’ಒಂದಾನೊಂದು ಕಾಲದಾಗ, ಏಸೊಂದು ಮುದವಿತ್ತ….’

ಬ್ಲಾಗ್ ಲೋಕದ ಹೂಳೆತ್ತಬೇಕಾಗಿದೆ’ ಎಂದು ನಾನು ಬರೆದಾಗ ಎಲ್ಲಾ ದಿಕ್ಕಿನಿಂದ ಬಂದ ಪ್ರತಿಕ್ರಿಯೆ ಈ ಸಮಸ್ಯೆಯ ಗಂಭೀರತೆಯನ್ನು ತೋರಿಸುತ್ತಿದೆ. ಈ ಪ್ರತಿಕ್ರಿಯೆಗಳು ನನಗೆ ಸಾಕಷ್ಟು ಧೈರ್ಯವನ್ನು ನೀಡಿದೆ. ಅದನ್ನು ನಿಮ್ಮ ಮುಂದೆಯೂ ಇಡುತ್ತಿದ್ದೇನೆ.ಈ ಲೇಖನ ವಿಜಯ ಕರ್ನಾಟಕದ ‘ಮೀಡಿಯಾ ಮಿರ್ಚಿ’ ಅಂಕಣದಲ್ಲಿ ಪ್ರಕಟವಾಗಿದೆ.

ಚರ್ಚೆಗೆ ಸ್ವಾಗತ. ಬ್ಲಾಗ್ ಲೋಕ ಸಭ್ಯತೆ ಉಳಿಸಿಕೊಳ್ಳಲು ಎಲ್ಲರೂ ಕೈ ಜೋಡಿಸೋಣ

-ಜಿ ಎನ್ ಮೋಹನ್.

gn-51

‘ಬ್ಲಾಗ್ ಲೋಕಕ್ಕೆ ಹಂದಿಜ್ವರ ಬಂದಿದೆ. ನಮಸ್ಕಾರ, ಮತ್ತೆ ಭೇಟಿಯಾಗೋಣ’ ಅನ್ನುವ ಜೋಗಿ ಯ ಈ ಮೇಲ್ ನನ್ನ ಇನ್ ಬಾಕ್ಸ್ ಗೆ ಬಂದು ಬಿದ್ದಾಗ ನಾನು ಒಂದು ಕ್ಷಣ ತಬ್ಬಿಬ್ಬಾದೆ. ಜೋಗಿ ಬ್ಲಾಗ್ ಲೋಕಕ್ಕೆ ವಿದಾಯ ಹೇಳಿದ್ದರು. ಬ್ಲಾಗ್ ಲೋಕಕ್ಕೆ ತಗುಲಿದ ಹಂದಿಜ್ವರ ತೆಗೆದುಕೊಂಡ ಮೊದಲ ಬಲಿ ಇದು. ‘ಹಂದಿಜ್ವರ ದೇಹಕ್ಕಷ್ಟೇ ಅಲ್ಲ, ಮನಸ್ಸಿಗೂ ಬಂದಂತಿದೆ. ಬಹುತೇಕ ಮಂದಿ ಮಾಸ್ಕ್ ಹಾಕಿಕೊಂಡೇ ಬರೆಯುತ್ತಿದ್ದಾರೆ. ಮುಖವಾಡ ಹಾಕಿಕೊಂಡೇ ಕಾಮೆಂಟೂ ಮಾಡುತ್ತಾರೆ. ಹಾಗೆ ಮಾಡುವುದರಿಂದ ಸ್ಫೂರ್ತಿ ಕೆಡಬಾರದು. ಧೈರ್ಯವಾಗಿ ಬರೆಯುತ್ತಲೇ ಇರಬೇಕು ಎನ್ನುವವರೂ ಇದ್ದಾರೆ. ಹಾಗಿರುವುದು ಕಷ್ಟ. ಸುಮ್ಮನೆ ಬ್ಲಾಗುಗಳನ್ನು ನೋಡುತ್ತಾ ಹೋದಾಗ, ಅಲ್ಲಿರುವ ಕಾಮೆಂಟುಗಳನ್ನು ಓದಿದಾಗ , ಬರೆಯುವ ಕೈ ನಿಂತು ಹೋಗುತ್ತದೆ. ಯಾವ ಬ್ಲಾಗುಗಳು ಇಲ್ಲದಿದ್ದಾಗಲೂ, ಪ್ರಕಟಿಸುವವರು ಇಲ್ಲದಿದ್ದಾಗಲೂ ದಿನಕ್ಕೊಂದು ಪುಟ ಬರೆಯುತ್ತಿದ್ದೆ. ಅಂಥದೇ ಸಂತೋಷವನ್ನು ಬ್ಲಾಗು ಕೂಡಾ ಕೊಡುತ್ತದೆ ಅಂದುಕೊಂಡಿದ್ದೆ. ಆದರೆ ಕಾಲ ಬದಲಾಗಿದೆ’ ಎಂದು ವಿಷಾದಿಸಿದ್ದಾರೆ.

‘ಮೀಡಿಯಾ ಮಿರ್ಚಿ’ಯಲ್ಲಿ ಬ್ಲಾಗು ಲೋಕಕ್ಕೆ ತಗುಲಿಕೊಂಡಿರುವ ವೈರಸ್ ಬಗ್ಗೆ ಕಳೆದವಾರ ( ‘ಏಕೆ ಹೀಗಾಯ್ತೋ, ನಾನು ಕಾಣೆನು…?’) ಬರೆದದ್ದೇ ತಡ ನೂರಾರು ಮೇಲ್ ಗಳು ಬರುತ್ತಿವೆ. ಅನಾಮಿಕ, ಅಸಭ್ಯ, ಬೇಜವಬ್ದಾರಿ ಕಾಮೆಂಟುಗಳಿಂದ ನೊಂದವರು ತಮ್ಮ ನೋವು ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು ಇಂತಹ ಕಾಮೆಂಟುಗಳನ್ನು ತಮ್ಮದೇ ರೀತಿಯಲ್ಲಿ ಎದುರಿಸಿದ್ದನ್ನು ಹೇಳಿದ್ದಾರೆ. ಹಲವರು ಈ ಚರ್ಚೆ ಒಂದು ಸಭ್ಯ ಬ್ಲಾಗಿಂಗ್ ಗೆ ದಾರಿ ಮಾಡಿ ಕೊಡುವ ಆಂದೋಲನವಾಗಲಿಎಂದು ಆಶಿಸಿದ್ದಾರೆ. ಇನ್ನೂ ಕೆಲವರು ಈ ಸಂಬಂಧ ಇರುವ ಕಾಯಿದೆಗಳನ್ನು ಗಮನಕ್ಕೆ ತಂದಿದ್ದಾರೆ. ಬ್ಲಾಗ್ ಲೋಕದ ಹೂಳೆತ್ತಲು ಎಷ್ಟು ಮಂದಿ ತಮ್ಮದೇ ರೀತಿಯಲ್ಲಿ ಶ್ರಮದಾನ ಮಾಡಲು ಸಜ್ಜಾಗಿದ್ದಾರೆ ಎಂದು ಅಚ್ಚರಿಗೊಂಡಿದ್ದೇನೆ.

‘ತುಂತುರು ಹನಿಗಳು’ ಬ್ಲಾಗ್ ನ ಶ್ರೀನಿಧಿ ಡಿ ಎಸ್ ‘ಇದು ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವ ಕಥೆ’ ಎಂದಿದ್ದಾರೆ. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಿದ್ದಂತೂ ಆಗಿದೆ. ಆ ಕಾರಣಕ್ಕಾಗಿಯೇ ಬ್ಲಾಗ್ ಗಳ ಮೂಲಕ ಕಂಡ ಕಂಡವರನ್ನು ಪರಚುವ ಕೆಲಸವೂ ಆರಂಭವಾಗಿದೆ. ಮಂಗಳೂರಿನ ಹಿರಿಯ ಮಿತ್ರರಾದ ವಾಮನ ನಂದಾವರ ಅವರ ಜೊತೆ ಕೂತು ಕೇಳಿದ್ದ ಜಾನಪದ ಹಾಡೊಂದು ನೆನಪಾಗುತ್ತಿದೆ. ‘ಆಟಿಡ್ ಬತ್ತೇನೋ ಕಳಂಜೆ ಮಾರಿ ಕಳೆಪೆನೋ’ ಅಂತ. ಆಷಾಡದಲ್ಲಿ ಬರುವ ಕಳೆಂಜ ಮಾರಿಯನ್ನು ಓಡಿಸುತ್ತಾನೆ ಅಂತ ಅರ್ಥ. ಬ್ಲಾಗ್ ಲೋಕದಲ್ಲೂ ಈಗ ಆಷಾಡದ ಕಾಲ. ಸತತ ಮಳೆ, ಗವ್ವೆನ್ನುವ ಕತ್ತಲು, ಹಾಗಾಗಿಯೇ ಸಾಕಷ್ಟು ರೋಗ. ಆದರೂ ಈ ರೋಗ ನಿವಾರಿಸುವ ಒಂದು ಶಕ್ತಿ ಬರುತ್ತದೆ ಎನ್ನುವ ಆಶಯವಂತೂ ಎಲ್ಲಾ ಬ್ಲಾಗಿಗರಲ್ಲೂ ಇದೆ.

‘ಒಂದಾನೊಂದು ಕಾಲದಾಗ, ಏಸೊಂದು ಮುದವಿತ್ತ….’ ಅನ್ನುವ ಹಾಡು ನೆನಪಾದದ್ದು ‘ಟೀನಾ ಜೋನ್’ ಬ್ಲಾಗ್ ನಡೆಸುವ ಟೀನಾ ಅವರ ಪತ್ರ ಓದಿದಾಗ. ‘ನಾವು ಬ್ಲಾಗಿಂಗ್ ಶುರು ಮಾಡಿದಾಗ ಇದ್ದ ಚಂದದ, ಹುರುಪಿನ ವಾತಾವರಣ ಈಗಿಲ್ಲ’ ಎಂದು ನೊಂದಿದ್ದಾರೆ. ಬ್ಲಾಗ್ ನಲ್ಲಿರುವ ಸಡಗರಕ್ಕೆ ಕಲ್ಲು ಹೊಡೆಯಲೆಂದೇ ಹುಟ್ಟಿಕೊಂಡವರಿಗೆ ಈಗ ವಿಕೃತ ಸಂತೋಷದ ಕಾಲ. ಬ್ಲಾಗ್ ಲೋಕದ ಸಜ್ಜನ ಎಂದೇ ಹೆಸರಾದ ‘ಇಟ್ಟಿಗೆ ಸಿಮೆಂಟು’ ಬ್ಲಾಗಿನ ಪ್ರಕಾಶ್ ಹೆಗ್ಡೆ ಅವರನ್ನೂ ಈ ಕಾಮೆಂಟಿಗರು ಬಿಟ್ಟಿಲ್ಲ.

ತಮ್ಮ ಬ್ಲಾಗ್ ಬರಹಗಳಿಂದ ಸಾಕಷ್ಟು ಹೆಸರು ಮಾಡಿರುವ ಚೇತನಾ ತೀರ್ಥಹಳ್ಳಿ ‘ಹೀಗೆ ಅನಾನಿಮಸ್ ಕಮೆಂಟುಗಳು ಕೊಟ್ಟ ಆಘಾತ ಒಂದೆರಡಲ್ಲ ನನಗೆ. ತೀರಾ ವೈಯಕ್ತಿಕ ಸಂಗತಿಗಳವರೆಗೂ ಈ ಪ್ರಹಾರ ನಡೆದಿದೆ. ಇದರಿಂದ ಬೇಸತ್ತು ಬ್ಲಾಗ್ ಅಪ್ ಡೇಟ್ ಮಾಡುವುದನ್ನೇ ಕಡಿಮೆ ಮಾಡಿಬಿಟ್ಟಿದೇನೆ. ವಿಶೇಷವಾಗಿ ಹೆಣ್ಣುಮಕ್ಕಳಿಗೆ ಇಂಥ ಅನುಭವ ಜಾಸ್ತಿ ಅನ್ನೋದು ನನ್ನ ಅನಿಸಿಕೆ. ಬ್ಲಾಗ್ ನಲ್ಲಿ ಬರುವ ಹೇಟ್ ಕಾಮೆಂಟ್ ಗಳು, ಹೆರಾಸ್ ಮಾಡುವಂಥ ಕಾಮೆಂಟ್ ಗಳು ಸೈಬರ್ ಕ್ರೈಮ್ ವ್ಯಾಪ್ತಿಗೆ ಬರುತ್ತದೆಯಾ? ಇಂಥವರನ್ನು ಪತ್ತೆ ಹಚ್ಚೋದು ಹೇಗೆ? ಇದರಿಂದ ಉಂಟಾಗುವ ಮಾನಸಿಕ ತಲ್ಲಣದಿಂದ ಹೊರಬರೋದು ಹೇಗೆ’ ಎಂದು ಕೇಳಿದ್ದಾರೆ.

ದೆಹಲಿಯಿಂದ ‘ಖಾಸಗಿ ಡೈರಿ’ ಬ್ಲಾಗ್ ನಡೆಸುವ ಎಂ ಬಿ ಶ್ರೀನಿವಾಸ ಗೌಡ ಬ್ಲಾಗಿಗರಿಗೆ ಸಾಕಷ್ಟು ಧೈರ್ಯ ನೀಡುವ ವರದಿಯೊಂದನ್ನು ಕಳಿಸಿದ್ದಾರೆ. ತನ್ನ ವಿರುಧ್ಧ ಅಸಭ್ಯ ಬರಹ ಹಾಗೂ ಫೋಟೋ ಪ್ರಕಟಿಸಿದ ಅನಾಮಿಕ ಬ್ಲಾಗ್ ವಿರುಧ್ಧ ಮಾಡೆಲ್ ಲಿಸ್ಕುಲಾ ಕೋಹೆನ್ ಗೂಗಲ್ ಸಂಸ್ಥೆಗೆ ದೂರು ನೀಡಿದಳು. ಆ ಅನಾಮಧೇಯ ವ್ಯಕ್ತಿಯ ವಿವರವನ್ನು ಬಹಿರಂಗಪಡಿಸಿ ಎಂದು ಕೇಳಿದಳು. ಗೂಗಲ್ ‘ಉಹುಂ’ ಎಂದಿತು. ಕೊನೆಗೆ ಲಿಸ್ಕುಲಾ ಸುಪ್ರೀಂ ಕೋರ್ಟ್ ಮೊರೆಹೊಕ್ಕರು. ಕೋರ್ಟ್ ಮಹತ್ವದ ತೀರ್ಪು ನೀಡಿತು. ಈಗ ಗೂಗಲ್ ಅನಾಮಧೇಯ ಬ್ಲಾಗರ್ ವಿವರಗಳನ್ನು ಒದಗಿಸಲೇ ಬೇಕಾಗಿ ಬಂತು. ಕೋರ್ಟ್ ಆ ಅನಾಮಧೇಯ ಬ್ಲಾಗರ್ ಖುದ್ಧಾಗಿ ಲಿಸ್ಕುಲಾ ಎದುರು ಹಾಜರಾಗುವಂತೆ ಮಾಡಿದೆ. ಈಗ ಆ ಬ್ಲಾಗೂ ಬಂದ್ ಆಗಿದೆ.

ಇಂತಾ ಕಾನೂನು ಕ್ರಮ ಎಲ್ಲಾ ಅಮೆರಿಕಾದಲ್ಲಿ ಮಾತ್ರ ಸಾಧ್ಯ ಅಂತ ನಿರುತ್ಸಾಹ ವ್ಯಕ್ತಪಡಿಸುವವರಿಗೆ ಟೀನಾ ತಮ್ಮದೇ ರೀತಿಯ ದಾರಿ ತೋರಿಸಿದ್ದಾರೆ. ‘ ನನ್ನ ಬ್ಲಾಗಿನಲ್ಲಿ ಕೆಲಕಾಲದ ಹಿಂದೆ ಇಂತಹ ಪರಿಸ್ಟಿತಿ ಬಂದಿತ್ತು. ನನ್ನ ಹೆಚ್ಚಿನ ಸ್ನೇಹಿತರು ಇಂತಹ ಕಾಮೆಂಟುಗಳನ್ನು ಇಗ್ನೋರ್ ಮಾಡುವದನ್ನ ಅರಿತಿದ್ದ ನಾನು ಮೊದಲ ಬಾರಿಗೆ ಪ್ರತಿಭಟಿಸುವ ಸಾಹಸ ಮಾಡಿದೆ. ನನ್ನ ಅನೇಕ ಬ್ಲಾಗರ್ ಗೆಳೆಯ ಗೆಳತಿಯರು ಜತೆ ಕೊಟ್ಟರು.ಕೆಲವರಿಂದ ಇಂತಹದ್ದನ್ನ ಮಾಡಿ ಕೆಸರು ಸಿಡಿಸಿಕೊಳ್ಳುವದು ಏಕೆ ಅನ್ನುವಂತಹ ಅರ್ಥದ ಮಾತೂ ಬಂತು. ನನ್ನ ಉದ್ದೇಶ ಪ್ರತಿಭಟನೆಯಷ್ಟೇ ಆಗಿದ್ದಿತ್ತು. ಆದರೆ ಅಂದಿನ ಪ್ರತಿಭಟನೆಯ ನಂತರ ನನಗೆ ಒಂದು ಅಶ್ಲೀಲ,ಅಬ್ಯೂಸಿವ್ ಕಮೆಂಟು ಬರಲಿಲ್ಲ ಅನ್ನುವದು ನನಗೆ ಸಮಾಧಾನ ಕೊಟ್ಟ ವಿಷಯ. ಎದುರಿಸದೆ ನಾವು ತೊಂದರೆಯನ್ನು ಪರಿಹರಿಸಿಕೊಳ್ಳುತ್ತೇವೆ ಅನ್ನುವದು ಆಗದ ಹೋಗದ ವಿಷಯ.’ ಎನ್ನುತ್ತಾರೆ.

ಚೇತನಾ ಅವರದ್ದು ಇನ್ನೊಂದು ರೀತಿಯ ಹೋರಾಟ. ಕಾಮೆಂಟುದಾರರ ಐ ಪಿ ಅಡ್ರೆಸ್ ಹಿಡಿದುಕೊಂಡು ಅನಾಮಧೇಯ ಯಾರು ಅಂತ ಪತ್ತೆ ಹಚ್ಚಿ ಜಾಡಿಸಿದ್ದಾರೆ. ಇತ್ತೀಚಿಗೆ ದಿಢೀರನೆ ಅಶ್ಲೀಲ ‘ಪೋರ್ನೋ’ ಬ್ಲಾಗ್ ಗಳು ತಲೆ ಎತ್ತಿದಾಗ ಅದರ ವಿರುಧ್ಧ ಹೇಗೆ ಕ್ಲೀನಿಂಗ್ ಆಪರೇಶನ್ ನಡೆಸಿದೆ ಎಂಬುದನ್ನು ಸುಖೇಶ್ ಕುಮಾರ್ ವಿವರಿಸಿದ್ದಾರೆ. ಹೊಸ ಪೋರ್ನೋ ಬ್ಲಾಗ್ ಬಂದಾಗಲೆಲ್ಲಾ ಅವರು ಆ ಬ್ಲಾಗ್ ಆಶ್ರಯಿಸಿದ್ದ ವರ್ಡ್ ಪ್ರೆಸ್ , ಬ್ಲಾಗ್ ಸ್ಪಾಟ್ ಆಡಳಿತಗಾರರ ಗಮನಕ್ಕೆ ತಂದರು. ದೂರು ಕೊಟ್ಟರು. ಇದರಿಂದ ಆ ತಾಣಗಳು ಬಂದ್ ಆಗದಿದ್ದರೂ ಅದನ್ನು ಸಾರ್ವಜನಿಕ ವೀಕ್ಷಣೆಯಿಂದ ಖಾಸಗಿ ವೀಕ್ಷಣೆಗೆ ವರ್ಗಾಯಿಸಲಾಗಿದೆ. ‘ವರ್ಡ್ ಪ್ರೆಸ್, ಬ್ಲಾಗ್ ಸ್ಪಾಟ್ ಎರಡರ ನಿರ್ವಾಹಕರೂ ತಮ್ಮ ಪತ್ರಕ್ಕೆ ಸ್ಪಂದಿಸಿದ್ದಾರೆ. ಆ ಬರಹಗಳಲ್ಲಿರುವುದು ಏನು ಎಂಬುದನ್ನು ಅನುವಾದಿಸಿಕೊಂಡು ತರೆಸಿಕೊಂಡಿದ್ದಾರೆ. ಕ್ರಮ ಕೈಗೊಂಡಿದ್ದಾರೆ’ ಎಂಬ ತೃಪ್ತಿ ಸುಕೇಶ್ ಕುಮಾರ್ ಅವರದ್ದು.

‘ಆಗದು ಎಂದು, ಕೈಲಾಗದು ಎಂದು, ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ…’- ಥೇಟ್ ‘ಬಂಗಾರದ ಮನುಷ್ಯ ‘ ಸಿನೆಮಾ ಹಾಡಿನ ಪರಿಸ್ಥಿತಿ. ‘ನೀಲಿ ಹೂವು’ ಬ್ಲಾಗ್ ನ ರಂಜಿತ್ ಅನಾಮಧೇಯರ ಕಾಟದ ಮಧ್ಯೆ ಇರುವ ಬೇನಾಮಿ ಕಾಮೆಂಟಿಗರ ಕಾಟವನ್ನೂ ಪತ್ತೆ ಹಚ್ಚಿದ್ದಾರೆ. ‘ನಾನು ಕನ್ನಡಪ್ರಭದ ಪತ್ರಕರ್ತ’ ಎಂದು ಗುರುತಿಸಿಕೊಂಡಾತ ಬೇಜವಾಬ್ದಾರಿಯಾಗಿ ಕಾಮೆಂಟ್ ಮಾಡಿದಾಗ ನೇರ ಸಂಪಾದಕರಿಗೆ ದೂರು ಕೊಟ್ಟರು. ಆದರೆ ಅಂತಹ ವ್ಯಕ್ತಿಯೇ ಅಲ್ಲಿಲ್ಲ ಎಂಬುದು ಗೊತ್ತಾದದ್ದು ಅವರಿಂದ ಸ್ಪಷ್ಟೀಕರಣ ಸಿಕ್ಕ ನಂತರವೇ. ಇನ್ನೊಂದು ಪ್ರಕರಣದಲ್ಲಿ ಗಾಣಧಾಳು ಶ್ರೀಕಂಠ ಹೆಸರಿನಲ್ಲಿ ಬೈಗುಳದ ಪತ್ರವೊಂದು ಬ್ಲಾಗೊಂದಕ್ಕೆ ಬಂತು. ಅದಕ್ಕೆ ಕೆಲವೇ ನಿಮಿಷ ಮುಂಚೆ ಅವರಿಂದ ಇನ್ನೊಂದು ಸಭ್ಯ ಕಾಮೆಂಟ್ ಬಂದಿತ್ತು. ಹೀಗೇಕೆ? ಎಂದು ಹುಡುಕಿದಾಗ ಗೊತ್ತಾದದ್ದು ಅವರು ಕಾಮೆಂಟ್ ಕಳಿಸಿದ ಕಂಪ್ಯೂಟರ್ ನಿಂದಲೇ ಮತ್ತೊಬ್ಬರು ಕಾಮೆಂಟ್ ಕಳಿಸಿದ್ದರು. ಅದು ಶ್ರೀಕಂಠ ಅವರ ಹೆಸರಿನಲ್ಲೇ ಪ್ರಕಟವಾಗಿತ್ತು. ಒಂದೇ ಸಿಸ್ಟಂ ಬಳಸುವವರು ಸೈನ್ ಔಟ್ ಮಾಡದೇ ಹೋದರೆ ಆಗುವ ಪರಿಣಾಮ ಇದು.

‘ನನ್ದೊಂದ್ಮಾತು’ ಬ್ಲಾಗ್ ನ ಬಿ ಆರ್ ಸತ್ಯ ನಾರಾಯಣ ಅವರು ಇಂತಹ ಅನಾಮಧೇಯರನ್ನು ‘ಬೆತ್ತಲೆ ಸಾಮ್ರಾಜ್ಯದ ಚಕ್ರವರ್ತಿಗಳು’ ಅಂತ ಕರೆದಿದ್ದಾರೆ. ತಾವು ಕತ್ತಲೆಯಲ್ಲಿದ್ದು, ಬೇರೆಯವರನ್ನು ಬೆಳಕಿನಲ್ಲಿ ಬೆತ್ತಲೆ ನೋಡುವ ಚಟ ಇವರದ್ದು’ ಅನ್ನುತ್ತಾರೆ. ‘ಸುಮ್ಮನಿರುವುದು ಉತ್ತೇಜನ ಕೊಡುವಷ್ಟೇ ತಪ್ಪು’ ಅನ್ನುವುದು ಟೀನಾ ಅವರ ಖಡಕ್ ಅಭಿಪ್ರಾಯ. ಹಾಗೆಂದಾಗ ನನಗೆ ನೆನಪಿಗೆ ಬಂದಿದ್ದು ಪುಣೆಯ ಸೌಪರ್ಣಿಕಾ ಹೊಳ್ಳ. ಮುಂಬೈ ಭಯೋತ್ಪಾದಕರ ದಾಳಿಗೆ ಸಿಕ್ಕು ನಲುಗಿದಾಗ ಹೊಳ್ಳ ತಮ್ಮ ‘ನೀಲಾಂಜಲ’ ಬ್ಲಾಗ್ ನಲ್ಲಿ ‘ನಾವು ಬ್ಲಾಗರ್ ಗಳು ಸುಮಾನಿರಬೇಕೇಕೆ ?’ ಅಂತ ಪ್ರಶ್ನಿಸಿದರು. ಬ್ಲಾಗ್ ಗಳ ಹಣೆಪಟ್ಟಿ ಕಪ್ಪಾಗಿ ಪ್ರದರ್ಶಿಸೋಣ, ಬ್ಲಾಗ್ ನಲ್ಲಿ ಕನಿಷ್ಠ ಒಂದು ಕಪ್ಪು ಚಿಹ್ನೆಯಾದರೂ ಇರಲಿ ಎಂದರು. ಎಷ್ಟೊಂದು ಬ್ಲಾಗರ್ ಗಳಿಗೆ ಹೌದಲ್ಲಾ? ಅನಿಸಿತು. ಬ್ಲಾಗ್ ಹಣೆಪಟ್ಟಿ ಸೂತಕದ ಛಾಯೆ ಹೊತ್ತು ನಿಂತಿತು. ಒಂದು ಯೋಚನೆ, ಒಬ್ಬ ಬ್ಲಾಗರ್ ಉತ್ಸಾಹ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಸೌಪರ್ಣಿಕಾ ಉದಾಹರಣೆಯಾದರು.

‘ಕನ್ನಡಪ್ರಭ’ದ ಕಾರ್ಯ ನಿರ್ವಾಹಕ ಸಂಪಾದಕ ರವಿ ಹೆಗಡೆ ಅವರು ನೀಡುತ್ತಿರುವ ಸಲಹೆಯೂ ಅದೇ- ‘ಅನಾಮಧೇಯತ್ವ ಮಿಸ್ ಯೂಸ್ ಹಾಗೂ ಬೇಜವಬ್ದಾರಿಯಾಗುತ್ತಿರುವ ಬಗ್ಗೆ ನನ್ನ ವಿರೋಧವಿದೆ. ಇಂತ ಬ್ಲಾಗ್ ಗಳಲ್ಲಿ ಯಾರ ಶೀಲಹರಣವನ್ನಾದರೂ ಮಾಡಬಹುದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಜವಾಬ್ದಾರಿಯುತ ಬ್ಲಾಗಿಂಗ್ ಹಾಗೂ ಪ್ರತಿಕ್ರಿಯೆಯ ಆಂದೋಲನ ಆರಂಭಿಸಬೇಕು’ ಎಂದಿದ್ದಾರೆ. ಜಯಂತ ಕಾಯ್ಕಿಣಿ ದನಿಗೂಡಿಸಿದ್ದಾರೆ.

ಅತ್ಯಂತ ಜನಪ್ರಿಯ ‘ಇಂಡಿಯಾ ಅನ್ ಕಟ್’ ನಡೆಸುತ್ತಿರುವ ಬರಹಗಾರ ಅಮಿತ್ ವರ್ಮಾ ಕಾಮೆಂಟ್ ಗಳ ಸಹವಾಸವೇ ಬೇಡ ಎಂದು ಕಾಮೆಂಟ್ ಗಳಿಗೆ ಬಾಗಿಲು ಮುಚ್ಚಿಬಿಟ್ಟಿದ್ದಾರೆ. ರಾಕೇಶ್ ಮಥಿಯಾಸ್ ನೀಡಿದ ಲಿಂಕ್ ಹುಡುಕುತ್ತಾ ಹೋದ ನನಗೆ ಕಂಡಿದ್ದು ‘ ಅಗ್ರೆಸಿವ್ ಅಬ್ಯೂಸ್’ ನಿಂದ ಬೇಸತ್ತ ಅವರ ದನಿ.

ಒಂದು ಕಾರ್ಟೂನ್ ಇತ್ತು. ‘to be or not to be’ ಎನ್ನುವ ಜನಪ್ರಿಯ ಹಾಮ್ಲೆಟ್ ಡೈಲಾಗ್ ಬರೆದ ಷೇಕ್ಸ್ಪಿಯರ್ ಕಂಪ್ಯೂಟರ್ ಮುಂದೆ ಕುಳಿತಿದ್ದಾನೆ. ಆತನಿಗೆ ಕನ್ಫ್ಯೂಶನ್ ಶುರುವಾಗಿದೆ. ‘to blog or not to blog’ ಅಂತ. ಈ ಗೊಂದಲ ಈಗ ಕನ್ನಡದ ಬಹುತೇಕ ಬ್ಲಾಗಿಗರ ಮುಂದಿದೆ

‍ಲೇಖಕರು avadhi

August 25, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This