ಒಂದು ಕುಕ್ಕುಟ ಪುರಾಣ

ನಿರುಪಮಾ ಉಚ್ಚಿಲ್

ಒಂದು ದಿನ ಹೊರಗೆ ಹೋದ ನನ್ನ ಪತಿಯವರು ಮನೆಗೆ ಹಿಂದಿರುಗಿ ಬರುವಾಗ ಎರಡು ಬಣ್ಣ ಹಚ್ಚಿದ ಕೋಳಿಮರಿಗಳನ್ನು ಹಿಡಿದುಕೊಂಡು ಬಂದರು. ಇದು ಸುಮಾರು ಹತ್ತಿಪ್ಪತ್ತು ವರ್ಷಗಳ ಹಿಂದಿನ ಮಾತು. ಆಗ ಕೋಳಿ ಮರಿಗಳನ್ನು ಮಾರಾಟ ಮಾಡುವವರು ಅವುಗಳನ್ನು ವಿವಿಧ ಬಣ್ಣದ ನೀರಿನಲ್ಲಿ ಅದ್ದಿ ತೆಗೆದು ಒಂದು ದೊಡ್ಡ ಮುಚ್ಚಿದ ಬುಟ್ಟಿಯಲ್ಲಿರಿಸಿ ತಲೆಯ ಮೇಲೆ ಹೊತ್ತುಕೊಂಡು ಇಲ್ಲವೇ ಸೈಕಲ್ ನಲ್ಲಿ ಇರಿಸಿ ಕೊಂಡು ಬೀದಿಗಳಲ್ಲಿ ಮಾರಾಟ ಮಾಡುತ್ತಾ ತಿರುಗುತ್ತಿದ್ದರು. ಮರಿಗಳಿಗೆ ಬಣ್ಣ ಹಚ್ಚುವುದು ಗಿರಾಕಿಗಳನ್ನು ಆಕರ್ಷಿಸುವ ತಂತ್ರವಾಗಿತ್ತು.

ಈ ಮರಿಗಳು ನೀರಲ್ಲಿ ಒದ್ದೆಯಾದರೆ ಅವುಗಳ ಬಣ್ಣ ಬಯಲಾಗುತ್ತಿತ್ತು. ಅಂತಹ ಎರಡು ಮರಿಗಳನ್ನು ನಮ್ಮವರು ದಾರಿಯಲ್ಲಿ ಸಿಕ್ಕ ಮಾರಾಟಗಾರರಿಂದ ಖರೀದಿಸಿ ತಂದರು. ನಮ್ಮ ಮನೆಯಲ್ಲಿ ಕೋಳಿ ಸಾಕಣೆಯು ಈಗಾಗಲೇ ಭಾರೀ ಜೋರಿನಲ್ಲಿ ನಡೆಯುತ್ತಿತ್ತು. ನಮ್ಮ ಬಾತ್ ರೂಂ ನ ಆಚೆ  ಕೊನೆಯಲ್ಲಿರುವ ಒಂದು ಕೋಣೆಯು ಇದಕ್ಕಾಗಿಯೇ ಮೀಸಲಾಗಿತ್ತು.ಅದರಲ್ಲಿ ಗಿರಿರಾಜ ತಳಿಯ ಕೋಳಿಗಳಿದ್ದವು.

ಈ ಹೊಸ ಅತಿಥಿಗಳನ್ನು ಆ ಕೋಳಿಗಳು ಸ್ವಾಗತಿಸಲಿಲ್ಲ. ಇವುಗಳು ಹತ್ತಿರ ಹೋದರೆ ಅವುಗಳು ಕುಕ್ಕಿ ಓಡಿಸುತ್ತಿದ್ದವು. ಇನ್ನೇನು ಮಾಡುವುದು ? ಈ ಕೋಳಿ ಮರಿಗಳು ಜಗಲಿಯಲ್ಲೇ ನೆಲೆಯೂರಲು ಪ್ರಾರಂಭಿಸಿದವು.

ನಮ್ಮ ಮನೆಯ ಮುಂಭಾಗದಲ್ಲಿರುವ ಜಗಲಿಯ ಒಂದು ಕೊನೆಯಲ್ಲಿ ನಮ್ಮ ನಾಯಿ ಬ್ರೌನಿಯನ್ನು ಕಟ್ಟಿ ಹಾಕಲಾಗುತ್ತಿತ್ತು. ಅಲ್ಲಿಯೇ ಒಂದು ಮೇಲಿನ ಜಗಲಿ ಇತ್ತು. ಕೋಳಿ ಮರಿಗಳು ಮೆಲ್ಲ ಮೆಲ್ಲನೆ ಬ್ರೌನಿಯ ಬಳಿ ಸುಳಿಯಲಾರಭಿಸಿದವು. ಹತ್ತಿರ ಹೋಗಲು ಅವುಗಳಿಗೆ ಹೆದರಿಕೆ.

ಒಮ್ಮೆ ಅವನ ಮೇಲೆ ಹಾರಿ ಕುಳಿತು ಅಲ್ಲಿಂದ ಮೇಲಿನ ಜಗಲಿಗೆ ಹಾರಿದವು. ಪುನಃ ಅವನ ಮೈಮೇಲೆ. ಬ್ರೌನಿ ಸುಮ್ಮನೆ ಕೋಳಿ ಮರಿಗಳ ಆಟವನ್ನು ನೋಡುತ್ತಾ ತನ್ನ ಬಳಿ ಸುಳಿದ ಅವುಗಳನ್ನು ಪ್ರೀತಿಯಿಂದ ಸ್ವಾಗತಿಸಿದ. ನೋಡ ನೋಡುತ್ತಿದ್ದಂತೆಯೇ ಕೋಳಿ ಮರಿಗಳು ಅವನ ಮೈಮೇಲೆ ಓಡಿಯಾಡತೊಡಗಿದವು. ತನ್ನ ಮೈಮೇಲೆ ಕುಳಿತ ಅವುಗಳನ್ನು ಪ್ರೀತಿಯಿಂದ ನೆಕ್ಕತೊಡಗಿದ.

ಅವುಗಳೂ ಅವನ ಮೈಮೇಲಿನ ಹೇನು ಕುಕ್ಕಿ ತೆಗೆಯುವುದು ಮುಂತಾದ ಕಾರ್ಯಗಳಲ್ಲಿ ತೊಡಗಿ ಅವನಿಗೆ ಖುಷಿ ಕೊಟ್ಟವು. ಮೇಲಿನ ಜಗಲಿ ಮತ್ತು ಬ್ರೌನಿಯ ಮೈ ಕೋಳಿ ಮರಿಗಳಿಗೆ ವಾಸ ಸ್ಥಾನವಾಯಿತು. ಅವನ ಮೈಮೇಲೆ ಕುಳಿತು ರಾತ್ರಿಯನ್ನು ಕಳೆಯ ತೊಡಗಿದವು.

ನಮ್ಮ ಇನ್ನೊಂದು ನಾಯಿ ನಾಟಿ ( Naughty) ಗೆ ಈ ಕೋಳಿ ಮರಿಗಳನ್ನು ಕಂಡರೆ ಕಿರಿಕಿರಿ. ಮೊದ ಮೊದಲು ನಾಟಿಯೂ ಬ್ರೌನಿಯಂತೆ ಇರಬಹುದೆಂದು ಯೋಚಿಸಿ ಅವು ಜಗಲಿಯಲ್ಲಿ ಕುಳಿತ ನಾಟಿಯ ಬಳಿ ಓಡುತ್ತಿದ್ದವು. ಆದರೆ ನಾಟಿ ‘ಗುರ್ರ್ ಗುರ್ರ್’ ಎಂದು ಗದರಿಸಿ ಓಡಿಸುತ್ತಿದ್ದ. ಆ ಕೋಳಿ ಮರಿಗಳಲ್ಲಿ ಒಂದು ಕೆಲವೇ ದಿನಗಳಲ್ಲಿ  ಕಾರಣಾಂತರದಿಂದ ಸತ್ತು ಹೋಯಿತು. ಉಳಿದ ಮರಿಯು ಬ್ರೌನಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿತು.

ನಂತರದ ದಿನಗಳಲ್ಲಿ ನಾಟಿಯಿಂದ ಸ್ವೀಕರಿಸಲ್ಪಡಲು ವಿಫಲ ಯತ್ನ ನಡೆಸಿತ್ತು. ಆದರೂ ನಾಟಿಯ ಬಳಿಗೆ ಹೋಗುವುದೂ ಅದು ಗರ್ರ್ ಗುರ್ರ್’ ಎಂದು ಗದರಿಸುವುದೂ ಮುಂದುವರೆದಿತ್ತು. ಸ್ವಲ್ಪ ದೊಡ್ಡದಾದಂತೆ ಕೋಳಿ ಮರಿಯು ನಾಟಿಯನ್ನು ಕೆಣಕಲೆಂದೇ ಅದರ ಬಳಿಗೆ ಓಡುತ್ತಿತ್ತು. ಅದು ‘ಗುರ್ರ್ ಗರ್ರ್’ ಮಾಡುತ್ತಾ ಏಳಲು ಇದು ‘ಕ್ಕೆ ಕ್ಕೆ ಕ್ಕೆ’ ಎಂದು ಅಣಕಿಸುತ್ತಾ ಓಡುತ್ತಿತ್ತು.

ನಾಟಿಯು ತುಂಬಾ ತುಂಟ ( ಪುಂಡ)ನಾಗಿದ್ದುದರಿಂದ ಮಕ್ಕಳು ಅವನಿಗಿಟ್ಟ ಹೆಸರು. ನಮ್ಮ ನೆರೆಯಲ್ಲಿ ಬಾಡಿಗೆಗಿದ್ದ ರೈಲ್ವೇ ಗೇಟ್ ಮ್ಯಾನ್ ಒಬ್ಬರು ತಂದುಕೊಟ್ಟ ನಾಯಿ ಮರಿ. ರೈಲ್ವೇ ಸ್ಟೇಷನ್ ನಲ್ಲಿ ತಿರುಗಾಡುತ್ತಿದ್ದ ನಾಯಿ ಮರಿಯನ್ನು ನಮಗೆ ಅಗತ್ಯವಿದೆ ಎಂದು ಹಿಡಿದು ತಂದಿದ್ದರು. ನಾಟಿಯು ಆಗಮಿಸಿದ ಕೆಲವು ದಿನಗಳ ನಂತರ ಬಂದ ಬ್ರೌನಿಯ ಬಗ್ಗೆ ನಾಟಿಯು ಅಂತಹ ಅಕ್ಕರೆಯೇನೂ ತೋರಿಸಲಿಲ್ಲ. ಆದರೆ ಬ್ರೌನಿಯು ಒಂದು ಪಾಪದ ಸಾಧು ಸ್ವಭಾವದ ನಾಯಿಯಾಗಿತ್ತು.

ಅದು ಕೋಳಿ ಮರಿಯನ್ನು ತನ್ನ ಬೆನ್ನಿಗೇರಿಸಿಕೊಂಡು ರಕ್ಷಿಸಿತು. ದಿನಗಳು ವಾರಗಳು ಉರುಳಿ ಹೋದವು. ಬ್ರೌನಿಯ ಮಮತೆಯ ಛತ್ರ ಛಾಯೆಯಲ್ಲಿ ಕೋಳಿ ಮರಿಯು ಸುಂದರ ಹುಂಜ ( ಕುಕ್ಕುಟ) ವಾಗಿ ಮಾರ್ಪಟ್ಟಿತು. ಕೆಂಪು ಮಿಶ್ರಿತ ಬಿಳಿ ಬಣ್ಣದ ಮೈ ,ಕೆಂಪು ಜುಟ್ಟಿನ ಹುಂಜವು ಜಂಬದಿಂದ ಅಲ್ಲಿ ಇಲ್ಲಿ ತಿರುಗಾಡ ತೊಡಗಿತು. ಅದು ಬ್ರೌನಿಯ ಸಂಗವನ್ನು ಬಿಡಲಿಲ್ಲ. ನಾಟಿಯನ್ನು ಕೆಣಕುವುದನ್ನೂ ಬಿಡಲಿಲ್ಲ. ಈ ಸುಂದರ ಹುಂಜವು ಘನ ಗಾಂಭಿರ್ಯದಿಂದ ಅತ್ತಿತ್ತ ಓಡಾಡುವಾಗ ನನ್ನ ಪತಿಯವರಿಗೆ ತಲೆಯಲ್ಲಿ ಒಂದು ಹುಚ್ಚು ವಿಚಾರ ಹೊಳೆಯಿತು.

ಹುಂಜಕ್ಕೆ ಕಿವಿ ಚುಚ್ಚಿ ಲೋಲಾಕು ತೊಡಿಸಿದರೆ ಹೇಗೆ? ಅವರು ಚಿಕ್ಕಂದಿನಲ್ಲಿ ಅಡ್ಕದಲ್ಲಿರುವ ಅವರ ದೊಡ್ಡಮ್ಮನ ಮನೆಗೆ ಹೋಗುತ್ತಿರುವಾಗ ಅವರ ನೆರೆಯಲ್ಲಿರುವ ಒಂದು ಹುಂಜಕ್ಕೆ ಲೋಲಾಕು ತೊಡಿಸಿದ್ದುದನ್ನೂ, ಅದು ಲೋಲಾಕು ಧರಿಸಿ ಭಾರಿ ಗತ್ತಿನಿಂದ ನಡೆಯುವುದನ್ನು ನೋಡಿದ್ದರಂತೆ.

ತಲೆಗೆ ಬಂದ ವಿಚಾರವನ್ನು ಕಾರ್ಯಗತಗೊಳಿಸಲು ನಿರ್ಧರಿಸಿದ ಅವರು, ಮಗಳ ಒಂದು ಹಳೆಯ ಲೋಲಾಕನ್ನು ತೆಗೆದುಕೊಂಡು ಹುಂಜವನ್ನು ಹಿಡಿದು ಅದರ ಒಂದು ಕಿವಿಗೆ  ಸಿಕ್ಕಿಸಿಯೇ ಬಿಟ್ಟರು. ಲೋಲಾಕು ಧರಿಸಿದ ಹುಂಜವು ತನ್ನ ಸಮಾನರಾರಿಲ್ಲವೆಂದು ಬೀಗಿ ಜಂಭದಿಂದ ನಡೆಯತೊಡಗಿತು.

ನಂತರದ ದಿನಗಳಲ್ಲಿ ಹುಂಜವು ಬ್ರೌನಿಯೊಡನೆ ರಾತ್ರಿ ಕಳೆಯುವುದನ್ನು ಬಿಟ್ಟು ಬಿಟ್ಟಿತು. ಗಿರಿರಾಜ ಕೋಳಿಗಳಿರುವ ಕೋಣೆಯ ಎದುರಿಗೆ ಇರುವ ಮಾವಿನ ಮರದಲ್ಲಿ ಕುಳಿತು ರಾತ್ರಿಯನ್ನು ಕಳೆಯತೊಡಗಿತು. ಸಮಯ ಉರುಳುತ್ತಿತ್ತು. ನಾಟಿಯು ಹುಂಜವನ್ನು ದ್ವೇಷಿಸುತ್ತಾನೆ ಎಂದು ನಾವು ಅಂದು ಕೊಂಡಿದ್ದೆವು. ಈ ಅನಿಸಿಕೆಗೆ ವ್ಯತಿರಿಕ್ತವಾಗಿ ನಡೆದ ಎರಡು ಘಟನೆಗಳನ್ನು ನಾನು ನಿಮ್ಮ ಮುಂದಿಡುತ್ತೇನೆ.

ಒಮ್ಮೆ ನಾಟಿ ಅಂಗಳದಲ್ಲಿ ನಿಂತು ಏನೋ ಮಾಡುತ್ತಿದ್ದ. ಅಷ್ಟರಲ್ಲಿ ಹುಂಜವು ಎಂದಿನಂತೆ ತನ್ನ ಒಂದು ಬದಿಯ ರೆಕ್ಕೆಯನ್ನು ಬಿಚ್ಚಿ ಓರೆ ಓರೆ ನಡೆಯುತ್ತಾ ‘ಕ್ಕೆ ಕ್ಕೆ ಕ್ಕೆ’ ಸದ್ದು ಮಾಡುತ್ತಾ ನಾಟಿಯನ್ನು ಅಣಕಿಸುತ್ತಾ ಅವನ ಬಳಿ ಹೋಯಿತು. ಇಷ್ಟು ಸಮಯದ ವರೆಗೆ ತಡೆ ಹಿಡಿದಿದ್ದ ಕೋಪವನ್ನು ಹೊರಗೆಡವುವಂತೆ ನಾಟಿಯು ಹುಂಜವನ್ನು ಬಾಯಿಯಲ್ಲಿ ಕಚ್ಚಿ, ನೆಲಕ್ಕೆ ಅಮುಕಿ ಹಿಡಿದು ಅಪ್ಪಚ್ಚಿ ಮಾಡುವಂತೆ ಆಚೆ ಈಚೆ ಹೊರಳಾಡಿಸಿತು.

ನಾವೆಲ್ಲಾ ಹುಂಜವು  ಸತ್ತೇ ಹೋಯಿತು ಎಂದೆಣಿಸಿದೆವು. ಏನು ಮಾಯೆ ! ಹುಂಜವು ಎದ್ದು ನಾಟಿಯನ್ನು ಅಣಕಿಸುವಂತೆ ‘ ಕ್ಕೊ ಕ್ಕೊ ಕ್ಕೊ’ ಹೇಳುತ್ತಾ ಓಡಿ ಹೋಯಿತು. ನಾಟಿಯ ಉದ್ದೇಶ ಅದನ್ನು ಕೊಲ್ಲುವುದಾಗಿರಲಿಲ್ಲ . ಬರೇ ಹೆದರಿಸುವುದಾಗಿತ್ತು ಎಂದು ನಮಗೆ ಅರಿವಾಯಿತು.

ಇನ್ನೊಂದು ಘಟನೆಯ ಬಗ್ಗೆ ಹೇಳುತ್ತೇನೆ: ನಮ್ಮ ನೆರೆ ಮನೆಯ ಯಾವಾಗಲೂ ಕಟ್ಟಿ ಹಾಕಿರುತ್ತಿದ್ದ ಹುಂಜವನ್ನು ಅವತ್ತು ಬಿಟ್ಟಿದ್ದರು. ಇದೇ ಸಂದರ್ಭಕ್ಕೆ ಕಾಯುತ್ತಿದೆ ಎಂಬಂತೆ ಹುಂಜವು ಹಿತ್ತಿಲ ಗೋಡೆ ಹಾರಿ ಅಂಗಳದ ಆಚೆ ಮಣ್ಣನ್ನು ಕೆದಕಿ ಹುಳು ಹುಪ್ಪಟೆಗಳನ್ನು ತಿನ್ನುವುದರಲ್ಲಿ ಮಗ್ನವಾಗಿದ್ದ ನಮ್ಮ ಹುಂಜದ ಮೇಲೆರಗಿತು. ನಮ್ಮ ಹುಂಜವೂ ಪ್ರತ್ಯಾಕ್ರಮಣ ಮಾಡಿತು.

ಅಲ್ಲಿಯೇ ಸ್ವಲ್ಪ ಆಚೆ ಮಲಗಿದ್ದ  ನಾಟಿಯು ಹುಂಜಗಳ ಕದನದ ಸದ್ದಿಗೆ ಎಚ್ಚೆತ್ತ. ಒಮ್ಮೆಲೆ ಎದ್ದು ಬಂದು ನಮ್ಮ ಹುಂಜದ ಮೇಲೆ ಒರಗಿದಂತೆ ನಿಂತು ಬಿಟ್ಟ. ಆಚೆ ಮನೆಯ ಹುಂಜ ಎಷ್ಟು ಪ್ರಯತ್ನಿಸಿದರೂ ಪುನಃ  ಆಕ್ರಮಣ ಮಾಡುವುದರಲ್ಲಿ ಸಫಲವಾಗಲಿಲ್ಲ. ನಾಟಿ ಗೋಡೆಯಂತೆ  ಅದರ ಅಡ್ಡ ನಿಂತಿದ್ದ. ನಮ್ಮ ಹುಂಜವೆಂಬ ಮಮಕಾರ ನಾಟಿಗಿತ್ತು ಎಂದು ನಮಗೆ ಈ ಪ್ರಸಂಗದಿಂದ ಅರಿವಾಯಿತು.

ಸಮಯವು ಉರುಳುತ್ತಿತ್ತು. ಒಮ್ಮೆ ಬೆಳಿಗ್ಗೆ ಎದ್ದು ನೋಡುವಾಗ ಹುಂಜವು ಮರದಡಿಯಲ್ಲಿ ಸತ್ತು ಬಿದ್ದಿತ್ತು. ಸಾಯಲು ಕಾರಣವೇನೆಂದು ಗೊತ್ತಾಗಲಿಲ್ಲ. ಮೈಯಲ್ಲಿ ಯಾವುದೇ ಗಾಯಗಳಿರಲಿಲ್ಲ. ನಾಗರಹಾವು  ಕಚ್ಚಿರಬಹುದೆ? ಯಾಕೆಂದರೆ ನಾಗರಹಾವು ಕೋಣೆಯಲ್ಲಿರುವ ಕೋಳಿಗಳ ಮೊಟ್ಟೆಗಳನ್ನು ತಿನ್ನಲು ಆಗಾಗ ಭೇಟಿ ಕೊಡುತ್ತಿತ್ತು.

ಹುಂಜವನ್ನು ಹಿತ್ತಲಲ್ಲಿ ಹೊಂಡ ತೆಗೆದು ಹೂಳಲಾಯಿತು. ಹುಂಜವು ಸತ್ತು ಸುಮಾರು ಎರಡು ವರ್ಷಗಳ ನಂತರ ಬ್ರೌನಿಯ ದುರ್ಮರಣವಾಯಿತು. ಆ ವರ್ಷದ ಮಳೆಗಾಲದಲ್ಲಿ ಕಡಿದು ಬಿದ್ದ  ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯ ಸಂಪರ್ಕಕ್ಕೆ ಬಂದು ತೀರಿಕೊಂಡ. ಬ್ರೌನಿಯ ಮರಣಾನಂತರ ನಾಟಿಯು ತುಂಬಾ ಶಾಂತನಾದ. ಇನ್ನೂ ಏಳೆಂಟು ವರ್ಷಗಳ ವರೆಗೆ ಜೀವಿಸಿ ಕಣ್ಮರೆಯಾದ.

‍ಲೇಖಕರು Avadhi

October 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರಜಾವಾಣಿಯಲ್ಲಿ ‘ಪ್ಲೇ ಬಾಯ್’

ಪ್ರಜಾವಾಣಿಯಲ್ಲಿ ‘ಪ್ಲೇ ಬಾಯ್’

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ...

ಬೆಚ್ಚಿ ಬಿದ್ರಾ…?

ಬೆಚ್ಚಿ ಬಿದ್ರಾ…?

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ...

2 ಪ್ರತಿಕ್ರಿಯೆಗಳು

  1. Shyamala Madhav

    ಬ್ರೌನಿ, ಸುಂದರವಾದ ಕೋಳಿ ಮರಿ ಮತ್ತು ನಾಟಿಯ ಅನುಬಂಧದ ಸುಂದರ ಕಥನ. ಇನ್ನೆಷ್ಟೋ ಇದ್ದೀತು, ಆ ಕಥಾಕಣಜದಲ್ಲಿ. ಹೊರಗೆ ಬರುತ್ತಿರಲಿ, ನಿರೂ.

    ಪ್ರತಿಕ್ರಿಯೆ
  2. Shyamala Madhav

    ಬ್ರೌನಿ, ಟಾಮಿ, ಕುಕ್ಕುಟ ರಾಯನ ಪ್ರೀತಿಬಂಧ,, ಆಟೋಟಗಳು ಬಲು ಆಪ್ಯಾಯಮಾನ! ಇಂಥಾ ಮನೆಯಂಗಳದ ಕಥೆಗಳು ಸಲ್ಲಿಸಬಹುದು. ಬರುತ್ತಿರಲಿ, ನಿರೂ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: