ಒಂದು ಐಡೆಂಟಿಟಿಗಾಗಿ ಏನೆಲ್ಲಾ…

-ಚೇತನಾ ತೀರ್ಥಹಳ್ಳಿ

“ಏ!ಈ ಸಾರ್ತಿಯೂ ಜ್ಞಾನೇಂದ್ರಣ್ಣ ನಿಲ್ತಿದಾರೆ ಕಣೇ, ಓಟ್ ಹಾಕಕ್ ಬಾರೇ ಮಾರಾಯ್ತಿ ಬಸ್ ಚಾರ್ಜಿಗೆ ವ್ಯವಸ್ಥೆ ಮಾಡ್ಸೋಣ!”
ತಮ್ಮನ ಗೆಳೆಯ ಫೋನಲ್ಲೆ ಕ್ಯಾನ್ವಾಸು ಶುರು ಹಚ್ಚಿದ್ದ.
“ಇಲ್ಲಾ ಕಣೋ, ಬೆಂಗ್ಳೂರಲ್ಲಿ ಐಡಿ ಕಾರ್ಡಿಗೆ ಅಪ್ಲಿಕೇಶನ್ನು ಹಾಕಿದೀನಿ, ತೀರ್ಥಳ್ಳೀದು ಕ್ಯಾನ್ಸಲ್ ಅಗೋಗಿರತ್ತೆ” ಅಂತ ನಾನು ಜಂಭದಿಂದ ಹೇಳಿದ್ದೇ ತಡ, ತನ್ ಕೆಲ್ಸ ಮುಗೀತು ಅನ್ನೋಹಾಗೆ “ಓಕೆ ಕಣೇ, ಬೈ” ಅಂದು ಫೋನಿಟ್ಟುಬಿಟ್ಟ!

ನಂಗೇನೋ ಈ ಸಾರ್ತಿ ಊರಲ್ಲೆ ಓಟು ಮಾಡ್ಬೇಕು ಅಂತಲೇ ಮನಸಿತ್ತು. ಇಷ್ಟಕ್ಕೂ ನಾನೇನೂ ಬೆಂಗ್ಳೂರಲ್ಲಿ ಜೀವನ ಕಳೆಯೋ ಪ್ಲಾನು ಮಾಡಿದವಳಲ್ಲ. ಆದ್ರೇನು ಮಾಡೊದು? ರೇಷನ್ ಕಾರ್ಡಿಗೆ, ಗ್ಯಾಸಿಗೆ, ಕೊನೆಗೆ ಮೊಬೈಲಿಗೂ ಐಡಿ ಪ್ರೂಫ್ ಬೇಕು, ಬೆಂಗ್ಳೂರಿಂದೆ ಆಗಿರ್ಬೇಕು ಇತ್ಯಾದಿ ಕಿರಿಕಿರಿಗಳಿಗೆ ಬೇಸ್ತುಬಿದ್ದು ಇಲ್ಲಿಯದೊಂದು ಐಡಿ ಪಡ್ಕೊಳೋ ಯೋಚನೆ ಮಾಡಿದೆ.

ಹಾಗೆ ನಾನು ಫೆಬ್ರವರಿಯಲ್ಲಿ ಅರ್ಧ ದಿನ ಆಫೀಸಿಗೆ ರಜೆ ಹಾಕಿ ಕಾರ್ಪೊರೇಷನ್ ಆಫೀಸಿಗೆ ಹೋಗಿ, ಅಲ್ಲಿನ ಸಿಬ್ಬಂದಿ ಕೂಗುತ್ತ- ಕಿರಿಚುತ್ತ ನನ್ನ ಕ್ಯಾಚ್ ಕ್ಯಾಚ್ ಆಡಿ ಅಂತೂ ಎಂಥದೋ ಒಂದು ಶೀಟಿನ ತುದಿ ಹರಿದು- “ಇದ್ನ ಫೋಟೋ ತೆಗೆಯೋದಿನ ತಗಂಡ್ ಬನ್ನಿ” ಅಂದು ಕಳಿಸಿದರಾ….
ಇನ್ನೇನು, ‘ನಾನು ಬೆಂಗಳೂರಿಗಳಾಗೇ ಬಿಟ್ಟೆ’ ಅಂತ ಸಂಭ್ರಮಿಸಿಹೋದೆ!

ಅಂತೂ ಇಂತೂ ಮೊನ್ನೆ ಗಾಯತ್ರಿ ನಗರ ವಾರ್ಡಿನಲ್ಲಿ ಫೋಟೋ ತೆಗೆಯುವ ಗಲಾಟೆ ಶುರುವಾಯ್ತು. ಮೊದಲೇ ಖಾಯಿಲೆ ಬಿದ್ದು ಮೂರು ದಿನ ಎಕ್ಸ್ಟ್ರಾ ರಜೆ ಹಾಕಿದ್ದ ನಾನು ‘ಓಟಿನ’ ಆಸೆಗೆ ಬಿದ್ದು ಮತ್ತರ್ಧ ದಿನ ರಜೆ ಗೀಚಿ ಮರಿಯಪ್ಪನ ಪಾಳ್ಯದಲ್ಲಿ ಕಾಯುತ್ತಿದವರೊಟ್ಟಿಗೆ ಕಾದೂಕಾದೆ.
“ಇಲ್ಲಿಂದ ಸೀದಾ ಗಾಯತ್ರಿ ನಗರದ ತಮಿಳು ಸ್ಕೂಲಿಗೆ ಹೋಗಿ. ಅಲ್ಲಿ ತೆಗೀತಿದಾರೆ” ಅಂತ ಪುಣ್ಯಾತ್ಮನೊಬ್ಬ ಮಹಿತಿ ಕೊಡೋಹೊತ್ತಿಗೆ ಬಿಸಿಲಿಗೆ ಪೂರಾ ಕಾದುಹೋಗಿದ್ದೆ.
ತೊಗೋ… ಮತ್ತರ್ಧ ದಿನ ರಜಾ.
ಆದರೇನು ಬಂತು ಮಣ್ಣು? ನಾನು ಅಲ್ಲಿ ಸೇರೋ ಹೊತ್ತಿಗೆ ಹನುಮಂತನ ಬಾಲದುದ್ದ ಕ್ಯೂ. ಹೊಟ್ಟೆ ಬೇರೆ ಹಸಿದು ಗುಟುರಾಯಿಸ್ತಿತ್ತು. “ಇದೊಂದ್ಸಾರ್ತಿ ಐಡಿ ಸಿಕ್ಕು ಬಿಡ್ಲಿ, ‘ಮೇಲಿನ ಖರ್ಚು ಕೊಟ್ರೆ ಐಡಿ ಇಲ್ದೆ ರೇಶನ್ ಕಾರ್ಡ್ ಮಾಡಿಸ್ಕೊಡ್ತೀನಿ’ ಅಂದಿದ್ನಲ್ಲ, ಅವನಿಗೊಂದು ಪಾಠ ಕಲಿಸ್ತೀನಿ” ಅಂತೆಲ್ಲ ಲೆಕ್ಕ ಹಾಕುತ್ತ ಹತ್ತೂ ಬೆರಳುಗಳ ಉಗುರು ಖಾಲಿ ಮಾಡುತ್ತ ನಿಂತೆ.

ಊಹೂಂ…. ಸಂಜೆ  ಆರಾದರೂ ಕ್ಯೂ ಕರಗಲಿಲ್ಲ. ನಾಲ್ಕೈದು ಸರ್ತಿ ಕಂಪ್ಯೂಟರು ಕೈಕೊಟ್ಟು ಕಾಲ್ಕೊಟ್ಟು, ಅಲ್ಲಿದ್ದ ಇಪ್ಪತ್ತೈದು ಪರ್ಸೆಂಟ್ ಜನರ ಫೋಟೋ ತೆಗೆಯೋದೂ ಕಷ್ಟವಾಗಿಹೋಗಿತ್ತು.  ಕತ್ತಲಾಗೋಹೊತ್ತಿಗೆ ನಮ್ಮ ಕೆಲಸ ಮುಗೀತು ಅಂತ ಘೋಷಿಸಿ ಫೋಟೋ ಮಂದಿ ಪ್ಯಾಕ್ ಅಪ್ ಮಾಡ್ಕೊಂಡು ಹೊರಟುಹೋದರು.
ಅಲ್ಲಿದ್ದವರೆಲ್ಲ ಗೊಣಗುತ್ತ, ಹಿಡಿ ಶಾಪ ಹಾಕುತ್ತ ಮನೆ ಕಡೆ ನಡೆದರು.

ಮಾರನೆ ದಿನ ಮತ್ತೆ ಗಾಯತ್ರಿ ನಗರದಲ್ಲಿ ಫೋಟೋ ತೆಗೆದರಾ? ಗೊತ್ತಿಲ್ಲ. ಪೇಪರಲ್ಲೇನೋ ನಿಮ್ಮ ಅಪ್ಲಿಕೇಶನ್ನು, ಫೋಟೋ ಡ್ರಾಪ್ ಮಾಡಿ, ನಾವು ಕಾರ್ಡ್ ರೆಡಿ ಮಾಡ್ಕೊಡ್ತೇವೆ ಅಂತ ಹಾಕಿದ್ರು… ಆದ್ರೆ ಎಲ್ಲೆಲ್ಲಿ ಅಂತ ಮಾಹಿತಿ ಇರಲಿಲ್ಲ. ಮತ್ತೆ ಒಂದು ದಿನದ ಸಂಬಳ ಬಲಿಕೊಟ್ಟು ರಜೆ ಹಾಕಿ ಹೋಗಿ ವಿಚಾರಿಸುವ ತೆವಲು ನನ್ನಲ್ಲಿ ಉಳಿದಿರಲಿಲ್ಲ.

ಕೊನೆಗೂ ನನ್ನದೊಂದು ಅಧಿಕೃತ ಐಡೆಂಟಿಟಿ ಬೇಕು ಅನ್ನೋ ಆಸೆಗೆ ಬಿದ್ದು- ಅತ್ತ ತೀರ್ಥಳ್ಳಿಯೂ ಇಲ್ಲದೆ, ಇತ್ತ ಬೆಂಗಳೂರೂ ಇಲ್ಲದೆ ಅಬ್ಬೇಪಾರಿಯಾಗಿ ಹೋದೆ.
ವಲಸಿಗರ ಬದುಕು ಅಂದ್ರೆ ಇಷ್ಟೇನಾ?

‍ಲೇಖಕರು avadhi

April 28, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

3 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: