ಎಸ್ ನಿಜಲಿಂಗಪ್ಪ ಅವರ ಪಾಲಿನ ಆಂಜನೇಯ ಯಾರು ಗೊತ್ತಾ?

ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ.

ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ.

ವಿಠ್ಠಲಮೂರ್ತಿ, ನಿಜಲಿಂಗಪ್ಪ ಅವರ ಪಾಲಿನ ಲವ-ಕುಶ ಯಾರು ಅಂತ ನಿಮಗೆ ಗೊತ್ತು. ಆದರೆ ಅವರ ಅಂತರಂಗಕ್ಕೆ ಅಂಟಿಕೊಂಡಿದ್ದ ಆಂಜನೇಯ ಯಾರು ಅಂತ ನಿಮಗೆ ಗೊತ್ತಾ? ಹಾಗಂತ ಅವತ್ತು ಬೆಂಗಳೂರಿನ ಸದಾಶಿವನಗರದ ಬಂಗಲೆಯಲ್ಲಿ ಕುಳಿತು ಹಿರಿಯ ನಾಯಕ ಎಂ ರಾಜಶೇಖರ ಮೂರ್ತಿ ಕೇಳಿದರು.

ನಾನು ಬೆಚ್ಚಿ ಬಿದ್ದೆ. ಕರ್ನಾಟಕದ ನೆಲದಿಂದ ರಾಷ್ಟ್ರ ರಾಜಕಾರಣದ ಎತ್ತರಕ್ಕೇರಿದ ಹಿರಿಯ ನಾಯಕ ನಿಜಲಿಂಗಪ್ಪ ಅವರ ಪಾಲಿನ ಲವ-ಕುಶ ಯಾರು ಅಂತ ನನಗೆ ಗೊತ್ತಿತ್ತು. ಈ ಲವ-ಕುಶರು ಅಕ್ಷರಶಃ ಕರ್ನಾಟಕದ ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸಿದ್ದರು. ಅಸಂಖ್ಯಾತರ ಮೇಲೆ ಪ್ರಭಾವ ಬೀರುವಷ್ಟು ಬೆಳೆದಿದ್ದರು. ಇವತ್ತಿಗೂ ಈ ಲವ-ಕುಶರ ಹೆಸರುಗಳನ್ನು ಕರ್ನಾಟಕದ ರಾಜಕಾರಣ ಪ್ರೀತಿಯಿಂದ ಅಪ್ಪಿಕೊಳ್ಳುತ್ತದೆ. ಈ ಜೋಡಿಯ ಹೆಸರು- ವೀರೇಂದ್ರ ಪಾಟೀಲ್ ಮತ್ತು ರಾಮಕೃಷ್ಣ ಹೆಗಡೆ.

ಆದರೆ ನಿಜಲಿಂಗಪ್ಪ ಅವರ ಪಾಲಿನ ಆ ಆಂಜನೇಯ ಯಾರು ಅಂತ ಮಾತ್ರ ಗೊತ್ತಿರಲಿಲ್ಲ. ಹಾಗಂತಲೇ ಕುತೂಹಲ ತಡೆದುಕೊಳ್ಳಲಾಗದೆ; ಯಾರು ಸಾರ್? ಅಂತ ಕೇಳಿದೆ. ಅವರು ನನ್ನನ್ನೇ ದಿಟ್ಟಿಸಿ ನೋಡುತ್ತಾ: ಆ ಆಂಜನೇಯನ ಹೆಸರು ಪಿ ಎಂ ನಾಡಗೌಡ ಎಂದರು.

ಮನಸ್ಸಿನಲ್ಲಿ ಯಾವ್ಯಾವುದೋ ಚಿತ್ರಗಳನ್ನು ಮೂಡಿಸಿಕೊಳ್ಳುತ್ತಾ ನಾನು ಮತ್ತೆ ಕೇಳಿದೆ. ಸಾರ್, ನಮ್ಮ ಜನತಾ ಪರಿವಾರದ ನಾಯಕ ಎಂ ಪಿ ನಾಡಗೌಡರಿದ್ದಾರಲ್ಲ? ಅವರ ತಂದೆಯಲ್ಲವಾ ಸಾರ್?

ಯೆಸ್, ಎಂ ಪಿ ನಾಡಗೌಡರ ತಂದೆಯೇ ಪಿ ಎಂ ನಾಡಗೌಡರು. ಅವರೇ ನಿಜಲಿಂಗಪ್ಪ ಅವರ ಪಾಲಿನ ಆಂಜನೇಯ ಎಂದರು ರಾಜಶೇಖರ ಮೂರ್ತಿ. ಸಾರ್, ನಿಜಲಿಂಗಪ್ಪ ಅವರ ಪಾಲಿಗೆ ಪಿ ಎಂ ನಾಡಗೌಡರು ಯಾಕೆ ಆಂಜನೇಯ ಇದ್ದಂತೆ, ಸ್ವಲ್ಪ ವಿವರಿಸಿ ಹೇಳುತ್ತೀರಾ? ಎಂದೆ. ಅವರು ನಿರುಮ್ಮಳವಾಗಿ ಹೇಳುತ್ತಾ ಹೋದರು.

ವಿಠ್ಠಲಮೂರ್ತಿ, ಪಿ ಎಂ ನಾಡಗೌಡರು ಬಿಜಾಪುರ ಜಿಲ್ಲೆಯವರು, ಅವರಿಗೆ ನಿಜಲಿಂಗಪ್ಪ ಅವರೆಂದರೆ ಪ್ರಾಣ. ನಿಜಲಿಂಗಪ್ಪನವರಿಗೂ ಅಷ್ಟೇ. ತಮ್ಮ ಮನದಿಂಗಿತವನ್ನು ಅರಿತು ತಕ್ಷಣವೇ ಕಾರ್ಯಪ್ರವೃತ್ತರಾಗುತ್ತಿದ್ದ ಪಿ ಎಂ ನಾಡಗೌಡರ ಬಗ್ಗೆ ಅಪಾರ ಪ್ರೀತಿ.

ಹೀಗಾಗಿ ಕೆಲ ದಿನ ಕಾಣದೆ ಹೋದರೂ, ಅಣ್ಣಪ್ಪ ಎಲ್ಲಿ? ನೋಡಬೇಕಲ್ಲ? ಎಂದು ಬಯಸುತ್ತಿದ್ದರು. ನಿಮಗೆ ಒಂದು ವಿಷಯ ಗೊತ್ತಿರಲಿ. ೧೯೬೨ರ ವಿಧಾನಸಭಾ ಚುನಾವಣೆ ನಡೆಯಿತಲ್ಲ? ಅವತ್ತು ಮುಖ್ಯಮಂತ್ರಿ ಹುದ್ದೆಯಲ್ಲಿ ಬಿ ಡಿ ಜತ್ತಿ ಕುಂತಿದ್ದರಾದರೂ, ಚುನಾವಣೆಯ ನಂತರ ನಿಜಲಿಂಗಪ್ಪ ಅವರು ಸಿಎಂ ಆಗುವುದು ನಿಕ್ಕಿಯಾಗಿತ್ತು. ಆದರೆ ಸಿಎಂ ಹುದ್ದೆಯ ರೇಸಿನಲ್ಲಿದ್ದ ನಿಜಲಿಂಗಪ್ಪ ಅವರು ಹೊಸದುರ್ಗ ಕ್ಷೇತ್ರದ ಚುನಾವಣೆಯಲ್ಲಿ ಸೋತು ಹೋದರು.

ಅವರ ಸೋಲಿನ ಬಗ್ಗೆ ಹೇಳಿದರೆ ಅದೊಂದು ದೊಡ್ಡ ಕತೆ. ಆ ವೇಳೆಗಾಗಲೇ ರಾಜ್ಯ ಕಾಂಗ್ರೆಸ್ ನಲ್ಲಿ ಎರಡು ಬಣಗಳಿದ್ದವು. ಒಂದು, ಪ್ರಧಾನಿ ಜವಾಹರಲಾಲ್ ನೆಹರೂ ಅವರ ಬಣ. ಮತ್ತೊಂದು ಮೊರಾರ್ಜಿ ದೇಸಾಯಿ ಅವರ ಬಣ.

ನಿಜಲಿಂಗಪ್ಪ ಅವರು ಪ್ರಧಾನಿ ನೆಹರೂ ಅವರ ಬಣದಲ್ಲಿ ಗುರುತಿಸಿಕೊಂಡಿದ್ದರೆ, ಬಿ ಡಿ ಜತ್ತಿ ಅವರಂತಹ ನಾಯಕರು ಮೊರಾರ್ಜಿ ದೇಸಾಯಿ ಅವರ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು.

ಹೀಗಾಗಿ ಭವಿಷ್ಯದ ನಾಯಕತ್ವಕ್ಕಾಗಿ ನಡೆದ ಪೈಪೋಟಿಯ ನಡುವೆ ಹೊಸದುರ್ಗ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ನಿಜಲಿಂಗಪ್ಪ ಅವರನ್ನು ಸೋಲಿಸಲು ಮೊರಾರ್ಜಿ ಬಣ ಖೆಡ್ಡಾ ರೂಪಿಸಿತು. ಅಷ್ಟೇ ಅಲ್ಲ, ಲೋಕಲ್ ಭಿನ್ನಾಭಿಪ್ರಾಯಗಳನ್ನು ಬಳಸಿಕೊಂಡು ಅವರು ಸೋಲುವಂತೆ ಮಾಡಿತು.

ವಸ್ತುಸ್ಥಿತಿ ಎಂದರೆ ಹೀಗೆ ಸೋತರೂ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ಮುಖ್ಯಮಂತ್ರಿಯಾಗುವುದು ನಿಜಲಿಂಗಪ್ಪ ಅವರಿಗೆ ಸಾಧ್ಯವಿತ್ತು. ನೆಹರೂ ಕೂಡಾ ಅವರಿಗೆ ಆತ್ಮೀಯರಾಗಿದ್ದರು. ಆದರೆ ಇದಕ್ಕೆ ನಿಜಲಿಂಗಪ್ಪ ಅವರು ಬಿಲ್ಕುಲ್ ಒಪ್ಪಲಿಲ್ಲ.

ಜನರಿಂದ ತಿರಸ್ಕೃತನಾದವನು ಹಿಂಬಾಗಿಲಿನಿಂದ ರಾಜಕಾರಣ ಮಾಡುವುದೇ? ಮುಖ್ಯಮಂತ್ರಿ ಆಗಬೇಕು ಎಂಬ ಕಾರಣಕ್ಕೆ ಆ ಮಟ್ಟಕ್ಕಿಳಿಯುವುದೇ? ನನಗೆ ಅಂತಹ ಮುಖ್ಯಮಂತ್ರಿಗಿರಿಯೇ ಬೇಡ ಎಂದು ಬಿಟ್ಟರು.

ಅಲ್ಲಿಗೆ ಮೊರಾರ್ಜಿ ಗ್ಯಾಂಗಿನ ರೊಟ್ಟಿ ಜಾರಿ ತುಪ್ಪಕ್ಕೆ ಬೀಳುವ ಪರಿಸ್ಥಿತಿ ಸೃಷ್ಟಿಯಾಯಿತು. ಆದರೆ ಅದೇ ಕಾಲಕ್ಕೆ ನಿಜಲಿಂಗಪ್ಪ ಅವರನ್ನು ನೆಚ್ಚಿಕೊಂಡು ರಾಜಕಾರಣ ಮಾಡುತ್ತಿದ್ದವರು ಕಂಗಾಲಾದರು. ನಿಜಲಿಂಗಪ್ಪ ನೋಡಿದರೆ ಶಸ್ತ್ರ ಕೆಳಗಿಡುವ ಮಾತನಾಡುತ್ತಿದ್ದಾರೆ. ಆ ಕಡೆ ನೋಡಿದರೆ ಅವರ ವಿರೋಧಿ ಬಳಗ ದೊಡ್ಡ ಮಟ್ಟದಲ್ಲಿ ಮೇಲೆದ್ದು ನಿಂತು ರಾಜ್ಯ ಕಾಂಗ್ರೆಸ್ ಅನ್ನು ವಶಪಡಿಸಿಕೊಳ್ಳಲು ತಯಾರಿ ನಡೆಸಿದೆ. ಹೀಗಾದರೆ ನಮ್ಮ ಮುಂದಿನ ದಾರಿ ಏನು?

ಹಾಗಂತಲೇ ಹಲವರು ನಿಜಲಿಂಗಪ್ಪ ಅವರ ಮನವೊಲಿಸುವ ಯತ್ನ ಆರಂಭಿಸಿದರು. ಎಲ್ಲರ ಪ್ರಯತ್ನವೂ ಗಣನೀಯವೇ ಆಗಿತ್ತು. ಆದರೆ ಇಂತಹ ಟೈಮಿನಲ್ಲಿ ನಿಜಲಿಂಗಪ್ಪ ಅವರ ಮನಸ್ಸು ಒಲಿಸಿದವರಲ್ಲಿ ಮುಖ್ಯರಾದವರು ಈ ಆಂಜನೇಯ. ಅರ್ಥಾತ್ ಪಿ ಎಂ ನಾಡಗೌಡ ಅಲಿಯಾಸ್ ಅಣ್ಣಪ್ಪ.

ಸಾರ್, ನೀವು ವಿಧಾನ ಪರಿಷತ್ ಪ್ರವೇಶಿಸುವುದಿಲ್ಲ ಎನ್ನುತ್ತಿದ್ದೀರಿ. ನೀವು ರಾಜಕಾರಣದಿಂದ ದೂರವಿದ್ದರೂ ನಡೆಯುತ್ತದೇನೋ? ಆದರೆ ನಿಮ್ಮ ಹಿಂದೆ ನಿಂತು ರಾಜಕಾರಣ ಮಾಡಿದವರ ಗತಿ ಏನು? ಅಂತ ಪ್ರಶ್ನಿಸತೊಡಗಿದರು.

ಅಷ್ಟೇ ಅಲ್ಲ, ನಿಜಲಿಂಗಪ್ಪ ಅವರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಕೂಲವಾಗಲಿ ಅಂತ. ಅವತ್ತು ಬಾಗಲಕೋಟೆಯ ಶಾಸಕರಾಗಿದ್ದವರ ಕೈಲಿ ರಾಜೀನಾಮೆ ಕೊಡಿಸಿದರು. ಅವರ ಹೆಸರು ಮುರನಾಳ್ ಅಂತ ನೆನಪು.

ಸರಿ, ಉಪ ಚುನಾವಣೆಯ ಘಳಿಗೆ ಹತ್ತಿರವಾಯಿತು. ಆದರೆ ನಿಜಲಿಂಗಪ್ಪನವರು ಮಾತ್ರ ಒಪ್ಪುತ್ತಿಲ್ಲ. ಆದರೆ ನಾಮಪತ್ರ ಸಲ್ಲಿಸುವ ಕಾಲ ಹತ್ತಿರ ಬಂದ ಕೂಡಲೇ ಇದೇ ಪಿ ಎಂ ನಾಡಗೌಡರು ಇನ್ನಿತರ ನಾಯಕರ ಜತೆಗೂಡಿ ನಿಜಲಿಂಗಪ್ಪ ಅವರನ್ನು ನೋಡಲು ಚಿತ್ರದುರ್ಗಕ್ಕೆ ಹೋದರು.

ಆದರೆ ನಿಜಲಿಂಗಪ್ಪ ಅವರೆಲ್ಲಿ? ಅವತ್ತು ಅವರು ಪತ್ನಿಯ ಜತೆಗೂಡಿ ಟಾಕೀಸಿಗೆ ಹೋಗಿ ನಿರುಮ್ಮಳವಾಗಿ ಪಿಕ್ಚರ್ ನೋಡುತ್ತಿದ್ದಾರೆ. ಸರಿ, ಹೇಗೋ ಅವರನ್ನು ಹಿಡಿದು ನಾಮಪತ್ರಕ್ಕೆ ಸಹಿ ಹಾಕಿಸಿಕೊಂಡ ಈ ಟೀಮು ಮುಂದಿನ ಕಾರ್ಯತಂತ್ರಕ್ಕೆ ಅಣಿಯಾಯಿತು.

ಹೀಗೆ ನಿಜಲಿಂಗಪ್ಪ ಅವರು ಬೈ ಎಲೆಕ್ಷನ್ ನಲ್ಲಿ ಸ್ಪರ್ಧಿಸಲು ಮೇಲೆದ್ದು ನಿಂತರೇನೋ ಸರಿ. ಆದರೆ ಬಾಗಲಕೋಟೆಯಿಂದ ಅವರು ಸ್ಪರ್ಧಿಸುವುದು ಖಚಿತವಾಗುತ್ತಿದ್ದಂತೆಯೇ ಮೊರಾರ್ಜಿ ಗ್ಯಾಂಗಿನ ಬಿ ಡಿ ಜತ್ತಿ ಮತ್ತಿತರರು ನಿಜಲಿಂಗಪ್ಪ ಅವರನ್ನು ಸೋಲಿಸಲು ಮರಳಿ ಖೆಡ್ಡಾ ರೂಪಿಸತೊಡಗಿದರು.

ಯಾವಾಗ ಇದು ಅರಿವಾಯಿತೋ? ಆಗ ನಿಜಲಿಂಗಪ್ಪ ಅವರ ಬಣದ ಬಹುತೇಕ ನಾಯಕರಿಗೆ ತಲೆಬಿಸಿ ಶುರುವಾಯಿತು. ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಾದಂತೆ ಇಲ್ಲೂ ನಿಜಲಿಂಗಪ್ಪ ಸೋತರೇ? ಎಂಬ ಪ್ರಶ್ನೆ ಕಾಡತೊಡಗಿತು.

ಈ ಸಂದರ್ಭದಲ್ಲಿ ನಿಜಲಿಂಗಪ್ಪ ಅವರನ್ನು ಗೆಲ್ಲಿಸಲೇಬೇಕು ಎಂಬ ಪಣ ತೊಟ್ಟು ರಂಗಕ್ಕಿಳಿದವರು ಇದೇ ಪಿ ಎಂ ನಾಡಗೌಡರು. ಚುನಾವಣೆಯಲ್ಲಿ ಊರೂರು, ಬೀದಿ, ಬೀದಿ ತಿರುಗಿ ಮತ ಗಳಿಸುವುದು ಬೇರೆ. ಆದರೆ ಅದೇ ಕೆಲಸವನ್ನು ಎದುರಾಳಿ ಗ್ಯಾಂಗೂ ಮಾಡುತ್ತದಲ್ಲ? ಹಾಗಂತಲೇ ಪಿ ಎಂ ನಾಡಗೌಡರು ಒಂದು ಉಪಾಯ ಮಾಡಿದರು.

ಅವತ್ತು ಉಪಚುನಾವಣೆಯ ಕಣದಲ್ಲಿದ್ದ ಏಳೋ, ಎಂಟು ಮಂದಿ ನಾಮಪತ್ರವನ್ನೇ ಹಿಂಪಡೆಯುವಂತೆ ನೋಡಿಕೊಂಡರು. ಶುರು ಶುರುವಿನಲ್ಲಿ ಎಲ್ಲವೂ ಸುಗಮವಾಗಿಯೇ ಇತ್ತು. ಆದರೆ ಗಚ್ಚಿಮಠಸ್ವಾಮಿ ಎಂಬ ಕ್ಯಾಂಡಿಡೇಟು ಮಾತ್ರ ನಾಮಪತ್ರ ಪಡೆಯಲು ಒಪ್ಪಲಿಲ್ಲ.

ಮೊದಲೇ ಟಫ್ ಮನುಷ್ಯ ಬೇರೆ. ಯಾರ ಕಡೆಯಿಂದ ಹೇಳಿಸಿದರೂ ಪ್ರಯೋಜನವಾಗಲಿಲ್ಲ. ಅಲ್ಲಿಗೆ ಉಪಚುನಾವಣೆ ನಡೆಯುವುದು ಬಹುತೇಕ ಗ್ಯಾರಂಟಿ ಎಂಬಂತಹ ಸ್ಥಿತಿ. ಇಂತಹ ಸಂದರ್ಭದಲ್ಲೇ ಒಂದು ದಿನ ಪಿ ಎಂ ನಾಡಗೌಡರು ಟಾಂಗಾ ಮಾಡಿಕೊಂಡು ಗಚ್ಚಿಮಠಸ್ವಾಮಿ ಅವರನ್ನು ನೋಡಲು ಹೋದರು.

ಇವರು ಮನೆಗೆ ಹೋಗುತ್ತಾರೆ. ಗಚ್ಚಿಮಠಸ್ವಾಮಿ ಮನೆಯ ಮಹಡಿಯ ಮೇಲಿದ್ದಾರೆ. ಪಿ ಎಂ ನಾಡಗೌಡರು ಬಂದಿದ್ದಾರೆ ಎಂಬ ಸುದ್ದಿ ತಿಳಿದಿದ್ದೇ ತಡ, ಅವರು ಹೊರ ಬಂದರು. ಬಂದವರೇ; ಯೇ, ಅಣ್ಣಪ್ಪ, ನಿಜಲಿಂಗಪ್ಪ ಅವರನ್ನು ಗೆಲ್ಲಿಸಲು ಹೊರಟಿದ್ದಿ. ಹೀಗಾಗಿ ನಾಮಪತ್ರ ವಾಪಸ್ ಪಡೆಯುವಂತೆ ನನಗೆ ಹೇಳಲು ಇಲ್ಲಿಗೆ ಬಂದೇ ಬರುತ್ತೀ ಅಂತ ನನಗೆ ಗೊತ್ತಿತ್ತು. ಹೀಗಾಗಿ ನಾನು ನಾಮಪತ್ರ ಹಿಂಪಡೆಯುವ ಕಾಗದಕ್ಕೆ ಸಹಿ ಹಾಕಿ ಕೆಳಗಿಟ್ಟಿದ್ದೇನೆ. ಒಂದು ಸಲ ನೀನು ನಮ್ಮ ಮನೆ ತನಕ ಬರಬೇಕು ಅಂತ ಕಾಯುತ್ತಿದ್ದೆ. ನೀನು ಬಂದೂ ಬಿಟ್ಟೆ. ಆಗಲಿ, ನಿನ್ನ ಬಯಕೆಯಂತೆಯೇ ಆಗಲಿ ಅಂತ ಹೇಳಿ ಬಿಟ್ಟರು.

ಹೀಗೆ ನಿಜಲಿಂಗಪ್ಪ ನಿರಾಯಾಸವಾಗಿ ವಿಧಾನಸಭೆ ಪ್ರವೇಶಿಸಿದರು. ಹೇಗಾದರೂ ಮಾಡಿ ನಿಜಲಿಂಗಪ್ಪ ಅವರನ್ನು ಸೋಲಿಸಬೇಕು ಎಂಬ ಎದುರಾಳಿಗಳಿಗಳ ಪ್ಲ್ಯಾನಿಗೆ ವೇದಿಕೆಯೇ ಸಿಗಲಿಲ್ಲ. ಹೀಗೆ ತಮ್ಮ ಗೆಲುವಿಗೆ ಕಾರಣರಾದ ಪಿ ಎಂ ನಾಡಗೌಡರ ಬಗ್ಗೆ ಸಹಜವಾಗಿಯೇ ನಿಜಲಿಂಗಪ್ಪ ಅವರಿಗೆ ಅತಿ ಪ್ರೀತಿ ಬೆಳೆಯಿತು.

ಇದಾದ ನಂತರದ ದಿನಗಳಲ್ಲಿ ನಿಜಲಿಂಗಪ್ಪ ಅವರಿಗೆ ಪಿ ಎಂ ನಾಡಗೌಡರು ಹತ್ತಿರವಾಗುತ್ತಲೇ ಹೋದರು. ಮುಂದೆ ನಿಜಲಿಂಗಪ್ಪ ಅವರು ಮುಖ್ಯಮಂತ್ರಿ ಹುದ್ದೆಯ ಮೇಲೆ ಕುಳಿತ ನಂತರ ಒಂದು ಘಟನೆ ನಡೆಯಿತು. ಆ ಟೈಮಿನಲ್ಲಿ ಭಾರತ-ಚೀನಾ ಮಧ್ಯೆ ಯುದ್ದ ನಡೆಯುತ್ತಿತ್ತಲ್ಲ?

ಆಗ ಶತ್ರು ರಾಷ್ಟ್ರದ ವಿರುದ್ದ ಹೋರಾಡಲು ಭಾರತಕ್ಕೆ ಮದ್ದು, ಗುಂಡುಗಳು ಬೇಕಾಗಿದ್ದವು. ಆದರೆ ವಿದೇಶಗಳಿಂದ ದೊಡ್ಡ ಪ್ರಮಾಣದಲ್ಲಿ ಮದ್ದು, ಗುಂಡು ತರಿಸಲು ಬಹಳ ಹಣ ಬೇಕಾಗಿತ್ತು. ಹೀಗಾಗಿ ದೇಶದೆಲ್ಲೆಡೆಯಿಂದ ಹಣ ಸಂಗ್ರಹಿಸುವುದು ಅನಿವಾರ್ಯವೂ ಆಗಿತ್ತು.

ಅವತ್ತು ಕೇಂದ್ರ ಸರ್ಕಾರ ಕೂಡಾ ಎಲ್ಲ ರಾಜ್ಯಗಳಿಗೆ ಸಿಗ್ನಲ್ ನೀಡಿ, ಸಾಧ್ಯವಿರುವಷ್ಟು ಹಣ ಸಂಗ್ರಹಿಸಿ ಕೊಡಲು ಹೇಳಿದ ಮೇಲೆ ಕರ್ನಾಟಕ ಕೂಡಾ ಅದಕ್ಕೆ ಸಜ್ಜಾಯಿತು. ಮುಖ್ಯಮಂತ್ರಿ ನಿಜಲಿಂಗಪ್ಪನವರು ಆ ಸಂದರ್ಭದಲ್ಲಿ ಸರಣಿ ಸಭೆಗಳನ್ನು ಮಾಡಿದರು.

ಅಖಂಡ ಬಿಜಾಪುರ ಜಿಲ್ಲೆಯ ವಿಷಯ ಬಂದಾಗ ಸಭೆಯಲ್ಲಿದ್ದ ಎಸ್ ಆರ್ ಕಂಠಿಯವರ ಬಳಿ, ನಿಮ್ಮ ಜಿಲ್ಲೆಯಿಂದ ಎಷ್ಟು ಹಣ ಸಂಗ್ರಹಿಸಿ ಕೊಡುತ್ತೀರಿ? ಎಂದು ನಿಜಲಿಂಗಪ್ಪ ಪ್ರಶ್ನಿಸುತ್ತಾರೆ. ಆಗ ಕಂಠಿಯವರು ಈ ಬಗ್ಗೆ ನಮ್ಮ ಅಣ್ಣಪ್ಪ ಹೇಳುತ್ತಾರೆ ಎಂದರು. ಆಗ ಅಣ್ಣಪ್ಪ ಅಲಿಯಾಸ್ ಪಿ ಎಂ ನಾಡಗೌಡರು; ಸಾರ್, ನಿಮ್ಮ ತೂಕದ ಬಂಗಾರ ಸಂಗ್ರಹಿಸಿ ಕೊಡುತ್ತೇವೆ ಎಂದರು.

ಅವರ ಮಾತು ಕೇಳಿದ ನಿಜಲಿಂಗಪ್ಪನವರು: ಅದೇನು ಹೇಳುತ್ತಿದ್ದೀರಿ ಅಣ್ಣಪ್ಪ? ಮೊದಲೇ ಬಾಗಲಕೋಟೆಯನ್ನು ಒಳಗೊಂಡ ನಿಮ್ಮ ಜಿಲ್ಲೆಯ ಬಹುಭಾಗ ಬರಗಾಲದಿಂದ ತತ್ತರಿಸುತ್ತಿದೆ. ಹೀಗಿರುವಾಗ ಎಷ್ಟು ಅಂತ ಬಂಗಾರ ಸಂಗ್ರಹಿಸುತ್ತೀರಿ? ಯಾರು ಅಷ್ಟು ಬಂಗಾರ ನಿಮಗೆ ಕೊಡುತ್ತಾರೆ? ಅಂತ ಕೇಳುತ್ತಾರೆ. ಆಗ ಕಂಠಿಯವರು: ಸಾರ್, ನಮ್ಮ ಅಣ್ಣಪ್ಪ ಅಂದರೆ ಸಾಮಾನ್ಯರಲ್ಲ ಎಂದಾಗ ನಿಜಲಿಂಗಪ್ಪನವರು, ಎಷ್ಟು ಬಂಗಾರ ಕೊಡುತ್ತೀರಿ ಅಣ್ಣಪ್ಪ? ಅಂತ ಕೇಳುತ್ತಾರೆ.

ಅವರ ಮಾತಿಗೆ ಪ್ರತಿಯಾಗಿ ಪಿ ಎಂ ನಾಡಗೌಡರು: ನಿಮ್ಮ ತೂಕದಷ್ಟು ಬಂಗಾರ ಕೊಡುತ್ತೇವೆ ಎನ್ನುತ್ತಾರೆ. ಅವರ ಮಾತು ಕೇಳಿ ವಿಸ್ಮಿತರಾದ ನಿಜಲಿಂಗಪ್ಪ, ಬೇಡ ಅಣ್ಣಪ್ಪ, ನಾನು ಬಹಳ ವಜ್ಜೆ (ಭಾರ)ಇದ್ದೀನಿ. ಹೀಗಾಗಿ ನಮ್ಮ ಪ್ರಧಾನ ಮಂತ್ರಿಗಳಾದ ನೆಹರೂ ಅವರ ಪುತ್ರಿ ಇಂದಿರಾ ಇದ್ದಾರಲ್ಲ? ಅವರ ತೂಕದ ಬಂಗಾರ ಕೊಡಿಸಿ ಕೊಡಿ ಎಂದರು.

ತಾವಾದರೆ ಹತ್ತತ್ತಿರ ತೊಂಭತ್ತು ಕೆ ಜಿ ಆದರೆ ಇಂದಿರಾ ಅವರ ತೂಕ ಐವತ್ತರ ಆಸು ಪಾಸು. ಹೀಗಾಗಿ ಅಷ್ಟು ಬಂಗಾರ ಕೊಡಿಸಿದರೆ ಸಾಕು ಎಂಬುದು ನಿಜಲಿಂಗಪ್ಪ ಅವರ ಅಭಿಪ್ರಾಯವಾಗಿತ್ತು. ಆದರೆ ಪಿ ಎಂ ನಾಡಗೌಡರು ಎತ್ತಿದ ಮಾತಿಗೆ: ಅದೂ ಆಗಲಿ ಬಿಡ್ರೀ ಸಾರ್, ನಿಮ್ಮ ಮತ್ತು ಇಂದಿರಾ ಮೇಡಂ ಅವರಿಬ್ಬರ ತೂಕದಷ್ಟು ಬಂಗಾರ ಕೊಡಿಸುತ್ತೇವೆ ಎಂದು ಬಿಟ್ಟರು.

ಮುಂದೆ ತುಲಾಭಾರದ ಹೆಸರಿನಲ್ಲಿ ಜಿಲ್ಲೆಯಿಂದ ಸಂಗ್ರಹಿಸಿ ಕೊಟ್ಟ ಚಿನ್ನದ ಪ್ರಮಾಣ ಎಷ್ಟು ಗೊತ್ತಾ? ಒಂದು ಲಕ್ಷದ ಮೂವತ್ತೇಳು ಸಾವಿರ ಗ್ರಾಂ ಅಂದರೆ ನೂರಾ ಮೂವತ್ತೇಳು ಕೆಜಿ ಚಿನ್ನವನ್ನು ಸಂಗ್ರಹಿಸಿ ಕೊಡಲಾಗಿತ್ತು. ಇದು ಕೂಡಾ ಪಿ ಎಂ ನಾಡಗೌಡರು ನಿಜಲಿಂಗಪ್ಪ ಅವರ ಪಾಲಿನ ನೆಚ್ಚಿನ ಜೀವ ಎನಿಸಿಕೊಳ್ಳಲು ನೆರವಾಯಿತು.

ಹೀಗೆ ಹೇಳುತ್ತಾ ಹೋದರೆ ಬಹಳ ಹೇಳಬಹುದು. ಆದರೆ ಇನ್ನೊಂದು ಘಟನೆಯನ್ನು ಮಾತ್ರ ಹೇಳಿ ಮುಗಿಸುತ್ತೇನೆ. ಮುಂದೆ ಅರವತ್ತೇಳರ ಚುನಾವಣೆಯ ನಂತರ ನಿಜಲಿಂಗಪ್ಪ ಮತ್ತೆ ಅಧಿಕಾರ ಹಿಡಿದರು. ಪಿ ಎಂ ನಾಡಗೌಡರನ್ನು ಸಹಕಾರ ಮಂತ್ರಿಯನ್ನಾಗಿ ಮಾಡಿದರು.

ಇದಾದ ಕೆಲವೇ ಕಾಲದಲ್ಲಿ ರಾಷ್ಟ್ರ ರಾಜಕಾರಣದ ಅಂಗಳಕ್ಕೆ ನಿಜಲಿಂಗಪ್ಪ ಅವರು ನಡೆದುಕೊಂಡು ಹೋಗುವ ಸನ್ನಿವೇಶ ಉದ್ಭವವಾಯಿತು. ಇನ್ನೇನು ಅವರು ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಘಳಿಗೆ ಹತ್ತಿರವಾಯಿತು. ಆ ಸಂದರ್ಭದಲ್ಲಿ ಅವರು ತಮ್ಮ ನೆಚ್ಚಿನ ಬಂಟ ಪಿ ಎಂ ನಾಡಗೌಡರನ್ನು ಮನೆಗೆ ಕರೆಸಿಕೊಂಡರು.

ಅಣ್ಣಪ್ಪ, ನಾನು ರಾಷ್ಟ್ರ ರಾಜಕಾರಣಕ್ಕೆ ಹೊರಡುವ ಕಾಲ ಹತ್ತಿರವಾಯಿತು. ಇನ್ನೇನು ಮುಂದಿನ ಮುಖ್ಯಮಂತ್ರಿ ಹುದ್ದೆಗೆ ಯಾರು ಬರಬೇಕು? ಅನ್ನುವುದನ್ನು ನಿರ್ಧರಿಸಲು ಹೈಕಮಾಂಡ್ ನಾಯಕರು ಬರುತ್ತಾರೆ. ಸಹಜವಾಗಿ ಬಿ ಡಿ ಜತ್ತಿ ಹಾಗೂ ವೀರೇಂದ್ರ ಪಾಟೀಲ್ ರ ನಡುವೆ ಜಟಾಪಟಿ ಶುರುವಾಗುತ್ತದೆ ಎಂದು ಹೇಳಿದರು.

ಹೌದು ಸಾರ್, ನಾವು ವೀರೇಂದ್ರ ಪಾಟೀಲ್ ರ ಜತೆ ನಿಲ್ಲಬೇಕಲ್ಲವಾ? ಎಂದು ಪಿ ಎಂ ನಾಡಗೌಡರು ಸಹಜವಾಗಿ ಕೇಳಿದ್ದಾರೆ. ಅಷ್ಟರಲ್ಲಿ ನಿಜಲಿಂಗಪ್ಪನವರು: ಇಲ್ಲ ಅಣ್ಣಪ್ಪ, ಅವರಿಬ್ಬರ ನಡುವೆ ಜಟಾಪಟಿ ಜೋರಾದಾಗ ಇಬ್ಬರೂ ಮುಖ್ಯಮಂತ್ರಿ ಆಗುವುದು ಬೇಡ. ಮೂರನೆಯವರೊಬ್ಬರು ಮುಖ್ಯಮಂತ್ರಿಯಾಗಲಿ ಎಂಬ ಮಾತು ಬರುತ್ತದೆ. ಹಾಗಾದಾಗ ನಾನು ನಿನ್ನನ್ನು ಸಿಎಂ ಹುದ್ದೆಯಲ್ಲಿ ಕೂರಿಸುತ್ತೇನೆ ಎಂದು ಬಿಟ್ಟರು.

ಪಿ ಎಂ ನಾಡಗೌಡರಿಗೆ ಶಾಕ್. ನಾನು ಮುಖ್ಯಮಂತ್ರಿಯಾಗುವುದೇ? ಅಂತ. ಇದು ಗುಟ್ಟಾಗಿದ್ದಿದ್ದರೆ ಏನಾಗುತ್ತಿತ್ತೋ? ಆದರೆ ಅದ್ಹೇಗೋ ವಿಷಯ ವೀರೇಂದ್ರ ಪಾಟೀಲ್ ರಿಗೆ ಗೊತ್ತಾಗಿ ಹೋಯಿತು. ಹೀಗಾಗಿ ಅವರು ವಿಷಯವನ್ನು ರಾಮಕೃಷ್ಣ ಹೆಗಡೆ ಅವರಿಗೆ ಮುಟ್ಟಿಸಿದ್ದಾರೆ.

ಹೆಗಡೆ ತುಂಬ ಚತುರ ರಾಜಕಾರಣಿ. ಅವರು ತಕ್ಷಣವೇ ವೀರೇಂದ್ರ ಪಾಟೀಲ್ ರನ್ನು ಕರೆದುಕೊಂಡು ನಾಡಗೌಡರ ಸರ್ಕಾರಿ ಮನೆಗೆ ಬಂದಿದ್ದಾರೆ. ಇವತ್ತು ಬೆಂಗಳೂರಿನ ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್ ಇದೆಯಲ್ಲ? ಅದರ ಪಕ್ಕದ ಬಂಗಲೆಯಲ್ಲಿ ನಾಡಗೌಡರಿದ್ದರು.

ಹೀಗೆ ಮನೆಗೆ ಬಂದ ಹೆಗಡೆ ಹಾಗೂ ವೀರೇಂದ್ರ ಪಾಟೀಲ್ ರನ್ನು ನಾಡಗೌಡರು ಸ್ವಾಗತಿಸಿದ ಮೇಲೆ ಹೆಗಡೆ ಅವರೇ ಹೇಳಿದ್ದಾರೆ. ನಾಡಗೌಡರೇ ಇವತ್ತಿನ ಸ್ಥಿತಿ ನಿಮಗೆ ಗೊತ್ತು. ಮೊರಾರ್ಜಿ ದೇಸಾಯಿ ಅವರ ಬಣದ ವಿರುದ್ಧ ನಾವೆಲ್ಲ ಒಂದಾಗಿರಬೇಕಿದೆ. ಬಹುತೇಕರು ವೀರೇಂದ್ರ ಪಾಟೀಲ್ ರೇ ಸಿಎಂ ಆಗಲಿ ಅಂತಿದ್ದಾರೆ.

ಆದರೆ ನಿಜಲಿಂಗಪ್ಪ ಸಾಹೇಬರು ನಿಮ್ಮನ್ನು ಸಿಎಂ ಮಾಡಲು ಬಯಸಿದ್ದಾರಂತೆ. ಆದರೆ ನಿಮಗೆ ಮುಖ್ಯಮಂತ್ರಿಯಾಗಲು ಇನ್ನೂ ಅವಕಾಶಗಳಿವೆ. ಹಾಗೆಯೇ ನಮ್ಮ ಬಣ ಒಂದಾಗಿರುವ ದೃಷ್ಟಿಯಿಂದಲೂ ನಾವು ಪಾಟೀಲ್ ರನ್ನು ಸಿಎಂ ಮಾಡಬೇಕು. ಆದರೆ ಇದಕ್ಕೆ ನಿಮ್ಮ ಸಹಕಾರ ಬೇಕು. ನೀವೇ ಹೋಗಿ ಈ ವಿಷಯವನ್ನು ನಿಜಲಿಂಗಪ್ಪ ಸಾಹೇಬರಿಗೆ ಹೇಳಿ ಮನ ಒಲಿಸಬೇಕು ಎಂದರು.

ಯಾವಾಗ ಅವರು ಈ ಮಾತು ಹೇಳಿದರೋ? ಆಗ ನಾಡಗೌಡರು ನಡುರಾತ್ರಿ ಮೂರು ಗಂಟೆಗೆ ಹತ್ತಿರದಲ್ಲೇ ಇದ್ದ ಮುಖ್ಯಮಂತ್ರಿಗಳ ನಿವಾಸಕ್ಕೆ ಹೋಗಿ ಮಾತುಕತೆ ನಡೆಸಿದರು. ಸಾರ್, ವೀರೇಂದ್ರ ಪಾಟೀಲ್ ರೇ ಸಿಎಂ ಆಗಲಿ, ನೀವು ಮನಸ್ಸು ಮಾಡಬೇಕು ಎಂದರು.

ನಾಡಗೌಡರ ಮಾತು ಕೇಳಿದ ನಿಜಲಿಂಗಪ್ಪ ಅವರು ಮರು ಮಾತನಾಡಲಿಲ್ಲ. ಮುಂದೆ ನಾಯಕತ್ವಕ್ಕಾಗಿ ಜತ್ತಿ ಹಾಗೂ ವೀರೇಂದ್ರ ಪಾಟೀಲ್ ರ ಮಧ್ಯೆ ಸ್ಪರ್ಧೆ ನಡೆಯಿತು. ಸಹಜವಾಗಿ ವೀರೇಂದ್ರ ಪಾಟೀಲ್ ಗೆದ್ದರು. ಸಿಎಂ ಹುದ್ದೆಗೇರಿದರು.

ಹೀಗೆ ಅವರು ಸಿಎಂ ಆಗಲು ನೆರವು ನೀಡಿದ ನಾಡಗೌಡರು ಕ್ರಮೇಣ ರಾಜಕಾರಣದ ಹಿನ್ನೆಲೆಗೆ ಸರಿದರು.

ಅಂದ ಹಾಗೆ ತಮ್ಮ ಮಾತಿಗೆ ಬೆಲೆ ನೀಡಿದ ನಾಡಗೌಡರ ಬಗ್ಗೆ ಹೆಗಡೆ ಹಾಗೂ ವೀರೇಂದ್ರ ಪಾಟೀಲ್ ರಿಗೆ ಅಪಾರ ಗೌರವ ಇತ್ತು. ಇದೇ ಕಾರಣಕ್ಕಾಗಿ ಮುಂದೆ ಅವರು ಪಿ ಎಂ ನಾಡಗೌಡರ ಮಗ ಎಂ ಪಿ ನಾಡಗೌಡರನ್ನು ಬಹು ಪ್ರೀತಿಯಿಂದ ನೋಡಿಕೊಂಡರು.

ಅಂದ ಹಾಗೆ ನಿಜಲಿಂಗಪ್ಪ ಅವರ ಪಾಲಿನ ಆಂಜನೇಯನಾಗಿದ್ದ ಪಿ ಎಂ ನಾಡಗೌಡರು ತಮ್ಮಿಚ್ಛೆಯ ರಾಜಕಾರಣ ಮಾಡಿದರೇ ಹೊರತು ಅಧಿಕಾರದ ಮೇಲಿನ ಇಚ್ಛೆಗಾಗಿ ರಾಜಕಾರಣ ಮಾಡಲಿಲ್ಲ.

ಇವತ್ತು ರಾಜಕಾರಣದಲ್ಲಿ ಅಂಜನೇಯನಂತಹ ಆಪ್ತರು ಯಾವುದೇ ನಾಯಕರಿಗೆ ದೊರಕುವುದು ಕಷ್ಟ. ಹಿಂದೆ ಇಂತವರಿದ್ದರು ಎಂದು ಹೇಳಿದರೆ ನಂಬುವುದು ಕಷ್ಟ. ಆದರೂ ಮುಂದಿನ ಪೀಳಿಗೆಗೆ ಇದು ಗೊತ್ತಾಗಲಿ ಎಂಬ ಕಾರಣಕ್ಕಾಗಿ ನಿಮ್ಮ ಬಳಿ ಇದನ್ನೆಲ್ಲ ಹೇಳಿದೆ. ಅಂದ ಹಾಗೆ ಇದು ನನ್ನ ಕಣ್ಣಿಗೆ, ಗ್ರಹಿಕೆಗೆ ದಕ್ಕಿದ್ದು. ಹೀಗಾಗಿ ಇಲ್ಲಿನ ಘಟನೆಗಳನ್ನು ಬೇರೆ ಕೋನಗಳಲ್ಲಿ ನೋಡುವವರೂ ಇರಬಹುದು.

ಹಾಗಂತ ಹೇಳಿದ ರಾಜಶೇಖರಮೂರ್ತಿ ಮೌನಿಯಾದರು. ನಾನು ಮನಸ್ಸಿನ ಕೋಶಗಳಿಗೆ ಆವರಿಸಿದ್ದ ವಿಸ್ಮಯದ ಪರದೆಯನ್ನು ಸರಿಸಲಾಗದೆ ಬಹು ಹೊತ್ತು ಹಾಗೆಯೇ ಕುಳಿತಿದ್ದೆ.

August 31, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರಜಾವಾಣಿಯಲ್ಲಿ ‘ಪ್ಲೇ ಬಾಯ್’

ಪ್ರಜಾವಾಣಿಯಲ್ಲಿ ‘ಪ್ಲೇ ಬಾಯ್’

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ...

ಬೆಚ್ಚಿ ಬಿದ್ರಾ…?

ಬೆಚ್ಚಿ ಬಿದ್ರಾ…?

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This