ಓಹ್ ಇಂದು ಎಂದಿನಂತಲ್ಲ…

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ.

ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು.

ರಂಗ ಮಂಟಪತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ಗಾಂಧಿ ಬಂದನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ಅಕ್ಕುಅಮ್ಮಚ್ಚಿ ಎಂಬ ನೆನಪು ಆಗಿ ಚಿತ್ರ ನಿರ್ದೇಶಕಿಯೂ ಆದರು.ಒಂದು ಸುಂದರ ಕಾವ್ಯದಂತಿರುವ ಅಮ್ಮಚ್ಚಿ ಎಂಬ ನೆನಪುತೆರೆಯ ಮೇಲೆ ಅರಳಿದ ಕಥೆ ನಿಮ್ಮ ಮುಂದೆ..

ಜನವರಿ 21″ಅಕ್ಕು” ಮೊದಲ ಪ್ರದರ್ಶನ…. ರಾತ್ರಿಯಿಡೀ ಅಮ್ಮನೊಟ್ಟಿಗೆ ಕುಳಿತು ಅವಳನ್ನು ಬೀಳ್ಕೊಡುವ ಗಳಿಗೆ ಇನ್ನೇನು ಬಂದುಬಿಡುತ್ತದೆ ಎಂಬುದನ್ನು ನಂಬಲು ಆಗದಿದ್ದರೂ, ಅದು ಸತ್ಯ , ನಂಬಲೇ ಬೇಕೆನ್ನುವ ತೊಳಲಾಟದಲ್ಲೇ ಬೆಳಕು ಹರಿದಿತ್ತು. ಪೇಪರ್ ಹಾಕುವ ಹುಡುಗ ಎಂದಿನಂತೆ ಪ್ರಜಾವಾಣಿಯನ್ನು ಗೇಟ್ ಒಳಗೆ ಎಸೆದು ಹೋಗಿದ್ದ… ಯಾರೋ ಬಂದು ಅದನ್ನು ನನ್ನ ಕೈಗಿತ್ತರು, ಅಂದು ಮೆಟ್ರೋದಲ್ಲಿ “ರಂಗಶಂಕರದಲ್ಲಿ ಅಕ್ಕು ಮಂಡನೆ” ಎಂಬ ಶೀರ್ಷಿಕೆಯೊಂದಿಗೆ “ಜಿ ಎನ್ ಮೋಹನ್” ಸರ್ ಲೇಖನ ಪ್ರಕಟವಾಗಿತ್ತು ..ನಗುತ್ತಿರುವ ನನ್ನ ಫೋಟೋದೊಂದಿಗೆ…..

ಎಂದಿನಂತಿದ್ದರೆ, “ಚಂಪೂ, ನಿನ್ನ ನಾಟಕದ ಬಗ್ಗೆ ಪೇಪರ್ ನಲ್ಲಿ ಬಂದಿದೆ. ಫೋಟೋನೂ ಹಾಕಿದ್ದಾರೆ ನೋಡಿದ್ಯಾ? ” ಅಂತಾ…ಬೆಳಿಗ್ಗೆಯೇ ಅಮ್ಮನ ಕಾಲ್ ಬರುತ್ತಿತ್ತು ಆದರೆ ಅಂದು ಎಂದಿನಂತಿರಲಿಲ್ಲ, ಯಾರಿಗೂ ಕಾಣದ ಹಾಗೆ ಪೇಪರನ್ನು ಲೇಖನ ಕಾಣುವ ಹಾಗೆ ಮಡಚಿ, ಅಮ್ಮನ ಬದಿಯಲ್ಲಿರಿಸಿದ್ದೆ,.. ಕಡೆಗೂ ನನಗೆ ಬೇಡವಾದ ಗಳಿಗೆ ಬಂದುಬಿಟ್ಟಿತು 12 ಗಂಟೆಯ ಸುಮಾರಿಗೆ ಅಮ್ಮನನ್ನು ಕಳುಹಿಸಿಕೊಟ್ಟು… ಸ್ನಾನ ಮಾಡಿದ ಕೂಡಲೇ ರಂಗಶಂಕರಕ್ಕೆ ಹೊರಟಿದ್ದೆ…ಅಂದು ಹಾಗೆ ಹೊರಟಿದ್ದು ನನ್ನ ಭಂಡತನವೇನೋ ಗೊತ್ತಿಲ್ಲ ಆದರೆ, ನನ್ನನ್ನು ಕಾಳಜಿಯಿಂದ ಕಳುಹಿಸಿಕೊಟ್ಟಿದ್ದು, ನನ್ನ ತವರಿನ ಹಿರಿತನ ….

ರಂಗಶಂಕರಕ್ಕೆ ಬಂದಾಗ 3.30 ರ ಸುಮಾರು.. ಕಲಾವಿದರೆಲ್ಲಾ ತಯಾರಾಗುತ್ತಿದ್ದರು. ಕಡೇ ಗಳಿಗೆಯ ಕೆಲ ಸಲಹೆಗಳನ್ನು ನೀಡಿ, ಸರ್ಕಲ್ ಮಾಡಿ ಪ್ರಾರ್ಥನೆ ಮುಗಿಸಿ ಕೆಳಗೆ ಬರುವಷ್ಟರಲ್ಲಿ ಪ್ರೇಕ್ಷಕರು ಆವರಣದಲ್ಲಿ ಸೇರಿಬಿಟ್ಟಿದ್ದರು… ನಾನು ಎಂದಿನಂತೆಯೇ ಎಲ್ಲರನ್ನೂ ಮಾತನಾಡಿಸುತ್ತಿದ್ದೆ … ಕಪ್ಪಣ್ಣ ಸರ್ ಬಂದಾಗ ಕೂಡಾ ಖುಷಿಯಾಗಿ ಬರಮಾಡಿಕೊಂಡು , “ಸರ್ ತಿಂಡಿ ತುಂಬಾ ಚೆನ್ನಾಗಿತ್ತು ಸರ್ ಎಲ್ಲರೂ ಹೇಳಿದ್ರು” ಅಂತ ಅಂದಿನ ಸಂಜೆಯ ತಿಂಡಿ ಅವರೇ ಕೊಡಿಸಿದ್ದಕ್ಕಾಗಿ ಧನ್ಯವಾದ ಹೇಳಿದೆ,,ಅವರು ಅದಕ್ಕೆ ರಿಯಾಕ್ಟ್ ಮಾಡದೇ ನನ್ನನ್ನು ಆಶ್ಚರ್ಯದಿಂದ ನೋಡಿದರು.. ಆಗಲೇ ನನಗೆ ಅರಿವಾದದ್ದು , ಓಹ್ ಇಂದು ಎಂದಿನಂತಲ್ಲ ಎಂದು..

ಏನು ಮಾಡಲಿ ನಾನೆಷ್ಟೇ ಪ್ರಯತ್ನಸಿದರೂ ಆಗಿದ್ದನ್ನು ನನ್ನಿಂದ ಒಪ್ಪಲಾಗುತ್ತಿಲ್ಲ, ದುಃಖವೂ ಬರುತ್ತಿಲ್ಲ, ಕಪ್ಪಣ್ಣ ಸರ್ ಅವರ ಹಾಗೆಯೇ ಎಷ್ಟು ಜನ ನನ್ನನ್ನು ಹಾಗೇ ವಿಚಿತ್ತವಾಗಿ ನೋಡಿರಬಹುದು ಎನಿಸಿತು.. ಕಲಾವಿದರು ವೇದಿಕೆಯ ಮೇಲೆ ಅಭಿನಯಿಸಲು ಸಿದ್ಧವಾಗುತ್ತಿದ್ದರೆ, ನಾನು ಅಲ್ಲಿ ಎಲ್ಲರ ಮುಂದೆ ದುಃಖವನ್ನು ಅಭಿನಯಿಸಬೇಕಿತ್ತು .. ಅದು ನನ್ನಿಂದ ಸಾಧ್ಯವಾಗದೆ ಸೀದಾ ಲೈಟಿಂಗ್ ರೂಮ್ ಗೆ ಬಂದೆ, ಕೆಲವೇ ನಿಮಿಷದಲ್ಲಿ ನಾಟಕ ಆರಂಭವಾಯಿತು ಅರುಣನ (ಲೈಟಿಂಗ್) ಬಗ್ಗೆ ಸಂಪೂರ್ಣ ನಂಬಿಕೆಯಿದ್ದ ಕಾರಣ, ಅವನಿಗೆ ವಿಷ್ ಮಾಡಿ, ಆಡಿಟೋರಿಯಂನ ಕಡೆಯ ಸಾಲಿಗೆ ಬಂದು ಕುಳಿತೆ.

ಮೊದಲನೆಯ ದೃಶ್ಯ ಮುಗಿದು ಎರಡನೇ ದೃಶ್ಯ ಆರಂಭವಾಗುವ ಹೊತ್ತಿಗೆ, ನನ್ನೊಳಗೆ ಹೇಳಿಕೊಳ್ಳಲಾಗದ ಸಂಕಟ ಶುರುವಾಗಿತ್ತು…ಜಗತ್ತೇ ಖಾಲಿ ಖಾಲಿ ನಾಟಕ, ಕಲಾವಿದರು, ಅಭಿನಯ , ಸಂಗೀತ ಯಾವುದೂ ಕಾಣುತ್ತಿಲ್ಲ, ಕೇಳುತ್ತಿಲ್ಲ… ಯಾಕೋ ಅಲ್ಲಿ ಕೂರಲಾಗದೇ ಲೈಟಿಂಗ್ ರೂಮ್ ನ ಹೊರಗಿನ ಪ್ಯಾಸೇಜ್ ನಲ್ಲಿ ಬಂದು ಒಬ್ಬಳೇ ಕೂತೆ.. ಒಂಥರಾ ಸಂಕಟ ಹಸಿವಾ ? ನಿದ್ದೆಯಾ? ಏನಾಗಿದೆ? ಏನಾಗುತ್ತಿದೆ? ಯೋಚಿಸುವಾಗ ಎಲ್ಲವೂ ಒಂದೊಂದಾಗಿ ಅರಿವಿಗೆ ಬರಲು ಶುರುವಾಗಿತ್ತು.

ಕಣ್ಣು ಕತ್ತಲೆ ಬಂದಂತಾಗಿ ಕುಳಿತಲ್ಲಿಯೇ ಕಣ್ಣು ಮುಚ್ಚಿದ್ದೆ….. ಒಮ್ಮೆಲೇ ಜೋರಾದ ಚಪ್ಪಾಳೆಗಳ ಸದ್ದಿಗೆ ಎಚ್ಚರವಾದಾಗ ನಾಟಕ ಮುಗಿದಿತ್ತು .. ಕಿಟಕಿಯಿಂದ ನೋಡಿದೆ, ನಿಂತು ತಟ್ಟುತ್ತಿದ್ದ ಪ್ರೇಕ್ಷಕರ ಚಪ್ಪಾಳೆ “ಅಕ್ಕು” ಗೆದ್ದಿದ್ದಾಳೆ ಎಂದು ತಿಳಿಸುತ್ತಿತ್ತು .. “ನಾಟಕ ನೋಡಲು ಕರೆಯಬೇಡವೇ” ಎಂದ ವೈದೇಹಿ ಮೇಡಂನನ್ನು ಮೊದಲ ಪ್ರದರ್ಶನದಲ್ಲಿ ನಾನು ಮಿಸ್ ಮಾಡಿಕೊಳ್ಳುತ್ತೇನೆ ಅಂದುಕೊಂಡಿದ್ದೆ, ಆದರೆ, ಆ ಮೊದಲ ಪ್ರದರ್ಶನವನ್ನು ಅಮ್ಮನ ಜೊತೆ ನಾನೂ ಮಿಸ್ ಮಾಡಿಕೊಂಡುಬಿಟ್ಟಿದ್ದೆ……

ಈ ಒಂದು ಆಕಸ್ಮಿಕದ ಬೆನ್ನಲ್ಲೇ ಖುಷಿಯಾದ ಸಂಗತಿಯೊಂದು ತಂಡಕ್ಕೆ ಸಮಾಧಾನ ತಂದಿತ್ತು . ಮೊದಲ ಪ್ರದರ್ಶನದಲ್ಲಿಯೇ ಗೆದ್ದ “ಅಕ್ಕು” ತಕ್ಷಣವೇ ಹೊರಟಿದ್ದು ದೂರದ ಮುಂಬೈಗೆ… ನಮ್ಮ ತಂಡದ ಯಾವುದೇ ನಾಟಕವಿರಲಿ ಅದು “ದೆಹಲಿ ಕರ್ನಾಟಕ ಸಂಘ” ಮತ್ತು “ಮುಂಬೈ ಕರ್ನಾಟಕ ಸಂಘ”ಗಳಲ್ಲಿ ಪ್ರದರ್ಶನವಾಗಲೇಬೇಕು ಅನ್ನುವಷ್ಟು ಪ್ರೀತಿ ಆ ಎರಡೂ ಸಂಘಗಳಿಗೆ … ಹಾಗೇ..ಮುಂಬೈಗೆ ಬಂದಮೇಲೆ ನಮ್ಮೂರಿಗೆ ಬರಲೇಬೇಕೆನ್ನುವ ಹಟ “ವಸೈ ಕರ್ನಾಟಕ ಸಂಘ”ಕ್ಕೆ.”ಅಕ್ಕು” ನಾಟಕ ನಿರ್ಮಾಣವಾಗಲು ಆರ್ಥಿಕ ಬಲ ನೀಡಿದ್ದೂ ಕೂಡ “ವಸೈ ಕರ್ನಾಟಕ ಸಂಘ”.

ಅಂತಯೇ, “ಅಕ್ಕು” ಎರಡು ಮತ್ತು ಮೂರನೇ ಪ್ರದರ್ಶನಕ್ಕಾಗಿ ಮುಂಬೈಗೆ ಹೊರಟಿದ್ದಳು…ಖುಷಿಯ ಸಂಗತಿಯೆಂದರೆ ಮುಂಬೈ ಕರ್ನಾಟಕ ಸಂಘದ ಕಾರ್ಯಕ್ರಮಕ್ಕೆ ವೈದೇಹಿ ಮೇಡಮ್ಮೇ ಮುಖ್ಯ ಅತಿಥಿ… ಹಾಗಾಗಿ ಅವರು ನಾಟಕ ನೋಡಿ, ತಮ್ಮ ಷರತ್ತನ್ನು ತಾವೇ ಮುರಿಯುವ ಸಂದರ್ಭ ಅನಿವಾರ್ಯವಾಗಿ ಒದಗಿಬಂದಿತ್ತು. ಇದು ಇಡೀ ತಂಡಕ್ಕೆ ಹುರುಪನ್ನು ತಂದಿದ್ದರೆ, ನನಗೆ ಖುಷಿಯ ಜೊತೆ ಸಣ್ಣ ಆತಂಕವನ್ನೂ ಉಂಟುಮಾಡಿತ್ತು. ನಾಟಕ ನೋಡಿ ಮೇಡಮ್ ಏನನ್ನುವರೋ ಎನ್ನುವ ಭಯ ನನಗೆ…

“ಮುಂಬೈ ಕರ್ನಾಟಕ ಸಂಘ”ದಲ್ಲಿ “ಅಕ್ಕು” ಪ್ರದರ್ಶನ, ಅಂತೂ ವೈದೇಹಿ ಮೇಡಮ್ ಉಪಸ್ಥಿತಿಯಲ್ಲೇ ನಡೆಯಿತು. ನಾಟಕ ಮುಗಿದ ಕೂಡಲೇ ವೇದಿಕೆಗೆ ಬಂದ ಅವರು ನನ್ನನ್ನು ಅಪ್ಪಿಕೊಂಡು, “ನನ್ನನ್ನ ಅಳಿಸಿಬಿಟ್ಯಲ್ಲೇ” ಅಂದು, ಕಲಾವಿದರನ್ನೆಲ್ಲಾ ಅಭಿನಂದಿಸಿ, “ನಾನು ಕತೆ ಬರೆದದ್ದು ಸಾರ್ಥಕ‌ ಅನಿಸಿತು ಕಣೇ” ಅಂತ ಬಹು ದೊಡ್ಡ ಮಾತನ್ನು ಆಡಿಬಿಟ್ಟರು…

ಲೇಖಕರಿಂದ ಸಿಕ್ಕಿದ ಈ ಪ್ರಶಂಸೆಗಿಂತ ಮತ್ತೇನು ಬೇಕು ಒಬ್ಬ ನಿರ್ದೇಶಕರಿಗೆ?…ಅಲ್ಲದೆ, ಮರುದಿನವೇ ಇದ್ದ “ವಸೈ ಕರ್ನಾಟಕ ಸಂಘ”ದ ಪ್ರದರ್ಶನವನ್ನೂ ದಂಪತಿ ಸಮೇತರಾಗಿ ವೀಕ್ಷಿಸಿ, ಮೆಚ್ಚಿ ಪ್ರೋತ್ಸಾಹಿಸಿದ್ದರು… ಮಗಳು ಪಲ್ಲವಿ “ನನ್ನ ಅಮ್ಮನ ಎಪ್ಪತ್ತನೆಯ ಹುಟ್ಟು ಹಬ್ಬಕ್ಜೆ ನಿಮ್ಮ ತಂಡ ನೀಡಿದ ಅದ್ಭುತ ಕೊಡುಗೆ “ಅಕ್ಕು” ನಾಟಕ ಎಂದು ಹೇಳಿ ಇಡೀ ತಂಡವನ್ನು ಸಂಭ್ರಮದಲ್ಲಿ ಮುಳುಗಿಸಿಬಿಟ್ಟರು. ಇದು ನಿಜಕ್ಕೂ ತಂಡದ ಬಲವನ್ನು ಹೆಚ್ಚಿಸಿತ್ತು….‌

ಮುಂದೆ ದೇಶಾದ್ಯಂತ ಸಂಚರಿಸಿ ನಲವತ್ತೆಂಟು ಪ್ರದರ್ಶನಗಳನ್ನು ನೀಡಿ ಸೈ ಎನಿಸಿಕೊಂಡಳು “ಅಕ್ಕು”…. ವೈದೇಹಿ ಮೇಡಂಗೆ, ನಾನು “ಒಮ್ಮೆ ನೀವು ನಾಟಕವನ್ನು ರಂಗಶಂಕರದಲ್ಲಿ ನೋಡಬೇಕು ಮೇಡಂ” ಅಂತ ಆಸೆಯಿಂದ ಅಂದದ್ದೇ,, ಮುಂದಿನ ರಂಗಶಂಕರದ ಶೋ ಗೆ ಮಣಿಪಾಲದಿಂದ ಬಂದು, ಒಂದೇ ದಿನದ ಎರಡು ಶೋಗಳನ್ನೂ ನೋಡಿ, ತಂಡದ ಜೊತೆಗೆ ಅವರು ಕಳೆದ ಆ ಗಳಿಗೆಗಳು.. ನಿಜಕ್ಕೂ ಅವಿಸ್ಮರಣೀಯ …

ಮೂರು ಕತೆಗಳನ್ನು ಸೇರಿಸಿ ಮಾಡಿದ ಒಂದು ಪ್ರಯತ್ನ, ವಿವಿಧ ಬಗೆಯ ಪ್ರೇಕ್ಷಕರನ್ನು ಸೆಳೆದು ಈ‌ ಮಟ್ಟಿಗೆ ಯಶಸ್ಸು ಗಳಿಸಿದ್ದು ನಮ್ಮ ತಂಡಕ್ಕೆ ಸಾಕಷ್ಟು ಶಕ್ತಿ ನೀಡಿತ್ತು..ಜೊತೆಗೆ ಇನ್ನೂ ಒಂದಷ್ಟು ಹೊಸತನ್ನು ಮಾಡಬೇಕೆನ್ನುವ ಉತ್ಸಾಹವನ್ನು ನಮ್ಮೊಳಗೆ ತುಂಬಿತ್ತು. ಈ ಉತ್ಸಾಹದ ಪರಿಣಾಮವೇ ಮುಂದೆ “ಅಕ್ಕು” “ಅಮ್ನಚ್ಚಿ”ಯಾಗಿ ‘ಸಿನೆಮಾರಂಗಕ್ಕೆ ಪ್ರವೇಶ ಪಡೆದದ್ದು…….

‍ಲೇಖಕರು ಚಂಪಾ ಶೆಟ್ಟಿ

September 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಶೇಷಗಿರಿ’ಯೆಂಬ ರಂಗಪಟ್ಟಣ

‘ಶೇಷಗಿರಿ’ಯೆಂಬ ರಂಗಪಟ್ಟಣ

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ...

ಅಣಬೆ ­ಎದ್ದವು ­ನೋಡಿ!

ಅಣಬೆ ­ಎದ್ದವು ­ನೋಡಿ!

'ಅಣಬೆ ಎಂದರೆ ಪಂಚಪ್ರಾಣ' ಎನ್ನುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ‘ನನ್ನ ಕುಪ್ಪಳಿ’...

2 ಪ್ರತಿಕ್ರಿಯೆಗಳು

  1. T S SHRAVANA KUMARI

    ಅಕ್ಕು, ನಾಟಕ ಮತ್ತು ಸಿನಿಮಾ ಎರಡನ್ನೂ ನೋಡಿದ್ದೇನೆ. ಮನ ಕಲಕುವ ಕತೆ, ಸಮರ್ಥ ನಿರ್ದೇಶನ. ಮೂಲ ಕತೆಗಳನ್ನೂ ಓದಿದ್ದೇನೆ. ಅಕ್ಕು ಮನದಲ್ಲೇ ಉಳಿದುಹೋಗಿದ್ದಾಳೆ.

    ಪ್ರತಿಕ್ರಿಯೆ
  2. ಗೀತಾ...

    ಚೆಂದವಿದೆ ಚಂಪಾ ಮೇಡಂ ಅನುಭವಧ್ಯಾನ….

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: