ಒಂದು ಕ್ಷಣ ಮೈಮರೆತು ನಿದ್ರಿಸಿದಾಗ…

|ಕಳೆದ ಸಂಚಿಕೆಯಿಂದ|

“ಸ್ಟೇಷನ್ ಮಾಸ್ತರ್ ಗೆ ನಿದ್ದೆ ಇಲ್ಲ” ಎಂಬ ಹೇಳಿಕೆ ನಮ್ಮ ಕಡೆ ಇದೆ. ಅದರ ಜೊತೆಗೆ ‘ವೈದ್ಯರಿಗೂ ಜೊತೆಗೆ ವೈದ್ಯರ ಪತ್ನಿಗೂ ಇಲ್ಲ ನಿದ್ದೆ’ ಅಂತ ಸೇರಿಸಬೇಕು. ಹಾಗಂತ ಸುಮಾರು ಸಲ ಅನಕೊಂಡೀನಿ. ನಿಜ, ನೂರಕ್ಕೆ ನೂರರಷ್ಟು ನಿಜ. ಒಂದೇ ಒಂದು ದಿನವೂ ಸರಿಯಾಗಿ ನಿದ್ದೆ ಮಾಡಿದ ನೆನಪು ನನಗಿಲ್ಲ. ಒಂದೊಂದು ಸಲ ಅಂತೂ ರಾತ್ರಿ ಪೂರ್ತಿ ಓಡಾಟ ಇರ್ತಿತ್ತು ನನ್ನ ಪತಿಗೆ, ಹಾಸ್ಪಿಟಲ್ – ಮನೆ – ಹಾಸ್ಪಿಟಲ್ ಅಂತ.

ಸುರೇಶ ಅನ್ನೋರು – “ನಾ ಹೊರಗಿನಿಂದ ಕೀಲಿ ಹಾಕೊಂಡು ಹೋಗ್ತೀನಿ‌. ನೀ ಮಲಕೋ” ಅಂದ್ರೂ ಅದಂತೂ ಸಾಧ್ಯವಾಗದ ಮಾತು ನನಗೆ ಎಂದು ಹೇಳಿಬಿಟ್ಟಿದ್ದೆ. ಹೀಗೇ ನಡೀತಿತ್ತು. ಅದೂ ಯಾವುದಾದರೂ ಹೆರಿಗೆ ಕೇಸ್ ಇದ್ದರಂತೂ ಮುಗಿದೇ ಹೋಯ್ತು. ಹೆರಿಗೆ ಕೋಣೆ ನಮ್ಮ ಮನೆ ಕಡೆಗೇ ಬರ್ತಿತ್ತು. ರಾತ್ರಿಯ ಪ್ರಶಾಂತ ವಾತಾವರಣದಲ್ಲಿ ಮಗು ಹುಟ್ಟಿದ ತಕ್ಷಣ ಅಳುವ ಧ್ವನಿ ಸ್ಪಷ್ಟವಾಗಿ ಕೇಳಿ ಬರುತ್ತಿತ್ತು. ನನಗೆ ಆ ಧ್ವನಿ ಕೇಳಿ ನಿರಾಳ ಅನ್ನಿಸೋದು.

ಕುಲಕರ್ಣಿ ಸಿಸ್ಟರ್ ಯಾವಾಗಲೂ ಅಂತಿದ್ರು ನನಗೆ, “ವೈನೀ ಸುಮ್ಮನೇ ಮಲಗಿ ನಿದ್ದಿ ಮಾಡಬಾರದೇನ್ರೀ? ಯಾವ ದೇವರು ಕಾಡ್ತಾನ ಅಂತೀನಿ. ನಮಗ ಬಿಡದ ಕೆಲಸಾ – ಕರ್ಮರೆಪಾ. ನೀವ್ಯಾಕ ನಿದ್ದಿಗೆಟ್ಟ ಕಿಡಕಿಯೊಳಗಿಂದ ಆ ಲೇಬರ್ ವಾರ್ಡ್ ಕಡೆ ನೋಡಕೋತ ನಿಲ್ತೀರೋ ಏನೋ” ಅಂತ ನಕ್ಕೋತ ಹೋಗ್ತಿದ್ರು. ನಾನೂ ನಕ್ಕು ಸುಮ್ಮನಾಗಿ ಬಿಡ್ತಿದ್ದೆ. ಒಂದೇ ಒಂದು ಬಾರಿ ಒಂದು ಕ್ಷಣ ಮೈಮರೆತು ನಿದ್ದೆ ಮಾಡಿದಾಗ ಆದ ಗಡಿಬಿಡಿ, ಗೊಂದಲ ನೆನೆಸಿಕೊಂಡರೆ ಈಗಲೂ ಎದೆ ಝಲ್ ಅಂತದೆ.

ಊರಲ್ಲಿಯ ಅಂದರೆ ಬಂಕಾಪುರ ಊರಲ್ಲಿ ಪ್ರೈವೇಟ್ ಪ್ರಾಕ್ಟೀಸ್ ಮಾಡುವ ವೈದ್ಯರುಗಳು ಯಾವುದಾದರೂ complicated ಕೇಸ್ ಬಂದರೆ, ಹೆಚ್ಚಿನ ಸಹಾಯ ಏನಾದರೂ ಬೇಕಾಗಿದ್ರೆ ರೋಗಿಗಳನ್ನು ಇಲ್ಲಿಗೇ ಅಂದ್ರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೇ ಕಳಿಸ್ತಿದ್ರು. ಒಮ್ಮೊಮ್ಮೆ ತಾವೂ ಆ ರೋಗಿಯ ಜೊತೆ ಬರೋದೂ ಇತ್ತು. ಆ ದಿನ ಹಾಗೇ ಆಯ್ತು.

ತುಂಬಾ ಬಿಝಿ ದಿನ ಆ ಹೊತ್ತು. ನಮ್ಮ ಊಟ ಮುಗಿದಾಗಲೇ ರಾತ್ರಿ 12 ಗಂಟೆ. ಖರೇ ಹೇಳಬೇಕೆಂದರೆ ಅಲ್ಲಿ ಹಗಲು – ರಾತ್ರಿ ನಡುವೆ ಜಾಸ್ತಿ ವ್ಯತ್ಯಾಸವೇ ಕಾಣ್ತಿರಲಿಲ್ಲ ನನಗೆ. ಊಟ ಆದ ತಕ್ಷಣ ಮಲಗಿದ ನನ್ನ ಪತಿಗೆ ಜೋರು ನಿದ್ದೆ. ನನಗೂ ಆ ದಿನ ಎಲ್ಲಿಲ್ಲದ ನಿದ್ದೆ. ರಾತ್ರಿ 2 ಗಂಟೆ ಸುಮಾರಿಗೆ ಕಾಲಿಂಗ್ ಬೆಲ್ ಸದ್ದಾಯಿತು. ತಕ್ಷಣ ಎಚ್ಚರಾತು. ಎದ್ದು ಲೈಟ್ ಹಾಕಿ ಯಾರದು? ಅಂದೆ. “ಮೇಡಂ ನಾನು” ಅಂದ್ರು. ಅವರು ಅಲ್ಲಿನ ಒಬ್ಬ ಪ್ರೈವೇಟ್ ಪ್ರಾಕ್ಟೀಸ್ ಮಾಡುವ ವೈದ್ಯರು.

“ಒಂದು ಪೇಷಂಟ್ ಕರ್ಕೊಂಡು ಬಂದೀನಿ. ಸ್ಥಿತಿ ಸ್ವಲ್ಪ ಗಂಭೀರವಾಗಿದೆ ಆ ಮನುಷ್ಯಂದು. ಸಾಹೇಬ್ರಿಗೆ ಹೇಳ್ತೀರಿ ಸ್ವಲ್ಪ?” ಅಂದ್ರು. ಕಿಟಕಿಯಿಂದ ಇಣುಕಿ ನೋಡಿದೆ, ಗುರುತು ಸಿಕ್ಕಿತು. ಬಾಗಿಲು ತೆರೆದು ಒಳಗೆ ಕೂರಲು ಹೇಳಿದೆ. ಒಳಗೆ ಬಂದು ನನ್ನ ಪತೀನ ಎಬ್ಬಿಸಿ ಅವರು ಬಂದಿರುವ  ಸಮಾಚಾರ ಹೇಳ್ದೆ. ಗಡಬಡಿಸಿ ಎದ್ದು ಹೋದ್ರು ಅವರು. ನಾ ಹಾಗೇ ಮಂಚದ ಮೇಲೆ ಉರುಳಿದೆ. ಸುರೇಶ ರೋಗಿಯನ್ನು ಪರೀಕ್ಷಿಸುವುದು, ಎಲ್ಲರ ಮಾತು ಕೇಳಿ ಬರುತ್ತಿತ್ತು. ಮರುಕ್ಷಣವೇ ನಿದ್ದೆಗೆ ಜಾರಿದೆ! ಎಂದೂ ಇಲ್ಲದ್ದು ಇದು, ಅನಿರೀಕ್ಷಿತ!

ಬಡಿದೆಬ್ಬಿಸಿದಂತೆ ಥಟ್ಟನೇ ಎಚ್ಚರಾಯ್ತು. ಒಂದು ಕ್ಷಣ ಎಲ್ಲಾ ಅಯೋಮಯ. ಎಲ್ಲಾ ಕಡೆ ಲೈಟ್ಸ್ ಉರಿಯುತ್ತಿದೆ. ಏನೂ ಸದ್ದು ಇಲ್ಲ. ಯಾರ ಮಾತೂ  ಕೇಳಿಸುತ್ತಿಲ್ಲ. ನೋಡಿದ್ರೆ ಇವರೂ ಇಲ್ಲ. ಪೂರ್ತಿ ಎಚ್ಚರಾಗಿ ಗಡಬಡಿಸಿ ಬೆಡ್ ರೂಂ ನಿಂದ ಹೊರಗೆ ಬಂದೆ. ಮುಂಬಾಗಿಲು ಪೂರ್ತಿ ತೆರೆದಿದೆ! ವ್ಹೆರಾಂಡಾದಲ್ಲಿ ಯಾರೂ ಕಾಣಲಿಲ್ಲ. ಅದಕ್ಕೆ ಹೊಂದಿಕೊಂಡಿದ್ದ ರೂಂ ನಲ್ಲಿ ಇಣುಕಿದೆ, ಅಲ್ಲೂ ಯಾರೂ ಇಲ್ಲ! 

ಬಾಗಿಲ ಹೊರಗೆ ಬಂದು ಆಸ್ಪತ್ರೆಯತ್ತ ದೃಷ್ಟಿ ಹಾಯಿಸಿದರೆ ಅಲ್ಲೂ ಏಕದಂ ಶಾಂತ. ಒಳಗೆ ಮನೆ ತುಂಬ ನೋಡಿದೆ ಅಲ್ಲೇ ನಿಂತು ಎಲ್ಲಾ ಬಾಗಿಲುಗಳು, ಬಾಥ್ ರೂಂ, ಅಡಿಗೆ ಮನೆ ಎಲ್ಲಾ ತೆರೆದೇ ಇತ್ತು. ಮತ್ತೆ ಹಾಸ್ಪಿಟಲ್ ‌ನೋಡಿದ್ರೆ ಹಾಗೇ ಶಾಂತವಾಗಿದೆ. ಅಂದರೆ ಇವರೆಲ್ಲ ಹೋಗಿ ಕನಿಷ್ಠ ಹತ್ತು-ಹದಿನೈದು ನಿಮಿಷವಾದರೂ ಆಗಿರಬೇಕು. ಆಸ್ಪತ್ರೆಯ ಇನ್ನೊಂದು ಕಟ್ಟಡದಲ್ಲಿ ಅಂದರೆ ಮೇನ್ ಕಟ್ಟಡಕ್ಕೆ ಹೊಂದಿಯೇ ಇರುವ ಕಟ್ಟಡದಲ್ಲಿ ಸ್ಟೋರ್ ರೂಂ ಇತ್ತು. ಅಲ್ಲಿಗೆ, ಇಲ್ಲಿಗೆ ಅಟೆಂಡರ್ ಯಾರಾದರೂ ಓಡಾಡೋದು ಕಾಣಬೇಕಿತ್ತು. ಅದೂ ಇಲ್ಲ. ಏನೂ ತಿಳೀಲಿಲ್ಲ. ಒಳಗೆ ಬಂದೆ.

ಹೂಂ ಒಳಗೆ ಬಂದೆ, ಆದರೆ  ಮುಂಬಾಗಿಲು ಹಾಕದೇ ಒಳಗೆ ಬಂದೆ. ಯಾರಾದ್ರೂ ಒಳಗೆ ಅವಿತಿದ್ರೆ ಅನ್ನೋ ಹೆದರಿಕೆ. ಬಾಥ್ ರೂಂ, ಅಡಿಗೆ ಮನೆ, ಸ್ಟೋರ್ ರೂಂ ಎಲ್ಲಾ ತೆರೆದೇ ಇದೆ! ಮತ್ತೆ ಹೊರ ಬಂದು ಆ ಹೊರಗಿದ್ದ ರೂಂ ನಲ್ಲಿ ಇಣುಕಿ, ಒಳಗೆ ಹೋಗಿ ಅಲ್ಲಿದ್ದ ಒಂದು ದೊಡ್ಡ ಕಪಾಟಿನ ಬಾಗಿಲು ತೆರೆದು ಒಳಗೆ ಪರೀಕ್ಷಿಸಿ ಯಾರಿಲ್ಲ ಅಂತ ಖಾತ್ರಿ ಮಾಡಿಕೊಂಡು ಆ ರೂಂ ನ ಲೈಟ್ ಆರಿಸಿ ಬಾಗಿಲು ಹಾಕಿ ಹೊರಗಿನಿಂದ ‌ಆ ರೂಂ  ಭದ್ರಪಡಿಸಿದೆ.

ಅಲ್ಲೆ ವ್ಹೆರಾಂಡಾದಲ್ಲಿ ಎರಡು ದೊಡ್ಡ ದೊಡ್ಡ ಪೆಟ್ಟಿಗೆಗಳು – ನಮ್ಮದು ಊರಿಂದೂರಿಗೆ ವರ್ಗಾವಣೆಯಾಗುವ ಕೆಲಸ ಅಲ್ವಾ, ಆಗ ಸಾಮಾನುಗಳನ್ನು ಪ್ಯಾಕ್ ಮಾಡಲು ಬೇಕೂಂತ ಮಾಡಿಸಿದ್ದ ಅವುಗಳನ್ನು, ಜೋಡಿಸಿ ಅದರ ಮೇಲೆ ಒಂದು ಬೆಡ್ ಹಾಕಿಟ್ಟಿದ್ದೆ. ಅದೂ ಒಂದು Cot ಆಗಿತ್ತು. ಮನೇಲೇ ಏನಾದ್ರೂ ಪೇಷಂಟ್ ಗಳನ್ನು ಪರೀಕ್ಷಿಸಲು, ನಾವು ಎಲ್ಲಿಯಾದರೂ ಊರಿಗೆ ಹೋದಾಗ ಯಾರಿಗಾದರೂ ಮಲಗಲು ಹೇಳಿದ್ರೆ ಉಪಯೋಗ ಆಗ್ತಿತ್ತು ಅದು.

ಅದರ ಮೇಲಿನ ಗಾದಿ ಸ್ವಲ್ಪ ಸರಿದಿತ್ತು. ಎಲ್ಲವನ್ನೂ ಅನುಮಾನದ ದೃಷ್ಟಿಯಿಂದಲೇ ನೋಡುವ ಮನಸ್ಥಿತಿ ನಂದು ಆಗ! ನಡುಗುವ ಕೈಗಳಿಂದ ಆ ಬೆಡ್ ಸರಿಸಿ, ಎರಡೂ ಪೆಟ್ಟಿಗೆ – ತುಂಬ ಭಾರ ಇದ್ದವು ಅವು- ತೆಗೆದು ನೋಡಿದೆ ಒಳಗೆ ಯಾರಿಲ್ಲ ಅಂತ ಖಾತ್ರಿ ಮಾಡಿಕೊಂಡು ಅವುಗಳನ್ನು ಮುಚ್ಚಿ ಒಳಗೆ ಹೋದೆ. ಬಾಥ್ ರೂಂ ದೊಡ್ಡದೇ ಇತ್ತು. ಅಲ್ಲೂ ಎಲ್ಲಾ ಪರೀಕ್ಷಿಸಿ ಬಾಗಿಲು ಹಾಕಿದೆ.

ಹೀಗೇ ಅಡಿಗೆ ಮನೆ, ಸ್ಟೋರ್ ರೂಂ ಎಲ್ಲಾ ಪರೀಕ್ಷಿಸಿ ಎಲ್ಲೂ ಯಾರಿಲ್ಲ ಅಂತ ಪಕ್ಕಾ ಮಾಡಿಕೊಂಡು ಬಾಗಿಲು ಹಾಕಿಕೊಂಡು ಬಂದೆ. ಆ ಮೂರೂ ಕೋಣೆಗಳನ್ನು ಸೇರಿಸುವ ಪ್ಯಾಸೇಜ್ ಮತ್ತು ಡೈನಿಂಗ್ ಹಾಲ್ ಮಧ್ಯೆ ಒಂದು ಬಾಗಿಲಿತ್ತು. ಅದನ್ನೂ ಭದ್ರಪಡಿಸಿದೆ. ಇನ್ನುಳಿದದ್ದು ನಮ್ಮ ಬೆಡ್ ರೂಂ ಮತ್ತು ಅದಕ್ಕೆ ಅಂಟಿಕೊಂಡಿರುವ ಒಂದು ಚಿಕ್ಕ ರೂಂ.

ಬೆಡ್ ರೂಂ ಒಳಗೆ ಬಂದು ಮಂಚದಡಿ, ಬೀರು ಸಂದಿ, ಅತ್ತ ಇತ್ತ ಎಲ್ಲಾ ನೋಡಿ ಆ ಚಿಕ್ಕ ರೂಂ ನಲ್ಲಿ ಚೆಕ್ ಮಾಡಿ ಎಲ್ಲಾ ಸರಿ ಇದೆ  ಅಂತ ಮನದಟ್ಟು ಮಾಡಿಕೊಂಡು ಹುಷ್ ಅಂತ ಹೊರಗೆ ಬಂದೆ. ಇನ್ನೂ ಮುಂಬಾಗಿಲು ತೆಗೆದೇ ಇತ್ತು. ಹೊರಗೆ ಬಂದು ಆಸ್ಪತ್ರೆಯತ್ತ ದೃಷ್ಟಿ ಹಾಯಿಸಿದೆ ಮತ್ತೆ. ಅಲ್ಲಿ ಇನ್ನೂ ಅದೇ ನಿಶ್ಯಬ್ದತೆ. ನಮ್ಮನೆ ಮುಂದಿನ ದೀಪ ಬಿಟ್ರೆ ಎಲ್ಲಾ ಕತ್ತಲು. ಅಲ್ಲಿ ಆಸ್ಪತ್ರೆಯ ದೀಪಗಳು. ಯಾರೋ ಕತ್ತಲಲ್ಲಿ ಓಡಾಡುವ ಭಾಸ ! ಹೆದರಿ ಒಳಬಂದು ಹೊರಗಿನ ಬಾಗಿಲನ್ನೂ ಬಂದ ಮಾಡಿ, ಡೈನಿಂಗ್ ಹಾಲ್ ನಲ್ಲಿ ಚೇರ್ ಮೇಲೆ ಕುಳಿತೆ ಆಯಾಸವಾದಂತೆನಿಸಿ.

ನಿದ್ದೆಯ ಪ್ರಶ್ನೆಯಂತೂ ಇಲ್ಲವೇ ಇಲ್ಲ. ಗಡಿಯಾರ ನೋಡಿದೆ – 2.45 ಆಗಿತ್ತು. ಮುಂದೆ ಅರ್ಧ ಗಂಟೆ ಬಿಟ್ಟು ಸೋಮಣ್ಣ ಬಂದು ಸುರೇಶ ಅವರ ಕಿಟ್ ಇಟ್ಟು ಹೋದ. ಆ ಮೇಲೆ ಹತ್ತು ನಿಮಿಷಗಳ ನಂತರ ನನ್ನ ಗಂಡನ ಆಗಮನ! ಬಾಗಿಲು ತೆರೆದು ಒಂದೂ ಮಾತಾಡದೆ ಒಳಗೆ ಹೋದೆ. ಅವರಿಗೆ ಅಚ್ಚರಿ. ರೋಗಿಯ ಸ್ಥಿತಿಗತಿ ವಿಚಾರಿಸದೇ ನಾ ಹೋದದ್ದೇ ಇಲ್ಲ ಎಂದೂ. ನನ್ನ ಬಿಗಿದ ಮುಖ ನೋಡಿ ಏನಾಯ್ತು ಅಂದ್ರು, ಸಿಡೀತು ನೋಡ್ರಿ ಬಾಂಬ್! ಅದಕ್ಕವರು ‘ನೀನು ಎಚ್ಚರವಾಗೇ ಇದ್ದೀ ಅನ್ಕೊಂಡು ಹೋದೆ’ ಅಂದ್ರು. ಅವರಿಗೆ ಮತ್ತೆ ನಿದ್ರೆ. ನನಗೋ ರಾತ್ರಿ ಪೂರ್ತಿ ನಿದ್ದೆ ಹತ್ರಾನೂ ಸುಳಿಯಲಿಲ್ಲ. ಇನ್ನೂ ಇದೆ ಸಮಾಚಾರ.

ಬೆಳಗ್ಗೆ ಆರು ಗಂಟೆಗೆ ಬಂದ ಸೀತವ್ವ‌ ಅಂಗಳ ಗುಡಿಸೋಕೂ ಮೊದಲು ‘ಬಾಯರ, ಬಾಯರ’ ಅಂತ ಕೂಗಿದ್ಲು. ‘ಏನs‌ ಸೀತವ್ವಾ’ ಅಂದೆ ಮಲಗಿಕೊಂಡೇ. ಸ್ವಲ್ಪ ಕಣ್ಣು ಭಾರ ಭಾರ ಆಗ. ‘ಬರ್ರೀ ಇಲ್ಲೆ’ ಮತ್ತೆ ಕೂಗಿದ್ಲು. ಏಳಲಾರದೇ ಎದ್ದು ಹೋದ್ರೆ, “ರಾತ್ರಿ ಹೊತ್ತಲ್ಲದ ಹೊತ್ತಿನ್ಯಾಗ ಬಾಗ್ಲಾ ತೆಗ್ಯೂದು, ಹಾಕೂದು ಮಾಡ್ತೀರಿ. ಸ್ವಲ್ಪ ನಿಗಾ ಇಟ್ಟ ಮಾಡ್ರಿ. ಹುಷಾರೀಲೇ ಇರ್ರೀ” ಅಂತ ಹೇಳಿದ್ಲು. ‘ಯಾಕ ಸೀತವ್ವಾ ಏನಾತು? ಹಿಂಗ್ಯಾಕ ಇಷ್ಟ ಗಾಬರಿ ಯಾಕ?’ ಅಂದೆ.

“ನಿನ್ನೆ ರಾತ್ರಿ FDCಯವರ (First Division Clerk) ಮನೀದು ಕೀಲಿ ಮುರದು ಒಳಗೆಲ್ಲಾ ಕಿತ್ತಾಡ್ಯಾರಂತ್ರೀ. ಆ ಸಪ್ಪಳಕ ಬಾಜೂದ LHV (Lady Health Visitor)‌ ಸಿಸ್ಟರ್ ಅವರು ಎಚ್ಚರಾಗ್ಯಾರ್ರಿ. ಯಾರದು ಯಾರದು ಅಂತ ಒದರಿ ಗದ್ಲಾ ಮಾಡಿದ ಕೂಡಲೇ ಓಡಿ ಹೋದ್ರಂತ್ರಿ ಮೂರ್ನಾಲ್ಕ ಜನಾ” ಹೇಳಿ ಸೀತವ್ವ ನನ್ನ ಮಾರಿ ನೋಡಿದ್ಲು.

ನಮ್ಮನಿಯಿಂದ ನಾಲ್ಕನೇ ಮನಿ. ಆಕಡೆ, ಆಸ್ಪತ್ರೆ ಗೇಟ್ ಕಡೆ ಮುಖ ಆ ಮನಿಗಳದು. Twin houses ಆ ಸಾಲು. ‘ಎಷ್ಟೊತ್ತಿಗೆ  ಸೀತವ್ವಾ’ ಕೇಳಿದೆ ಡವಗುಟ್ಟುವ ಎದೆ ಅಂಗೈಯಲ್ಲಿ ಹಿಡಿದು. ‘ಎರಡೂ ವರಿ ಆಗಿತ್ತಂತ್ರೀ ಬಾಯರ. ಭರ್ತಿ ನಿದ್ದಿ ಹೊತ್ತ ನೋಡ್ರಿ. ಯಾರ ಎಚ್ಚರಿರತಾರ ಆಗ? ಯಾಕೋ ಸಿಸ್ಟರ್ ಗಿ ಎಚ್ಚರಾಗೇತ್ರೀ. ಈಗ FDC ಊರಿಂದ ಬಂದರ್ರೀ. ಹೇಳಾಕ್ಹತ್ತಿದ್ದರ್ರೀ ಸಿಸ್ಟರ್’ ಅಂತ ಹೇಳಿ ಗುಡಿಸಲಿಕ್ಕೆ ಪೊರಕೆ ತಗೊಂಡಳು ಆಕೆ. ಕೈಕಾಲು ಥಣ್ಣಗಾಗಿ ಧಪ್ಪ ಅಂತ ಕುಕ್ಕರಿಸಿದೆ.

ಆಗ ನನ್ನ ಪರೇಡ್ ನಡದಿತ್ತಲಾ! 

“ಹಳ್ಳಿಯಾದರೇನು ಶಿವಾ ದಿಲ್ಲಿಯಾದರೇನು ಶಿವಾ ಜನರೆಲ್ಲಾ ಒಂದೇ ಶಿವಾ…” ಅಂತ ಉಸಿರಿತು ಹೊರಗೆ ಬರಲಾರದ ನನ್ನ ಧ್ವನಿ.

|ಮುಂದಿನ ಸಂಚಿಕೆಯಲ್ಲಿ |

‍ಲೇಖಕರು Avadhi

November 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರೈತರ ‘ಚಲೋ ದಿಲ್ಲಿ’

ರೈತರ ‘ಚಲೋ ದಿಲ್ಲಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಹಿಂದೆ ದಿಲ್ಲಿ ಮತ್ತು...

ಎಸ್‌ ಸಾಯಿಲಕ್ಷ್ಮಿ ಸರಣಿ 5: ಮರಿ ಕೋಗಿಲೆ ಬಾಯಿ ತೆರೆಯಿತು…

ಎಸ್‌ ಸಾಯಿಲಕ್ಷ್ಮಿ ಸರಣಿ 5: ಮರಿ ಕೋಗಿಲೆ ಬಾಯಿ ತೆರೆಯಿತು…

ಎಸ್. ಸಾಯಿಲಕ್ಷ್ಮಿ ಸ್ನೇಹಗಾನಕ್ಕೆ ರಿತೀಷಾ ಎಂಬ ಬಾಲಾದ್ಭುತದ ಪ್ರವೇಶ ಆಕಾಶವಾಣಿ ಬೆಂಗಳೂರು ಕೇಂದ್ರದಲ್ಲಿ ಸಹಾಯಕ ನಿರ್ದೇಶಕಿಯ ಸ್ಥಾನವನ್ನು...

ಮಾಯಾ ಏಂಜೆಲೊ

ಮಾಯಾ ಏಂಜೆಲೊ

ಆರ್ ವಿಜಯರಾಘವನ್ ಮಾಯಾ ಏಂಜೆಲೊ ತಮ್ಮ 86ನೇ ವಯಸ್ಸಿನಲ್ಲಿ ತೀರಿಕೊಂಡರು. ತನ್ನ ಕ್ಯಾನ್ಸರ್ ಕುರಿತು ಆಕೆ ಹೇಳಿಕೊಂಡಿದ್ದು ತನ್ನ ನಲವತ್ತು...

2 ಪ್ರತಿಕ್ರಿಯೆಗಳು

  1. Krishna

    very very nice writings Madam. You have very unique experiences. enjoyed reading your series

    ಪ್ರತಿಕ್ರಿಯೆ
  2. Sarojini Padasalgi

    Thank you very much! Yes each and every experience and memory is evergreen one.I am so happy that you liked and enjoyed it!!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: