ಎ ಲಾಟ್ ಕ್ಯಾನ್ ಹ್ಯಾಪನ್ ಓವರ್ ಕಾಫಿ….

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ

ನನಗೆ ಕ್ಯಾಪೆಚಿನೋ…ನಿಮಗೆ?
ನನಗೂ ಅದೇ ಇರಲಿ.
ಕಾಫಿ ಡೇ ಗೆ ಬಂದು ತುಂಬಾ ದಿನಗಳೇ ಆಗಿವೆ. ಕ್ಯಾಪೆಚಿನೋ ಬಿಟ್ಟರೆ ಬೇರೇನೂ ನೆನಪಾಗ್ತಾ ಇಲ್ಲ.
ಅದ್ಯಾಕೆ ಡ್ಯೂಡ್, ಕಾಪಿ ಲಾತೆ, ಐರಿಷ್ ಕಾಫಿ, ಕೋಲ್ಡ್ ಕಾಫಿ ಇದೆ. ವಾಲ್ನಟ್ ಕೇಕ್ ತಿನ್ಬಹ್ದು ದಪ್ಪ ಆಗಲ್ಲ. ಅವನು ನಕ್ಕಿದ್ದ.

ಸುತ್ತಲೂ ನೋಡಿದೆ. ಎಳೆಯ ಜೀವಗಳು. ಪಿಸುಮಾತುಗಳು, ದಂ ಎಳೆಯುವ ಹುಡುಗಿಯರು, ಗೆಳೆಯರ ಕೀಟಲೆಗೆ ಹುಸಿಮುನಿಸು ತೋರೋ ಬೆಡಗಿಯರು, ಕುರ್ಚಿಯ ಕೆಳಗೆ ಕಾಲಿನಲ್ಲಿ ಸರ್ಕಸ್ ಮಾಡೋ ಪ್ರೇಮಿಗಳು, ಅಲ್ಲಲ್ಲಿ ಲ್ಯಾಪ್ ಟಾಪ್ ನಲ್ಲಿ ಮುಳುಗಿ ಹೋಗಿರೋ ಸ್ವಲ್ಪ ಪ್ರಬುದ್ಧರು. ಎಳೆಯರ ಪ್ರಪಂಚ ನೋಡಿ ಎಷ್ಟು ದಿನ ಆಗ್ಹೋಯ್ತು. ನಾನು ಕುತೂಹಲದಿಂದ  ಅಲ್ಲಿ ಇಲ್ಲಿ ನೋಡುತ್ತಿದ್ದರೆ,
ವಾಟ್ ಡ್ಯೂಡ್ ಅದ್ಯಾಕೆ ಜನರನ್ನು ನೋಡ್ದೆ ಇದ್ದವ್ರ ಥರ ನೋಡ್ತೀದ್ದೀರಾ? ನಕ್ಕಿದ್ದ.

2oclockcoffeelr

ಅದ್ಯಾವುದೋ ಪ್ರಪಂಚದಲ್ಲಿ ಮುಳುಗಿಹೋದವಳು ಎದುರಿಗೆ ಕೂತವನನ್ನು ನೋಡಿದೆ. ಎಷ್ಟೊಂದು ಚೆನ್ನಾಗಿದ್ದಾನೆ. ತುಂಬಾ ಕೀಟಲೆ. ನನ್ನ ಮಗನೂ ಮುಂದೊಂದು ದಿನ ಇಷ್ಟೇ ಚೆಂದ ಆಗಬಹುದೇನೋ. ಯಾವಾಗ್ಲೂ ನಗ್ತಾ ಇರೋ ಇವನಲ್ಲಿ ಇಷ್ಟೊಂದು ಎನರ್ಜಿ ಎಲ್ಲಿಂದ ಬಂದಿರಬಹುದು..
ಏನೋ ಯೋಚಿಸ್ತಿದ್ದೀರಾ?
ಏನೂ ಇಲ್ಲ.
ಕಾಫಿ ಡೇಗೆ ಬಂದ್ರೆ ಕಾಫಿನ ಎಂಜಾಯ್ ಮಾಡ್ಬೇಕು.
ಸುಮ್ಮನೆ ಅಲ್ಲಿ ಇಲ್ಲಿ ಅವರಿವರನ್ನು ನೋಡ್ಕೊಂಡು ಕುತ್ಕೊಳ್ಳಕ್ಕಲ್ಲ. ಎದುರಿಗೆ  handsome ಆಗಿರೋ ನಾನಿದ್ದೀನಿ. ನನ್ನ ನೋಡಿ. ಅದು ಸರಿ ಯಾವಾಗ್ಲೂ ಮುಖ ಉಬ್ಬಿಸ್ಕೊಂಡೇ ಇರ್ತೀರಲ್ಲ. ನಂಗೊತ್ತು ನೀವು ಸೀನಿಯರ್ರು, ಒಂಚೂರು ಏನೋ ತಿಳ್ಕೊಂಡಿದ್ದೀರಾ. ಆದ್ರೆ ಹಂಗಂತ ಮುಖ ಗಂಟಿಕ್ಕಿಕ್ಕೊಂಡೇ ಇರ್ಬೇಕು ಅಂತೇನಾದ್ರೂ ಇದೆಯಾ.ಕಂಡಕಂಡವ್ರ ಮೇಲೆ ರೇಗ್ತೀರಲ್ಲಾ? ನಿಮಗೆ ಯಾರೂ ಫ್ರೆಂಡ್ಸೇ ಇಲ್ವಾ? ರಾಜ್ ಅವ್ರನ್ನ ಸ್ವಲ್ಪ ನೋಡ್ರಿ.ಗೊತ್ತಾಗತ್ತೆ.
ಆಯ್ತು ಏನೀಗ? ನಾನು ಮೌನ ಮುರಿದಿದ್ದೆ.
ರಾಜಣ್ಣ ಅಂದ್ರೆ ಯಾಕೆ ಅಷ್ಟಿಷ್ಟ?
ನೀವೆಲ್ಲಾ ಕನ್ನಡಿಗರಲ್ಲ ಬಿಡ್ರಿ. ರಾಜಣ್ಣ ಅವ್ರ ಪಿಚ್ಚರು ನೋಡಿ ಗೊತ್ತಾಗುತ್ತೆ. ಕಸ್ತೂರಿ ನಿವಾಸ ನೋಡಿದೀರಾ.
ಬಂಗಾರದ ಮನುಷ್ಯ ಕ್ಯಾಸೆಟ್ ತನ್ಕೊಡ್ತೀನಿ ಆಮೇಲೆ ನೋಡ್ರಿ..ಕೋಪದಿಂದ ಅವನ ಕೆನ್ನೆ ಕೆಂಪಗಾಗಿತ್ತು.
ತಪ್ಪಾಯ್ತು ಮಾರಾಯ. ನೀನು ಹೇಳಿದ್ಮೇಲೆ ನಾನೂ ರಾಜ್ ಸಿನೇಮಾ ನೋಡೋಕೆ ಶುರುಮಾಡಿದ್ದೀನಿ.
ಡಾ.ರಾಜ್ ಬಗ್ಗೆ ಅವನ ಗುಣಗಾನ ಮುಂದುವರಿದಿತ್ತು.ನಾನು ಕ್ಯಾಪೆಚಿನೋ ಹೀರತೊಡಗಿದ್ದೆ.

….ತುಂಬಾ ವರ್ಷವೇ ಆಗಿ ಹೋಯ್ತಲ್ಲ.ಹೀಗೆ ಇಷ್ಟೊಂದು ಸ್ವಚ್ಛಂದವಾಗಿ ಕುಳಿತು. ಅದೂ  ಮೊನ್ನೆ ಮೊನ್ನೆ ಪರಿಚಯವಾದ ನನಗಿಂತ ತುಂಬಾ ಚಿಕ್ಕ, ಮುದ್ದು ಮುದ್ದಾದ ಹುಡುಗನ ಜೊತೆಗೆ. ಒಳ್ಳೇ ಹುಡುಗ. ಏನೋ ಇದೆ ಇವನಲ್ಲಿ. ನಾನು ಕಲಿಯಬೇಕಾಗಿರೋದು ಕೂಡ ಇರಬಹುದೇನೋ. ಯಾವ ವಿಷಯ ಕೇಳಿದ್ರೂ
ಆ ಬಗ್ಗೆ ತಿಳ್ಕೊಂಡಿದ್ದಾನೆ. ಸದಾ ಕುತೂಹಲ, ಕಲಿಯಬೇಕೆನ್ನೋ, ತಿಳಿದುಕೊಳ್ಳ ಬೇಕೆನ್ನೋ ಹಪಾಹಪಿ. ದಿನೇ ದಿನೇ ಅಂತರ್ಮುಖಿಯಾಗುತ್ತಿದ್ದವಳನ್ನು ಹಾಗೆ ಈ ಪ್ರಪಂಚಕ್ಕೆ ಮತ್ತೆ ಪರಿಚಯಿಸಿದ್ದಾನಲ್ಲ.
ಡ್ಯೂಡ್, ನಾನೇ ಇವತ್ತು ನಿಮ್ಮನ್ನು ಡ್ರಾಪ್ ಮಾಡ್ತೀನಿ. ಪ್ಲೀಜ್.
ಇಲ್ಲ ಎನ್ನಲಾಗಲಿಲ್ಲ. ಕಾರು ಹತ್ತಿ ಕುಳಿತೆ.
ಇದೆನೋ.. ಬೇರೆಲ್ಲೋ ಹೋಗ್ತಿದ್ದೀಯಾ
ಸುಮ್ನಿರ್ರಿ. ಒಳ್ಳೇ ಅಜ್ಜಿ ಥರ ಇದ್ದೀರಾ. ನಿಮ್ಮನ್ನೆಲ್ಲಿ ಕರ್ಕೊಂಡು ಹೋಗ್ಲಿ ಎಂದವನ ಕಾರು ಗಣಪತಿ ದೇವಸ್ಥಾನದೆದುರು ಬಂದು ನಿಂತಿತ್ತು.
ನನಗೆ ದೇವರಲ್ಲಿ ನಂಬಿಕೆ ಇಲ್ಲ. ನೀನು ಹೋಗಿ ಬಾ.
ದೇವರೇನು ನಿಮ್ಮ ನಂಬಿಕೆನಾ ಡಿಪೆಂಡ್ ಆಗಿಲ್ಲ. ಸ್ವಲ್ಪ ಹೊತ್ತು ಕುತ್ಕೊಳ್ರಿರೀ. ಮನಸ್ಸಿಗೆ ನೆಮ್ಮದಿ ಇರುತ್ತೆ.
ಇಲ್ಲ ಎನ್ನಲಾಗಲಿಲ್ಲ. ಅವನೇ ಕಾಲು ತೊಳೆದುಕೊಳ್ಳುವಾಗ ಸುಮ್ಮನಿರೋದು ಸರಿಯಲ್ಲ ಅಂತ ನಾನೂ ಕಾಲು ತೊಳ್ಕೊಂಡೆ. ಚಿಕ್ಕ ದೇವಸ್ಥಾನ ಪ್ರಶಾಂತವಾಗಿತ್ತು.. ಒಂದೆರಡು ಮಂದಿ ಬಿಟ್ಟರೆ ಯಾರೂ ಇಲ್ಲ. ಆತ ಕಣ್ಮುಚ್ಚಿ ಕೂತಿದ್ದ. ನಾನು ಕಣ್ಮುಚ್ಚಿ ಕೂತೆ. ನಿಜಕ್ಕೂ ಸ್ವಲ್ಪ ನೆಮ್ಮದಿ ಎನಿಸಿತು. ಎಷ್ಟೋ ಹೊತ್ತು ಹಾಗೆ ಕುಂತಿದ್ದೆ. ನನ್ನೂರಿನ ಶಿವ ದೇವಾಲಯ ನೆನಪಾಯ್ತು. ಕಾಲೇಜು ದಿನಗಳು. ಬೇಜಾರಾದಾಗಲೆಲ್ಲ ಎಷ್ಟೋ ದಿನ ಒಬ್ಬಳೇ ಬಂದು ದೇವಸ್ಥಾನದಲ್ಲಿ ಕುಳಿತುಕೊಳ್ಳುತ್ತಿದ್ದೆ. ಮದ್ಯಾನ್ಹದ ಹೊತ್ತು ಒಬ್ಬಳೇ ಕುತ್ಕೊಳ್ಳೋದು  ಸರಿಯಲ್ಲ ಎಂದು ಅಮ್ಮ ಪದೇ ಪದೇ ಹೇಳಿದ ನಂತರವೂ ನಾನು ಕೇಳುತ್ತಿರಲಿಲ್ಲ. ಅಲ್ಲಿಂದಲೇ  ದೇವರೊಂದಿಗೆ ಒಬ್ಬಳೇ ಮಾತನಾಡೋದನ್ನು ಕಲಿತೆ. ಅಂದು ಶುರುವಾದ ಸಂಭಾಷಣೆ ಮುಂದೆ ಎಷ್ಟೋ ವರ್ಷ ಕಾಲ ಮುಂದುವರಿದಿತ್ತು. ಅಕ್ಕನನ್ನು ನೋಡಲು ಬಂದ ವರ  ಇಷ್ಟ ಇಲ್ಲ ಎಂದಾಗ, ನನ್ನ ಜೊತೆಯಿದ್ದವರು ಮೆಡಿಕಲ್ ಕಾಲೇಜು ಸೇರಿದಾಗ, ಮನಸ್ಸಿಗೆ ಹಿಡಿಸಿದ ಹುಡುಗ ನನ್ನೆಡೆ
ಕಣ್ಣೆತ್ತಿಯೂ ನೋಡದಿದ್ದಾಗಲೆಲ್ಲಾ ನಾನು ದೇವರೊಂದಿಗೆ ತಗಾದೆ ಎತ್ತಿದೆ. ಹಿಗ್ಗಾ ಮುಗ್ಗಾ ಬೈಯ್ದೆ. ಕನ್ನೀರಿತ್ತೆ ಕಲ್ಲು ಕರುಗುವುದಿಲ್ಲ ಎಂದು ಬೈಯ್ದುಕೊಂಡೇ ಹೊರಬಂದೆ. ಆ ಸಂಭಾಷಣೆ ಕೂಡ ಮರೆತೆ ಹೋಯ್ತಲ್ಲ. ಯಾಕೆ ಹೀಗಾಯ್ತು?

ಬರಲ್ಲ ಎಂದವರು ಇಲ್ಲೇ ಠಿಕಾಣಿ ಹೂಡೋ ಥರ ಕಾಣ್ತಾ ಇದ್ದೀರಿ. ಸಾಕು ಬನ್ರಿ.
ಮತ್ತೆ ಈ ಲೋಕಕ್ಕೆ ಮರಳಿದವಳು ಆಯ್ತು ಎಂದು ಹಿಂಬಾಲಿಸಿದ್ದೆ. ಕಾರು ನನ್ನ ಮನೆ ಕಡೆ ಸಾಗಿತ್ತು.
ಪತ್ರ ಬರೆಯಲಾ ಇಲ್ಲ ಚಿತ್ರ ಬಿಡಿಸಲಾ…
ಗೆಳತಿ..ಓ ಗೆಳತಿ…ಎಫ್ಎಂ ಹಾಡುಗಳಲ್ಲಿ ಆತ ತಲ್ಲೀನನಾಗಿದ್ದ. ನಾನೂ ಗುನುಗುನಿಸತೊಡಗಿದ್ದೆ.
ಒಂದು ಒಳ್ಳೇ ಹಾಡಿದೆ ಹಾಕ್ತೀನಿ ಕೇಳ್ತೀರಾ?
ಸರಿ
ನನ್ನ ನಿನ್ನ ಮನವು ಸೇರಿತು..ರಾಜ್ ಹಾಡು.
ಆತ ಮತ್ತೆ ತನ್ನ ತಾನೂ ಮರೆತುಬಿಟ್ಟಿದ್ದ.
ನನ್ನ ಮನೆ ಕೂಡ ಹತ್ತಿರ ಬರ್ತಾ ಇತ್ತು.
ಸರಿ ಇಲ್ಲೇ ಬಿಡು. ನಾನು ನಡ್ಕೊಂಡು ಹೋಗ್ತೀನಿ. ನಿನಗೆ ಕಾಫಿಗೆ ಕರೆಯುವಷ್ಟು ನಾನು ಇಂಡಿಪೆಂಡೆಂಟ್  ಅಲ್ಲ.
ಸರಿ..ನಮ್ಮನೆಗೆ ಬರಿವ್ರಂತೆ ನಮ್ಮಪ್ಪ ಒಳ್ಳೇ ಟೀ ಮಾಡ್ತಾರೆ. ನೀವು ಇಷ್ಟಪಟ್ರೆ ನನ್ನ ಕೈಯ್ಯಾರೆ ಟೀ ಕಾಯಿಸ್ತೀನಿ.
ಅಲ್ಲೇ ನಿಂತಿದ್ದೆ. ಕಾರು ಬಂದ ದಾರಿಯಲ್ಲಿ ಮತ್ತೆ ಹೊರಟಿತ್ತು.

ಒಂದು ವರ್ಷ ಆಗ್ತಾ ಇದೆ. ಒಂದೆರಡು ಸಾರಿ ಜೊತೆಯಲ್ಲಿ ಕೂತು ಕಾಫಿ ಕುಡಿದಿದ್ದೇನೆ. ಇಂದು ಕಾರಿನಲ್ಲಿ ಡ್ರಾಪ್ ಕೊಟ್ಟಿದ್ದಾನೆ. ನಾನು ಕರೆದರೆ ಓಡಿ ಬರುವ ಹುಡುಗ. ನನ್ನ ಮಾತನ್ನು ಮೀರದ, ನಾನು ಹಾಕಿದ ಗೆರೆ ದಾಟದ ಹುಡುಗ. ಹುಟ್ಟಿದ್ದು  ಗೋವಾದಲ್ಲಿ. ಓದಿದ್ದು  ಇಂಗ್ಲೀಷು,ಮಾತೃ ಭಾಷೆ ಮರಾಠಿ ಆದರೂ ಮನೆಯೆಲ್ಲ ಕನ್ನಡಮಯ. ಆಗರ್ಭ ಶ್ರೀಮಂತ ತಂದೆಯ ಒಬ್ಬನೇ ಮಗ. ಕಾಲ್ ಸೆಂಟರ್ ನಲ್ಲಿ ಕೆಲಸ. ಸಂಜೆ ಏರಿಯಾದ ಮಕ್ಕಳಿಗೆಲ್ಲಾ ಮನೆಪಾಠ. ಸುತ್ತಮುತ್ತಲೂ ಹೈಫೈ ಸಂಸ್ಕೃತಿಯ ಪರಿಸರದ ಮಧ್ಯೆ ಅಪ್ಪಟ ಕನ್ನಡವನ್ನು, ಡಾ.ರಾಜ್ ಅವ್ರನ್ನು ಕಣ್ಣಲ್ಲಿ ತುಂಬಿಕೊಂಡ ಹುಡುಗ, ನೆಮ್ಮದಿಯಿಂದ ನಡೆದದ್ದೇ ನೋಡಿಲ್ಲ. ಅಲ್ಲಿಂದಿಲ್ಲಿ ಇಲ್ಲಿಂದಿಲ್ಲಿ ಪುಟಿಯುವ ಉತ್ಸಾಹದ ಚಿಲುಮೆಗೆ ಆಯಾಸವೇ ಗೊತ್ತಿಲ್ಲ.

ಯೋಗಕ್ಷೇಮ ವಿಚಾರಿಸಿಕೊಳ್ಳೋಣ ಅಂತ ಪೋನ್ ಮಾಡಿದ್ರೆ, ವರಮಹಾಲಕ್ಷ್ಮೀ ಪೂಜೆ ಅಲ್ವಾ ಇವತ್ತು ನಾನೇ ಮನೆ ಕ್ಲೀನ್ ಮಾಡಿದ್ದೀನಿ. ಸಂಪು ಕೆಟ್ಟುಹೋಗಿದೆ. ರಿಪೇರಿ ಮಾಡ್ಬೇಕು.
ಕೆಲಸದವ್ರು ಇಲ್ವೇನೋ ಅಂದ್ರೆ…ಅವ್ರೂ ಇದ್ದಾರೆ. ನಾನೂ ಗಟ್ಟಿಮುಟ್ಟಾಗಿದೀನಿ ಡ್ಯೂಡ್.
ಮತ್ತೊಂದು ದಿನ ಎಲ್ಲಿದ್ದೀಯೋ ಎಂದರೆ ಪಂದರಾಪುರದಲ್ಲಿದ್ದೀನಿ..
ಅಲ್ಲೇನ್ಮಾಡ್ತಾ ಇದ್ದೀಯಾ?
ಅಪ್ಪ ಅಮ್ಮನ್ನ ಕರ್ಕೊಂಡು ಬಂದಿದ್ದೀನಿ.
ಇಬ್ರೂ ಗಟ್ಟಿಮುಟ್ಟಾಗಿದ್ದಾರಲ್ಲೋ ಹಾಸ್ಯಮಾಡಿದ್ರೆ ಹಂಗಂತ ಒಬ್ರಿಗೆ ಬಿಟ್ಬಿಡಕ್ಕಾಗತ್ತಾ…ಅಪ್ಪಅಮ್ಮನ ಸೇವೆ ಮಾಡ್ಬೇಕು ಗೊತ್ತಾಯ್ತಾ
ಶ್ರವಣಕುಮಾರ ಅಂತ ನಾನು ಗೇಲಿ ಮಾಡುತ್ತೇನೆ. ಇದರೊಂದಿಗೆ ನಿರಾಳವಾಗಿ ಸ್ವಲ್ಪ ನಗೋದನ್ನು ಕಲಿತಿದ್ದೇನೆ.

ನನ್ನೊಳಗಿನ ಕೊಂಚ ತಳಮಳವನ್ನು ತಟ್ಟನೆ ಪತ್ತೆ ಹಚ್ಚಿ ಬಿಡುವ ಹುಡುಗ ಒಳಗೊಳಗೇ ಕೊರಗ್ತಾ ಇದ್ದರೆ ಏನೂ ಪ್ರಯೋಜನ ಇಲ್ಲ. ಒಂಚೂರು ನಮ್ಮಂಥ ಪ್ರೆಂಡ್ಸ್ ಮುಂದೆ ಹೇಳ್ಕೊಳ್ಳಿ ನೋಡೋಣ. ಎಲ್ಲಾ ಸರಿ ಹೋಗುತ್ತೆ. ವಯಸ್ನಲ್ಲಿ ನಿಮಗಿಂತ ಚಿಕ್ಕೋನು. ಆದ್ರೆ ಬದುಕಿನ ಅನುಭವಕ್ಕೆ  ಕೊರತೆಯಿಲ್ಲ.
ಬುದ್ಧಿವಂತಿಕೆ, ಹಾಸ್ಯ, ಕರ್ತವ್ಯ ಪ್ರಜ್ಞೆ, ಬದುಕುವ ಛಲ ಎಲ್ಲವೂ ಮೇಳೈಸಿದ ಅವನಿಗೆ
ಎಷ್ಟೊಂದು ಸುಂದರವಾಗಿದ್ದೀಯಾ..ಗರ್ಲ್ ಫ್ರೆಂಡ್ಸ್ ಇಲ್ವೇನೋ? ಎಂದು ಕೇಳಿದರೆ
ನಾನಿಷ್ಟಪಟ್ಟವ್ಳು ಮತ್ಯಾರನ್ನೋ ಇಷ್ಟಪಟ್ಟಳು. ಈಗ ಅದರಲ್ಲಿ ಆಸಕ್ತಿ ಉಳಿದಿಲ್ಲ. ಮತ್ತೆ ಅವ್ರನ್ನೆಲ್ಲಾ  ಸಂಭಾಳಿಸೋಕೆ ಟೈಮಿಲ್ಲ.ಅಪ್ಪ ಅಮ್ಮ ಹೇಗೂ ಹುಡುಕ್ತಾರೆ. ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ..

ಆರಾಮಾಗಿ ಇರ್ಬಹುದಲ್ಲ. ಯಾಕೊ ಇಷ್ಟೊಂದು ಕಷ್ಟ ಪಡ್ತೀಯಾ
ನಮ್ಮಪ್ಪ ಸುಮ್ಮ ಸುಮ್ಮನೆ ಆಸ್ತಿ ಮಾಡಲಿಲ್ಲ. ತುಂಬಾ ಕಷ್ಟ ಪಟ್ಟಿದ್ದಾರೆ. ನಾನಾದ್ರೂ ಅಷ್ಟೇ. ಅಪ್ಪನ ಆಸ್ತಿ ನಂಬಿ ಬದುಕಲ್ಲ. ದುಡಿತೀನಿ.

ಎಲ್ಲೋ ಒಮ್ಮೊಮ್ಮೆ ಈ ಹುಡುಗ ಕೂಡ ಮೌನವಾಗಿರುವುದನ್ನು ಕಂಡಿದ್ದೇನೆ.
ಯಾಕೋ ಎಂದು ಕೇಳಿದ್ದೇನೆ.
ಯಾವುದೇ ಕಾರಣಕ್ಕೂ ನಾನು ನಮ್ಮಪ್ಪನ ಮುಂದೆ ಹಣಕ್ಕಾಗಿ ಕೈ ಚಾಚಬಾರದು ಅಂತ ಡಿಸೈಡ್ ಮಾಡಿದ್ದೇನೆ. ಅವರು ತುಂಬಾ ಒಳ್ಳೆಯವ್ರೇ. ಆದ್ರೆ ನಾನು ಸ್ವಾಭಿಮಾನಿ. ಏನೋ ಅಪರೂಪಕ್ಕೆ  ಫ್ರೆಂಡ್ಸ್ ಜೊತೆ ಟೂರ್ ಮಾಡಣ ಅಂಥಾ ದುಡ್ಡು ಕೇಳ್ದೆ. ದುಡ್ಕೊಂಡು ತಿನ್ನೋದು ಕಲಿ ಎಂದ್ರು ಅಂದಿನಿಂದ ಅವರಿಗೆ ಹಣ ಕೇಳ್ಬಾರದು ಅಂದುಕೊಂಡಿದ್ದೇನೆ.

ನಾನು ಜೋರಾಗಿ ನಕ್ಕಿದ್ದೆ.
ಅಯ್ಯೋ ಇಂಥ ಮಾತುಗಳನ್ನ ನಾವು ಹಗಲೆಲ್ಲ ಕೇಳ್ತಾ ಇದ್ವಿ. ನಮ್ಮ ಮೇಲಿನ ಪ್ರೀತಿಗೆ ಹೇಳಿರ್ತಾರೆ. ಮಕ್ಕಳು ಹಾಳಾಗಿ ಹೋಗ್ಬಾರ್ದು. ಸ್ವಲ್ಪ ಜವಾಬ್ದಾರಿ ಇರಲಿ ಅಂಥ.
ನಾನೆಂದು ಬೇಜವಾಬ್ದಾರಿಯಿಂದ ವರ್ತಿಸಿಲ್ಲ. ನಂತರ ಅವರು ಹಣ ಕೋಡೋಕೆ ಬಂದ್ರು. ಪುಸಲಾಯಿಸಿದ್ರು. ನಾನು ತೊಗೊಳ್ಳಲಿಲ್ಲ. ಹಂಗಂತ ಅವರ ಮೇಲೆ ಬೇಜಾರಿಲ್ಲ. ನಮ್ಮಪ್ಪ ಹಂಗೆ ಯಾವಾಗ ಅವರ ಮನಸ್ಸು ಏನಾಗುತ್ತೋ ಗೊತ್ತಾಗಲ್ಲ. ಒಂದೊಂದು ದಿನ ಇದ್ದಕ್ಕಿದ್ದಂತೆ ನನ್ನ ಮೇಲೆ ಪ್ರೀತಿ ಉಕ್ಕಿ ಬಿಡುತ್ತೆ. ಏನೇನೋ ಕೊಡಿಸ್ತಾರೆ. ನಾನು ಎಲ್ಲಿ ಹೋಗ್ತೀನಿ ಎಲ್ಲಿ ಬರ್ತೀನಿ ಅಂತ ಚೆಕ್ ಮಾಡ್ತಾನೆ ಇರ್ತಾರೆ..ಎಂದು ನಗುವಾಗ ಕೆನ್ನೆ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ.

ತಂದೆ-ತಾಯಿಯ ಪ್ರೀತಿ ಅವರ ನೋವು ಮಕ್ಕಳ ಬಗ್ಗೆ ಇರೋ ಕಾಳಜಿ,ಅವರ ಸಿಟ್ಟು, ಹಂಗಿನ ಮಾತುಗಳು  ಇವೆಲ್ಲವನ್ನು ಬಿಟ್ಟು ಬದುಕುವುದೇ ಕಷ್ಟ. ಅವೆಲ್ಲಾ ಇರ್ಲೇಬೇಕು ಎಂದು ನಾನು ಹೇಳಿದರೆ
ನಿಜ ಅಲ್ವಾ. ಅದ್ಕೆ ನಮ್ಮಪ್ಪ ಏನೆಂದ್ರೂ ನಂಗೆ ಕೋಪ ಇಲ್ಲ. ಆದ್ರೆ ಯಾವ್ದೆ ಕಾರಣಕ್ಕೂ ಅವರು ದುಡಿದಿದ್ದನ್ನ ಖರ್ಚು ಮಾಡ್ಬಾರ್ದು ಅಂದ್ಕೊಂಡಿದ್ದೀನಿ. ಅಪ್ಪನ ಮಗ ನಾನು. ಮುಂದೆ ಒಂದಲ್ಲ ಒಂದು ದಿನ ಏನಾದ್ರೂ ಅವರು ಮೆಚ್ಕೊಳ್ಳೋ ಥರ ಮಾಡೇ ಮಾಡ್ತೀನಿ. ನೀವು ನೋಡ್ತಾ ಇರಿ. ಸರಿ ನೀವು ಕೊನೆವರೆಗೂ ನನ್ನ ಫ್ರೆಂಡ್ ಆಗಿರ್ತೀರಿ ಅಲ್ವಾ ಇದ್ದಕ್ಕಿದ್ದಂತೆ ಅವನ ಪ್ರಶ್ನೆಗೆ ಬೆಚ್ಚಿ  ಬಿದ್ದು ಆಯ್ತು ಎನ್ನುತ್ತೇನೆ.
ಕೊನೆವರೆಗೂ ಎಂದು ಹೇಳಲು ನಾಲಿಗೆ ಹೊರಡುವುದಿಲ್ಲ.

ಕಾಲೇಜಿನಲ್ಲಿ, ಯುನಿವರ್ಸಿಟಿಯಲ್ಲಿ  ಒಂದಿಬ್ಬರು ಹೀಗೆ ಇದೇ ರೀತಿ ಕೇಳಿದ ಪ್ರಶ್ನೆಗೆ ನಾನು ಏನು ಉತ್ತರಿಸಿದ್ದೆ ಅನ್ನೋದು ಕೂಡ ಮರೆತು ಹೋಗಿದೆ. ಅಂಥದ್ದರಲ್ಲಿ ಇವನಿಗೇನು ಹೇಳಲಿ.
ಆದರೂ ಅವನಿದ್ದಷ್ಟು ದಿನ ನನಗಾಗುವಷ್ಟು ದಿನ ಒಳ್ಳೆಯ ಫ್ರೆಂಡ್ ಆಗಿಯೇ ಇರೋಣ ಎಂದುಕೊಳ್ಳುತ್ತೇನೆ.
ಯಾಕೆಂದ್ರೆ  ಇವನೊಟ್ಟಿಗೆ ಮಾತಾಡ್ತಾ ಮಾತಾಡ್ತಾ ನನ್ನ ವಯಸ್ಸು ಕಡಿಮೆಯಾಗುತ್ತಿದೆ. ಇವನ ಥರವೇ ಯಾವಾಗ್ಲೂ ನಗ್ತಾ ಇರುತ್ತಿದ್ದ ನಾನು ಎಂದು ಗಂಭೀರಳಾಗಿ ಬಿಟ್ಟೆ ಎಂಬುದು ನೆನಪಾಗ್ತಾ ಇಲ್ಲ. ಇವನ ಸಹವಾಸದಲ್ಲಿ ಈಗೀಗ ನಾನು ಮುಖಗಂಟಿಕ್ಕುವುದನ್ನು ಬಿಟ್ಟುಬಿಟ್ಟಿದ್ದೇನೆ. ರೇಗೋದು ಕಡಿಮೆಯಾಗಿದೆ. ಹಿಂದಿ, ಇಂಗ್ಲೀಷ್ ಸಿನೇಮಾಗಳಿಗೆ ಅಂಟಿಕೊಂಡಿದ್ದ ನಾನೀಗ ಬಿಡುವು ಮಾಡಿಕೊಂಡು ರಾಜ್ ಸಿನೇಮಾ ನೋಡ್ತಾ ಇದ್ದೀನಿ. ಎಲ್ಲದಕ್ಕೂ ಆಳುಗಳ ಮೇಲೆ ಡಿಪೆಂಡ್  ಆಗೋದನ್ನು ಸ್ವಲ್ಪ ಬಿಡ್ಬೇಕು. ಈಗಿನ ಯುಥ್ಸ್  ಬೇಜವಾಬ್ದಾರಿಯಿಂದ ವರ್ತಿಸುತ್ತೆ ಎಂದು ಹೇಳುವವರಿಗೆ ಸಪೋರ್ಟ್ ಮಾಡೋ ಮೊದಲು ಸ್ವಲ್ಪ ಯೋಚಿಸ್ಬೇಕು.

ಯಾಕೋ ಈಗೀಗ ಕಾಫಿ ಡೇ ಹೆಚ್ಚು ಇಷ್ಟ ಆಗ್ತಾ ಇದೆ.
ನಿಜ.ಎ ಲಾಟ್ ಕ್ಯಾನ್ ಹ್ಯಾಪನ್ ಓವರ್ ಕಾಫಿ….

ಕನ್ನಡಪ್ರಭ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನ

‍ಲೇಖಕರು avadhi

November 24, 2008

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: