ಎಸ್ ಜಿ ಸಿದ್ದರಾಮಯ್ಯನವರ 'ಕಾಲ ಕಣ್ಣಿಯ ಹಂಗು'

ಕರಿಸ್ವಾಮಿ. ಕೆ

ಕೃಪೆ : ವಿಜಯ ಕರ್ನಾಟಕ

ಕವಿ ಎಸ್.ಜಿ. ಸಿದ್ದರಾಮಯ್ಯನವರು ಒಂದು ಆವೃತ್ತ ಮುಗಿಸಿದ್ದಾರೆ. ಅದರ ಫಲವೇ ‘ಕಾಲ ಕಣ್ಣಿಯ ಹಂಗು’ ಹೆಸರಿನ ಅವರ ಸಮಗ್ರ ಕವನ ಸಂಗ್ರಹಗಳ ಸಂಕಲನ. ನಮ್ಮ ಬಯಲು ಸೀಮೆಯ ಅಡುಭಾಷೆಯನ್ನು ಸಮರ್ಥವಾಗಿ ಕಾವ್ಯದ ಮೂಲಕ ಕಟ್ಟಿಕೊಟ್ಟವರು ಎಸ್‌ಜಿಎಸ್ ಎಂಬ ಬಗ್ಗೆ ಯಾರಿಗೂ ತಕರಾರಿಲ್ಲ. ನವ್ಯದ ಉತ್ಕರ್ಷ ಮತ್ತು ಬಂಡಾಯದ ಟಿಸಿಲುಗಳನ್ನು ಕಂಡ ಅವರ ತಲೆಮಾರಿನ ಅನೇಕರು ಅವುಗಳ ಪ್ರಭಾವದಿಂದ ತಪ್ಪಿಸಿಕೊಂಡದ್ದರಿಂದ ಕನ್ನಡಕ್ಕೆ ಇನ್ನಷ್ಟು ಹೊಸ ಕಾವ್ಯ ಬರಲು ಸಾಧ್ಯವಾಯಿತು. ನವ್ಯ ಕಾವ್ಯ ತನ್ನ ವ್ಯಕ್ತಿಕೇಂದ್ರಿತ ವಿಚಾರ ಮತ್ತು ಸಪಾಟು (ಪ್ಲೈನ್) ಭಾಷೆಯ ಕಾರಣದಿಂದ ಅದು ನವ್ಯ ಕಾವ್ಯ ಎಂದು ಗೊತ್ತಾಗುತ್ತದೆ. ಸಾಹಿತ್ಯದ ಸೂಕ್ಷ್ಮಓದುಗರಲ್ಲದವರಿಗೆ ಇದು ಯಾರ ಕಾವ್ಯ ಎಂದು ಗುರುತಿಸುವುದು ಇವತ್ತಿಗೂ ಕಷ್ಟ. ನವ್ಯದ ಎಲ್ಲ ಪ್ರಭಾವಳಿಗಳನ್ನೂ ಮೀರಿ ಹೊಸತನ್ನು ಸೃಷ್ಟಿಸಲು ಹಾತೊರೆದ ಎಸ್‌ಜಿಎಸ್ ಅಂಥವರ ಯಶಸ್ಸು ಕನ್ನಡ ಕಾವ್ಯಲೋಕಕ್ಕೆ ಇನ್ನಷ್ಟು ಸ್ಪಷ್ಟತೆಯನ್ನು ತಂದುಕೊಟ್ಟಿದೆ. ಹಾಗೆಂದು ಬಂಡಾಯದ ಗುಣ ಅವರ ಕಾವ್ಯಕ್ಕಿಲ್ಲ ಎಂದಲ್ಲ. ಜಾಗತೀಕರಣದ ಹೆಬ್ಬಾಗಿಲುಗಳು ತೆರೆದುಕೊಳ್ಳುವವರೆಗೆ ಬಂಡಾಯ ಕಾವ್ಯದ ವ್ಯಾಖ್ಯಾನವೇ ಬೇರೆ ರೀತಿ ಇತ್ತು. ಈಗ ಅದು ಬದಲಾಗಿದೆ. ಈಗ ಅನೇಕ ಅರ್ಥಗಳಲ್ಲಿ ಪ್ರತಿ ಬರಹಗಾರನೂ ಬಂಡಾಯಗಾರನೇ. ಎಸ್‌ಜಿಎಸ್ ಆಗ ಬಹುಕಾಲ ಘೋಷಿತ ಬಂಡಾಯಗಾರರಾಗಿ ಉಳಿಯದಿರಲು ಅವರ ಹಿನ್ನೆಲೆಯೂ ಕಾರಣವಾಗಿರಬಹುದು. ಎಸ್‌ಜಿಎಸ್ ಅವರ ಮೊದಲ ಸಂಕಲನ (ಗಾಲ್ಫ್ ಉಬ್ಬಿನ ಮೇಲೆ-1980)ಇಂಥದೇ ಸಪಾಟಾದ ಭಾಷೆಯನ್ನು ಉಪಯೋಗಿಸಿದ್ದರೂ ಅಭಿವ್ಯಕ್ತ ವಿಷಯಗಳ ಅನನ್ಯ ಕಾರಣಕ್ಕಾಗಿ ಆ ಪದ್ಯಗಳು ಇಷ್ಟವಾಗುತ್ತವೆ. ಎಸ್‌ಜಿಎಸ್ ಪದ್ಯಗಳಲ್ಲಿ ಜೋಗಿ, ಜಂಗಮ, ನೆಲಮೂಲ, ಬಯಲು, ಕರುಳುಬಳ್ಳಿ ಇಂಥ ಪ್ರಯೋಗಗಳು ಎಲ್ಲ ಪದ್ಯಗಳಲ್ಲಿ ಇರಲೇಬೇಕೆಂದು ಹದಿನೈದು ವರ್ಷಗಳ ಹಿಂದೆ ನಾವೆಲ್ಲ ಮಾತಾಡಿಕೊಳ್ಳುತ್ತಿದ್ದೆವು. ಇಂಥ ಜಾಗತೀಕರಣದ ಹೊತ್ತಲ್ಲಿ ಇದು ಬಹಳ ಮುಖ್ಯ ಅಂಥ ನಮಗೆಲ್ಲ ವೇದ್ಯವಾಗಬೇಕಾದರೆ ಒಂದು ದಶಕ ಬೇಕಾಯಿತು. ಹಾಗಾಗಿಯೇ ನಮಗೆಲ್ಲಾ -ಅದರಲ್ಲೂ ಬಯಲುಸೀಮೆಯ ಎಲ್ಲ ಪ್ರಕಾರದ ಬರಹಗಾರರಿಗೆ- ಎಸ್‌ಜಿಎಸ್ ಬರಹ, ಭಾಷೆ ವಿಷಯವಾಗಿ ಒಂದು ಸ್ಪಷ್ಟತೆ ತಂದುಕೊಟ್ಟದ್ದಲ್ಲದೆ ಬಳಸಲು ಧೈರ್ಯ ಮತ್ತು ಅಗತ್ಯವನ್ನು ಒತ್ತಿ ಹೇಳಿತು.   ಅವರ ಕಾವ್ಯವನ್ನು ಆಸ್ವಾದಿಸುವ ಹೊತ್ತಿಗೇ ನಮಗೆ ದೇವನೂರರ ಭಾಷೆ ಬಳಕೆ ಮತ್ತು ಅಗತ್ಯ ಕುರಿತು ಇನ್ನೂ ಹೆಚ್ಚು ಮನವರಿಕೆಯಾಯಿತು. ಸ್ಥಳೀಯ ಭಾಷೆ ಮತ್ತು ಸಾಂಸ್ಕೃತಿಕ ಪರಿಕರಗಳನ್ನು ಉಪಯೋಗಿಸಿ ಕಾವ್ಯದ ಅನೇಕ ಸಾಧ್ಯತೆಗಳನ್ನು ತೂಗಿ ನೋಡಿದ ಎಸ್‌ಜಿಎಸ್ ಅವರೇ ನಮಗೆಲ್ಲ ಒಂದರ್ಥದಲ್ಲಿ ಮಾದರಿ ಎನ್ನಬಹುದು. ಈ ಹಿನ್ನೆಲೆಗಳಿಂದಲೇ ಅವರ ಕಾವ್ಯ ಏಕಕಾಲಕ್ಕೆ ಸ್ಥಳೀಯವೂಜಾಗತಿಕವೂ ಆಗುವ ವಿಸ್ಮಯಗಳಿಂದ ಬೆರಗುಗೊಳಿಸುತ್ತಲೇ ಬಂದಿದೆ. ಅವರ ಒಟ್ಟಾರೆ ಕಾವ್ಯದ ಅಶಯ ‘ಮನೆ ಗೆದ್ದು ಮಾರು ಗೆಲ್ಲು’ ಎನ್ನುವುದೇ ಆಗಿದೆ. ನಂತರದ ಕಾಡುವ ಬೇಲಿ ಹೂ (1985) ಸಂಕಲನದ ಮಳೆಮಲೆಯ ಪಾಡು-ಹಾಡಿನಂಥ ಕೆಲವು ರಚೆನೆಗಳು ಬೇಂದ್ರೆ ಕಾವ್ಯದ ಲಾಲಿತ್ಯವನ್ನು ನೆನಪಿಸುತ್ತವೆ. ಈ ಸಂಕಲನದಲ್ಲಿ ಸಾಕಷ್ಟು ಪ್ರೇಮ ಪದ್ಯಗಳೂ ಇವೆ. ಇಲ್ಲಿನ ಇನ್ನಷ್ಟು ವಿಶೇಷಗಳೆಂದರೆ ಈ ಪದ್ಯಗಳ ಭಾವಾಭಿವ್ಯಕ್ತಿಯ ಹರಹು ಕನ್ನಡದ ಬಹುಮುಖ್ಯ ವೈವಿಧ್ಯಗಳ ಮಾದರಿಯಂತಿದೆ. ಮುಂದೆ ಬಂದ ಅವಳೆದೆಯ ಜಂಗಮ (1993), ಸೊಲ್ಲು ಫಲವಾಗಿ (1997), ಮರುಜೇವಣಿ (2000), ಕೆರೆಬಳಗ (2003), ಬೀದಿ ಅಲ್ಲಮ (2007), ಉರಿವ ಬತ್ತಿ ತೈಲ (2010) ಅವರ ಕಾವ್ಯಮಾರ್ಗದ ನಡೆ ಮತ್ತು ದಿಕ್ಕುಗಳನ್ನು ತುಂಬಾ ಸಮರ್ಥವಾಗಿ ಮತ್ತು ಢಾಳಾಗಿ ಶ್ರುತಪಡಿಸಿದವು ಎನ್ನಬಹುದು. ನನಗೆ ಗೊತ್ತಿರುವಂತೆ ಅವರು, ಅರಿವು ನಾಚಿತ್ತು (2011) ಎಂಬ ನೂರೊಂದು ಪ್ರತಿಕ್ರಿಯಾತ್ಮಕ ರಚನೆಗಳಲ್ಲಿ ಮೊದಮೊದಲ ರಚನೆಗಳನ್ನು ನನಗೆ ಕಳಿಸಿ, ಅಭಿಪ್ರಾಯ ತಿಳಿಸುವಂತೆಯೂ ಮತ್ತು ಅವನ್ನು ಸಾಧ್ಯವಾದರೆ ಪ್ರಕಟಿಸುವಂತೆಯೂ ಕೇಳಿದ್ದರು. ಅವು ‘ವಿಜಯ ಕರ್ನಾಟಕ’ದ ಸಾಪ್ತಾಹಿಕದಲ್ಲಿ ಪ್ರಕಟವೂ ಆದವು. ಇದು ಎಸ್‌ಜಿಎಸ್ ಅವರ ಕ್ರಿಯಾತ್ಮಕ ಮತ್ತು ಪ್ರಾಯೋಗಿಕ ತುಡಿತಕ್ಕೆ ನಿದರ್ಶನ. ಆದ್ದರಿಂದಲೇ ಈ ಲೇಖನದ ಆರಂಭದಲ್ಲಿ ಅವರು ಒಂದು ಆವೃತ್ತ ಮುಗಿಸಿದ್ದಾರೆ ಎಂದು ಹೇಳಿದ್ದು. ನನ್ನ ತಿಳಿವಳಿಕೆಯ ಮಿತಿಯಲ್ಲಿ ಹೇಳುವುದಾದರೆ, ಕಾಲ ಕಣ್ಣಿಯ ಹಂಗು ಎಂಬ ರೂಪಕವೇ ವಿಶಿಷ್ಟವಾಗಿದೆ. ಕಾಲವನ್ನು ಮೀರುವ ಕವಿಯೊಬ್ಬನ ತುಮುಲ ಯಾವಾಗಲೂ ಕಾಲದ ಜತೆಜತೆಗೆ ಸಂಘರ್ಷ ನಡೆಸಿರುತ್ತದೆ. ಈ ಸಂಘರ್ಷವೇ ಕಾವ್ಯದ್ರವ್ಯವಾಗಿ, ಶಕ್ತಿಯುತವಾಗಿ ಹೊಮ್ಮುವುದೇ ಕಾವ್ಯ ಹುಟ್ಟುವ ಅನನ್ಯ ಘಳಿಗೆ. ಇಂಥ ಅನೇಕ ಸಾಧ್ಯತೆಗಳನ್ನು ಮುಟ್ಟಲು ಈ ಕಾವ್ಯ ಯತ್ನಿಸಿದೆ ಎನಿಸುತ್ತದೆ. ಕಾವ್ಯದಲ್ಲಿ ಸರಳ, ಕ್ಲಿಷ್ಟ ಎಂಬುದಕ್ಕೆ ಆಸ್ಪದವಿಲ್ಲ. ಇದೊಂದು ರೀತಿ ಖಗೋಳ ವಿಜ್ಞಾನವಿದ್ದಂತೆ. ಅಲ್ಲಿ ಮೇಲೆ, ಕೆಳಗೆ ಎಂಬ ತರತಮಕ್ಕೆ ಅವಕಾಶವಿಲ್ಲ. ಇದು ಹೇಗೆಂದರೆ ಭೂಮಿ ಮೇಲೆ ನಿಂತು ಚಂದ್ರನನ್ನು ನೋಡಿದರೆ ಮೇಲಕ್ಕೆ ನೋಡಬೇಕು ಸರಿ. ಹಾಗಾದರೆ ಚಂದ್ರನ ಮೇಲೆ ನಿಂತು ಭೂಮಿಯನ್ನು ಹೇಗೆ ನೋಡಬೇಕು? ಎಂದು ಕೇಳಿದಂತೆ. ಇದಕ್ಕೆ ಉತ್ತರ ಕೂಡ ‘ಮೇಲಕ್ಕೇನೆ ನೋಡಬೇಕು’ ಎಂಬುದು; ಇದರಂತೆಯೇ ಕಾವ್ಯದ ಒಟ್ಟಾರೆ ವಿಸ್ಮಯ ಮತ್ತು ವಾಸ್ತವ. ಆದ್ದರಿಂದಲೇ ಸಪಾಟು ಭಾಷೆಯಲ್ಲಿ ಹೇಳಿರುವುದು ಮತ್ತು ಹೇಳುವುದೆಲ್ಲ ಕಾವ್ಯವಲ್ಲ ಎಂಬರ್ಥದಲ್ಲಿ ನಾವ್ಯಾರೂ ಕಾವ್ಯವನ್ನು ಸರಳೀಕರಿಸಬಾರದು. ಆದರೆ ಭಾರತದಂಥ ಬೃಹತ್ ದೇಶದಲ್ಲಿ ಪ್ರತಿ 20-25 ಕಿಲೋಮಿಟರಿಗೊಮ್ಮೆ ಭಾಷೆ ತನ್ನ ಲಯದ ಒಂದು ಮಗ್ಗುಲನ್ನು ಬದಲಿಸುತ್ತದೆ ಎನ್ನುತ್ತಾರೆ ಭಾಷಾಶಾಸ್ತ್ರಜ್ಞರು. ಆ ನಿಟ್ಟಿನಲ್ಲಿ ಸಪಾಟು (ಪ್ಲೈನ್) ಎಂಬ ಎಲ್ಲರ ಸಾಮಾನ್ಯ ಭಾಷೆ ಸ್ಥಳೀಯ ಭಾಷೆ ಎನ್ನುವುದಕ್ಕೆ ಬೇರೆಯೇ ಆಗಿದೆ. ಇದೆಲ್ಲವನ್ನು ಇಟ್ಟುಕೊಂಡು ನೋಡಿದರೆ ಮಾತ್ರ ಸಿದ್ದರಾಮಯ್ಯನವರ ಕಾವ್ಯದ ಜತೆ ಸಂವಾದಿಸಲು ಸಾಧ್ಯ. ಪ್ರಣಯ, ಪ್ರೇಮ, ರಮ್ಯತೆ ಮತ್ತು ವರ್ಣನೆಗಳನ್ನೇ ದೃಷ್ಟಿಯಿಟ್ಟುಕೊಂಡು ಸಿನಿಕವಾಗಿ ಕಾವ್ಯವನ್ನು ನೋಡುವ ಯಾವ ಹೊಸಬನಿಗೂ ಕಾವ್ಯ ತನ್ನ ಗುಟ್ಟನ್ನು ಬಿಟ್ಟುಕೊಡುವುದಿಲ್ಲ. ಇದು ಎಲ್ಲ ಕಾಲಕ್ಕೂ ಎಲ್ಲರ ಕಾವ್ಯಕ್ಕೂ ಅನ್ವಯವಾಗುವ ಒಟ್ಟಾರೆ ಕಾವ್ಯದ ಮಿತಿ ಮತ್ತು ಶಕ್ತಿ ಎಂಬುದು ನನ್ನ ತಿಳಿವಳಿಕೆ. ಕಾವ್ಯವನ್ನು ಅರ್ಥ ಮಾಡಿಕೊಳ್ಳಲು ಅನೇಕ ಬಾರಿ ವಿಶ್ಲೇಷಣೆಗಳ ಹಂಗು ಬೇಕಾಗುತ್ತದೆ. ಇದೇ ಒಂದು ವಿಶಿಷ್ಟ ಕಾವ್ಯದ ಸತ್ವವೂ ಹೌದು. ಏಕೆಂದರೆ ಕಾವ್ಯಾಸಕ್ತನಿಗೆ ಕಾವ್ಯ ಒಲಿಯಲು ಅವನಿಗೂ ಸ್ವಲ್ಪ ಸಿದ್ಧತೆ ಬೇಕಲ್ಲವೇ? ಇದೇ ಸಿದ್ದರಾಮಯ್ಯನವರ ಕಾವ್ಯದ ವೈಶಿಷ್ಟ್ಯ. ಈ ನಿಟ್ಟಿನಲ್ಲಿ ಕಾವ್ಯದ ಸಾರ್ಥಕ ಆಸ್ವಾದನೆ ಎಸ್‌ಜಿಎಸ್ ಅವರಲ್ಲಿ ಕಾವ್ಯದಲ್ಲಿ ಸಾಧ್ಯ. ಸಿದ್ಧರಾಮಯ್ಯನವರ ಕಾವ್ಯ ಹೊಂಗೆ ಮರದ ನೆರಳಿನಂತೆ. ಆ ನೆರಳಿನ ಆಹ್ಲಾದತೆಯನ್ನು ಅನುಭವಿಸಬೇಕಾದರೆ ಸ್ವಲ್ಪ ದೂರದಿಂದ ಮಟಮಟ ಮಧ್ಯಾಹ್ನದ ಬಿಸಿಲಲ್ಲಿ ನಡೆದುಬರಬೇಕಷ್ಟೆ.  ]]>

‍ಲೇಖಕರು G

May 9, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This