ಒಂದಾದ ರೈತ ಬಣಗಳ ಎದುರು…

gali2.gif 

“ಗಾಳಿ ಬೆಳಕು”

ನಟರಾಜ್ ಹುಳಿಯಾರ್

ಹಿಂದೆಲ್ಲ ರೈತ ಚಳುವಳಿಯಲ್ಲಿ ಒಡಕು ಉಂಟಾದಾಗಲೆಲ್ಲ ರೈತ ನಾಯಕರಾದ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು “ಇದು ರಾಜಕೀಯ ಕುಚೇಷ್ಟೆಯಿಂದ ನಡೆಯುತಿದೆ” ಎನ್ನುತ್ತಿದ್ದರು. ತಮ್ಮ ಜೀವಿತದ ಕೊನೆಯ ದಿನಗಳಲ್ಲಿ ಉದಯ ಟೀವಿಯ ಶೈಲಜಾ ಸಂತೋಷ್ ಅವರಿಗೆ ಕೊಟ್ಟ ಸಂದರ್ಶನದಲ್ಲಿ ಎಂ.ಡಿ.ಎನ್. ಹೇಳಿದ್ದರು. “ರೈತ ಚಳುವಳಿಯ ಈ ೨೨ ವರ್ಷದಲ್ಲಿ ರಾಜಕೀಯ ಕುಚೇಷ್ಟೆಗಳು ನಾಲ್ಕು ಸಲ ನಡೆದಿದೆ. ಅದೂ ಪ್ರತೀ ಚುನಾವಣೆಯಲ್ಲಿ. ಈ ಸಲ ಐದನೇ ಕುಚೇಷ್ಟೆ ನಡೆಯಬಹುದು. ನಾನು ನಿರೀಕ್ಷೆ ಮಾಡ್ತಾನೇ ಇದೀನಿ… ಚಳುವಳಿಗೆ ಈ ಕುಚೇಷ್ಟೆಗಳ ಅನುಭವವೂ ಆಗಬೇಕು.”

ನಂಜುಂಡಸ್ವಾಮಿಯವರು ರೈತ ಚಳುವಳಿಯನ್ನು ಕಟ್ಟಿದ ದೊಡ್ಡ ನಾಯಕರಾದ್ದರಿಂದ ಅವರಿಗೆ ಹೀಗೆನ್ನಿಸಿದ್ದು ಸಹಜವಿರಬಹುದು. ಆದರೆ ಅವರ ಅನಿಸಿಕೆಗಿಂತ ಕೊಂಚ ಭಿನ್ನವಾಗಿ ರೈತ ಸಂಘದ ಬಣಗಳು ಈ ಸಲದ ಚುನಾವಣೆಗೆ ಮುನ್ನ ಒಂದಾಗಿವೆ. ಈ ಬಗ್ಗೆ ಕೆಲವರು ಆಶಾವಾದದಿಂದ, ಇನ್ನು ಕೆಲವರು ಸಿನಿಕತನದಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಎರಡು ದಶಕಗಳಷ್ಟು ದೀರ್ಘಕಾಲ ಕರ್ನಾಟಕದ ಇಪ್ಪತ್ತು ಸಾವಿರ ಹಳ್ಳಿಗಳನ್ನಾದರೂ ತಲುಪಿದ ರೈತ ಚಳುವಳಿಯ ಬಣಗಳ ನಾಯಕರು ಮತ್ತೆ ಒಂದಾದಾಗ ನಮ್ಮ ಮಾಧ್ಯಮಗಳಾಗಲೀ ನಮ್ಮ ಬುದ್ಧಿಜೀವಿಗಳಾಗಲೀ ಈ ಬಗ್ಗೆ ಉತ್ಸಾಹದ ಪ್ರತಿಕ್ರಿಯೆ ತೋರದಿರುವುದು ವಿಚಿತ್ರವಾಗಿದೆ.

ಮೂರು ವರ್ಷಗಳ ಕೆಳಗೆ ಪ್ರೊ. ಎಂ.ಡಿ.ನಂಜುಂಡಸ್ವಾಮಿಯವರು ತೀರಿಕೊಂಡ ದುಃಖದ ಸನ್ನಿವೇಶದಲ್ಲಿ ರೈತ ಸಂಘದ ಎರಡು ಬಣಗಳು ಹತ್ತಿರವಾಗುವ ಸೂಚನೆಗಳು ಕಾಣುತ್ತಿದ್ದವು. “ಪ್ರೊಫೆಸರ್ ಗೆ ಶ್ರದ್ಧಾಂಜಲಿ ಸಲ್ಲಿಸುವುದೆಂದರೆ ನಾವೆಲ್ಲ ಒಂದಾಗುವುದು” ಎಂದು ರೈತ ನಾಯಕರಾದ ಕಡಿದಾಳು ಶಾಮಣ್ಣನವರು ಅವತ್ತು ಎಲ್ಲರ ಮನ ಮುಟ್ಟುವಂತೆ ಹೇಳಿದ್ದರು. ಬಹುತೇಕ ನಾಯಕರು ಅವತ್ತು ಆ ಮಾತನ್ನು ಒಪ್ಪಿದಂತಿತ್ತು.

ಆದರೆ ಮನುಷ್ಯನ ಮನಸ್ಸು ದುಃಖದಲ್ಲಿ, ಸಂತೃಪ್ತಿಯ ಗಳಿಗೆಯಲ್ಲಿ ಹಾಗೂ ಇವೆರಡೂ ಇಲ್ಲದ ಸಾಧಾರಣ ಮನಃಸ್ಥಿತಿಯಲ್ಲಿ ಒಂದೊಂದು ಬಗೆಯಲ್ಲಿ ವರ್ತಿಸುತ್ತಿರುತ್ತದೆ ಎಂಬ ಸತ್ಯ ಎಲ್ಲರಿಗೂ ಗೊತ್ತಿರುತ್ತದೆ. ನಾಯಕನೊಬ್ಬನ ನಿರ್ಗಮನದ ಗಳಿಗೆಯಲ್ಲಿ ಅವನ ಅನುಯಾಯಿಗಳಲ್ಲಿ ಬಗೆಬಗೆಯ ಅಳುಕುಗಳು ಹುಟ್ಟುತ್ತವೆ. ನಮ್ಮ ನಾಯಕ ನಮಗಾಗಿ ದಣಿದು ಸವೆದವನು; ಜಗದ ದುಃಖಕ್ಕೆ ಪರಿಹಾರ ಹುಡುಕಲೆತ್ನಿಸಿ ನಮ್ಮ ನಾಯಕ ತೀರಿಕೊಂಡಿದ್ದಾನೆ ಎಂಬ ಪಾಪಪ್ರಜ್ಞೆ ಈ ನಾಯಕನ ಸೂಕ್ಷ್ಮ ಅನುಯಾಯಿಗಳಲ್ಲಿ ಕೆಲವರನ್ನಾದರೂ ಕಾಡುತ್ತದೆ. ಜೊತೆಗೆ, ನಾಯಕನಿಲ್ಲದ ಶೂನ್ಯವು ದಿಗ್ಭ್ರಮೆ ಹುಟ್ಟಿಸಿದಾಗ ಏನನ್ನಾದರೂ ಮಾಡಬೇಕೆಂಬ ಒತ್ತಡ ಮೂಡತೊಡಗುತ್ತದೆ. ಹಿಂದೆ ಪ್ರೊ.ನಂಜುಂಡಸ್ವಾಮಿಯವರ ಸಮಾಧಿಯ ಎದುರು ರೈತ ನಾಯಕರು ಸೇರಿ ಚಿಂತಿಸಿದಾಗ ಈ ಎಲ್ಲ ಭಾವನಾತ್ಮಕ ಒತ್ತಡಗಳೂ ಇದ್ದವು. ಲೋಕನಾಯಕ ಜಯಪ್ರಕಾಶ ನಾರಾಯಣರು ತೀರಿಕೊಂಡಾಗ ಜನತಾದಳದ ನಾಯಕರಲ್ಲಿ ಕೆಲವರಾದರೂ ನಿಜವಾದ ಪಾಪಪ್ರಜ್ಞೆಯಿಂದ ಜೇಪಿ ಸಮಾಧಿಯೆದುರು ಪ್ರತಿಜ್ಞೆ ಸ್ವೀಕರಿಸಿದ್ದನ್ನು ನೋಡಿದ್ದೇವೆ; ಹಾಗೆಯೇ ರೈತ ನಾಯಕರಾದ ರುದ್ರಪ್ಪನವರ ಸಮಾಧಿಯ ಎದುರು ಆತ್ಮಾವಲೋಕನ ಮಾಡಿಕೊಂಡ ರೈತ ನಾಯಕರ ಪ್ರತಿಜ್ಞೆಯನ್ನೂ ನೋಡಿದ್ದೇವೆ.

ಅದು ದುಃಖದ, ಪಾಪಪ್ರಜ್ಞೆಯ, ಜವಾಬ್ದಾರಿ ಹೊರುವ ಗಾಂಭೀರ್ಯದ ಘಟ್ಟದ ಆತ್ಮಾವಲೋಕನ. ಆದರೆ ದುಃಖದ ಉಮ್ಮಳ ಕಡಿಮೆಯಾದಂತೆ, ಪಾಪಪ್ರಜ್ಞೆ ಮೆಲ್ಲನೆ ಮರೆಯಾದಂತೆ ನಮ್ಮ ದೈನಂದಿನ ಸ್ವಾರ್ಥಗಳು, ಅಧಿಕಾರದ ಆಕಾಂಕ್ಷೆ ಅಥವಾ ಜಡತೆಗಳು ನಮ್ಮನ್ನು ಆಕ್ರಮಿಸತೊಡಗುತ್ತವೆ. “ಅವನೂ ನಾನೂ ಒಂದಾದಾಗ ನಾಯಕತ್ವವನ್ನು ಹಂಚಿಕೊಳ್ಳುವ ಸಮಸ್ಯೆ ಎದುರಾಗುತ್ತದಲ್ಲವೆ? ಆದ್ದರಿಂದ ನಾನೇ ನಾಯಕನಾಗಿರುವ ಈ ಬಣ ಹೀಗೇ ಪ್ರತ್ಯೇಕವಾಗಿ ಇರಲಿ” ಎಂದು ವಿವಿಧ ಬಣಗಳ ನಾಯಕರಿಗೆ ಅನಿಸತೊಡಗುತ್ತದೆ. “ಮೂಲತಃ ಇದು ಸಾಮಾಜಿಕ ಸಂಘಟನೆ; ಇದು ನನ್ನ ಪಿತ್ರಾರ್ಜಿತ ಆಸ್ತಿಯಲ್ಲ” ಎಂಬ ಪ್ರಾಥಮಿಕ ತಿಳಿವಳಿಕೆ ಅವರ ತಲೆಯಿಂದ ಹಾರಿಹೋಗಿರುತ್ತದೆ. ಉಪವಾಸ, ವನವಾಸ ಮಾಡುತ್ತಾ, ಸಂಘಟನೆ ಕಟ್ಟಿದವರ ನಿಸ್ವಾರ್ಥ ಕಾಯಕ ಅವರ ಕಣ್ಣಿಂದ ಸರಿಯತೊಡಗುತ್ತದೆ.

ಇವನ್ನೆಲ್ಲ ನಮ್ಮೆಲ್ಲರಲ್ಲೂ ಆಗುವ ಬೆಳವಣಿಗೆಗಳಂತೆ ನೋಡಿದರೆ ಮಾತ್ರ ಇದೆಲ್ಲ ಸಹಜವೆಂಬುದು ಗೊತ್ತಾಗುತ್ತದೆ. ಒಂದು ಕುಟುಂಬದ, ಒಂದು ಕಚೇರಿಯ ಸಣ್ಣಪುಟ್ಟ ಅಧಿಕಾರಗಳಿಗೆ ನಾವು ಎಷ್ಟು ಹಾರಾಟ, ಜಿದ್ದು ನಡೆಸುತ್ತೇವೆ ಎಂಬುದನ್ನು ನೆನೆಸಿಕೊಳ್ಳಿ. ಹಾಗೆ ನೆನೆಸಿಕೊಂಡಾಗ ಮಾತ್ರ ದೊಡ್ಡ ಸಂಘಟನೆಗಳ ನಾಯಕತ್ವದ ರುಚಿ ಕಂಡವರು ತಮ್ಮ ನಾಯಕತ್ವವನ್ನು ಹಂಚಿಕೊಳ್ಳಲು ಯಾಕೆ ಹಿಂಜರಿಯುತ್ತಾರೆ ಎಂಬುದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಸ್ವತಃ ಎಂ.ಡಿ.ಎನ್. ಅವರೇ ಎಂದೂ ನಾಯಕತ್ವ ಬಿಟ್ಟು ಕೊಡಲು ಒಪ್ಪಲಿಲ್ಲ ಎಂಬುದನ್ನೂ ಮರೆಯಬಾರದು. ಅವರು ಕರ್ನಾಟಕದ ಬಹುದೊಡ್ಡ ಸಾಮಾಜಿಕ ನಾಯಕರು ಎಂದು ಒಪ್ಪುವವರು ಕೂಡ ಈ ಅಂಶವನ್ನು ಗಮನಿಸದೆ ಇರಲು ಸಾಧ್ಯವಿಲ್ಲ.

ಅದೇನೇ ಇರಲಿ, ನಾಯಕತ್ವ ಬಿಡುವುದೆಂದರೆ, ಒಂದು ದೃಷ್ಟಿಯಿಂದ ಅಹಂಕಾರದ ವಿಸರ್ಜನೆ. ಆದರೆ, ನಾಯಕನೊಬ್ಬ ತಾನು ಮಾಡಬೇಕಾದ ಕೆಲಸ ಇನ್ನೂ ಇದೆ ಎಂದು ಆಳದಲ್ಲಿ ನಂಬಿಕೊಂಡ ಸಂದರ್ಭದಲ್ಲಿ ಕೂಡ ನಾಯಕತ್ವ ಬಿಡಲು ಹಿಂಜರಿಯಬಹುದು. ಆ ಮುಖವನ್ನು ಕೂಡ ನಾವು ಮರೆದಿರೋಣ.

ಇಷ್ಟೆಲ್ಲ ಕ್ಲಿಷ್ಟ ಮಾನಸಿಕ ಸ್ಥಿತಿಗಳ ನಡುವೆ ನಮ್ಮ ರೈತ ನಾಯಕರೆಲ್ಲರೂ ಇನ್ನು ಕೆಲವು ತಿಂಗಳ ಕಾಲ ಸಮಾನ ಶ್ರೇಣಿಯ ಸಂಚಾಲಕರಾಗಿ ಕರ್ನಾಟಕದುದ್ದಕ್ಕೂ ಸಂಚರಿಸಿ ಮರಳಿ ರೈತ ಸಂಘಟನೆ ಕಟ್ಟಲು ಸಿದ್ಧವಾಗಿದ್ದಾರೆ. ಇದು ಒಂದು ದೃಷ್ಟಿಯಿಂದ ಕರ್ನಾಟಕದ ವಿನೂತನ ಪ್ರಯೋಗ ತಕ್ಷಣದ ಲಾಭದ ಅಥವಾ ಗೆಲುವಿನ ಆಸೆಯಿಲ್ಲದೆ ಬಹುದೂರ ಕೊಂಡೊಯ್ಯಬೇಕಾದ ಪ್ರಯೋಗ. ಕರ್ನಾಟಕದಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ತಮ್ಮ ವಿಶ್ವಾಸಾರ್ಹತೆ ಕಳೆದುಕೊಂಡಿರುವಾಗ ಇಲ್ಲಿ ಜನರ ದುಃಖ ದುಮ್ಮಾನಗಳಿಗೆ ನಿಜವಾಗಿ ಸ್ಪಂದಿಸಬಲ್ಲ ನಾಯಕರು ಬೆರಳೆಣಿಕೆಯಷ್ಟಾದರೂ ಇದ್ದಾರೆ ಎಂಬುದನ್ನು ತೋರಿಸಿ ಕೊಡುವ, ಅಪರೂಪದ ಅವಕಾಶ ಕೂಡ ಇವತ್ತು ರೈತ ಸಂಘಟನೆಗೆ ಸಿಕ್ಕಿದೆ.

ಹಾಗೆಯೇ, ಒಂದಾದ ಈ ಸಂಘಟನೆಗಳು ಮುಂದೆ ಬರಲಿರುವ ಚುನಾವಣೆಯ ಬಗ್ಗೆ ತಳೆಯಬೇಕಾದ ನಿಲುವಿನ ಬಗ್ಗೆ ಕೂಡ ಆಳವಾಗಿ ಚಿಂತಿಸುವುದು ಅನಿವಾರ್ಯ. ಯಾಕೆಂದರೆ ಹಿಂದಿನ ಹಾಗೆ ಚುನಾವಣೆಯನ್ನು ಪೂರ್ತಿ ಕಡೆಗಣಿಸಿ ಚಳುವಳಿ ರೂಪಿಸುವುದು ಕೂಡ ಕಷ್ಟ. ಯಾಕೆಂದರೆ ಯಾವುದೇ ಚಳುವಳಿಯಲ್ಲಿ ರಾಜಕೀಯ ಜಾಗೃತಿ ಪಡೆದ ಕಾರ್ಯಕರ್ತರು ಹಾಗೂ ಎಲ್ಲ ದರ್ಜೆಯ ನಾಯಕರು ಒಂದಲ್ಲ ಒಂದು ವಿಧದಲ್ಲಿ ಚುನಾವಣಾ ರಾಜಕಾರಣದಲ್ಲಿ ಭಾಗವಹಿಸಲು ಹಾತೊರೆಯುತ್ತಲೇ ಇರುತ್ತಾರೆ. ಆದ್ದರಿಂದ ಈ ದಿಸೆಯಲ್ಲಿ ಕೂಡ ಖಚಿತವಾದ ಹೆಜ್ಜೆಗಳನ್ನಿಡುವುದು ಅಗತ್ಯವಿದೆ.

ಅದೆಲ್ಲಕ್ಕಿಂತ ಮಿಗಿಲಾಗಿ ಇದೀಗ ಎಲ್ಲೆಡೆ ಚಿಗುರಿರುವ ಕನಸು ಹಾಗೂ ನಿರೀಕ್ಷೆಯನ್ನು ಕೊಂಚವಾದರೂ ನಿಜಗೊಳಿಸುವತ್ತ ನಮ್ಮ ರೈತ ನಾಯಕರು ನಡೆಯುತ್ತಾರೆ ಎಂಬುದು ನಮ್ಮೆಲ್ಲರ ಆಶಯ. ಈ ಸಂಘಟನೆಯ ಜೊತೆಗೆ ಎಲ್ಲ ರೈತ ಪರ ಬುದ್ಧಿಜೀವಿಗಳು ಕೂಡ ಥಿಂಕ್ ಟ್ಯಾಂಕಿನಂತೆ ಪೂರಕ ಚಿಂತನಾ ಸಾಮಗ್ರಿಯನ್ನು ಒದಗಿಸುತ್ತಾ ತಂತಮ್ಮ ಕರ್ತವ್ಯ ನಿರ್ವಹಿಸಬೇಕಾದ ಹೊಣೆ ಹೊರಬೇಕಾಗಿದೆ ಎಂದು ವಿನಯದಿಂದ ಕೇಳಿಕೊಳ್ಳುತ್ತಿರುವೆ.

‍ಲೇಖಕರು avadhi

January 25, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ...

ಬರಲಿರುವ ದುರಂತದ ಮುನ್ಸೂಚನೆ..

'ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ' ಗಾಳಿಬೆಳಕು -ನಟರಾಜ್ ಹುಳಿಯಾರ್ ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This