ಓದಲೇಬೇಕಾದ ‘ಆಮೋಸ್ ಫಾರ್ಚೂನ್’

ಸಿದ್ಧರಾಮ ಕೂಡ್ಲಿಗಿ

ನಾನು ಇದೀಗ ಓದಿ ಮುಗಿಸಿದ ಜೀವನ ಚರಿತ್ರೆ ಎಂದೆನಿಸಿಕೊಳ್ಳುವ ಕಿರು ಕಾದಂಬರಿ ‘ಆಮೋಸ್ ಫಾರ್ಚೂನ್’ ಕೃತಿ. ಗುಲಾಮಗಿರಿಯನ್ನು ಅನಾವರಣಗೊಳಿಸುವ ಪುಟ್ಟ ಕೃತಿಯಾದರೂ, ಅದರೊಳಗಿನ ಕಪ್ಪು ಜನಾಂಗದ ಬದುಕಿನ ಬವಣೆ ಎದೆಯನ್ನು ಕಲಕಿ ಬಿಡುತ್ತದೆ. ಮೂಲ ಕೃತಿಯನ್ನು ಕನ್ನಡಕ್ಕೆ ತಂದವರು ಜಯಶ್ರೀ ಭಟ್. ಅನುವಾದವೂ ಸುಂದರ, ಮುಖಪುಟವೂ ಸುಂದರ. ಕನ್ನಡಕ್ಕೆ ಇಂತಹ ಅಮೂಲ್ಯ ಕೃತಿಯನ್ನು ತಂದದಕ್ಕಾಗಿ ಜಯಶ್ರೀ ಭಟ್ ಅವರಿಗೆ ಧನ್ಯವಾದಗಳು.

ಸ್ವಾತಂತ್ರ್ಯ ಎಂದರೇನು? ನಮಗಾರಿಗೂ ಗೊತ್ತೇ ಇಲ್ಲ. ಅದರ ಬೆಲೆ ಎಷ್ಟು? ಅದೂ ನಮಗೆ ಗೊತ್ತಿಲ್ಲ. ಸ್ವಾತಂತ್ರ್ಯವೆಂದರೆ ಬೇಕಾಬಿಟ್ಟಿಯಾಗಿ ವರ್ತಿಸುವ, ಮಾತನಾಡುವ, ಸ್ವೇಚ್ಛೆ ಎಂದೇ ತಿಳಿದಿದ್ದೇವೆ. ಹಾಗಿರುವುದಕ್ಕೆ ಸಮರ್ಥನೆಯನ್ನೂ ಕೊಡುತ್ತೇವೆ. ನಿಜ, ಸ್ವಾತಂತ್ರ್ಯಾನಂತರದ ನಾವುಗಳು ಗುಲಾಮತನವನ್ನು ಅನುಭವಿಸಿಲ್ಲ. ಸ್ವಾತಂತ್ರ್ಯದ ನಿಜವಾದ ಬೆಲೆಯನ್ನೂ ತಿಳಿದಿಲ್ಲ. ಹೀಗಾಗಿ ಇಂದಿನ ದುಸ್ಥಿತಿ. ಗುಲಾಮತನ ಎಂದರೇನು? ಸ್ವಾತಂತ್ರ್ಯದ ಬೆಲೆ ಎಷ್ಟು? ತಿಳಿಯಬೇಕಾದರೆ ‘ಆಮೋಸ್ ಫಾರ್ಚೂನ್ ‘ ಕೃತಿ ಓದಲೇಬೇಕು.

ಕಗ್ಗತ್ತಲ ಖಂಡ ಎಂದೇ ಹೆಸರುವಾಸಿಯಾದ ಆಫ್ರಿಕಾ ಖಂಡದಿಂದ ಸಾವಿರ ಸಂಖ್ಯೆಯಲ್ಲಿ ಕಪ್ಪು ಜನಾಂಗದ ಮುಗ್ಧ ಜೀವಗಳನ್ನು ಬಿಳಿಯರು ತೊಂಡು ದನಗಳ ರೀತಿಯಲ್ಲಿ ಹೆದರಿಸಿ ಕರೆತರುವ ಚಿತ್ರಣವಿದೆಯಲ್ಲ ಅದು ಎದೆ ನಡುಗಿಸುವಂತಹದು. ಇದು 1725 ರಿಂದ 1801ರವರೆಗೆ ನಡೆದ ಘಟನೆಯ ಚಿತ್ರಣ. ಆಫ್ರಿಕಾದಲ್ಲಿನ ಕಪ್ಪು ಜನಾಂಗದ ದೊರೆ ‘ಆಮೋಸ್’. ಅವನನ್ನು ಅವನ ಸಂಗಡಿಗರೊಂದಿಗೆ ಬಂಧಿಸಿ ಬಿಳಿಯರಿಗೆ ಮಾರಾಟ ಮಾಡಲಾಗುತ್ತದೆ.

ಬಿಳಿಯರ ದರ್ಪ, ದೌರ್ಜನ್ಯ, ಅವರ ಬಳಿ ಇರುವ ಆಯುಧಗಳಿಂದಾಗಿ ಆಫ್ರಿಕನ್ನರು ಶತಮಾನಗಳ ಕಾಲ ಗುಲಾಮಗಿರಿಯನ್ನು ಅನುಭವಿಸುತ್ತಲೇ ಬಂದರು. ಹಡಗಿನ ಮೂಲಕ ತನ್ನ ಸಮೃದ್ಧವಾದ ತಾಯ್ನೆಲವನ್ನು, ಸಂಬಂಧಿಕರನ್ನು ಬಿಟ್ಟು ಒಬ್ಬಂಟಿಯಾಗಿ ಯಾರದೋ ಮನೆಗೆ ಗುಲಾಮನಾಗಿ ಬರುವ ಆಮೋಸ್ ತನ್ನೆಲ್ಲ ‘ದೊರೆತನ’ವನ್ನು ಮಣ್ಣು ಮಾಡಿ ಕೇವಲ ಸ್ವಾತಂತ್ರ್ಯಕ್ಕಾಗಿ ಸದಾ ಹಂಬಲಿಸುತ್ತಿರುತ್ತಾನೆ. ಆದರೆ ಹಾಗಂತ ಪ್ರತಿಭಟಿಸದೆ, ತನ್ನ ಮನದೊಳಗೇ ಅದನ್ನು ಕನಸು ಕಾಣುತ್ತ ಉತ್ತಮ ಗುಲಾಮನಂತೆಯೇ ಬದುಕುತ್ತಾನೆ. ಇಲ್ಲಿ ಬೇರೆ ಯಾವುದೇ ಅವಕಾಶವೂ ಆತನಿಗಿರುವುದಿಲ್ಲ. ಅಲ್ಲಿನ ನಡಾವಳಿಗಳನ್ನು ಕಲಿಯಲೇಬೇಕಾಗುತ್ತದೆ. ಹೀಗಾಗಿ ಕೊನೆ ಕೊನೆಗೆ ಕೆಲವು ದಿನಗಳ ನಂತರ ಆಮೋಸ್ ತನ್ನ ಮಾತೃಭಾಷೆಯನ್ನೇ ಮರೆತುಬಿಡುತ್ತಾನೆ.

ಆಗಿನ ಕಾಲದಲ್ಲಿ ಈ ಕಪ್ಪು ಜನಾಂಗದ ಗುಲಾಮರು ತಮ್ಮ ಮಾಲಿಕರ ಪತ್ರವಿಲ್ಲದೆ ಮನೆ ಬಿಟ್ಟು ಹೊರಹೋಗುವಂತಿರಲಿಲ್ಲ. ಹೋಗಬೇಕಾದರೂ ಮಾಲಿಕನ ಪತ್ರ ಆತನ ಬಳಿ ಇರಬೇಕು. ಇಲ್ಲದಿದ್ದರೆ ಪೊಲೀಸ್ರು ತಕ್ಷಣ ಈ ಗುಲಾಮರನ್ನು ಮನಬಂದಂತೆ ಥಳಿಸಿ ಕೂಡಿಹಾಕುತ್ತಿದ್ದರು.

ಆಮೋಸ್ ಒಬ್ಬ ಉತ್ತಮ ಜಾನುವಾರುಗಳ ಚರ್ಮ ಹದಗಾರ ಹಾಗೂ ಅದರಿಂದ ಉಡುಪುಗಳನ್ನು ತಯಾರಿಸುವವನಾಗಿರುತ್ತಾನೆ. ತನ್ನ ಕಾರ್ಯಕ್ಷಮತೆಯಿಂದ ತನ್ನ ಮಾಲಿಕನ ಮನಗೆದ್ದು ಪ್ರಾಮಾಣಿಕತೆಯಿಂದಲೇ ಬದುಕುತ್ತಾನೆ. ತಾನು ದುಡಿದದ್ದನ್ನೆಲ್ಲ ತನ್ನ ಸಂಗಡಿಗರನ್ನು ಬಿಡುಗಡೆಗೊಳಿಸಲು ವೆಚ್ಚ ಮಾಡುತ್ತಾನೆ. ಕೊನೆಗೆ ಈತನೂ ಸ್ವಾತಂತ್ರ್ಯ ಪಡೆಯುತ್ತಾನಾದರೂ ಅಲ್ಲಿಗೆ ಆತನಿಗೆ ಸಾಕಷ್ಟು ವಯಸಾಗಿರುತ್ತದೆ. ಆದರೆ ಸ್ವಾತಂತ್ರ್ಯ ಸಿಕ್ಕ ನಂತರ ಆತನ ಮನದೊಳಗಿನ ಭಾವನೆಗಳಿವೆಯಲ್ಲ, ಅದನ್ನು ಅವನ ರೀತಿಯಲ್ಲೇ ಅನುಭವಿಸಿದಾಗಲೇ ನಮಗೆ ಅದರ ಬೆಲೆ ಗೊತ್ತಾಗುವುದು. ಅನೇಕ ವರ್ಷಗಳ ನಂತರ ಸ್ವಾತಂತ್ರ್ಯದ ಗಾಳಿ ಸೇವಿಸುತ್ತಾನೆ.

ವಯೋಲೆಟ್ ಎಂಬಾಕೆಯನ್ನು ಬಿಳಿಯರಿಂದ ಹಣ ಕೊಟ್ಟು ಖರೀದಿಸುತ್ತಾನೆ. ಅವಳನ್ನೇ ವಿವಾಹವಾಗುತ್ತಾನೆ. ಮತ್ತೆ ಮತ್ತೆ ದುಡಿಯುತ್ತಾನೆ ಕೇವಲ ತನ್ನವರ ಸ್ವಾತಂತ್ರ್ಯಕ್ಕಾಗಿ. ಈತನದು ಒಂದು ರೀತಿಯಲ್ಲಿ ಅಹಿಂಸಾ ಮಾರ್ಗ. ಚರ್ಮ ಹದಮಾಡುವ ಕಾರ್ಯದಲ್ಲಿ ಆಮೋಸ್ ಎಷ್ಟು ನುರಿತಿರುತ್ತಾನೆಂದರೆ, ಕೊನೆಗೆ ಒಬ್ಬ ಬಿಳಿಯ ವ್ಯಕ್ತಿ ತನ್ನ ಮಗಳನ್ನು ಈತನ ಬಳಿ ಕಲಿಕೆಗಾಗಿ ಕಳಿಸುತ್ತಾನೆ. ಜಾಫ್ರಿ ಎಂಬ ಊರಿನಲ್ಲಿ ಬಡ ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಾನೆ. ತಾನು ದುಡಿದ ಹಣದಲ್ಲಿಯೇ ದತ್ತಿಯನ್ನೂ ಸ್ಥಾಪಿಸುತ್ತಾನೆ. ಇಂದಿಗೂ ಅಲ್ಲಿನ ಶಾಲೆಯಲ್ಲಿ ಆಮೋಸ್ ಹೆಸರಿನಲ್ಲಿ ದತ್ತಿ ಇದೆಯಂತೆ.

ಕೊನೆಯವರೆಗೂ ಇತರರ ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಲೇ 1801ರಲ್ಲಿ ತನ್ನ 91ನೇ ವಯಸಿನಲ್ಲಿ ಮರಣ ಹೊಂದುತ್ತಾನೆ. 1802ರಲ್ಲಿ ಈತನ ಪತ್ನಿ ವಯೋಲೆಟ್ ಮರಣ ಹೊಂದುತ್ತಾಳೆ. ವರ್ಣಭೇದ ವಿದೇಶಗಳಲ್ಲಿ ಹಾಗೂ ಜಾತಿಭೇದ ನಮ್ಮಲ್ಲಿ ಇಂದಿಗೂ ಆಳುತ್ತಿರುವ ಕ್ರೂರ ವ್ಯವಸ್ಥೆಗಳು. ಮನುಷ್ಯತ್ವವನ್ನೇ ಕೊಂದು ಹಾಕುವ ಈ ಭೇದಗಳಿಂದ ಇಡೀ ವ್ಯವಸ್ಥೆಯೇ ಕರಾಳವಾಗಿಬಿಡುತ್ತದೆ. ಆಮೋಸ್ ಫಾರ್ಚೂನ್ ರೀತಿಯಲ್ಲಿಯೇ ನಮ್ಮಲ್ಲಿಯೂ ದಲಿತ ಜನಾಂಗದ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ಇಂದಿಗೂ ತುಳಿತಕ್ಕೊಳಗಾಗಿ ನಲುಗುತ್ತಿರುವ ಹಿಂದುಳಿದ ಜನಾಂಗಗಳು ಸಮಾನತೆಯ ಸಿದ್ಧಾಂತಕ್ಕೆ ಪ್ರಶ್ನೆಗಳಾಗಿಯೇ ನಿಂತಿವೆ. ಒಮ್ಮೆ ಓದಲೇಬೇಕಾದ ಕೃತಿ ಆಮೋಸ್ ಫಾರ್ಚೂನ್.

‍ಲೇಖಕರು Avadhi

February 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬಯಲು ಸೀಮೆಯ ʼಒಕ್ಕಲ ಒನಪುʼ

ಬಯಲು ಸೀಮೆಯ ʼಒಕ್ಕಲ ಒನಪುʼ

ಮಧುಸೂದನ ವೈ ಎನ್ ಈ ಪುಸ್ತಕ ಕೈಗೆ ಸಿಕ್ಕಿ ಒಂದೋ ಎರಡೋ ತಿಂಗಳಾಗಿರಬಹುದು. ಎರಡು ಹಗಲು ಎರಡು ಇನ್ನಿಂಗ್ಸ್‌ ಗಳಲ್ಲಿ ಖತಂ! ಓದಿದ ಎಷ್ಟೋ...

ಗಾಲಿಬನ ಮೇಲಿನ ಪ್ರೀತಿಗಾಗಿ..

ಗಾಲಿಬನ ಮೇಲಿನ ಪ್ರೀತಿಗಾಗಿ..

ವಿರಹ, ವಿಯೋಗ, ವಿದ್ರೋಹ, ಪ್ರೇಮ, ವ್ಯಾಮೋಹ, ವಿಷಣ್ಣತೆ, ತೀವ್ರ ತೊಳಲಾಟ, ಹೂ ಪುಳಕ, ಬದುಕಿನ ಚೆಲುವುಗಳನ್ನು ಗಜಲುಗಳ ಮೂಲಕ ಕಟ್ಟಿ ಕೊಟ್ಟ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This