ಶೈಲಜ ನಾಗರಘಟ್ಟ
ಆಗ ನಾನು ಎರಡನೇ ತರಗತಿಯ ಹುಡುಗಿ. ಜಾಮಿಟ್ರಿ ಬಾಕ್ಸ್ ಎಂದರೆ ವಿಚಿತ್ರವಾದ ಕುತೂಹಲ. ಏನಾದರೂ ಮಾಡಿ ಒಂದು ಜಾಮಿಟ್ರಿಯನ್ನು ದಕ್ಕಿಸಿಕೊಳ್ಳಬೇಕೆಂಬ ಕನಸು. ಅಕ್ಕನ ಜಾಮಿಟ್ರಿ ಬಾಕ್ಸ್ ಮುಟ್ಟಿದರೆ ಅಯ್ಯ; “ನಿಂಗೆ ಈಗ್ಲೆ ಯಾಕ್ ಜಾಮಿಟ್ರಿ. ನೀನೂ ಐದನೇ ಕ್ಲಾಸ್ ಪಾಸ್ ಮಾಡು ತಂದ್ಕೊಡ್ತೀನಿ” ಎಂದು ಗದರಿಸುತ್ತಿದ್ದ. ನಿರಾಶೆಗೊಂಡ ನಾನು ನನ್ನ ತರಗತಿಯಲ್ಲಿ ಕೆಲವರು ತರುತ್ತಿದ್ದ ಹಳೆಯ ಜಾಮಿಟ್ರಿ ಬಾಕ್ಸ್ ಗಳನ್ನೇ ನೋಡಿ ತೃಪ್ತಿಗೊಳ್ಳುತ್ತಿದ್ದೆ.
ಕಮ್ಮಾರ ಜನಾಂಗದ ರೇಣಿ ನನ್ನ ಜೀವದ ಗೆಳತಿ. ನನ್ನ ಆಟ, ಪಾಠ, ಊಟ ಅವಳ ಜೊತೆಯಲ್ಲೇ ಸಾಗುತ್ತಿತ್ತು. ಅವಳ ಮನೆಯವರು ಆಕೆಗೆ ಅಂಗಡಿಯ ಕುರುಕಲು ತಿಂಡಿಗೆ ಕಾಸು ಕೊಡುತ್ತಿದ್ದರು. ನಮ್ಮಪ್ಪ ದುಡ್ಡಿದ್ದವನಾದ್ರೂ ಒಂದು ಪೈಸೆಯನ್ನು ನಮಗೆ ಕೊಡುತ್ತಿರಲಿಲ್ಲ. ರೇಣಿ ನನಗೆ ಆಗಾಗ ಸಿಹಿ ತಿನಿಸುಗಳನ್ನು ತಂದು ಕೊಡುತ್ತಿದ್ದಳು.
ರೇಣಿ ಆಗಾಗ ಅವರಪ್ಪನೊಡನೆ ಕಾವಲಿಗೆ ಹೋಗಿ ತೂಪ್ರೆ ಹಣ್ಣುಗಳನ್ನು ತರುತ್ತಿದ್ದಳು. ಬೀಡಿ ಕಟ್ಟುವ ಎಲೆಯುಳ್ಳ ತೂಪ್ರೆ ಗಿಡ ಸಪೋಟದಂಥ ಹಣ್ಣುಗಳನ್ನು ಬಿಡುತ್ತಿತ್ತು. ಆ ಹಣ್ಣನ್ನು ಹಿಚುಕಿ ಬಾಯಲ್ಲಿಟ್ಟುಕೊಂಡಾಗಿನ ಸಂತಸ ಅಷ್ಟಿಷ್ಟಲ್ಲ.
ನಮ್ಮೂರ ಆಂಜನೇಯನ ಗುಡಿಯ ಹಿಂಭಾಗದಲ್ಲಿ ಪಾಪಸ್ ಕಳ್ಳಿ ದಟ್ಟವಾಗಿ ಬೆಳೆದಿತ್ತು. ಊರಿನ ಗಂಡಸರಿಗೆ “ಹೊರಗಡೆ ಹೋಗಲು” ಮರೆಯಾದ ಜಾಗವಾಗಿತ್ತು. ಸ್ಕೂಲು ಬಿಟ್ಟಾಗ ನಾವೆಲ್ಲ ಅಲ್ಲಿಗೆ ಓಡುತ್ತಿದ್ದೆವು. ಕೆಂಪನೆಯ ಪಾಪಸ್ ಹಣ್ಣುಗಳಿಗೆ ಕೈ ಹಾಕುತ್ತಿದ್ದೆವು. ಪಾಪಸ್ ಹಣ್ಣನ್ನು ಗಿಡದಿಂದ ಕೀಳುವುದು, ಕಿತ್ತ ಹಣ್ಣಿನಲ್ಲಿರುವ ಮುಳ್ಳನ್ನು ಮುಕ್ತಗೊಳಿಸುವುದು ಸುಲಭವೇನಲ್ಲ. ನಾನು ಮತ್ತು ರೇಣಿ ಜಾಣತನ ಮಾಡಿ “ಅಂಚಿಬೋಕಿ”ಯಿಂದ ಹಣ್ಣಿನ ಮೈಯುಜ್ಜಿ ನಂತರ ಇಸಿದು ತಿಂದರೆ ಕೆಲವರು ನಾಲಿಗೆಯಿಂದ ಮುಳ್ಳು ತೆಗೆಯೋ ಸಾಹಸ ಮಾಡಿ ಮುಳ್ಳು ಚುಚ್ಚಿಕೊಂಡು ನರಳುತ್ತಿದ್ದರು. ಸಂಜೆ ಮನೆಗೆ ಹೋದಾಗ ನಮ್ಮ ಚೀಲ ಪುಸ್ತಕಗಳೆಲ್ಲ ಪಾಪಸ್ ಹಣ್ಣಿನ ಬಣ್ಣದಿಂದ ವಿಕಾರಗೊಂಡಿರುತ್ತಿದ್ದವು. ಈ ಕಾರಣಕ್ಕಾಗಿ ಅವ್ವನಿಂದ ನನಗೆ ಬಿದ್ದ ಏಟುಗಳು ಅಪಾರ.
ಪಾಪಸ್ ಹಣ್ಣಿನ ದಿಸೆಯಿಂದ ಮೇಷ್ಟ್ರ ಬಳಿ ಒದೆ ತಿಂದು ಅನೇಕರಿಗೆ ಬಾಸುಂಡೆ ಬರುತ್ತಿದ್ದವು. ಆದರೆ ನನಗೆ ಮಾತ್ರ ಏಟು ಬೀಳುತ್ತಿರಲಿಲ್ಲ. ಚೆನ್ನಾಗಿ ಓದುತ್ತಿದ್ದ ಕಾರಣಕ್ಕಾಗಿ ಗುರುಗಳು ನನ್ನ ತಪ್ಪನ್ನು ಕ್ಷಮಿಸುತ್ತಿದ್ದರು. ಶಾಲಾ ತನಿಖಾಧಿಕಾರಿಗಳು ಬಂದಾಗ ತಕ್ಷಣ ಅವರು ಕೇಳಿದ ಪ್ರಶ್ನೆಗೆ ಉತ್ತರ ಹೇಳಿಬಿಡಲು ನಮ್ಮ ಮೇಷ್ಟ್ರುಗಳು ನನ್ನನ್ನೇ ಖಾಯಂ ಮಾಡಿದ್ದರು.
ಆಟಕ್ಕೆ ಬಿಟ್ಟ ಸಮಯದಲ್ಲಿ ಹುಡುಗರು ಕದ್ದು ಮನೆಗೆ ಹೋಗುವುದನ್ನು ತಡೆಯಲು ನಮ್ಮ ಚೀಲಗಳನ್ನೆಲ್ಲ ಮೂಲೆಗಿರಿಸಿ ಮೇಷ್ಟ್ರು ಬಾಗಿಲಲ್ಲಿ ಕೂರುತ್ತಿದ್ದರು. ಒಂದು ದಿನ ಎಲ್ಲರೂ ದಬದಬನೆ ಚೀಲವನ್ನು ಮೂಲೆಗೆಸೆದು ಆಡಲು ಅಂಗಳಕ್ಕೆ ಓಡಿದರು. ನಾನು ಮಾತ್ರ ತಡವಾಗಿ ಹೋಗಲು ತೀರ್ಮಾನಿಸಿದೆ. ಮೇಷ್ಟ್ರು ಇನ್ನೂ ಬಂದಿರಲಿಲ್ಲ. ಎಲ್ಲರೂ ಹೊರಟಿದ್ದಾಗ ನನ್ನ ಪ್ರಾಣಸ್ನೇಹಿತೆ ರೇಣಿಯ ಚೀಲದಲ್ಲಿದ್ದ ಹೊಸ ಜಾಮಿಟ್ರಿ ಬಾಕ್ಸನ್ನು ಕದ್ದು ಚೀಲಕ್ಕಿರಿಸಿ ಆಡಲು ಹೋದೆ. ನನ್ನ ಈ ಕಳ್ಳತನ ರೆಪ್ಪೆ ಬಡಿಯುವಷ್ಟರಲ್ಲಿ ಮುಗಿದಿತ್ತು. ಎಲ್ಲರೊಂದಿಗೆ ಆಡುವ ಮನಸ್ಸಿಲ್ಲದಿದ್ದರೂ ಕಾಟಾಚಾರಕ್ಕೆ ಅವರೊಡನೆ ಬೆರೆಯಬೇಕಾಯ್ತು. ಮನೆಗೆ ಹೋಗಲು ಬೆಲ್ಲು ಆಯ್ತು. ಎಲ್ಲರೂ ಅವರವರ ಚೀಲ ಎತ್ತಿಕೊಂಡು ಮನೆಗೆ ನಡೆದರು. ನಾನು ಭಾರವಾದ ಹೆಜ್ಜೆಯಿಡುತ್ತ ಮನೆ ತಲುಪಿ ಯಾರಿಗೂ ಕಾಣದಂತೆ ಕದ್ದ ರೇಣಿಯ ಜಾಮಿಟ್ರಿಯನ್ನು ರಾಗಿವಾಡೆಯ ಸಂದಿಗಿಟ್ಟೆ.
ಸ್ವಲ್ಪ ಹೊತ್ತಿನ ನಂತರ ರೇಣಿ ಅಳುತ್ತಾ ನಮ್ಮ ಮನೆಗೆ ಬಂದಳು. “ನೋಡೇ ನನ್ ಜಾಮಿಟ್ರಿ ಕಳ್ದೋಗೈತೆ” ಎಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದ ರೇಣಿಗೆ ಏನೂ ಗೊತ್ತಿಲ್ಲದವಳಂತೆ “ಹೌದಾ, ನಾಳೆ ಸ್ಕೂಲಿಗೆ ಹೋದಾಗ ಎಲ್ಲರ ಚೀಲಾನೂ ಹುಡ್ಕೋಣ ಬಿಡು” ಎಂದು ಸಂತೈಸಿದೆ.
ಬೆಳಗ್ಗೆ ವಾಡೆಸಂದಿಯಿಂದ ಜಾಮಿಟ್ರಿಯನ್ನು ತೆಗೆದು ಮೆಲ್ಲಗೆ ಚೀಲಕ್ಕಿಟ್ಟುಕೊಂಡು ಹೊರಟೆ. ಶಾಲೆಯ ಬಾಗಿಲು ತೆರೆದಿತ್ತು. ರೇಣಿ ಕೂರುವ ಮಣೆಯ ಕೆಳಗೆ ಅವಳ ಜಾಮಿಟ್ರಿಯನ್ನಿಟ್ಟೆ. ಬೆಲ್ ಆದ ನಂತರ ಮೇಷ್ಟ್ರು ಬಂದು ಎಲ್ಲರನ್ನೂ ನಿಲ್ಲಿಸಿ ವಿಚಾರಿಸುವ ಮುನ್ನ ನಾನೇ, “ಮಣೆ ಎತ್ತಿರಿ ನೋಡೋಣ” ಎಂದು ಹೇಳಿದೆ. ಮಣೆ ಎತ್ತಿದಾಗ ಜಾಮಿಟ್ರಿ ಕಂಡಿತು. ರೇಣಿಗೆ ಖುಷಿಯೋ ಖುಷಿ. ರೇಣಿಗಾದ ಸಂತಸದಲ್ಲಿ ಜಾಮಿಟ್ರಿಯನ್ನು ಕದ್ದವರಾರು? ಮತ್ತೆ ಇಲ್ಲಿಗಿಟ್ಟವರಾರೆಂಬ ಚಿಂತೆ ಮರೆತು ಹೋಯ್ತು.
0 ಪ್ರತಿಕ್ರಿಯೆಗಳು