ್ಕ ಹೋಗಬ್ಯಾಡ್ರಿ ಅದರ ತಲಬು ಛೊಲೊ ಅಲ್ಲ ಅಂತ ಹೇಳ್ತಿದ್ರು ..ಅದು ಯದಕ್ಕ ಅಂತ ನನಗ ಇವತ್ತಿಗೂ ತಿಳೀವಲ್ತು .ಅದರಲ್ಲೆ ಶ್ಲೇಷಾಲಂಕಾರದ ಪ್ರಯೋಗ ಭಾಳ ಅಂತನೋ ಏನೊ ?ಹಂಗ ಇದ್ರ ನಾವು ಈಗಿನ ಸಿನೇಮಾ ನೋಡ್ಲೆಬಾರದು ಏನೊ?ಅಲ್ಲೆ ಮಾತು ಕಡಿಮೆ ಇದ್ರೂ ಶೃಂಗಾರ ರಸಕ್ಕೆ ಪ್ರಧಾನ್ಯತೆ.
ನಾಟಕ ಮುಗಿದ ಮೇಲೆ ಅದರ ನಿರ್ದೇಶಕ (ಡೈರೆಕ್ಟರ್) ಅವರೂ ಒಬ್ಬ ಪಾತ್ರಧಾರಿಯೇ ,ಹಿರಿಯ ಕಲಾವಿದರು ಅವರು.ನಾಟಕ ನೋಡಲು ಬಂದಂತಹ ಎಲ್ಲರಿಗೂ ಅಭಿನಂದಿಸಿ ಪಾತ್ರಗಳ ಪರಿಚಯ ಮಾಡಿಕೊಟ್ಟರು.ಹಾಗೆಯೇ ಕೆಲ ಪಾತ್ರಗಳ ಅಭಿನಯವನ್ನು ಮೆಚ್ಚಿ ನೀಡಿದಂತಹ ಬಹುಮಾನ ರೂಪದ ಹಣವನ್ನು ಕೃತಜ್ಞತಾ ಪೂರ್ವಕವಾಗಿ ಪಡೆದರು. ಹಾಗೆಯೇ ನಾಟಕಗಳನ್ನೂ ನೋಡಿ ಕಲೆಯನ್ನು ಉಳಿಸಲು ಕಳಕಳಿಯ ವಿನಂತಿ ಮಾಡಿದರು.
ಬಹುಮಾನ ರೂಪದ ಹಣವೇನೂ ಜಾಸ್ತಿ ಇರಲಿಲ್ಲ. ನಿಮಗೆ ನಂಬಿಕೆ ಆಗಲಾರದು .೨೦,೫೦ ಅಬ್ಬಬ್ಬ ಅಂದ್ರೆ ೧೦೦ ಇತ್ತು ..!ಮತ್ತ ನೋಡ್ಲಿಕ್ಕೆ ಬರುವವರೆಲ್ಲರೂಜಾಸ್ತಿ ಜನ ಎಲ್ಲ ೨ ಅಂಕ ಮುಗಿದವರು,(ವೃಧ್ಧರು) ವೇಳೆಹರಣ ಮಾಡುವವರೇ ಇದ್ದರು.ಅಂದರೆ ಜನರಲ್ಲಿ ಎಷ್ಟು ಅಭಿರುಚಿ ಕಡಿಮೆಯಾಗಿದೆ ಅಂತ ಊಹಿಸಬಹುದು.ಅದಕ್ಕೆ ಕಾರಣ ಹತ್ತು ಹಲವು ಇರಬಹುದು.ಭಾಳ್ ಖೇದಕರ ಅಂತ ಅನಿಸಿತು.
ನೀವು ಶಾರುಖ್ ಖಾನನ ಅಭಿನಯ ಒಮ್ಮೆಯಾದರೂ ಮೆಚ್ಚಿದ್ರೆ ,ಗೋವಿಂದ-ಡೇವಿಡ್ ಧವನರ ಹಾಸ್ಯ ನೋಡಿ ನಕ್ಕಿದ್ರೆ ಒಮ್ಮೆಯಾದರೂ ನಾಟಕ ನೋಡಲೇ ಬೇಕು.ಮನರಂಜನೆ ಏನು ಅಂತ ಅರಿಯಲೇ ಬೇಕು ಅಂತ ನನ್ನ ಅಭಿಪ್ರಾಯ.ನಾಟಕ ನೋಡ್ರಿ ಏನೂ ತಪ್ಪಿಲ್ಲ.ಒಳ್ಳೆಯ ಮನರಂಜನೆ ಸಿಗುತ್ತದೆ.ಅದೂ ಒಂದು ರೀತಿಯ ಕಲೆ ಅದನ್ನು ಉಳಿಸಲು ಪ್ರಯತ್ನ ಮಾಡೋಣ.ನಾನು ಅದೇ ವಿಚಾರದಲ್ಲಿ ಅವತ್ತೇ ಮತ್ತೊಂದು ನಾಟಕದ ಸಿ.ಡಿ ತೆಗೆದುಕೊಂಡು ಬಂದೆ.ಹೆಸರು ಪಶ್ಚಾತ್ತಾಪ.. ಮಾಸ್ಟರ್ ಹಿರಣ್ಣಯ್ಯ ಅವರದು.ಒಂದು ಒಳ್ಳೆಯ ಸಾಮಾಜಿಕ ನಾಟಕ. ಇನ್ನೊಂದು ಕಳವಳ ಆಗ್ತಾ ಇದೆ ಯಕ್ಷಗಾನದ ಬಗ್ಗೆ.ಅದೂ ಸಹ ನಶಿಸಿ ಹೋಗ್ತಾ ಇದೆಯೋ ಏನೊ ಈ ಕ್ಲಬ್ ಡ್ಯಾನ್ಸ್,ಬೆಲ್ಲಿ ಡ್ಯಾನ್ಸ್ ಭರಾಟೆಯಲ್ಲಿ..ಖರೆ ಹೇಳ್ಬೇಕು ಅಂದ್ರ ನಾನು ದೂರದರ್ಶನದಲ್ಲಿ ಸಹ ಒಮ್ಮೆಯೂ ಯಕ್ಷಗಾನ ನೋಡಿಲ್ಲ…!

‍ಲೇಖಕರು avadhi

January 21, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This