ಒಂದು ಟಿಫಿನ್ ಬಾಕ್ಸ್

 door_number1421.jpg

 “ಡೋರ್ ನಂ 142”

ಬಹುರೂಪಿ

ದುವೆ ಎಂಬ ಆಟವನ್ನು ಮುಗಿಸಿ ನಾವಿಬ್ಬರೂ ಆಗ ತಾನೆ ಮನೆ ಸೇರಿಕೊಂಡಿದ್ದೆವು. ಎದುರಿಗೆ ಮದುವೆ ಉಡುಗೊರೆ ರಾಶಿ ರಾಶಿ ಹರಡಿಕೊಂಡಿತ್ತು. ಮೊದಲಿನಿಂದಲೂ ನನಗೆ ಗಿಫ್ಟ್ ಕೊಡುವುದರಲ್ಲಿ ಎಷ್ಟು ಉತ್ಸಾಹವೋ ಗಿಫ್ಟ್ ಪಡೆದುಕೊಳ್ಳುವುದರಲ್ಲೂ ಅಷ್ಟೇ ಉತ್ಸಾಹ. ಒಂದು ಮೃದುವಾದ ಇಂಪೋರ್ಟೆಡ್ ಗ್ಲೋಬ್ ಬೇಕು ಎನಿಸಿದರೆ ಅದು ಯಾಕೋ ನನ್ನ ಕೈಗೆಟಕುವ ಬೆಲೆಯದ್ದು ಎನಿಸದಿದ್ದರೆ ಯಾರಿಗಾದರೂ ದುಂಬಾಲು ಬಿದ್ದುಬಿಡುತ್ತಿದ್ದೆ. ನಾಲ್ಕು ಪ್ಯಾಂಟ್ ಒಟ್ಟಿಗೇ ಕೊಳ್ಳಬೇಕು ಎನಿಸಿದರೆ ಅಕ್ಕ ತಂಗಿಯರಿಗೆಲ್ಲ ಗಂಟು ಬೀಳುತ್ತಿದ್ದೆ. ಯಾವುದಾದರೂ ಮ್ಯಾಗ್ ಜಿನ್ ಬೇಕು ಎಂದಾದರೆ ಅದರ ಚಂದಾ ಮಾಡಿಸಿ ಕೊಡುವಂತೆ ಕಂಡ ಕಂಡವರ ಬೆನ್ನು ಹತ್ತುತ್ತಿದ್ದೆ. ಕೆಲವು ಸಲ ಇಂತಹವರ ಪ್ರೀತಿ ಇದರ ಹಿಂದೆ ಇದೆ ಎಂದು ಸದಾ ನೆನಪಾಗುತ್ತಿರಲಿ ಎಂಬ ಕಾರಣಕ್ಕಾಗಿ “ಪ್ಲೀಸ್… ಕೊಡಸೇ…” ಅಂತ ಇಲ್ಲದ ಪ್ರೀತಿ ತೋರಿಸಿ ಗೋಗರೆಯುತ್ತಿದ್ದೆ.

painting1.jpg

ಈಗ ಒಂದು ಮಣ ರಾಶಿ. ಗಿಫ್ಟ್ ಬಂದು ಬಿದ್ದಿತ್ತು. ಎಷ್ಟು ತರಹಾವರಿ ಪ್ಯಾಕ್ ಗಳು ನೋಡಿದರೆ ಸಾಕು ತಕ್ಷಣ ಕೈಹಾಕಬೇಕು. ಥರಹಾವರಿ ಸೈಜ್, ಥರಹಾವರಿ ಪ್ಯಾಕೇಟ್ ಗಳು ಕಣ್ಣು ಕೋರೈಸುತ್ತಿತ್ತು. ನಾನು ಮನೆ ಮಂದಿಯನ್ನೆಲ್ಲಾ ಗುಡ್ಡೆ ಹಾಕಿಕೊಂಡು ಕೂತಿದ್ದೆ. ಮದುವೆ ಮನೆ ಅಂತ ನಿಮಗೆ ಅನಿಸದ ಹಾಗೆ ಮದುವೆ ನಡೆದು ಹೋಗಿತ್ತು. ಆದರೆ ಯಾವಾಗ ಗಿಫ್ಟ್ ಗಳನ್ನು ಗುಡ್ಡೆ ಹಾಕಿಕೊಂಡು ಕೂತೆವೋ ಕಲರವ ಶುರುವಾಯಿತು. ಸ್ವಲ್ಪ ಮದುವೆ ಮನೆ ಅನ್ನೋ ಸಂಭ್ರಮ ಮುತ್ತಿಕೊಳ್ಳಲು ಆರಂಭವಾಯಿತು. ಮದುವೆ ಗಿಫ್ಟ್ ಅಂದರೆ ಇನ್ನು ಹೇಗಿರುತ್ತೆ. ಸಿಕ್ಕಾಪಟ್ಟೆ ಗಡಿಯಾರಗಳು, ಶೋಪೀಸ್ ಗಳು, ಯಾರಿಗೆ ಬೇಕಪ್ಪಾ ಅನಿಸೋ ಅಷ್ಟು ಗೋಡೆ ಪೀಸ್ ಗಳು. ಇದನ್ನು ಹೇಗೆ ಸಾಗಿ ಹಾಕೋದಪ್ಪ ಅನಿಸೋ ಅಂತಹದ್ದು. ಕೊಂಚ ಫ್ರೆಂಡ್ಸ್ ಗಳಿದ್ದರೆ ದೊಡ್ಡ ಪ್ಯಾಕೆಟ್ ನಲ್ಲಿ ಪುಟ್ಟ ಕಾಂಡೋಮ್. ಇನ್ನೂ ಗೇಲಿ ಮಾಡಬೇಕು ಅನ್ನೋದಾದ್ರೆ ಒಂದೆರಡು ಮಕ್ಕಳಗೊಂಬೆ, ಓದೋ ಹುಚ್ಚಿರೋರಾದ್ರೆ ಒಂದಷ್ಟು ಪುಸ್ತಕ. ಏನೂ ಗೊತ್ತಾಗದಿದ್ರೆ ಪ್ರಗ್ನಸಿ ಬಗ್ಗೆ ಒಂದಷ್ಟು ಹಿತೋಪದೇಶದ ಪುಸ್ತಕ. ಸ್ವಲ್ಪ ಸ್ಟ್ಯಾಂಡರ್ಡ್ ತೋರಿಸಿಕೊಳ್ಳಬೇಕು ಅನ್ನೋದಾದ್ರೆ ಕುಕ್ಕಿಂಗ್ ಸೆಟ್, ಕಾಫಿ ಸೆಟ್, ಒಂದಿಷ್ಟು ಟೆರಕೋಟ ಐಟಮ್, ಈ ಗಿಫ್ಟ್ ತಲೆನೋವು ಯಾಕಪ್ಪ ಅಂತ ಅನ್ನೋರು ಕವರ್ ನಲ್ಲಿ ಒಂದಿಷ್ಟು ದುಡ್ಡು ತುರುಕಿ ಕೊಟ್ಬಿಡ್ತಾರೆ. ಇನ್ನೂ ಐಡಿಯಾಲೆಸ್ ಗಳಾದರೆ ಸ್ಟೀಲ್ ಬಕೇಟು, ಸ್ಪೂನು ಇನ್ನೂ ಏನೇನೋ ಬಂದ್ಬಿಡುತ್ತೆ.

ಹೀಗೆ ಅದನ್ನೆಲ್ಲ ಲೇವಡಿ ಮಾಡ್ತಾ ಕೇಕೆ ಹಾಕ್ತಾ, ಮೆಚ್ತಾ, ಗಲಾಟೇನ ಜಾರಿಯಲ್ಲಿಟ್ಟಿರುವಾಗಲೇ ಅದು ಕಣ್ಣಿಗೆ ಬಿತ್ತು. ದೊಡ್ಡ ದೊಡ್ದ ಗಿಫ್ಟ್ ಗಳ ಮಧ್ಯೆ ಒಂದು ನಿರಾಭರಣ ಸುಂದರಿ “ಅಕ್ಕಿ ಆರಿಸುವಾಗ ಸಿಕ್ಕ ನುಚ್ಚಿನ ನಡುವೆ ಬಂಗಾರವಿಲ್ಲದ ಬೆರಳು…” ಅಂತ ಬಣ್ಣಿಸಿದರಲ್ಲಾ ಅಂತಾ ಗಿಫ್ಟ್-ಒಂದು ಪುಟಾಣಿ ಟಿಫನ್ ಬಾಕ್ಸ್. ಯಾರ ಕಣ್ಣೂ ಅದರ ಮೇಲೆ ಬಿದ್ದಿರಲಿಲ್ಲ. ನಾನು ಯಾರಿಗೂ ಗೊತ್ತಾಗದ ಹಾಗೆ ಅದನ್ನು ತೆಗೆದು ಇಟ್ಟುಕೊಂಡೆ. ಆ ಅಜ್ಜಿ ನೆನಪಾದರು. ಬೊಚ್ಚು ಬಾಯಿಯ ತುಂಬಾ ನಗೆ ತುಳುಕಿಸುವ ಅಜ್ಜಿ. ಮೈಯೆಲ್ಲ ಸಂಕೋಚ ಮಾಡಿಕೊಂಡು ಸ್ವಲ್ಪ ಬಾಗಿದ ಬೆನ್ನು ಹೊತ್ತಿದ್ದ ಅವರು ನನ್ನ ಹತ್ತಿರ ಬರಲೂ ಸಂಕೋಚ ಪಡುತ್ತಿದ್ದರು. ಬಂದವರೇ ನಮ್ಮಿಬ್ಬರ ಕೈಗೂ ತರಕಾರಿ ಚೀಲದಿಂದ ಯಾವುದೇ ಪ್ಯಾಕಿಂಗ್ ಇಲ್ಲದ ಈ ನಿರಾಭರಣ ಸುಂದರಿ ಟಿಫನ್ ಬಾಕ್ಸ್ ನ್ನು ಕೈಗಿಟ್ಟಿದ್ದರು.

ಯಾಕೋ ಗೊತ್ತಿಲ್ಲ. ಆ ತಕ್ಷಣ ಅಕ್ಷಯ ಪಾತ್ರೆ ನೆನಪಾಯಿತು. ಯಾವ ಕಾಲಕ್ಕೂ ಹಸಿದ ಹೊಟ್ಟೆ ಇರೋದು ಬೇಡ ಅಂತ ಆ ಹಿರಿಯರು ಈ ಬಾಕ್ಸ್ ಕೊಟ್ರಾ. ಸದಾ ಇದು ಖಾಲಿ ಇರದೇ ಇರೋ ಅಷ್ಟಾದ್ರೂ ದುಡೀಲಿ ಅಂತ ಯೋಚಿಸಿ ಕೊಟ್ರಾ?

ನನಗೂ ಊಟಕ್ಕೂ ಅಂತಾ ಫ್ರೆಂಡ್ ಶಿಪ್ ಏನೂ ಇಲ್ಲ. ಇದ್ದದ್ದು ಉಳಿದದ್ದು ತಿಂದು ಕಾಲಾ ಹಾಕೂ ಅಂದ್ರೂ ಸೈ. ಆದರೆ ಊಟಾ ಮಾಡೋ ರೀತಿ ಬಗ್ಗೆ ಮಾತ್ರ ತುಂಬಾ ಪರ್ಟಿಕ್ಯುಲರ್. ಆಕಾಶವಾಣಿನಲ್ಲಿ ಒಂದು ದಿನ ಚಿಂತನ ಕಾರ್ಯಕ್ರಮ ಕೇಳುವಾಗ ಹೇಳಿದ್ರು. ಯಾರ ಮನೆಯಲ್ಲಿ ಒಟ್ಟಿಗೆ ಕೂತು ಊಟ ಮಾಡೋ ರೂಢಿ ಇರುತ್ತೋ ಅವರ ಮನೆ ತುಂಬಾ ಆರೋಗ್ಯಕರವಾಗಿರುತ್ತೆ ಅಂತ. ಹೌದಲ್ಲ ಅನ್ನಿಸ್ತು. ನಮ್ಮನೇಲು ಅಷ್ಟೆ. ರಾತ್ರಿ ಊಟ ಅಂದ್ರೆ ಎಲ್ಲಾ ಜೊತೇಲೇ ಆಗ್ಬೇಕು. ಅಡಿಗೆ ಮನೆ ಸೇರಿಕೊಂಡರೆ ರೌಂಡಾಗಿ ಎಲ್ಲಾ ಕುಳಿತುಕೊಳ್ತಾ ಇದ್ವಿ. ಅಮ್ಮಾ ಬಡಿಸೋರು. ನಮ್ಮ ತರಲೆ, ತೀಟೆ, ಜಗಳ, ಓದು, ಸ್ಕೂಲ್ ಫೀಸು, ಮನೆ ತಾಪತ್ರಯ ಎಲ್ಲಾ ಮಾತಿಗಿಳಿದುಬಿಡ್ತಿತ್ತು. ಊಟ ಮಾಡ್ತಾ ಮಾಡ್ತಾನೇ ಅದಕ್ಕೆ ಪರಿಹಾರನೂ ಸಿಕ್ಕುಬಿಟ್ಟಿರೋದು. ಎಂತಾ ಬಂಡೆಯಂತ ಸಮಸ್ಯೆ ಆದ್ರೂ ಲೀಲಾಜಾಲವಾಗಿ ಪರಿಹಾರ ಹುಡುಕಿಕೊಂಡು ಬಿಡ್ತಿದ್ವಿ. ನನ್ನ ಮದುವೆಯಂತಾ ಮದುವೆ ವಿಚಾರನೂ ಹಾಗೆ ಅಲ್ವಾ ನಾನು ಬಗೆಹರಿಸಿಕೊಂಡಿದ್ದು. ಮನೇಲಿರೋ ಹಿರಿಯರಿನ್ನೂ ಮದುವೆ ಆಗ್ಬೇಕಾ ಬೇಡ್ವಾ ಅಂತಾ ಯೋಚನೆಯೂ ಮಾಡ್ದೇ ಇರುವಾಗ ನಾನು ಮುನ್ನುಗ್ಗಿದ್ದೆ. ಅಂತಹ ಇಶ್ಯೂ ಕೂಡ ಎಷ್ಟು ಚೆನ್ನಾಗಿ ಬಗೆಹರಿದೋಯ್ತಲ್ಲ. ನಮ್ಮ ಆಫೀಸ್ ನಲ್ಲಿರೋ ಪ್ರಾಬ್ಲಂ, ನಮಗಿರೋ ಪ್ರಾಬ್ಲಂ ಎಲ್ಲಾ ಮುಕ್ತವಾಗಿ ಚರ್ಚೆ ಆಗೋದು ಎಲ್ಲರ ವಿಚಾರ ಎಲ್ಲರಿಗೂ ಗೊತ್ತಾಗೋದು ಹೀಗೇ. ಮುಚ್ಚುಮರೆ ಏನೂ ಇಲ್ಲ. ಹೀಗಾಗಿ ಸುಳ್ಳುಪಳ್ಳು ಹೇಳೋ ಪ್ರಮೇಯಾನೂ ಬರ್ತಿರಲಿಲ್ಲ.

ಮೊನ್ನೆ ಅದೇ ಅದೇ ಮನೆಗೆ ಹೋಗಿದ್ನಾ, ನಾನು ಹೇಗೆ ಊಟ ಮಾಡಿದೆ ಅಂತ ಜ್ಞಾಪಿಸಿಕೊಂಡೆ. ಊಟ ಬೇಕು ಅನ್ನಿಸಿದಾಗ, ಊಟ ಬೇಕಾದೋರು ಅಡುಗೆ ಮನೆಗೆ ಹೋಗಿ ಬಡಿಸ್ಕೊಂಡು, ಇಲ್ಲಾ ಇನ್ನಾರಾದ್ರೂ ಬಡಿಸ್ತಾ ಇದ್ರೆ ಒಬ್ರು ಟಿವಿ ಮುಂದೆ, ಇನ್ನೊಬ್ಬರು ಮೊಬೈಲ್ ಕಿವಿಗೆ ಸಿಗಿಸಿಕೊಂಡು, ಮಗದೊಬ್ಬರು ಪೇಪರ್ ಮೊಗಚಿ ಹಾಕ್ತಾ… ಊಟ ಹೀಗೆ ಮುಗಿದೋಗ್ತಿತ್ತು. ಆ ಅಡುಗೆ ಮನೆ ಇದೆ. ಆದ್ರೆ ಊಟ ಮಾಡೋ ಥರಾ ಇಲ್ಲ. ಜಾಗ ಬೇಕಾದಷ್ಟಿದೆ ಡೈನಿಂಗ್ ಟೇಬಲ್ ಇಲ್ಲ. ಊಟದ ಚಾಪೆ ಇಲ್ಲ. ಊಟ ಒಟ್ಟಿಗೆ ಮಾಡ್ಬೇಕು ಅನ್ನೋ ಮನಸೇ ಇಲ್ಲದೇ ಇರೋವಾಗ ಊಟದ ಚಾಪೆ ಎಷ್ಟು ದಿನ ಅಂತ ಕಾಯುತ್ತೆ?

ಏನಾದ್ರೂ ಆಗ್ಲಿ ಊಟ ಅನ್ನೋದ್ರಲ್ಲಿ ನಾವೆಲ್ಲ ಮಿಸ್ ಮಾಡ್ಕೊಳ್ತಾ ಇರೋದು ಊಟ ಮಾತ್ರ ಅಲ್ಲಾ. ಅಮ್ಮ ಬಡಿಸೋ ಊಟಾನು ಕೂಡ. “ಅಮ್ಮ ಬಡಿಸೋ ಊಟದಲ್ಲಿ ಅಮ್ಮ ಅನ್ನೋದೇ ರುಚಿ…” ಅಂತಾ ಧಾರವಾಡದ ಆ ಹುಡುಗಿ ಬರೆದಿದ್ದು ಇನ್ನೂ ನನ್ನ ತಲೇನಲ್ಲಿ ಕೂತುಬಿಟ್ಟಿದೆ. ಅಮ್ಮನ ಅಡುಗೆ ತುಂಬಾ ರುಚಿ ಅಂತೀವಿ. ಅಡುಗೆ ರುಚಿ ಇರುತ್ತೋ ಇಲ್ವೋ ಗೊತ್ತಿಲ್ಲ ಆದರೆ “ಅಮ್ಮ” ಅನ್ನೋ ಅಮ್ಮನೇ ರುಚಿ ಅಲ್ಲಿ.

ಮದುವೆ ಆದ್ಮೇಲೆ ಒಂದಿನ ಯಾಕೋ ಅಮ್ಮ ಊಟ ಬಡಿಸೋಕೆ ಬರಲಿಲ್ಲ. ಕಾಯ್ತಿದ್ದೆ. ಅಮ್ಮಾನೇ ಬೇಕು ಅಂತ ಕಾಯ್ತಿದ್ದೆ. “ಯಾಕೆ ಅವಳು ಬಡಿಸಬಾರದಾ…” ಅಂದ್ರು. ತಲೆ ಗಿರಿ ಗಿರಿ ಅಂತು. ಅವತ್ತೂ ಅಷ್ಟೆ ಇವತ್ತೂ ಅಷ್ಟೆ. ಆಗ ಅಮ್ಮ ಬಡಿಸ್ತಿದ್ದನ್ನು ಖುಷಿಯಾಗಿ, ರುಚಿ ಕೇಳ್ಕೊಂಡು ಊಟ ಮಾಡ್ತಿದ್ದೆ. ಆಮೇಲೆ ಯಾವಾಗ ಬಡಿಸೋದ್ರಲ್ಲಿ ಅಮ್ಮ ಇಲ್ಲವಾಗಿ ಹೋಯಿತೋ ನನ್ನ ಊಟಕ್ಕೂ ಫುಲ್ ಸ್ಟಾಪ್ ಬಿದ್ದು ಬಿಡ್ತು.

ಈಗ ನಾನು ಯಾವ ರೀತಿ ಊಟ ಮಾಡ್ತೀನಿ? ಅಮ್ಮ ಇರಲಿ, ಊಟಾನೂ ಮನೇಲಿ ಆಗೋಲ್ಲ. ಒಟ್ಟಿಗೇ ಕೂತುಕೊಳ್ಳೋದು ಅನ್ನೋ ಮಾತಿರಲಿ ಮನೇಲಿ ಇನ್ನೊಂದು ನರಪಿಳ್ಳೇನು ಇಲ್ಲ. ಕ್ಯಾಂಟೀನ್ ಗೆ ಹೋಗೋದು. ಅಲ್ಲಿ ತಟ್ಟೆ ಲೋಟ ಸ್ಪೂನು ಕಾಣುತ್ತೆ. ಅಡುಗೆ ಮಾಡೋ ಕೈ ಕಾಣಲ್ಲ. ಸುಮ್ನೆ ಫ್ರೆಂಡ್ಸ್ ಹತ್ರ ತಮಾಷೆ ಮಾಡ್ತಿರ್ತೀನಿ, ನಾನು ತಟ್ಟೆ ನೋಡಿ ಊಟ ಮಾಡೊಲ್ಲ “ನೋ ಎಮೋಷನ್ಸ್” ಅಂತ ಯಾರ ಮನೆಗಾದ್ರು ಊಟಕ್ಕೆ ಹೋದಾಗ ಬಡಿಸೋದ್ರಲ್ಲಿ ಸ್ವಲ್ಪ ಕಾಳಜಿ ತೋರ್ಸಿದ್ರೂ ಪ್ಲೀಸ್ ಬೇಡ ಇವತ್ತು ನಡೆದು ಹೋಗುತ್ತೆ. ನಾಳೆಯಿಂದ ಕಷ್ಟ ಆಗುತ್ತೆ ಅಂತೀನಿ.

ತಟ್ಟೇಲಿ ಅನ್ನ ಬಿಡಬೇಡ, ಕಾಲು ತಾಗಿಸಬೇಡ, ತಟ್ಟೆ ಎಸೀಬೇಡ, ಮುಂದೆ ಅನ್ನ ಸಿಗೋದು ಕಷ್ಟ ಆಗುತ್ತೆ ಅಂತ ಅಮ್ಮ ಯಾವಾಗ್ಲೂ ಹೇಳ್ತಾ ಇದ್ದದ್ದು ಮತ್ತೆ ಮತ್ತೆ ನೆನಪಿಗೆ ಬರುತ್ತೆ. ಯಾವಾಗ ತಟ್ಟೆ ಬಗ್ಗೆ ಉದಾಸೀನ ಮಾಡಿದ್ನೋ ಊಟ ಅನ್ನೋ ಊಟಕ್ಕೇ ಒಂದು ಅರ್ಥಾನೇ ಇಲ್ಲದ ಹಾಗೆ ಆಗಿ ಹೋಯಿತು. ಮುಖ ನೋಡಿದ ತಕ್ಷಣ ನಾಲ್ಕು ಇಡ್ಲಿ ಬರುತ್ತೆ. ಇಲ್ಲಾಂದ್ರೆ ಎರಡು ಚಪಾತಿ ಬರುತ್ತೆ. ನಾನೂ ಸಹ ಅದು ಇಡ್ಲಿನೋ ಚಪಾತಿನೋ ಅಂತ ಪರಿಚಯನೂ ಮಾಡಿಕೊಳ್ದೆ ತಿಂದುಬಿಡ್ತೀನಿ.

ಗಿಫ್ಟ್ ಕೊಡಿ ಅಂತಾ ದುಂಬಾಲು ಬೀಳ್ತೀನಲ್ಲಾ ಹಾಗೇನೇ ಈಗ ಊಟ ಕೊಡಿ ಅಂತಾ ಡಿಮ್ಯಾಂಡ್ ಮಾಡ್ತೀನಿ. ಬಾಗಿಲು ಬಡಿದು ಅಡಿಗೆ ಮಾಡ್ಬೇಕಾ ಅಂತ ಕೇಳಿದ್ರೆ ಸಾಕು, ಊಟಕ್ಕೆ ರೆಡಿ ಇಟ್ಟಿದ್ದೀರಾ ಅಂತ ಅರ್ಥ ಅಂತ ಅಕ್ಕಪಕ್ಕದವರೂ ತಿಳಿದುಕೊಳ್ತಾರೆ. ಬಡಿಸ್ತಾ ಹೋದ್ರೆ ನಾನು “ಇಂದೆನಗೆ ಆಹಾರ ಸಿಕ್ಕಿತು…” ಅನ್ನೋ ಹಾಗೆ ತಿನ್ತೀನಿ. ಏನು ಮಾಡೋದು ಎರಡು ಚಪಾತಿ ಅಷ್ಟು ಊಟ ಬೀಳ್ತಿದ್ದ ಹಾಗೆ ಹೊಟ್ಟೆ ಬಾಗಿಲು ಹಾಕಿಕೊಂಡು ಬಿಡುತ್ತೆ. ಓ.ಕೆ ಊಟ ಎದುರುಗಡೆ ಇರಬಹುದು. ನನ್ನೊಳಗೆ ಸೇರಬೇಕು ಅನ್ನೋ ರೂಲ್ಸ್ ಏನೂ ಇಲ್ವಲ್ಲಾ. ಸುಮ್ಮನಾಗ್ತೀನಿ ಊಟ ಸಿಗದಿದ್ರೂ ಪರವಾಗಿಲ್ಲ. ಊಟ ಬಡಿಸೋ ಕೈ ನೋಡೋದಿಕ್ಕೆ ಸಿಗ್ತಿಲ್ಲ ಅನಿಸುತ್ತೆ. ಆ ಟಿಫನ್ ಬಾಕ್ಸ್ ಎಲ್ಲಿದೆ ಈಗ ಅಂತ ಯೋಚಿಸ್ತೀನಿ. ಯಾರಿಗೆ ಗೊತ್ತು? ಅದರಲ್ಲೂ ಈಗ ಸ್ಟೀಲ್ ಬಾಕ್ಸ್ ಯಾರು ಬಳಸ್ತಾರೆ? ಊಟ ಇದ್ರೆ ತಾನೆ ಊಟದ ಬಾಕ್ಸು?

‍ಲೇಖಕರು avadhi

January 22, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಡೋರ್ ನಂ ೧೪೨: ಇವು ಶಬ್ದಚಿತ್ರಗಳು

ಉದಯಕುಮಾರ್ ಹಬ್ಬು 'ಡೋರ್ ನಂ 142' ಈ ಕೃತಿ ನಮ್ಮೆಲ್ಲರ ಮನೆ ಮನದ ಡೋರ್ ನಂ ಆಗಿಬಿಟ್ಟಿದೆ. ನಮೆಲ್ಲರ ಬಾಲ್ಯದ ನೆನಪುಗಳು, ಹದಿಹರೆಯದ ಬಿಸಿ,...

ಯಾವುದೀ ಪ್ರವಾಹವು…

ಯಾವುದೀ ಪ್ರವಾಹವು…

ಡೋರ್ ನಂ 142 ಬಹುರೂಪಿ   ಮುಖ ಮುಖವೂ ಮುಖವಾಡವ ತೊಟ್ಟು ನಿಂತ ಹಾಗಿದೆ ಆಡುತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ ಯಾವುದೀ ಪ್ರವಾಹವು... ರೇಡಿಯೋ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This