
ಶಾರು
ಸಂಸಾರ ಇಡೀ ಕಾಳುಗಳ
ಕುಟ್ಟಿ ಕುಟ್ಟಿ ಹದ ಮಾಡಬೇಕು,
ನನ್ನೊಳಗಿರುವ ಮುಂಜಾವಿನ
ಸೂಕ್ಷ್ಮದೆಚ್ಚರದಲಿ ಮೀಯಬೇಕು.
ಬದುಕಿನಾಳದ ಒರಳನಲಿ
ಅರಿವಿನ ಒನಕೆಯಾಗಬೇಕು
ಹಿಡಿತಕೆ ಸಿಕ್ಕ ಅನುಭವಗಳೆಲ್ಲ
ಒರಾಟದ ಕೈಗಳಲಿ ಒಲವಾಗಬೇಕು
ತ್ಯಾಗದ ಬೆರಳುಗಳೊಳಗೆ
ಸಿಕ್ಕ ಕಾಳುಗಳ ಸ್ಪರ್ಶಿಸಬೇಕು,
ಜೊಳ್ಳು ಗಟ್ಟಿ ಕಾಳುಗಳ ಕೇರುತ
ಸುಖ ದುಃಖಗಳ ಸಮನಾಗಿಸಬೇಕು.

ಹೆಣ್ತನದಭಿಮಾನ ಗೌರವದಲಿ
ಬಾಳಿನೆಲರ ಹಾದಿ ನಂಬಬೇಕು,
ಶುದ್ದಕಾಳಿನ ಕಷ್ಟಗಳ ಸಹಿಸುತ
ಬದುಕಿನ ಕಣದಲಿ ಕಾಪಿಡುತಿರಬೇಕು.
ಮೌನದ ಗದ್ದಲಗಳಿಗೆ ವಿರಮಿಸಿ
ಒನಕೆ ತಾಳಕೆ ರಮಿಸಿ ಕುಟ್ಟಬೇಕು,
ಆಗ ಹದಗೊಂಡ ಸಂಸಾರ ಸಾರ
ಬಲಗೊಂಡ ತಪಸ್ಸಿಗೆ ವರವಾಗಬೇಕು.
0 ಪ್ರತಿಕ್ರಿಯೆಗಳು