ಎ ಆರ್ ಮಣಿಕಾಂತ್ ಬರೆದಿದ್ದಾರೆ: ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ್ಲ

ಎ ಆರ್ ಮಣಿಕಾಂತ್
ನೀನೆಲ್ಲಿ ನಡೆವೆ ದೂರ…
ಚಿತ್ರ: ಒಂದೇ ಬಳ್ಳಿಯ ಹೂಗಳು. ಗೀತೆರಚನೆ: ಗೀತಪ್ರಿಯ
ಸಂಗೀತ: ಸತ್ಯಂ. ಗಾಯಕ: ಮಹಮ್ಮದ್ ರಫಿ.
ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲೂ ಲೋಕವೆ
ಈ ಲೋಕವೆಲ್ಲ ಘೋರ, ಎಲ್ಲೆಲ್ಲೂ ಶೋಕವೇ ||ಪ||
ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ್ಲ
ಮುಳ್ಳಲ್ಲಿ ನಿನ್ನ ನಡೆಸಿ ನಲಿವಾ ನಗುವೆ ವಿಕಾರ ||1||
ನೆರಳನ್ನು ನೀಡುವಂಥ ಮರವನ್ನೇ ಕಡಿವರಲ್ಲ
ನಿಸ್ವಾರ್ಥ ಜೀವಿಗಳಿಗೆ ಜಗದ ಕಹಿಯೆ ಅಪಾರ ||2||
ಅಪಕಾರವನ್ನೇ ಕಾಣುವೆ, ಉಪಕಾರವನ್ನು ಕಾಣೆ
ಅನುರಾಗವಿಲ್ಲಿ ಇಲ್ಲವೆ? ಮನದೆ ಇದುವೆ ವಿಚಾರ ||3||

ಈ ಲೋಕದ ವ್ಯವಹಾರವೇ ಹಾಗೆ, ಏನೆಂದರೆ -ನಾವು ಚನ್ನಾಗಿದ್ದಾಗ, ಸಂತೋಷದಿಂದ ಇದ್ದಾಗ, ನಮ್ಮ ಬಳಿ ಹಣವೋ, ಅಕಾರವೋ ಇದ್ದಾಗ ನಮ್ಮ ಸುತ್ತ ಮುತ್ತಲೂ ಜನ ಇರುತ್ತಾರೆ. ಪರಿಚಯವೇ ಇಲ್ಲದವರೂ ಗೌರವದಿಂದ ಮಾತನಾಡಿಸುತ್ತಾರೆ. ಆದರೆ, ನಾವು ಪಾಪರ್ ಆಗಿ ಹೋಗಿದ್ದೇವೆ, ಸಂಕಟದ ಸುಳಿಗೆ ಸಿಕ್ಕಿಬಿದ್ದಿದ್ದೇವೆ. ತಿರುಗಿ ಮಾತಾಡಲಾಗದ ಸ್ಥಿತಿ ತಲುಪಿಕೊಂಡಿದ್ದೇವೆ ಎಂದು ಅರ್ಥವಾಗಿಬಿಟ್ಟರೆ ಅದೇ ಜನ-ಗೇಲಿ ಮಾಡುತ್ತಾರೆ. ಬುದ್ಧಿ ಹೇಳುತ್ತಾರೆ. ಚುಚ್ಚಿ ಮಾತಾಡುತ್ತಾರೆ. ಆ ಮೂಲಕ ನೆಮ್ಮದಿಯನ್ನೇ ಹಾಳು ಮಾಡಿಬಿಡುತ್ತಾರೆ. ಇಂಥ ಸಂದರ್ಭದಲ್ಲಿ ನೋವು ತಿಂದ ಪ್ರತಿಯೊಬ್ಬರಿಗೂ ಈ ಹಾಡಿನ ಸಾಲು ನೆನಪಾಗಿಯೇ ಇರುತ್ತದೆ: `ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ್ಲ…’
ಮನುಕುಲದ ಸಮಸ್ತರಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಅನ್ವಯವಾಗುವಂಥ ಹಾಡು-`ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲೂ ಶೋಕವೇ..’ ಈ ಹಾಡಿನ ಮುಂದುವರಿಕೆಯಲ್ಲೇ- `ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ್ಲ’ ಎಂಬ ಸಾಲಿದೆ. ಏಕಕಾಲಕ್ಕೆ ಹಾಡೂ, ಬದುಕೂ, ಕಹಿಸತ್ಯವೂ ಆಗಿ ಕಾಣುವಂಥ ಈ ಹಾಡು ಬರೆದವರು ಗೀತಪ್ರಿಯ. ಸತತ ಸೋಲುಗಳಿಂದ ಕಂಗೆಟ್ಟು, ಬಂಧುಗಳು, ನೆರೆಹೊರೆಯವರ ಚುಚ್ಚುಮಾತುಗಳಿಂದ ಹತಾಶರಾಗಿದ್ದ ಸಂದರ್ಭದಲ್ಲಿಯೇ ಅವರು ಈ ಹಾಡು ಬರೆದದ್ದು ವಿಶೇಷ.
ಮಿಲಿಟರಿ ಪರಂಪರೆಯ ಕುಟುಂಬದಿಂದ ಬಂದವರು ಗೀತಪ್ರಿಯ. ಅವರ ತಂದೆ, ಮೊದಲ ಮಹಾಯುದ್ಧದಲ್ಲಿ ಪಾಲ್ಗೊಂಡಿದ್ದ ರ ಸೇನಾನಿ. ಅದಕ್ಕೂ ಹಿಂದೆ, ಗೀತಪ್ರಿಯ ಅವರ ತಾತ ಕೂಡ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಇಂಥ ಕೌಟುಂಬಿಕ ಹಿನ್ನೆಲೆಯಿಂದ ಬಂದ ಗೀತಪ್ರಿಯ, ಚಿತ್ರರಂಗದತ್ತ ವಾಲಿಕೊಂಡದ್ದು ಧರ್ಮ ಕರ್ಮ ಸಂಯೋಗ, ಅಷ್ಟೆ.
ಗೀತಪ್ರಿಯರಿಗೆ ಚಿತ್ರರಂಗದ ಗೀಳು ಅಂಟಿಕೊಂಡದ್ದಕ್ಕೂ ಒಂದು ಹಿನ್ನೆಲೆಯಿದೆ. ಅದು 1943ರ ಮಾತು. ಆಗಷ್ಟೇ `ಸತ್ಯಹರಿಶ್ಚಂದ್ರ’ ಸಿನಿಮಾ ಬಿಡುಗಡೆಯಾಗಿತ್ತು. ಆ ಸಿನಿಮಾ ನೋಡಿದ ಗೀತಪ್ರಿಯ, ಚಿತ್ರನಟನಾಗಲೇಬೇಕು ಎಂದು ಆ ಕ್ಷಣದಲ್ಲೇ ನಿರ್ಧರಿಸಿದರಂತೆ. ಅಷ್ಟೇ ಅಲ್ಲ, ನಟನಾಗುವ ಉದ್ದೇಶದಿಂದಲೇ ಮದ್ರಾಸ್ಗೆ ಹೋದರು. ಅಲ್ಲಿ ಕಥಕ್ ಡ್ಯಾನ್ಸ್ ಕಲಿತರು. ನಾಟಕ ಕಂಪನಿಗಳಲ್ಲಿ ಅಭಿನಯಿಸಿ `ಅನುಭವ’ ಪಡೆದುಕೊಂಡರು. ನಂತರ ಒಂದೆರಡು ತೆಲುಗು ಚಿತ್ರಗಳಲ್ಲಿ `ಡ್ಯಾನ್ಸರ್’ ಆಗಿಯೂ ಕಾಣಿಸಿಕೊಂಡದ್ದಾಯಿತು. ಹೀಗಿದ್ದಾಗಲೇ ಆರ್. ನಾಗೇಂದ್ರರಾವ್ ಅವರು ಒಂದು ಸಿನಿಮಾ ತಯಾರಿಸಲಿದ್ದಾರೆ ಎಂಬ ಸುದ್ದಿ ಕಿವಿಗೆ ಬಿತ್ತು. ತಕ್ಷಣವೇ ಅಲ್ಲಿಗೆ ಹೋದ ಗೀತಪ್ರಿಯ-`ಸಾರ್, ನನಗೆ ಒಂದು ಪಾತ್ರ ಕೊಡಿ’ ಅಂದರಂತೆ. ಅದಕ್ಕೆ ನಾಗೇಂದ್ರರಾಯರು- ಈಗಾಗಲೇ ಎಲ್ಲ ಪಾತ್ರಗಳ ಆಯ್ಕೆ ಮುಗಿದಿದೆಯಪ್ಪಾ. ಮುಂದೆ ನೋಡೋಣ. ಈಗ ನೀನು ಬೆಂಗಳೂರಿಗೆ ಹೋಗು’ ಎಂದರಂತೆ.
`ಪ್ರಥಮ ಚುಂಬನಂ ದಂತಭಗ್ನಂ’ ಎಂದುಕೊಂಡು ಬೇಸರದಿಂದಲೇ ಬೆಂಗಳೂರಿಗೆ ಹಿಂತಿರುಗಿದರು ಗೀತಪ್ರಿಯ. ಇದಾಗಿ ಕೆಲದಿನಗಳಲ್ಲೇ ಅನಾಹುತವೊಂದು ನಡೆದುಹೋಯಿತು. ಕುಟುಂಬದ ಆಧಾರಸ್ತಂಭದಂತಿದ್ದ ಗೀತಪ್ರಿಯರ ತಂದೆ ಅನಾರೋಗ್ಯದಿಂದ ತೀರಿಕೊಂಡರು. ಮುಂದೆ, ಅನುಕಂಪದ ಆಧಾರದ ಮೇಲೆ ತಂದೆಯವರು ನೌಕರಿ ಮಾಡುತ್ತಿದ್ದ ಮೈಸೂರು ಲ್ಯಾನ್ಸರ್ಸ್ ಕಂಪನಿಯಲ್ಲೇ ಕೆಲಸಕ್ಕೆ ಸೇರಿಕೊಂಡರು ಗೀತಪ್ರಿಯ. ಆದರೆ, ಕೆಲವೇ ದಿನಗಳಲ್ಲಿ ಆ ಕಂಪನಿ ಕೂಡ ಮುಚ್ಚಿಹೋಯಿತು.
ಈ ಸಂದರ್ಭದಲ್ಲಿ ತಾಯಿ, ಇಬ್ಬರು ತಂಗಿಯರು ಹಾಗೂ ಮೂವರು ಸೋದರರನ್ನು ಸಾಕುವ ಹೊಣೆ ಗೀತಪ್ರಿಯರ ಮೇಲಿತ್ತು. ಆದರೆ ನೌಕರಿಯೇ ಇರಲಿಲ್ಲ. ಬದುಕಬೇಕೆಂದರೆ ಸಿಕ್ಕಿದ ಕೆಲಸ ಮಾಡಬೇಕು ಎಂದುಕೊಂಡ ಗೀತಪ್ರಿಯ-ಕಬ್ಬನ್ಪಾಕರ್್ ಬಳಿ ಇದ್ದ ಬಾರ್ ಒಂದರಲ್ಲಿ ಬಿಲ್ರೈಟರ್ ಆಗಿ ಸೇರಿಕೊಂಡರು. ಬೆಳಗ್ಗೆ 8 ರಿಂದ ರಾತ್ರಿ 9ರವರೆಗೂ ಬಾರ್ನಲ್ಲಿ ಕೆಲಸ. ಈ ಕಡುಕಷ್ಟದ ಮಧ್ಯೆಯೂ ಸಿನಿಮಾ ಸೇರಬೇಕೆಂಬ ಗೀಳು ಇದ್ದೇ ಇತ್ತು. ಆ ಕಾರಣದಿಂದಲೇ ರಾತ್ರಿ ಬಂದು ಸಿನಿಮಾಕ್ಕೆ ಹಾಡು, ಚಿತ್ರಕತೆ ಬರೆಯುತ್ತಿದ್ದರು. ಮಗ ಇಷ್ಟೆಲ್ಲ ಕಷ್ಟಪಡುವುದನ್ನು ಕಂಡು ಗೀತಪ್ರಿಯರ ತಾಯಿ ಕಣ್ಣೀರು ಹಾಕುತ್ತಿದ್ದರಂತೆ. ಈ ಸಂದರ್ಭವನ್ನು ನೆನಪು ಮಾಡಿಕೊಂಡು ಗೀತಪ್ರಿಯ ಹೀಗೆನ್ನುತ್ತಾರೆ:
ಏನೇ ಕಷ್ಟ ಬಂದರೂ ಸರಿ, ಅಮ್ಮನನ್ನು ಚನ್ನಾಗಿ ನೋಡ್ಕೋಬೇಕು ಎಂದು ನಾನು ಆಸೆಪಟ್ಟಿದ್ದೆ. ಆ ಕಾರಣದಿಂದಲೇ ಸಿಕ್ಕಿದ ಕೆಲಸವನ್ನೆಲ್ಲ ಮಾಡಿದೆ. ನನ್ನ ಕಷ್ಟ ನೋಡಿ ಅಮ್ಮ ಬಿಕ್ಕಳಿಸಿ ಅಳ್ತಾಇದ್ಲು. ಅದನ್ನ ಕಂಡಾಗಲೆಲ್ಲ ಕರುಳು ಕಿವಿಚಿದ ಹಾಗಾಗ್ತಿತ್ತು. ಈ ಎಲ್ಲ ನೋವನ್ನೂ ಮರೆತುಬಿಡೋಣ ಅಂದುಕೊಂಡು ಹೊರಗೆ ಬಂದರೆ, ಸುತ್ತಮುತ್ತಲಿನ ಜನರ ಚುಚ್ಚುಮಾತು ಕೇಳಬೇಕಿತ್ತು. ನಾನು ಚಿತ್ರರಂಗಕ್ಕೆ ಹೋಗುವ ಪ್ರಯತ್ನ ಮುಂದುವರಿಸುತ್ತಿದ್ದೆನಲ್ಲ? ಅದು ಗೊತ್ತಿದ್ದವರೆಲ್ಲ- `ಚಿಕ್ಕ ವಯಸ್ಸಿಗೇ ಬಣ್ಣದ ಗೀಳು ಅಂಟಿಸಿಕೊಂಡಿದಾನೆ. ಇವನು ಖಂಡಿತ ಉದ್ಧಾರ ಆಗೋದಿಲ್ಲ. ಹಾಳಾಗಿ ಹೋಗ್ತಾನೆ. ಇವನ ಮನೆ ಮಂದಿಯೆಲ್ಲ ಬೀದಿಗೆ ಬೀಳ್ತಾರೆ’ ಎಂದು ಹಂಗಿಸುತ್ತಿದ್ದರು.
ಇಂಥ ನಿಂದನೆಯ ಮಾತು ಕೇಳಿದಾಗೆಲ್ಲ ಊರು ಬಿಟ್ಟು ಎಲ್ಲಿಗಾದ್ರೂ ಓಡಿಹೋಗೋಣ ಅನಿಸುತ್ತಿತ್ತು. ಆದರೆ ಹೋಗುವುದಾದರೂ ಎಲ್ಲಿಗೆ? ಅವತ್ತಿಗೆ, ಬೆಂಗಳೂರು ಬಿಟ್ಟರೆ ನನಗೆ ಗೊತ್ತಿದ್ದುದು ಮದ್ರಾಸ್, ಅಷ್ಟೆ. ಅಲ್ಲಿಗೆ ಹೋದರೂ ಕಷ್ಟವನ್ನೇ ಉಂಡುಟ್ಟು, ಬದುಕಬೇಕಿತ್ತು. ಹೀಗೆ, ನಮ್ಮ ಕುಟುಂಬ ಸಂಕಟದ ಚಕ್ರಸುಳಿಗೆ ಸಿಕ್ಕಿ ಬಿದ್ಧಿದ್ದಾಗಲೇ ಆ ವರ್ಷದ ಹೋಳಿ ಹಬ್ಬ ಬಂತು. ಅವತ್ತು ಎಲ್ಲ ಮನೆಗಳಲ್ಲೂ ಹೋಳಿಗೆ ಮಾಡಿ ತಿಂದರೆ, ನಾವು ರಾಗಿ ಗಂಜಿ ಕುಡಿದು ಸಮಾಧಾನ ಮಾಡಿಕೊಂಡೆವು. ಈ ಸಂಕಟದ ನಡುವೆಯೇ ಅವತ್ತು ಹಳೆಯ ಸಂಭ್ರಮವನ್ನೆಲ್ಲ ನೆನಪು ಮಾಡಿಕೊಂಡೆ. ನಮ್ಮ ತಂದೆ ಚನ್ನಾಗಿದ್ದಾಗ ಇಡೀ ಊರ ಜನರೆಲ್ಲ ನಮಗೆ ನೆಂಟರ ಹಾಗಿದ್ದರು. ಆದರೆ ತಂದೆ ತೀರಿಕೊಂಡ ನಂತರ ಕೇಳುವವರೇ ಇರಲಿಲ್ಲ. ಇದು ನೆನಪಾದ ತಕ್ಷಣ -`ನಗುವಾಗ ಎಲ್ಲಾ ನೆಂಟರು, ಅಳುವಾಗ ಯಾರೂ ಇಲ್ಲ’ ಎಂಬ ಸಾಲು ಆಕಸ್ಮಿಕವಾಗಿ ಹೊಳೆಯಿತು. ಅದನ್ನು ಬರೆದಿಟ್ಟುಕೊಂಡೆ. ಮರುಕ್ಷಣವೇ-`ಎಲ್ಲಿಗಾದ್ರೂ ದೂರಕ್ಕೆ ಓಡಿಹೋಗೋಣ ಅಂತ ದಿನವೂ ಮನಸಿಗೆ ಬರ್ತದೆ. ಆದ್ರೆ ಹೋಗೋದಾದ್ರೂ ಎಲ್ಲಿಗೆ? ಜಗತ್ತು ಬಹಳ ಕೆಟ್ಟದು. ಎಲ್ಲಿಗೆ ಹೋದ್ರೂ ಜನ ಹಂಗಿಸ್ತಾರೆ’ ಎಂದು ನನಗೆ ನಾನೇ ಹೇಳಿಕೊಂಡೆ. ಮರುಕ್ಷಣವೇ- `ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲು ಲೋಕವೆ/ ಈ ಲೋಕವೆಲ್ಲ ಘೋರ ಎಲ್ಲೆಲ್ಲೂ ಶೋಕವೇ?’ ಎಂಬ ಸಾಲು ಹೊಳೆಯಿತು. ಅದನ್ನೂ ಬರೆದಿಟ್ಟೆ.
ಮುಂದೆ, 1967ರಲ್ಲಿ ವನಮಾಲ ಎಂಬಾಕೆ ಅಶ್ವತ್ಥ್, ರಾಜಾಶಂಕರ್, ಪಂಡರಿಭಾಯಿ, ಜಯಂತಿ ತಾರಾಗಣದ ಒಂದು ಸಿನಿಮಾ ನಿಮರ್ಾಣಕ್ಕೆ ಮುಂದಾದರು. ಎಂ.ಎಸ್. ನಾಯಕ್ ಅವರಿಗೆ ನಿದರ್ೇಶನದ ಹೊಣೆ ಬಿತ್ತು. ಚಿತ್ರಕಥೆ -ಹಾಡು ಬರೆವ ಜವಾಬ್ಧಾರಿ ನನ್ನ ಹೆಗಲೇರಿತು. ಕಥೆಯ ಸಂದರ್ಭ ವಿವರಿಸಿದ ನಿದರ್ೇಶಕರು-` ಮನೆಯಲ್ಲಿ ಸೋದರರ ಮಧ್ಯೆ ಜಗಳವಾಗುತ್ತೆ. ಆಗ ಕುರುಡಿ ತಂಗಿಯನ್ನು ಕರೆದುಕೊಂಡು ಅಣ್ಣನ ಪಾತ್ರದಾರಿ ಅಶ್ವತ್ಥ್ ಮನೆಯಿಂದ ಹೊರಬರುತ್ತಾರೆ. ಈ ಸಂದರ್ಭಕ್ಕೆ ಸರಿಹೊಂದುವಂಥ ಬ್ಯಾಕ್ಗ್ರೌಂಡ್ ಸಾಂಗ್ ಬೇಕು’ ಎಂದರು. ತಕ್ಷಣವೇ ನನಗೆ ಹೋಳಿ ಹಬ್ಬದ ರಾತ್ರಿ ಬರೆದಿಟ್ಟಿದ್ದ ಹಾಡು ನೆನಪಾಯಿತು. ಅದನ್ನೇ ಬರೆದೆ, ಬೆಳೆಸಿದೆ. ನಂತರ ಅದನ್ನು ಸಂಗೀತ ನಿದರ್ೇಶಕ ಸತ್ಯಂ ಅವರಿಗೆ ಕೊಟ್ಟು-`ಸಾರ್, ಸಂತೋಷಕ್ಕಿಂತ ನೋವು ತುಂಬ ಬೇಗ ಮನುಷ್ಯನನ್ನು ತಟ್ಟುತ್ತೆ. ನಗುವಾಗ ಎಲ್ಲ ನೆಂಟರು. ಅಳುವಾಗ ಯಾರೂ ಇಲ್ಲ ಎಂಬುದಂತೂ ಒಂದಲ್ಲ ಒಂದು ಬಾರಿ ಎಲ್ಲರ ಅನುಭವಕ್ಕೆ ಬಂದಿರುತ್ತೆ. ಹಾಗಾಗಿ ಇದನ್ನೇ ಬಳಸೋಣ’ ಎಂದೆ.
ಈ ಮಾತಿಂದ ಸತ್ಯಂ ಖುಷಿಯಾದರು. ನಂತರ -`ಈ ಹಾಡಲ್ಲಿ ಸಂದೇಶವಿದೆ. ಜೀವನ ಪ್ರೀತಿಯಿದೆ. ಎಲ್ಲರೂ ಒಪ್ಪಲೇಬೇಕಾದ ಕಹಿಸತ್ಯವಿದೆ. ಬುದ್ಧಿಮಾತಿದೆ. ಎಚ್ಚರಿಕೆಯೂ ಇದೆ. ಇದು ಖಂಡಿತ ವಿಶೇಷವಾದ ಹಾಡಾಗುತ್ತೆ. ಹಾಗಾಗಿ ಇದನ್ನು ಮಹಮ್ಮದ್ ರಫಿ ಅವರಿಂದಲೇ ಹಾಡಿಸೋಣ’ ಎಂದರು. ಅಷ್ಟೇ ಅಲ್ಲ, ಮದ್ರಾಸ್ನಲ್ಲಿ ಸಂಗೀತ ಧ್ವನಿಮುದ್ರಿಸಿಕೊಂಡು ನಂತರ ಸೀದಾ ಬಾಂಬೆಗೆ ಹೋಗಿ ರಫಿಯವರಿಂದ ಹಾಡಿಸಿಯೂ ಬಿಟ್ಟರು. (ಮಹಮ್ಮದ್ ರಫಿಯವರು ಹಾಡಿರುವ ಏಕೈಕ ಕನ್ನಡ ಗೀತೆ ಇದು.) ಹಾಡುವ ಮುನ್ನ ಸತ್ಯಂ ಅವರಿಗೆ, ಈ ಹಾಡಿನ ಭಾವಾರ್ಥ ಹೇಳಿ ಅಂದರಂತೆ ರಫಿ. ವಿವರಣೆ ಕೇಳಿದ ನಂತರ-`ಬಹಳ ಒಳ್ಳೆಯ ಹಾಡು. ತುಂಬ ಇಷ್ಟ ಆಗುವಂಥ ಸಾಹಿತ್ಯ. ನಗುವಾಗ ಎಲ್ಲ ನೆಂಟರು, ಅಳುವಾಗ ಯಾರೂ ಇಲ್ಲ’ ಎಂಬ ಮಾತು ನನ್ನ ಪಾಲಿಗೂ ನಿಜವಾಗಿದೆ’ ಎಂದು ಉದ್ಗರಿಸಿದರಂತೆ. ನಂತರ ಆ ಸಂದರ್ಭವನ್ನು ಆವಾಹಿಸಿಕೊಂಡವರಂತೆ ಭಾವಪರವಶರಾಗಿ ಹಾಡಿ ಮುಗಿಸಿದರಂತೆ.
ಇದನ್ನೆಲ್ಲ ನೆನಪಿಸಿಕೊಂಡು ಗೀತಪ್ರಿಯ ಹೇಳುತ್ತಾರೆ: ರಫಿ ಅವರಂಥ ಮಹಾನ್ ಗಾಯಕ ಕನ್ನಡದಲ್ಲಿ ಹಾಡಿದ ಏಕೈಕ ಗೀತೆ ಬರೆದೆನೆಂಬ ಹೆಮ್ಮೆ ನನ್ನದು. ಹಾಡಿನ ಧ್ವನಿಮುದ್ರಣದ ಸಂದರ್ಭದಲ್ಲೇ ಅವರನ್ನು ಭೇಟಿಮಾಡುವ ಅವಕಾಶ ದೊರಕಿತ್ತು. ಆದರೆ, ಅನಾರೋಗ್ಯದ ಕಾರಣದಿಂದ ನಾನು ಬಾಂಬೆಗೆ ಹೋಗಲು ಸಾಧ್ಯವಾಗಲಿಲ್ಲ. ಅದನ್ನು ನೆನಪುಮಾಡಿಕೊಂಡರೆ ಈಗಲೂ ಬೇಸರವಾಗುತ್ತೆ….
***
ಮರೆತ ಮಾತು : ಇದೇ ಚಿತ್ರದಲ್ಲಿ ಅಣ್ಣ-ತಂಗಿಯ ಮಧುರ ಬಾಂಧವ್ಯ ವಿವರಿಸುವ `ಅಣ್ಣಾ ನಿನ್ನ ಸೋದರಿಯನ್ನ, ಮರೆಯದಿರೂ ಎಂದೆಂದೂ’ ಎಂಬ ಗೀತೆಯಿದೆ. ಈ ಹಾಡಿನ ಧ್ವನಿಮುದ್ರಣಕ್ಕೆ ಬಂದಿದ್ದ ಮರಾಠಿ ಲೇಖಕ ಸದಾಶಿವರಾವ್ ಎಂಬುವರು -`ನನಗೆ ಕನ್ನಡ ಅರ್ಥವಾಗೋದಿಲ್ಲ. ಆದರೆ ಈ ಹಾಡಿನ ಟ್ಯೂನ್ ವಿಪರೀತ ಇಷ್ಟವಾಗಿದೆ. ಈ ಹಾಡಲ್ಲಿರುವ ಒಂದು ಸಾಲನ್ನೇ ಸಿನಿಮಾದ ಹೆಸರು ಮಾಡಿಕೊಳ್ಳಿ. ಸಿನಿಮಾ ಯಶಸ್ವಿಯಾಗುತ್ತೆ ಅಂದರಂತೆ. ಅವರ ಮಾತಿನಂತೆ `ಅಣ್ಣಾ ನಿನ್ನ…’ ಹಾಡಲ್ಲಿದ್ದ `ಒಂದೇ ಬಳ್ಳಿಯ ಹೂಗಳು’ ಎಂಬ ಪಂಕ್ತಿಯನ್ನೇ ಸಿನಿಮಾಕ್ಕೆ ಇಡಲಾಯಿತು!
ಕಾಡುವ ಹಾಡಿಗೆ ಕನ್ನಡಿ ಹಿಡಿದರೆ ಅಲ್ಲಿ ರಫಿಯ ಗಾನ ಕೇಳಿಸಿತಲ್ಲ, ವಿಶೇಷವಲ್ಲವೆ?

‍ಲೇಖಕರು avadhi

November 19, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

3 ಪ್ರತಿಕ್ರಿಯೆಗಳು

 1. goutam hegde

  ಮಣಿಕಾಂತ್ ಸರ್ ಗೆ ಒಂದು ಸಲಾಂ . ಇಂಥ ಬರಹಕ್ಕೆ ಅವರಿಗೆ ಅವರೇ ಸಾಟಿ. ನೇರ ಎದೆಗೆ ನಾಟಿ ಬಿಡುತ್ತೆ ಅವರ ಬರಹ. 🙂

  ಪ್ರತಿಕ್ರಿಯೆ
 2. ಕಂಡಕ್ಟರ್ ಕಟ್ಟಿಮನಿ 45E

  ಪ್ರಿಯ ಮಣಿಕಾಂತ್ ಸರ್, ಅದ್ಬುತವಾದ ಹಾಡು ರಫಿ ಜಿ ನನ್ನನೆಚ್ಚಿನ ಗಾಯಕ. ಕನ್ನಡದ ಅವರ ಏಕೈಕ ಹಾಡು ಇದು.. ಚಿತ್ರದಲ್ಲಿ ಚಿತ್ರೀಕರಣವು ತುಂಬಾ ಸೊಗಸಾಗಿದೆ
  ಕಂಡಕ್ಟರ್ ಕಟ್ಟಿಮನಿ 45E

  ಪ್ರತಿಕ್ರಿಯೆ
 3. hneshakumar@gmail.com

  ಒಂದು ಪುಟ್ಟ ಹಾಡಿನ ಹಿಂದೆ ಇರುವ ಪರಿಶ್ರಮವ ತಿಳಿಸುವ ನಿಮ್ಮ ಪರಿಯೇ ಸೊಗಸು….

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: