“ಭಾಮಿನಿ ಷಟ್ಪದಿ”
ಚೇತನಾ ತೀರ್ಥಹಳ್ಳಿ
ಇಬ್ಬರ ಮುಖದಲ್ಲೂ ಗಾಬರಿ.
ವೆಲಾಸಿಟ್ಟಿನ ಪುಟ್ಟ ತೊಟ್ಟಿಯಲ್ಲಿ ಮೂತ್ರದ ಮೂರು ಬಿಂದುಗಳು ಸರ್ರಂತ ಸರಿದು ಎರಡೆರಡು ನೇರಳೆ ಬಣ್ಣದ ಗೀಟು ಬರೆದಿತ್ತು. ಚಳಿಗಾಲದ ಬೆಳಗಿನಲ್ಲೂ ಅವರಿಬ್ಬರ ಹಣೆ ಮೇಲೆ ಬೆವರ ಹನಿ ಜರ್ರಂತ ಸುರಿಯುತ್ತಿತ್ತು.
ಅಂವ ಸಿಡುಕಿದ. “ನಿಂಗೆ ಅಷ್ಟೂ ಗೊತ್ತಾಗೋದ್ ಬೇಡ್ವಾ? ಈಗ ಯಾರು ಅನುಭವಿಸೋರು!?” ಅಳುವೇ ಬಂತು ಅವಳಿಗೆ. ತಾನು ಎಷ್ಟೇ ಬೇಡವೆಂದು ತಡೆದರೂ ಅಂವ…
ದೂರಾದೂರಿಗೆ ಸಮಯವಲ್ಲ. ಕಾಲ ಮಿಂಚಿ ಹೋಗಿತ್ತು!
* * *
ಬೆಳಗಾಗೆದ್ದು ಬಾಯೊತ್ತಿ ಬಚ್ಚಲಿಗೋಡುವ ಸೊಸೆ ಮೇಲೆ ಅತ್ತೆ ಮಾವರಿಗೆ ಮುದ್ದುಕ್ಕಿ ಬರುತ್ತಿತ್ತು. ಮುಖ ನೋಡಿ ಮಾತಾಡದೆ ಅದೆಷ್ಟು ದಿನವಾಗಿತ್ತೋ?
ಆದರೂ ಅತ್ತೆ ದೇವರ ಪಟದೆದುರು ತುಪ್ಪದ ದೀಪ ಹಚ್ಚಿ ಕುಂತಳು, ಸೊಸೆ ಕೊಡಬಹುದಾದ ಅದೊಂದು ಸುದ್ದಿಗಾಗಿ ಕಾಯುತ್ತಾ…
* * *
ಈಗೆರಡು ವಾರದಿಂದವಳು ಫುಡ್ ಕೋರ್ಟಿಗೆ ಕಾಲಿಡುತ್ತಿಲ್ಲ.
ಕಲೀಗುಗಳ ಗುಂಪಲ್ಲಿ ಗುಸುಗುಸು. ಬಿಳುಚಿದ ಮೈ, ಹೊಟ್ಟೆ ತೊಳಸಿನ ಮುಖ ಒಂದಿಬ್ಬರು ಹಿರಿಯರಿಗೆ ಚಾಡಿ ಹೇಳಿತ್ತು.
ಈಗ, ಮಟಮಟ ಮಧ್ಯಾಹ್ನ ಬಾಸ್ ಕರೆದಿದ್ಯಾಕೆ?
ಟೇಬಲ್ಲಿನ ಮೇಲೆ ಅಗ್ರಿಮೆಂಟಿನ ಪೇಪರ್ರು. ಜಾಯಿನ್ ಆದ ಮೂರು ವರ್ಷ ಪ್ರಗ್ನೆಂಟ್ ಗಿಗ್ನೆಂಟ್ ಆಗುವಂತಿಲ್ಲ!
ತಿಂಗಳ ಸಂಬಳ ಶುರುವಿನಲ್ಲಿ ಮೂವತ್ತು ಸಾವಿರ. ಫಾರಿನ್ನಿಗೆ ಕಳಿಸಿದರೂ ಕಳಿಸಬಹುದು ಆಫೀಸಿನ ಖರ್ಚಿನಲ್ಲಿ!
“ಹಾಗೇನಿಲ್ಲ… ಐ ವಿಲ್ ಟೇಕ್ ಕೇರ್…” ತೊದಲುತ್ತಲೇ ತಲೆ ತಗ್ಗಿಸಿ ಹೊರಬಂದಳು. ತನ್ನವನನ್ನ ಬಡಿದು ಬಿಸಾಡಿಬಿಡಬೇಕನಿಸಿತು ಒಮ್ಮೆ. ತಾನೆಷ್ಟೇ ಬೇಡವೆಂದಿದ್ದರೂ ಅಂವ….
ಎಂಥ ಅವಕಾಶಗಳು ಮಿಸ್ ಆಗಿಬಿಡುತ್ತೋ ಏನೋ!?
* * *
ಡಾಕ್ಟರ್ ಹೇಳಿದ್ದರು. ಕೊಂಚ ಬಲಿಯಬೇಕು. ಯುಟಿರಸ್ಸಿಗೆ ಅಪಾಯ.
ಮೂರು ತಿಂಗಳು ಮುಗಿದವು.
ಮಾವ ಮಲ್ಲಿಗೆ ಮುಡಿಸುವ ಶಾಸ್ತ್ರಕ್ಕೆ ಪಂಚಾಂಗ ತಿರುವತೊಡಗಿದರು.
ಅಂವ ಡಾಕ್ಟರ ಅಪಾಯಿಂಟ್ ಮೆಂಟ್ ಪಡೆದು ಬಂದ. ಶನಿವಾರ- ಭಾನುವಾರ ವೀಕ್ಲಿ ಆಫು.
ಅತ್ತೆಗೆ ಗೊತ್ತಾದರೆ ಸುಮ್ಮನೆ ರಗಳೆ. ಮುನಿದು ಮಗಳ ಮನೆ ಸೇರುತ್ತಾರೆ… ಆಮೇಲೆ ಊಟ ತಿಂಡಿಗೆ ಗೋಳು!
ಪಿಕ್ನಿಕ್ಕಿನ ಪ್ಲಾನು ಮಾಡಿದರು. ಒಂದು ದಿನ ಆಸ್ಪತ್ರೆ, ಎರಡನೇ ದಿನ ಹೋಟೆಲು.
ಭಾರ ಕಳೆದಿತ್ತು.
ಹೊಟ್ಟೆಯದೂ, ತಲೆ ಮೇಲಿನದೂ…!
* * *
ಅತ್ತೆ ಮಾವ ಹಸಿರು ಸೀರೆ ತಂದರು.
ಸೊಸೆ ಕಣ್ಣೀರು ಮಿಡಿದು, “ಒಳಗಿಲ್ಲ” ಅಂದಳು.
Very tragic. but it is a fact.
Malathi S
ಹಿಂತಾ ವಿಷಯಗಳು ನಿಮಗಾಗೇ ಕಾದಿರುತ್ತವಾ? ಮತ್ತೋಂದು ಸಿಕ್ಸರ್!
‘ಬಿಳುಚಿದ ಮೈ, ಹೊಟ್ಟೆ ತೊಳಸಿನ ಮುಖ ಒಂದಿಬ್ಬರು ಹಿರಿಯರಿಗೆ ಚಾಡಿ ಹೇಳಿತ್ತ“
ಸೊಗಸಾದ ವಾಕ್ಯ. ಇದು ಮಹತ್ವಾಕಾಂಕ್ಷೆಯ ಫಲ. ಹಾಗಾಗಿ ಅನಿವಾರ್ಯ.
ಇದನ್ನರಿಯದ ಹಿರಿಯರು ಸುಮ್ಮನೆ ಕನಸು ಕಾಣುವುದು ನೋಡಿ ಕನಿಕರವೆನಿಸಿತು!