ಒಂದು ಚಾರಿತ್ರಿಕ ನಿವೇದನೆ

gali5.gif 

“ಗಾಳಿ ಬೆಳಕು”

ನಟರಾಜ್ ಹುಳಿಯಾರ್

ಸ್ಟ್ರೇಲಿಯಾದ ಪಾರ್ಲಿಮೆಂಟಿನಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಕೆವಿನ್ ರೆಡ್ ಆಸ್ಟ್ರೇಲಿಯಾದ ಮೂಲನಿವಾಸಿಗಳ ಮೇಲೆ ಈವರೆಗಿನ ಸರ್ಕಾರಿ ನೀತಿಗಳು ನಡೆಸಿರುವ ಹಲ್ಲೆಗಾಗಿ ಮೂಲನಿವಾಸಿಗಳ ಕ್ಷಮೆ ಕೋರಿದರು. ಈ ಮಾತನ್ನು ಆಸ್ಟ್ರೇಲಿಯಾದ ಬೇರೆ ಬೇರೆ ಕಡೆಗಳಲ್ಲಿ ಕೇಳಿಸಿಕೊಂಡ ಮೂಲನಿವಾಸಿಗಳ ಕಣ್ಣಲ್ಲಿ ಕೃತಜ್ಞತೆಯ ಕಣ್ಣೀರ್‍ಇತ್ತು.

“ತಾನು ಯಾಕೆ ಈ ಕ್ಷಮೆ ಕೋರುತ್ತಿದ್ದೇನೆ?” ಎಂಬ ಪ್ರಶ್ನೆ ಹಾಕಿಕೊಳ್ಳುತ್ತಾ, ಕೆವಿನ್ ತಾನು ಬಲ್ಲ ಒಬ್ಬ ಮಹಿಳೆಯ ಕಥೆ ಹೇಳಿದರು. ಅದು ಎಂಬತ್ತು ವರ್ಷ ದಾಟಿರುವ, ಅಪಾರ ಜೀವಂತಿಕೆಯ, ತಮಾಷೆಯ ಕಥೆಗಳ ನಾನಾ ಫಜೋಳ ಕಥೆ; ತನ್ನ ಬದುಕಿನಲ್ಲಿ ಏನೇ ಸಂಭವಿಸಿದರೂ ಜೀವಂತಿಕೆ ಕಳೆದುಕೊಳ್ಳದ ಕಪ್ಪು ಹೆಣ್ಣಿನ ಕಥೆ:

ಟೆನೆಂಟ್ ಕ್ರೀಕ್ ದಂಡೆಯ್ ಆಚೆ ಒಂದು ಬುಶ್ ಕ್ಯಾಂಪಿನಲ್ಲಿ ಪುಟ್ಟ ಹುಡುಗಿಯಾಗಿ ತಾನು ಕಳೆದ ದಿನಗಳು ನಾನಾಗೆ ನೆನಪಿದೆ. ನೆಂಟರಿಷ್ಟರ ಬೆಚ್ಚಗಿನ ಪ್ರೀತಿ ಹಾಗೂ ರಾತ್ರಿ ಬೆಂಕಿ ಹಾಕಿಕೊಂಡು ಅದರ ಸುತ್ತ ಕುಣಿಯುತ್ತಿದ್ದ ದಿನಗಳು ನಾನಾಗೆ ನೆನಪಿವೆ. ೧೯೩೨ರ ಹೊತ್ತಿಗೆ, ನಾನಾಗೆ ಇನ್ನೂ ನಾಲ್ಕು ವರ್ಷಗಳಾಗಿದ್ದಾಗ ಈ ಆದಿವಾಸಿಗಳ ಕಲ್ಯಾಣದ ಸರ್ಕಾರಿ ಯೋಜನೆಯ ಅಂಗವಾಗಿ ಸರ್ಕಾರಿ ಮಂದಿ ಬಂದರು. ಆ ದಿನ ಬಂದೇ ಬರುತ್ತದೆಂದು ಅವಳ ಮನೆಯ ಹಿರಿಯರಿಗೆ ಗೊತ್ತಿತ್ತು. ಆ ಕಾರಣಕ್ಕಾಗಿಯೇ ಹೊಳೆಯ ದಂಡೆಯಲ್ಲಿ ಮಕ್ಕಳು ತಕ್ಷಣ ಅವಿತಿಟ್ಟುಕೊಳ್ಳಬಹುದಾದ ಬಿಲಗಳನ್ನು ತೋಡಿದ್ದರು. ಆದರೆ, ಕಲ್ಯಾಣ ಯೋಜನೆಯ ಬಿಳಿಯ ಅಧಿಕಾರಿಗಳು ತಾವಷ್ಟೇ ಬರದೆ, ಒಂದು ಲಾರಿಯನ್ನೂ, ಕುದುರೆಯ ಮೇಲೆ ಕೂತು ಚಾಟಿ ಬೀಸುತ್ತಿದ್ದ ಮೂಲನಿವಾಸಿ ಸ್ಟಾಕ್ ಮನ್ ಒಬ್ಬನನ್ನೂ ಕರೆತಂದಿದ್ದರು. ಬಿಲದಲ್ಲಿದ್ದ ಮಕ್ಕಳು ಅವನಕೈಗೆ ಸಿಕ್ಕಿಬಿಟ್ಟವು. ಅಮ್ಮಂದಿರ ಹತ್ತಿರ ಕಿರುಚುತ್ತಾ ಓಡುತ್ತಿದ್ದ ಮಕ್ಕಳನ್ನು ಎಳೆದೆಳೆದು ಲಾರಿಯಲ್ಲಿ ತುಂಬಿದರು. ನಾನಾಳ ತಾಯಿ ಕಣ್ಣೀರಿಡುತ್ತಾ ಲಾರಿಗೆ ಆತುಕೊಳ್ಳಲು ಪ್ರಯತ್ನಿಸುತ್ತಿರುವಂತೆಯೇ ಆ ಮಕ್ಕಳನ್ನು ಸರ್ಕಾರಿ ವಸತಿ ಗೃಹಕ್ಕೆ ಒಯ್ಯಲಾಯಿತು. ಇದೆಲ್ಲಾ ಆದದ್ದು ಮಕ್ಕಳ ರಕ್ಷಣೆಯ ಕಲ್ಯಾಣ ಯೋಜನೆಯ ಹೆಸರಿನಲ್ಲಿ.

ಕೆಲ ವರ್ಷಗಳ ನಂತರ ಸರ್ಕಾರಿ ನೀತಿ ಬದಲಾಯಿತು. ಮಕ್ಕಳನ್ನು ಚರ್ಚಿನ ವಶಕ್ಕೆ ಒಪ್ಪಿಸಲಾಯಿತು. ಈ ಮಕ್ಕಳ ಬಗ್ಗೆ ಯಾವ ಚರ್ಚು ತಾನೆ ತಲೆ ಕೆಡಿಸಿಕೊಂಡೀತು? ಈ ಮಕ್ಕಳನ್ನೆಲ್ಲ ಮೂರು ಸಾಲಿನಲ್ಲಿ ನಿಲ್ಲಲು ಹೇಳಲಾಯಿತು. ಎಡಗಡೆಯ ಸಾಲಿನಲ್ಲಿರುವವರೆಲ್ಲ ಕ್ಯಾಥೊಲಿಕ್ಕರು; ಮಧ್ಯದಲ್ಲಿರುವವರೆಲ್ಲ ಮೆಥೊಡಿಸ್ಟುಗಳು; ಬಲಗಡೆ ಇರುವವರೆಲ್ಲ್ ಚರ್ಚ್ ಆಫ್ ಇಂಗ್ಲೆಂಡಿಗೆ ಸೇರಿದವರು ಎಂದು ಘೋಷಿಸಲಾಯಿತು. ನಾನಾ ಮತ್ತು ಅವಳ ತಂಗಿಯನ್ನು ಒಂದು ಚರ್ಚಿಗೆ ಕಳಿಸಿದರು; ಅವರ ಅಣ್ಣಂದಿರಿಬ್ಬರನ್ನು ಬೇರೆ ಬೇರೆ ದಿಕ್ಕುಗಳಿಗೆ ಕಳಿಸಿದರು.ನಾನಾಗೆ ಹದಿನಾರು ತುಂಬಿದಾಗ ಬೇರೊಂದು ಕಡೆ ಕಳಿಸಲಾಯಿತು. ಅನಂತರ ನಾನಾ ತನ್ನ ತಾಯಿಯನ್ನು ನೋಡಲೇ ಇಲ್ಲ. ತನ್ನ ಮಕ್ಕಳನ್ನು ಸರ್ಕಾರದ ಕಲ್ಯಾಣ ಯೋಜನೆ ಕಿತ್ತುಕೊಂಡು ಹೋದ ಮೇಲೆ ವರ್ಷಗಳ ಕಾಲ ಆ ತಾಯಿ ನರಳಿ ನರಳಿ ಸತ್ತಳು. ಅದನ್ನೆಲ್ಲಾ ನೆನೆಸಿಕೊಂಡ ನಾನಾ ಫಿಜೋ, ಕೆವಿನ್ ರೆಡ್ ಗೆ ಹೇಳಿದಳು: “ಕುಟುಂಬಗಳನ್ನು ಒಟ್ಟಿಗೆ ಇಡುವುದು ಬಹಳ ಮುಖ್ಯ. ನಮ್ಮ ಸುತ್ತಲೂ ಪ್ರೀತಿ ತುಂಬಿರುವುದು ಹಾಗೂ ಆ ಪ್ರೀತಿಯನ್ನು ಮುಂದಿನ ತಲೆಮಾರುಗಳಲ್ಲಿ ಹರಿಸುವುದು ಸದಾ ಒಳ್ಳೆಯದು. ಅದೇ ನಮಗೆ ಸಂತೋಷ ತರುವುದು ಕೂಡ.”

ತನ್ನ ದಾರುಣ ಕಥೆಯನ್ನು ಪ್ರಧಾನಿ ಕೆವಿನ್ ರೆಡ್ ಅವರಿಗೆ ಹೇಳಿದ ನಾನಾ, ಆನಂತರ ಪ್ರಧಾನಿ ಕಛೇರಿಯ ಅಧಿಕಾರಿಯನ್ನು ಪಕ್ಕಕ್ಕೆ ಕರೆದು ಹೇಳಿದಳು: “ಹತ್ತಾರು ವರ್ಷಗಳಿಂದ ಈ ಮಕ್ಕಳನ್ನು ಬೇಟೆಯಾಡಿಕ್ಯಾಂಪುಗಳಿಗೆ ತಂದ ಮೂಲನಿವಾಸಿ ಸ್ಟಾಕ್ ಮನ್ ಗಳ ಬಗ್ಗೆ ಈಗ ಕಟುವಾಗಬೇಡಿ.” ಯಾಕೆಂದರೆ ಎಷ್ಟೋ ವರ್ಷಗಳ ಕೆಳಗೆ ನಾನಾ ಮತ್ತು ಆಕೆಯ ಸೋದರರನ್ನು ಬಿಲಗಳಿಂದ ಹೊರತಂದು ಸರ್ಕಾರದ ವಶಕ್ಕೆ ಕೊಟ್ಟಿದ್ದ ಸ್ಟಾಕ್ ಮನ್ ಮುಂದೊಮ್ಮೆ ಅವಳ ಬಳಿ ಬಂದು ಕ್ಷಮೆ ಕೇಳಿದ್ದ. ನಾನಾ ಆತನನ್ನು ಉದಾರವಾಗಿ ಕ್ಷಮಿಸಿದ್ದಳು.

ತಾವು ಅಧಿಕಾರ ವಹಿಸಿಕೊಂಡ ನಂತರ ಪಾರ್ಲಿಮೆಂಟಿನ ಮೊದಲ ಪೂರ್ಣಾಧಿವೇಶನದಲ್ಲಿ ಈ ಘಟನೆಯನ್ನು ನೆನೆಸಿಕೊಂಡ ಕೆವಿನ್ ಹೇಳಿದರು: “ಇಂಥ ಲಕ್ಷಾಂತರ ಮಕ್ಕಳ ಹಾಗೂ ತಂದೆ ತಾಯಂದಿರ ಭೀಕರ ಕಥೆಗಳಿವೆ. ಮೂಲನಿವಾಸಿಗಳು ಹಾಗೂ ಆನಂತರ ಬಂದ ಬಿಳಿಯರ ಸಂಬಂಧದ ಫಲವಾಗಿ ಹುಟ್ಟಿದ ಮಕ್ಕಳನ್ನು ತಂದೆ ತಾಯಂದಿರಿಂದ ಬೇರ್ಪಡಿಸಿ ನಾಗರೀಕರಣಗೊಳಿಸುವ ಸರ್ಕಾರಿ ನೀತಿಗಳ ಫಲವಾಗಿ ಈ ಕಳವಾದ ತಲೆಮಾರುಗಳು (ಸ್ಟೋಲನ್ ಜನರೇಷನ್ಸ್) ಎಲ್ಲ ಪ್ರೀತಿಯನ್ನು ಕಳಕೊಂಡಿವೆ. ಇಡೀ ಮೂಲನಿವಾಸಿ ಸಮುದಾಯಕ್ಕೆ ಭೀಕರವಾದ ಅನ್ಯಾಯವಾಗಿದೆ. ಈ ಅನ್ಯಾಯವನ್ನು ಇನ್ನು ಇಲ್ಲವಾಗಿಸಬೇಕು. ಅದರ ಮೊದಲ ಹೆಜ್ಜೆಯಾಗಿ ಈವರೆಗಿನ ಸರ್ಕಾರಿ ನೀತಿಗಳು ಹಾಗೂ ಕಾರ್ಯಕ್ರಮಗಳ ಕಲ್ಯಾಣ ಯೋಜನೆ ತಂದ ದುರಂತಕ್ಕಾಗಿ ನಾನು ಮೂಲನಿವಾಸಿಗಳ ಕ್ಷಮೆ ಕೋರುತ್ತೇನೆ. ಅಷ್ಟೇ ಅಲ್ಲ, ಇಡೀ ದೇಶವೇ ಈ ಚಾರಿತ್ರಿಕ ಅಪರಾಧವನ್ನು ಸರಿಪಡಿಸಲು ಮುಂದಾಗಬೇಕೆಂದು ಕೋರುತ್ತೇನೆ.”

ಈ ಎಲ್ಲ ಮಾತುಗಳನ್ನು ಪ್ರಾಮಾಣಿಕವಾಗಿ ಆಡಿದ ಕೆವಿನ್ ರೆಡ್ ಕೊಟ್ಟ ಅಂಕಿ ಅಂಶಗಳು ಕಂಗೆಡಿಸುವಂತಿವೆ: ಉದಾಹರಣೆಗೆ ೧೯೧೦ರಿಂದ ೧೯೭೦ರವರೆಗೆ ಸುಮಾರು ೫೦,೦೦೦ ಮಕ್ಕಳನ್ನು ಅವರ ತಂದೆ ತಾಯಂದಿರಿಂದ ಬಲವಂತವಾಗಿ ಬೇರ್ಪಡಿಸಲಾಯಿತು. “ಇನ್ನು ಮುಂದಿನ ಐದಾರು ತಲೆಮಾರುಗಳಲ್ಲಿ ಆಸ್ಟ್ರೇಲಿಯಾದ ಮೂಲನಿವಾಸಿಗಳ ಎಲ್ಲಾ ಲಕ್ಷಣಗಳನ್ನು ಇಲ್ಲವಾಗಿಸಿಬಿಡಬಹುದು. ಹೀಗೆ ಕಪ್ಪು ಜನಾಂಗದ ಚಹರೆಯೇ ಇಲ್ಲದಂತೆ ಮಾಡಿದ ಮೇಲೆ ಈ ತಲೆಮಾರುಗಳೆಲ್ಲ ಬಿಳಿಯರ ಸಮುದಾಯದ ಭಾಗವಾಗಿಬಿಡುತ್ತವೆ” ಎಂದು ಒಂದು ಕಾಲಕ್ಕೆ ನಿರ್ಧರಿಸಿದ ಸರ್ಕಾರಿ ಅಧಿಕಾರಿಗಳು ಕ್ರೂರವಾದ ರೀತಿಯಲ್ಲಿ ಯೋಜನೆಗಳನ್ನು ರೂಪಿಸಿದ್ದರು ಎಂಬುದನ್ನು ಕೆವಿನ್ ಹೊರಗೆಡಹಿದರು. ಈ ರೀತಿಯ ಬಲವಂತದ ಬೇರ್ಪಡಿಸುವಿಕೆ ೧೯೭೦ರವರೆಗೂ ನಡೆಯುತ್ತಿತ್ತು ಹಾಗೂ ಆ ನೆನಪುಗಳು ಇನ್ನೂ ಹಲವು ತಲೆಮಾರುಗಳ ಮನಸ್ಸಿನಲ್ಲಿ ಭಯಾನಕವಾಗಿ ಚುಚ್ಚುತ್ತಲೇ ಇವೆ.

“ಇವೆಲ್ಲ ಆದದ್ದು ನಮ್ಮ ಪಾರ್ಲಿಮೆಂಟು ಕಾಲಕಾಲಕ್ಕೆ ರೂಪಿಸಿದ ನೀತಿಗಳಿಂದಲೇ; ಆದ್ದರಿಂದ ಈ ಕ್ಷಮಾ ಯಾಚನೆ ಇವತ್ತು ಅನಿವಾರ್ಯ. ಆಸ್ಟ್ರೇಲಿಯಾದ ಚರಿತ್ರೆಯ ಅತ್ಯಂತ ಕರಾಳ ಅಧ್ಯಾಯಗಳನ್ನು ನಾವು ಈಗ ನಿವಾರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಪ್ರಧಾನಿಯಾಗಿ, ಸರ್ಕಾರದ ಪರವಾಗಿ, ಆಸ್ಟ್ರೇಲಿಯಾದ ಪಾರ್ಲಿಮೆಂಟಿನ ಪರವಾಗಿ ನಾನು ಹೇಳುತ್ತೇನೆ- ಐ ಆಮ್ ಸಾರಿ” ಎಂದು ಕೆವಿನ್ ಘೋಷಿಸಿದರು.

“ಈ ಮಾತುಗಳಿಂದ ಮೂಲನಿವಾಸಿಗಳ ಅಗಾಧ ನೋವು ಮಾಯವಾಗುವುದಿಲ್ಲ ಎಂಬುದು ನನಗೆ ಅರಿವಿದೆ” ಎಂದ ಕೆವಿನ್ ಗೆ ಈ ಕ್ಷಮಾಯಾಚನೆ ಅತ್ಯಗತ್ಯವಾದುದು ಹಾಗೂ ಕಾಲಾನಂತರ ಆಸ್ಟ್ರೇಲಿಯಾಕ್ಕೆ ಬಂದವರ ನಡುವೆ ಸೇತುವೆ ಕಟ್ಟಲು ಈ ಕ್ಷಮಾಯಾಚನೆ ಒಂದು ಹೆಜ್ಜೆ ಮಾತ್ರ ಎಂಬುದು ಗೊತ್ತಿದೆ. ಹೊಸ ಕಾರ್ಯ ಯೋಜನೆಗಳ ಮೂಲಕ ಮಾತ್ರ ಈ ತಪ್ಪುಗಳನ್ನು ಸರಿಪಡಿಸಬಹುದು. ಮೂಲನಿವಾಸಿಗಳು ಹಾಗೂ ಅವರ ಮಕ್ಕಳು ತಂತಮ್ಮ ಕುಟುಂಬಗಳನ್ನು ಮರಳಿ ಹುಡುಕಿಕೊಳ್ಳಲು ಸಹಾಯ ಮಾಡುವುದು ಕೂಡಈ ದಿಸೆಯಲ್ಲಿ ಒಂದು ಹೆಜ್ಜೆ. ಈ ಮಕ್ಕಳಿಗೆ ಶಿಕ್ಷಣ, ಉದ್ಯೋಗಗಳಲ್ಲಿ ಖಾತ್ರಿ ನೀಡುವುದು ಕೂಡ ಅಷ್ಟೇ ಮುಖ್ಯ ಎಂಬುದು ಕೆವಿನ್ ಗೆ ಗೊತ್ತಿದೆ.

ಇದರ ಜೊತೆಗೆ ಕೆವಿನ್ “ಈ ಬೆಸುಗೆಯ ದೀರ್ಘ ಯೋಜನೆಯ ಜಾರಿಗಾಗಿ ಆಸ್ಟ್ರ್‍ಏಲಿಯಾದ ಪ್ರಧಾನಿಯಾದ ನಾನು ಹಾಗೂ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಒಂದು ಸಮಿತಿ ರಚನೆಯಾಗಲಿದೆ. ಆಸ್ಟ್ರೇಲಿಯಾದ ಇತಿಹಾಸವನ್ನು ಎಲ್ಲರೂ ಸೇರಿ ನಿರ್ಮಿಸೋಣ” ಎಂಬ ಉದಾರವಾದ ಹಾಗೂ ಆಳವಾದ ಬದ್ಧತೆಯ ಮಾತುಗಳನ್ನೂ ಆಡಿದರು.

ಭಾರತದಲ್ಲಿ ಕಳೆದ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಈ ಹಿಂದೆ ದೆಹಲಿಯಲ್ಲಿ ಸಿಖ್ಖರ ಮೇಲೆ ನಡೆದ ಅನಾಚಾರಗಳಿಗಾಗಿ ಕ್ಷಮೆ ಮೋರಿದ್ದು ನಿಮಗೆ ಈಗ ನೆನಪಾಗುತ್ತಿರಬಹುದು. ಈ ಕ್ಷಮಾಯಾಚನೆಯಿಂದ ಏನು ಮಹಾ ಆಗುತ್ತದೆ ಎಂದು ಇವತ್ತು ಅಸ್ಟ್ರೇಲಿಯಾದಲ್ಲಿ ಮೂಗು ಮುರಿಯುತ್ತಿರುವವರ ಹಾಗೆ ಇಂಡಿಯಾದಲ್ಲೂ ಮೂಗು ಮುರಿದ ಪಕ್ಷಗಳಿದ್ದವು. ಅದೇನೇ ಇರಲಿ, ಐತಿಹಾಸಿಕ ತಪ್ಪುಗಳಿಗಾಗಿ ಒಂದು ದೊಡ್ಡ ದೇಶದ ಪ್ರಧಾನಿ ಕ್ಷಮೆ ಕೋರಿರುವುದು ಹಾಗೂ ತಪ್ಪುಗಳನ್ನು ಸರಿಪಡಿಸಲು ಮುಂದಾಗಿರುವುದು ಜಗತ್ತಿನ ಇತಿಹಾಸದಲ್ಲಿ ಒಂದು ಮುಖ್ಯ ಹೆಜ್ಜೆಯಾಗಿದೆ. ಭಾರತದ ಅಂತಃಸಾಕ್ಷಿಯಲ್ಲೂ ಇಂತಹ ಗಳಿಗೆಗಳು ಮೂಡಲಾರಂಭಿಸಲಿ. ಜಾತಿಗಳ ಹೆಸರಿನಲ್ಲಿ ಧರ್ಮಗಳ ಹೆಸರಿನಲ್ಲಿ ಜನರನ್ನು ಕೊಂದ ಹಾಗೂ ಕೊಲ್ಲುತ್ತಿರುವ ನಾಯಕರು ಹಾಗೂ ಅವರ ಪಕ್ಷಗಳು ಗಾಂಧಿಯ ಒಂದು ಎಳೆಯಿಂದ ಸ್ಫೂರ್ತಿಗೊಂಡಂತಿರುವ ಕೆವಿನ್ ರೆಡ್ ಅವರ ಐತಿಕಾಸಿಕ ಕ್ಷಮಾಯಾಚನೆಯಿಂದ ಒಂದಿಷ್ಟಾದರೂ ಪ್ರಭಾವಿತರಾಗಲಿ.  

‍ಲೇಖಕರು avadhi

February 27, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ...

ಬರಲಿರುವ ದುರಂತದ ಮುನ್ಸೂಚನೆ..

'ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ' ಗಾಳಿಬೆಳಕು -ನಟರಾಜ್ ಹುಳಿಯಾರ್ ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್...

2 ಪ್ರತಿಕ್ರಿಯೆಗಳು

 1. ಚಂದಿನ

  ಮತಿಹೀನ ಕೃತ್ಯಗಳೆಸಗುವ ಅರಸರಿಗೆ
  ಈ ಘಟನೆ ಅವರ ಮನವ ತಟ್ಟಲೆಂದು
  ಬಯಸುವ.

  – ಚಂದಿನ

  ಪ್ರತಿಕ್ರಿಯೆ
 2. Naveed Ahamed Khan

  “ಜಾತಿಗಳ ಹೆಸರಿನಲ್ಲಿ ಧರ್ಮಗಳ ಹೆಸರಿನಲ್ಲಿ ಜನರನ್ನು ಕೊಂದ ಹಾಗೂ ಕೊಲ್ಲುತ್ತಿರುವ ನಾಯಕರು ಹಾಗೂ ಅವರ ಪಕ್ಷಗಳು ಗಾಂಧಿಯ ಒಂದು ಎಳೆಯಿಂದ ಸ್ಫೂರ್ತಿಗೊಂಡಂತಿರುವ ಕೆವಿನ್ ರೆಡ್ ಅವರ ಐತಿಕಾಸಿಕ ಕ್ಷಮಾಯಾಚನೆಯಿಂದ ಒಂದಿಷ್ಟಾದರೂ ಪ್ರಭಾವಿತರಾಗಲಿ” emba nataraja avara
  aashaya vivekavanthara kivigalalli maardanisali.
  matthu kalushithagonda manasugalu thiliyaagali.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: