ಓ ಮಳೆಯೆ ಏನು ನಿನ್ನ ಹನಿಗಳ ಲೀಲೆ..

ಮಳೆಗಾಲ

ಪ್ರಭಾತ್ ಭಟ್

ಮತ್ತೆ ಮಳೆಗಾಲ..ಈ ಮಳೆಗಾಲದ ಬಗ್ಗೆ ಪದ್ಯ ಬರೆದ ಕವಿಗಳೆಷ್ಟೋ.. ಬಾಲ್ಯದ ನೆನಪುಗಳನ್ನು ಹೆಕ್ಕಿ ಹಂಚಿದವರೆಷ್ಟೋ..ಮಳೆಯನ್ನು ರೂಪಕವಾಗಿಸಿ ಪ್ರೇಮಪತ್ರಗಳನ್ನು ಬದಲಾಯಿಸಿಕೊಂಡ ಜೋಡಿಗಳೆಷ್ಟೋ.. ನಾನೂ ಸಹ ಕೆಲವೊಂದು ಕಾಲ್ಪನಿಕ ಗೆಳತಿಯರನ್ನಿಟ್ಟುಕೊಂಡು ಮುಂಗಾರಿನ ಕವಿತೆಯಲ್ಲಿ ಜಯಂತ್ ಕಾಯ್ಕಿಣಿಯಾಗಲು ಪ್ರಯತ್ನಿಸಿದ್ದೂ ಇದೆ..ಈ ಮಳೆಗೆ ಏನೋ ಮಾಯಾ ಶಕ್ತಿಯಿದೆ ಅನಿಸುತ್ತದೆ. ಬರಿ ಸುಮ್ಮನೆ ಭೋರೆಂದು ಸುರಿಯುವುದು ನೀರೇ ಆದರೂ ಅದೊಂದು ರೀತಿಯ ಸಡಗರದ ಛಾಯೆ. ಎಲ್ಲೆಲ್ಲೂ ಜೀವಕಳೆಯ ಹಸಿರು. ನಿಸರ್ಗವೂ ಜೀವಂತವಾಗಿದೆಯೆನ್ನುವ ಸಣ್ಣ ಭರವಸೆ. ಈ ಮಳೆರಾಯನಿಗೆ ಹಲವಾರು ಹಗಲುವೇಷ. ಈ ಮಳೆಯೆಂದರೆ ಒಣ ಬಿಸಿಲಲ್ಲಿ ಬರಿ ಕೋಲಾ-ಪೆಪ್ಸಿ ಕುಡಿದವರಿಗೆ ಒಂದು ಬಿಸಿ ಫಿಲ್ಟರ್ ಕಾಫಿಯ ಅರೋಮ. ಪಕ್ಕದ ಚರಂಡಿಯ ನೀರು ರಸ್ತೆಯಮೇಲೆ ಹರಿಯುತ್ತಿದ್ದರೂ ಅವತ್ತಿನ ಮಟ್ಟಿಗೆ ಲೋಕೋಪಯೋಗಿ ಇಲಾಖೆಗೆ ಮಾಫಿ. ಮಳೆ ಎಂಬುದು ಹವಾಮಾನ ಇಲಾಖೆಯ ಮಟ್ಟಿಗೆ ದಿನನಿತ್ಯದ ಸೆಂಟಿಮೀಟರ್ ಅಳತೆ. ಡ್ಯಾಮಿನವರಿಗೆ ಇವತ್ತಿನ ಜಲಾಶಯದ ಮಟ್ಟ. ದಿನಪತ್ರಿಕೆಗೆ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಎಂಬ ಚಿಕ್ಕ ಬಾಕ್ಸ್ ಐಟಂ. ಬೆಳೆ ಬೆಳೆಯುವ ರೈತರಿಗೆ ಜೀವಗಂಗೆ. ವರ್ಷವಿಡೀ ಸಮುದ್ರದಲ್ಲಿರುವ ಮೀನುಗಾರರಿಗೆ ಮಳೆಗಾಲವೆಂದರೆ ವಾರ್ಷಿಕ ಸಾಗರ ವಿರಹ. ಮೂರು ತಿಂಗಳ ತನ್ನನ್ನು ಹಿಡಿಯುವವರಿಲ್ಲ ಎಂದು ನಿರ್ಭೀತಿಯಿಂದ ಅಲೆದಾಡುವ ಮೀನುಗಳಿಗೆ ಸಂತಾನದ ಸಂಭ್ರಮ. ಬಾಯಾರಿದ ಭೂತಾಯಿಗೆ ಬಿಸ್ಲೇರಿ ನೀರು. ನದಿದಡದ ಅಕ್ಕ-ಪಕ್ಕ ಇರುವ ಮಕ್ಕಳಿಗೆ ಪ್ರವಾಹದ ಮುನ್ಸೂಚನೆಯಿಂದ ಶಾಲೆಗೆ ರಜೆಯ ನಿರೀಕ್ಷೆ. ಹಳೆಕಾಲದ ಮೆನೆಯಲ್ಲಿರುವವರಿಗೆ ಸೋರುತ್ತಿರುವ ಹೆಂಚುಗಳ ರಿಪೇರಿಯ ಚಿಂತೆ. ಗುಡಿಸಿಲಿನಲ್ಲಿರುವವರಿಗೆ ಒಳಗೆ ನೀರು ನುಗ್ಗದಂತೆ ತಡೆಯುವ ಹೋರಾಟ. ಬೇಸಿಗೆಯ ಬಿಸಿಲಲ್ಲಿ ಬೆಂದ ಬಡಜೀವಗಳಿಗೆ ತಂಪು ತುಂತುರು. ವಿಜ್ಞಾನ ಕಲಿಸುವ ಟೀಚರ್ ಗೆ ಸಮುದ್ರ ನೀರು ಆವಿಯಾಗಿ ಮೋಡವಾಗಿ ಅದೇನೇನೋ ಆಗುವ water cycle. ಸಂಜೆ ಮನೆಯಲ್ಲಿ ಕೂತು ಮಗ್ಗಿ ಬಾಯಿಪಾಠ ಮಾಡುತ್ತಿರುವ ಮಕ್ಕಳಿಗೆ ಮಿಣುಕುಹುಳುವಿನ ನಿಗೂಢ ಶಕ್ತಿಯ ಬಗ್ಗೆ ಸಣ್ಣ ಪುಳಕ. ರಾತ್ರಿಯಲ್ಲಿ ಬೀಳುವ ಕಪ್ಪು ಮಳೆ ಭಯದ ತವರೂರು. ವರ್ಷವಿಡೀ ಎಲ್ಲೋ ಇದ್ದ ಮಂಡರಗಪ್ಪೆ ಮಳೆಯ ಕುಮ್ಮಕ್ಕಿನೊಂದಿಗೆ ಮನೆಯ ಒಳಗಡೆ ನುಗ್ಗುವ ಚಟ. ಹದಿವಸ್ಸಿನವರಿಗೆ ತಮ್ಮ ಗೆಳತಿಯೊಂದಿಗೆ ಒಂದೇ ಕೊಡೆಯಲ್ಲಿ ತುಸುದೂರ ನಡೆದು ತಾವು ರೊಮ್ಯಾಂಟಿಕ್ ಎಂದು ತೋರಿಸಿಕೊಳ್ಳುವ ತವಕ. ತಮ್ಮ ಮಕ್ಕಳು ಎಲ್ಲಿ ಒದ್ದೆಯಾಗಿ ಬರುತ್ತಾರೋ ಎಂಬ ಅಮ್ಮಂದಿರ ಕಳವಳ. ಇವತ್ತಾದರೂ ಗಂಡ ಬೇಗ ಮನೆಗೆ ಬರಲಿ ಎನ್ನುವ ನವವಿವಾಹಿತೆಯ ಕಾಯುವಿಕೆ. ಬೆಂಗಳೂರಿನ ಐಟಿ ಜನಕ್ಕೆಮಳೆಯೆಂದರೆ ಸಂಜೆ ಕೆಲಸ ಮುಗಿಸಿ ಹೊರಡುವ ಹೊತ್ತಿನಲ್ಲಿ ಮಾತ್ರ ಬರುವ ಪೀಡೆ. ರಸ್ತೆಬದಿಯ ವ್ಯಾಪಾರಿಗೆ ಇವತ್ತಿನ ಲಾಸು. ಪಾನಿಪುರಿಯ ಅಂಗಡಿಯವನಿಗೆ ಒಳ್ಳೆಯ ಕಮಾಯಿ. ಕಡಲತಡಿಯಲ್ಲಿ ಜೀವನ ನಡೆಸುವವರಿಗೆ ಭೋರ್ಗರೆಯುವ ಸಮುದ್ರದ ಇನ್ನೊಂದು ಮುಖದ ಪರಿಚಯ. ಬೇಸಿಗೆಯಲ್ಲಿ ಸುಸ್ತಾಗಿ ಬಸವಳಿದ ನದಿಗೆ ತನ್ನೊಂದಿಗೆ ತಾನು ಸೇರುವ ಸಾಗರವನ್ನೂ ಕೆಂಪುಮಾಡುವ ಬಯಕೆ. ಉಕ್ಕಿದ ನದಿಗೆ ತನ್ನದಲ್ಲದ ಏರಿಯಾಗಳನ್ನು ಒಮ್ಮೆ ಸುತ್ತಿ ಬರುವ ಆಸೆ. ಲಿಂಗನಮಕ್ಕಿ- ಕೃಷ್ಣರಾಜಸಾಗರಗಳಿಗೆ ವರ್ಷಕ್ಕೊಮ್ಮೆ ಬಾಗಿನಕ್ಕೆಂದು ಬರುವ ಮಂತ್ರಿ ಮಹೋದಯರನ್ನು ನೋಡುವ ಕುತೂಹಲ. ಮಳೆಗಾಲ ಯಾಕಾದ್ರೂ ಬಂತಪ್ಪ ಎಂದು ಗೊಣಗುವವರಿಗೆ ಮಳೆಗೆ ಒಂದು ಒಪ್ಪತ್ತಿನ ಬಿಡುವು ಬಂದರೂ ಎಲ್ಲೋಯ್ತಪ್ಪ ಈ ಮಳೆ ಎಂದು ಕಳವಳ. ಮಲೆನಾಡಿನವರಿಗಂತೂ ಈ ಮಳೆಯು ಬಂದರೆ ವಾರಗಟ್ಟಲೆ ತಂಗುವ ನೆಂಟ. ಹೊರಗಡೆ ಹುಚ್ಚು ಹಿಡಿದವರಂತೆ ಮಳೆ ಸುರಿಯುತ್ತಿದ್ದರೆ ಒಳಗೆ ಇಳಿಯುತ್ತಿರುವ ಬಿಸಿ ತೆಳ್ಳೆವು-ಬೆಲ್ಲದ ಕಾಂಬಿನೇಶನನ್ನು ಜಗತ್ತಿನ ಅದ್ಭುತಗಳ ಪಟ್ಟಿಗೆ ಸೇರಿಸಬೇಕಾಗಿತ್ತು ಅನ್ನುವ ಸೀಸನಲ್ ಕೊರಗು. ಕರೆಂಟಿಗಂತೂ ತಾನು ಬಂದರೂ ಅಷ್ಟೇ ಹೋದರೂ ಅಷ್ಟೇ ಅನ್ನುವ ಅಸಡ್ಡೆ. ಇವತ್ತು ಬಯಲಿನಲ್ಲಿ ಕ್ರಿಕೆಟ್ ಆಡಲು ಸಾಧ್ಯವಿಲ್ಲ ಎಂದು ಬೇಸರಿಸುತ್ತಿರುವ ಮಕ್ಕಳು ಕೇರಂ ಬೋರ್ಡಿನ ಧೂಳು ಹೊಡೆಯಲು ಶುರು. ತೋಟದ ಕೆಲಸದಿಂದ ವಿರಾಮ ಪಡೆದ ಅಪ್ಪಂದಿರ ಮಾಳಿಗೆಯೇರಿ ಇಸ್ಪೀಟ್ ನಲ್ಲಿ ಒಂದು ಕೈನೋಡುವ ಹುಮ್ಮಸ್ಸು. ಉಪ್ಪಿನಕಾಯಿಗೆ ಮಾವಿನಮಿಡಿ ಕತ್ತರಿಸುತ್ತ ಇವತ್ತಿನ ಧಾರಾವಾಹಿ ನೋಡಲು ಕರೆಂಟ್ ಇಲ್ಲವೆಂದು ಶಪಿಸುತ್ತಿರುವ ಅಮ್ಮಂದಿರು. ಬೆಂಗಳೂರಿನಲ್ಲಿ ಅಪಾರ್ಟ್ಮೆಂಟ್ ಕೊಳ್ಳುವವರು rain water harvesting ಇರುವ ಕಟ್ಟಡವನ್ನೇ ಕೊಂಡಿದ್ದೇವೆ ಎಂದು ಹೆಮ್ಮೆಪಡುವ ಹೊತ್ತಿನಲ್ಲೇ ತೋಟದ ಆಚೆ ಇರುವ ಝರಿಗೆ ತಾನು ಒಂದು ದಿನದ ಮಟ್ಟಿಗಾದರು ಜೋಗವಾಗುವ ವೈಭವ. ಹೊಸ ಕೊಡೆ ಖರೀಸಿದವರಿಗೆ ಹೋದಲ್ಲಿ-ಬಂದಲ್ಲಿ ಅದನ್ನು ಮರೆಯಬಾರದು ಅನ್ನುವ self reminder. ಚಹಾ-ಕಾಫಿ ಕುಡಿಯುವವರು ಹೆಚ್ಚಾಗಿದ್ದರಿಂದ ಎಮ್ಮೆ-ಆಕಳುಗಳಿಗೆ ಬಿಡುವಿಲ್ಲದ ಕೆಲಸ..!! ಮನೆಯ ಮುಂದಿನ ಸಣ್ಣ ಹಳ್ಳಗಳಿಗೆ ಸಂಕ ಕಟ್ಟಿಸಿಕೊಳ್ಳುವ ಗಡಿಬಿಡಿ. ನೀರಿಗೆ ಎಲ್ಲೆಂದರಲ್ಲಿ ಹರಿಯುವ ಸ್ವೇಚ್ಚೆ. ಮುಸ್ಸಂಜೆಯಲ್ಲಿ ಆಕಾಶವಾಣಿ ಧಾರವಾಡ ಕೇಂದ್ರದಿಂದ ಎಸ್ಪಿಬಿ ಹಾಡುತ್ತಿದ್ದರೆ ತನ್ನ ಕಾಲೇಜು ದಿನಗಳನ್ನು ನೆನೆಸಿಕೊಂಡು ಆ ಮೆರೆದ ದಿನಗಳೇ ಚೆಂದ ಎಂದುಕೊಳ್ಳುವ ಅಪ್ಪಂದಿರು.. ಅನಂತನಾಗ್ ನ ಫೋಟೋ ಕಾಲೇಜು ಪುಸ್ತಕದಲ್ಲಿಟ್ಟುಕೊಂಡಿದ್ದನ್ನು ನೆನೆಸಿಕೊಂಡು ನಿಟ್ಟುಸಿರಿಡುವ ಅಮ್ಮಂದಿರು. ಬತ್ತಿ ಹೋದ ಕನಸುಗಳು ನೆನಪಾಗಿ ಕೆಲವರ ಮನಸ್ಸೆಲ್ಲ ಮತ್ತೆ ಒದ್ದೆ. ಮುಂದಿನ ಮಳೆಗಾಲದ ಹೊತ್ತಿಗಾದರೂ ಬದುಕು ಒಂದು ಹಂತಕ್ಕೆ ಬರಬಹುದು ಎನ್ನುವ ನೀರೀಕ್ಷೆಯಲ್ಲಿ ಇನ್ನು ಕೆಲವರು. ಎನ್ನಾರೈ ಗಳಿಗೆ ಊರ ನೆನಪನ್ನು ಅತಿಯಾಗಿ ಕಾಡಿಸುವ flashback. ಮುಂದಿನ ಮಳೆಗಾಲಕ್ಕಾದರೂ ಊರಿನಲ್ಲಿರಬೇಕೆನ್ನಿಸುವ momentary excitement. ಕಳೆದಸಲ ಊರಿಗೆ ಬಂದಿದ್ದಾಗ ಅಮ್ಮ ಮಾಡಿಕೊಟ್ಟಿದ್ದ ಹಪ್ಪಳ-ಸಂಡಿಗೆ ತಿನ್ನುತ್ತ ತೇಜಸ್ವಿಯವರ ಜುಗಾರಿ ಕ್ರಾಸ್ ಓದಿದಾಗ ಅನ್ನಿಸಿದ ಸಾರ್ಥಕ ಭಾವದ recap. ಇಷ್ಟೆಲ್ಲಾ ಆಗುತ್ತಿದ್ದಂತೆ ಗೆಳೆಯನಿಗೆ ಫೋನ್ ಮಾಡಿ ಜರೂರತ್ತು ಇಲ್ಲದಿದ್ದರೂ ಊರಕಡೆ ಮಳೆಹೆಂಗೆ ಎಂದು ವಿಚಾರಿಸುವ ಕಾಳಜಿ. ಮಳೆಯ ಜತೆಗೇ ಬರುವ ನಮ್ಮೂರೆ ಚೆಂದ ಎನ್ನುವ emotional philosophy. ಈ ಹಾಳಾದ ಮಳೆಯೇ ಹಾಗೆ. ಹತ್ತಾರು ಹಗಲುವೇಷ. ಹಲವು ಮುಖದ ಮಾಯೆ. ಯಾವಾಗ ಮುಗಿಯುತ್ತದೋ ಎಂದು ಬೈಸಿಕೊಳ್ಳುತ್ತಲೇ ಮುಗಿದ ನಂತರ ಮತ್ತೆ ಮತ್ತೆ ನೆನಪಾಗುತ್ತದೆ. ಅಲ್ಲದೆ ಕೆಲವರನ್ನು ಜೀವನ್ಮುಖಿಯಾಗಿಸುತ್ತದೆ. ಕೆಲವರನ್ನು ಕವಿಯಾಗಿಸುತ್ತದೆ, ಕೆಲವರನ್ನು ಪ್ರೇಮಿಯಾಗಿಸುತ್ತದೆ..ಕೆಲವರನ್ನು ತತ್ವಜ್ಞಾನಿಯಾಗಿಸುತ್ತದೆ. ಪ್ರವಾಹ ಪರಿಹಾರದ ನೆಪದಲ್ಲಿ ಕೆಲವರನ್ನು ಶ್ರೀಮಂತರನ್ನಾಗಿಸುತ್ತದೆ. ಅದೇ ಪ್ರವಾಹದಲ್ಲಿ ಹಲವರನ್ನು ನಿರ್ಗತಿಕರನ್ನಾಗಿಸುತ್ತದೆ. ಕೆಲವೊಮ್ಮೆ ಸಮಯಕ್ಕೆ ಸರಿಯಾಗಿ ಬರದೆ ಕಾಯುವಿಕೆಯ ಪಾಠವನ್ನೂ ಕಲಿಸುತ್ತದೆ. ತಾನಿಲ್ಲದೆ ಜಗತ್ತೇ ಇಲ್ಲ ಎನ್ನುವ ಹುಂಬ ಸೂರ್ಯನ ಅಹಂ ಗೆ ಒಂದು ಸಣ್ಣ ಪೆಟ್ಟುಕೊಟ್ಟು ತನ್ನ ಪಾಡಿಗೆ ತಾನು ಸುರಿದು ಬರಿದಾಗುತ್ತದೆ. ಬೆಳ್ಳಿ ಎಂದು ಕರೆಸಿಕೊಳ್ಳುವ ಮೋಡವನ್ನು ಸಹ ಕಾರ್ಮೊಡವಾಗಿಸಿ ತಮಾಷೆ ನೋಡುತ್ತದೆ. ಈ ಮತ್ತೆ ಮತ್ತೆ ಬರುವ ಮಳೆಗಾಲವೇ ಬದುಕು ನಶ್ವರ ಎಂದ ಹಿರಿಯರ ಕೈಯಲ್ಲೇ ಬದುಕು ಕೆಲವೊಮ್ಮೆ ಸುಂದರವೂ ಕೂಡ ಎಂದು ಹೇಳಿಸಿದೆಯಷ್ಟೇ..ಬಹುಶ ಇದೇ ಇರಬೇಕು ಕಾಯುವ ರೋಚಕತೆ..ಬದುಕಿನ ನಿರಂತರತೆ..]]>

‍ಲೇಖಕರು G

September 14, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: