ಐದು ದಶಕಗಳ ಹಿಂದೆ

ಶ್ಯಾಮಲಾ ಮಾಧವ

ಕೋವಿಡ್ ಸಂಕಷ್ಟದ ಈ ದುಷ್ಕರ ಕಾಲದಲ್ಲಿ ಐದು ದಶಕಗಳ ಹಿಂದಿನ ದುರ್ಭರ ದಿನಗಳು ನೆನಪಾಗುತ್ತಿವೆ. ರೇಬಿಸ್ ಹಾಗೂ ಟೆಟನಸ್ ಬಗ್ಗೆ ನಾವು ಕೇಳಿದ್ದು, ಓದಿದ್ದು ಅದೇ ಕಾಲದಲ್ಲಿ. 

ವಿಶು ಕುಮಾರ್ ಅವರ ‘ಮದರ್’ ಕಾದಂಬರಿಯಲ್ಲಿ ಭಯಾನಕ ಧನುರ್ವಾಯು ಬಗ್ಗೆ ಓದಿದ ಹೊಸ ಅನುಭವ. ಮಂಗಳೂರ ಮಾಧವ ವಿಲಾಸದ ಅಜ್ಜಿ, ನಮ್ಮಮ್ಮನ ಸೋದರತ್ತೆ ತೀರಿಕೊಂಡು ಮೂರು ತಿಂಗಳಾಗಿತ್ತು. ಅವರ ಮಗ ಡಾ. ಅಮೃತಂಕಲ್ ಮಗ ಸುರೇಶ ಟೆಟನಸ್ ಬಾಧಿತನಾಗಿ ಆಸ್ಪತ್ರೆ ಸೇರಿದ್ದ.

ಅಂಗಳದಲ್ಲಾಡುವಾಗ ತೆಂಗಿನ ಮರದ ಬುಡಕ್ಕೆ ಬಿದ್ದ ಬಾಲ್ ಎತ್ತಿಕೊಳ್ಳಲು ಹೋದಾಗ ಮಣ್ಣಲ್ಲಿ ಹುದುಗಿದ್ದ ತೆಂಗಿನ ಸೋಗೆಕಡ್ಡಿಯೊಂದು ಅಂಗಾಲು ಹಿಮ್ಮಡಿಗೆ ಚುಚ್ಚಿದ್ದು, ತಿಂಗಳ ನಂತರ ಟೆಟನಸ್ ಗೆ ತಿರುಗಿತ್ತು. ಜ್ವರ ದೊಡನೆ ಲಾಕ್ ಜಾ ಆಗಿ ನೀರು ಕುಡಿಯಲಾಗದಾಗ, ತಂದೆ ಡಾ.ಅಮೃತಂಕಲ್ ಹಾಗೂ ಲೇನ್ ಕಾಟೇಜ್ ನ ಅಂಕಲ್, ಡಾ.ರಾಧಾಕೃಷ್ಣ ಎಚ್ಚೆತ್ತು ಆಸ್ಪತ್ರೆಗೆ ಸೇರಿಸಿದ್ದರು.

ನಮ್ಮಮ್ಮ  ಆಸ್ಪತ್ರೆಯಲ್ಲಿ ಸುರೇಶನ ಬಳಿಯೇ ಇದ್ದುದರಿಂದ, ಡಾ. ರಾಧಂಕಲ್ ಮನೆಗೆ ಬಂದು ಅಮ್ಮನ ಸಂಪರ್ಕಕ್ಕೆ ಬರುವವರೆಂದು ನಮಗೆ ಮಕ್ಕಳೆಲ್ಲರಿಗೂ ಟೆಟನಸ್ ಇಂಜೆಕ್ಷನ್ ಕೊಟ್ಟಿದ್ದರು.‌ ಜ್ವರ, ನೋವಿನಿಂದ ನಾವು ದಿನವಿಡೀ ಮಲಗಿದ್ದೆವು.

ಸುರೇಶ್ ತೀರಿಕೊಂಡಾಗ ಬಿಲ್ಲಿನಂತೆ ಬಾಗಿದ್ದ ಆ ದೇಹವನ್ನು ಪಾಲಿಥಿನ್ ಬ್ಯಾಗ್ ನಲ್ಲಿ ಮುಚ್ಚಿ, ತೆರೆಯದೇ ಕ್ರಿಯೇಷನ್ ನಡೆಸಲಾಯಿತು ಎಂದು ಅಮ್ಮ ಹೇಳಿದ್ರು.

ಸುರೇಶ್ ತೀರಿಕೊಂಡು ತಿಂಗಳೂ ಆಗಿರಲಿಲ್ಲ. ಲೇನ್ ಕಾಟೇಜ್ ಸೀತಮ್ಮಾಂಟಿಗೆ ನೀರು ಕುಡಿಯಲಾಗುತ್ತಿಲ್ಲ ಎಂಬ ಕಹಿವಾರ್ತೆ ಬಂತು. ತಿಂಗಳ ಹಿಂದೆ ಮನೆಯ ಪುಟ್ಟ ನಾಯಿಮರಿ ಆಂಟಿಯ ಕಾಲಿಗೆ ಕಚ್ಚಿ ಬಿಟ್ಟಿತ್ತು. ಮನೆಯವರಿಗೇ ಕಚ್ಚುವ ನಾಯಿ ಯಾಕೆ ಬೇಕು ಎಂದು ಅಜ್ಜಿ ನಾಯಿ ಮರಿಯನ್ನು ಕಳುಹಿಸಿ ಬಿಟ್ಟಿದ್ದರು. ಮನೆಯಲ್ಲೇ ಇರುವ ಡಾ .ರಾಧಂಕಲ್, ನಾಯಿ ಮರಿ ಕಚ್ಚಿದ್ದಕ್ಕೆ ಒಂದು ಇಂಜೆಕ್ಷನ್ ಕೊಟ್ಟಿದ್ದರು. 

ತಿಂಗಳಾಗುವಾಗ ಸೀತಮ್ಮಾಂಟಿಗೆ ನೀರು ಕುಡಿಯಲೆಂದು ಲೋಟ ಎತ್ತಿದರೂ ಕುಡಿಯಲಾಗದಾಗ, ಅಂಕಲ್ ಎಚ್ಚೆತ್ತು ಆಸ್ಪತ್ರೆಗೆ ಸೇರಿಸಿದರು. ಆಗಲೂ ಆಂಟಿಯ ಜೊತೆಗಿದ್ದವರು, ನಮ್ಮಮ್ಮ. ಅಮ್ಮನಿಗೂ ಹೊಕ್ಕುಳ ಸುತ್ತಾ ಹದಿನಾಲ್ಕು ಇಂಜೆಕ್ಷನ್ ಚುಚ್ಚಲಾಯ್ತು.. 

ಸೀತಮ್ಮಾಂಟಿ ಗಂಡನನ್ನು ಕಳಕೊಂಡು ಏಳು ಮಕ್ಕಳೊಡನೆ ತವರು ಮನೆ ಲೇನ್ ಕಾಟೇಜ್ ಸೇರಿಕೊಂಡು ವರ್ಷ ಕಳೆದಿತ್ತಷ್ಟೇ. ಚಿಕ್ಕ ಮಗು ಪದ್ದು ಒಂದೂವರೆ ವರ್ಷದ ಮುದ್ದಾದ ಪುಟ್ಟ ಕಂದ! ಹಿರಿಯ ಸಂತೋಷಣ್ಣನಿಗೆ ನೆರೆಯ ಕಸಿನ್ಸ್ ಸಂಗ!  ಹಿರಿಯಕ್ಕ ರೇಣುಕಕ್ಕ. ನಂತರದ ರಾಜೇಶ್ವರಿ, ಶಶಿ ನನ್ನ ಓರಗೆಯವರು. ಸುಮಂಗಳಾ, ಸುಫಲಾ ಚಿಕ್ಕವರು. 

ಮನೆಯಲ್ಲಿ ಅವಿವಾಹಿತ ಡಾ. ರಾಧಂಕಲ್, ಅವರ ತಮ್ಮ ರಮೇಶ್ ಮಾಮ, ಪೊನ್ನಮ್ಮಾಂಟಿ, ಮಕ್ಕಳು,  ಅಜ್ಜಿ, ಇದ್ದು, ಈಗ ಸೀತಮ್ಮಾಂಟಿ ಕುಟುಂಬವೂ ಸೇರಿಕೊಂಡಿತ್ತು. ಅಂಗಳದೆದುರಿನ ಔಟ್ ಹೌಸ್ ನಲ್ಲಿ ಮಗಳು ಯಮುನಾಂಟಿಯ ದೊಡ್ಡ ಕುಟುಂಬವಿತ್ತು. ಮೂವರು ಹೆಣ್ಮಕ್ಕಳಿಗೆ ಮದುವೆಯಾಗಿ ಹೋಗಿದ್ದರೆ, ಉಳಿದ ಎಂಟು ಮಕ್ಕಳು, ಸುಸಂಸ್ಕೃತ ಹೆಣ್ಮಕ್ಕಳೂ, ಗಂಡು ಮಕ್ಕಳೂ ಅಲ್ಲಿ ನೆಲೆಯಾಗಿದ್ದರು.

ಮುಖ್ಯ ಮನೆಯ ಚಾವಡಿ ಗೋಡೆಯ ಮೇಲೆ ಡಾ. ರಾಧಂಕಲ್ ನ ಹಂಟಿಂಗ್ ಸ್ಕಿಲ್ ಗೆ ಸಾಕ್ಷಿಯಾಗಿ ಕರಡಿ, ಜಿಂಕೆ, ಕಾಡುಹಂದಿ, ಮುಳ್ಳುಹಂದಿಗಳ ಸ್ಟಫ್ ಮಾಡಿದ ತಲೆಗಳು ತೂಗುತ್ತಿದ್ದರೆ, ಕೆಳಗೆ ಟೀಪಾಯ್ ಮೇಲೆ ಹುಲಿ ಚರ್ಮವಿತ್ತು. ರಜಾ ದಿನಗಳಲ್ಲಿ ರಾಧಂಕಲ್ ಗನ್ ಹಿಡಿದುಕೊಂಡು ನಮ್ಮ ಗುಡ್ಡೆ ಮನೆ ಗದ್ದೆಗಳಲ್ಲಿ ಕೊಕ್ಕರೆ, ಪುಂಡದ ಕೋಳಿಗಳನ್ನು ಬೇಟೆಯಾಡಲು ಬರುತ್ತಿದ್ದರು.

ಸೀತಮ್ಮಾಂಟಿ ಆಸ್ಪತ್ರೆ ಬೆಡ್ ನಲ್ಲಿ ಕೊನೆಯ ವರೆಗೂ ಭಜನೆ ಹಾಡುಗಳನ್ನು ಹಾಡುತ್ತಾ, ತುಳಸೀ ಕೀರ್ತನೆ ಹಾಡಲೆತ್ನಿಸುತ್ತಾ ಇದ್ದರೆಂದೂ, ನಡು ನಡುವೆ ಅವರ ಗಂಟಲಿನಿಂದ ನಾಯಿಯ ಮುಲುಗು ಧ್ವನಿಸುತ್ತಿತ್ತೆಂದೂ ಅಮ್ಮ ಹೇಳುತ್ತಿದ್ದರು.

ಸುರೇಶ ತೀರಿಕೊಂಡು ಸರಿಯಾಗಿ ಒಂದು ತಿಂಗಳಿಗೆ ಸೀತಮ್ಮಾಂಟಿಯೂ ಕೊನೆಯುಸಿರೆಳೆದರು.

ಮತ್ತೆ ಕೆಲ ಸಮಯದಲ್ಲೇ ಬೆಸೆಂಟ್ ಶಾಲೆಯಲ್ಲಿ ನನ್ನ ಸಾಯನ್ಸ್, ಗಣಿತ ಟೀಚರ್ ಆಗಿದ್ದು, ರೇಬಿಸ್ ಬಗ್ಗೆ ನಮಗೆ ಪಾಠ ಮಾಡಿದ್ದ ಎ. ಸುಂದರಿ ಟೀಚರ್, ಮನೆಯ ನಾಯಿ ಮರಿಯ ಕಡಿತದಿಂದ ರೇಬಿಸ್ ಆಗಿ ತೀರಿಕೊಂಡಿದ್ದರು.

ಕೊಡಿಯಾಲ ಗುತ್ತಿನ ರೈ ಅವರು, ಕುದುರೆ ಲದ್ದಿ ತಗುಲಿದ ಕೈಗೆ ಕಾರಿನ ಕಿಟಿಕಿ ಗಾಜು ತಗುಲಿ ಒಂದೇ ದಿನದಲ್ಲಿ ಟೆಟನಸ್ ಆಗಿ ತೀರಿಕೊಂಡಿದ್ದರು.

‍ಲೇಖಕರು Avadhi

December 2, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: