ಒಂದು zen ಕಥೆ

– ಜಯದೇವ ಪ್ರಸಾದ ಮೊಳೆಯಾರ
Shortstory
ಹತ್ತು ವರ್ಷದ ಮಗ ನಂದು ದಿನವಿಡೀ ಕಂಪ್ಯೂಟರ್ ಎದುರು ‘ನೀನೇ ತಾಯಿ-ನೀನೇ ತಂದೆ’ ಎಂದು ಕುಳಿತುಕೊಂಡು ರಜಾ ಪೂರ್ತಿ ಗೇಮ್ಸಿನಲ್ಲಿ ಕಾಲಹರಣ ಮಾಡುತ್ತಿರುವುದು ಕಂಡಾಗ ಮೈ ಎಲ್ಲಾ ಉರಿಯುತ್ತೆ. ಹೇಗಾದ್ರೂ ಮಾಡಿ ಈ ಕೆಟ್ಟ ಅಭ್ಯಾಸ ಬಿಡಿಸಿ ಏನಾದ್ರು ಒಳ್ಳೆ ವಿಷಯದಲ್ಲಿ ತೊಡಗಿಸ್ಕೊಳ್ಳೋ ಹಾಗೆ ಮಾಡ್ಬೇಕು ಅಂತ ಎಷ್ಟು ಬುದ್ದಿ ಹೇಳಿದ್ರೂ ಸೀರಿಯಸ್ ಆಗಿ ತಗಳ್ಳೋದಿಲ್ಲ. ನನ್ನ ಮಾತು ಕಿವಿಗೇ ಹಾಕ್ಕೊಳ್ದೆ ಏನಾದ್ರು ತುಂಟತನ ಮಾಡ್ಕೊಂಡು ನನ್ನನ್ನು ರೇಗಿಸ್ತಾ ಇರ್ತಾನೆ.
ಒಂದು ದಿನ ಮಗನಿಗೆ ಸಾಹಿತ್ಯದ ಗೀಳು ಹಚ್ಚಿಸಿದರೆ ಹೇಗೆ ಎಂಬ ಘನಂದಾರಿ ಐಡಿಯಾ ಹೊಳೆಯಿತು. ಎಷ್ಟಾದರೂ, ಸಾಹಿತ್ಯ, ಕಲೆ, ಸಂಗೀತ ಇತ್ಯಾದಿ ಮನುಷ್ಯನ ಜೀವನಕ್ಕೆ ಭಾವನಾತ್ಮಕವಾಗಿಯೂ, ಮಾನಸಿಕವಾಗಿಯೂ ಒಳ್ಳೆಯದು ಎಂಬುದರಲ್ಲಿ ಎರಡು ಮಾತಿಲ್ಲ, ಅಲ್ಲವೇ ?
ಆ ದಿನ ನಂದುವನ್ನು ಹತ್ತಿರ ಕರೆದು ಟಿ.ವಿ ಕಂಪ್ಯೂಟರ್ ಗಳು ಮನಸ್ಸಿನ ಮೇಲೆ ಮಾಡುವ ದುಷ್ಪರಿಣಾಮಗಳ ಬಗ್ಗೆ ಮತ್ತೊಮ್ಮೆ ಭಾಷಣ ಕೊರೆದೆ. ಬದಲಿಗೆ ಸಾಹಿತ್ಯದ ಅಭ್ಯಾಸ ಯಾಕೆ ಮಾಡಬಾರದು? ಎಂದು ಆಸಕ್ತಿ ಹುಟ್ಟುವಂತೆ ಒಂದು ಪ್ರಶ್ನೆಯನ್ನು ಮುಂದಿಟ್ಟೆ.
ಮಗನ ಎಳೆ ಮುಖದಲ್ಲಿ ಆಸಕ್ತಿ ಮೂಡಿತಾದರೂ ಒಂಥರಾ ಗೊಂದಲವೂ ಇಣುಕುತ್ತಿತ್ತು.
“ಅದು ಸರಿ…, ಆದ್ರೆ ಅಪ್ಪಾ…, ನಂಗೆ ನಿನ್ನ ಹಾಗೆ ಉದ್ದ ಉದ್ದ ಬರಿಲಿಕ್ಕೆ ಆಗುದಿಲ್ಲ ಅಲ್ವ? ನಾನು ಸಣ್ಣ. ಅದಕ್ಕೆ ಏನು ಮಾಡುವುದು?”
‘ಸದ್ಯ, ಮೀನು ಬಲೆಗೆ ಬಿತ್ತಲ್ಲ… ಮುಂದಿನದ್ದು ಮುಂದೆ ನೋಡೋಣ..’ ಎಂಬ ಮನದಲ್ಲೇ ಬೀಗಿ ಖುಶಿಯಿಂದ ಅವನನ್ನು ಬಳಿಗೆ ಸೆಳೆದು ಬೆನ್ನು ನೇವರಿಸಿಕೊಂಡು, “ಉದ್ದ ಕತೆಯೇ ಬರೀಬೇಕಂತ ಇಲ್ಲ. ಚಿಕ್ಕ ಚಿಕ್ಕ ಕತೆ ಬರಿ. ಈಗೀಗ ಚಿಕ್ಕ ಚಿಕ್ಕ ಜೆನ್ ಕತೆ, ಹನಿಕತೆ ಇತ್ಯಾದಿಗಳಿಗೇ ಪ್ರಾಶಸ್ತ್ಯ. ಈಗೆಲ್ಲಾ ಎರಡು ಮೂರು ವಾಕ್ಯಗಳಲ್ಲಿಯೇ ಕತೆ ಬರೀಬೌದು… ಸಣ್ಣದು. ಒಟ್ಟಿನಲ್ಲಿ ಕತೆ, ಫೀಲಿಂಗ್ಸ್ ಮುಖ್ಯ, ಗಾತ್ರವಲ್ಲ” ಅವನಿಗೆ ಅರ್ಥವಾಗುವಂತೆ ವಿವರಿಸಿ ಹೇಳಿದೆ. ಜೆನ್ ಕತೆ, ಮಿನಿಕತೆ, ಹನಿಕತೆ ಅಂತೆಲ್ಲ ಕೊರೆದೆ.
“ತಡಿ ಅಪ್ಪಾ, ನಾನು ಜೆನ್ ಕತೇನೇ ಬರೀತೀನಿ. ಅದನ್ನೇ ಇನ್ನೊಮ್ಮೆ ಸರಿಯಾಗಿ ಹೇಳು….” ಮಗ ಸೀರಿಯಸ್ಸಾದ ಹಾಗೆ ಕಂಡಿತು.
“ನೋಡು ನಂದೂ…… ಜೆನ್ ಕತೆ ಅಂದ್ರೆ ಒಂದು ಮೂರು-ನಾಲ್ಕು ವಾಕ್ಯಗಳಲ್ಲಿ ಬರತ್ತೆ. ಅದರಲ್ಲಿ ಹೆಚ್ಚಾಗಿ ಒಂದು ವಿಚಾರ ಅಥವಾ ಪ್ರಶ್ನೆ ಬರುತ್ತೆ; ಚಿಂತನೆಗೆ. ನಾವು ಅದನ್ನ ತುಂಬಾ ಆಲೋಚನೆ ಮಾಡ್ಬೇಕಾಗತ್ತೆ…, ಅರ್ಥ ಮಾಡಿಕೊಳ್ಳಲು. ಒಂದೆರಡು ಉದಾಹರಣೆ ಕೊಡುತ್ತಾ ಹೋದೆ.
ಮಗನ ಮುಖದಲ್ಲಿ ಆಸಕ್ತಿ ಬೆಳೆಯಿತು.
‘ಅಮೇಜಿಂಗ್.., ಟ್ರೈ ಮಾಡ್ತೇನೆ’ ಅಂದ ಪುತ್ರ.
ಮುಂದಿನ ಎರಡು ದಿನಗಳು ಕಂಪ್ಯೂಟರ್ ಹಾವಳಿ ಇದ್ದರೂ ನಡು ನಡುವೆ ನನ್ನನ್ನು ಕಂಡಾಗಲಾದರೂ ನೋಟ್ ಪುಸ್ತಕ ಇಟ್ಟುಕೊಂಡು ಕತೆ ಬರೆಯುವ ಲಕ್ಷಣಗಳು ಕಾಣುತ್ತಿದ್ದವು. ‘ಪರ್ವಾಗಿಲ್ಲ. ನಾವು ಸುಮ್ಮನೇ ಈ ಜನರೇಷನ್ನನ್ನು ಬೈತೇವೆ. ಸರಿಯಾದ ಮಾರ್ಗದರ್ಶನ ಕೊಟ್ರೆ ಚೆನ್ನಾಗಿ ಮೇಲೆ ಬರ್ತಾರೆ ಹೆತ್ತವರದ್ದೇ ಪ್ರಾಬ್ಲೆಂ.’ ಅಂತ ಮನಸ್ಸಿನಲ್ಲೇ ಖುಶಿ ಪಟ್ಟುಕೊಂಡೆ.
ಮೂರನೇ ದಿನ ‘ಅಪ್ಪ … ಕತೆ ಬರ್ದಿದೀನಿ ನೋಡು” ಅಂತ ತನ್ನ ನೋಟ್ ಬುಕ್ ತಂದು ಕೊಟ್ಟ.
ನನ್ನ ಮನದಲ್ಲಿ ಸಂತೋಷ ಸಂಭ್ರಮಗಳು ಉಕ್ಕಿ ಬರುತ್ತಿತ್ತು. ನನ್ನ ಮಗನ ಮೊದಲ ಕತೆ. ಗಡಿಬಿಡಿಯಿಂದ ಪುಸ್ತಕ ತೆರೆದು ಓದ ತೊಡಗಿದೆ. ಮೊದಲ ಪುಟದಲ್ಲಿ ಬರೆದಿತ್ತು:
‘ಅಂದು ನಾನು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ. ರಸ್ತೆಯಲ್ಲಿ ಒಬ್ಬ ಹುಡುಗ ಸೈಕಲ್ ಮೇಲೆ ಹೋಗ್ತಿದ್ದ. ಆವಾಗ, ಹಿಂದಿನಿಂದ ಒಂದು ಕಾರ್ ಸ್ಪೀಡಾಗಿ ಬಂದು ಆ ಸೈಕಲ್ ಹುಡುಗನಿಗೆ ಡಾಶ್ ಹೊಡೆದು ಓಡಿ ಹೋಯಿತು. ಪೋಲೀಸ್ ಬಂದ ನನ್ನತ್ರ ಆಕ್ಸಿಡೆಂಟ್ ಹೇಗಾಯ್ತು ಅಂತ ಕೇಳಿದ್ರು. ಕಾರು ‘ಮಾರುತಿ’ ಕಂಪನಿಯದ್ದು ಅಂತ ನನಗೆ ಸರಿಯಾಗಿ ನೆನಪಾಯ್ತು. ಆದ್ರೆ, ‘ಯಾವ ಮೋಡೆಲ್’ ಅಂತ ಎಷ್ಟು ಯೋಚಿಸಿದರೂ ಹೊಳೆಯಲೇ ಇಲ್ಲ. ಹಾಗೆ ನಾನು ಅದರ ಬಗ್ಗೆ ಯೋಚಿಸುತ್ತಲೇ ಕುಳಿತೆ………..’
ಅಂತ ಕತೆ ಮುಗಿಸಿದ್ದ.
“ಇದು ಎಂತ ಕತೆ?” ಗೊಂದಲದಿಂದ ಕೇಳಿದೆ.
“ಓ ಅದಾ ? ಅದು ಜೆನ್ ಕತೆ !!! ಗೊತ್ತಾಗ್ಲಿಲ್ವ? ” ಅಂತ ಒಂದು ತುಂಟ ನಗೆ ಬೀರಿದ.
“ಜೆನ್ ಕತೆಯಾ?” ನನ್ನ ಸೀರಿಯಸ್ ಮುಖ ನೋಡಿ ಅವನ ಮುಖ ಇನ್ನೂ ಅಗಲವಾಯಿತು. “ಹ್ಹೆ ಹ್ಹೆ ಹ್ಹೆ…..” ಜೋರಾಗಿ ನಕ್ಕ. ನಾನು ನಗುವ ಮೂಡಲ್ಲಿರಲಿಲ್ಲ.
ನೋಡು ನಂದೂ.. ನಾನು ಸೀರಿಯಸ್ ಆಗಿ ಹೇಳ್ತಾ ಇದ್ದೇನೆ. ಚಂದ ಮಾಡಿ ಒಂದು ಕತೆ ಬರಿ. ಹೀಗೆಲ್ಲ ತುಂಟತನ ಮಾಡ್ಬೇಡ. ನೀನು ಉಶಾರಲ್ವ? ಗುಡ್ ಬಾಯ್” ಕೆನ್ನೆ ತಟ್ಟಿದೆ.
“ಓಕ್. ಸಾರಿ ಅಪ್ಪ. ನಾನು ಬೇರೆ ಇನ್ನೊಂದು ಬರೀತೇನೆ. ಆದ್ರೆ ಜೆನ್ ಕಷ್ಟ ಅಲ್ವ? ಇನ್ನೂ ಸುಲಭದ್ದು ಹೇಳು. ಅದು ಉಂಟಲ್ಲ, ಹನಿ ಕತೆ, ಅದು ಎಂತದು ಸರಿಯಾಗಿ ಹೇಳು. ಈ ಬಾರಿ ಅದನ್ನ ಟ್ರೈ ಮಾಡ್ತೇನೆ.”
“ಸರಿ ಗುಡ್…. ಹನಿ ಕತೆ ಅಂದ್ರೆ ಒಂದು ಹನಿಯ ಹಾಗೆ…. ಒಂದೆರಡೇ ವಾಕ್ಯ. ಅಷ್ಟರಲ್ಲಿ ಇಂಟರೆಸ್ಟಿಂಗ್ ಆಗಿ ಕತೆ ಹೇಳ್ಬೇಕು.”
“ಹೌದಾ ಎರಡೇ ವಾಕ್ಯದಲ್ಲಿ ಕತೆಯಾ?? ” ಹುಡುಗನ ಕಣ್ಣುಗಳು ಅರಳಿದವು. ಅವನಿಗೆ ಬೆರಗಾಯ್ತು. ಅವನಿಗೆ ಗೊತ್ತಿದ್ದ ಹಾಗೆ ಕತೆಗಳಲ್ಲಿ ‘ಒಂದೂರಿನಲ್ಲಿ ಒಬ್ಬ ರಾಜ ಇದ್ದ…’ ಅಂತ ಹೇಳಿದ ಕೂಡಲೇ ಒಂದು ವಾಕ್ಯ ಮುಗಿಯುತ್ತದಲ್ವೇ?
“ಹೌದು ಎರಡೇ ವಾಕ್ಯ. ಹಾಗೆ ನೋಡಿದ್ರೆ ಇನ್ನೂ ಚಿಕ್ಕ ಕತೆ ಬರೀಬೌದು. ಇತ್ತೀಚೆಗೆ ‘ನಾನೋ ಕತೆ’ ಅಂತ ಶುರುವಾಗಿದೆ. ಅದರಲ್ಲಿ ಒಂದೇ ವಾಕ್ಯ !!! ಅದರಲ್ಲಿ ಕತೆ ಹೇಳಿ ಮುಗಿಸ್ಬೇಕು. ಅದು ಒಂಥರ ‘ನಾನೊ ಟೆಕ್ನೋಲೋಜಿ’ಯ ಹಾಗೆ.”
ಹನಿ ಕತೆ ನಿಂಗೆ ಸುಲಭ ಅಲ್ವಾ? ಈಗ ಹೋಗಿ ಬರಿ. ಗುಡ್ ಬಾಯ್!” ಬೆನ್ನು ತಟ್ಟಿದೆ.
“ಯೆಸ್. ರೈಟ್ ..” ಅಂತ ಪುನಃ ಕಂಪ್ಯೂಟರ್ ರೂಮಿನತ್ತ ಒಡುವವನನ್ನು ಹಿಡಿದು ಎಳೆದೆ. ‘ ನೋ ಕಂಪ್ಯೂಟರ್. ಕತೆ ಬರಿ. ಹೋಗು” ಸ್ವರ ಸ್ವಲ್ಪ ಏರಿಸಿದೆ.
ಮಗನ ಮುಖ ಇಳಿಯಿತು. “ಪ್ಲೀಸ್ ಅಪ್ಪ. ಸ್ವಲ್ಪ ಹೊತ್ತು ಕಂಪ್ಯೂಟರ್. ಆಮೇಲೆ ಹನಿ ಕತೆ ಬರಿತೀನಿ. ನಾನು ಕಂಪ್ಯೂಟರ್ ಆಡ್ತಾ ಇದ್ರೂ ನನ್ನ ಬ್ರೈನ್ ಕತೆ ಬಗ್ಗೇ ಆಲೋಚನೆ ಮಾಡ್ತಾ ಇರ್ತದೆ.” ಮುಖ ಎತ್ತಿ ಕಣ್ಣು ಅರಳಿಸಿದ. ತುಂಟ ನಗೆ ತುಟಿಯಿಂದ ಹೊರ ಚೆಲ್ಲಿತು. “ಪ್ಲೀಸ್ ಅಪ್ಪ.., ಪ್ಲೀಸ್”
“ಹ್ಹೂ… ಆದ್ರೆ ಈ ಸಲ ಸರೀ ಕತೆ ಬರೀ ಬೇಕು.., ಸೀರಿಯಸ್ಸಾಗಿ.. ನನ್ನ ಜೊತೆ ಆಟ ಆಡ್ಬೇಡ. ನಂಗೆ ಜೋರು ಕೋಪ ಬರ್ತದೆ ಮತ್ತೆ ನೋಡು..”
“ಓಕ್. ಅಪ್ಪಾ..” ನಂದು ಮಾಯವಾದ.
ಮರುದಿನ ಎಂದಿನಂತೆ ಕಂಪ್ಯೂಟರಿನ ಗೇಮ್ಸಿನ ಆರ್ಭಟೆ ತಲೆ ಡ್ರಿಲ್ ಮಾಡತೊಡಗಿತು. ಕೋಪ ನೆತ್ತಿಗೆ ಏರಿತು. “ಸಾಕು ನಿಲ್ಸೋ … ಬಾ ಇಲ್ಲಿ. ಕತೆ ಬರೆದ್ಯಾ? ಎಲ್ಲಿ ಉಂಟು ನಿನ್ನ ಕತೆ?” ಜೋರಾಗೇ ಬೊಬ್ಬೆ ಹಾಕಿದೆ.
“ಕತೆ…? ಕತೆ ರೆಡಿ.., ರಾತ್ರೀನೇ ಬರ್ದಿಟ್ಟಿದೀನಿ.” ಹೇಳುತ್ತಾ ಓಡಿ ಬಂದು ಒಂದು ಕಾಗದ ನನ್ನೆದುರು ಹಿಡಿದ. “ಹ್ಹೂ.. ನೋಡು”
“ಕೊಡು” ಆಸೆಯಿಂದ ಹಾಳೆ ಎಳ್ಕೊಂಡೆ. ಕೆಲವೇ ಗೆರೆಗಳಿದ್ದವು. ಸೊಟ್ಟ ಸೊಟ್ಟ ಅಕ್ಷರಗಳಲ್ಲಿ ಗೀಚಲ್ಪಟ್ಟಿತ್ತು. ಸುಧಾರಿಸ್ಕೊಂಡು ಕಷ್ಟ ಪಟ್ಟು ಕಣ್ಣು ಕಿವುಚಿ ಉತ್ಸಾಹದಿಂದ ಓದಿದೆ:
‘ಬೇಸಗೆಯ ಸುಡು ಬಿಸಿಲಿನಲ್ಲಿ ಆವಿಯಾದ ನೀರು ಮೋಡಗಳಾಗುತ್ತವೆ. ಅವು ಮೇಲೆ ಮೇಲೆ ಹೋದಂತೆ ತಂಪಾಗಿ ಹನಿಗಳಾಗಿ ಕೆಳಗೆ ಬೀಳುತ್ತವೆ………….(ಹನಿ ಕತೆ)’
‘ಹನಿ ಕತೆ’ ಎಂಬಲ್ಲಿ ನಾಲ್ಕು ಬಾರಿ ಅಂಡರ್ ಲೈನ್ ಕೂಡಾ ಮಾಡಿದ್ದ.
“ಇದು ನಿನ್ನ ಹನಿ ಕತೆಯೇನೋ?” ಕೋಪ ಪುನಃ ಏರತೊಡಗಿತು. ಉತ್ಸಾಹವೆಲ್ಲಾ ಇಳಿದಿತ್ತು. “ಇದು ಹನಿ ಕತೆಯಾ?. ನನ್ಜೊತೆ ಆಟ ಆಡ್ತಿಯೇನೋ?… ಬಿಗಿತೇನೆ ನೋಡು. ಹೀಗೆ ಮಾಡಿದ್ರೆ ಕಂಪ್ಯೂಟರ್ ಕೊಡಲ್ಲ. ಬೀಗ ಹಾಕಿ ಇಡ್ತೇನೆ”
“ಅಷ್ಟೇ ಅಲ್ಲ, ಇನ್ನೊಂದು ಹನಿ ಕತೆ ಇದೆ. ಪೇಜ್ ಹಿಂದ್ಗಡೆ….” ಕಣ್ಣು ಅಗಲವಾಗತೊಡಗಿತು. ತುಟಿ ಬಿರಿದು ಹೊರ ಚೆಲ್ಲುವ ನಗೆಯನ್ನು ಕಟ್ಟಿಹಾಕಲು ಕಷ್ಟ ಪಡುತ್ತಿದ್ದ.
“ಹೌದಾ…ನೋಡೋಣ.” ಪುಟ ತಿರುವಿದೆ.
‘ಸಾವಿರಾರು ಜೇನ್ನೊಣಗಳು ಲಕ್ಷಾಂತರ ಹೂವುಗಳಿಂದ ಸಂಪಾದಿಸಿದ ಕತೆ.” (‘ಹನಿ’ ಕತೆ) ಸೊಟ್ಟು ಸೊಟ್ಟಾಗಿ ಬರೆದಿತ್ತು ಕುಂಬಳಕಾಯಿ ಅಕ್ಷರಗಳಲ್ಲಿ.
ಮಗನ ಮುಖ ನೋಡಿದೆ. ಎರಡು ಬೊಗಸೆ ಕಣ್ಣುಗಳು ಪಿಳಿ ಪಿಳಿ ಮಾಡ್ಕೊಂಡು ನನ್ನ ಮುಖವನ್ನು ಅಳೆಯುತ್ತಿದ್ದವು. ಬಿರಿಯುತ್ತಿರುವ ತುಟಿಯನ್ನು ಒಳಕ್ಕೆ ಎಳೆದುಕೊಂಡು ಹಲ್ಲುಗಳು ಕಚ್ಚಿ ಹಿಡಿದಿದ್ದವು. ಹನ್ನೆರಡು ವರ್ಷದ ಮುಖದಲ್ಲಿ ತುಂಟತನ ಸ್ಪೋಟಗೊಳ್ಳಲು ತಯಾರಾಗಿತ್ತು.
“ಕಂಪ್ಯೂಟರ್ ಕೊಡಲ್ಲ !!!! ಲಾಕ್ ಮಾಡ್ತೀನಿ …, ಮೊದಲೇ ಹೇಳಿದ್ದೆ. ನೋ ಪ್ಲೇಯಿಂಗ್ ವಿದ್ ಮಿ ಅಂತ” ಹಾಲ್ನಿಂದ ಒಳಗೆ ನಡೆದೆ, ಕಂಪ್ಯೂಟರ್ ರೂಮ್ ಕಡೆ. ಇವನಿಗೆ ಸಲಿಗೆ ಕೊಟ್ರೆ ಆಗಲ್ಲ. ಯಾವುದನ್ನೂ ಸಿರಿಯಸ್ಸಾಗಿ ತಗೊಳ್ಳಲ್ಲ. ಯಾವಾಗ್ಲೂ ತಮಾಷೆ !
“ಅಪ್ಪ ಅಪ್ಪಾ…. ಮಗ ಹಿಂದಿನಿಂದ ಓಡಿ ಬಂದ.
“ಏನೋ? ಈಗ ಎಂತದು ನಿಂದು?” ಸಿಟ್ಟಿನಿಂದಲೇ ಗದರಿದೆ.
“ಇನ್ನೂ ಒಂದು ಕತೆ ಇದೆ. ಅದು ಚೆನ್ನಾಗಿದ್ರೆ ಕಂಪ್ಯೂಟರ್ ಕೊಡ್ತೀಯಾ?” ಮಗನ ಮುಖ ಸೀರಿಯಸ್ ಆಗಿತ್ತು. ಕಣ್ಣುಗಳು ಕಡಿಮೆ ವಾಟ್ಟೇಜಿನ ಬಲ್ಬ್ ಬದಲಿಸಿದಂತೆ ಡಲ್ಲಾಗಿದ್ದವು. ತುಟಿ ಕಂದಿ ಕೆಳಕ್ಕೆ ಜೋತಿತ್ತು. ತುಂಟತನ ಈಗ ಮಾಯವಾಗಿತ್ತು.
ಅರೆಕ್ಷಣ ಅವನನ್ನೆ ದಿಟ್ಟಿಸಿದೆ. ಪಾಪ ಅನ್ನಿಸ್ತು. “ಹ್ಹೂ..ಆದ್ರೆ ಇದು ಲಾಸ್ಟ್ ಚಾನ್ಸ್. ಆಬ್ಸೋಲೂಟ್ಲೀ ಲಾಸ್ಟ್ ಓಕೆ ?!!”
“ಓಕೆ. ಅಪ್ಪಾ” ಈಗ ಒಂದೇ ಒಂದು ಲೈನಿನ ‘ನಾನೋ ಕತೆ’ ಹೇಳ್ತೇನೆ. ಕೇಳು…. ಅತಿ ಸಣ್ಣದು. ಒಂದೇ ಲೈನ್..ಕೇಳು…”
“ಹ್ಹೂ.., ಸರಿ ಹೇಳು..”
“ಅದು ಚೆನ್ನಾಗಿದ್ರೆ ಕಂಪ್ಯೂಟರ್ ಆಡ್ಲಿಕ್ಕೆ ಬಿಡ್ತೀಯಾ?” ಆಸೆಯಿಂದ ಕೇಳಿದ.
“ಬಿಡ್ತೇನೆ ಮಾರಾಯ. ಮೊದ್ಲು ಕತೆ ಹೇಳು…”
“ಸರಿ ಕೇಳು.., ರತನ್ ಟಾಟಾ ಅತ್ಯಂತ ಕಡಿಮೆ ವೆಚ್ಚದಲ್ಲಿ ಒಂದು ಕಾರು ತಯಾರಿಸಿದರು…..”. ಅಷ್ಟು ಹೇಳಿ ನನ್ನ ಮುಖ ನೋಡಿದ. ನನ್ನ ಮುಖವನ್ನೇ ದಿಟ್ಟಿಸುತ್ತಾ “….ಇದು…. ನಾನೋ… ಕತೆ” ಅಂತ ಒಂದೊಂದೇ ಶಬ್ದವನ್ನು ನಿಧಾನವಾಗಿ ಉಸುರಿದ.
ಅವಾಕ್ಕಾದೆ. “ಆ… ಊ ಊ.. ” ಅಂತ ಸ್ವರ ಹಿಡಿಯುವಷ್ಟರಲ್ಲೇ “ಕತೆ ಚೆನ್ನಾಗಿದೆ ಅಲ್ವಾ ? ಹ್ಹೇ….ಈಗ ಕಂಪ್ಯೂಟರ್..!!!” ಅಂತ ಬೊಬ್ಬೆ ಹೊಡೆಯುತ್ತಾ ಒಲಿಂಪಿಕ್ ಸ್ಪೀಡಿನಲ್ಲಿ ನನ್ನನ್ನು ದಾಟಿ ಕಂಪ್ಯೂಟರ್ ಕೋಣೆ ಒಳಗೆ ಓಡಿದ.

‍ಲೇಖಕರು avadhi

October 24, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

2 ಪ್ರತಿಕ್ರಿಯೆಗಳು

 1. RJ

  ಎಂಥದ್ದು ಮಾರಾಯ್ರೆ ನಿಮ್ ಸಿಟ್ಟು?
  ನಿಮ್ಮ ಮಗ ಚೆಂದಾಗೆ ಕತೆ ಬರ್ದಿದ್ದಾನೆ.
  ಎಲ್ರಿಗೂ ಅರ್ಥ ಆಗೋ ಹಾಗೆ ಬರಿಯೋಕೆ ಟ್ರೈ ಮಾಡಿದ್ದಾನೆ ಪಾಪ!
  at least, ಝೆನ್ ಕತೆಗಳಿಗಿಂತ ಚೆನ್ನಾಗಿ ಅರ್ಥ ಆಗ್ತವೆ ನಿಮ್ ಮಗನ ಕತೆಗಳು!
  ಅದಕ್ಕಾದರೂ ಸಂತೋಷ ಪಡಿ.
  🙂

  ಪ್ರತಿಕ್ರಿಯೆ
 2. kiran kumari

  sir,
  yeshto saari naavu nammanthe AgabEku anno thuditadalli, makkala prapancha-vannu marethubittiruttheve yeno annisutthe. zen..car no..! kathe nijakkoo adbuthavaagi nimma maga barediddare. avara creativity idaralle anaavaraNagondide. adakke nimma preethiya bembala , aaraike beku. I think definately he will become a serious poet or writer. just leave them.
  thanks.
  kiran

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: