ಎ ಆರ್ ಮಣಿಕಾಂತ್ ಬರೆಯುತ್ತಾರೆ: ಮುತ್ತಿನಾ ಹನಿಗಳು ಸುತ್ತಲೂ ಮುತ್ತಲೂ..

551

ಚಿತ್ರ: ಬಯಸದೇ ಬಂದ ಭಾಗ್ಯ.

ಗೀತೆರಚನೆ: ಆರ್.ಎನ್. ಜಯಗೋಪಾಲ್.

ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ.

ಸಂಗೀತ: ರಾಜನ್-ನಾಗೇಂದ್ರ

ಮುತ್ತಿನಾ ಹನಿಗಳು ಸುತ್ತಲೂ ಮುತ್ತಲೂ

ಮನವು ಅರಳಿ ಹೊಸತನ ತರುತಿದೆ

ನನ್ನಲ್ಲಿ ಹೋಯ್ ನಿನ್ನಲ್ಲಿ ||ಪ||

ಮುಗಿಲಿನಾ ಆಟಕೆ ಮಿಂಚಿನಾ ಓಟಕೆ

ಗಗನ ಹೆದರಿ ನಡುಗಿದೆ ಗುಡುಗಿದೆ

ನನ್ನಂತೆ ಹೋಯ್ ನಿನ್ನಂತೆ ||ಅ.ಪ||

ಗಾಳಿಯೂ ಬೀಸಿದೆ ಕಿವಿಯಲೀ ಹಾಡಿದೆ

ಈ ಹೆಣ್ಣು ಚೆನ್ನ ಗುಣದಲ್ಲಿ ಚಿನ್ನ

ಬಿಡಬೇಡವೆಂದಿದೆ

ಮಾತಿಗೆ ಸೋಲದೆ ಆತುರ ತೋರದೆ

ನಿನ್ನಿಂದ ಇಂದು ದೂರಾಗು ಎಂದು

ಬಿರುಗಾಳಿ ನೂಕಿದೆ ||1||

ನೋಟದಾ ಮಿಂಚಿಗೆ ಮಾತಿನಾ ಗುಡುಗಿಗೆ

ನಾನಂದು ಹೆದರಿ ಮೈಯೆಲ್ಲ ಬೆವರಿ

ಊರಾಚೆ ಓಡಿದೆ

ಹೆಣ್ಣಿಗೆ ಹೆದರುವಾ ಗಂಡಿನಾ ಶೌರ್ಯವಾ

ನಾನಂದು ಕಂಡೆ ಹುಡುಗಾಟಕೆಂದೆ

ದಿನವೆಲ್ಲ ಕಾಡಿದೆ ||2||

rnj

ಕೆಲವು ಹಾಡುಗಳೇ ಹಾಗೆ; ಅವು ಯಾವುದೋ ಆಕಸ್ಮಿಕ ಸಂದರ್ಭದಲ್ಲಿ ಕೈ ಹಿಡಿದಿರುತ್ತವೆ; ದಿಢೀರನೆ ಎದುರಾಗುವ ಪಕ್ಕದೂರಿನ ಬೆಡಗಿಯ ಹಾಗೆ!’ ನಂತರ, ದಶಕಗಳ ಕಾಲವೂ ಮಧುರ ನೆನಪಾಗಿಯೇ ಉಳಿಯುತ್ತದೆ; ಕಳೆದು ಹೋದ ಗೆಳತಿಯ ಪಿಸುಮಾತಿನ ಹಾಗೆ!! ಸ್ವಾರಸ್ಯವೆಂದರೆ, ಹೀಗೆ ಕಾಡುವ ಹಾಡುಗಳಲ್ಲಿ ಹೆಚ್ಚಿನವು ಯಾರದೋ ಟೀಕೆಗೆ, ಛಾಲೆಂಜಿಗೆ ಉತ್ತರವೆಂಬಂತೆ ಸಿದ್ಧಗೊಂಡಿರುತ್ತವೆ.

ಆರ್. ರಾಮಮೂರ್ತಿ ನಿರ್ಮಾಣ- ನಿರ್ದೇಶನದ `ಬಯಸದೇ ಬಂದ ಭಾಗ್ಯ’ ಚಿತ್ರದ ಸೂಪರ್ಹಿಟ್ ಗೀತೆ `ಮುತ್ತಿನಾ ಹನಿಗಳು…’ ಸಹ, ಹಿಂದಿಯ ಸಂಗೀತ ನಿರ್ದೇಶಕರೊಬ್ಬರು `ಕನ್ನಡದಲ್ಲೇನಿದೆ ಮಹಾ ಬಿಡ್ರೀ’ ಎಂದು ಲಘುವಾಗಿ ಮಾತಾಡಿದ್ದಕ್ಕೆ ಉತ್ತರರೂಪವಾಗಿ ಸೃಷ್ಟಿಯಾದ ಗೀತೆ ಎಂಬುದಕ್ಕೆ ಪೂರ್ವಪೀಠಿಕೆಯಾಗಿ ಮೇಲಿನ ಮಾತು ಹೇಳಬೇಕಾಯಿತು.

ಅಂದಹಾಗೆ ಈ ಹಾಡು ಸೃಷ್ಟಿಯಾದ ಸಂದರ್ಭ ಹೀಗಿದೆ; ಗೀತೆರಚನೆಕಾರ ಆರ್.ಎನ್. ಜಯಗೋಪಾಲ್ ಅವರು 1977ರಲ್ಲಿ ಇಂಡಿಯನ್ ಪರ್ಫಾರ್ಮರ್ಸ್ ರೈಟ್ಸ್ ಸೊಸೈಟಿಗೆ ಉಪಾಧ್ಯಕ್ಷರಾಗಿದ್ದರು. ಅದಕ್ಕೂ ಮೊದಲು ಅವರು ಅದೇ ಸಂಘದ ನಿದರ್ೇಶಕರಾಗಿದ್ದರು. ಈ ಸಂಘದ ಕಚೇರಿ ಮುಂಬಯಿಯಲ್ಲಿತ್ತು. ಅದೊಮ್ಮೆ ಮಂಡಳಿಯ ಸಭೆಗೆಂದು ಮುಂಬಯಿಗೆ ಹೋದ ಆರ್.ಎನ್.ಜೆ. ಅವರಿಗೆ, ಅಲ್ಲಿ ಹಿಂದಿಯ ಸಂಗೀತ ನಿರ್ದೇಶಕ ದಲಾಲ್ಸೇನ್ ಅವರು ಭೇಟಿಯಾದರು. ಅದೂ ಇದೂ ಮಾತಾಡುತ್ತಾ ಗೀತೆರಚನೆಯ ಕಡೆಗೆ ಮಾತು ಹೊರಳಿತು. ಆಗ ದಲಾಲ್ ಹೇಳಿದರಂತೆ: `ನೀವು ಏನೇ ಹೇಳಿ, ಹಿಂದಿ ಹಾಗೂ ಉರ್ದು ಭಾಷೆಯಲ್ಲಿ ನಮ್ಮ ಮನಸ್ಸಿನ ಭಾವನೆಗೆ ತಕ್ಕ ಹಾಗೆ ಹಾಡು ಬರೆಯಬಹುದು. ಆದರೆ ದ್ರಾವಿಡ ಭಾಷೆಗಳಾದ ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ನಮಗೆ ಇಷ್ಟಬಂದ ಹಾಗೆ ಹಾಡು ಬರೆಯಲು ಸಾಧ್ಯವಿಲ್ಲ…’

ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಆರ್.ಎನ್.ಜೆ. `ನಿಮ್ಮ ಆಲೋಚನೆಯೇ ತಪ್ಪು. ಹಿಂದಿ ಹಾಗೂ ಉರ್ದುವಿನಲ್ಲಿ ಇದೆಯಲ್ಲ? ಅಷ್ಟೇ ಮಧುರವಾದ ಶಬ್ದ ಸಂಪತ್ತು ಕನ್ನಡದಲ್ಲೂ ಇದೆ. ಯಾವುದೇ ವಿಷಯವಾಗಿ ಬೇಕಾದರೂ ಹತ್ತಲ್ಲ, ನೂರಲ್ಲ, ಸಾವಿರ ಮಂದಿ ಒಪ್ಪುವಂಥ ಹಾಡುಗಳನ್ನು ಕನ್ನಡದಲ್ಲಿ ಬರೆಯಬಹುದು’ ಅಂದರಂತೆ.

ಈ ಮಾತನ್ನು ಒಪ್ಪದ ದಲಾಲ್ ಸೇನ್- `ಮಳೆ, ಗುಡುಗು, ಮಿಂಚು… ಈ ಪದಗಳನ್ನೋ ಅಥವಾ ಈ ಸಂದರ್ಭವನ್ನೋ ಇಟ್ಟುಕೊಂಡು ಒಂದು ಡ್ಯುಯೆಟ್ ಸಾಂಗ್ ಬರೀರಿ ನೋಡೋಣ’ ಎಂದು ಸವಾಲು ಹಾಕಿದರಂತೆ.

ಈ ಸವಾಲಿಗೆ ಒಪ್ಪಿಕೊಂಡ ಆರ್ಎನ್ಜೆ, ಅವತ್ತು ಮಧ್ಯಾಹ್ನವೇ ಹೋಟೆಲಿಗೆ ಬಂದು ಯೋಚಿಸುತ್ತಾ ಕೂತರು. ಮಳೆ, ಮಿಂಚು, ಗುಡುಗು- ಈ ಸಂದರ್ಭದಲ್ಲೇ ಒಂದು ಡ್ಯುಯೆಟ್ ಸಾಂಗ್ ಬರಬೇಕು ಅಂದರೆ- ಮಳೆಯನ್ನು ಕಂಡು ನಾಯಕ-ನಾಯಕಿ ಸಂತೋಷದಿಂದ ಹಾಡುವಂತಿರಬೇಕು ತಾನೆ ಎಂದು ಯೋಚಿಸಿದರು. ಅದೇ ಸಂದರ್ಭದಲ್ಲಿ ಮಳೆ ಬರ್ತಾ ಇರುತ್ತೆ ಅಂದರೆ, ಅವರಿಬ್ಬರ ಸುತ್ತಲೂ ಮಳೆನೀರು ಹರೀತಾ ಇರುತ್ತೆ. ಈ ಮಧ್ಯೆಯೇ ಆಗಸದಿಂದ ಒಂದೊಂದು ಹೊಸ ಹನಿ ಬಿದ್ದಾಗಲೂ ಒಂದು ಮುತ್ತಿನ ಹನಿ ಬಿದ್ದಂತೆ ಭಾಸವಾಗುತ್ತೆ’ ಎಂಬ ಐಡಿಯಾ ಕೂಡ ಆರ್ಎನ್ಜೆಗೆ ಬಂತಂತೆ. ಅದನ್ನೇ ನೆಪಮಾಡಿಕೊಂಡ ಆರ್.ಎನ್.ಜೆ, `ಮುತ್ತಿನಾ ಹನಿಗಳೂ ಸುತ್ತಲೂ ಮುತ್ತಲೂ/ಮನವು ಅರಳಿ ಹೊಸತನ ತರುತಿದೆ/ ನನ್ನಲ್ಲಿ ನಿನ್ನಲ್ಲಿ…’ ಎಂದು ಪಲ್ಲವಿ ಬರೆದರು. ಒಂದೆರಡು ನಿಮಿಷಗಳಲ್ಲಿಯೇ ಅನುಪಲ್ಲವಿ ಕೂಡ ಹೊಳೆಯಿತು. ಅದನ್ನೂ ಬರೆದುಕೊಂಡು ಕಡೆಯ ಸಾಲುಗಳ ಮಧ್ಯೆ `ಹೋಯ್’ ಎಂಬ ಇನ್ನೊಂದು ಹೊಸ ಪದ ಸೇರಿಸಿದರು. ಹಿಂದೆಯೇ ಈ ಹೊಸ ಹಾಡಿಗೆ ತಾವೇ ಒಂದು ಟ್ಯೂನ್ ಕೂಡ ಸಿದ್ಧಪಡಿಸಿದರು.

ಸಂಜೆಯಾಗುತ್ತಿದ್ದಂತೆಯೇ ದಲಾಲ್ಸೇನ್ ಅವರನ್ನು ಭೇಟಿಮಾಡಿ- `ಮಧ್ಯಾಹ್ನ ಕನ್ನಡದಲ್ಲಿ ಏನಿದೆ ಮಹಾ? ಆ ಪದಗಳಲ್ಲಿ ಹಾಡು ಬರೆಯಲು ಆಗಲ್ಲ ಅಂದಿದ್ರಿ ಅಲ್ವ? ನಿಮ್ಮ ಅಭಿಪ್ರಾಯ ಸುಳ್ಳು ಎಂದು ತೋರಿಸೋಕೆ ಹಾಡು ಬರ್ಕೊಂಡು ಬಂದಿದೀನಿ, ಕೇಳಿ’ ಎಂದರು. ಕನ್ನಡ ಬಾರದಿದ್ದರೂ ಆ ಟ್ಯೂನ್ ಮತ್ತು ಹಾಡಿನ ಲಯವನ್ನು ಅರ್ಥ ಮಾಡಿಕೊಂಡ ದಲಾಲ್ಸೇನ್- `ಭೇಷ್, ಭೇಷ್, ನಿಮ್ಮ ಹಾಡು ಚೆನ್ನಾಗಿದೆ. ಈಗಿನಿಂದಲೇ ನನ್ನ ಅಭಿಪ್ರಾಯ ಬದಲಿಸಿಕೊಳ್ತೇನೆ’ ಎಂದು ಉದ್ಗರಿಸಿದರಂತೆ.

ನಂತರ ಚೆನ್ನೈಗೆ ಬಂದ ಆರ್.ಎನ್.ಜೆ. ಆಕಸ್ಮಿಕವಾಗಿ ಆರ್. ರಾಮಮೂರ್ತಿಯವರನ್ನು ಭೇಟಿಯಾದರು. ಮಾತಿನ ಮಧ್ಯೆ- ದಲಾಲ್ ಸೇನ್ ಅವರನ್ನು ಭೇಟಿಯಾಗಬೇಕಾಗಿ ಬಂದ ಸಂದರ್ಭ ಹಾಗೂ ಆಗ ಸೃಷ್ಟಿಯಾದ ಗೀತೆಯ ಬಗ್ಗೆ ಹೇಳಿಕೊಂಡರು. ಹಾಡಿನ ಪಲ್ಲವಿ ಹಾಗೂ ಅನುಪಲ್ಲವಿಯನ್ನು ಕೇಳಿದ ರಾಮಮೂರ್ತಿ – `ನಮ್ಮ ಸಿನಿಮಾದಲ್ಲಿ ಕಥಾನಾಯಕ ಸಾಧು. ನಾಯಕಿ ಬಹಳ ಜೋರಿನವಳು. ಹೀರೊಯಿನ್ ಮನೆಯಲ್ಲಿ ಹೀರೊ ಬಾಡಿಗೆಗೆ ಇರ್ತಾನೆ. ಹೀಗಿದ್ದಾಗಲೇ ಮಳೆ ಬಂದು ರೂಂನಲ್ಲಿ ನೀರು ತುಂಬಿಕೊಂಡಿರುತ್ತೆ. ಇದನ್ನೇ ನೆಪ ಮಾಡಿಕೊಂಡ ಹೀರೊ `ನಿಮ್ಮ ಮನೆ ಹೇಗಿದೆ ಅಂತ ನೋಡಿ ಬನ್ರೀ’ ಎಂದು ನಾಯಕಿಯನ್ನು ಕರೆಯುತ್ತಾನೆ. ಆಕೆ ಬಂದವಳೇ, ಮಳೆ ನೀರು ಮೋರಿಯಲ್ಲಿ ಹರಿದುಹೋಗಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಿಕೊಡುತ್ತಾಳೆ. ಇದನ್ನು ಕಂಡಾಗ ಹೀರೊಗೆ ಅವಳಲ್ಲಿ ಪ್ರೀತಿ ಹುಟ್ಟುತ್ತೆ. ಆಗ ಒಂದು ಕನಸಿನ ಹಾಡು ಶುರುವಾಗಬೇಕು. ನೀವು ಬರೆದಿರುವ ಹಾಡು ಆ ಸಂದರ್ಭಕ್ಕೆ ಹೊಂದುತ್ತೆ. ಈ ಹಾಡನ್ನು ನಮಗೆ ಕೊಡಿ ಸಾರ್’ ಎಂದರಂತೆ.

ಇದಕ್ಕೆ ಒಪ್ಪದ ಆರ್.ಎನ್.ಜೆ.- `ನಿಮ್ಮ ಚಿತ್ರಕ್ಕೆ ಈಗಾಗಲೇ ಚಿ. ಉದಯಶಂಕರ್ ಸಂಭಾಷಣೆ-ಹಾಡು ಬರೀತಿದ್ದಾರೆ. ಒಬ್ಬರು ಕೆಲಸ ಮಾಡುತ್ತಿರುವ ಸಿನಿಮಾದಲ್ಲಿ ಇನ್ನೊಬ್ಬರು ಮಧ್ಯೆ ಪ್ರವೇಶಿಸಬಾರದು ಎಂದು ನಾವಿಬ್ರೂ ಒಪ್ಪಂದ ಮಾಡ್ಕೊಂಡಿದೀವಿ. ಪರಿಸ್ಥಿತಿ ಹೀಗಿರುವಾಗ ನಾನು ಏನು ಮಾಡಲಿ? ಒಂದು ವೇಳೆ ನಾನು ಹಾಡು ಬರೆಯಲು ಒಪ್ಪಿದ್ರೆ ನನ್ನ ಗೆಳೆಯನ ಅವಕಾಶ ಕಿತ್ತೊಂಡ ಹಾಗಾಗುತ್ತೆ. ಹಾಗಾಗಿ ನಾನು ಬರೆಯೊಲ್ಲ’ ಅಂದರಂತೆ.

ತಕ್ಷಣವೇ ರಾಮಮೂರ್ತಿಯವರು ಚಿ. ಉದಯಶಂಕರ್ ಬಳಿ ಹೋಗಿ ಎಲ್ಲ ವಿಷಯ ತಿಳಿಸಿದ್ದಾರೆ. ಮರುದಿನವೇ ಆರ್.ಎನ್.ಜೆ.ಯವರನ್ನು ಭೇಟಿ ಮಾಡಿದ ಉದಯಶಂಕರ್- `ಕಥೆಯ ಸಂದರ್ಭಕ್ಕೆ ನಿನ್ನ ಹಾಡು ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತೆ. ಈ ಹಾಡಿನ ಅಗತ್ಯ ನಮಗೆ ತುಂಬಾ ಇದೆ. ಹಾಗಾಗಿ ಹಾಡನ್ನು ಪೂರ್ತಿ ಮಾಡಿ ಕೊಡು. ನಾವು ಬಳಸಿಕೊಳ್ತೇವೆ’ ಅಂದರಂತೆ. ಆರ್.ಎನ್.ಜೆ. ಗೆಳೆಯನ ಮಾತಿಗೆ ಒಪ್ಪಿದರು. ಅನುಮಾನವೇ ಬೇಡ; ಈ ಹಾಡಿನಿಂದಾಗಿ ಸನ್ನಿವೇಶದ ತೀವ್ರತೆ ಹೆಚ್ಚಿತು.

1977ರಲ್ಲಿ `ಬಯಸದೇ ಬಂದ ಭಾಗ್ಯ’ ಬಿಡುಗಡೆಯಾಯಿತಲ್ಲ? ಆಗ ಒಂದು ಅಚಾತುರ್ಯ ನಡೆದುಹೋಯಿತು. ಆ ಸಂದರ್ಭದಲ್ಲಿ, ಬಿಡುಗಡೆಯಾದ ಎಲ್ಲ ಚಿತ್ರಗಳ ಆಡಿಯೋ ಹಕ್ಕುಗಳನ್ನು ಪಡೆದುಕೊಂಡ ಎಚ್ಎಂವಿ ಸಂಸ್ಥೆ ಹಾಡುಗಳನ್ನು ಗ್ರಾಮಾಫೋನ್ ತಟ್ಟೆಗಳಲ್ಲಿ ಅಳವಡಿಸಿ ಬಿಡುಗಡೆ ಮಾಡುತ್ತಿತ್ತು. ಹೀಗೆ ಬಿಡುಗಡೆಯಾದ ಗ್ರಾಮಾಫೋನ್ ತಟ್ಟೆಗಳಲ್ಲಿ ಗೀತೆರಚನೆ: ಚಿ. ಉದಯಶಂಕರ್ ಎಂದು ಮುದ್ರಿಸಲಾಗಿತ್ತು! ಈ ಗ್ರಾಮಾಫೋನ್ ತಟ್ಟೆಗಳ ನೆರವಿನಿಂದಲೇ ಹಾಡುಗಳನ್ನು ಪ್ರಸಾರ ಮಾಡುತ್ತಿದ್ದ ಆಕಾಶವಾಣಿಯವರು, ಇದು ಚಿ. ಉದಯಶಂಕರ್ ರಚನೆಯ ಗೀತೆ ಎಂದೇ ಹೇಳುತ್ತ ಬಂದರು. ಆಗಿರುವ ಪ್ರಮಾದವನ್ನು ಯಾರೂ ಗಮನಿಸಲೇ ಇಲ್ಲ!

2005ರ ವೇಳೆಗೆ ಆರ್.ಎನ್.ಜೆ. ಅವರೊಂದಿಗೆ ಮುಕ್ತವಾಗಿ ಮಾತಾಡುತ್ತಾ ಈ ವಿಷಯ ಪ್ರಸ್ತಾಪಿಸಿದ ಮಲ್ಲಿಗೆ ಮಾಸಿಕದ ಸಂಪಾದಕರಾದ ಎನ್.ಎಸ್. ಶ್ರೀಧರಮೂರ್ತಿಯವರು- `ಸರ್, ನೀವು ಬರೆದ ಹಾಡು ಅದು. ಆದರೆ ಎಚ್ಎಂವಿ ಹಾಗೂ ಆಕಾಶವಾಣಿಯವರ ಅಚಾತುರ್ಯದಿಂದಾಗಿ ಚಿ. ಉದಯಶಂಕರ್ ಹೆಸರಲ್ಲಿ ಪ್ರಸಾರ ಆಗ್ತಿದೆ. ಇದನ್ನೆಲ್ಲ ವಿವರವಾಗಿ ಬರೆದು ಒಂದು ಪತ್ರ ಕೊಡಿ. ನಾನು ಆಕಾಶವಾಣಿಯ ಅಕಾರಿಗಳೊಂದಿಗೆ ಮಾತಾಡಿ ಸರಿ ಮಾಡಿಸ್ತೇನೆ’ ಅಂದರಂತೆ.

ಈ ಸಲಹೆಗೆ ಒಪ್ಪದ ಆರ್ಎನ್ಜೆ- `ಛೆ ಛೆ, ಹಾಗೆ ಮಾಡೋದು ಬೇಡ. ಸಿನಿಮಾ ಬಿಡುಗಡೆಯಾಗಿ ಈಗಾಗಲೇ 28 ವರ್ಷ ಆಗಿಹೋಗಿದೆ. ಇಲ್ಲಿಯವರೆಗೂ ಅದು ಚಿ. ಉದಯಶಂಕರ್ ರಚನೆ ಎಂದೇ ಪ್ರಸಾರವಾಗಿದೆ. ಹಾಗಾಗಿ ಅದನ್ನು ಬದಲಿಸುವ ಅಗತ್ಯವಿಲ್ಲ. ಅವನಾದರೂ ನನ್ನ ಜೀವದ ಗೆಳೆಯ ತಾನೆ? ಅವನ ಹೆಸರಲ್ಲೇ ಪ್ರಸಾರವಾಗಲಿ’ ಎಂದರಂತೆ. ನಂತರ ಮುಂದುವರಿದು- `ನೋಡಿ ಶ್ರೀಧರಮೂತರ್ಿ, ದೀಪ ಯಾವುದಾದರೇನು? ಬೆಳಕು ಕೊಡುವುದಷ್ಟೇ ಮುಖ್ಯ. ನಮ್ಮ ಉದಯಶಂಕರ್ ಒಂದು ದೀಪ. ಹಾಗೇ ನಾನೂ ಒಂದು ದೀಪ. ನಮ್ಮ ಕೆಲಸವೆಂದರೆ, ಸುಂದರವಾದ ಹಾಡುಗಳನ್ನು ಪ್ರೇಕ್ಷಕರಿಗೆ ನೀಡುವುದು! ಈಗ ಆ ಕೆಲಸವಾಗಿದೆ. ಹಾಡಿನಲ್ಲಿ ಯಾರ ಹೆಸರಿದ್ದರೆ ತಾನೆ ಏನಂತೆ?’ ಎಂದರಂತೆ.

ಪರಿಣಾಮ ಏನಾಗಿದೆಯೆಂದರೆ- ಆಕಾಶವಾಣಿಯ ದಾಖಲೆಗಳಲ್ಲಿ `ಮುತ್ತಿನಾ ಹನಿಗಳು’ ಹಾಡು ಚಿ. ಉದಯಶಂಕರ್ ಹೆಸರಲ್ಲೇ ಇದೆ! ಸಿನಿಮಾದ ಟೈಟಲ್ ಕಾರ್ಡ್ನಲ್ಲಿ ಮಾತ್ರ ಆರ್.ಎನ್. ಜಯಗೋಪಾಲ್ ಹೆಸರು ಕಾಣಿಸುತ್ತದೆ!

ಅಂದಹಾಗೆ, ಇವತ್ತು ಆರ್.ಎನ್. ಜಯಗೋಪಾಲ್ ಕುಟುಂಬ ಬೆಂಗಳೂರಿನಲ್ಲಿ `ಆರ್ಎನ್ಜೆ’ ಪ್ರಶಸ್ತಿ ವಿತರಣೆ ಸಮಾರಂಭ ನಡೆಸುತ್ತಿದೆ. ಆ ನೆಪದಲ್ಲಿ ಆರ್ಎನ್ಜೆಯವರನ್ನು ನೆನಪು ಮಾಡಿಕೊಂಡಾಗ- ಸ್ನೇಹ, ಪ್ರೇಮ, ಸವಾಲು… ಎಲ್ಲಕ್ಕೂ ಸಾಕ್ಷಿ ಹೇಳುವ ಈ ಹಾಡು ಕೈಹಿಡಿಯಿತು!

`ಹಾಡೇ ಮಾತಾಡೇ…’ ಎನ್ನುವ ಮೊದಲೇ ತನ್ನ ಕಥೆ ಹೇಳಿತು…

ಈಗ ನೀವೇ ಹೇಳಿ, ಕಾಡುವ ಹಾಡುಗಳ ಕಥೆ ಅಂದ್ರೆ ಸುಮ್ನೇನಾ?

‍ಲೇಖಕರು avadhi

July 20, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

'ನಾಗಮಂಡಲ'ದ ಆ ಒಂದು ಹಾಡು

  ಎ ಆರ್ ಮಣಿಕಾಂತ್ ರಾಣಿಯ ಸುಮ್ಮಾನದ ಹಾಡಿಗೆ ಸೂರ್ತಿಯಾದವಳು ಕಣ್ವರ ಶಕುಂತಲೆ! ಈ ಹಸಿರು ಸಿರಿಯಲಿ... ಚಿತ್ರ : ನಾಗಮಂಡಲ        ಗೀತ...

೧ ಪ್ರತಿಕ್ರಿಯೆ

 1. mayura

  Dear Manikanth.

  Great article.

  The name of the hindi music director who challenged RNJ
  is Dulal Saini and not Dalalsen. He scored music for one of Rajkumar’s Kannada movie ‘Punarjanma’.

  Regards,

  Mayura

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: