'ಒಂದಾನೊಂದು ಕಾಲದಲ್ಲಿ ' ಅಲ್ಲ 'ಇಂದಿನ ಕಾಲದಲ್ಲಿ'

ಜರ್ಮನಿಯಿಂದ ಬಿ ಎ ವಿವೇಕ ರೈ
ಅಜ್ಜಿ ಕತೆ ,ಅಡಗೂಲಜ್ಜಿ ಕತೆ,ಜನಪದ ಕತೆ -ಹೀಗೆಲ್ಲಾ ಹೇಳುವ ಕತೆಗಳು ಇವತ್ತು ಆ ಕತೆಗಳ ಪಾತ್ರಗಳಂತೆ ಮಾಯವಾಗಿವೆ. ರಾಕ್ಷಸಿಯರು , ದೇವತೆಗಳು , ಮಾಂತ್ರಿಕರು ಎಲ್ಲೋ ಕಾಣದಾಗಿದ್ದಾರೆ-ಹೀಗೆಲ್ಲ ನಾವು ಜಾನಪದ ವಿದ್ವಾಂಸರು ತರಗತಿಯಲ್ಲಿ ಪಾಠ ಮಾಡುತ್ತಿದ್ದರೂ ,ಅವರು ಬೇರೆ ಬೇರೆ ರೂಪಗಳಲ್ಲಿ ನಮ್ಮ ನಡುವೆ ಇರುವುದು ಅನೇಕ ಬಾರಿ ನಮ್ಮ ಅರಿವಿಗೆ ಬರುವುದಿಲ್ಲ.
ಅಜ್ಜಿಕತೆ ಅಥವಾ ಜನಪದಕತೆಗಳ ಸಂಗ್ರಹದಲ್ಲಿ ಮೊದಲ ಮಹತ್ವದ ಸಂಗ್ರಹ ಆದದ್ದು ಜರ್ಮನಿಯಲ್ಲಿ. ಗ್ರಿಮ್ ಸಹೋದರರು ಎಂದು ಹೆಸರು ಪಡೆದ ಜಾಕಬ್ ಗ್ರಿಮ್ ಮತ್ತು ವಿಲಹೆಲ್ಮ್ ಗ್ರಿಮ್ ಬಹಳ ವರ್ಷಗಳ ಪರಿಶ್ರಮದಿಂದ 1812 ರಲ್ಲಿ ‘Childer’s and Household tales’ ಎಂಬ ಹೆಸರಿನಲ್ಲಿ ಜರ್ಮನ್ ಭಾಷೆಯಲ್ಲೇ ಪ್ರಕಟಿಸಿದರು.ಇದನ್ನು ತರಗತಿಯ ಪಾಠದಲ್ಲಿ ಅನೇಕಬಾರಿ ಬಳಸಿದ್ದೆ.ಆದರೆ ಆ ಕತೆಗಳ ಪಾತ್ರಗಳು ನನಗೆ ಮುಖಾಮುಖಿ ಆದದ್ದು ಮೊನ್ನೆ ಜರ್ಮನಿಯ ವೂರ್ಜಬರ್ಗಿಗೆ ಬಂದ ಹೊಸತರಲ್ಲಿ. ಇಲ್ಲಿನ ವಿದೇಶ ನೋಂದಣಿ ಕಛೇರಿಯಲ್ಲಿ ಎಲ್ಲ ವಿದೇಶಿಯರು ತಮ್ಮ ವಿವರ ನೊಂದಾಯಿಸಿಕೊಳ್ಳಬೇಕು. ಪ್ರೊ.ಬ್ರೂಕ್ನರ್ ಕೊಟ್ಟ ಮಾಹಿತಿಯಂತೆ ಇಲ್ಲಿನ ಸಣ್ಣ ಕಛೇರಿಯಲ್ಲಿ ಇಬ್ಬರೇ ಸಿಬ್ಬಂದಿ, ಇಬ್ಬರೂ ಹೆಂಗುಸರು. ಅವರಲ್ಲಿ ಒಬ್ಬಳು ರಾಕ್ಷಸಿ, ಇನ್ನೊಬ್ಬಳು ದೇವತೆಯಂತೆ. ರಾಕ್ಷಸಿಯ ಕೈಗೆ ಸಿಕ್ಕಿಬಿಟ್ಟರೆ ಬಿಡುಗಡೆ ಇಲ್ಲವಂತೆ. ಕೆಲಸ ಆಗದಿರುವುದಷ್ಟೇ ಅಲ್ಲ, ಸಂಕಷ್ಥ ಗಳನ್ನೂ ಅವಳು ತಂದೊಡ್ಡುತ್ತಾಳಂತೆ. ದೇವತೆ ಮೊದಲು ಪ್ರತ್ಯಕ್ಷಲಾದರೆ ಕೂಡಲೇ ವರ ದೊರೆಯುತ್ತದಂತೆ.
ಎಂ ಎಸ್ ಮೂರ್ತಿ
ನಾವಿಬ್ಬರೂ ಆತಂಕದಿಂದಲೇ ಒಂದು ದಿನ ಆ ಕಚೇರಿಗೆ ಹೋದೆವು. ಕೆಲವು ವಿದ್ಯಾರ್ಥಿಗಳು ಕಾಯುತ್ತಿದ್ದರು. ಒಮ್ಮೆ ಸ್ವರ್ಗದ ಬಾಗಿಲು ತೆರೆಯಿತು. ಕೆದರಿದ ಕೂದಲಿನ ದಡೂತಿ ಆಕಾರದ ಹೆಂಗುಸೊಬ್ಬಳು ಹೊರಗೆ ಬಂದಳು. ಹೇಳಬೇಕಾಗಿಯೇ ಇರಲಿಲ್ಲ, ಅವಳು ರಾಕ್ಷಸಿಯಾಗಿರಬೇಕೆಂದು. ನಾವು ಒಳಹೊಕ್ಕೆವು.ಒಳಗೆ ಇನ್ನೊಂದು ಕುರ್ಚಿಯಲ್ಲಿ ಇನ್ನೊಬ್ಬಳು ಕುಳಿತಿದ್ದಳು.ಅಚ್ಚುಕಟ್ಟಾಗಿ ತಲೆಬಾಚಿ ಸುಂದರ ಉಡುಗೆ ತೊಟ್ಟುಕೊಂಡು ನಗುಮುಖದಿಂದ ಕೆಲಸ ಮಾಡುತ್ತಿದ್ದಳು. ಆದರೆ ನಮ್ಮ ದುರದೃಷ್ಟಕ್ಕೆ ನಾವು ಸಿಕ್ಕಿಕೊಂದದ್ದು ರಾಕ್ಷಸಿಯ ಕೈಯಲ್ಲಿ. ಬ್ರೂಕ್ನರ್ ಅವಳಲ್ಲಿ ನನ್ನ ಬಗ್ಗೆ ಎಲ್ಲ ವಿವರಿಸಿದರು.ಆದರೆ ಅವಳು ಒಲಿಯುವ ಲಕ್ಷಣ ಕಾಣಲಿಲ್ಲ. ನಾಳೆ ಬರಬೇಕಾಗುತ್ತದೆ ಎಂದು ಹೇಳಿ, ವಿವರ ನೋಡಿ ನಾಳೆಯ ಸಮಯ ಇದೆಯೋ ಹೇಳುತ್ತೇನೆ ಎಂದು ನಮ್ಮನ್ನು ಹೊರಕ್ಕೆ ಕಳುಹಿಸಿದಳು.ಸ್ವರ್ಗ ಬಾಗಿಲು ಮುಚ್ಚಿತು.ನಾವು ಹೊರಗೆ ಕುಳಿತು ಕಾದೆವು. ನಾವು ಮಾತಾಡಿಕೊಂಡೆವು. ಒಂದೇಕೊಠಡಿಯಲ್ಲಿ ರಾಕ್ಷಸಿ ಮತ್ತು ದೇವತೆ ಹೇಗಿರುತ್ತಾರೆ ಎಂದು. ನಾನು ಅಂದುಕೊಂಡೆ , ಜನಪದ ಕತೆಗಳಲ್ಲಿ ರಾಕ್ಷಸಿ ಮತ್ತು ದೇವತೆ ಒಟ್ಟಿಗೆ ಇಲ್ಲದಿದ್ದರೆ ಕತೆಯೇ ಸಾಗುವುದಿಲ್ಲ. ಮುಂದೆ ತೆರೆಯುವ ಬಾಗಿಲು ಸ್ವರ್ಗದ್ದೆ ನರಕದ್ದೆ ಎಂದು ಆತಂಕದಿಂದ ಕಾಯುತ್ತಿರುವಾಗಲೇ ಬಾಗಿಲು ತೆರೆಯಿತು. ನಾನು ಕನ್ನುಮುಚ್ಚಿಕೊಂಡೆ. ನಮ್ಮ ಅಜ್ಜಿಕತೆಗಳಲ್ಲಿ ಓದಿದ ಹಾಗೆ ರಾಕ್ಷಸಿ ಬರುತಾಳೆ , ನನ್ನನ್ನು ಹಿಡಿದುಕೊಂಡು ಅವಳ ಗುಹೆಯೊಳಗೆ ಹಾಕುತ್ತಾಳೆ. ವೀಸಾ ಇಲ್ಲದಿದ್ದರೆ ಅಷ್ಟೇ ಹೋಯಿತು, ಬಿಡುಗಡೆಗಾಗಿ ಹಾತೊರೆದು ಬಂದ ನನಗೆ ಮತ್ತೆ ಬಂಧನದ ಕಷ್ಟವೇ ? ಹೀಗೆ ಕಣ್ಣು ಮುಚ್ಚಿ ಕುಳಿತಿರುವಾಗಲೇ ಸುಮಧುರ ಅಶರೀರ ವಾಣಿಯೊಂದು ಕೇಳಿಸಿತು.’ಒಳಗೆ ಬನ್ನಿ’ ಎಂದಿತು.ನಾನು ಕಣ್ಣು ತೆರೆದು ನೋಡುತ್ತೇನೆ, ದೇವತೆ ನಿಂತು ಕರೆಯುತ್ತಿದ್ದಾಳೆ. ಕೆಲವು ಕ್ಷಣಗಳ ಹಿಂದೆ ಕೊಠಡಿಯ ಒಳಗೆ ನಾನು ಕಂಡ ನಗುಮುಖದ ಹುಡುಗಿ ದೇವತೆಯಾಗಿ ಬಂದಿದ್ದಾಳೆ. ಒಳಗೆ ಹೋದಾಗ ರಾಕ್ಷಸಿ ಅಲ್ಲೇ ಇದ್ದಾಳೆ. ಅವಳನ್ನು ಧಿಕ್ಕರಿಸಿ ದೇವತೆಯಲ್ಲಿ ವರ ಕೇಳಿದೆವು. ನನಗೆ ಬೇಕಾಗಿದ್ದದ್ದು ಫೆಬ್ರವರಿ ೧೫ರ ವರೆಗೆ.ಆದರೆ ದೇವತೆ ಇನ್ನಷ್ಟು ತಿಂಗಳು ಈಗಲೇ ಕೊಡುತ್ತೇನೆ, ಇನ್ನೊಂದು ಬಾರಿ ಯಾಕೆ ಬರುತ್ತಿರಿ ಎಂದು ಐದು ನಿಮಿಷದೊಳಗೆ ಮುದ್ರೆ ಒತ್ತಿ ಸಹಿ ಹಾಕಿ ನನ್ನ ಕೈಗೆ ಕೊಟ್ಟಾಗ ಇದು ಕನಸೋ ಅಥವಾ ಕಥೆಯ ಒಳಗಿನ ಕತೆಯೋ ಗೊತ್ತಾಗಲಿಲ್ಲ.ಆಶ್ಚರ್ಯವೆಂದರೆ ರಾಕ್ಷಸಿ ಮೌನವಾಗಿ ಕುಳಿತಿದ್ದದ್ದು. ಎಲ್ಲ ಅಜ್ಜಿಕತೆಗಳಂತೆ ಇಲ್ಲೂ ಕತೆ ಸುಖವಾಗಿ ಅಂತ್ಯವಾಯಿತು.ಆದರೆ ರಾಕ್ಷಸಿ ಇನ್ನೂ ಜೀವಂತವಾಗಿ ಇದ್ದಾಳೆ. ಬಡಪಾಯಿಗಳು ಸಿಕ್ಕಿದರೆ ಖಂಡಿತ ಬಿಡಲಾರಳು. ಆದರೆ ದೇವತೆ ಅವಳ ಪಕ್ಕದಲ್ಲೇ ಸದಾ ಇರುತ್ತಾಳೆ ಎನ್ನುವುದೇ ಕತೆ ಸುಖಾಂತ್ಯ ಆಗುತ್ತದೆ ಎನ್ನುವ ಭರವಸೆ.
ಈ ಕತೆಯ ಆರಂಭ ಮಾತ್ರ ಅಜ್ಜಿಕತೆಗಳಿಗಿಂತ ಭಿನ್ನ. ಇದು ‘ಒಂದಾನೊಂದು ಕಾಲದಲ್ಲಿ ‘ಎಂದು ಆರಂಭ ಆಗುವುದಿಲ್ಲ. ಇದು ಇಂದಿನ ಕಾಲದ ಕತೆ. ಆದ್ದರಿಂದ . ‘ಇಂದಿನ ಕಾಲದಲ್ಲಿ ‘ಎಂದು ಆರಂಭ ಆಗಬೇಕು. ಆದರೆಎಲ್ಲ ಜನಪದ ಕತೆಗಳಂತೆಯೇ ಇದಕ್ಕೂ ದೇಶ ಕಾಲಗಳ ಎಲ್ಲೆಗಲಿಲ್ಲ.

‍ಲೇಖಕರು avadhi

December 1, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This