ಒಂದು ಒಳ್ಳೆಯ ರಿವ್ಯೂ

ಮಲೆಗಳಲ್ಲಿ ಮದುಮಗಳು: ಒಂದು ಅದ್ಭುತ ರಂಗಾನುಭವ, ಆದರೆ…
-ದಿಲಾವರ್ ರಾಮದುರ್ಗ
ದಿಲ್ ಸೆ
ಚಿತ್ರಗಳು: ವೀಣಾ ನರಸಸೆಟ್ಟಿ

ಮೈಸೂರು ರಂಗಾಯಣದಂಗಳದಲ್ಲಿ ಸೃಷ್ಟಿಯಾಗಿದ್ದ ‘ಮಲೆಗಳಲ್ಲಿ’ ಮದುಮಗಳು ಸಂಭ್ರಮಿಸಿದ ಪರಿಗೆ ರಂಗಪ್ರೇಕ್ಷಕರೆಲ್ಲ ಮೂಕವಿಸ್ಮಿತ!
ಕನ್ನಡದ ಮಹಾಕಾದಂಬರಿ “ಮಲೆಗಳಲ್ಲಿ ಮದುಮಗಳು” (ರಚನೆ: ಕುವೆಂಪು) ಹೀಗೆ ಅಕ್ಷರಶಃ ಜೀವಪಡಕೊಂಡು ಒಂದಿಡೀ ರಾತ್ರಿ ಬದುಕಿತು! (ಮದುಮಗಳು ಈಗ ಹಲವು ರಾತ್ರಿಗಳನ್ನೂ ಕಾಣುತ್ತಿದ್ದಾಳೆ) ಭಾರತೀಯ ರಂಗಭೂಮಿ ಇತಿಹಾಸದಲ್ಲಿ ಕಾದಬಂಬರಿಯೊಂದು ಹೀಗೆ ರಂಗರೂಪ ಕಂಡಿದ್ದು ಬಹುಶಃ ಇದೇ ಮೊದಲಿರಬೇಕು. “ಮಲೆಗಳಲ್ಲಿ ಮದುಮಗಳು” ಹೆಸರಾಂತ ರಂಗಕರ್ಮಿ ಸಿ. ಬಸವಲಿಂಗಯ್ಯ ಅವರ ಮಹತ್ವಾಕಾಂಕ್ಷೆಯ ರಂಗಸಾಹಸ.
ಪ್ರಯೋಗದಲ್ಲಿ ಬಹುವಾಗಿ ಸೆಳೆದಿದ್ದು ರಂಗವಿನ್ಯಾಸ (ವಿನ್ಯಾಸ: ದ್ವಾರ್ಕಿ). ಮಲೆನಾಡಿನ ಒಂದು ಭಾಗವನ್ನೇ ಕತ್ತರಿಸಿ ತಂದು ರಂಗಾಯಣದ ಆವರಣದಲ್ಲಿಟ್ಟಂತಿತ್ತು. ನಾಟಕದ ಜೀವಾಳವೇ ಈ ವಿನ್ಯಾಸ ಎಂದರೆ ತಪ್ಪಲ್ಲ. ಒಟ್ಟಾರೆಯ ಕಥೆಯ ಮೂಡ್ ಸೃಷ್ಟಿಯಾಗೋದೇ ಮಲೆನಾಡಿನ ಪರಿಸರದಿಂದ. ಪಾತ್ರಗಳನ್ನು ಇದರಿಂದ ಹೊರಕ್ಕಿಟ್ಟರೆ ಕಥೆಯೇ ನೀರಸ. ಹೀಗಾಗಿ ರಂಗದ ಮೇಲೆ ಕಾದಂಬರಿ ತರಲು ಇಂಥ ಪರಿಸರದ ಮರುಸೃಷ್ಟಿಯ ಸಾಹಸ ಅನಿವಾರ್ಯ. ಒಟ್ಟು ರಂಗವನ್ನು ನಾಲ್ಕು ಸ್ಥಳಗಳಲ್ಲಿ ವಿಂಗಡಿಸಿಕೊಳ್ಳಲಾಗಿತ್ತು. ಕಥೆಯ ಓಘ ಮತ್ತು ಅದು ಬಯಸುವ ಪರಿಸರ, ಮೂಡ್ ಗೆ ತಕ್ಕಂತೆ ರಂಗಸಜ್ಜಿಕೆ ಮಾಡಲಾಗಿತ್ತು. ಕಥೆಯ ಒಂದು ಭಾಗ ಮೊದಲ ರಂಗಸಜ್ಜಿಕೆಯಲ್ಲಿ ಕೊನೆಗೊಂಡರೆ ಮುಂದಿನದು ಮಿಕ್ಕ ರಂಗಸಜ್ಜಿಕೆಗಳಲ್ಲಿ… ಹೀಗೆ ದೃಶ್ಯಗಳು ವಿವಿಧ ರಂಗಸಜ್ಜಿಕೆಗಳಿಗೆ ಬದಲಾದಂತೆ ಪ್ರೇಕ್ಷಕರೂ ಶಿಫ್ಟ್ ಆಗುತ್ತಿದ್ದರು. ಪ್ರೇಕ್ಷಕರಿಗೆ ಪರಿಸರವನ್ನು ತೋರಿಸುವ ಬದಲು, ಪ್ರೇಕ್ಷಕರನ್ನೇ ಆ ಪರಿಸರಕ್ಕೆ ಕೊಂಡೊಯ್ಯುವ ಬಸವಲಿಂಗಯ್ಯ, ಸೂಕ್ತ ತಂತ್ರವನ್ನೇ ಆಯ್ದುಕೊಂಡಿದ್ದಾರೆ.
ಇಂಥ ಪರಿಸರ ಸ್ನೇಹಿ ನಾಟಕಕ್ಕೆ ಈ ವಾತಾವರಣವೇ ಬೇಕು ಕೂಡ. ಇದೊಂದು ವಿಶಿಷ್ಠ ರಂಗಾನುಭವ. ಪ್ರಯೋಗ ಇಂಟೀಮೇಟ್ ಪ್ರೊಸಿನಿಯಂ ಥಿಯೇಟರ್ ಅಥವಾ ಎನ್ವಿರಾನ್ಮೆಂಟ್ ಥಿಯೇಟರ್ ಗಿಂತ ಕೊಂಚ ಭಿನ್ನವಾಗಿದೆ. ಈ ಸಾಹಸ ನೋಡಿದಾಗ ನನಗೆ ದೆಹಲಿಯ ಹೆಸರಾಂತ ರಂಗಕರ್ಮಿ ಅಮೀರ್ ರಜಾ ಹುಸೇನ್ ನೆನಪಾದರು. “ದಿ ಲೆಜೆಂಡ್ ಆಫ್ ರಾಮಾ”, ಕಾರ್ಗಿಲ್ ಕುರಿತ “ಫಿಫ್ಟಿ ಡೇ ವಾರ್” ಮತ್ತಿತರ ಪ್ರಯೋಗಗಳನ್ನು ಇಂಥ ವಿನ್ಯಾಸದಲ್ಲಿ ನಿರೂಪಿಸಿ ಆಗಲೇ ಭಾರತೀಯ ರಂಗಭೂಮಿಗೊಂದು ಹೊಸ ಅನುಭವ ಕಟ್ಟಿಕೊಟ್ಟು ಹೆಸರಾದವರು ಹುಸೇನ್. ಕಾರ್ಗಿಲ್ ಕುರಿತ ನಾಟಕಕ್ಕೆ ಅವರು ಆರು ಎಕರೆ ಪ್ರದೇಶವನ್ನೇ ಬಳಸಿಕೊಂಡಿದ್ದರು. ಅಲ್ಲಿ ಹೆಲಿಕಾಪ್ಟರ್, ಯುದ್ಧದ ಸನ್ನಿವೇಶಗಳನ್ನೆಲ್ಲ ಯಥಾವತ್ ಆಗಿ ಸೃಷ್ಟಿಸಿದ್ದರು. ಅಲ್ಲೂ ಪ್ರೇಕ್ಷ್ಕರು ದೃಶ್ಯದಿಂದ ದೃಶ್ಯಕ್ಕೆ ಶಿಫ್ಟ್ ಆಗುತ್ತಿದ್ದರು.
ಕನ್ನಡದ ಸಂದರ್ಭದಲ್ಲಿ ಕ್ರೈಸ್ತನ ಬಗ್ಗೆ ಇಕ್ಬಾಲ್ ಅಹಮದ್ ಮಾಡಿದ ಸಾಹಸ, ವಾಲ್ಟರ್ ಡಿಸೋಜ ನಿರ್ದೇಶನದ ‘ಸ್ಪಾರ್ಟಕಸ್’ ನಾಟಕ (ಧಾರವಾಡದ ಸಾಹಿತ್ಯ ಭವನ ಕಟ್ಟಡವನ್ನೇ ಬಳಸಿಕೊಂಡು ಮಾಡಿದ ಪ್ರಯೋಗ. ರಂಗವಿನ್ಯಾಸ ನಾನೇ ಮಾಡಿದ್ದೆ. ರೋಮನ್ ವಿದ್ರೋಹಿ ಸ್ಪಾರ್ಟಕಸ್ ನಾಟಕಕ್ಕೆ ರೋಮನ್ ಶೈಲಿಯನ್ನು ನೆನಪಿಸುವ ಧಾರವಾಡ ಸಾಹಿತ್ಯ ಭವನ ಕಟ್ಟಡ ಸೂಕ್ತವೆನಿಸಿ, ಅದನ್ನೇ ಕೊಂಚ ಇತರ ಪರಿಕರಗಳೊಂದಿಗೆ ಮಾರ್ಪಡಿಸಿ ಬಳಸಿಕೊಂಡಿದ್ದೆವು ) ಪ್ರಯೋಗಗಳಲ್ಲಿ ತಕ್ಕಮಟ್ಟಿನ ಇಂಥ ತಂತ್ರ ಬಳಸಿದ್ದರ ನೆನಪಾಗುತ್ತಿದೆ.
ರಂಗಾಯಣದ ಮಾಗಿದ ಕಲಾವಿದರು ಮತ್ತು ಈ ಪ್ರಯೋಗಕ್ಕೆಂದೇ ತರಬೇತುಗೊಂಡ ಹೊಸಬರು ಒಂದಿಡೀ ರಾತ್ರಿ ಸತತ ಒಂಭತ್ತು ಗಂಟೆಗಳ ಕಾಲ ನಾಲ್ಕು ರಂಗ ಸಜ್ಜಿಕೆಗಳಲ್ಲಿ ಕಾದಂಬರಿಯನ್ನೇ ಬದುಕಿದರು. ಮಲೆನಾಡಿನ ಪರಿಸರ, ಅಲ್ಲಿನ ಜನಸಂಸ್ಕೃತಿಯನ್ನು ಕಣ್ಮುಂದೆ ಕಟ್ಟಿಕೊಟ್ಟರು. ಡಾ. ಕೆ.ವೈ. ನಾರಾಯಣ ಸ್ವಾಮಿ ಕಾದಂಬರಿಯನ್ನು ರಂಗಕ್ಕಿಳಿಸಿದ ಪರಿ, ಆ ಅದ್ಭುತ ರಂಗವಿನ್ಯಾಸ, ಬೆಳಕು, ರಂಗಪರಿಕರ, ವಸ್ತ್ರ ವಿನ್ಯಾಸ (ಪ್ರಮೋದ ಶಿಗ್ಗಾಂವ್), ಸಂಗೀತ (ಹಂಸಲೇಖ), ಗುತ್ತಿ, ಹುಲಿಯ (ಗುತ್ತಿನಾಯಿ) ಪಾತ್ರ, ಹೆಗ್ಗಡತಿಯರು, ಪೀಂಚಲು, ಐತಿ, ಸುಬ್ಬಣ್ಣ ಹೆಗ್ಗಡೆ, ತಿಮ್ಮಪ್ಪ ಹೆಗ್ಗಡೆ, ನಾಗಕ್ಕ, ವೆಂಕಟಣ್ಣ, ಪಾದ್ರಿ, ದೇವಯ್ಯ ಪಾತ್ರಗಳ ಅಭಿನಯ ಒಂದು ವಿಶಿಷ್ಠ ರಂಗಾನುಭವ ನೀಡಿತು. ಇವರೆಲ್ಲರ ಶ್ರಮಕ್ಕೆ ಹ್ಯಾಟ್ಸಾಫ್!
ಕನ್ನಡದ ರಂಗಭೂಮಿಯನ್ನು ಬಸವಲಿಂಗಯ್ಯ ಬಹು ಎತ್ತರಕ್ಕೆ ಕೊಂಡೊಯ್ಯಬಲ್ಲರೆನ್ನುವುದನ್ನು ಈ ಪ್ರಯೋಗ ಸಾಬೀತುಪಡಿಸಿತು.
ಪ್ರಯೋಗದ ಒಳದನಿಯ ಬಗ್ಗೆ
ಯಾವುದೇ ಕೃತಿಯ ಸಬ್ ಟೆಕ್ಸ್ಟ್ ಮೇಲೇ ಕಣ್ಣಿಡುವ ಬಸವಲಿಂಗಯ್ಯ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಮೂಲ ಆಶಯಗಳನ್ನು ಕಡೆಗಣಿಸಿಲ್ಲ. ಆದರೆ, ಇಡೀ ಕಥಾಹಂದರದ ಒಳದನಿಯಲ್ಲಿ ಗುತ್ತಿ ಪಾತ್ರಕ್ಕಿರುವ ಸ್ಕೋಪ್ ಬಸುಗೆ ಸೆಳೆದಂತಿದೆ. ಆತನ ಮತ್ತಷ್ಟು ಹೀರೋ ಮಾಡುವ ಸಾಹಸಕ್ಕೆ ಇಲ್ಲಿ ಅವಕಾಶ ಇದ್ದುದನ್ನು ಅವರು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಆ ಮೂಲಕ ಇಡೀ ಕಾದಂಬರಿಯನ್ನು ಮತ್ತೆ ಬರೆಯಲೆತ್ನಿಸಿದ್ದಾರೆ ಬಸವಲಿಂಗಯ್ಯ. ಒಟ್ಟಾರೆ ಶಬುದಕ್ಕೆ ಎಷ್ಟೋ ದಕ್ಕದ್ದನ್ನು ದೃಶ್ಯದಲ್ಲಿ ಬರೆದಿದ್ದಾರೆ.
ಕೆಲವು ಪಾತ್ರಗಳ ಮೇಲಿನ ಅವರ ಸಾಮಾಜಿಕ ಕಾಳಜಿಗಿಂತ ರಾಜಕೀಯ ಕಾಳಜಿ ಹೆಚ್ಚು ಕೆಲಸ ಮಾಡಿದಂತಿದೆ. ಗುತ್ತಿ ಬಗ್ಗೆ ಅವರದು ಹೀರೋಯಿಸಂ ಅಪ್ರೋಚ್. ಸ್ತ್ರೀ ಪಾತ್ರಗಳ ಬಗ್ಗೆ ಫೆಮಿನಿಸ್ಟ್ ಧೋರಣೆ. ಕಾದಂಬರಿಯ ಕಥೆ ಕೂಡ ಫೆಮಿನಿಸಂ ಗೆ ಹೆಚ್ಚು ಒತ್ತು ಕೊಟ್ಟಿದೆ. ಈ ಕಾಲದಲ್ಲಂತೂ ಫೆಮಿನಿಸಂ ಒಂದು ಜನಪ್ರಿಯ ಧೋರಣೆಯಾಗಿಬಿಟ್ಟಿದೆ… ಮಾರುಕಟ್ಟೆ ಸಂಸ್ಕೃತಿಯ ಲಾಭಕ್ಕೆ ಹುಟ್ಟಿಕೊಂಡ ಫೆಮಿನಿಸಂ ಮತ್ತು ಮಲೆಗಳಲ್ಲಿ ಮದುಮಗಳ ಫೆಮಿನಿಸಂ ಎರಡೂ ಬೇರೆ ನೆಲೆಯಲ್ಲಿದ್ದರೂ ಕಾಲದ ಹೊಡೆತಕ್ಕೆ ಮಲೆಗಳಲ್ಲಿ ಮದುಮಗಳೂ ಕೂಡ ಮಾರುಕಟ್ಟೆಗೇ ಬಂದು ನಿಲ್ಲುತ್ತಾಳೆ. ಇದು ಈಗ ನಾಟಕವಾಗಿ ಪ್ರದರ್ಶನಗಳ ಮೇಲೆ ಪ್ರದರ್ಶನ ಕಾಣುತ್ತಿರುವುದು ಕೂಡ ಮಾರುಕಟ್ಟೆ (ಪ್ರತಿಷ್ಠೆ, ಸ್ವಪ್ರತಿಷ್ಠೆ, ಸ್ವಾರ್ಥ, ಪ್ರಚಾರ, ರಾಜಕೀಯ ಲಾಭ ಅಥವಾ ಅಜೆಂಡಾ) ಸಂಸ್ಕೃತಿಯ ನೆಲೆಯಲ್ಲೇ.
ಇಡೀ ನಾಟಕದಲ್ಲಿ ಹೆಗ್ಗಡೆಯರ ದರ್ಪ, ಅವರ ಹೆಂಗಸರ ಹಾದರ, ಅವರೊಳಗೆ ಆಗಾಗ ತಮ್ಮ ಹಿತಾಸಕ್ತಿಗಾಗೇ ಮಿಸುಕಾಡುವ ಮನುಷ್ಯತ್ವ, ದಲಿತರ ಸ್ಥಿತಿ, ನಾಯಿ, ಕೀಟಗಳು, ಪಶುಪಕ್ಷಿಗಳು, ಕಾಡು, ಹೆಂಡ ….ಹೀಗೆಲ್ಲ ಎಲ್ಲದಕ್ಕೂ ಕಥೆಗಾರ ಮತ್ತು ನಿರ್ದೇಶಕರ ದೃಷ್ಟಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮದ ಮೇಲಿದೆ. ರಾಜಕೀಯ ಆಯಾಮದಲ್ಲೂ ಕಥೆಯನ್ನು ಅಥವಾ ನಾಟಕವನ್ನು ಕಂಡಿದ್ದರೆ ಗುತ್ತಿ ಇಲ್ಲಿ ಕ್ರಾಂತಿಕಾರಿ ಹೀರೋ ಆಗುತ್ತಿದ್ದ. ಆದರೆ, ಸಂಘರ್ಷವೇ ಇಲ್ಲ ಇಲ್ಲಿ! ಇರೋದೆಲ್ಲ ಬರಿಯ ಚಡಪಡಿಕೆ… ಇಲ್ಲಿ ಗುತ್ತಿ ಕೇವಲ ಆತ್ಮಾನುಕಂಪ ಗಳಿಸೋದಕ್ಕೆ ಯತ್ನಿಸುತ್ತಾನೆ. ಅವನ ಮ್ಯಾನರಿಸಂ, ಸುಳ್ಳು, ತಂತ್ರ, ದೈನ್ಯತೆ ಎಲ್ಲವೂ ಮೇಲ್ವರ್ಗದವರ ಅನುಕಂಪ ಸಂಪಾದನೆಗೆ ಸೀಮಿತಗೊಂಡಿದೆ. ಮೀಸಲಾತಿ ಕೂಡ ಇದೇ ಮನಸ್ಥಿತಿಯದು. ಮೀಸಲಾತಿ ಅನ್ನೋದು ಮೇಲ್ವರ್ಗದವರ ಹುನಾರೇ. ಕ್ರಾಂತಿಯ ಮೂಲಕ ತಮ್ಮ ಹಕ್ಕನ್ನು ಪಡೆಯಬೇಕೆನ್ನುವ ಅಂಬೇಡ್ಕರ್ ಹಂಬಲದ್ದಲ್ಲ ಇದು. ಅವರು ಕಂಡ ಕನಸಿನಂತೆ ಕ್ರಾಂತಿ ಏನಾದರೂ ನಡೆದಿದ್ದರೆ ದಲಿತರು ಇನ್ನೂ ಮೀಸಲಾತಿ ನಂಬಿಕೊಂಡೇ ಬದುಕಬೇಕಾಗುತ್ತಿರಲಿಲ್ಲ. ಅವರದೇ ರಾಜ್ಯ ಸ್ಥಾಪನೆಯಾಗುತ್ತಿತ್ತೋ ಏನೋ? ಪ್ರಸಕ್ತ ಸ್ಥಿತಿಯಲ್ಲಿ ಮಾಯಾವತಿ ಮಾತ್ರ ದಲಿತ ನಾಯಕತ್ವಕ್ಕೆ ಯತ್ನಿಸುತ್ತಿರುವುದ ಬಿಟ್ಟರೆ ಉಳಿದ ದಲಿತ ನಾಯಕರೆಲ್ಲ ಆಯಾಯ ಪಕ್ಷಗಳ ಮೀಸಲಾತಿ ಎನ್ನುವ ಕಂಫರ್ಟ್ ಝೋನ್ ಗಳಲ್ಲಿ ಬಂಧಿಯಾಗಿದ್ದಾರಲ್ಲವೇ?… ಅವರದೂ ಗುತ್ತಿಯ ಪಾಡು. ಇಡೀ ಜನಾಂಗ ಗುತ್ತಿನಾಯಿಯ ಪಾಡಿನಂಥದು. ನಾಟಕದಲ್ಲಿ ಗುತ್ತಿ ಉಳಿಸಲು ಹೇಗೆ ನಾಯಿ ಜೀವಪಣಕ್ಕಿಟ್ಟು ನಿಲ್ಲುವುದೋ, ಹಾಗೆ ದಲಿತರೆಲ್ಲ ತಮ್ಮ ನಾಯಕರ ಕುರ್ಚಿ-ಮಾನ ಉಳಿಸಲು ಈಗಲೂ ಶೋಷಣೆಯ ಸೆಳವಲ್ಲೇ ಈಜುತ್ತಿದ್ದಾರೆ.
ದೇವಯ್ಯ ಮತ್ತಿತರ ಗೌಡರ ಭಾನಗಡಿಗಳೆಲ್ಲ ಇಲ್ಲಿ ಹಾಸ್ಯದ ಲೇಪದಲ್ಲಿ ತೇಲಿ ರೋಮ್ಯಾಂಟಿಕ್ ಆಗಿ ಕಾಣಿಸುತ್ತವೆ. ಅದೆಲ್ಲ ಅವರ ರಸಿಕತೆ ಅಷ್ಟೆ ಎನ್ನುವ ಹಾಗಿದೆ ಚಿತ್ರಣ. ಗೌಡತಿಯರು ಅಥವಾ ಹೆಗ್ಗಡತಿಯರ ಹಾದರಗಳು, ಅವರಿವರ ಜತೆ ಹಾಸಿಗೆ ಬದಲಾಯಿಸುವ ಲಂಪಟ ಹೆಣ್ಣುಗಳು, ಸ್ವತಃ ಸೊಸೆಯನ್ನೇ ಹಾದರದ ಪಲ್ಲಂಗಕ್ಕೇರಿಸುವ ಅತ್ತೆಯಂದಿರು… ಇದೆಲ್ಲ ರಸಿಕತೆ ಮತ್ತು ಲೈಂಗಿಕ ಬಯಕೆಗಳಷ್ಟೇ ಎಂದು ತೋರಿಸುವುದು ನಾಟಕದ ಒಳಗಿನ ಹುನಾರು. ಇದನ್ನೇ ಬೇರೊಂದು ಕೆಳಜಾತಿ ಮಾಡಿದ್ದರೆ? ಅದು ಹಾದರ! ಕಥೆಯ ಈ ಮನೋಧರ್ಮವೂ ಒಂದು ಹಿಂಸೆ.
ಕ್ರೈಸ್ತ ಪಾದ್ರಿ ಪಾತ್ರವನ್ನು ತುಂಬ ತಮಾಷೆಯಾಗಿ ಕಟ್ಟಿಕೊಳ್ಳಲಾಗಿದೆ. ನಾಟಕದಲ್ಲಿ ಬರುವ ಸೈಕಲ್ ಎನ್ನುವುದು ಇಲ್ಲಿ ಆಧುನಿಕ ಮನೋಧರ್ಮದ ಸಂಕೇತ. ಆಗಿನ ಮಲೆನಾಡಿಗರ ಮನಸ್ಥಿತಿ ಆಧುನಿಕ ವಿರೋಧಿಯಾಗಿತ್ತು ಎನ್ನುವುದಕ್ಕೆ ಅದನ್ನು ಲೇವಡಿ ಮಾಡುವ ದೃಶ್ಯವೇ ಸಾಕ್ಷಿ. ಅದು ಒಟ್ಟು ಮತವೊಂದರ ಲೇವಡಿಯ ಒಂದಂಶದ ಕಾರ್ಯಕ್ರಮವಾಗುವುದು ಇದರೊಳಗಿನ ಅತ್ಯಂತ ದೊಡ್ಡ ಹಿಂಸೆ.
ಮತಾಂತರದ ಬಗ್ಗೆ ನಾಟಕದಲ್ಲಿ ಆಡಿದ ಮಾತುಗಳು ಮತೀಯವಾದದ ಧೋರಣೆಯಾಗಿ ಕಾಡುತ್ತವೆ. ಸ್ವತಃ ಕುವೆಂಪು ಮತಾಂತರದ ವಿರೋಧಿಯಾಗಿದ್ದರು. ಅದಕ್ಕೆ ಅವರಿಗೆ ಹಿಂದು ಧರ್ಮದ ಮೇಲಿನ ಪ್ರೀತಿಯೇ ಕಾರಣವಿರಬಹುದು. ಅಥವಾ ರಾಮಕೃಷ್ಣ ಪರಮಹಂಸ, ವಿವೇಕಾನಂದರಿಂದ ಪಡೆದ ಸ್ಫೂರ್ತಿಯೂ ಕಾರಣವಿರಬಹುದು. ಹಿಂದೂ ಧರ್ಮದಲ್ಲಿ ಬ್ರಾಹ್ಮಣರ ಮೇಲಾಟ ಬಿಟ್ಟರೆ ಬೇರೆ ಯಾವ ಸಮಸ್ಯೆಯೂ ಕುವೆಂಪು ಅವರನ್ನು ಕಾಡಿಲ್ಲ!
ಹೆಗ್ಗಡೆಯವರಿಗೆಲ್ಲ ಹಂದಿ ಹಿಡಿಯಲು ದಲಿತರೇ ಬೇಕು. ಮತ್ತು ಅದರ ಚರ್ಮ ಸೀಳಿ ಮಾಂಸ ತೆಗೆದು ಅವರ ಕೈಗೇ ಇಡಬೇಕು. ದಲಿತರು ತಮಗಲ್ಲೋ ಅದರ ಕರುಳೋ, ಹಂದಿಯ ತೊರಡೋ, ತಲೆಯೋ ಮಾತ್ರವನ್ನೇ ಪಡೆಯಬೇಕಾದ್ದು ಮಲೆನಾಡಿನ ಆ ಭಾಗದ ಸಾಮಾಜಿಕ ನ್ಯಾಯ! ಅಥವಾ ಅದೊಂದು ಸಂರಚನೆ. ಇಡೀ ನಾಟಕದಲ್ಲಿ ಇದೆಲ್ಲ ತಮಾಷೆಯಾಗಿ ಮತ್ತು ಸಾಮಾಜಿಕ ಸ್ಥಿತಿಗತಿಯ ಕಟ್ಟುಪಾಡುಗಳಿಗೆ ಪೂರಕವಾಗೇ ಇದೆ. (ಮೆಲ್ ಗಿಬ್ಸನ್ ನಿರ್ದೇಶನದ ‘ಅಪೊಕ್ಯಾಲಿಪ್ಟೊ’ ಚಿತ್ರದಲ್ಲೂ ಇಂಥದೇ ದೃಶ್ಯಗಳಿವೆ. ಮಿಯಾಮಿ ಬುಡಕಟ್ಟು ಜನಾಂಗದ ಮೇಲೆ ಭೂಮಾಲೀಕರಂಥ ದರ್ಪದವರ ಅತಿರೇಕ, ದುರಾಕ್ರಮಣಗಳ ಚಿತ್ರಣವದು. ಅಲ್ಲೂ ಗುತ್ತಿಯ ಹಾಗೊಂದು ಪಾತ್ರ ಜಾಗ್ವಾರ್. ಆದರೆ ಆತ ಶೂರ, ಹೋರಾಟದ ಮನೋಭಾವದವ. ಅಲ್ಲೂ ಆತ ತನ್ನ ಪ್ರೀತಿಗಾಗಿ ಓಡಾಡುತ್ತಾನೆ. ಪ್ರಾಣ ಪಣಕ್ಕಿಟ್ಟು ಅದನ್ನುಳಿಸಿಕೊಳ್ಳುತ್ತಾನೆ. ಮತೀಯವಾದದ ಠೇಂಕಾರವನ್ನು ಧಿಕ್ಕರಿಸುತ್ತಾನೆ. ನಾಟಕ ನೋಡುವಾಗ ಚಿತ್ರದ ದೃಶ್ಯಗಳು ತುಂಬ ನೆನಪಾದವು. ಒಂದು ಮಟ್ಟಿನ ಸಾಮ್ಯತೆಯೂ ಕಾಣಿಸಿತು) ಇದೆಲ್ಲ ಹೆಗ್ಗಡೆಯರ ದಬ್ಬಾಳಿಕೆ, ದುರಾಡಳಿತ ಅನಿಸೋದೇ ಇಲ್ಲ! ಆಗಿನ ಸ್ಥಿತಿಯೇ ಹಾಗಿತ್ತು ಎನ್ನುವುದು ಕೇವಲ ಸಮಜಾಯಿಷಿ.
ಹೆಗ್ಗಡೆಯರು ದಲಿತರ ಮೇಲೆ ಮಾಡುವ ದೌರ್ಜನ್ಯವಾಗಲಿ, ಅವರ ಬೆವರಿನ ಮೇಲೆ ತಮ್ಮ ಗೌಡಿಕೆಯ ದೌಲತ್ತಿನರಮನೆ ಕಟ್ಟುವುದಾಗಲಿ ಸಹಜ. ದಲಿತರ ಜತೆಗಿನ ಒಡನಾಟಕ್ಕೆ ಒಂದು ಮಟ್ಟಿನ ಮನುಷ್ಯತ್ವದ ಅಂತಃಕರಣವನ್ನು ಇಲ್ಲಿ ಹೆಗ್ಗಡೆಯವರಿಗೆ ಅಂಟಿಸಲಾಗಿದೆ. ಹೆಗ್ಗಡೆಗಳು ತಮ್ಮ ಅನುಕೂಲಕ್ಕೆಂದೇ ಹತ್ತಿರದಲ್ಲಿ ದಲಿತರಿಗೊಂದು ಕೇರಿ ರೂಪಿಸಿ, ಹೊಲ ಗದ್ದೆಗಳಲ್ಲಿ ಗೇಯುವುದಕ್ಕೆ ಅವರ ಬೆವರನ್ನು ಬಳಸಿಕೊಳ್ಳುತ್ತಾರೆ. ಬದಲಿಗೆ ಕೊಡೋದು ತುತ್ತನ್ನವಷ್ಟೇ. ಇದನ್ನೇ ಸಹಬಾಳ್ವೆ ಎನ್ನುವಂತೆ ವರ್ತಿಸುವ ಧೋರಣೆಯನ್ನೇ ಆಗಿನ ಜನಸಂಸ್ಕೃತಿಯ ಆದರ್ಶ ಎಂದು ನಾಟಕ ಹೇಳಹೊರಟಿದೆ. ದೌರ್ಜನ್ಯ, ದಲಿತರ ಶೋಷಣೆಯನ್ನು ಅದು ನೆಪಮಾತ್ರಕ್ಕೆ ಪ್ರಶ್ನಿಸುತ್ತದೆ. ಆದರೆ, ಪ್ರಶ್ನಿಸುವ ಧೋರಣೆ ರಾಜಕೀಯ. ಸಾಮಾಜಿಕ, ಸಾಂಸ್ಕೃತಿಕ ಬದ್ಧತೆಯಿಂದ ಕೂಡಿದ್ದಲ್ಲ ಎನಿಸುತ್ತದೆ.
ದಲಿತರೆಲ್ಲ ಅಥವಾ ಶೋಷಣೆಗೊಳಗಾದವರೆಲ್ಲ ಕ್ರೈಸ್ತ ಧರ್ಮಕ್ಕೆ ಅಥವಾ ಇನ್ನಾವುದೋ ಸಾಮಾಜಿಕ ಘನತೆ ತಂದುಕೊಡಬಲ್ಲ ಮತಕ್ಕೆ ಮತಾಂತರಗೊಂಡರೆ ಬ್ರಾಹ್ಮಣರ ಅಟ್ಟಹಾಸಕ್ಕೆ ಹೇಗೆ ಕಡಿವಾಣ ಬೀಳುತ್ತೊ, ಗೌಡರ ಪಾಳೆಗಾರಿಕೆಗೂ ಏಟು ಬೀಳುತ್ತಿತ್ತು. ಅದಕ್ಕೆಂದೇ ಇಲ್ಲಿ ಕ್ರೈಸ್ತರ ಬಗ್ಗೆ ವಿರೋಧ. ದಲಿತರೆಲ್ಲ ಕ್ರೈಸ್ತರಾಗಿ ಸಮಾಜದ ಮೇಲಸ್ತರಕ್ಕೆ ಹೋದರೆ, ಗೌಡರ ಹೊಲಗಳಲ್ಲಿ ಜೀತ ಮಾಡೋರು ಯಾರು? ಉಳಿಮೆ ಮಾಡೋರು ಯಾರು? ಇವರು ಹೇಳಿದ ಹಾಗೆ ಕೇಳಿಕೊಂಡು ಬಿದ್ದಿರೋರು ಯಾರು?… ಒಟ್ಟಾರೆ ಯಜಮಾನಿಕೆಯ ಗತ್ತು ಹೊರಟು ಹೋಗುತ್ತದಲ್ಲಾ! ಎನ್ನುವ ಆತಂಕ ಮತಾಂತರ ವಿರೋಧಕ್ಕೆ ಮೂಲ ಕಾರಣವಾಗಿತ್ತು. ಮತ್ತು ಈ ಯಜಮಾನಿಕೆಗೆ ಯಾವತ್ತೂ ಪುರೋಹಿತಷಾಹಿಯ ಸಾಥ್ ಇದ್ದದ್ದೇ. ನಾಟಕದಲ್ಲಿ ಹೆಗ್ಗಡೆಯ ಹುಡುಗರು ಸಂಸ್ಕೃತ ಪಾಠಶಾಲೆಗೆ ಹೋಗೋದು, ಅಯ್ಯಗಳ ಜತೆ ಪಾಠಕ್ಕಾಗಿಯಾದರೂ ಸೌಹಾರ್ದತೆ ಹೊಂದೋದು ಇದಕ್ಕೆ ಪುಷ್ಠಿ ನೀಡುತ್ತದೆ. ಪುರೋಹಿತಷಾಹಿ ಹಾಗೂ ಮೇಲ್ವರ್ಗ ಷಾಮೀಲಾಗಿ ತನ್ನುಳಿವಿಗಾಗೇ ದಲಿತರನ್ನು ಅನ್ಯ ಸಂಸ್ಕೃತಿಯತ್ತ ಹೊರಡದಂತೆ ನೋಡಿಕೊಳ್ಳೋದು ಹಿಂದೂ ಧರ್ಮದ ಉದ್ಧಾರ!.
ಇದೆಲ್ಲ ನಿರ್ದೇಶಕ ಬಸವಲಿಂಗಯ್ಯ ಅವರನ್ನು ಕಾಡಿದಂತಿಲ್ಲ. ಗುತ್ತಿಯನ್ನು ಹೀರೋ ಮಾಡಬಹುದಲ್ಲ ಎನ್ನುವ ಸಾಧ್ಯತೆಯೊಂದು ಅವರನ್ನು ಯಾಮಾರಿಸಿಬಿಟ್ಟಿದೆ. ಬಿಜೆಪಿ ಮತ್ತಿತರ ಸರ್ಕಾರದಲ್ಲಿ ದಲಿತರಿಗೆ ಒಂದಷ್ಟು ಸವಲತ್ತುಗಳ ಆಮಿಷಗಳಿರೋದರಿಂದ ದಲಿತರೆಲ್ಲ ಅದರತ್ತ ಸರಿದು ನಿಂತಿದ್ದಾರಲ್ಲ ಹಾಗೆ, ಬಸವಲಿಂಗಯ್ಯ ಕೂಡ ಕಥೆಯ ಆಶಯಗಳನ್ನು ಒಪ್ಪಿಕೊಂಡಿದ್ದಾರೆ. ಅದರ ಹುನಾರಗಳನ್ನು ಸುಮ್ಮನೇ ಕಡೆಗಣಿಸಿದ್ದಾರೆ. ಹೀಗಾಗಿ ಅವರ ಸಬ್ ಟೆಕ್ಸ್ಟ್ ಮನೋಧರ್ಮ ಇಲ್ಲಿ ಅಷ್ಟು ಕೆಲಸ ಮಾಡಿಲ್ಲ. ಮತಾಂತರ ವಿರೋಧಿ ನೆಲೆಯಲ್ಲಿ ನಾಟಕವನ್ನು ರಾಜಕೀಯ ಅಜೆಂಡಾವನ್ನಾಗಿ ಮಾಡಲು ಸಾಧ್ಯ! ಈ ಹಿನ್ನೆಲೆಯಲ್ಲೇ ಇದಕ್ಕೆ ಘನ ಸರ್ಕಾರದ ಪ್ರಾಯೋಜಕತ್ವವೂ ದಕ್ಕಿರಬಹುದು.(?)
ಪಾದ್ರಿ ಪಾತ್ರವನ್ನು ಇವರು ಕಂಡ ರೀತಿಯೇ ಇದಕ್ಕೆ ಸಾಕ್ಷಿ ಒದಗಿಸುತ್ತದೆ. ಒಂದು ವೇಳೆ ಇಂಗ್ಲಿಷ್ ಭಾಷೆಯೇ ಬರದಿದ್ದರೆ ಕುವೆಂಪು ಇಷ್ಟು ದೊಡ್ಡ ಸಾಹಿತಿಯಾಗಲು ಸಾಧ್ಯವಿತ್ತೆ? ದೊಡ್ಡವರಾಗಲು, ವಿದ್ಯಾವಂತರಾಗಲು ಕ್ರೈಸ್ತರು ಸ್ಥಾಪಿಸುವ ಶಾಲೆಗಳು ಹಾಸ್ಟೆಲ್ ಗಳೆಲ್ಲ ಬೇಕು… ರೋಗ ರುಜಿನಗಳೆಲ್ಲ ಆವರಿಸಿದಾಗ ಅವರು ಸ್ಥಾಪಿಸುವ ಆಸ್ಪತ್ರೆಗಳು ಬೇಕು, ನೋವಿನಿಂದ ನರಳುತ್ತ ಬೆಡ್ ಮೇಲೆ ಮಲಗಿದ ರೋಗಿಗಳ ತಿಕ ತೊಳೆದು, ಉಚ್ಚೆ ಬಳಿದು ಆರೈಕೆ ಮಾಡಲು ದಾದಿಯರ ಸೇವೆ ಬೇಕು.. ಅಂಥ ಆರಾಮ, ಆರೋಗ್ಯ ವ್ಯವಸ್ಥೆ ಮಾಡಲು ಕ್ರೈಸ್ತ ಧರ್ಮ, ಕ್ರೈಸ್ತರು ಬೇಕು. ಆದರೆ, ಅವರ ಕೆಲ ಧಾರ್ಮಿಕ ಆಶಯಗಳು ಮಾತ್ರ ಇಲ್ಲೇನೂ ಮಾಡಬಾರದು!
ಪಾದ್ರಿಯ ಮಗಳ ಮೇಲೆ, ದಾದಿಯರ ಮೇಲೆ ಕಣ್ಣು ಹಾಕುವ ದೇವಯ್ಯ, ಲುಚ್ಚಾ, ಲೋಫರ್, ಫಟಿಂಗ್ ಏನೂ ಅನ್ನಿಸಿಕೊಳ್ಳುವುದಿಲ್ಲ. ಅದು ಅವನ ರಸಿಕತೆಯ ಸಂಕೇತವಷ್ಟೇ. ಹೀಗಾಗೇ ಈ ಪಾತ್ರ ಇಲ್ಲಿ ಕಾಮಿಡಿ ಪಾತ್ರವಾಗಿದೆ. ಇದೇ ಧೋರಣೆ ಕುಂಟ ವೆಂಕಣ್ಣ ಪಾತ್ರಕ್ಕೂ ಇದೆ. ಆತ ಗಂಡ ಸತ್ತ ಇನ್ನೂ ವಯಸ್ಸಿರುವ ಹೆಣ್ಣುಗಳ ಮೇಲೆ ಕಣ್ಣು ಹಾಕಬಲ್ಲ. ಅದು ಅವನ ಪುರುಷ ಅಹಮಿಕೆಯೂ ಹೌದು, ರಸಿಕತೆಯೂ ಹೌದು.. ಆದರೆ ಲಂಪಟತನವಲ್ಲ! ಈ ಪಾತ್ರಗಳು ರಂಗದ ಮೇಲೆ ಬಂದಾಗಲೆಲ್ಲ ಚಪ್ಪಾಳೆಗಳ ಕರತಾಡನ! ಇದೆಂಥ ಮನಸ್ಥಿತಿ? ಮನೋಧರ್ಮ?
ಮುಸ್ಲೀಮರ ಸ್ಥಿತಿಯೂ ಇಲ್ಲಿ ಹೊರತಾಗಿಲ್ಲ. ಯಾರದೋ ಕದ್ದ ಮಾಲು, ವಸ್ತುಗಳಿಗೆ ಬದಲಾಗಿ ಹಣ ನೀಡುವ ಕಸುಬನ್ನು ಅದಾವ ಮೂಲೆಯ ಮುಸಲ್ಮಾನರು ಮಾಡುತ್ತಾರೋ?… ಪಾನ್ ಬ್ರೋಕರ್ ಕೆಲಸವಾಗಲಿ, ಬಡ್ಡಿ ವ್ಯವಹಾರವಾಗಲಿ ಇಸ್ಲಾಮಿನಲ್ಲಿ ನಿಷಿದ್ಧ. ಹಾಗೆ ಮಾಡೋರನ್ನು ಇಸ್ಲಾಂ ತನ್ನೊಳಕ್ಕಿಟ್ಟುಕೊಳ್ಳಲ್ಲ. ಇದನ್ನು ಇಸ್ಲಾಂ ಶತಮಾನಗಳ ಕಾಲ ಪಾಲಿಸಿಕೊಂಡು ಬಂದಿದೆ. ಇನ್ನು ಇದಾವ ಹೊನ್ನಾಳಿ ಅಥವಾ ಮಲಬಾರಿ ಸಾಬರು ಎನ್ನುವ ಮುಸಲ್ಮಾನ ವೇಷಧಾರಿಗಳೋ! ನಾಟಕದ ತುಂಬ ಇಸ್ಲಾಂ ಅನ್ನು ಹಣಿಯಲು ಮಾಡಿದ ಪುಡಿ ಪಾತ್ರಗಳಿವೆಲ್ಲ. ತಮ್ಮದೇ ಲಾಭಕ್ಕೆ ಏನೋ ಪುಸಲಾಯಿಸಿ ಮುಸ್ಲೀಮರ ಕೈಯಿಂದ ತಪ್ಪು ಕೆಲಸ ಮಾಡಿಸುವ ಹೆಗ್ಗಡೆಯರು ಅದೆಲ್ಲ ಬೇರೇನೋ ಸ್ವರೂಪ ಪಡಕೊಂಡಾಗ ಎಲ್ಲ ತಪ್ಪನ್ನು ಅವರ ಮೇಲೇ ಹಾಕಿಬಿಡೋದು! ಕಚ್ಚಾಟ, ಕೆಸರಾಟ ಶುರುವಾದಾಗ ‘ನಿಮಗೆ ಹೊಡೆಯೋದು ಕಡಿಯೋದು ಬಿಟ್ಟರೆ ಬೇರೇನೂ ಗೊತ್ತಿಲ್ಲವೇನ್ರೋ’ ಎಂದು ಗದರಿಸುವ ಮತ್ತು ಪೊಲೀಸರ ಮೂಲಕ ‘ಇತ್ತೀಚೆಗೆ ಈ ಸಾಬರದು ಹಾರಾಟ ಜಾಸ್ತಿಯಾಗಿದೆ. ಇಕ್ರಲೋ ಈ ಸಾಬರನ್ನ’ ಎಂದು ಅಬ್ಬರಿಸುವ, ದಲಿತರು ಮತ್ತು ಸಾಬರ ನಡುವೆ ಜಗಳ ಹಚ್ಚಿ ರಕ್ತಪಾತ ಮಾಡಿಸುವ ದೃಶ್ಯಗಳು ಮುಸ್ಲೀಮರ ವಿರುದ್ಧದ ಹುನಾರುಗಳಲ್ಲದೇ ಏನೂ ಅಲ್ಲ. ಹೊನ್ನಾಳಿಯ ಸಾಬರದು ಲೇವಾದೇವಿ ಕಸುಬೇ ಆಗಿರಬಹುದು. ಹೆಗ್ಗಡೆಯರ ಕುಮ್ಮಕಿನಿಂದ ಅವರೆಲ್ಲ ಒಂದಷ್ಟು ದರ್ಪವನ್ನೂ ಮಾಡುತ್ತಿರಬಹುದು. ಆದರೆ, ಅದೆಲ್ಲ ಆ ಪ್ರದೇಶದ ಸಾಮಾಜಿಕ ಹಣೆಬರಹ. ಹೆಗ್ಗಡೆಯರ ಹಾದರ, ದಬ್ಬಾಳಿಕೆ, ಶೋಷಣೆ ಹೇಗೆ ಅಲ್ಲಿನ ಸಾಮಾಜಿಕ ಸ್ಥಿತಿಯ ಒಂದು ಭಾಗವೋ ಹೊನ್ನಾಳಿ ಸಾಬರದೂ…
ಈಗಿನ ಸಾಮಾಜಿಕ ಮತ್ತು ರಾಜಕೀಯ ಸಂದರ್ಭದಲ್ಲಿ ಕ್ರೈಸ್ತರು ಮತ್ತು ಮುಸಲ್ಮಾನರು ಹೇಗೆ ಒಂದು ಪಕ್ಷದ ಅಥವಾ ಆ ಧರ್ಮಗಳೇತರರ ಟಾರ್ಗೆಟ್ ಆಗಿದ್ದಾರೋ, ಅದನ್ನೇ ನಾಟಕವೂ ಪ್ರತಿನಿಧಿಸುತ್ತಿರುವುದು ಸ್ಪಷ್ಟವಾಗಿದೆ. ರಂಗಾಯಣ ಸರ್ಕಾರದ ಹಣ ಪಡೆದುಕೊಂಡೇ ತನ್ನ ರಂಗಸಂಸ್ಕೃತಿ ಕಟ್ಟಿಕೊಳ್ಳಬೇಕಾದ್ದರಿಂದ ಪಡೆದ ಹಣಕ್ಕೆ ಹೀಗೆ ಋಣಭಾರ ತೀರಿಸದೇ ಬೇರೆ ದಾರಿಯಾದರೂ ಇತ್ತಾ?
ಗುತ್ತಿಯ ದೈನ್ಯತೆ ಮತ್ತು ಸೆನ್ಸ್ ಆಫ್ ಹ್ಯೂಮರ್ ಹಾಗೂ ಒಂದು ಮಟ್ಟಿನ ಸುಳ್ಳುಪಳ್ಳು ಇಡೀ ಪಾತ್ರಕ್ಕೆ ಸೋಗು ತುಂಬಿದೆ. ಅದು ಮುಗ್ಧತೆ ಎನ್ನುವ ಸೋಗೂ ಆಗಬಹುದು. ಅದರ ಸೋಗಿನಲ್ಲೇ ಇತರರ ಅನುಕಂಪೆ ಪಡೆಯಲು ಸಾಧ್ಯ, ಯಾಮಾರಿಸಲೂ ಸಾಧ್ಯ ಮತ್ತು ಬಚಾವಾಗಬಲ್ಲ ಅನಿವಾರ್ಯದ ಕ್ರಮ ಎಂದು ಧ್ವನಿಸುವುದು ಕೂಡ ಸಾಧ್ಯ ಎಂಬಂತಿದೆ ಗುತ್ತಿ ಪಾತ್ರದ ನಿರೂಪಣೆ.
ಆಗಿನ ಸಾಮಾಜಿಕ ಸ್ಥಿತಿಯಲ್ಲಿ ಗುತ್ತಿಯದೂ ಅವನ ನಾಯಿಯಂಥದೇ ಪಾಡು. ಒಡೆಯನ ಪ್ರೀತಿಗಾಗಿ ಮತ್ತು ಅವ ಕೊಡುವ ಎಂಜಿಲಿಗಾಗಿ ಬಾಲ ಅಲ್ಲಾಡಿಸುತ್ತ ಹಿಂಬಾಲಿಸುವುದು ನಾಯಿಯ ಜೀತದಾಳುವಿನಂಥ ಮನಸ್ಥಿತಿ. ಅದೇ ಆಗಿನ ದಲಿತರ ಸ್ಥಿತಿಯೂ ಕೂಡ. ಗುತ್ತಿಗೆ ಅವನ ನಾಯಿ ನಂಬಿಕೆಯ, ಪ್ರೀತಿ, ನಿಷ್ಠೆಯ ಪ್ರತೀಕ. ಅವನ ಜೀವ ಉಳಿಸಬಲ್ಲ ನಂಬಿಕಸ್ಥ ಭಂಟನಂತೆ.
ಈ ಹಿನ್ನೆಲೆಯಲ್ಲಿ ಕೊನೆಯ ದೃಶ್ಯವಂತೂ ತುಂಬ ಸಾಂಕೇತಿಕವಾಗಿದೆ. ದೋಣಿ ದಾಟುವಾಗ, ಗುತ್ತಿ ಯಾವುದೋ ಹೆಗ್ಗಡೆಯರ ಸಹಾನುಭೂತಿ ಗಳಿಸಿಕೊಂಡಿರುತ್ತಾನೆ. ‘ಹೇ ನಮ್ಮ ಹುಡುಗ ಕರಕೊಂಡು ಹೋಗ್ರೋ’ ಎನ್ನುವ ಆದೇಶದಿಂದಾಗೇ ಗುತ್ತಿಗೆ ದೋಣಿಯಲ್ಲಿ ಜಾಗ ಸಿಗುತ್ತದೆ. ನಾಯಿಗೆ ಮಾತ್ರ ಅಲ್ಲಿ ಅವಕಾಶವಿಲ್ಲ. ‘ಹುಲಿಯ’ ಹೋಗೋ ಈಜೋ ದಾಟಿ ಆ ಕಡೆಗೆ ಬಾರೋ ನಾನು ಕಾಯತೀನಿ… ಎನ್ನುವ ಗುತ್ತಿ, ತನ್ನ ನಾಯಿಯನ್ನು ಸೆಳವಿನ ಒಡಲಿಗಟ್ಟಿಬಿಡುತ್ತಾನೆ. ನಾಯಿ ಸೆಳವಿನಲ್ಲಿ ಕೊಚ್ಚಿ ಹೋಗುತ್ತದೆ. ಗುತ್ತಿ ರೋದಿಸುತ್ತಾನೆ. ಅಂದರೆ ಇಲ್ಲಿ ಗುತ್ತಿ ತಾನುಳಿದುಕೊಳ್ಳಲು ತನ್ನ ನಂಬಿಕೆಗಳನ್ನೇ ಅನಿವಾರ್ಯವಾಗಿ ಬಲಿಕೊಡುತ್ತಾನೆ. ಕೇರಿಯ ನಂಬಿಕೆಗಳು, ಆಚಾರ, ವಿಚಾರ, ಜೀವಪರ ಆಶಯಗಳನ್ನು ಬಲಿಕೊಟ್ಟಂತೆ ಅದು. ಗುತ್ತಿಯರು ತಮ್ಮ ಮುಗ್ಧತೆಗೋ ಅಥವಾ ಬದುಕಲೇಬೇಕೆಂಬ ಹಟಕ್ಕೋ ಬಲಿಕೊಡುವ ನಂಬಿಕೆಗಳವು. ಹೀಗೆ ಕೇರಿಗಳನ್ನು ಬಿಟ್ಟು ಕೋರ್ಟು, ಕಚೇರಿಗಳಲ್ಲಿ ಸೂಟು ಬೂಟು ಹಾಕಿಕೊಂಡು ಮೈಮರೆತು ಕಡೆಗೆ ಕೇರಿ ಮತ್ತು ಜೀವಪರ ಆಶಯಗಳನ್ನೇ ಮರೆತು ಕಂಫರ್ಟ್ ದೋಣಿಗಳಲ್ಲಿ ತೇಲುತ್ತ ಬದುಕುವ ಸೋಗಲಾಡಿತನದ ಸಂಕೇತವದು. ಮೀಸಲಾತಿ ಅನ್ನೋದು ಮೇಲ್ವರ್ಗದವರು ತಮಗೆಂದೇ ಮಾಡಿಕೊಂಡ ವ್ಯವಸ್ಥೆಯಿಂದ ತುಳಿತಕ್ಕೊಳಗಾದವರಿಗೆ ಇದಕ್ಕಿಂತ ಹೆಚ್ಚಿನ ನ್ಯಾಯ ದಕ್ಕೋದಾದರು ಎಂದು?
ಒಟ್ಟಾರೆ ಇಲ್ಲಿ ಮೂವರು ಮದುಮಗಳು ಸಜ್ಜಾಗುತ್ತಾರೆ. ಚೆನ್ನಿ, ತಿಮ್ಮಿ ಮತ್ತು ನಾಗಕ್ಕ. ಮುಕುಂದಯ್ಯ-ಚೆನ್ನಿ, ಗುತ್ತಿ-ತಿಮ್ಮಿ ಪ್ರೇಮಿಗಳ ಜೋಡಿಯಾದರೆ, ನಾಗಕ್ಕನದು ಯಾರದೋ ಕಣ್ಣಲ್ಲಿ ನಿತ್ಯ ಮದುಮಗಳಂತೆ ಕಾಣುವ ಸ್ಥಿತಿ. ಕಡೆಗೆ ಅದು ಬಲವಂತದ ಕೂಡಿಕೆಯಾಗುತ್ತದೆ. ನಾಗಕ್ಕನಿಗಿರುವ ಅಸಮಧಾನ, ಸಿಟ್ಟು ಕಡೆಗೆ ಸೇಡಾಗಿ ಪರಿವರ್ತನೆಗೊಳ್ಳುತ್ತದೆ. ಅದು ವೆಂಕಟಣ್ಣನ ಮಗಳು ಚೆನ್ನಿ ಓಡಿಹೋಗುವದಕ್ಕೆ ಸಂಚು ರೂಪಿಸುವ ಮೂಲಕ ಮತ್ತು ಕುಂಟ ವೆಂಕಣ್ಣ ಸಾಯುವ ಮೂಲಕ ಗೆಲುವಾಗುತ್ತದೆ. ಹೆಣ್ಣು ತನ್ನ ಮೇಲೆ ಪ್ರಹಾರ ಮಾಡಿದ ಗಂಡಿನ ಮೇಲೆ ತೀರಿಸಿಕೊಳ್ಳುವ ಸೇಡಾಗಿ ಕಾಣುತ್ತದೆ. ಗುತ್ತಿ-ತಿಮ್ಮಿ ಹಾಗೂ ಮುಕುಂದಯ್ಯ-ಚೆನ್ನಿ ಜೋಡಿಗೆ ಅವರದೇ ಸಮುದಾಯದಲ್ಲಿ ವಿರೋಧವಿದೆ. ಇಬ್ಬರೂ ತಮ್ಮ ಪ್ರೀತಿಗಾಗಿ ಸಮುದಾಯ ಮತ್ತು ನೆಂಟಸ್ಥರನ್ನೇ ಎದುರುಹಾಕಿಕೊಳ್ಳುತ್ತಾರೆ. ಎರಡೂ ಜೋಡಿ ಒಂದೇ ಎತ್ತರಕ್ಕೆ ಬಂದು ನಿಲ್ಲೋದು ಈ ಸಂದರ್ಭದಲ್ಲಿ.
ಇಲ್ಲಿ ಹಾರಿಸಿಕೊಂಡು ಹೋಗುವುದು ಕುತೂಹಲಕಾರಿ ವಿಷಯ. ಸಂಘರ್ಷದ್ದಲ್ಲ. ಹಾರಿಸಿಕೊಂಡು ಹೋಗುವ ಇಲ್ಲವೇ ಓಡಿ ಹೋಗುವ ಮನಸ್ಥಿತಿಗೆ ಹೆಣ್ಣೆ (ಪೀಂಚಲು, ನಾಗಕ್ಕ) ಪ್ರಧಾನ ಭೂಮಿಕೆ ನಿಭಾಯಿಸುತ್ತಾಳೆ. ಹಾಗೇ ಹಾದರ, ಹಾಸಿಗೆಯ ವಿಷಯದಲ್ಲೂ (ನಾಗತ್ತೆ) ಹೆಣ್ಣೆ ಇಲ್ಲಿ ಪ್ರಭಲ… ಕಡೆಗೆ ಹೆಣವಾಗೋದು (ವೆಂಕಟಣ್ಣ ಸಾವು) ಗಂಡಸರೇ.
ಈ ರಂಗಪುರಾಣದ ಭೈರವಿ ರಾಗ..
ಮೂರು ಧರ್ಮಗಳ ಕರ್ಮಠತನದ ಹುಚ್ಚುನಾಯಿಗಳ ಮೇಲೆ ದೊಣ್ಣೆಯನ್ನೇನೋ ನಾಟಕದಲ್ಲಿ ಬಳಸಲಾಗಿದೆ. ಸ್ವಾಮಿಗಳ ಲೇವಡಿ ಹಿಂದೂ ಧರ್ಮದ ಬಗೆಗಿನ ತಮಾಷೆಯಾಗಷ್ಟೇ ಕಾಣುತ್ತದೆ, ವಿವೇಕಾನಂದರ ಭಾಷಣದ ಧ್ವನಿಮುದ್ರಿತ ನುಡಿ ಅದಕ್ಕೊಂದು ದಿಕ್ಕು ತೋರಿಸಿ ಬ್ಯಾಲೆನ್ಸ್ ಮಾಡುತ್ತದೆ. ಆದರೆ ಪಾದ್ರಿ ಪಾತ್ರದ ಲೇವಡಿ, ಹೊನ್ನಾಳಿ ಸಾಬರ ದೃಶ್ಯ ಮಾತ್ರ ಮತಾಂತರ ವಿರೋಧಿ ನೆಲೆಯಲ್ಲೇ ಚಿತ್ರಣವಾಗಿದ್ದು ಸ್ಪಷ್ಟವಾಗಿದೆ. ಈ ನಾಟಕದ ವಿಲನ್ ಮತಾಂತರ. ಬಿಜೆಪಿ ಸಂಘಪರಿವಾರದ ನಿದ್ರೆಗೆಡಿಸುವ ವಿಲನ್ ಕೂಡ…

‍ಲೇಖಕರು avadhi

May 21, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

 1. varsa

  you must read the novel again, then write thr review. as a paly it was an bad show. bur in thr name of review bringing something elese, saying hidden agend, questioning very integrity of the director will not do justice fot review.

  ಪ್ರತಿಕ್ರಿಯೆ
 2. ಮಂಡ್ಯರಮೇಶ್

  ಕನ್ನಡ ನಾಟಕವೊಂದಕ್ಕೆ ಇಷ್ಟುಧೀರ್ಘ ಮತ್ತು ವಿಚಾರಾತ್ಮಕ, ವಿವರಣೆಯುಳ್ಳ ವಿಮರ್ಶೆ ಬಂದದ್ದು ಬಹುಶಹ ಇದೇ ಮೊದಲಿರಬೇಕು! ಅಭಿನಂದನೆಗಳು. ಛಾಯಾಚಿತ್ರ ಮನೋಹರವಾಗಿದೆ. ಒಳದನಿಯಲಿ ಬರೆಯುವಾಗ ಮುಸ್ಲಿಮರ ಮತ್ತು ಕಿರಿಸ್ಥಾನರ ಕುರಿತು ಪ್ರಯೋಗದಲ್ಲಿ ನಿಮಗೆ ಮೂಡಿದ ಅನುಮಾನ.. ಅದು ಅನುಮಾನವಷ್ಟೆ! ಏನೇ ಇರಲಿ ಇಂಥ ಲೇಖನಕ್ಕಾಗಿ ಧನ್ಯವಾದಗಳು.
  -ಮಂಡ್ಯರಮೇಶ್

  ಪ್ರತಿಕ್ರಿಯೆ
 3. vijayendra

  dilawar
  avare,
  Your review has prompted me to read the novel again to understand the differences between the novel and the drama. But a good effort to review the play. Regards Vijayendra 9448320220.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: