ಬಿ ವಿ ಭಾರತಿ
ಸಾವಿನ ಮನೆಯಲ್ಲಿ
ದೇಹವಿದ್ದ ತಾವಲ್ಲಿ
ಒಂಟಿ ಬತ್ತಿಯ ಹಣತೆ
ಸಣ್ಣಗೆ ಉರಿಯುತ್ತದೆ,
ಹಗಲಿನಲ್ಲೂ, ರಾತ್ರಿಯಲ್ಲೂ
ಸಾವನ್ನು ಮರೆಯಲು ಬಿಡದೇ
ಎಣ್ಣೆಯೂಡುತ್ತಲೇ ಇರಬೇಕು,
ಬದುಕಿಗಾಗುವುದು ಹಾಗಿರಲಿ
ನಡುರಾತ್ರಿಯಲ್ಲಿ ಎಚ್ಚರವಾದರೆ
ಪರಿಚಿತ ಮನೆಯ ಬಚ್ಚಲಿಗೂ
ಹಾದಿ ತೋರದ ತಬ್ಬಲಿ ಮಬ್ಬು ಬೆಳಕದು
ಆದರೂ ದೀಪವಿರಬೇಕು ನೆಪಕ್ಕೆ
ನಿಷ್ಕರುಣಿ ಸಾವಷ್ಟೇ ಸತ್ಯ,
ಹತ್ತನೆಯ ದಿನಕ್ಕದು ಎದೆಗೆ ವೇದ್ಯ-
ವಾದಾಗ ಒಂಟಿ ಬತ್ತಿಗೆ ಮುಕ್ತಿ,
ಕೊನೆಗೆ ಉಳಿವುದು ಅದೇ
ಆತ್ಮದ ಅಮರತ್ವದ ಸುಳ್ಳು,
ಪುನರ್ಜನ್ಮದ ಕನವರಿಕೆ
ಜೊತೆಗಿಷ್ಟು ಹಾಗೆ ಮಾಡಿದ್ದರೆ, ಹೀಗಾಗಿದ್ದರೆ
ಎನುವ ಹಳಹಳಿಕೆ ….
ಸಾವೆಂದರೆ ಕತ್ತಲು
ಸಾವೆಂದರೆ ಪ್ರಶ್ನೆ
ಸಾವೆಂದರೆ ಸಾವು,
ಸಾವೆಂದರೆ ಹೊಸತರ ಹುಟ್ಟು ಕೂಡಾ ಇರಬಹುದೇ ….?
ನಿಜ ಕಣೇ, ಕೆಲವು ಸಾವುಗಳನ್ನ ಮರೆಯುವುದು ಕಷ್ಟ ಮಾತ್ರವಲ್ಲ, ಸಾಧ್ಯವೇ ಇಲ್ಲ
ಅಲ್ವಾ 🙁 🙁
🙁