ಎಷ್ಟೊ೦ದ್ ಜನ ಇಲ್ಲಿ ಯಾರು ನಮ್ಮೋರು…?

ಮುಖವಾಡಗಳ ಮಹಾನಗರ

– ಡಾ.ಎಸ್.ಬಿ.ಜೋಗುರ

ಅದು 1991 ರ ಸಂದರ್ಭ.ಬಹುಷ: ಅದೇ ನನ್ನ ಮೊಟ್ಟ ಮೊದಲ ಬೆಂಗಳೂರ ಭೇಟಿ. ಚುಮು ಚುಮು ಬೆಳಕು ಹರಿಯುವ ಹೊತ್ತಲ್ಲಿ, ಹಕ್ಕಿಗಳು ಚುಂಯ್ ಗುಡುವ ವೇಳೆಯಲ್ಲಿ ಬಸ್ಸು ಕೆಂಪೇಗೌಡ ನಿಲ್ದಾಣದಲ್ಲಿ ಮೈ ಹೊರಳಿಸಿತ್ತು. ಮಬ್ಬು ಸರಿದು, ಬೆಳಕು ಹರಿಯುವವರೆಗೆ ಅಲ್ಲಿಯೇ ಕುಳಿತೆ. ಮೆಲ್ಲಗೆ ಬೆಂಗಳೂರು ಬಯಲಾಗತೊಡಗಿತ್ತು. ಗಡಬಡಿಸಿ ಹೊರನಡೆವ ಜನರೊಂದಿಗೆ ಬಸ್ ನಿಲ್ದಾಣದಿಂದ ಹೊರನಡದೆ. ಸುತ್ತಲೂ ಕಣ್ಣಾಡಿಸಿದೆ. ಹೌದು. ನಾನಾಗ ಅಕ್ಷರಷ: ಹೌಹಾರಿದ್ದೆ..ಬಾಯ್ ಬಿಟ್ಟಿದ್ದೆ. ಆ ಕಟ್ಟಡಗಳು, ಆ ಗಿಜಿಬಿಜಿ ಜನಜಂಗುಳಿ, ಮೈಗೆ ಮೈ ತಾಗಿ ನಿಂತ ಬಸ್ಸುಗಳು, ಕಿವಿಗೆ ತೂರುವ ತರಾವರಿ ಹಾರ್ನ್, ನಿಲ್ದಾಣದಿಂದ ಹೊರಬಂದು ಹೇಗೇ ದಾಟಬೇಕೆಂದರೂ ನಿವಾಂತವಾಗಿರದ ರಸ್ತೆಗಳು, ಪುಟ್ ಪಾತ್  ಮೇಲೂ ಎದೆಗೆ ಗುದ್ದುವಂತೆ ಬರುವ ಎದುರಿನವರು. ಅವರು ಹತ್ತಿರ ಬರುತ್ತಿರುವಂತೆ ಮಗ್ಗಲು ಹೊರಳಿಸದೇ ಮುಗ್ಗಲಾದರೆ ಮುಗ್ಗರಿಸಿ ಬೀಳುವ ಗ್ಯಾರಂಟಿಯ ನಡುವೆ ನಾ ಜಾಗರೂಕತೆಯಿಂದ ನಡೆದಿದ್ದೆ. ಹೀಗೆ ನಡೆವ ಹಾದಿಯಲ್ಲೇ ಕರವಸ್ತ್ರ, ಆಟಿಗೆ, ಬ್ಯಾಗು, ಪತ್ರಿಕೆ, ಚಹಾ,ತಿಂಡಿ ಮಾರುವ ಸಣ್ಣ ಸಣ್ಣ ಸಂಚಾರಿ ದುಖಾನಗಳು. ಅದಾಗಲೇ ಬೆಂಗಳೂರಿನ ವ್ಯಾಪಾರೀ ಬುದ್ಧಿ ಚುರುಕಾಗತೊಡಗಿತ್ತು. ಅಪಾರ ಜನಸಂದಣಿಯ ನಡುವೆಯೇ ಚೀರಿ ಚೀರಿ ತನ್ನ ವಸ್ತುವಿನ ದರ ಹೇಳುವ, ಆತನಿಗೆ ಕಿವಿ ಒತ್ತೆಯಿಟ್ಟಂತೆ ಬಾಗಿ ದರ ಕೇಳುವ, ಕೊಳ್ಳುವವನ ನಡುವೆ ಅದ್ಯಾವ ನಿಚ್ಚಳ ಸಂಭಾಷಣೆ ಆ ಗದ್ದಲದ ನಡುವೆ ಸಾಧ್ಯವಾಯಿತೋ ನಾ ಕಾಣೆ. ಹೀಗೆ ಸಂತೆಯಲ್ಲೊಂದು ಮನೆಯ ಮಾಡಿ ಶಬ್ದಕ್ಕೆ ಅಂಜಿದೊಡೆ ಎಂತಯ್ಯಾ..? ಎನ್ನುವಂತಿರುವ ಈ ಜಾಗೆಯನ್ನೇ ಮೆಜೆಸ್ಟಿಕ್ ಎಂದು ಕರೆಯುತ್ತಾರೆನ್ನುವದು ನನಗೆ ಆಗಲೇ ಗೊತ್ತಾದದ್ದು. ಅದೇ ತಾನೇ ಎಂ.ಎ.ಮುಗಿಸಿ ಬೆಂಗಳೂರಿನ ಯಾವುದಾದರೂ ಕಾಲೇಜಲ್ಲಿ ಅರೆಕಾಲಿಕ ಉಪನ್ಯಾಸಕನಾಗಿ ದುಡಿಯಬೇಕೆಂಬ ಹವಣಿಕೆಯಲ್ಲಿದ್ದ ನನಗೆ ಬೆಂಗಳೂರಲ್ಲಿ ಉದ್ಯೋಗದ ಹುಡುಕಾಟ ಒಂದು ನೆಪ, ಅಸಲು ಬೆಂಗಳೂರು ನೋಡಬೇಕೆಂಬ ಬ0ುಕೆ. ಆ ಬಯಕೆಯೋ ಸಮುದ್ರದ ನೀರಿಗೆ ಬೊಗಸೆಯೊಡ್ಡುವ ಯತ್ನ ನನ್ನದು ಎನ್ನುವದನ್ನು ತಿಳಿಯಲು ತಡವಾಗಿರಲಿಲ್ಲ. ನಮ್ಮ ಊರ ತುಂಬೆಲ್ಲಾ ಬರೀ ಕರಿ ಕಲ್ಲು, ಗಚ್ಚು ಮತ್ತು ಮಣ್ಣಿನ ಮನೆ. ಮೆಲೆ ಮೇಲ್ ಮುದ್ದಿಯ ಹೇರಿಕೆ ಅಂದರೆ ಕಲರ್. ಇಂತಪ್ಪ ಪರಿಸರದಿಂದ ಬಂದ ನನಗೆ ವಿದೇಶಿ ಸಾಚಾ ಒಂದರಲ್ಲಿ ನೀಟಾಗಿ ಕೊರೆದು ಮಾಡಿದಂತೆ ತೋರುವ ಗಗನಚುಂಬಿ ಕಟ್ಟಡಗಳನ್ನು ಕಂಡು ದಂಗಾಗಿದ್ದೆ. ಹೇಗೇ ಹೊರಳಿದರೂ ಮೈಮೇಲೆ ಹಾಯುವಂತೆ ಬಂವ್ ಎಂದು ತಿರುಗುವ ಬಸ್ ಗಳು, ಶಾರ್ಪ್ ಆದ ಸೌಂಡ ಮಾಡುತ್ತಾ ಸಾಗುವ ಹೈಬ್ರಿಡ್ ಕಾರುಗಳು, ಬುಡರ್ ಬುಡರ್ ಎಂದು ಮುಕುಳಿ ಹೊರಳಿಸುತ್ತಾ ಸಾಗುವ ರಿಕ್ಷಾಗಳು, ಈ ಗದ್ದಲದ ನಡುವೆಯೇ ಒಂದಷ್ಟು ಜಾಗ ಮಹಾನಗರಪಾಲಿಕೆಯೊಂದಿಗೆ ಮಾತಾಡಿ ಗುತ್ತಿಗೆ ಹಿಡಿದಿರುವಂತೆ ತಮ್ಮದೇ ಆದ ಗತ್ತಿನಲ್ಲಿ ಗುಂಡಾಗಿ ಕುಳಿತ ಬಿಡಾಡಿ ದನಗಳು, ನಾಯಿಗಳು. ಇಡೀ ಮೆಜೆಸ್ಟಿಕ್ ಪರಿಸರ ಮನುಷ್ಯನ ಮೆದುಳಿನ ಮೇಲೆ ಗೀಚೆಳೆಯುವ ಲ್ಯಾಬೊರೋಟರಿ ಇದ್ದಂಗಿತ್ತು. ಅಷ್ಟೆಲ್ಲಾ ಜನಜಂಗುಳಿಯ ನಡುವೆಯೂ ನನಗೆ ಒಂದು ಬಗೆಯ ಏಕಾಂತತೆ ಎದ್ದುತೋರುತ್ತಿತ್ತು. ಅದು ಯಾರಿಗೂ ಯಾರಿಲ್ಲ ಎನ್ನುವ ರೀತಿಯದು. ಈ ಮೆಜೆಸ್ಟಿಕ್ ಬರುವವರನ್ನು ಬ0ುಸುವ, ಹೋಗುವವರನ್ನು ಕಳುಹಿಸುವ ಕೇಂದ್ರ ವೃತ್ತಾಂತವಿದ್ದಂತೆ. ಇಲ್ಲಿ ಬದುಕಿನ ಮೆರೆಥಾನ್ ಇದೆ ಈ ಮೆರೆಥಾನ್ 24 X 7 ಗಂಟೆಯ ಓಟ. ನಿದ್ದೆಗೆಟ್ಟರೂ..ಬಸ್ ತಪ್ಪಿದರೂ..ಕೆಲಸವಾಗದಿದ್ದರೂ..ಕಾಲುಸೋತರೂ ಓಡಲೇಬೇಕು. ಹೀಗೆ ಓಡುವಾಗ ಯಾರ ಮುಖವನ್ನು ಯಾರೂ ನೋಡುತ್ತಿಲ್ಲ. ಅಪ್ಪಿ ತಪ್ಪಿ ನೋಡುವವರಿಗೆ ಕಾಣುವದು ಖರೆ ಖರೆ ಮುಖಗಳಲ್ಲ ಬರೀ ಮುಖವಾಡಗಳು ಮಾತ್ರ. ಅಬ್ಬಾ..! ಅದೆಂಥಾ ಮುಖವಾಡಗಳು ಒಂದಕ್ಕಿಂತಾ ಒಂದು ಭಯ೦ಕರ. ಯಾವ ಮುಖವಾಡದಲ್ಲೂ ನಗುವಿನ ಕಳೆಯಿಲ್ಲ. ಓಡುವ ಓಟದಲ್ಲಿ..ಗೆಲ್ಲುವ ತವಕದಲ್ಲಿ ನಗು ಕಾಣೆಯಾಗಿದೆ ಎನ್ನುವದನ್ನು ಆ ಮುಖವಾಡಗಳ ಹಣೆಯ ಮೇಲಿನ ಗೆರೆಗಳೇ ಹೇಳುತ್ತವೆ. ಯಾರ ಉಸಾಬರಿಯೇ ಬೇಡ ಎಂದು ಓಡುವ ಈ ಮುಖವಾಡಗಳು ಅದಾಗಲೇ ಅಪರಾತಪರಾಗಳ ಸಹವಾಸದಲ್ಲಿದ್ದಂತೆ ತೋರುತ್ತಿದ್ದವು. ಮೆಜೆಸ್ಟಿಕ್ ನ ಸಂದಿಗೊಂದಿಗಳಲ್ಲಿಯೂ ಲಾಜಿಂಗ್ ಗಳಿವೆ. ನೀವು ರೂಮ್ ಬುಕ್ ಮಾಡಬೇಕೆ..? ಬರೀ ಸ್ನಾನ ಮಾಡಬೇಕೆ.? ತಣ್ಣೀರಿನ ಸ್ನಾನ ಬೇಕೆ..? ಬಿಸಿನೀರಿನ ಸ್ನಾನ ಬೇಕೆ..? ಹೀಗೆಂದು ನಿಮ್ಮನ್ನು ವಿಚಾರಿಸಿಕೊಳ್ಳುವವರು ಹೆಜ್ಜೆ ಹೆಜ್ಜೆಗೂ ಇದ್ದಾರೆ. ನಾನು ನನ್ನ ಬಜೆಟ್ ಗೆ ಸೆಟ್ ಆಗುವ ರೂಮ ಒಂದನ್ನು ಬುಕ್ ಮಾಡಿದೆ. ದೂರದ ಸಿಂದಗಿಯಿಂದ ಬೆಂಗಳೂರಿಗೆ ಬಂದ ನನಗೆ ಮೈ ಹಣ್ಣಾಗಿತ್ತು. ಆಗ ಈಗಿನಂತೆ ಸುಖಕರ ಪ್ರಯಾಣದ ರಸ್ತೆಗಳಿರಲಿಲ್ಲ.ಬಸ್ಸುಗಳೂ ಇರಲಿಲ್ಲ. ರೂಮಲ್ಲಿ ಸ್ವಲ್ಪ ಮಲಗಿ ವಿಶ್ರಾಂತಿ ಪಡೆಯೋಣವೆಂದರೆ ಮಾರುಕಟ್ಟೆಯಲ್ಲಿ ಮಲಗಿದ ಅನುಭವ. ಆ ಕೊಣೆಯ ಮುಖ ರಸ್ತೆಗೆ ತಾಗಿಕೊಂಡಂತೆಯೇ ಇತ್ತು. ಅಲ್ಲಿ ಹಾದು ಹೋಗುವ ಎಲ್ಲ ಪಾದಚಾರಿಗಳು, ವಾಹನಗಳು ಆ ರೋಮೊಳಗೆ ಬಂದು ನನ್ನನ್ನು ಮಾತನಾಡಿಸಿಯೇ ಹೋದಂತಾಗುತ್ತಿತ್ತು. ಆ ಗದ್ದಲದ ನಡುವೆ ಮಲಗಲು ಸಾಧ್ಯವೇ ಇಲ್ಲ ಎನ್ನುವದು ಖಾತ್ರಿಯಾಯಿತು. ರಾತ್ರಿ ಮಲಗಿದರಾಯಿತು ಈಗ ನಿಲುಕುವಷ್ಟು ಬೆಂಗಳೂರನ್ನು ನೋಡಿದರಾಯಿತು ಎಂದು ಹೊರನಡೆದೆ. ಕಾಲುಗಳು ಸೋತುಬಂದರೂ ನಾನೂ ಸಿಟಿಯ ಸೂತ್ರಕ್ಕೆ ಬದ್ದನಾಗಿ ಓಡುತ್ತಲೇ ಇದ್ದೆ. ರಾತ್ರಿ ನೆಲ ಸಿಕ್ಕರೆ ಸಾಕು ಗೊರಕೆ ಗ್ಯಾರಂಟಿ ಎಂದು ಊಟ ಮುಗಿಸಿ ರೂಮಗೆ ತೆರಳಿದೆ. ಮಂಚದ ಮೇಲೆ ಉರುಳಿದೆ.ಆಗ ಘಂಟೆ ರಾತ್ರಿ ಹತ್ತಾಗಿತ್ತು. ಇನ್ನೂ ಬೆಂಗಳೂರಿಗೆ ಆಕಳಿಕೆಯ ಮೂಡಿರಲಿಲ್ಲ. ಕಿರೊ.. ಬರ್ರೊ ಎಂದು ವಾಹನಗಳು ಓಡುತ್ತಲೇ ಇದ್ದವು. ನಿವಾಂತವಾಗಿ ಮಲಗುವ ನನ್ನ ನೆಮ್ಮದಿ ಹಾಳಾಗಿತ್ತು. ಹೊದೆಯಲಿರುವ ಗಮಟು ಬೆಡ್ ಶೀಟನ್ನು ಶವಕ್ಕೆ ಸುತ್ತುವಂತೆ ಮುಸುಕು ಹಾಕಿ, ಬೊಕ್ಕ ಬೋರಲಾಗಿ ಬಿದ್ದರೂ ನಿದ್ದೆ ಬೀಳಲಿಲ್ಲ. ರಾತ್ರಿ ಹನ್ನೆರಡಾಯಾತು..ಒಂದಾಯ್ತು.. ನಿದ್ದೆ ಇಲ್ಲ. ಬರೀ ಮಗ್ಗಲು ಹೊರಳಿಸುವದೇ ಆಯಿತು. ಮಲಗಲು ಯುತ್ನಿಸಿದ ಎಲ್ಲ ಪ್ರಯತ್ನಗಳು ವಿಫಲವಾದವು.ಇನ್ನೂ ಗೌಜಿ ಗದ್ದಲ ಕಡಿಮೆಯಾಗಿರಲಿಲ್ಲ. ಬದುಕಿರುವಾಗಲೇ ನನಗೆ ತೀರಾ ಹತ್ತಿರದಿಂದ ನರಕದ ದರ್ಶನವಾಗಿತ್ತು. ಬೆಳಗಿನ ಜಾವ ಎದ್ದು ಲಾಜಿಂಗ್ ಮ್ಯಾನೇಜರ್ ಗೆ ನನ್ನ ರೂಮು ಬದಲಿಸುವಂತೆ ಕೋರಿದೆ. ನೀವು ಕೊಡೋ 100 ರೂಪಾಯಿಗೆ ಇದಕ್ಕಿಂತಾ ಒಳ್ಳೆಯ ರೂಮು ಬೆಂಗಳೂರಲ್ಲಿ ಎಲ್ಲಿ ಸಿಗುತ್ತೆರೀ,, ಅಂತ ನನ್ನನ್ನೇ ದಭಾಯಿಸಿದ. ಇನ್ನೊಂದೆರಡು ದಿನ ಇರಬೇಕೆಂದ ನನ್ನನ್ನು ಬೆಂಗಳೂರು ದಕ್ಕಿಸಿಕೊಳ್ಳುವಂತೆ ಕಾಣಲಿಲ್ಲ. ಹೀಗಾಗಿ ಅದೇ ದಿನ ರಾತ್ರಿ ನನ್ನೂರಿನ ಬಸ್ ಹತ್ತಿದ್ದೆ.]]>

‍ಲೇಖಕರು G

August 26, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This