ಒಂದು ಪಿಚ್ಚರಿನ ಬಾಜೂ ಕೂತು…

ಇತ್ತೀಚೆಗೆ ವಿವಾದ ಎಬ್ಬಿಸಿದ್ದ ಜೋಧಾ ಅಕ್ಬರ್ ಚಿತ್ರದ ಬಗ್ಗೆ ಬೇರೆ ಬೇರೆ ಥರದ ಲೇಖನಗಳು ಬಂದವು. ಆದರೆ ನಮ್ಮ ಬಳಗದ ಮುಖ್ಯ ಲೇಖಕಿ ಚೇತನಾ ತೀರ್ಥಹಳ್ಳಿ ಈ ಚಿತ್ರವನ್ನು ನೋಡಿರುವ ಕೋನ ಬೇರೆ. ಅವರ ಚಿಂತನೆ ಇಲ್ಲಿದೆ. ಅವರ “ಓ ನನ್ನ ಚೇತನಾ” ಬ್ಲಾಗಿನಿಂದ ಈ ಬರಹವನ್ನು ತೆಗೆದು ಕೊಡುತ್ತಿದ್ದೇವೆ.  

* * *

ಭಾನುವಾರ ಜಿರಳೆ ಹುಡುಹುಡುಕಿ ಕೊಲ್ಲಬೇಕು, ಬುಕ್ಕು ಜೋಡಿಸಬೇಕು, ಇವತ್ತಾದ್ರೂ ಚೆಂದದ ಅಡುಗೆ ಮಾಡಿ ಊಟಮಾಡಬೇಕು ಅಂತೆಲ್ಲ ಪ್ಲಾನು ಹಾಕ್ಕೊಂಡವಳು, ಸೊರಗುಟ್ಟುತ್ತಿದ್ದ ಮೂಗಿಗೆ ಹೆದರಿ, ಬಿಸಿಬಿಸಿ ನೀರು ಹೊಯ್ಕೊಂಡು ಸ್ನಾನ ಮುಗಿಸಿದವಳೇ ಸಿ.ಡಿ ಅಂಗಡಿಗೆ ಓಡಿದೆ. ಅಲ್ಲಿ ಕಂಡಿತು ಜೋಧಾ ಅಕ್ಬರ್.
ಇಷ್ಟು ದಿನ ಜೋಧಾ ಅಕ್ಬರ್ ಸಿನೆಮಾ ಗಲಾಟೆಯ ಬಗ್ಗೆ ಕೇಳಿದ್ದೆನಾದರೂ ಅದಕ್ಕೆ ಸಂಬಂಧಿಸಿದ ಏನನ್ನೂ ನೋಡುವ ಅವಕಾಶ ಸಿಕ್ಕಿರಲಿಲ್ಲ. ( ಮೂರ್ಖರ ಪೆಟ್ಟಿಗೆ ಇಟ್ಕೊಳ್ಳದ ಜಾಣೆ ನಾನಾದ್ದರಿಂದ!) ಆಅದ್ರೆ, ಅಂಗಡಿಯಲ್ಲಿ ಮೀಸೆ ಬಿಟ್ಟ (ಅಥವಾ ಅಂಟಿಸಿಕೊಂಡ) ಹೃತಿಕನ ಮುಖ ನೋಡಿಯೇ ಮಳ್ಳು ಹಿಡಿದು ಡಿವಿಡಿ, ಚಿಪ್ಸು ತೊಗೊಂಡುಬಂದು ಕಂಪ್ಯೂಟರಿನ ಮುಂದೆ ಸ್ಥಾಪನೆಗೊಂಡೆ.

ಅಕ್ಬರ್ ಅಂದರೆ ನನ್ನ ಪಾಲಿಗೆ ಬಿಳಿ ಗಡ್ಡದ, ಪುಕ್ಕ ಸಿಕ್ಕಿಸಿದ ಪೇಟದ, ಬೀರಬಲ್ಲನ ಕಥೆಗಳಲ್ಲಿ ಮಾತ್ರ ನಗುವ ಒಬ್ಬ ಗಂಭೀರ ಬಾದ್ ಷಾಹ್. ಜತೆಗೆ, ಪಠ್ಯದ ಇತಿಹಾಸದಲ್ಲಿ ಓದಿಕೊಂಡಿದ್ದಂತೆ, ಜೆಸ್ಸಿಯಾ ತೆಗೆದು ಹಾಕಿದ, ದೀನ್ ಇಲಾಹಿ ಸ್ಥಪಿಸಿದ, ರಜಪೂತ ರಾಜಕುವರಿಯನ್ನ ಮದುವೆಯಾದ – ಇತ್ಯಾದಿ ಸಾಧನೆಯ ‘ಅಕ್ಬರ್ ದ ಗ್ರೇಟ್’.
ಸಾಲದೆಂಬಂತೆ, ಪಠ್ಯದಾಚೆಯ ಇತಿಹಾಸಗಳನ್ನೂ ತಿಳಿಯಬೇಕೆಂದು ಓದಿಕೊಂಡಿದ್ದ, ಅಕ್ಬರನ ಕರಾಳಮುಖವನ್ನು ಪರಿಚಯಿಸುವ ಪಿ.ಎನ್.ಓಕರ- ‘ಹೂ ಸೇಸ್ ಅಕ್ಬರ್ ವಾಸ್ ಗ್ರೇಟ್?’

untitled.jpg

ಸಿನೆಮಾ ನೋಡಲು ಕುಂತಾಗ ನನ್ನ ತಲೆಯಲ್ಲಿ ಇವೆಲ್ಲ ಗಿರಕಿ ಹೊಡೆಯುತ್ತಿದ್ದಿದ್ದು ಹೌದು. ಆದರೆ, ನೋಡುತ್ತ ನೋಡುತ್ತ ಸಿನೆಮಾದ ರಮ್ಯತೆ ನನ್ನನ್ನ ಆವರಿಸ್ಕೊಂದು, ಎಲ್ಲ ಪೂರ್ವಗ್ರಹಗಳು ಕರಗಿ, ಬರೀ ಜೋಧಾ ಮತ್ತು ಅಕ್ಬರ್ ಎಂಬ ಎರಡು ಪಾತ್ರಗಳ ಸುತ್ತ ಹೆಣೆದ ಕಥೆಯ ಅದ್ಭುತ ಮೇಕಿಂಗ್ ನಲ್ಲಿ ಕಳೆದು ಹೋದೆ. ರೂಪರಾಶಿ ಐಶ್ವರ್ಯ, ಮಿಂಚಿನ ಹುಡುಗ ಹೃತಿಕ್- ಎಲ್ಲೂ ತಾಳ ತಪ್ಪದೆ ನನ್ನನ್ನ ತಮ್ಮ ಲೋಕಕ್ಕೆ ಕರಕೊಂಡುಹೋದರು.
ಪಿಚ್ಚರ್ ಮುಗಿಯುವ ಹೊತ್ತಿಗೆ ರಾಜ- ರಾಣಿಯ ಒಂದು ಚೆಂದದ ಕಥೆಯನ್ನ ನೋಡಿದ ಖುಶಿ ನನ್ನದಾಗಿತ್ತು. ಇಡೀ ದಿನ, ಅದರದೇ ಗುಂಗು.

ಇಷ್ಟೆಲ್ಲ ಆದಮೇಲೆ ಒಂದು ಪ್ರಶ್ನೆ.
ಈ ಪಿಚ್ಚರನ್ನ ವಿರೋಧಿಸಿ, ಬ್ಯಾನ್ ಮಾಡಿ, ಟಾಕೀಸಿಗೆ ಕಲ್ಲು ಹೊಡೆದು, ಟಯರು ಸುಟ್ಟು- ಎಲ್ಲ ಮಾಡಿದರಲ್ಲ, ಯಾಕೆ?
ಜೋಧಾ ಅಕ್ಬರನ ಹೆಂಡತಿ ಅಲ್ಲ ಅನ್ನೋದೊಂದು ಕಾರಣ ಅಂತ ಕೇಳಿದೆ.  ಅರವತ್ತರ ದಶಕದಲ್ಲಿ ಮೊಘಲ್ ಎ ಆಜಮ್ ಅಂತ ಒಂದು ಪಿಚ್ಚರ್ ಬಂದಿತ್ತಲ್ಲ, ಅದರಲ್ಲಿ ಅಕ್ಬರನ ಹೆಂಡತಿ ಜೋಧಾ ಬಾಯಿಯಾಗಿ ಪೃಥ್ವಿರಾಜ್ ಕಪೂರರ ಜತೆ ದುರ್ಗಾ ಕೋಟೆ ನಟಿಸಿದ್ದರು. ಆಗ ಯಾವ ರೀತಿಯ ಗಲಾಟೆಯಾಗಿರಲಿಲ್ಲ ಅಲ್ಲವೇ? ಅಂದಿನ ಕಾಲದ ನನ್ನಪ್ಪ ಇವತ್ತಿಗೂ ‘ಜಬ್ ಪ್ಯಾರ್ ಕಿಯಾ ತೋ ಡರ್ ನಾ ಕ್ಯಾ’ ಹಾಡು ಕೇಳಿದರೆ ಮೈ ಮರೆಯುತ್ತಾರೆ. ಆ ಪಿಚ್ಚರಿನ ವೈಭವವನ್ನ ಹಾಡಿಹೊಗಳುತ್ತಾರೆ. ಅಪ್ಪ ಮಾತ್ರವಲ್ಲ, ಅವತ್ತಿನ ಎಲ್ಲರೂ ಮುಗಿಬಿದ್ದು ಸಿನೆಮಾ ನೋಡಿದ್ದರು, ಒಂದು ಕೊಂಕೂ ತೆಗೆಯದೆ ಮೆಚ್ಚಿಕೊಂಡಿದ್ದರು.

ಹಾಗಾದರೆ ನಾವು ಬರಬರುತ್ತ ಸಂಕುಚಿತರಾಗುತ್ತ ಸಾಗುತ್ತಿದ್ದೇವಾ?
ನಮ್ಮ ಸೋಲಿಗೆ, ಹತಾಶೆಗೆ, ಪೈಪೋಟಿಗೆ ನಾವು ಆರಿಸಿಕೊಳ್ಳುತ್ತಿರುವ ಕ್ಷೇತ್ರಗಳು ಎಷ್ಟು ಸರಿಯಾಗಿವೆ?

ಅರವತ್ತರ ದಶಕ ಬಿಡಿ, ಶತಶತಮಾನಗಳ ಹಿಂದೆಯೇ ಕರ್ಣನ್ನ, ದುರ್ಯೋಧನನ್ನ, ರಾವಣನ್ನ ಹೀರೋ ಆಗಿಸಿ ಕಾವ್ಯ ಬರೆದು  ಕವಿಗಳು ಗೆದ್ದಿದ್ದರು. ಅವರ ಹೀರೋತನ ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ, ಕೃಷ್ಣಾರ್ಜುನರ ಇಮೇಜಿಗೇ ಅದು ಸವಾಲಾಗುವಂತಿತ್ತು. ( ದುರ್ಯೋಧನನ್ನ ಸುಯೋಧನ ಅಂತೆಲ್ಲ ಹೊಗಳಿದ್ದು ನೆನೆಸಿಕೊಳ್ಳಿ). ಆದರೂ ಇಂದಿನವರಂತೆ ಢಾಂಬಿಕರಲ್ಲದ ಅಂದಿನ ಭಕ್ತ- ಭಾಗವತರು ಅದನ್ನ ಕಾವ್ಯವಾಗಿಯೇ ಆಸ್ವಾದಿಸಿ ಸುಖಿಸಿದರೇ ವಿನಾ ತಾಳೆಗರಿ ತೆಗೆದೊಯ್ದು ಸುಟ್ಟುಹಾಕಿರಲಿಲ್ಲ!

ಇಂದಿನ ನಮಗೆ ಮಾತ್ರ, ಒಂದು ಪಿಚ್ಚರನ್ನ ಪಿಚ್ಚರಿನ ಹಾಗೇ ನೋಡೋಕೆ ಯಾಕೆ ಸಾಧ್ಯವಾಗೋಲ್ಲ?

‍ಲೇಖಕರು avadhi

March 15, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

  1. sunaath

    ನಮ್ಮ ಹೈಸ್ಕೂಲ್ ಇತಿಹಾಸ ಪುಸ್ತಕದಲ್ಲಿ ಜೋಧಾಬಾಯಿ ಅಕಬರನ ಹಿರಿಯ ಹೆಂಡತಿ ಎಂದೇ ನಾನೂ ಸಹ ಓದಿದ್ದೆ. ಹೀಗಾಗಿ ಈ ಚಳುವಳಿಯ ಬಗೆಗೆ ನನಗೂ ಅಚ್ಚರಿಯಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: