
ಎಸ್. ಸಾಯಿಲಕ್ಷ್ಮಿ
ಸ್ನೇಹಗಾನಕ್ಕೆ ರಿತೀಷಾ ಎಂಬ ಬಾಲಾದ್ಭುತದ ಪ್ರವೇಶ
ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು ಅಲಂಕರಿಸಿ ಈಗ ವಿಶ್ರಾಂತ ಜೀವನ ನಡೆಸುತ್ತಿರುವ ಶ್ರೀಮತಿ ಸಾಯಿಲಕ್ಷ್ಮಿಯವರು ಮೂಲತಃ ಮಕ್ಕಳ ಸಾಹಿತಿ ಹಾಗು ಲಘುಶೈಲಿ ಬರಹಗಾರ್ತಿ. ಇವರ ಮಕ್ಕಳ ಗೀತರೂಪಕಗಳ ಕೃತಿ ಹಾಗೂ ಹಾಸ್ಯ ಬರಹಗಳ ಮೂರು ಸಂಕಲನಗಳು ಓದುಗರ ಕೈಸೇರಿ ಮೆಚ್ಚುಗೆ ಗಳಿಸಿದೆ.
ಬಾನುಲಿ ಮಾಧ್ಯಮದಲ್ಲಿ ಅನೇಕ ಬಗೆಯ ನುಡಿ ಪ್ರಯೋಗ, ಮಕ್ಕಳ ಅತ್ಯದ್ಬುತ ರಂಗಪ್ರಯೋಗಕ್ಕೆ ಮುನ್ನುಡಿ ಬರೆದಿರುವ ಸಾಯಿಲಕ್ಷ್ಮಿ. ಎಸ್ ಇವರು ತಮ್ಮ ರಚನೆ ಮತ್ತು ಪ್ರಸ್ತುತಿಯ ಮಕ್ಕಳ ಗೀತರೂಪಕ “ಸರ್ಕಸ್ ಆನೆನಲ್ಲಿ” ಇದಕ್ಕಾಗಿ ಆಕಾಶವಾಣಿ ಕೊಡಮಾಡುವ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಬಾನುಲಿಯ ತಮ್ಮ ಆಸಕ್ತಿದಾಯಕ ವೃತ್ತಿಕಾಯಕದಲ್ಲಿ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಪೂರೈಸಿರುವ ಸಾಯಿಲಕ್ಷ್ಮಿ ಇವರಿಗೆ ಸಂಗೀತ, ಸಾಹಿತ್ಯ ಹಾಗೂ ತೋಟಗಾರಿಕೆ ಪ್ರಿಯ ಕ್ಷೇತ್ರಗಳು. ಅಪಾರ ಮನ್ನಣೆ ಪಡೆದ “ಹೂಬತ್ತಿ” ಇವರ ಮೊದಲ ಕಾದಂಬರಿ.
| ಕಳೆದ ಸಂಚಿಕೆಯಿಂದ |
ಸ್ನೇಹಗಾನದ ರೆಕಾರ್ಡಿಂಗ್ ನಿಗದಿಯಾದ ದಿನ ಬೆಳಗ್ಗೆ ಸರಿಯಾಗಿ ಹತ್ತು ಗಂಟೆಗೆ ಅಮ್ಮನ ಕೈಹಿಡಿದು ಸ್ಟುಡಿಯೋ ದ್ವಾರ ಪ್ರವೇಶ ಮಾಡಿತು ಪುಟ್ಟ ಮುದ್ದು ರಿತೀಷಾ. ರಾಮನ್ ಅಲ್ಲಿಯೇ ಮ್ಯೂಸಿಕ್ 2 ಸ್ಟುಡಿಯೋದಲ್ಲಿ ಹಾರ್ಮೊನಿಯಂ ಹಿಡಿದು ಟ್ಯೂನ್ ನೋಡಿಕೊಳ್ಳುತ್ತಿದ್ದರು. ತಬಲಾ, ಸಿತಾರ್, ವಯೊಲಿನ್ ಜೊತೆಗೆ ಕೀ ಬೊರ್ಡ್ ರಿದಂ ಪ್ಯಾಡ್ ನುಡಿಸುವ ಕಲಾವಿದರು ಅವರವರ ವಾದ್ಯ ರಾಮನ್ ನಿರ್ದೇಶನದಲ್ಲಿ ಶೃತಿ ಮಾಡಿಕೊಂಡರು.
ಎಲ್ಲ ಮೈಕ್ ಗಳ ಬ್ಯಾಲೆನ್ಸ್ ಗಾಗಿ ಕನಸೋಲ್ಗೆ ಬಂದರು ಸ್ವತಃ ರಾಮನ್. ಅಗತ್ಯ ಬಿದ್ದಾಗ ಅವುಗಳ ರಿಪೇರಿಯೂ ರಾಮನ್ ಸೊಗಸಾಗಿ ಮಾಡುತ್ತಿದ್ದರು. ಮಗು ರಿತೀಷಾಳ ದನಿ ಅವಳೊಡನೆ ಉಳಿದ ಎರಡು ಪಾತ್ರಧಾರಿಗಳ ದನಿಯು ನೋಡಿದರು. ಎಲ್ಲ ಕಲಾವಿದರು ಒಂದೊಂದು ಪದ್ಯಕ್ಕೂ ಬಿಜಿಎಂ ರಾಮನ್ ನಿಂದ ಪಡೆದು ಸಿದ್ಧವಾಗಿದ್ದಾರೆ. ಮಗುವಿನ ಆ ಪಕ್ಕ ಅದರಮ್ಮ ಸುಧಾ ಕುಳಿತಿದ್ದರೆ ಈ ಪಕ್ಕ ಹುರಿದುಂಬಿಸಲು ನಾನು. ಬೇರೆ ಬೇರೆ ರಾಗದಲ್ಲಿ ಪುಟ್ಟ ಪುಟ್ಟ ಕವಿತೆಗಳು.
ಮಕ್ಕಳಿಗೆ ಆಕರ್ಷಕವಾಗಿರುವಂತಹ ಭಾಷೆಯಲ್ಲಿ ಸ್ನೇಹಗಾನದ ಬರಹ ಹಾಗೆ ರಾಮನ್ ಸಂಯೋಜಿಸಿದ ಕುಣಿಸುವ ಮತ್ತೆ ಮತ್ತೆ ಕೇಳಬೇಕೆನಿಸುವ ಸಂಗೀತದ ಅಲಂಕಾರ. ರಿತೀಷಾ ಏನು ಮಾಡುವಳೋ ಎಲ್ಲವನ್ನು ಹೇಗೆ ಹಾಡುವಳೋ ಎಂಬ ಕಳವಳ ಕುತೂಹಲ ನಮಗೆಲ್ಲ. ಹೃದಯ ಕೈಯಲ್ಲಿತ್ತು. ರಿತೀಷಾ ಸ್ವಭಾವತ: ಗಂಭೀರ ಮುಖಮುದ್ರೆಯ ಬಾಲೆ. ಮೊದಲ ಗೀತೆಗೆ ಟೇಕ್ ಕೊಡಲಾಯಿತು. ಒಂದು ಮಾನಿಟರ್ ಮತ್ತೆ ಫೈನಲ್ ರೆಕಾರ್ಡಿಂಗ್.
ಮರಿ ಕೋಗಿಲೆ ಬಾಯಿ ತೆರೆಯಿತು. ಹೃದಯದಿಂದ ಅಪೂರ್ವ ರಾಗಭಾವ ಮಾಧುರ್ಯದ ಜೇನ ಹೊಳೆ ಹರಿಸಿತು. ಅದು ತುಂಬಿದ ಮಧುರ ಭಾವ, ಉಚ್ಚಾರ ಸಾಹಿತ್ಯದ ಸ್ಪಷ್ಟತೆ ಸಂಗೀತದಲ್ಲಿನ ಶೃತಿ, ಲಯ, ಶುದ್ಧತೆ ಅದು ತೋರಿದ ಶ್ರದ್ಧೆ ಮಾನಿಟರ್ ಲ್ಲೇ ಎಲ್ಲರನ್ನು ವಿಸ್ಮಯಗೊಳಿಸಿತು. ರಾಮನ್ ನಾನು ಬಿಟ್ಟ ಕಣ್ಣು ತೆರೆದ ಬಾಯಿಂದ ಅದರ ಪ್ರಚಂಡ ಪ್ರತಿಭೆ ಕಂಡು ಬೆರಗಾಗಿದ್ದೇವೆ.

ರಾಮನ್ ನನ್ನತ್ತ ನೋಡಿ “ಮೇಡಂ ಸೂಪರ್ ಸೆಲೆಕ್ಸನ್” ಎಂದು ಅಭಿನಂದಿಸಿದರು. ಮುಂದೆ ರೆಕಾರ್ಡಿಂಗ್. ತಪ್ಪಿದರೆ ನಮ್ಮ ಕಲಾವಿದರು ತಪ್ಪಬೇಕು (ಅದು ಅಸಂಭವ) ಹಾಗೆ ರಿತೀಷಾ ಸಮ್ಮೋಹನಾಸ್ತ್ರ ಬೀರಿದಳು. ಅವಳಿಗೆ ಮೀಸಲಾದ ಅಷ್ಟೂ ಹಾಡು ಯಾವ ತೊಡಕಿಲ್ಲದೆ ಗಡಿಬಿಡಿಯಿಲ್ಲದೆ ಚೂರು ತಪ್ಪದೆ ಹಾಡಿ ಜಯಭೇರಿ ಬಾರಿಸಿ ಬಿಟ್ಟಳು. ಒಂದೊಂದು ಹಾಡಿಗೂ ಅಲ್ಪ ವಿರಾಮ ಆ ಸಮಯದಲ್ಲಿ ನಮ್ಮಕಲಾವಿದರು ಮುಂದಿನ ಗೀತೆಯ ಬಿಜಿಎಂ ನೋಡಿಕೊಳ್ಳುವರು.
ನನ್ನ ಬ್ಯಾಗಿನಲ್ಲಿ ಕೆಂಪು ಕಲ್ಲು ಸಕ್ಕರೆಯ ಚೂರು ಇಟ್ಟುಕೊಂಡಿದ್ದು ರಿತೀಷಾಗೆ ಪ್ರತಿ ಹಾಡು ಮುಗಿದ ನಂತರ ಮೆಚ್ಚುಗೆಯ ರೂಪದಲ್ಲಿ ಭಕ್ಸೀಸ್ ಭಕ್ಷೀಸ್ ಕೊಡುತ್ತಿದ್ದನಂತೆ. ಹೀಗೆ ಈಚೆಗೆ ರಿತೀಷಾ ಅಮ್ಮ ಸುಧಾ ನೆನಪಿಸಿದರು. ನನಗೆ ನೆನಪಿಲ್ಲ.”ಮೇಡಂ ಎಲ್ಲ ನಿಮ್ಮ ಕಲ್ಲು ಸಕ್ಕರೆಯ ಮಹಿಮೆ” ಎಂದರು ಇಂದಿಗೂ ಸಂಪರ್ಕದಲ್ಲಿರುವ ಆ ತಾಯಿ. ನಂತರ ಉಳಿದೆರಡು ತುಸು ದೊಡ್ಡಮಕ್ಕಳ ಪಾತ್ರದ ಹಾಡುಗಳು ರೆಕಾರ್ಡಿಂಗ್ ಆಯಿತು ಅವರು ಹೇಳಿಕೊಟ್ಟಿದ್ದನ್ನು ಅಚ್ಚುಕಟ್ಟಾಗಿ ಹಾಡಿದರು.
ಇನ್ನು ಮಾಲತಿ ಶರ್ಮಾ ನಮ್ಮ ಆಕಾಶವಾಣಿಯ ಕುಟುಂಬ ಸದಸ್ಯೆ. ಅವರು ಬಂದು ಹಾಡು ಮಾತು ಎಲ್ಲವೂ ಸಲೀಸಾಗಿ ಚೆನ್ನಾಗಿ ರೆಕಾರ್ಡ್ ಆದವು. ಅದು ಟೇಪು ಸ್ಪೂಲ್ ಗಳೊಡನೆ ಕೆಲಸ ಮಾಡುವ ಕಾಲ. ರಾಮನ್ ಗೆ ಉಂಟಾದ ಆನಂದ ಮಾತಲ್ಲಿ ಹೇಳಲಾಗದು. ನಾನಂತೂ ದೇವರಿಗೆ ದನ್ಯವಾದ ಸಮರ್ಪಣೆಯಲ್ಲೇ ನಿರತಳಾಗಿದ್ದೆ.
ಸಂಜೆಯ ಹೊತ್ತಿಗೆ ರೆಕಾರ್ಡಿಂಗ್ ಕಾರ್ಯಕ್ರಮ ಸಾಂಗವಾಗಿ ಮುಗಿಯಿತು. ಸುಧಾ ನನ್ನ ಬಳಿ ಬಂದು ಕೈಹಿಡಿದು ನುಡಿದರು “ಮೇಡಂ ನಿಮಗೆ ಹೇಗೆ ಥ್ಯಾಂಕ್ಸ್ ಹೇಳಬೇಕೋ ಗೊತ್ತಿಲ್ಲ. ನೀವು ಅವಳನ್ನ ಹೇಗೆ ನಂಬಿ ಅವಕಾಶ ಕೊಟ್ಟಿರಿ? ನನಗೆ ಧೈರ್ಯವಿರಲಿಲ್ಲ ಅವಳು ಇಷ್ಟೆಲ್ಲ ಹಾಡಬಹುದೂಂತ” ನಾನೆಂದೆ “ಎಲ್ಲ ಸರಿ ಕನ್ನಡ ಓದಲು ಬರೆಯಲು ಬಾರದ.ಮಗು ಕಲಿತಿದ್ದಾದರೂ ಹೇಗೆ?”

“ರಿತೀಷಾ ಎರಡು ರಾತ್ರಿ ಪೂರಾ ನಿದ್ದೆಮಾಡಿಲ್ಲ. ಟೇಪ್ ರೆಕಾರ್ಡರ್ ಹಾಕಿ ರಾಮನ್ ಟ್ಯೂನ್ ಮಾಡಿದ ಕ್ಯಾಸೆಟ್ ಕೇಳಿದ್ದೇ ಕೇಳಿದ್ದು. ಅವಳು ಶಾಲೆ ತಪ್ಪಿಸಲಿಲ್ಲ. ಇಂದು ಮಾತ್ರ ರಜಾ ಹಾಕಿಸಿದೀನಿ. ಅಮ್ಮ ಆಂಟಿಗೆ ಎಲ್ಲ ನೀಟಾಗಿ ಒಪ್ಪಿಸಬೇಕೂಂತ ಅವಳು ಕಲಿತಿದ್ದೆಲ್ಲ ಹಾಡಿದಳು ನಾನಾಗ ಸ್ಟ್ರಿಪ್ ನೋಡತಾ ತಪ್ಪಿದರೆ ಸರಿ ಮಾಡೋ ಕೆಲಸ. ಸರಿಯಾಗಿ ತಯಾರಾಗಿ ಬರಬೇಕು ಅನ್ನೋ ಹಟದಲ್ಲಿ ಅಭ್ಯಾಸ ಮಾಡಿದಾಳೆ” ಏನನ್ನುವುದು ನಾಲ್ಕು ವರುಷದ ಮುಗ್ಧಮಗುವಿನ ಬದ್ಧತೆಗೆ.
ರಿತೀಷಾ ದೈವಾಂಶ ಸಂಭೂತಳಾಗಿ ಕಂಡಳು. ಅವಳಲ್ಲೊಂದು ದೈವೀಕ ಪ್ರತಿಭೆ ಕಣ್ತುಂಬಿಕೊಂಡೆ. ಸುಧಾ ಮಗುವಿನ ಪರವಾಗಿ ನಮ್ಮ ಕಾಂಟ್ರಾಕ್ಟ್ ತುಂಬಿ ಸಹಿ ಮಾಡಿ ಹೊರಟರು. ಅವರಿಗೂ ಮಗಳ ಬಗ್ಗೆ ಅಪಾರ ವಿಶ್ವಾಸ ಮೂಡಿತ್ತು. ನಮ್ಮ ಪ್ರತಿಯೊಬ್ಬ ಕಲಾವಿದರು ರಿತೀಷಾಳ ಬಗ್ಗೆ ಅಭಿಮಾನದ ಮಳೆಗೆರೆದರು. ನನಗೋ ನನ್ನ ಮಗುವೇನೋ ಈ ಹೊಗಳಿಕೆಗೆ ಪಾತ್ರವಾಗಿದ್ದು ಎಂಬಂತಹ ಹೆಮ್ಮೆ.
ದೇಶದಿಂದ ದೇಶಕ್ಕೆ ಹಾರುತ್ತ ಸಂಗೀತ ಕಾರ್ಯಕ್ರಮ ನೀಡುತ್ತಿದ್ದು ಮೇರು ಗಾಯಕಿ ಎನಿಸಿಕೊಂಡಿದ್ದಾಳೆ. ನಮ್ಮ ನೆಲದಲ್ಲೂ ರಿತೀಷಾ ವಿದ್ಯಾರ್ಥಿ ದೆಸೆಯಿಂದ ಎಸ್ ಪಿ ಬಾಲಸುಬ್ರಮಣ್ಯಂ ಮುಂತಾದ ಪ್ರಸಿದ್ಧ ಗಾಯಕರೊಡನೆ ಹಲವಾರು ಚಲನಚಿತ್ರಕ್ಕಾಗಿ ಹಾಡಿದ್ದಾಳೆ. ಒಂದು ವರುಷದ ಹಿಂದೆ ಸಂಗೀತಾಸಕ್ತನನ್ನೇ ಇಲ್ಲಿ ಮದುವೆಯಾಗಿ ಅಮೆರಿಕೆಯಲ್ಲಿ ನೆಲೆಸಿದ್ದಾಳೆ. ಅದೇ ಮುಗ್ಧ ಪ್ರೀತಿ ತುಂಬಿದ ಸೌಮ್ಯ ತೇಜಸ್ವಿ ಮೊಗದ ಚೆಲುವೆ ರಿತೀಷಾ ಇಂದಿಗೂ ಕಾಣುತ್ತಿದ್ದಂತೆ ಓಡಿ ಬಂದು ವಿಶ್ವಾಸದಿಂದ ಮಾತನಾಡಿಸುವ ಗುಣಸಂಪನ್ನೆ.
ತುಂಬಾ ಸಂತೋಷವಾಯಿತು
ತುಂಬಾ ಸಂತೋಷವಾಯಿತು. ಓದುವುದಕ್ಕೆ ಸಂತೋಷವಾಗುತ್ತಿದೆ