ಓಯಸಿಸ್

ಪ್ರೇಮ್‍ ಸಾಗರ್ ಕಾರಕ್ಕಿ

“ನಾವು ಇಲ್ಲಿಗೆ ಬಂದ ದಿವಸ ಇದ್ದಷ್ಟೇ ನೀರು ಈಗಲೂ ಇದೆ ಅಲ್ವಾ ಛಾಯಾಸಿಂಗ್” ಬಾರಿಶ್‍ವಾಲಾ ಕೇಳಿದ. ತಡೆಯೊಡ್ಡಲು ಒಂದು ತುಣುಕೂ ಮೋಡವಿರದ ಆಕಾಶದಿಂದ ಬಿಸಿಲು ನಿರಾತಂಕವಾಗಿ ಆ ಮರುಭೂಮಿಗಿಳಿಯುತ್ತಿತ್ತು.

“ಇಲ್ದೆ ಇದ್ರೆ ಹೇಗೆ” ಛಾಯಾಸಿಂಗ್ ಹೇಳಿದ, “ನಾವು ಇಷ್ಟು ದಿವಸ ಕಣ್ಣಲ್ಲಿ ಕಣ್ಣಿಟ್ಟು ಕಾಯ್ತಾ ಬಂದಿಲ್ವಾ?”

“ಹೌದು, ಹೌದು. ಅದಿರಿಲಿ, ನಾವಿಲ್ಲಿಗೆ ಬಂದು ಎಷ್ಟು ದಿವಸ ಆಯ್ತು? ವಾರಾನೋ, ತಿಂಗಳೋ ಅಥವಾ ವರ್ಷಾನೇ ಮುಗೀತೋ?” ಕೇಳಿದ ಬಾರಿಶ್‍ವಾಲಾ.

“ನನಗೂ ಇಲ್ಲೀವರೆಗೆ ಈ ಯೋಚನೇನೆ ಬಂದಿರ್ಲಿಲ್ಲ ನೋಡು”.

“ನಿನಗೆಲ್ಲಿಂದ ಬರುತ್ತೆ ಆ ಯೋಚನೆ? ನೀರಿನ ಬಗ್ಗೆ ಬಿಟ್ಟು ಮತ್ತೇನಾದರೂ ಯೋಚನೆ ಮಾಡ್ತೀಯಾ ನೀನು?”

“ಹಾಳಾಗ್ಲಿ ಬಿಡು, ಸಮಯ ಕಾಲ ಕಟ್ಕೊಂಡು ನಮಗೇನಾಗ್ಬೇಕು? ನೀರನ್ನು ಕಾಯೋದಷ್ಟೇ ನಮ್ಮ ಕೆಲಸ”.

ಅವರ ಮಾತಿನ ಶಬ್ದದ ತರಂಗಗಳನ್ನು ದೂರಕ್ಕೆ ಕೊಂಡೊಯ್ಯಲೂ ಅಲ್ಲಿ ಗಾಳಿ ಇಲ್ಲವೇನೋ ಅನಿಸುತ್ತಿತ್ತು. ಸುತ್ತಲೂ ಪ್ರಕೃತಿಯೇ ಮೂಕವಾದಂತೆ ತೋರುತ್ತಿದ್ದ ನೀರವತೆ. ಮೇಲೆ ಉರಿವ ಸೂರ್ಯ, ಕೆಳಗೆ ಸುಡುವ ಮರಳು, ಮನುಷ್ಯನ ಮನಸ್ಸಿನಷ್ಟೇ ಅಗಾಧವಾದ ಆ ಮರುಭೂಮಿಯ ಮಧ್ಯೆ ಅವರು ಒಣಗಿ ಕರಕಲಾದ ಮರಗಳ ಕಾಂಡಗಳಂತಿದ್ದರು. ಕಣ್ಣು ಹಾಯಿಸಿದಷ್ಟೂ ದೂರ ಕಣ್ಣಿಗೆ ಕಟ್ಟುತ್ತಿದ್ದ ಆ ಬರಡು ನೆಲದಲ್ಲಿದ್ದರೂ ಅವರ ಕಣ್ಣುಗಳಲ್ಲಿ ಮಾತ್ರ ನೀರಿನ ಅಲೆಗಳು ಹೊಯ್ದಾಡಿದಂತೆ ಭಾಸವಾಗುತ್ತಿತ್ತು.

ಮಾತು ಮುಂದುವರೆದಿತ್ತು…

“ನಿನ್ನ ಕೂದಲು ಬೆಳ್ಳಗಾಗಿದೆ, ಮುಖದ ಮೇಲೆ ನೆರಿಗೆ ಮೂಡಿದೆ. ಅದರ ಬಗ್ಗೆ ಯಾವತ್ತಾದ್ರೂ ಯೋಚನೆ ಮಾಡಿದ್ದೀಯಾ?” ಕೇಳಿದ ಛಾಯಾಸಿಂಗ್.

ಬಾರಿಶ್‍ವಾಲಾ ಹುಬ್ಬು ಗಂಟಿಕ್ಕಿ ಮುಖದ ನೆರಿಗೆಗಳನ್ನು ಇಮ್ಮಡಿಗೊಳಿಸುತ್ತಾ ಹೇಳಿದ- “ನಿನ್ನ ಕೂದಲೇನು ಕರ್ರಗೆ ಮಿಂಚುತ್ತಾ ಇದಿಯೇನು? ನಿನ್ನ ಮುಖದ ನೆರಿಗೆಗಳನ್ನು ಎಣಿಸುತ್ತಾ ಕೂತರೆ ಮುಗಿಯೋದೇ ಇಲ್ಲ”.

“ಬಹುಶಃ ನಮಗೆ ವಯಸ್ಸಾಗ್ತಾ ಇದೆ ಅಂತ ಕಾಣುತ್ತೆ. ಮುಖ ನೋಡ್ಕೋಳ್ಳೋಣ ಅಂದ್ರೆ ಇಲ್ಲಿ ಕನ್ನಡೀನೂ ಇಲ್ಲ”.

“ಈ ನೀರಲ್ಲಿ ಯಾವತ್ತಾದ್ರೂ ಮುಖ ನೋಡ್ಕೊಂಡಿದ್ದೀಯಾ?”

“ನೋಡಿಲ್ದೆ ಏನು? ಹಾಳಾದ್ದು ಭಲೇ ಮೋಸ. ನಾನಿಲ್ಲಿ ಬಂದಾಗ ಹೇಗಿದ್ದೆನೋ ಹಾಗೇ ಕಾಣುತ್ತೆ ಮುಖ ಅದರಲ್ಲಿ!”

“ನಿಜ, ನಾನೂ ಅದನ್ನೇ ನಂಬ್ಕೊಂಬಿಟ್ಟಿದ್ದೆ. ಆದ್ರೆ ಈಗೇನಾಯ್ತು ನೋಡು”.

“ಹಾಗಾದ್ರೆ ನಿಜವಾಗ್ಲೂ ನಮಗೆ ವಯಸ್ಸಾಗಿದೆ ಅಂತೀಯಾ”!”

“ಹೋಗ್ಲಿ ಬಿಡು, ಕೇಳಿಲ್ಲಿ, ನಾವಿಲ್ಲಿ ನೀರನ್ನು ಕಾಯ್ತಾ ಇಲ್ದಿದ್ರೆ ಇನ್ನೇನು ಮಾಡ್ತಾ ಇರ್ತಿದ್ವಿ”?

“ಅದನ್ನು ಹೇಗೆ ಹೇಳೋಕಾಗುತ್ತೆ? ಇನ್ನೇನಾದ್ರೂ ಮಾಡ್ತಾ ಇರ್ತಿದ್ವೇನೋ… ಬಹುಶಃ ನೀರನ್ನೇ ಹುಡುಕ್ತಾ ಇರ್ತಿದ್ವಿ ಅನ್ಸುತ್ತೆ. ಈಗೇನು, ನೀನು ಇದನ್ನು ಬಿಟ್ಟು ಬೇರೆ ಏನಾದ್ರೂ ಮಾಡ್ಬೇಕು ಅಂತಿದ್ದೀಯಾ? ಈ ಮರುಳುಗಾಡಲ್ಲಿ ಎಲ್ಲಿಗೆ ಅಂತ ಹೋಗ್ತೀಯ? ಸತ್ತು ಹೋಗ್ತೀಯ ಈ ಬಿಸಿಲಲ್ಲಿ. ಸುಮ್ನೆ ಆ ಯೋಚನೆ ಬಿಟ್ಬಿಡು. ಮರುಭೂಮಿಯ ಬಿಸಿಲಲ್ಲಿ ನೀರಿಲ್ದೆ ಅಲೆದಾಡಿ ಸಾಯೋದಕ್ಕಿಂತ ಇಲ್ಲಿ ಸಿಕ್ಕಿರೋ ಈ ನೀರನ್ನು ಕಾಯ್ತಾ ಹೀಗೇ ಸತ್ತು ಹೋಗೋದೇ ವಾಸಿ”.

“ಹೌದೌದು, ಬಾ ನೀರನ್ನು ಕಾಯೋಣ”.

“ಸುಮ್ನೆ ಬಾ ಮತ್ತೆ. ನೀರಿನ ಕಡೆಗೇ ಗಮನ ಇರ್ಲಿ”

ಹಾಗೇ ತಟಸ್ಥರಾಗಿ ಕುಳಿತಿದ್ದ ಛಾಯಾಸಿಂಗ್ ಮತ್ತು ಬಾರಿಶ್‍ವಾಲಾರಿಂದ ಸ್ವಲ್ಪ ದೂರದಲ್ಲಿ, ಮರಳಿನ ಮೇಲೆ ಹುಳಗಳು ಹರಿದಾಡಿದಂಥ ಹೆಜ್ಜೆಗುರುತುಗಳನ್ನು ಹಿಂದೆ ಬಿಡುತ್ತಾ, ಸೂರ್ಯನ ಅಪ್ಪುಗೆಯಿಂದ ದಣಿದು ನಿಧಾನವಾಗಿ ಕಾಲೆಳೆಯುತ್ತಾ ಮೂರು ಮಂದಿ ತೆವಳುವಂತೆ ನಡೆಯುತ್ತಾ ಬರುತ್ತಿದ್ದರು. ಮನದ ಮೂಲೆಯಲ್ಲೆಲ್ಲೋ ಅಡಕವಾಗಿದ್ದ ಅದಾವುದೋ ಅನಂಕಿತ ವಾಂಛೆಯ ಬಲದಿಂದ ಜೀವದ ಕುರುಹೇ ಇಲ್ಲದ ನಿರ್ಜೀವ ದೇಹಗಳೇ ನಡೆದು ಬರುವಂತಿತ್ತು. ಮೂವರಲ್ಲಿ ಒಬ್ಬನಂತೂ ಸ್ವಲ್ಪ ಹೆಚ್ಚೇ ಬಸವಳಿದಿದ್ದ.

ಆ ಜೀವಚ್ಛವಗಳ ಮಾತು ಹೀಗಿತ್ತು –

“ನಾನು ಆವತ್ತೇ ಹೇಳ್ದೆ, ಮರುಭೂಮೀಲಿ ನೀರಿರಲ್ಲ ಅಂತ, ನನ್ನ ಮಾತು ಕೇಳ್ಲಿಲ್ಲ ನೀವು. ಓಯಸಿಸ್ ಅಂತ ಒಂದಿರುತ್ತೆ, ಸುತ್ತ ಮೈಲುಗಟ್ಟಲೆ ಮರಳು ಕುದೀತಾ ಇದ್ರೂ ಅಲ್ಲಿ ಮಾತ್ರ ನೀರು ತಣ್ಣಗೆ ನಲೀತಾ ಇರುತ್ತೆ ಅಂತ ಕರ್ಕೊಂಡು ಬಂದ್ರಿ. ಈಗ ತೋರ್ಸಿ ಎಲ್ಲಿದೆ ಓಯಸಿಸ್. ವಾಪಸ್ಸು ಹೋಗೋಕೂ ಆಗಲ್ಲ ಇನ್ನು. ಹೀಗೇ ಮರಳು ಮುಕ್ಕುತ್ತ ಸತ್ತು ಹೋಗ್ತೀವಿ ಒಂದು ದಿವ್ಸ” – ಸ್ವಲ್ಪ ಸಿಟ್ಟಿನಿಂದಲೇ ಹೇಳಿದ ಒಂದನೆಯವನು.

“ಸ್ವಲ್ಪ ತಾಳ್ಮೆ ತಂದುಕೋ, ಈವತ್ತಲ್ಲ ನಾಳೆ ನೀರು ಸಿಗಬಹುದು”- ಸಮಾಧಾನ ಮಾಡಲೆತ್ನಿಸಿದ ಎರಡನೆಯವನು.

ಮೂರನೆಯವನು ಗೊಣಗಿದ – “ನೀರಿರುತ್ತೆ, ನನಗ್ಗೊತ್ತು, ಎಂಥ ಮರುಭೂಮೀನೇ ಆದ್ರೂ ಅದರಲ್ಲೊಂದು ಓಯಸಿಸ್ ಇರುತ್ತೆ. ಖಂಡಿತ… ನನಗ್ಗೊತ್ತು”

ಮಾತಿಲ್ಲ, ಮರಳಿನಲ್ಲಿ ಹೂತು ಹೋಗುತ್ತಿದ್ದ ಕಾಲುಗಳನ್ನು ನಿಧಾನವಾಗಿ ಹಾಗೇ ಸರಿಸಿದಾಗ ಉಂಟಾಗುತ್ತಿದ್ದ ಮರಳಿನ ನಿಶ್ಶಬ್ದ ಶಬ್ದವೊಂದೇ, ಹೀಗೇ ಮಂದಗತಿಯಲ್ಲಿ ಮುಂದೆ ಸಾಗಿದ ಮೂವರಿಗೂ ಅಚ್ಚರಿಯೆಂಬಂತೆ ಛಾಯಾಸಿಂಗ್ ಮತ್ತು ಬಾರಿಶ್‍ವಾಲಾ ಕಂಡರು. ಅವರಿಬ್ಬರಿಗೂ ಅಷ್ಟೆ, ಮರಳಿನಲ್ಲಿ ಮೀನಿನಂತೆ ಈಜುತ್ತಾ ಬಂದ ಇವರನ್ನು ಕಂಡು ಆಶ್ಚರ್ಯ. ಒಂದು ಕ್ಷಣ ಯಾರೂ ಮಾತಾಡಲಿಲ್ಲ. ಮರುಭೂಮಿಯಲ್ಲಿ ಕದಲದೆ ಕುಳಿತಿದ್ದ ಇಬ್ಬರು ಸಿಕ್ಕಿದ್ದು ನೀರೇ ಸಿಕ್ಕಿದಂತಾಗಿ ಮೂವರ ಗಂಟಲಿನಿಂದಲೂ ಬಂದಿದ್ದು ಒಂದೇ ಶಬ್ದ – “ನೀರು… ನೀರು”

ಎರಡನೆಯವನು ಮಾತು ಮುಂದುವರೆಸಿದ –

“ನಾವು ಮೂರು ಜನ ಮರುಭೂಮೀಲಿ ನೀರು ಸಿಗುತ್ತೆ ಅನ್ನೋ ನಂಬಿಕೆಯಿಂದ ಬಹಳ ದಿನಗಳ ಹಿಂದೇನೇ ಹುಡುಕಿಕೊಂಡು ಹೊರಟ್ವಿ. ಇದುವರೆಗೂ ಸಿಗಲಿಲ್ಲ. ಸೋತು ಹೋಗಿದ್ದೀವಿ. ಒಂದು ಪ್ರಾಣಿಯೂ ಓಡಾಡದೆ ಇರೋ ಈ ಜಾಗದಲ್ಲಿ ನೀವಿಬ್ಬರೂ ನಿರಾಳವಾಗಿ ಕೂತಿರೋದು ನೋಡಿದ್ರೆ ಇಲ್ಲಿ ಖಂಡಿತ ನೀರಿರಬೇಕು. ನೀರಿದಿಯಾ? ಇದ್ರೆ ದಯವಿಟ್ಟು ಸ್ವಲ್ಪ ಕೊಡ್ತೀರಾ?”

ಛಾಯಾಸಿಂಗ್ ಮತ್ತು ಬಾರಿಶ್‍ವಾಲಾ ಇಬ್ಬರೂ ಒಕ್ಕೊರಲಿನಿಂದ ಹೇಳಿದರು –

“ಅಯ್ಯೋ, ನೀರಿಲ್ದೆ ಏನು, ನಾವಿಬ್ಬರೂ ಅದನ್ನೇ ಕಾಯ್ತಾ ಕೂತಿರೋದು ಇಲ್ಲಿ”.

ಆ ಮೂವರ ಮುಖದಲ್ಲೂ ಮಂದಹಾಸ ಮೂಡಿತು. ಮೂರನೆಯವನು ಒಂದನೆಯವನನ್ನೊಮ್ಮೆ ದುರುಗುಟ್ಟಿ ನೋಡಿದ.

ಬಾರಿಶ್‍ವಾಲಾ ಮುಂದುವರೆಸಿದ.

“ನಾವೂ ನಿಮ್ಮ ಹಾಗೇ ತುಂಬ ಹಿಂದೆ, ಅಂದ್ರೆ ಬಹಳ ಕಾಲ ಹಿಂದೇನೇ ಈ ಮರುಭೂಮಿಗೆ ನೀರು ಹುಡುಕ್ಕೊಂಡು ಬಂದ್ವಿ. ನಿಮ್ಮ ಹಾಗೇ ಬಹಳ ಅಲೆದಾಡಿದ ಮೇಲೆ ಕೊನೆಗೂ ಸಿಕ್ತು ನೋಡಿ, ನೀರು. ಆವತ್ತಿನಿಂದ ಈವತ್ತಿನವರೆಗೂ ಈ ಜಾಗ ಬಿಟ್ಟು ಒಂದಿಂಚೂ ಆಚೀಚೆ ಹೋಗಿಲ್ಲ. ಇಲ್ಲೇ ನೀರನ್ನು ಕಾಯ್ತಾ ಇದ್ದು ಬಿಟ್ಟಿದ್ದೀವಿ”.

“ಬನ್ನಿ, ನೀರು ಕುಡಿದು ಬಾಯಾರಿಕೆ ತೀರಿಸಿಕೊಂಡು ಆ ಮರದ ನೆರಳಲ್ಲಿ ವಿಶ್ರಾಂತಿ ತಗೊಳ್ಳಿ” – ದಣಿದು ಬಂದವರಿಗೆ ಜೀವಧಾರೆಯ ಸವಿಯುಣ್ಣಲು ಆಹ್ವಾನ ನೀಡಿದ ಛಾಯಾಸಿಂಗ್.

ಆ ಮೂವರ ಕಣ್ಣುಗಳೂ ಮರಳಿನಲ್ಲಿ ನೀರಿಗಾಗಿ ಗಾಳ ಹಾಕಿದ್ದವು. ಸ್ವರ್ಗದ ಬಾಗಿಲಿಗೆ ಬಂದು ಕರೆಗಂಟೆ ಬಾರಿಸಿ ಬಾಗಿಲು ತೆರೆಯುವುದನ್ನೇ ಕಾಯುತ್ತಾ ನಿಂತಂತೆ ಅವರ ಮನಸುಗಳು ಚಡಪಡಿಸುತ್ತಿದ್ದವು. ಅವರು ಹಾಗೇ ನಿಂತಿರುವುದನ್ನು ನೋಡಿ ಬಾರಿಶ್‍ವಾಲಾ ಹೇಳಿದ –

“ಇದೇನು ಹೀಗೇ ನಿಂತುಬಿಟ್ರಿ. ನೋಡಿ ಇಲ್ಲೇ ಇದೆ ನೀರು. ಪಕ್ಕದಲ್ಲೇ ಮರ ಇದೆ. ನೀರು ಕುಡಿದು ವಿಶ್ರಮಿಸಿ”.

ಆದರೆ ಅಲ್ಲೆಲ್ಲೂ ನೀರಿನ ಸುಳಿವೇ ಇರಲಿಲ್ಲ! ಯಾವ ಮರವೂ ಇರಲಿಲ್ಲ! ಆ ಮೂವರೂ ಚಕಿತರಾದರು. ಅವರ ಕಣ್ಣುಗಳು ಮತ್ತೆ ಮತ್ತೆ ಆ ಜಾಗವನ್ನೆಲ್ಲ ತಡಕಿ ತಡಗಿ ಹುಡುಕಿದವು. ಒಂದನೆಯವನು ಕೇಳಿದ…

“ಎಲ್ಲಿದೆ ನೀರು ಇಲ್ಲಿ”?

ಉಳಿದಿಬ್ಬರ ಮುಖಗಳಲ್ಲೂ ಅದೇ ಪ್ರಶ್ನೆ.

“ನೋಡಿ, ಇಲ್ಲೇ ಕಾಣ್ತಾ ಇಲ್ವೇ ನೀರು” ಬಾರಿಶ್‍ವಾಲಾ ಹೇಳಿದ.

“…. ಮರ?” ಎರಡನೆಯವನು ಕೇಳಿದ.

“ಅಲ್ಲೇ ಪಕ್ಕದಲ್ಲಿ, ತಂಪಾದ ದಟ್ಟ ನೆರಳು, ಕಾಣ್ತಿಲ್ವಾ?” ಛಾಯಾಸಿಂಗ್ ಅತ್ತ ಕೈ ಮಾಡಿ ತೋರಿಸುತ್ತಾ ಹೇಳಿದ.

ಎರಡನೆಯವನು ದೈನ್ಯತೆಯಿಂದ ಹೇಳಿದ – “ನೋಡಿ, ನಾವು ಈ ಬಿಸಿಲಲ್ಲಿ ನೀರು ಹುಡುಕುತ್ತಾ ಮೈಲುಗಟ್ಟಲೆ ತಿರುಗಾಡಿದ್ದೀವಿ. ಈ ಸುಡುವ ಮರಳು ನಮ್ಮ ದೇಹದಲ್ಲಿರೋ ನೀರನ್ನೂ ಬತ್ತಿಸಿದೆ. ದಯವಿಟ್ಟು ನಮ್ಮನ್ನು ಗೇಲಿ ಮಾಡಬೇಡಿ. ಇಲ್ಲೆಲ್ಲೂ ನೀರು, ಮರ ಏನೂ ಕಾಣ್ತಾ ಇಲ್ಲ”.

“ಇದೇನು ಬಾರಿಶ್, ಇವರು ಹೀಗೆ ಹೇಳ್ತಾರೆ”. ಛಾಯಾಸಿಂಗ್ ಆಶ್ಚರ್ಯದಿಂದ ಹೇಳಿದ. “ನಾವಿಲ್ಲಿ ಅದೆಷ್ಟೋ ದಿನಗಳಿಂದ ನೀರನ್ನೇ ಕಾಯ್ತಾ ಬದುಕಿದ್ದೀವಿ. ಅದೆಷ್ಟು ದಿನ ಈ ಮರದ ನೆರಳಲ್ಲಿ ಮಲಗಿ ಪ್ರಪಂಚವನ್ನೇ ಮರೆತು ನಿದ್ರಿಸಿದ್ದೀವಿ. ಈಗ ನೋಡಿದ್ರೆ ಇವ್ರು ಎಲ್ಲಿಂದಲೋ ಬಂದು ಇಲ್ಲಿ ಮರ, ನೀರು ಏನೂ ಇಲ್ಲ ಅಂತಾರಲ್ಲ”.

“ಬಹುಶಃ ಬಿಸಿಲಿನ ಧಗೆಯಿಂದ ಅವರ ಬುದ್ಧಿ ಮಂಕಾಗಿ, ದೃಷ್ಟಿ ಮಂಜಾಗಿರಬಹುದು. ನೋಡಿ, ಇನ್ನೊಮ್ಮೆ ಸರಿಯಾಗಿ ನೋಡಿ. ಇದೇ ನೀರು, ಅಲ್ಲೇ ಪಕ್ಕದಲ್ಲಿ ಮರ, ಕಾಣ್ತಾ?” ಬಾರಿಶ್‍ವಾಲಾ ಕೇಳಿದ.

“ಇವರಿಬ್ರಿಗೂ ಹುಚ್ಚು ಹಿಡಿದಿದೆ ಕಣ್ರೋ”, ಕೋಪಮಿಶ್ರಿತ ನಗುವಿನೊಂದಿಗೆ ಹೇಳಿದ ಒಂದನೆಯವನು. “ನೋಡಿ, ಅಲ್ಲಿ ಮರಳಿನಿಂದ ಹೇಗೆ ಶಾಖ ಮುಖಕ್ಕೆ ಹೊಡೀತಾ ಇದೆ. ಅಲ್ಲೇ ನೀರಿದೆ ಅಂತಾರೆ, ಮತ್ತಲ್ಲಿ ಮರಾನೂ ಇದೆ ಅಂತಾರೆ”

“ಸುಮ್ನೆ ಅವರ ಜೊತೆ ಏನು ಮಾತು. ನೀರು ಹುಡುಕ್ತಾ ಇಷ್ಟು ದೂರಾನೇ ಬಂದಿದ್ದೀವಿ. ಇನ್ನೂ ಮುಂದೆ ಹೋಗೋಣ ನಡೀರಿ. ಎಲ್ಲಾದ್ರೂ ನೀರು ಸಿಕ್ಕಿದ್ರೂ ಸಿಕ್ಕಬಹುದು”, ಎರಡನೆಯವನು ಹೇಳಿದ.

ಎರಡನೆಯವನು ಮತ್ತು ಅತಿಯಾಗಿ ದಣಿದಿದ್ದ ಮೂರನೆಯವನು ಇಬ್ಬರೂ ಏನೂ ಮಾತಾಡಲಿಲ್ಲ. ಒಂದನೆಯವನೇ ಮಾತು ಮುಂದುವರೆಸಿದ –

“ನಾವು ನೀರು ಹುಡುಕೋಕೆ ಶುರು ಮಾಡಿ ಅದೆಷ್ಟು ದಿವಸ, ಎಷ್ಟು ತಿಂಗಳು, ಎಷ್ಟು ವರ್ಷ ಆಯ್ತು ಅನ್ನೋದೇ ಗೊತ್ತಿಲ್ಲ”.

ಮೂರನೆಯವನು ಗೊಣಗುತ್ತಲೇ ಇದ್ದ. “ಸರಿಯಾಗಿ ನೋಡೋಣ, ಅವರು ಹೇಳಿದ್ದು ಸರಿಯಿರಬಹುದು. ಬಿಸಿಲಿನಿಂದ ನಮ್ಮ ಬುದ್ದಿ ಮಂದವಾಗಿರಬಹುದು. ಹಾಗಾಗುತ್ತೆ ಕೆಲವೊಂದು ಸಲ”…

ಉಳಿದವರಿಬ್ಬರೂ ಅವನ ಮಾತಿಗೆ ಗಮನ ಕೊಡದೆ ಮುಂದೆ ನಡೆಯತೊಡಗಿದರು. ಅವನೂ ವಿಧಿಯಿಲ್ಲದೆ ಒಲ್ಲದ ಮನಸ್ಸಿನಿಂದ ಅವರನ್ನು ಹಿಂಬಾಲಿಸಿದ.

“ಹೋಗಿ, ಹೋಗಿ, ಇಲ್ಲಿ ಬಿಟ್ರೆ ಅದಿನ್ನೆಲ್ಲಿ ನೀರು ಸಿಗುತ್ತೋ ನೋಡೋಣ. ನೀರು ಸಿಗದೆ ನಾಲಿಗೆ ಒಣಗಿ ಚಕ್ಕಳವಾದಾಗ ಇಲ್ಲಿಗೇ ಬರ್ತೀರ. ನಮ್ಮ ನೀರೇ ಬೇಕಾಗುತ್ತೆ. ಆವಾಗ ಗೊತ್ತಾಗುತ್ತೆ, ಯಾರಿಗೆ ಹುಚ್ಚು ಅಂತ” ಅವರ ಬೆನ್ನ ಹಿಂದಿನಿಂದ ಛಾಯಾಸಿಂಗ್‍ನದ್ದೋ ಬಾರಿಶ್‍ವಾಲಾನದ್ದೋ ಧ್ವನಿ ಕೇಳಿಸುತ್ತಾ ಇತ್ತು… ಅವರಿಬ್ಬರೂ ಎಂದಿನಂತೆ ನೀರು ಕಾಯುತ್ತಾ ಕೂತರು.

ಆ ಮೂವರು ನೀರು ಹುಡುಕುವ ಛಲದಿಂದ ಮತ್ತೆ ಬಹಳ ದೂರ ಬಂದಿದ್ದರು. ಅವರ ಹುಡುಕಾಟ ಸಫಲವಾಗುವ ಯಾವ ಸೂಚನೆಗಳೂ ಕಂಡಿರಲಿಲ್ಲ. ಬಿಸಿಲು ಮಾತ್ರ ಹಾಗೇ ಇತ್ತು. ಅದೊಂದು ವಿಚಿತ್ರ ಮರುಭೂಮಿ; ಹಗಲೂ ಸೆಖೆ, ರಾತ್ರಿಯೂ ಸೆಖೆ.

ಮೂರನೆಯವನ ಬಳಲಿಕೆ ಅವನನ್ನು ಸಾವಿನ ಹತ್ತಿರ ತಂದಿತ್ತು. ಬುದ್ಧಿ ನಿಜವಾಗಿಯೂ ಮಂಕಾಗತೊಡಗಿತ್ತು. ಒಂದೊಂದು ಹೆಜ್ಜೆಯನ್ನಿಡಲೂ ಯುಗಗಳೇ ಬೇಕಾಗುತ್ತಿವೆಯೇನೋ ಅನ್ನಿಸತೊಡಗಿತ್ತು. ಉಳಿದಿಬ್ಬರೂ ಅವನಿಗೆ ಯಾವ ಬಗೆಯಲ್ಲೂ ಸಹಾಯ ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ – ಅವನಿಗೆ ಬೇಕಾಗಿದ್ದುದು ನೀರು. ಊಹುಂ… ಕಾಲೆತ್ತಲೂ ಅವನಿಂದ ಆಗುತ್ತಿಲ್ಲ… ಅಲ್ಲೇ ಕುಸಿದು ಬಿದ್ದ. ಅದು ಅವನ ಕೊನೆಯ ಕ್ಷಣ. ಆಗಲೂ ಅವನದೊಂದೇ ಕನವರಿಕೆ –

“ಅಲ್ಲಿ ನೀರಿತ್ತೋ ಏನೋ, ಅವರು ಹೇಳಿದ್ದು ನಿಜ. ನಾವೇ ಸರಿಯಾಗಿ ನೋಡ್ಲಿಲ್ಲ. ನೀರಿತ್ತು ಅಲ್ಲಿ… ನೀರಿತ್ತು…” ಅವನು ಕೊನೆಯುಸಿರೆಳದಿದ್ದ.

ಉಳಿದಿಬ್ಬರೂ ಕಣ್ಣೆವೆಯಿಕ್ಕುವಷ್ಟರಲ್ಲಿ ಸ್ತಬ್ಧವಾಗಿ ಹೋದ ಈ ದೇಹದ ಬಳಿ ಹಾಗೇ ಮಾತಿಲ್ಲದೆ ಕುಳಿತುಬಿಟ್ಟರು. ಏನು ಮಾತಾಡಲೂ ತೋಚುತ್ತಿಲ್ಲ. ಸುತ್ತ ಎತ್ತ ನೋಡಿದರೂ ವಿಶಾಲವಾದ ಮರುಭೂಮಿ ಅವರನ್ನು ಹಾಗೇ ನುಂಗಿಹಾಕಲು ಬಾಯಿ ತೆರೆದಂತಿತ್ತು. ಸತ್ತವನ ಕೊನೆಯ ಮಾತೇ ಅವರ ಕಿವಿಗಳಲ್ಲಿ ಪ್ರತಿಧ್ವನಿಸುತ್ತಿತ್ತು. ಅವರು ಅದುವರೆಗೂ ನೀರಿಗಾಗಿ ನಡೆಸಿದ ವಿಫಲ ಹುಡುಕಾಟದ ನೆನಪು ಅವರ ಮನಸುಗಳ ಮೂಲೆಯಲ್ಲೆಲ್ಲೋ ಒಣಗಿ ಬರಲಾಗಿ ನಿಂತ ಮರದಂತಿತ್ತು. ಬಿಸಿಲಿನ ಧಗೆ ಆ ಮನಸುಗಳಲ್ಲಿ ಇದ್ದಕ್ಕಿದ್ದಂತೆ ನೀಲಿಯ ಹೊಗೆ ಭುಗಿಲೇಳುವಂತೆ ಮಾಡಿತು. ತೆರೆದೇ ಇದ್ದ ಸತ್ತವನ ಕಣ್ಣುಗಳನ್ನೇ ನೋಡುತ್ತಾ ಇಬ್ಬರೂ ಎದ್ದು ನಿಂತರು. ಆ ಕಣ್ಣುಗಳಲ್ಲಿ ಇನ್ನೂ ಅಲೆಗಳ ಹೊಯ್ದಾಟ ನಿಂತಂತಿರಲಿಲ್ಲ.

“ನಡಿ, ಅಲ್ಲಿಗೇ ಹೋಗೋಣ, ಇವನು ಹೇಳಿದ್ದು ನಿಜವಿರಬಹುದು. ಅವರಿಬ್ರೂ ಇದ್ರಲ್ಲ ಅಲ್ಲಿ ನೀರಿದೆ ಅನ್ಸುತ್ತೆ… ನಾವೇ ಸರಿಯಾಗಿ ನೋಡಿಲ್ಲ…” ಒಂದನೆಯವನು ಹೇಳಿದ.

ಎರಡನೆಯವನು ಮರುಮಾತಿಲ್ಲದೆ ಅವನನ್ನು ಹಿಂಬಾಲಿಸಿದ. ಆ ಮರುಭೂಮಿಯಲ್ಲಿ ಒಮ್ಮೆ ಬಂದ ದಾರಿಯಲ್ಲಿ ಮತ್ತೆ ಹಿಂತಿರುಗಿ ಹೋಗುವುದು ಸಾಧ್ಯವೇ ಇಲ್ಲ. ಹಾಗೇ ನಡೆಯುತ್ತಾ ಆ ವಿಶಾಲವಾದ ಮರಳಿನ ಕಡಲಿನಲ್ಲಿ ಅವರೆಲ್ಲೋ ಕಳೆದುಹೋದರು.

ಅದೇ ಮರುಭೂಮಿಯ ಮತ್ತೊಂದು ಕಡೆ ಇಬ್ಬರು ಯುವಕರು ಉತ್ಸಾಹದ ಹೆಜ್ಜೆಗಳೊಂದಿಗೆ ನಡೆದು ಬರುತ್ತಿದ್ದರು. ಕಾದ ಮರಳಿನ ಒಡಲೊಳಗಿಂದ ಚಿಮ್ಮುವ ನೀರಿನ ಬುಗ್ಗೆಯ ಬಗ್ಗೆ ಅವರ ಮಾತು ನಡೆದಿತ್ತು. ಹಾಗೇ ಮಾತಿನಲ್ಲಿ ಮಗ್ನರಾಗಿ ಬರುತ್ತಿದ್ದ ಅವರಿಗೆ ಮರಳಿನಲ್ಲಿ ಅರ್ಧ ಮುಚ್ಚಿಹೋಗಿದ್ದ ಎರಡು ಅಸ್ಥಿಪಂಜರಗಳು ಕಂಡವು – ಛಾಯಾಸಿಂಗ್ ಮತ್ತು ಬಾರಿಶ್‍ವಾಲಾ ಎಂಬ ಎರಡು ದೇಹ ಹಾಗೂ ಆತ್ಮಗಳನ್ನು ಈ ಹಿಂದೆ ಹೊತ್ತಿದ್ದ ಅವು ಈಗ ಹೆಸರಿಲ್ಲದ ಬರಿಯ ಅಸ್ಥಿಪಂಜರಗಳಾಗಿದ್ದವು.

ಒಬ್ಬ ಕೇಳಿದ – “ಇಲ್ನೋಡು, ಇವು ಯಾರದ್ದಿರಬಹುದು?”

“ಹೇಗೆ ಹೇಳೋಕಾಗುತ್ತೆ. ಮನುಷ್ಯರು ಹೆಸರಿಡೋದು ರಕ್ತ, ಮಾಂಸ, ತೊಗಲು ಮತ್ತು ಜೀವ ಇರೋ ದೇಹಕ್ಕಷ್ಟೇ. ಜೀವ ಹೋಗಿ ಅವು ಕೊಳೆತು ಕರಗಿ ಹೋದ ಮೇಲೆ ಉಳಿಯೋದಕ್ಕೆಲ್ಲ ಒಂದೇ ಹೆಸರು. “ಮೂಳೆ” ಅಂತ. ಇವು ಯಾರದ್ದಾದ್ರೂ ಆಗಿರ್ಲಿ ನಮಗೇನಂತೆ. ನಡಿ ಹೋಗೋಣ. ಅವುಗಳಿಂದ ನಮಗೇನೂ ಪ್ರಯೋಜನ ಇಲ್ಲ”. ಇನ್ನೊಬ್ಬ ಹೇಳಿದ.

ಆ ಮೂಳೆಗಳನ್ನು ಅವುಗಳ ಪಾಡಿಗೆ ಬಿಟ್ಟು ಮುಂದೆ ನಡೆಯಲಾರಂಭಿಸಿದರು. ಮೂಳೆಗಳು ಮಣ್ಣಾಗುವುದನ್ನೇ ಎದುರು ನೋಡುತ್ತಿರುವಂತೆ ಮೂಕವಾಗಿ ಬಿದ್ದಿದ್ದವು. ಅವರು ಹಾಗೆ ಬಹಳ ದೂರ ನಡೆದ ಮೇಲೆ ದೂರದಲ್ಲಿ ಯಾರೋ ಇಬ್ಬರು ಕುಳಿತಿರುವುದು ಕಂಡಿತು. ಇಬ್ಬರೂ ಬೇಗ ಬೇಗ ಹೆಜ್ಜೆ ಹಾಕುತ್ತಾ ಅಲ್ಲಿಗೆ ಹೋದರು.

ಒಂದನೆಯವನು ಮತ್ತು ಎರಡನೆಯವನು ಅದೇನೋ ಮಾತಾಡಿಕೊಳ್ಳುತ್ತಾ ಕುಳಿತಿದ್ದರು. ದೂರದಿಂದ ವೇಗವಾಗಿ ಇಬ್ಬರು ಯುವಕರು ಅವರ ಬಳಿಗೆ ಬಂದು ನಿಂತರು. ಅವರಲ್ಲಿ ಒಬ್ಬ ಕೇಳಿದ – “ನೋಡಿ, ನಾವು ಮರುಭೂಮಿಯಲ್ಲಿ ನೀರಿನ ಬುಗ್ಗೆಯನ್ನು ಹುಡುಕ್ತಾ ಇದ್ದೀವಿ. ನಿಮಗೇನಾದ್ರೂ ಗೊತ್ತಾ? ಗೊತ್ತಿದ್ರೆ ದಯವಿಟ್ಟು ಹೇಳಿ”.

ಎರಡನೆಯವನಿಗೆದುರಾಗಿ ಕುಳಿತಿದ್ದ ಒಂದನೆಯವನು ಠೀವಿಯಿಂದ ಹೇಳಿದ – “ಅಯ್ಯೋ, ಎಲ್ಲೆಲ್ಲೋ ಯಾಕೆ ಹುಡುಕ್ಕೊಂಡು ಹೋಗ್ತೀರಿ. ನೋಡಿ. ನೀರು ಇಲ್ಲೇ ಇದೆ. ಪಕ್ಕದಲ್ಲೇ ಮರಾನೂ ಇದೆ. ಬನ್ನಿ, ನೀರು ಕುಡಿದು ನೆರಳಲ್ಲಿ ವಿಶ್ರಮಿಸಿ. ಇಲ್ಲೇ ನಮ್ಮ ಜೊತೇಲೇ ಇದ್ಬಿಡಿ ನೀರು ಕಾಯ್ಕೊಂಡು”.

ಯುವಕರು ತಬ್ಬಿಬ್ಬಾದರು – ಅಲ್ಲೆಲ್ಲೂ ನೀರಿರಲಿಲ್ಲ. ಮರವೂ ಇರಲಿಲ್ಲ. ಬರೀ ಮರಳು, ಬಿಸಿಲು…

‍ಲೇಖಕರು Avadhi

September 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಾನೂ ‘ಲಂಕೇಶ್ ಪತ್ರಿಕೆ’ ಓದಿದೆ..

ನಾನೂ ‘ಲಂಕೇಶ್ ಪತ್ರಿಕೆ’ ಓದಿದೆ..

ಅನುಪಮಾ ಪ್ರಸಾದ್ ನಾನಾಗ ಹತ್ತನೇ ತರಗತಿಯಲ್ಲಿದ್ದಿರಬೇಕು. ಮನೆಯಿಂದ ಶಾಲೆಗೆ ಬರುವ ಕಾಲುದಾರಿಯ ಒಂದು ತಿರುವಿನಲ್ಲಿ ನನಗಿಂತ ಎರಡು ಮೂರು...

ಕ್ಯಾಮೆರಾ ಹಿಡಿದು ಹಕ್ಕಿಗಳ ಹಿಂದೆ..

ಕ್ಯಾಮೆರಾ ಹಿಡಿದು ಹಕ್ಕಿಗಳ ಹಿಂದೆ..

ಎಂ ಆರ್ ಭಗವತಿ ಕೋಳಿ ಮೊಟ್ಟೆಯನ್ನೊಡೆದು, ಮೇಲಿನ ಚಿಪ್ಪನ್ನು ಸ್ವಲ್ಪ ತೆಗೆದು, ಒಳಗೆ ಹತ್ತಿಯನಿಟ್ಟು, ಪಿಳಿಪಿಳಿ ಕಣ್ಣನು ಬರೆದು, ಕೆಂಪು...

ನಟೋರಿಯಸ್ ಕೈದಿಗಳ ಜೊತೆಯಲ್ಲಿ..

ನಟೋರಿಯಸ್ ಕೈದಿಗಳ ಜೊತೆಯಲ್ಲಿ..

ಹುಲುಗಪ್ಪ ಕಟ್ಟೀಮನಿ ಸೆಪ್ಟೆಂಬರ್‍ 19 ಬಿ.ವಿ.ಕಾರಂತರ ಜನ್ಮದಿನ. ರಂಗಭೂಮಿಯಲ್ಲಿರುವವರಿಗೆ ಕಾರಂತರ ನೆನಪೇ ಒಂದು ರೋಮಾಂಚನ. ಅವರ...

೧ ಪ್ರತಿಕ್ರಿಯೆ

  1. Shyamala Madhav

    ಬಗೆಗಣ್ಣೆದುರು ಮರುಭೂಮಿಯನ್ನೇ ಸೃಷ್ಟಿಸಿದ ಕಥೆ! ಮರೆಯಲಾಗದು!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: