‘ಎ ಗ್ರೇಟ್ ಆ್ಯಕ್ಟರ್ ಕೆನಾಟ್ ಬಿ ಪ್ರಿಪೇರ್ಡ್’

ಬಿ ಎನ್‍ ಶಶಿಕಲಾ

ನಾನು ದಾವಣಗೆರೆಯವಳು. ಪದವಿ ಮುಗಿಸಿದ ನಂತರ ಸ್ನಾತಕೋತ್ತರ ಪದವಿ ಪಡೆಯುವ ಅವಕಾಶಗಳು ಹೇರಳವಾಗಿತ್ತು. ಆದರೆ, ನನಗೆ ಸಂತೋಷಕೊಡಬಲ್ಲ ಅಭಿನಯ ಕಲಿಕೆಯತ್ತ ಮನಸ್ಸು ಮಾಡಿದೆ. ಕಾಲೇಜು ದಿನಗಳಲ್ಲಿ ನಾನು ಭಾಗವಹಿಸುತ್ತಿದ್ದ ನಾಟಕಗಳು ನನ್ನನ್ನು ಅಭಿನಯದತ್ತ ಮನಸ್ಸು ಮಾಡಲು ಪ್ರೇರೆಪಿಸುತಿತ್ತು. ನಮ್ಮೊಳಗಿನ ಮಾತನ್ನು ನಾವು ಕಿವಿಗೊಟ್ಟು ಕೇಳುವುದು ಬಹಳ ಮುಖ್ಯ… ಇಲ್ಲದಿದ್ದಲ್ಲಿ ನಮ್ಮ ಇಡಿಯ ಬದುಕು ಆತಂಕ, ಭಯ, ತಲ್ಲಣ ಮತ್ತು ಅಭದ್ರತೆಯಿಂದ ಬಳಲುವಂತೆ ಮಾಡುತ್ತದೆ.

ಈ ಒಂದು ನಿರ್ಧಾರ ನನ್ನನ್ನು ಹೆಗ್ಗೋಡಿನ ನೀನಾಸಂ’ಗೆ ಕರೆತಂದು ಅಭಿನಯದಲ್ಲಿ ಡಿಪ್ಲೊಮಾ ಪದವಿ ಪಡೆಯುವಂತೆ ಮಾಡಿತು. ಹಾಗೇಯೇ ಅಲ್ಲಿ ಕಲಿತು, ನಾಟಕಗಳಲ್ಲಿ ಅಭಿನಯಿಸುತ್ತಾ ಹೋದೆ. ನಂತರ ಕೆಲವೇ ವರ್ಷಗಳಲ್ಲಿ ನನಗೆ ರಂಗಭೀಷ್ಮ ಬಿ.ವಿ ಕಾರಂತರು ಗುರುಗಳಾಗಿ ಸಿಕ್ಕದ್ದು ನನ್ನ ಪುಣ್ಯವೆಂದೇ ಹೇಳಬೇಕು.

ಬಿ.ವಿ. ಕಾರಂತರು ಈ ದೇಶಕಂಡ ಅಪರೂಪದ ಪ್ರತಿಭಾವಂತ ರಂಗತಜ್ಞರು ಹಾಗೂ ಆಧುನಿಕ ರಂಗಭೂಮಿಯ ಹರಿಕಾರರು. ರಂಗಭೂಮಿಯ ಸೆಳೆತಕ್ಕೆ ಒಳಗಾಗಿ ಬಾಲ್ಯದಲ್ಲಿ ಮನೆ ತೊರೆದು, ಅಂದಿನ ಪ್ರತಿಷ್ಠಿತ ನಾಟಕ ಕಂಪನಿಯಾದ ಗುಬ್ಬಿ ಕಂಪನಿ ಸೇರಿ – ರಂಗಕರ್ಮದ ವೃತ್ತಿಪರತೆಯನ್ನು ರೂಪಿಸಿಕೊಂಡರು. ನಂತರ ರಾಷ್ಟ್ರೀಯ ನಾಟಕ ಶಾಲೆ ಸೇರಿ, ಅಲ್ಲಿ ಪದವಿ ಪಡೆದು ಮುಂದೆ ಅದರ ನಿರ್ದೇಶಕರಾಗಿ, ದೇಶದ್ಯಾಂತ ಚಾಲ್ತಿಯಲ್ಲಿದ್ದ ರಂಗಭೂಮಿಗೆ ಹೊಸರೂಪ ಕೊಟ್ಟರು. ದೇಶ-ವಿದೇಶಗಳನ್ನು ಸುತ್ತಿ ನೂರಾರು ನಾಟಕಗಳನ್ನು ನಿರ್ದೇಶಿಸಿದರು. ಚಲನಚಿತ್ರಗಳನ್ನು ನಿರ್ದೇಶಿಸಿದರು. ರಾಷ್ಟ್ರಪ್ರಶಸ್ತಿಯನ್ನು ಪಡೆದರು.

ದೆಹಲಿ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗಿ, ಮಧ್ಯಪ್ರದೇಶದ ಭೂಪಾಲ್‍ನ ರಂಗಮಂಡಲದ ನಿರ್ದೇಶಕರಾಗಿ, ನಂತರ ಮೈಸೂರಿನಲ್ಲಿ ರಂಗಾಯಣವನ್ನು ಸ್ಥಾಪಿಸಿ ಅದರ ನಿರ್ದೇಶಕರಾಗಿ, ಈ ದೇಶದ ರಂಗ ಸಂಸ್ಕೃತಿಯನ್ನು ರೂಪಿಸಿದರು. ಸಾವಿರಾರು ರಂಗಕರ್ಮಿಗಳನ್ನು ದೇಶಾದ್ಯಂತ ಶಿಷ್ಯರನ್ನಾಗಿ ಪಡೆದರು. ಅವರಿಗಿದ್ದ ರಂಗಭೂಮಿಯ ಕನಸು ನಿಜಕ್ಕೂ ಅಭೂತಪೂರ್ವವಾದುದು. ಅವರಿಗೆ ನಾಟಕ ಬೇರೆಯಲ್ಲ, ಜೀವನ ಬೇರೆಯಲ್ಲ. ಅವರು ಯಾವುದನ್ನೂ ಕ್ಲಿಷ್ಟಕರವಾಗಿ ನಮಗೆ ಹೇಳುತ್ತಿರಲಿಲ್ಲ, ನೇರವಾಗಿ ಕಲಿಸಿದರು. ಅವರು ಹೇಳುತ್ತಿದ್ದರು “ನೀನು ಒಳ್ಳೆ ನಟಿಯಾಗುವುದು ಮುಖ್ಯವಲ್ಲ, ನೀನು ಹೇಗೆ ಮಾನವೀಯ ಗುಣದಿಂದ ಬದುಕುತ್ತೀ ಅದು ಮುಖ್ಯ.

ನೀನು ಹೇಗೆ ಎಲ್ಲರ ಜೊತೆ ಬೆರೆಯುತ್ತೀ ಎನ್ನುವುದು ಮುಖ್ಯ. ನಾಟಕವೆಂದರೆ ಒಬ್ಬರೇ ಮಾಡುವುದಲ್ಲ, ಅದು ಎಲ್ಲರೊಟ್ಟಿಗೆ ಘಟಿಸುವಂತದ್ದು” ಎಂದು ಹೇಳುತ್ತಿದ್ದ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ಮಾರ್ದನಿಗೊಳ್ಳುತ್ತಿದೆ. ಇಂಥಾ ಗುರು ನನಗೆ ದೊರೆತದ್ದು ನನ್ನ ಬದುಕಿನ ಪುಣ್ಯ. ನಿರಂತರ ಏಳು ವರ್ಷಗಳ ಕಾಲ ಅವರ ಗರಡಿಯಲ್ಲಿ ಅಭಿನಯದ ತರಬೇತಿ ಪಡೆದು, ಅವರೇ ಸ್ಥಾಪಿಸಿದ ಮೈಸೂರಿನ ರಂಗಾಯಣದಲ್ಲಿ ಈಗಲೂ ನಾನು ಕಲಾವಿದೆಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ರಂಗಾಯಣದ ನೂರಾರು ನಾಟಕಗಳ – ಸಾವಿರಾರು ಪ್ರದರ್ಶನಗಳಲ್ಲಿ ಅಭಿನಯಿಸುತ್ತಿದ್ದೇನೆ.

ರಂಗಾಯಣದಲ್ಲಿ ಕಾರಂತರ ಒಡನಾಟದಲ್ಲಿನ ಕೆಲವು ಪ್ರಸಂಗಗಳು

ಮೊದಲನೆ ಕ್ಲಾಸಿನಲ್ಲಿಯೇ ಕಾರಂತರು ಹೇಳಿದ್ದು “ಎ ಗ್ರೇಟ್ ಆ್ಯಕ್ಟರ್ ಕೆನಾಟ್  ಬಿ ಪ್ರಿಪೇರ್ಡ್”. ಒಳ್ಳೆಯ ನಟನನ್ನು ತಯಾರು ಮಾಡಬಹದು ಆದರೆ, ಒಬ್ಬ ಮಹಾನ್ ನಟ ಆಗಬೇಕಾದ್ರೆ ಅವನೇ ಸ್ವತಃ ಒಳಗಿನಿಂದ ಬೆಳೆಯಬೇಕು. ತರಬೇತಿ ಏನಿದ್ದರೂ ಒಳ್ಳೆಯ ನಟನಾಗುವ ಮಟ್ಟಕ್ಕೆ. ಅದಕ್ಕೆ ತರಬೇತಿ ಬೇಕೇಬೇಕು. ತಾನೂ ಇನ್ನೂ ಬೆಳೆಯಬೇಕು ಎಂಬ ಎಚ್ಚರ ಬರೋದು ತರಬೇತಿಯಿಂದಲೇ. ಕೊನೆಗೂ ಒಬ್ಬ ನಟ ಸ್ವತಃ ತಾನೇ ತನಗೆ ಗುರು, ತನ್ನಿಂದಲೆ ತಾನೂ ಕಲಿಯೋದು. ಥಿಯೇಟರ್‍ಗೆ ಒಬ್ಬ ಗುರು ಅಲ್ಲ, ಎಷ್ಟೋ ಜನ ಗುರುಗಳು.

ಕಾರಂತರನ್ನ ಮೈಸೂರಿನ ಸ್ನೇಹಿತರು ತಿಂಡಿಗೆ ಆಹ್ವಾನಿಸಿದಾಗ, ಕಾರಂತರು “ನಾನು ನನ್ನ 25 ಮಕ್ಕಳನ್ನು ಕರಕೊಂಡು ಬರ್ತೀನಿ” ಅಂತ ಹೇಳಿ, ಭಾನುವಾರ ಬೆಳಿಗ್ಗೆ ಆರು ಗಂಟೆಗೆ ವಾಕಿಂಗ್‍ಗೆ ಕರಕೊಂಡು ಅವರ ಮನೆಗೆ ಹೋಗುತಿದ್ದರು. ಅಲ್ಲಿ ತಿಂಡಿಗೆ ಮುಂಚೆ ಹಾಡು ಹೇಳಿ ಅನ್ನೋರು. ಒಮ್ಮೆ ಹೀಗೆ ರಾಮೇಶ್ವರಿ ವರ್ಮಾ ಅವರ ಮನೆಗೆ ಹೋದಾಗ, ಕಾರಂತರು ಹಾಡ್ಲಿಕ್ಕೆ ಬರದಿರೋ ನನ್ನನ್ನ ನೋಡಿ “ಶಶಿಕಲಾ, ಆಹಾಹಾ ಮಲ್ಲಿಗೆ! ಹಾಡು ಶುರುಮಾಡು ಅನ್ನೋರು” ನನಗೆ ಪೇಚಾಟ ಶುರು ಆಗೋದು. ಕೊನೆಗೆ ಎಲ್ಲಾರು ಸೇರಿ ಹಾಡಿ, ಅವರ ಮನೆಯಲ್ಲಿ ಚೆನ್ನಾಗಿ ತಿಂಡಿ ತಿಂದು ಬರ್ತಿದ್ವೀ.

ಕಾರಂತರು ನಮಗೆ ಇಡೀ ಮೈಸೂರಿನ ಪರಿಚಯವಾಗಲೀ ಅಂತ, ನಮ್ಮನೆಲ್ಲಾ ವಾಕಿಂಗ್ ಕರಕೊಂಡು ಹೋಗೋರು. ಹಾಗೇ ಪ್ರತೀ ಶನಿವಾರ ವೀಕ್ಷಣೆಗೆ ಮತ್ತು ಧ್ವನಿ ಅಭ್ಯಾಸಕ್ಕಾಗಿ ಒಂದು ವಾರ ಬಸ್ ಸ್ಟ್ಯಾಂಡ್ ಇನ್ನೊಂದು ವಾರ ಕಾಲೇಜು ಕ್ಯಾಂಟೀನು ಹಾಗೇ ಸಂತೆ, ರೈಲ್ವೇ ಸ್ಟೇಷನ್, ಸರ್ಕಾರಿ ಆಸ್ಪತ್ರೆ, ಉದ್ಯಾನವನಕ್ಕೆ ಕರಕೊಂಡು ಹೋಗೋರು. ಬಸ್ ಸ್ಟ್ಯಾಂಡ್‍ನಲ್ಲಿ ನಮಗೆ, ಹೆಣ್ಣು ಮಕ್ಕಳಿಗೆ ಸ್ವಲ್ಪ ಕಷ್ಟನೇ ಆಯಿತು. ನಾವೆಲ್ಲ ಒಂದು ಕಡೆ ನಿಂತಾಗ ಜನ ಎಲ್ಲಾ ನಮ್ಮನ್ನೇ ನೋಡೊಕೆ ಶುರು ಮಾಡೋರು, ಇದು ಸ್ವಲ್ಪ ಮುಜುಗರಕ್ಕೆ ಈಡಾಗೋದು. ಹಾಗೇ ತರಕಾರಿ ಮಾರ್ಕೆಟ್‍ಗೆ ಹೊದಾಗ ತರಕಾರಿ ಮಾರೋ ಹೆಂಗಸರು “ಏನ್ ಬೇಕಮ್ಮಾ” ಅಂತ ಕೇಳೋರು “ಏನ್ ಇಲ್ಲಾ, ಸುಮ್ನೇ ನೋಡೋಕೆ ಬಂದೆ” ಅಂದ್ರೆ, ಮುಂದಕ್ಕೆ ಹೋಗಿ ಅನ್ನೋರು, ಇಂತಹ ಸನ್ನಿವೇಶಗಳು ಬಹಳಷ್ಟು ಇವೆ.

ಕಾರಂತರು ಕುವೆಂಪುರವರ `ಚಂದ್ರಹಾಸ’ ನಾಟಕ ಮಾಡಿಸಿದಾಗ ಕಾಡಿನರಾಜ `ಕುಳಿಂದಕ’ ಹುಲಿಯೊಡನೆ ಹೋರಾಡಿ, ಹುಲಿಯನ್ನ ಸಾಯಿಸಿದಾಗ, ಸತ್ತಂತಹ ಹುಲಿ ಎದ್ದು, ಕುಳಿಂದಕನ ಶೌರ್ಯವನ್ನ ಮೆಚ್ಚಿ “ಶಹಬ್ಬಾಶ್” ಎಂದು ಪ್ರಶಂಶಿಸಿ, ಬೆನ್ನು ತಟ್ಟಿ, ಅಂಗಾತ ಸತ್ತಂತೆ ಬಿದ್ದುಕೊಳ್ಳುತ್ತದೆ. ಇದು ಬಿ.ವಿ. ಕಾರಂತರ ಭಿನ್ನವಾದ ವಿಚಾರಧಾರೆ.

ನಾವು ಅಮೇರಿಕಾ ಪ್ರವಾಸ ಹೋದಾಗ, ಏನನ್ನೋ  ಖರೀದಿಸಲು ಮಾರುಕಟ್ಟೆಯಲ್ಲಿ ಕಾರಂತರೊಂದಿಗೆ ನಾವೆಲ್ಲರು ನಿಂತಿದ್ದೆವು. ಆಗ ಕಾರಂತರ ಕೈಯಲ್ಲಿ ಹಣವಿತ್ತು (ಡಾಲರ್ಸ್), ಒಬ್ಬ ಕಳ್ಳ ಅತಿ ವೇಗದಲ್ಲಿ ಕಾರಂತರ ಕೈಯಲ್ಲಿದ್ದ ಹಣವನ್ನ ಕಿತ್ತುಕೊಂಡು, ಅಷ್ಟೇ ತೀವ್ರವಾಗಿ ವೇಗದಿಂದ ಓಡತೊಡಗಿದ. ನಾವೆಲ್ಲ ಗಾಬರಿಯಿಂದ `ಕಳ್ಳ ಕಳ್ಳ’ ಅಂತಿದ್ರೆ, ಕಾರಂತರು ಮಾತ್ರ `ನೋಡಿ, ಎಷ್ಟು ಎನರ್ಜಿ ಇದೆ ಅವನಿಗೆ, ಎಷ್ಟು ವೇಗವಾಗಿ ಓಡ್ತಾ ಇದಾನೆ’ ಅಂತ, ಆತ ಓಡಿಹೋದ ದಾರಿಯನ್ನೇ ನೋಡುತ್ತ ನಿಂತರು.

ನಾವು ಜರ್ಮನಿಗೆ `ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ಸ್’ ನಾಟಕ ಪ್ರದರ್ಶನಕ್ಕೆ ಹೊರಟಾಗ, ನಮ್ಮ ವಿಮಾನವು ಒಂದು ಗಂಟೆಯ ಕಾಲ `ಫ್ರಾಂಕ್ ಫರ್ಟ್’ನಲ್ಲಿ  ನಿಲ್ಲಿಸಲಾಗಿತ್ತು. ಆ ವಿರಾಮದಲ್ಲಿ ನಾವೆಲ್ಲರೂ ಕಿಂದರಿ ಜೋಗಿಯನ್ನು ಹಿಂಬಾಲಿಸುವ ಮಕ್ಕಳಂತೆ, `ಕಾರಂತರು ಮುಂದೆ ಮುಂದೆ ನಾವೆಲ್ಲರೂ ಅವರ ಹಿಂದೆ ಹಿಂದೆ’….. ಅಲ್ಲಿ ಒಂದು ಕಡೆ ವಿವಿಧ ರೀತಿಯ ಹಣ್ಣುಗಳು, ಬ್ರೆಡ್-ಕೇಕುಗಳು ಮತ್ತು ಡ್ರೈ ಪ್ರ್ಯೂಟ್ಸ್ ಗಳನ್ನು ಇರಿಸಲಾಗಿತ್ತು. ನಾವೆಲ್ಲರೂ ಆಸೆಗಣ್ಣಿನಿಂದ ಅವನ್ನೆಲ್ಲಾ ನೋಡುತ್ತಾ ನಿಂತಿದ್ದೆವು. ಆಗ ಕಾರಂತರು ನಮ್ಮನ್ನೆಲ್ಲಾ ಹಿಂತಿರುಗಿ ನೋಡಿ `ಇದೆಲ್ಲಾ ನಿಮಗೆ, ಅಟ್ಯಾಕ್’ ಅಂದ್ರು. ಆಗ ನಾವೆಲ್ಲಾ ಎಷ್ಟೆಲ್ಲಾ ತೆಗೆದುಕೊಳ್ಳಬಹದೋ, ಅಷ್ಟನ್ನೂ ಕೈಗಳಲ್ಲಿ ತಗಂಡು, ನಮ್ಮ ವಿಮಾನದತ್ತ ಓಡಿದೆವು.

ಹೀಗೇ ಕಾರಂತರೊಂದಿಗಿನ ನೆನಪುಗಳಿಗೆ ಕೊನೆ ಮೊದಲಿಲ್ಲ… ಮೊಗೆದಷ್ಟು ಬರುತ್ತಲೇ ಇರುತ್ತದೆ ನೆನಪಿನ ಮಹಾಪೂರ… ಇದೇ ಸೆಪ್ಟೆಂಬರ್ 19 ಬಿ.ವಿ.ಕಾರಂತರ ಜನ್ಮದಿನ. ಅವರ ನೆನಪಿನಲ್ಲಿ, ಮೂಕನ ಮಕ್ಕಳು ನಾಟಕಕ್ಕೆ ಅವರೇ ಬರೆದ ಒಂದು ಹಾಡು ನನ್ನ ಬದುಕಿನುದ್ದಕ್ಕೂ ಕಾಡುತ್ತಲೇ ಇರುತ್ತದೆ..

ಹಣೆ ಬರಾ ಎಲ್ಲೈತೊ
ಈ ಬದುಕು ನಿಂದೈತೋ
ಹಣ್ಣು ಕಾಯಿ ಹಣ್ಣು ಬೀಜ
ಇದೇ ಬದುಕಿನ ಗುಟ್ಟೈತೊ, ಗುಟ್ಟೈತೆ

ಅಳಿಸಿ ಹಾಕಲಾ ಹಣೆಬರಹನ
ವಂಚಿಸಿ ಬಿಡಲಾ ಆ ವಿಧಾತನ
ಹಣೆ ಬರಾ ಎಲ್ಲೈತೊ
ಈ ಬದುಕು ನಿಂದೈತೋ

‍ಲೇಖಕರು Avadhi

September 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅದು ಒಂದ ಮನೀ ಮನಷ್ಯಾ ಇದ್ದಂಗ..

ಅದು ಒಂದ ಮನೀ ಮನಷ್ಯಾ ಇದ್ದಂಗ..

ಮಾಲಾ ಮ ಅಕ್ಕಿಶೆಟ್ಟಿ ಅದ ಮನೀಗೀ ಬರೋದು ಯಾರಿಗೂ ಇಷ್ಟ ಇರಲಿಲ್ಲ. ಬ್ಯಾಡ ಬ್ಯಾಡ ಅಂದ್ರು ಅವ, ಈ ಸಣ್ಣ ಹುಡುಗ ಹೇಳ್ಯಾನ ಅಂದ ತಂದಿದ್ದ....

ನಾವು ಕಾಫಿ ಮಂದಿ..

ನಾವು ಕಾಫಿ ಮಂದಿ..

ಸುಮಾ ವೀಣಾ, ಹಾಸನ  “ಮಲೆನಾಡಿನ ಅಮೃತ”  ಅಂದರೆ ಕಾಫಿನೇ ಅಲ್ವೆ !   ಕೊರೆಯುವ ಮೈಚಳಿ  ಬಿಡಿಸಲು  ...

ರೇಮಂಡ್  ಕ್ವೀನಿಯೊ, ಕ್ರಿಸ್ ಕ್ಲಾರ್ಕ್

ರೇಮಂಡ್ ಕ್ವೀನಿಯೊ, ಕ್ರಿಸ್ ಕ್ಲಾರ್ಕ್

ಆರ್. ವಿಜಯರಾಘವನ್ ಆಲ್ಬರ್ಟ್ ಕಮೂ ತನ್ನ ಸ್ನೇಹಿತ ಮೈಕೆಲ್ ಗ್ಯಾಲಿಮಾರ್ಡ್ ಅವರೊಂದಿಗೆ ಇರುವ ಒಂದು ಛಾಯಾಚಿತ್ರವಿದೆ. ಅವರಿಬ್ಬರೂ ಕಾರು...

2 ಪ್ರತಿಕ್ರಿಯೆಗಳು

  1. T S SHRAVANA KUMARI

    ನೆನಪಿನ ಅಲೆಗಳು ಸೊಗಸಾಗಿ ಮೂಡಿಬಂದಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: