’ಒಂದು ಕೋಟಿಗೆ ಅದೆಷ್ಟು ಪ್ಲೇಟ್ ಮಸಾಲಾಪುರಿ ಸಿಗತ್ತೋ???!!!!’ – ಪ್ರತಿಮಾ ಬರಹ

– ಪ್ರತಿಮಾ ಶಾನ್ ಭಾಗ್ ಕಾಮತ್ ಮೊನ್ನೆ ಕಪಾಟು ಕ್ಲೀನ್ ಮಾಡುತ್ತಿರಬೇಕಾದರೆ ಮೂರು ಲಕೋಟೆ ಸಿಕ್ಕವು.. ನನ್ನ ಮಗಳು ನರ್ಸರಿಯ ಮೂರೂ ವರ್ಷಗಳಲ್ಲಿ ಭಗವದ್ಗೀತೆ ಕಂಠಪಾಠ ಸ್ಪರ್ಧೆಯಲ್ಲಿ ಗಳಿಸಿದ ನಗದು ಬಹುಮಾನದ ಲಕೋಟೆಗಳವು. ನನಗೆ ದೊರೆತ ಮೊದಲ ನಗದು ಬಹುಮಾನದ ಸಂದರ್ಭವನ್ನು ನೆನೆಸಿಕೊಂಡೆ. ಪ್ರೈಮರಿ ಶಾಲೆಯ ಆಟೋಟ ಸ್ಪರ್ಧೆಗಳಲ್ಲಿ ಕೆಲವೊಮ್ಮೆ, ನಮ್ಮ ಸಮಾಜದಲ್ಲಿ ಏರ್ಪಡಿಸುವ ಸಾಂಸ್ಕೃತಿಕ ಕಾರ್ಯಕ್ರಮ,ರಂಗೋಲಿ ಸ್ಪರ್ಧೆಗಳಲ್ಲಿ ಬಹುತೇಕ ಬಾರಿ ನನಗೆ ಬಹುಮಾನ ಬಂದಿದ್ದುಂಟು. ಅವೆಲ್ಲ ಪ್ಲೇಟು, ಲೋಟ, ತಟ್ಟೆ ಅಥವಾ ಫೋಟೊ ಫ್ರೇಮ್ ಇವೇ ಆಗಿರುತ್ತಿದ್ದವು.ನನಗೆ ನೆನಪಾದ ಹಾಗೆ ಹತ್ತನೇ ತರಗತಿಯಲ್ಲಿ ಕನ್ನಡ ಪ್ರಥಮ ಭಾಷೆಗೆ ತರಗತಿಯಲ್ಲಿಯೇ ಹೆಚ್ಚು ಅಂಕ ಗಳಿಸಿದ್ದಕ್ಕೆ ನೆಚ್ಚಿನ ಉಪಾಧ್ಯಾಯರಾದ ಜಾರ್ಜ್ ರಾಡ್ರಿಗಸ್ ರವರು 101 ರೂ ನಗದು ಬಹುಮಾನವನ್ನು ಅಂದಿನ ಎ. ಸಿ. ಪಿ.ಯವರ ಕೈಯಲ್ಲಿ ಕೊಡಿಸಿದ್ದರು .. ಇದಾದ ಎರಡು ವರ್ಷಗಳ ನಂತರ ಕಾಲೇಜಿನಿಂದ ಪತ್ರವೊಂದು ಬಂದಿತ್ತು, ಮೆರಿಟ್ ಸ್ಕಾಲರ್ ಶಿಪ್ ಎಂದು 600 ರೂ ಗಳ ನಗದು ಬಹುಮಾನವನ್ನು ಸ್ವೀಕರಿಸಬೇಕಾಗಿಯೂ, ಪಿ ಯು ಸಿ ಯಲ್ಲಿ ಕನ್ನಡ ವಿಷಯಕ್ಕೆ ತಾಲ್ಲೂಕಿಗೇ ಹೆಚ್ಚು ಅಂಕ ಬಂದಿರುವುದರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದಾಗಿ ಸನ್ಮಾನವಿರುವುದಾಗಿಯೂ , ನಮೂದಿಸಿದ ಸ್ಥಳಕ್ಕೆ ಸಮಯಕ್ಕೆ ಸರಿಯಾಗಿ ಬರಬೇಕೆಂದು ತಿಳಿಸಲಾಗಿತ್ತು. ಈ ವಿಷಯವನ್ನು ಮನೆಯವರಿಗೆಲ್ಲ ತಿಳಿಸಿ, ಆ ದಿನವನ್ನು ಎದುರು ನೋಡತೊಡಗಿದೆ. ಅಂತೂ ಆ ದಿನ ಬಂದೇ ಬಿಟ್ಟಿತು. ಸನ್ಮಾನ ಸಮಾರಂಭಕ್ಕೆ ಪೋಷಕರನ್ನು ಕರೆದುಕೊಂಡು ಹೋಗಬೇಕು ಎನ್ನುವ ಕನಿಷ್ಟ ಜ್ಞಾನವೂ ನನಗಿರಲಿಲ್ಲ.. ಕಾರ್ಯಕ್ರಮಕ್ಕೆ ಹೋಗಬೇಕೆಂದು ನೀಟಾಗಿ ಡ್ರೆಸ್ಸ್ ಮಾಡಿಕೊಂಡು, ಪಾಂಡ್ಸ್ ಪೌಡರ್ ಮೆತ್ತಿಕೊಂಡು , ಲಾಲಗಂಧದಿಂದ ಹಣೆ ಬೊಟ್ಟು ಇಟ್ಟುಕೊಂಡು ತಲೆಗೊಂದಿಷ್ಟು ಕೊಬ್ಬರಿ ಎಣ್ಣೆ ಹಚ್ಚಿ, ಅಜ್ಜಿಯಿಂದ ಇರುವೆ ಜಡೆ ಹಾಕಿಸಿಕೊಂಡೆ. ನನ್ನ ಲೇಡಿಸ್ ಸೈಕಲ್ ಹತ್ತಿ ಕಾರ್ಯಕ್ರಮವಿರುವ ಜಾಗಕ್ಕೆ ತಲುಪಿದೆ. ಸಭೆಯ ವೇದಿಕೆಯ ಮೇಲೆ ಗಣ್ಯರು ಆಸೀನರಾಗಿದ್ದರು. ನನ್ನ ತರಹ ಬಂದ ಇನ್ನೂ 1-2 ವಿದ್ಯಾರ್ಥಿಗಳಿದ್ದರು, ಎಲ್ಲಾ ಅಪರಿಚಿತ ಮುಖಗಳೇ. ಸ್ವಾಗತ ಭಾಷಣ ಮುಗಿಯಿತು . ಅಷ್ಟರಲ್ಲಿ ಕಾರ್ಯಕ್ರಮದ ನಿರ್ವಾಹಕರು ನನ್ನ ಹೆಸರನ್ನು ಕೂಗಿದರು, ಆದರೆ ಅವರು ಇಂಥವರ ಮಗಳು ಎಂದು ಓದಿ ಹೇಳುವಾಗ ನನ್ನ ತಂದೆಯ ಹೆಸರನ್ನು ತಪ್ಪು ತಪ್ಪಾಗಿ ಉಚ್ಛರಿಸಿದ್ದರು..”ಏನ್ರೀ ಕನ್ನಡ ಕಾರ್ಯಕ್ರಮವಾಗಿ ಕನ್ನಡವನ್ನೇ ತಪ್ಪು ತಪ್ಪಾಗಿ ಓದುತ್ತೀರಲ್ರೀ” ಅನ್ನೋಣ ಎಂದುಕೊಂಡೆ.ಉಹೂಂ, ಧೈರ್ಯ ಸಾಲಲಿಲ್ಲ, ಸುಮ್ಮನೇ ಹೋಗಿ ಪ್ರಶಸ್ತಿ ಪತ್ರ ಮತ್ತು ಬಹುಮಾನವನ್ನು ಪಡೆದು ಸುಮ್ಮನೆ ನನ್ನ ಜಾಗದಲ್ಲಿ ಕುಳಿತೆ. ಪುರಸ್ಕಾರ ರೂಪದಲ್ಲಿ ನನಗೆ “ಮಂಕು ತಿಮ್ಮನ ಕಗ್ಗ” ಪುಸ್ತಕ ದೊರಕಿತ್ತು ಮತ್ತು ಕಾಲೇಜು ವತಿಯಿಂದ 600 ರೂ ನಗದು ಬಹುಮಾನವೂ ಸಿಕ್ಕಿತ್ತು. ಪುನಃ ನನ್ನ ಸೈಕಲ್ ಏರಿ ಮನೆ ದಾರಿ ಹಿಡಿದೆ. ದಾರಿಯುದ್ದಕ್ಕೂ ಆ 600 ರೂಗಳೇ ನನ್ನ ತಲೆಯಲ್ಲಿ ಸುತ್ತುತ್ತಿದ್ದವು.100 ರ 6 ನೋಟುಗಳು, 50ರ 12 ನೋಟುಗಳು ಅಥವಾ 10 ರ 60 ನೋಟು. ಈ ಹಣವನ್ನು ಯಾವುದಕ್ಕೆ ಖರ್ಚು ಮಾಡಬೇಕಂದು ಗೊಂದಲಕ್ಕೊಳಗಾಗಿದ್ದೆ. ಒಳ್ಳೆಯ ಡ್ರೆಸ್ಸ್, ಹೈ ಹೀಲ್ಡ್ ಚಪ್ಪಲಿ,ಇನ್ನು ಎನೇನೋ.. ಮೊದಲು ಈ ಲೇಡಿಸ್ ಸೈಕಲ್ಲಿಗಿರುವ ಜೆಂಟ್ಸ್ ಸ್ಟ್ಯಾಂಡ್ ತೆಗೆಸಿ ಒಳ್ಳೆ ಒಂದು ಲೇಡಿಸ್ ಸ್ಟ್ಯಾಂಡ್ ಹಾಕಿಸ್ಬೇಕು ಅನ್ಕೊಳ್ಳುವಷ್ಟರಲ್ಲಿ ಮನೆ ಬಂತು. ಸೀದಾ ಅಡುಗೆ ಮನೆಗೆ ಹೋಗಿ ಅಮ್ಮ್ನ ಕೈಯಲ್ಲಿ ಲಕೋಟೆಯನ್ನಿಟ್ಟು ಜೋಪಾನವಾಗಿಡಲು ಹೇಳಿ, ಕಗ್ಗವನ್ನು ಡೈನಿಂಗ್ ಟೇಬಲ್ ಮೇಲಿಟ್ಟೆ. ಎಲ್ಲರೂ ಚಹಾ ಕುಡಿಯಲು ಕುಳಿತೆವು, ಕಾರ್ಯ ಕ್ರಮದ ಬಗ್ಗೆ ಎಲ್ಲರಿಗೂ ಹೇಳಿದೆ. 600 ರೂ ಗಳಿಗೆ ಎಷ್ಟು ಪ್ಲೇಟು ಮಸಾಲಾಪುರಿ ಸಿಗಬಹುದೆಂದೂ ಲೆಕ್ಕ ಹಾಕತೊಡಗಿದೆ, ಕಗ್ಗದ ಪುಟ ತಿರುವುತ್ತಿದ್ದ ಅಪ್ಪ “ಹಾಗೇ ಕೆಮ್ಮು ಮತ್ತು ಗಂಟಲು ನೋವಿನ ಮಾತ್ರೆ ಎಷ್ಟು ಸಿಗ್ತಾವೆ ಅಂತಾನೂ ಲೆಕ್ಕ ಹಾಕು” ಅಂದರು. ಅಪ್ಪನ ಕೈಯಲ್ಲಿದ್ದ ಪುಸ್ತಕ ಕಸಿದುಕೊಂಡು ” ನನ್ಗೇ ಅರ್ಥ ಆಗಿಲ್ಲ , ಇನ್ನು ನಿಮಗೇನು ಅರ್ಥ ಆಗುತ್ತೆ” ಅಂತ ಒಣ ಜಂಭ ತೋರಿಸಿದೆ. ಕೆಲವು ದಿನ ಕಳೆದವು. ಆವಾಗೆಲ್ಲ ಪಾಕೆಟ್ ವೀಡಿಯೋಗೇಮ್ಸ್ ಹುಚ್ಚು ಜೋರಾಗಿತ್ತು, ಅಮ್ಮನ ಹತ್ತಿರ ಹೋಗಿ ನನಗೊಂದು ವೀಡಿಯೋ ಗೇಮ್ ಬೇಕು ನನ್ನ 600 ರೂಗಳಲ್ಲಿ ಸಲ್ಪ ಹಣದಿಂದ ಅದನ್ನು ಕೊಡಿಸೆಂದು ಕೇಳಿದೆ. ಅಮ್ಮ ಅನ್ನ ಬಸೀಬೇಕಾದ್ರೆ, ಅಡುಗೆ ಮಾಡುತ್ತಿರಬೇಕಾದರೆ ಶನಿಯಂತೆ ಕಾಡಿದ್ದು ನೋಡಿ ಅಪ್ಪನಿಗೆ ಹೇಳಿ ಒಂದು ವೀಡಿಯೋ ಗೇಮ್ಸ್ ಕೊಡಿಸಿದರು. ಎಮ್ . ಟಿವಿ ಯಲ್ಲಿ ಆಗ ಬೆಳಿಗ್ಗೆ ಹಿಂದಿ ಹಾಡುಗಳ ಪ್ರೋಗ್ರಾಮ್ ಬರುತ್ತಿತ್ತು, ಮೇಜರ್ ಸಾಬ್ ಚಿತ್ರದ ಹಾಡಲ್ಲಿ ಸೋನಾಲಿ ಬೇಂದ್ರೆಯನ್ನು ನೋಡಿ ನಾನೂ ಒಂದು ತುಂಬು ತೋಳಿನ ಅಂಬ್ರೆಲ್ಲಾ ಕಟ್ ಬಿಳೀ ಚೂಡಿದಾರ್ ತೆಗೆದುಕೊಳ್ಬೇಕು ಅನ್ನೋ ಮನಸಾಯಿತು. ಮತ್ತೆ ಅಮ್ಮನ ಸೀರೆ ಸೆರಗು ಹಿಡ್ಕೊಂಡು 600 ರುಪಾಯಿಯಲ್ಲಿ ಮುರ್ಕೋ ಅಂದೆ. ಹೋಗಿ ಬಿಳೀ ಬಣ್ಣದ ಚೂಡಿದಾರ್ ಕೊಂಡು ತಂದೆ. ಅದನ್ನು ಧರಿಸಿ ಕನ್ನಡಿ ಮುಂತೆ ನಿಂತು ” ಕೆಹೆತಾ ಹೈ ಪಲ್ ಪಲ್ ಮೇರ ಹೋಕೆ ಯೇ ದಿಲ್ ದಿವಾನಾ” ಅಂತ ಹಾಡಿದ್ದೆ. ಅದೇ ಕೊನೆ, ಆ ನಂತರ ಆ ಚೂಡಿಯನ್ನೂ ಮುಟ್ಟಲೂ ಇಲ್ಲ.. ಮತ್ತೊಮ್ಮೆ ನನ್ನ ತಂದೆ ತಾಯಿ ಮುಂಬೈ ಗೆ ಹೊರಟಿದ್ದರು. ಏನು ತರಬೇಕೆಂದು ಕೇಳಿದಾಗ ನಾನೂ, ನನ್ನ ತಂಗಿ ಇಬ್ಬರೂ ನಮಗೆ ಡ್ರೆಸ್ಸ್ ಮೆಟೀರಿಯಲ್ ತರುವಂತೆ ಕೇಳಿದೆವು. ನಾನು ತಕ್ಷಣ ನನಗೆರಡು ಬಟ್ಟೆ ಜಾಸ್ತಿ ತಾ, ಹೇಗೂ ನನ್ನ 600 ರೂ ನಿನ್ನ ಹತ್ತಿರ ಇದೆಯಲ್ಲಾ ಅದನ್ನು ಬಳಸಿಕೋ ಬೇಕಾದ್ರೆ ಅಂದೆ. ಸಧ್ಯ ಅಮ್ಮ ನನ್ನತ್ತ ಗುರಾಯಿಸುವಷ್ಟರಲ್ಲಿ ಬಸ್ಸು ಹೊರಟಾಗಿತ್ತು. ಇಲ್ಲಿ ನಾನು ಪ್ರಸ್ತಾಪಿಸಿದ್ದೆಲ್ಲ ಬರೀ ಹೈಲೈಟ್ಸ್ ಅಷ್ಟೆ.. ಹೀಗೇ ನಡುನಡುವೆ ಅಮ್ಮನ ಹತ್ತಿರ ಸುಮಾರು ಬಾರಿ 600 ರೂ ಇಸ್ಕೊಂಡಿದ್ದಾಯ್ತು. ಬಹುಶಃ ಬಾಲ್ಯ ಅನ್ನೋದು ನನ್ನ ಪಾಲಿಗೆ ಮುಗಿದಿರಲಿಲ್ಲವೇನೋ ಅನ್ನಿಸುತ್ತೆ.ಅಮ್ಮನಿಗೂ ಈ ದುಡ್ಡು ಮುರ್ಕೊಂಡು ಮುರ್ಕೊಂಡು ಸಾಕಾಗಿ ಹೋಗಿತ್ತು. ನಂಗೂ ಕೇಳಿ ಕೇಳಿ ಒಂಥರಾ ಕೆಟ್ಟ ಬೋರ್ ಶುರುವಾಗಿತ್ತು( attitude ಅಂದ್ರೆ ಇದೇನಾ?!?).ಒಂದಿನ ಅಮ್ಮ ಪೇಟೆಯಿಂದ ಬಂದವರೇ ಹಾರ್ಟ್ ಶೇಪಿನ ಡಬ್ಬದಿಂದ ಗುಲಾಬಿ ಬಣ್ಣದ ಕಾಗದದಲ್ಲಿ ಸುತ್ತಿದ್ದ ಒಂದು ಜೊತೆ ಪುಟ್ಟ ಕಿವಿಯೋಲೆಯನ್ನು ಕೈಗಿಟ್ಟರು.” ನಿನ್ನ 600 ರೂ ಸಹವಾಸ ಸಾಕು , ಮೇಲಿಂದ 500 ರೂ ಹಾಕಿ ಈ ಓಲೆ ತಂದಿದೀನಿ, ನಿನ್ನ ಲೆಕ್ಕ ಚುಕ್ತಾ” ಅಂದುಬಿಟ್ರು. ಓಲೆ ನೋಡಿ ನನಗೂ ಖುಷಿಯಾಯ್ತು,ಛೆ!, ಅಮ್ಮನಿಗೆ ಇಷ್ಟು ಗೋಳಾಡಿಸಿದೆನಾ ಅನ್ನಿಸ್ತು. ಆ ಓಲೆಗಳು ಇಂದಿಗೂ ನನ್ನ ಹತ್ತಿರ ಇವೆ, ನಾನವನ್ನೇ ಹೆಚ್ಚಾಗಿ ಧರಿಸೋದು. ಕೆಲವೊಮ್ಮೆ ಅದರ ತಿರುಪಣಿ ಸಡಿಲವಾಗಿಯೋ, ದರಿಸಬೇಕಾದ್ರೆ ಕೈ ತಪ್ಪಿಯೊ ಅವು ಕಳೆದು ಹೋಗಿದ್ದುಂಟು, ಆದರೆ ಅವಕ್ಕೆ ನಾನಂದ್ರೆ ಎಷ್ಟು ಪ್ರೀತಿ, ಅವು ಮರಳಿ ನನಗೇ ಸಿಕ್ಕಿವೆ. ಕೇಸರಿ ಬಣ್ಣ ದ ಲಕೋಟೆ ಇಷ್ಟೆಲ್ಲ ನೆನಪಿಸಿತು. ಈ ಸಲ ರಜಕ್ಕೆ ಊರಿಗೆ ಹೋದಾಗ ಅಮ್ಮ ಪಕ್ಕಕ್ಕೆ ಕುಳಿತ್ತಿದ್ದರು. “ನನ್ನ 600 ರುಪಾಯಿ ನಿನ್ನ ಹತ್ರ ಇದೆಯಲ್ಲ” ಕೇಳೋಣ ಅನ್ಕೊಂಡೆ.. ರೇಗಿಸಲು ಮನಸಾಗಲಿಲ್ಲ. ಕೇಳಿದಿದ್ದರೆ?? ” ಇದೆ ನನ್ನ ಹತ್ತಿರ , ವಾಪಸ್ ನೀನು ಬೆಂಗಳೂರಿಗೆ ಹೋಗ್ತಾ ಕೊಡ್ತೀನಿ ” ಅಂತಿದ್ರೇನೋ.. ಅಲ್ಲಿಂದ ಎದ್ದು ಹೊರಗಡೆ ಜಗಲಿಯಲ್ಲಿರೋ ಕನ್ನಡಿ ಬಳಿ ನಿತ್ಕೊಂಡು ಕತ್ತನ್ನೊಮ್ಮೆ ಬಲಕ್ಕೆ , ಎಡಕ್ಕೆ ತಿರುಗಿಸಿ ಕಿವಿಯೋಲೆ ನೋಡಿಕೊಂಡೆ. ಮತ್ತೆ ಬಂದು ಅಮ್ಮನ ಪಕ್ಕ ಕುಳಿತೆ. ಟಿವಿಯಲ್ಲಿ ಪುನೀತ್ ರಾಜ್ ಕುಮಾರ್” ಲೆಟ್ಸ್ ಪ್ಲೇ ನೌ ಕನ್ನಡದ ಕೋಟ್ಯಾಧಿಪತಿ” ಅಂತ ಇದ್ದ… ಅಂದ ಹಾಗೆ ಒಂದು ಕೋಟಿಗೆ ಅದೆಷ್ಟು ಪ್ಲೇಟ್ ಮಸಾಲಾಪುರಿ ಸಿಗತ್ತೋ???!!!!  ]]>

‍ಲೇಖಕರು G

May 25, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೇವನೂರು ನಾಪತ್ತೆ…

ದೇವನೂರು ನಾಪತ್ತೆ…

ಹೌದು, ಪ್ರಚಾರ ಎಂದರೆ ಅವರಿಗೆ ಮುಜುಗರ! ಅಂಶಿ ಪ್ರಸನ್ನಕುಮಾರ್ ಇದ್ದಕ್ಕಿದ್ದಂತೆ ನಾಪತ್ತೆಯಾಗುವ ಹಲವು ಸಾಹಿತಿಗಳನ್ನು ಜಗತ್ತು ಕಂಡಿದೆ. ಏನೋ...

4 ಪ್ರತಿಕ್ರಿಯೆಗಳು

 1. D.RAVI VARMA

  ನಿಮ್ಮ ಬಾಲ್ಯದ ನೆನಪು ಚೆನ್ನಾಗಿದೆ,ಅಮ್ಮನ ಸಂಭಂಧ,ಆಕೆಯ sahisnate ಅಪಾರ ಪ್ರೀತಿ ,ನೀವು ಪ್ರಶಸ್ತಿ ಪಡೆದ ಸಂಬ್ರಮ. ಅದನ್ನು ನೀವು ಅನುಭವಿಸಿದ ಆ ಕ್ಷಣಗಳ ಆ ದಿನಗಳ ರೋಮಾಂಚನ ಎಲ್ಲವನ್ನು ನವಿರಾಗಿ baredidderi ,ನಾನು ಪಿ,ಯು ,ಸಿ ಯಲ್ಲಿದ್ದಾಗ ನನ್ನಕಾಲೇಜಿನಲ್ಲಿ ಕಲೆ,ವಿಜ್ಞಾನ ,ವಾಣಿಜ್ಯ ಎಲ್ಲ ವಿಭಾಗದ ವಿದ್ಯರ್ತಿಗಲಿಗಿಂತ ಕನ್ನಡದಲ್ಲಿ ಹೆಚ್ಹು ಅಂಕ ಪಡೆದಿದ್ದೆ. ನನ್ನ ಕನ್ನಡ ಉಪನ್ಯಾಸಕರಾದ ವಿಶ್ವನಾಥ ರೆಡ್ಡಿ ಕ್ಲಾಸ್ನಲ್ಲಿ ದೊಡ್ಡದಾಗಿ ಪ್ರಶಂಶೆ ಮಾಡಿದ್ದರು ನಿಮ್ಮಂಥ ಹೊಸ ಹೊಸ ಬರಹಗಾರರ ಭಾವನೆ,ಹಳಹಳಿಕೆ,ಕುಶಿ,ತಲ್ಲಣಗಳನ್ನು ಹೊರಹಾಕಲು ಈಗ ಅವಧಿ ಸಾಥ್ ನೀಡುತ್ತಿದೆ ಅಲ್ಲವೇ, ಬರೆಯುತ್ತಿರಿ ಶುಭವಾಗಲಿ
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
 2. Gopal Wajapeyi

  ನಿಮ್ಮ ಬರಹದಲ್ಲಿ ಕಾಮತ ಮತ್ತು ಶಾನಭಾಗರ ತಿಂಡಿಗಳ ರುಚಿ ಇದೆ.
  ಉ.ಕ., ದ.ಕ., ಮತ್ತು ಸಾಗರ ಶಿವಮೊಗ್ಗೆಯ ಕಡೆಯ ಇಂಥ ಅಪರೂಪದ ರುಚಿಗಳನ್ನು ನಮಗೆ ಆಗಾಗ ಉಣಬಡಿಸುತ್ತಲೇ ಇರಿ ಪ್ರತಿಮಾ ಜಿ…

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: