ಒಡಲೊಳಗಿನ ಅಳಲ ಕಡಲು ಭೋರ್ಗರೆದಾಗೆಲ್ಲ…

ಒಳಗಡಲು ಉಕ್ಕಿದಾಗೆಲ್ಲ ಆ ದಿವ್ಯ ನೆನಪು

– ಚಾಮರಾಜ ಸವಡಿ

  ಇನ್ನು ಆಡಲು ಮಾತುಗಳಿಲ್ಲ ಅಂತಾದಾಗ, ಅಷ್ಟು ದೂರ ನಂಜೊತೆ ಬರ್ತೀಯಾ? ಅಂತ ಕೇಳಿದೆ. ಧ್ವನಿಯಲ್ಲಿ ದೈನ್ಯತೆಯಿತ್ತು. ಇನ್ನಿದು ಮುಗಿಯಿತು ಎಂದಾಗ, ಇನ್ನೆಂದೂ ಇದು ಕೊನರುವುದಿಲ್ಲ ಎಂಬುದು ಗಟ್ಟಿಯಾದಾಗ, ಉಳಿಯುವ ಕೊನೆಯ ಭಾವವದು. ಆಕೆಗೆ ಏನನ್ನಿಸಿತೋ, ಸುಮ್ಮನೇ ಎದ್ದಳು. ನಾವು ಮೌನವಾಗಿ ಹೊರಟೆವು. ನಂಗೆ ಗೊತ್ತಿತ್ತು, ಇದು ನಾವು ಜೊತೆಯಾಗಿ ಇಡುತ್ತಿರುವ ಕೊನೆಯ ಹೆಜ್ಜೆ ಎಂದು. ಆಕೆ ತಲೆ ತಗ್ಗಿಸಿಕೊಂಡು, ಕೈಗಳನ್ನು ಕಟ್ಟಿಕೊಂಡು, ಮೌನವಾಗಿ ಹೆಜ್ಜೆ ಹಾಕುತ್ತಿದ್ದಳು. ಅಷ್ಟು ದೂರದಲ್ಲಿ ರಸ್ತೆ ಹೊರಳಿಕೊಂಡಿತ್ತು. ಜೋರು ಹೆಜ್ಜೆಯಿಟ್ಟರೆ ಎರಡು ನಿಮಿಷದ ದಾರಿ. ಅಲ್ಲಿಗೆ ತಲುಪಿದರೆ, ಹಿಂದಿರುಗಬೇಕಾಗುತ್ತೆ. ಆಗ, ಆಕೆ ಹೋಗಿಬಿಡುತ್ತಾಳೆ, ಒಂದೂ ಮಾತಾಡದೇ. ನಾನೂ ಮೌನವಾಗಿ ಹೆಜ್ಜೆ ಹಾಕುತ್ತಿದ್ದೆ. ಸಾಗರವೊಂದು ಎದೆಯೊಳಗೆ ಭೋರ್ಗರೆದು ಅಪ್ಪಳಿಸುವ ಶಬ್ದ ಇಷ್ಟು ಹತ್ತಿರದಲ್ಲಿದ್ದೂ ದೂರವಿರುವ ಆಕೆಗೆ ಕೇಳಿಸಿತಾದರೂ ಹೇಗೆ? ನಾನು ಹೆಜ್ಜೆಗಳನ್ನು ಎಣಿಸುತ್ತಿದ್ದೆನಾ? ಇನ್ನೇನು ಆ ತಿರುವು ಬಂದೇಬಿಟ್ಟಿತು ಎಂದು ಅಳುಕುತ್ತಿದ್ದೆನಾ? ಒಂದೂ ತಿಳಿಯಲಿಲ್ಲ. ಸಾವಿನೆಡೆಗೆ ಹೊರಟವನಂತೆ, ಬದುಕಿನ ಕೊನೆಯ ಹೆಜ್ಜೆಗಳಿವು ಎಂಬಂತೆ ನಡೆಯುತ್ತಿದ್ದೆ. ಮಾತಾಡಬಾರದೆಂಬಂತೆ ಆಕೆ ಗಂಭೀರಳಾಗಿದ್ದಳು. ಏನು ಮಾತಾಡುವುದಿನ್ನು ಎಂದು ನಾನು ಮೌನವಾಗಿದ್ದೆ. ಒಳಗೆ ಮೇರೆಯುಕ್ಕುವ ಅಳಲ ಕಡಲು. ತಿರುವು ಹತ್ತಿರವಾಗುತ್ತಿತ್ತು. ಏಕೋ ನನ್ನ ಹೆಜ್ಜೆಗಳು ಸೋಲುತ್ತಿದ್ದವು. ಇನ್ನು ಕೆಲ ಹೆಜ್ಜೆಗಳನ್ನಿಟ್ಟರೆ, ತಿರುವು ಬಂದುಬಿಡುತ್ತಿತ್ತು. ಥಟ್ಟನೇ ನಿಂತೆ. ಆಕೆಯೂ ನಿಂತಳು. ಅವಳ ಮುಖದಲ್ಲಿ ಪ್ರಶ್ನೆ. ‘ಥ್ಯಾಂಕ್ಸ್‌ ಜೊತೆಗೆ ಬಂದಿದ್ದಕ್ಕೆ’ ಎಂದೆ. ಆಕೆಯ ಮುಖದಲ್ಲಿ ಅದೇ ಪ್ರಶ್ನೆ. ’ಆ ತಿರುವು ಮುಟ್ಟಲು ಕೆಲ ಹೆಜ್ಜೆಗಳೇ ಸಾಕು. ಅವನ್ನೂ ಕ್ರಮಿಸಿಬಿಟ್ಟರೆ ಜೀವನದುದ್ದಕ್ಕೂ ನನಗೆ ಮತ್ತೆ ನಿನ್ನ ಜೊತೆ ಸಿಗಲ್ಲ. ಈ ಸವಿ ನೆನಪಲ್ಲಿ, ನಾನು ಹೀಗೇ, ಆ ತಿರುವನ್ನೇ ಧೇನಿಸುತ್ತ ಇದ್ದುಬಿಡುತ್ತೇನೆ. ಇನ್ನು ಕೆಲ ಹೆಜ್ಜೆಗಳನ್ನಿಟ್ಟಿದ್ದರೆ… ಎಂಬ ದಿವ್ಯ ಊಹೆಯಲ್ಲಿ ಬದುಕನ್ನು ಸಾಗಿಸುತ್ತೇನೆ. ಕೊನೆಯಾಗುವ ಈ ಹಂತದಲ್ಲಿ, ಈ ಸವಿ ನೆನಪಾದರೂ ಜೊತೆಗಿರಲಿ ಬಿಡು…’ ಎಷ್ಟೋ ಹೊತ್ತು ಆಕೆ ಸುಮ್ಮನೇ ನಿಂತಿದ್ದಳು. ನಂತರ ನಿಧಾನವಾಗಿ, ಬಲು ನಿಧಾನವಾಗಿ, ಕಾಲೆಳೆಯುತ್ತ, ಬಂದ ದಾರಿಯತ್ತ ತಿರುಗಿ ಹೊರಟಳು. ನಾನು ಮಾತ್ರ ಅಲ್ಲಿಯೇ ನಿಂತಿದ್ದೆ, ಅದೇ ಕೊನೆಯ ಗಮ್ಯ ಎಂಬಂತೆ. ***** ಒಡಲೊಳಗಿನ ಅಳಲ ಕಡಲು ಭೋರ್ಗರೆದಾಗೆಲ್ಲ, ಮತ್ತೆ ಆ ತಿರುವಿನತ್ತ ಹೋಗುತ್ತೇನೆ. ಜೊತೆಯಾಗಿ ನಡೆದ ನೆನಪು ಅಲ್ಲೆಲ್ಲ. ಕೆಲ ಹೊತ್ತು ಅಲ್ಲಿ ಕೂಡುತ್ತೇನೆ, ಒಬ್ಬನೇ, ಸುಮ್ಮನೇ. ಅದು ದಿವ್ಯ ಮೌನಾನುಸಂಧಾನ. ಒಳಗಡಲು ಶಾಂತವಾದಾಗ ಮೌನವಾಗಿ ಎದ್ದು ಬರುತ್ತೇನೆ. ಅವಳಿಲ್ಲದ ಬದುಕೀಗ, ಅವಳ ನೆನಪಿನಲ್ಲಿ ಸಾಗುತ್ತಿದೆ ಹೀಗೇ. *****]]>

‍ಲೇಖಕರು G

May 2, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: