ಗಾಳಿಬೆಳಕು
ನಟರಾಜ ಹುಳಿಯಾರ್
ಬೆಂಗಳೂರು ವಿಶ್ವವಿದ್ಯಾಲಯದ ಸೆಮಿನಾರೊಂದರಲ್ಲಿ ಭಾಷಣಗಳನ್ನು ಕೇಳಿಸಿಕೊಳ್ಳುತ್ತಿದ್ದ ಎಂ.ಎ. ವಿದ್ಯಾರ್ಥಿಯೊಬ್ಬ ಅವತ್ತು ಟೀ ಬ್ರೇಕಿನಲ್ಲಿ ಇವರೆಲ್ಲ ಮಾತಾಡುವುದನ್ನು ಕೇಳಿದರೆ ಇವರೆಲ್ಲಾ ನಿದ್ದೇನೇ ಮಾಡೊಲ್ಲವೇನೋ ಅನ್ನಿಸುತ್ತೆ ಎಂದು ಅಚ್ಚರಿ, ಭಯ ಎರಡೂ ತುಂಬಿದ ದನಿಯಲ್ಲಿ ಹೇಳಿದ. ವಿದ್ಯಾರ್ಥಿಯಾದ ಅವನಿಗೆ ಆ ಸೆಮಿನಾರ್ ಹಕ್ಕಿಗಳು ಹಗಲೂರಾತ್ರಿ ಓದಿ ಅರಗಿಸಿಕೊಂಡಿರಬಹುದಾದ ಪುಸ್ತಕಗಳ ಬಗ್ಗೆ ಭಯವಿತ್ತು! ವೇದಿಕೆಯ ಮೇಲೆ ಯಾವುದೋ ವಸ್ತುವಿನ ಬಗ್ಗೆ ನಿ ರರ್ಗಳವಾಗಿ ಮಾತಾಡುವವರ, ವಿಶ್ಲೇಷಿಸುವವರ ಬಗ್ಗೆ ಅನೇಕರಿಗೆ ಇರುವ ಈ ಭಯ ‘ಪ್ರಾತಿನಿಧಿಕ’ವೆಂದು ಕಾಣುತ್ತದೆ.
ಡಿ.ಆರ್. ನಾಗರಾಜ್ ಅವರ ಬಗ್ಗೆ ಕೆಲವರಿಗೆ ಇಂಥ ಭಯವಿತ್ತು. ಅವರ ಪರಿಚಯವಾದ ಹೊಸತರಲ್ಲಿ ಅವರ ಮನೆಯ ಪುಸ್ತಕಗಳ ರಾಶಿಯನ್ನು ನಿಬ್ಬೆರಗಾಗಿ ನೋಡುತ್ತಾ ಇವನ್ನೆಲ್ಲಾ ಓದಿದೀರಾ ಸಾರ್? ಎಂದೆ. ತಕ್ಷಣ ಡಿ.ಆರ್. ಮತ್ತೆ? Each one of them ಎಂದರು. ಅನಾತೊಲ್ ಫ್ರಾನ್ಸ್ ಎಂಬ ಫ್ರೆಂಚ್ ಲೇಖಕನ ಬೃಹತ್ ಗ್ರಂಥಭಂಡಾರವನ್ನು ನೋಡಿದ ಮುಗ್ಧನೊಬ್ಬ ಇವನೆಲ್ಲಾ ಓದಿದೀರಾ ಸಾರ್? ಎಂದು ಅವನನ್ನು ಕೇಳಿದಾಗ ಆತ ಕೊಟ್ಟ ಉತ್ತರ : ಹತ್ತರಲ್ಲಿ ಒಂದು ಭಾಗ ಕೂಡ ಇಲ್ಲ. ನೀನು ನಿಮ್ಮ ಮನೆಯಲ್ಲಿರುವ ಪಿಂಗಾಣಿ ಪಾತ್ರೆಗಳನ್ನು ದಿನಾಲೂ ಬಳಸುತ್ತೀಯೇನಯ್ಯ? ಹಾಗೇನೇ ಪುಸ್ತಕಗಳ ವಿಚಾರ ಕೂಡ.
ಅದಿರಲಿ, ಅವತ್ತು ಡಿ.ಆರ್. ಉತ್ತರ ಕೇಳಿದ ನಂತರ ನಾನು ಮೆಲ್ಲಗೆ ಕಪಾಟಿನಿಂದ ಕೆಲವು ಪುಸ್ತಕಗಳನ್ನು ತೆಗೆದು ನೋಡಿದರೆ ಅಲ್ಲಲ್ಲಿ ಮಾರ್ಕ್ ಮಾಡಿದ ಗುರುತುಗಳಿದ್ದವು. ವಿದೇಶೀ ಮದ್ಯಪಾನಿಗಳು ಒಂದು ಬಾರ್ ನಲ್ಲಿ ಕೆಲಕಾಲ ಕುಡಿದು ಇನ್ನೊಂದು ಬಾರ್ ಗೆ, ನಂತರ ಮತ್ತೊಂದು ಬಾರ್ ಗೆ ಜಿಗಿದು ‘ಬಾರ್ ಹಾಪಿಂಗ್’ ಮಾಡುವಂತೆ ಡಿ.ಆರ್. ಕೂಡ ‘ಬುಕಿಂಗ್ ಹಾಪಿಂಗ್’ ಮಾಡಿರಬಹುದೆಂದು ಸಮಾಧಾನ ಮಾಡಿಕೊಳ್ಳಲೆತ್ನಿಸಿದರೂ ಅವರು ಈ ಪುಸ್ತಕಗಳನ್ನೆಲ್ಲಾ ಓದಿ ಮುಗಿಸಿರಬಹುದೆಂಬ ಭಯ ಮಾತ್ರ ಮುಂದುವರಿಯಿತು. ಪುಸ್ತಕವೊಂದರ ಮೇಲೆ ಒಮ್ಮೆ ಕಣ್ಣಾಡಿಸಿದರೆ ಸಾಕು, ಅದನ್ನು ಹತ್ತಾರು ವರ್ಷಗಳ ಕಾಲ ನೆನಪಿನಲ್ಲಿಟ್ಟುಕೊಳ್ಳಬಲ್ಲ, ಹಾಗೂ ಯಾವಾಗ ಬೇಕಾದರೂ ಅದನ್ನು ಸಂಗ್ರಹ ರೂಪದಲ್ಲಿ ಹೇಳಬಲ್ಲ ಶಕ್ತಿ ಡಿ.ಆರ್. ಅವರಿಗಿತ್ತು. ಒಮ್ಮೊಮ್ಮೆ ಈ ಶಕ್ತಿಯಿಂದಾಗಿಯೇ ಪ್ರಜ್ಞಾಪೂರ್ವಕವಾಗಿಯೋ ಅಥವಾ ಅಪ್ರಜ್ಞಾಪೂರ್ವಕವಾಗಿಯೋ ತಮ್ಮ ಸರೀಕರಲ್ಲಿ ವಿಚಿತ್ರ ಇರಿಸುಮುರಿಸು ಹುಟ್ಟಿಸಬಲ್ಲವರಾಗಿದ್ದರು. ಒಮ್ಮೆ ಡಿ.ಆರ್. ಶಿಮ್ಲಾಕ್ಕೆ ಹೊರಟಾಗ ‘ಲಂಕೇಶ್ ಪತ್ರಿಕೆ’ಯ ಆಫೀಸಿನಲ್ಲಿ ನಡೆದ ಪುಟ್ಟ ಬೀಳ್ಕೊಡುಗೆ ಪಾರ್ಟಿಯಲ್ಲಿ ಅಗ್ರಹಾರ ಕೃಷ್ಣಮೂರ್ತಿ ತಮ್ಮ ಒಂದು ಕುತೂಹಲಕರ ಕನಸನ್ನು ವರ್ಣಿಸಿದ್ದರು. ಒಂದು ರಾತ್ರಿ ಇದ್ದಕಿದ್ದಂತೆ ಕೃಷ್ಣಮೂರ್ತಿಯವರ ಕನಸಿನಲ್ಲಿ ಪ್ರತ್ಯಕ್ಷವಾದ ಡಿ.ಆರ್. ಯಾವುದೋ ಪುಸ್ತಕವನ್ನು ಕೃಷ್ಣಮೂರ್ತಿಯವರ ಮುಖಕ್ಕೆ ಹಿಡಿದು ಈ ಪುಸ್ತಕ ಓದಿದೀಯಾ ಗುರೂ? ಎಂದು ಗಂಭೀರ ಮುಖಮುದ್ರೆ ಹೊತ್ತು ಕೇಳಿದ್ದರು. ತಾವು ಪುಸ್ತಕಗಳಿಂದ ಪಡೆದ ಜ್ಞಾನವನ್ನು ಅದ್ಭುತ ವಿಶ್ಲೇಷಣೆಗಳಿಗೆ ಬಳಸುತ್ತಿದ್ದ ಡಿ.ಆರ್. ಅದನ್ನು ಇನ್ನೊಬ್ಬರ ಮೇಲೆ ಆಯುಧವನ್ನಾಗಿ ಬಳಸುತ್ತಾರೇನೋ ಎಂಬ ಅನುಮಾನ ಕೂಡ ಅವರ ಪರಿಚಿತರಲ್ಲಿದ್ದದ್ದನ್ನು ಈ ಕನಸು ಸೂಚಿಸುವಂತಿದೆ.
ನಾವು ಎಂ.ಎ.ಯಲ್ಲಿದ್ದಾಗ ಇಡೀ ಕ್ಲಾಸಿನಲ್ಲೇ ಬುದ್ಧಿವಂತನಾಗಿದ್ದ ಸಹಪಾಠಿಯೊಬ್ಬ ನಮ್ಮನ್ನೆಲ್ಲ ಹೆದರಿಸುತ್ತಿದ್ದುದು ಹೆಚ್ಚೂಕಡಿಮೆ ಹೀಗೆಯೇ. ನಾವೆಲ್ಲಾ ಎಲಿಯಟ್ನ ವೇಸ್ಟ್ ಲ್ಯಾಂಡ್ ಎಂಬ ಖಂಡಕಾವ್ಯವನ್ನು ಓದಿ ಮುಗಿಸಿ ಅವುಗಳ ಸಾಲುಗಳನ್ನು ನಾಲಿಗೆಯ ತುದಿಯ ಮೇಲಿಟ್ಟುಕೊಂಡು ನೀವು ಎಲಿಯಟ್ನ ‘ಫೋರ್ ಕ್ವಾಟ್ರೆಟ್ಸ್’ ‘ಪ್ರೂಫ್ರಾಕ್’ – ಇವೆಲ್ಲಾ ಓದಿದ್ದರೆ ಈ ಪದ್ಯ ಹೇಗ್ರಯ್ಯಾ ಅರ್ಥವಾಗುತ್ತೆ? ಎಂದು ಭಯೋತ್ಪಾದನೆಶುರುಮಾಡುತ್ತಿದ್ದ. ನಾವು ಹಾಗೂ ಹೀಗೂ ಅವನು ಹೇಳಿದ ಮೂರು, ನಾಲ್ಕು ಪದ್ಯಗಳನ್ನು ಓದಿಕೊಂಡು ಬಂದರೆ, ಜಾರ್ಜ್ ಸಾಂತಾಯನನ್ನ ಓದಿದೀರೇನ್ರಯ್ಯ, ಅವನು ಎಲಿಯಟ್ ನ ಗುರು. ಮೊದಲು ಅವನನ್ನು ಓದಿಕೊಂಡು ಬನ್ನಿ ಎನ್ನುತ್ತಿದ್ದ. ನಾವು ಇವನೆಲ್ಲ ಓದಲಾಗದಿದ್ದಕ್ಕೋ ಏನೋ ಅವನು ಕೆಲಕಾಲ ನಮ್ಮೆಲ್ಲರ ದುಃಸ್ವಪ್ನವಾಗತೊಡಗಿದ !
‘ಜ್ಞಾನ’ ಎಂದರೆ ನಾವು ಓದಿರುವೆವೆಂದು ಭ್ರಮಿಸಿದ ಪುಸ್ತಕಗಳ ಸಂಖ್ಯೆ ಎಂಬ ಕಲ್ಪನೆ ಕೂಡ ಇಂಥ ದುಃಸ್ವಪ್ನಗಳಿಗೆ ಕಾರಣವಾಗಿರಬಹುದೇನೋ! ಇಂಡಿಯಾದಲ್ಲಂತೂ ಅನೇಕರಿಗೆ ‘ಪಾಂಡಿತ್ಯ’ವೆಂದರೆ ಗೊತ್ತಲ್ಲ? ಲೈಬ್ರರಿಯಲ್ಲಿ ತಮಗೆ ಸಿಕ್ಕ ಒಂದು ಮುಖ್ಯ ಪುಸ್ತಕ ಯಾರಿಗೂ ಸಿಗದಂತೆ ತಾವೇ ಇಟ್ಟುಕೊಂಡು ಅದರಿಂದ ಆಯ್ದ ಸಾಲುಗಳನ್ನು ಉಲ್ಲೇಖಿಸುತ್ತಿರುವುದು. ಅಕಸ್ಮಾತ್ ನಿಮ್ಮ ಬಳಿ ಸ್ವಲ್ಪ ಹಣವಿದ್ದು ಈಚಿನ ವಿದೇಶಿ ಪುಸ್ತಕಗಳು ಸಿಕ್ಕರಂತೂ ಮುಗಿದೇಹೋಯಿತು. ಒಬ್ಬ ಪಂಡಿತನಿಗೆ ಇನ್ನೊಬ್ಬ ಪಂಡಿತನ ಬಗ್ಗೆ ಇರುವ ಭಯಗಳಲ್ಲಿ ತನಗೆ ಸಿಕ್ಕಿದ ಪುಸ್ತಕ ಅವನಿಗೆ ಸಿಕ್ಕಿದರೇನು ಗತಿ ಎಂಬುದೂ ಒಂದು! ಯೂನಿವರ್ಸಿಟಿ ಕ್ಯಾಂಪಸ್ಸಿನಲ್ಲಿ ಅಡ್ಡಾಡುವ ಅನೇಕ ರಿಸರ್ಚ್ ಸ್ಕಾಲರುಗಳ ಮುಖದ ಮೇಲೆ ಸದಾ ಸ್ಥಾಯಿಯಾಗಿರುವ ಭಯ ಕೂಡ ಇದೇ. ಭಾರತದ ಯೂನಿವರ್ಸಿಟಿಗಳಲ್ಲಂತೂ ರಿಸರ್ಚ್ ಸ್ಕಾಲರುಗಳ ಇಡೀ ಸಂಶೋಧನೆಯ ಅವಧಿ ಆ ಪುಸ್ತಕ ಸಿಕ್ಕಿಲ್ಲವಲ್ಲ ಎಂಬ ಭಯದಲ್ಲೇ ಉರುಳಿಹೋಗುತ್ತಿರುತ್ತದೆ.
ಈಗ ಇಂಗ್ಲೀಷಿನಲ್ಲಿ ರಿಸರ್ಚ್ ಮಾಡುವವರಿಗೆ ಇಂಟರ್ನೆಟ್ನಲ್ಲಾದರೂ ಹೇಗೋ ಕೆಲಬಗೆಯ ಸಾಮಗ್ರಿಯಂತೂ ಸಿಕ್ಕೇಬಿಡುತ್ತದೆ. ಆದರೆ ಕನ್ನಡ ಸಾಹಿತ್ಯದಲ್ಲಿ ರಿಸರ್ಚ್ ಮಾಡುವ ಹಾಗೂ ಕೇವಲ ಕನ್ನಡ ಮಾತ್ರ ಬಲ್ಲ ವಿದ್ಯಾ ರ್ಥಿಗಳ ಪಾಡು ಮಾತ್ರ ಯಾರಿಗೂ ಬೇಡ. ಅದಕ್ಕೋ ಏನೋ ಅವರಲ್ಲನೇಕರು ಕೇವಲ ಪುಸ್ತಕ ಶಿಕಾರಿಕಾರರಾಗಿ ಅಥವಾ ಪುಸ್ತಕ ಸಂಗ್ರಹಕಾರರಾಗಿ ಕೊನೆಯಾಗುತ್ತಾರೆ. ನಮ್ಮ ಅನೇಕ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಶೋಧನೆಗಳ ಬಗ್ಗೆ ಒಮ್ಮೆ ಸಿನಿಕ ಮೇಷ್ಟ್ರರೊಬ್ಬ ಮಾಡಿದ ವ್ಯಾಖ್ಯಾನ ಇದು: ನಾಲ್ಕು ವರ್ಷದ ರಿಸರ್ಚ್ ಅವಧಿಯಲ್ಲಿ, ಮೊದಲ ವರ್ಷ : ತನ್ನ ಸಂಶೋಧನೆಯ ವಸ್ತುವಿಗೆ ಅಗತ್ಯವಾದ ಪುಸ್ತಕಗಳ ಹೆಸರು ಬರದುಕೊಳ್ಳುವುದು. ಎರಡನೆಯ ವರ್ಷ : ಆ ಪುಸ್ತಕಗಳನ್ನು ಲೈಬ್ರರಿಗಳಲ್ಲಿ ಹುಡುಕುವುದು, (ಲೈಬ್ರರಿಗಳಲ್ಲಿ ‘ಹುಡುಕುವುದು’ ಎಂದರೆ ಅವು ಸಿಗುವುದಿಲ್ಲ ಎಂದು ಬೇರೆ ಹೇಳಬೇಕಾಗಿಲ್ಲ.) ಅಥವಾ ರಿಸರ್ಚ್ ಕೂಡ ಶ್ರೀಮಂತರ ಲಕ್ಷುರಿಯಾಗಿರುವ ದೇಶದಲ್ಲಿ ಪುಸ್ತಕಗಳಿಗಾಗಿ ಬೇಡುವುದು. ಮೂರನೇಯ ವರ್ಷ : ಹಾಗೆ ಬೇಡಿದ ಪುಸ್ತಕಗಳಲ್ಲಿ ಕೆಲವು ಸಿಕ್ಕರೂ ಸಿಗಬಹುದು. ನಾಲ್ಕನೆಯ ವರ್ಷ : ಕೊನೆಗೂ ಥೀಸಿಸ್ ಮುಗಿಯುವ ಹೊತ್ತಿಗೆ ಆ ಪುಸ್ತಕಗಳಿಂದ ಓಡಿಹೋದರೆ ಸಾಕು ಎನಿಸುತ್ತಿರುತ್ತದೆ
ಇದು ಪೂರ್ಣ ಸತ್ಯವಲ್ಲ ಎಂದು ವಾದಿಸುವವರಿರಬಹುದು; ಆದರೆ ಇದರಲ್ಲಿ ಸತ್ಯವಿಲ್ಲ ಎನ್ನುವ ವೀರರು ಮಾತ್ರ ಯಾರೂ ಇರಲಾರರು. ಮನುಷ್ಯನ ಬಗೆಬಗೆಯ ಭಯಗಳನ್ನು ಕುರಿತು ಮಾತಾಡುವ ಮನಃಶಾಸ್ತ್ರಜ್ಞರು ನಾವು ಓದದ ಪುಸ್ತಕಗಳ ಭಯ ಕುರಿತು ಚಿಂತಿಸಿದಂತಿಲ್ಲವಲ್ಲ ಎಂದು ತಮಾಷೆಯಾಗಿ ಯೋಚಿಸುತ್ತಿರುವಾಗಲೇ, ರಾತ್ರಿ ಮಲಗುವ ಮುನ್ನ ಒಮ್ಮೊಮ್ಮೆ ನನ್ನ ಪುಸ್ತಕದ ಕಪಾಟಿನತ್ತ ಕಣ್ಣಾಡಿಸಿದರೆ ಹುಟ್ಟುವ ಭಯ ಮೆಲ್ಲಗೆ ಪುಟಿಯತೊಡಗಿತು. ಆ ಭಯ ಏನೆಂದು ನೀವೇ ಊಹಿಸಬಹುದು: ಒಂದೇ ಆಂಗಲ್ ನಲ್ಲಿ ಎಷ್ಟೋ ತಿಂಗಳಿಂದ ಮುಖ ವಾರೆ ಮಾಡಿ ರಾತ್, ದಾಸ್ತೋವ್ಸ್ಕಿ, ಗುಂಟರ್ ಗ್ರಾಸ್ ರ ಕಾದಂಬರಿಗಳು, ಪ್ರತಿವರ್ಷ ಮುಂದಿನ ಬೇಸಿಗೆಗೆ ಓದಿಯೇ ತೀರಬೇಕೆಂದು ಸಂಕಲ್ಪ ತೊಟ್ಟ ‘ವಾರ್ ಅಂಡ್ ಪೀಸ್’ ಮತ್ತು. ಡಿ.ಆರ್. ಕನಸಿನಲ್ಲಿ ಬರುವ ಮುನ್ನ ಇವನೆಲ್ಲಾ ಓದಿ ಮುಗಿಸಬೇಕು..
(ಫೆಬ್ರವರಿ 10, 1999)
ಈ ಲೇಖನ ಓದಿ ನಗು ಬಂತು. ಓದಬೇಕೆಂದು ಹಠ ಹಿಡಿದು ಮುಗಿಸುವುದು. ಓದಬೇಕೆಂದು ರಾತ್ರಿ ಶಪಥ ಮಾಡಿ ಬೆಳಗ್ಗೆ ಮರೆಯುವುದು.
ಪ್ರತಿ ತಿಂಗಳಿಗೆ ಒಂದು ಪುಸ್ತಕ ಕೊಂಡುಕೊಳ್ಳಬೇಕೆಂದು ನಿರ್ಧರಿಸುವುದು ಕೊನೆಗೆ ಕೈಬಿಡುವುದು. ಓದಿದರೂ ಅರ್ಥ ಮಾಡಿಕೊಳ್ಳಲಾಗದೆ, ಕೇಳಿದರೆ ಹೇಳಲು ಬಾರದೆ ಒದ್ದಾಡುವ ಸ್ಥಿತಿ….. ಇನ್ನು ಮುಂದೆ ಮುಂದೆ ಹೊಳೆದಂತೆಲ್ಲ
ಅಲ್ಮಾರದಲ್ಲಿರುವ ಪುಸ್ತಕಗಳನ್ನು ನೋಡಿದ ಗೆಳೆಯರು ಏನ್ ಮಾರಾಯ ಈ ಪುಸ್ತಕಗಳಿಗೆ ಹಾಕುವ ದುಡ್ಡು ವೇಸ್ಟ್ ಎನ್ನುವ ಮಾತುಗಳನ್ನು ಕೇಳಿ ಕೆಲವೊಮ್ಮೆ ಏನೂ ಹೇಳಲೂ ತಿಳಿಯದೆ ಸುಮ್ಮನಾಗುತ್ತೇನೆ.
ಬರಹ ಚೆನ್ನಾಗಿದೆ. ಆದರೆ ವಾರ್ ಅಂಡ್ ಪೀಸ್ ಓದಲು ಬೇಸಿಗೆ ರಜೆಯೇ ಯಾಕೆ? ಓದುವ ಮನವಿದ್ದರೆ ಸಾಕಲ್ವಾ? ರಾತ್ರಿ ೯ರಿಂದ ೧೨ರ ವರೆಗೆ ನಾನು ಮತ್ತು ನನ್ನ ಪುಸ್ತಕಗಳು ಮಾತ್ರ ಅನ್ನುವ ನನಗೆ ಈ ಲೇಖನ ಹಿಡಿಸಿತು
ಸುಮಿತ್ರಾ
it is nice to read appa’s gaaLi belaku