ಔದ್ಯೋಗಿಕ ವಲಸೆ ಮತ್ತು ಭಾಷಾ ಸಂಸ್ಕ್ರತಿಯ ಅಸ್ತಿತ್ವ

ಸತೀಶ್ ಶೆಟ್ಟಿ ವಕ್ವಾಡಿ

ತೊಂಬತ್ತರ ದಶಕದ ಉದಾರೀಕರಣ ಮತ್ತು ಜಾಗತೀಕರಣದ ಪರಿಣಾಮ ದೇಶದಲ್ಲಿ ಉದ್ಯೋಗ ಸೃಷ್ಟಿ ಗರಿಗೆದರಿದ ಬೆನ್ನಲ್ಲೆ ಉದ್ಯೋಗಕ್ಕಾಗಿ ಅಂತರರಾಜ್ಯ ವಲಸೆ ಅಪರಿಮಿತವಾಗಿ ಜಾಸ್ತಿಯಾಗಿದ್ದು ಸುಳ್ಳಲ್ಲ . ಹೀಗೆ  ವಲಸೆ ಬಂದವರಲ್ಲಿ ಬಹುತೇಕ ಜನ ಅಲ್ಲೆ ತಮ್ಮ ಶಾಶ್ವತ ನೆಲೆ ಕಂಡುಕೊಂಡು ಅಷ್ಟೇ ನಿಜ.

ಆದರೆ ಇಲ್ಲಿ ಕಾಡುವ ಪ್ರಶ್ನೆ ಎಂದರೆ, ಅಂಥವರು ಅದೆಷ್ಟರ ಮಟ್ಟಿಗೆ ಆ ನೆಲದ ಭಾಷೆ ಮತ್ತು ಸಂಸ್ಕೃತಿಗೆ ಬಾಧ್ಯಸ್ಥರಾಗಿದ್ದರೆ ಅನ್ನುವುದು. ಭಾಷೆ ಮತ್ತು ಅದರ ಸಂಸ್ಕೃತಿಯನ್ನು ಕಲಿಯುವುದು ಮತ್ತು ಕಲಿಸುವುದರ ನಮ್ಮ ಬದ್ಧತೆ ಕುರಿತು ಇಲ್ಲಿ ಮೂರೂ ನಿದರ್ಶನಗಳನ್ನು ಉಲ್ಲೇಖಿಸುತ್ತೇನೆ.

ಮೊದಲನೆಯದಾಗಿ ಇತ್ತೀಚಿಗೆ ಸಲೂನ್ ಒಂದರಲ್ಲಿ ಕ್ಷೌರಕ್ಕೆ ಹೋಗಿದ್ದಾಗ ಅಲ್ಲಿದ್ದ ಉತ್ತರ ಭಾರತದ ಹುಡುಗ ನಾನು ಕನ್ನಡದಲ್ಲೆ ಮಾತಾನಾಡಲು ತೊಡಗಿದಾಗ ಕನ್ನಡ ಬರೋಲ್ಲ ಹಿಂದಿ ಅಂದ. ಆಮೇಲೆ ವಿಚಾರಿಸಿದಾಗ ಗೊತ್ತಾಗಿದ್ದು, ಆತ ಬೆಂಗಳೂರಿಗೆ ಬಂದು ಆರು ವರ್ಷವಾಗಿದೆ ಮತ್ತು ಆತನಿಗೆ ಕನ್ನಡ ಕಲಿಯಬೇಕಾದ ಅಗತ್ಯ ಬಂದಿಲ್ಲ ಅಂತ.

ಆತನಿಗೆ ಕನ್ನಡ ಬರೋಲ್ಲ ಅಂತ ತಿಳಿದಾಕ್ಷಣ ಆತನ ಗ್ರಾಹಕರು, ಮನೆಯ ಓನರ್ , ಜಿನಸಿ ಅಂಗಡಿಯವ, ತರಕಾರಿಯವ ಹೀಗೆ ಎಲ್ಲರೂ ಅವನ ಭಾಷೆಯಲ್ಲೇ ಮಾತಾಡಿದ್ದರಿಂದ ಕನ್ನಡವನ್ನು ಕಲಿಯುವ ಅಗತ್ಯವೇನಿದೆ ಸರ್ ಅಂತ ಆತ ನನ್ನನ್ನೇ ಪ್ರಶ್ನಿಸಿದ್ದ. ಎರಡನೆಯದಾಗಿ ಸುಮಾರು ಹತ್ತು ವರ್ಷಗಳ ಹಿಂದೆ ಕಚೇರಿ ಕೆಲಸದ ಮೇಲೆ ಎರಡು ವಾರದ ಮಟ್ಟಿಗೆ ಚೆನ್ನೈಯಲ್ಲಿ ತಂಗಿದ್ದೆ.

ಒಂದು ಭಾನುವಾರ ನಾನಿದ್ದ ಹೋಟೆಲ್ ಪಕ್ಕದ ಸೂಪರ್ ಮಾರ್ಕೆಟಿಗೆ ಹೋದಾಗ ಅಲ್ಲಿನ ಕೆಲಸದಾಕೆ ಮೊದಲಿಗೆ ತಮಿಳಿನಲ್ಲೆ ಮಾತನಾಡಿಸಿದಳು, ‘ನನಗೆ ತಮಿಳು ಬರೋಲ್ಲ , ಇಂಗ್ಲಿಷ್’ ಅಂದಿದ್ದಕ್ಕೆ , ಮತ್ತೆ ತಮಿಳಿನಲ್ಲೇ ಒಂದಷ್ಟು ಪ್ರಶ್ನೆ ಹಾಕಿದಳು . ಅದಕ್ಕೆ ನಾನು ,ಇಲ್ಲಿ ಕಾಯಂ ಉದ್ಯೋಗಕ್ಕಾಗಿ ಬಂದಿಲ್ಲ, ಕೆಲಸದ ಮೇಲೆ ಬಂದಿದ್ದೇನೆ ಮತ್ತು ಮುಂದಿನ ವಾರ ವಾಪಸು ಹೋಗುತ್ತೇನೆ ಅಂತ ಅಂದಿದ್ದಕ್ಕೆ, ಆಕೆ ನಗುತ್ತ ನೀವು ಕಾಯಂ ಉದ್ಯೋಗಕ್ಕಾಗಿ ಬಂದಿದ್ದೀರಾ ಅಂತ ತಮಿಳಿನಲ್ಲಿ ಮಾತನಾಡಿದೆ ಅಂದು ಇಂಗ್ಲೀಷಿನಲ್ಲಿ ಮಾತು ಮುಂದುವರಿಸಿದಳು.

ಮೂರನೆಯದಾಗಿ ನಾನು ಹೈಸ್ಕೂಲಿನಲ್ಲಿರುವಾಗ ಕನ್ನಡ ಮೇಸ್ಟ್ರು ಹೇಳಿದ ಅವರ ಅನುಭವ. ಉದ್ಯೋಗದ ನಿಮ್ಮಿತ್ತ ಒಮ್ಮೆ ಅವರು ಮುಂಬೈ ಯಲ್ಲಿ ತೆಲುಗು ವ್ಯಕ್ತಿಯ ಜೊತೆ ಒಂದಷ್ಟು ಸಮಯ ವಾಸ ಮಾಡಬೇಕಾಗಿ ಬಂದಿತ್ತಂತೆ.  ಆಗ ಅವರಿಬ್ಬರೂ ಪಕ್ಕದ ರೂಮಿನ ಮಾರಾಠಿ ವ್ಯಕ್ತಿಯಿಂದ ಮರಾಠಿ ಕಲಿಯುವುದು ಅಂತ ನಿರ್ಧರಿಸಿದರಂತೆ. ಹಾಗೆ ಇವರಿಬ್ಬರಲ್ಲಿ ನಮ್ಮ ಮೇಸ್ಟ್ರು ಬೇಗ ಮಾರಾಠಿ ಕಲಿತರಂತೆ .

ಆಗ ಇವರ ತೆಲುಗು ಸಹಪಾಠಿ, “ನಿಮಗೇನಿದ್ದರೂ ಮರಾಠಿ ಬರುತ್ತದಲ್ಲ. ಇಲ್ಲಿದಷ್ಟು  ದಿನ ಇಬ್ಬರು ಒಟ್ಟಿಗೆ ಇರುತ್ತೇವೆ, ಇನ್ನು ನಾನ್ಯಕೆ ಮರಾಠಿ ಕಲಿಯಬೇಕು ಅಲ್ವ ” ಅಂದಿದ್ದರಂತೆ . ಬದುಕು ಕೊಟ್ಟ ನೆಲದ ಭಾಷೆ ಮತ್ತು ಸಂಸ್ಕೃತಿಯನ್ನು ಬದುಕ ಅನಿವಾರ್ಯತೆಯಾಗಿಸಿಕೊಳ್ಳುವ ಮತ್ತು ಆ ನೆಲದ ಜನ ಅದನ್ನು ಕಲಿಸುವುದರ ಮನಸ್ಥಿತಿಯ ಪ್ರತಿಬಿಂಬ ,ಈ ಮೂರು ನಿದರ್ಶನಗಳು.

ಸ್ವಾತಂತ್ರ್ಯದ ನಂತರ ದೇಶ ಕಟ್ಟುವ ಕಾಯಕದಲ್ಲಿ ಅತಿ ದೊಡ್ಡ ಸವಾಲಾಗಿದ್ದು ರಾಜ್ಯಗಳ ನಿರ್ಮಾಣ . ರಾಜರುಗಳ ಹಿಡಿತದಲ್ಲಿದ್ದ ನೂರಾರು ಪ್ರಾಂತ್ಯಗಳು ತಮ್ಮದೆಯಾದ ಆರ್ಥಿಕ , ಸಾಮಾಜಿಕ ಮತ್ತು ಭೌಗೋಳಿಕ ಜನಜೀವನ ವ್ಯವಸ್ಥೆಯನ್ನು ಹೊಂದಿದ್ದವು.  ಇವುಗಳನ್ನು ವಿಲೀನಗೊಳಿಸಿ ಹದಿನಾಲ್ಕು ರಾಜ್ಯಗಳು ಮತ್ತು ಆರು ಕೇಂದ್ರಾಡಳಿತ ಪ್ರದೇಶಗಳಾಗಿ ಮಾರ್ಪಾಡು ಮಾಡಲು ನೆರವಾಗಿದ್ದು ಭಾಷೆಯೆನ್ನುವ ಮಾನದಂಡ.

ವಿವಿಧತೆಯಲ್ಲಿ ಏಕತೆಯ ಮಂತ್ರ ಪಠಿಸುತ್ತ ಭಾರತದ ಭೂಪಟಕ್ಕೊಂದು ಸುಂದರ ಚೌಕಟ್ಟು ಕೊಟ್ಟಿದ್ದು ಭಾಷಾವಾರು ಪ್ರಾಂತ್ಯಗಳ ರಚನೆ. ಒಂದು ಭಾಷೆ ಕೇವಲ ಸಂವಹನೆಯ ಮಾದ್ಯಮವಾಗದೆ ಒಂದು ಸಂಸ್ಕೃತಿ ಮತ್ತು ನಾಗರಿಕತೆಯೂ  ಆಗಿದೆ. ಆದ್ದರಿಂದ ಒಂದು ರಾಜ್ಯದ ಅಸ್ತಿತ್ವ ಒಂದು ಭಾಷೆ ಮತ್ತು ಆ ಭಾಷೆಯ ಸಂಸ್ಕೃತಿ ಮತ್ತು ಸಾಮಾಜಿಕ ಜನಜೀವನದ ಮೇಲೆ ನಿಂತರೆ ಅದರ ಆಡಳಿತದ ತಳಹದಿ ಗಟ್ಟಿಯಾಗಿ ಒಟ್ಟಾರೆ ದೇಶದ ಆಡಳಿತ ಮತ್ತು ಅಸ್ಮಿತೆ ಬಲಗೊಳ್ಳುತ್ತದೆಯೆಂಬದೆ  ಈ ಭಾಷಾವಾರು ಪ್ರಾಂತ್ಯಗಳ ರಚನೆಯ ಹಿಂದಿನ ಆಶಯವಾಗಿತ್ತು ಮತ್ತು ಅದು ಸತ್ಯವೂ ಆಗಿತ್ತು.

ಹೀಗೆ ಒಂದು ರಾಜ್ಯದ ಪ್ರಜೆಗಳು ಆ ರಾಜ್ಯದ ಅಧಿಕೃತ ಭಾಷೆಯ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಅಪ್ಪಿಕೊಂಡು ಬದುಕುತ್ತಿರುವುದು ಸುಳ್ಳಲ್ಲ . ಕೆಲವು ಕಡೆ ಉಪ ಭಾಷೆ ಮತ್ತು ಅದರ ಸಂಸ್ಕೃತಿಯ ಅನುಕರಣೆ ಇದ್ದರೂ ಅದು ಆ ರಾಜ್ಯದ ಅಧಿಕೃತ ಭಾಷೆಯ ಭಾಗವಾಗಿಯೇ ಅಥವಾ ಪೂರಕವಾಗಿಯೇ ಇತ್ತು ಹೊರತು ಎಂದಿಗೂ ಆ ಅಧಿಕೃತ ಭಾಷೆಯ ಅಸ್ತಿತ್ವಕ್ಕೆ ಸವಾಲುವೊಡ್ಡಿಲ್ಲ . ಆದರೆ ಕಳೆದ ಎರಡು ಮೂರು ದಶಕಗಲ್ಲಿ ಒಂದಷ್ಟು ಸವಾಲುಗಳ ಸಾಲು ಕಾಣಿಸಲಾರಂಭಿಸಿದೆ .

ಇದು ಮುಖ್ಯವಾಗಿ ಉದ್ಯೋಗ ವಲಸೆ  ಹಾಗು ಈ ನೆಲದ ಜನರ ಸ್ವಂತಿಕೆ ಅದ:ಪತನದ ಪರಿಣಾಮ. ದೇಶದ ಎಲ್ಲಾ ರಾಜ್ಯಗಳಲ್ಲಿ ಉದ್ಯೋಗ ಸೃಷ್ಟಿ ಒಂದೇ ತೆರನಾಗಿ ಆಗದಿರಲು ನೂರಾರು ಕಾರಣಗಳಿವೆ, ಒಂದು ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಗೆ ಅಲ್ಲಿನ ಭೌಗೋಳಿಕ ವಿನ್ಯಾಸ ಮತ್ತು ಮೂಲಭೂತ ಸೌಕರ್ಯಗಳ ಜೊತೆ ಅಲ್ಲಿನ ಭಾಷಾ ಸಂಸ್ಕೃತಿ ಮತ್ತು ಜನಜೀವನ ವ್ಯವಸ್ಥೆ ಕೂಡ ಪ್ರಭಾವ ಬೀರುತ್ತೆ.

ಆದ್ದರಿಂದ ಆ ರಾಜ್ಯಕ್ಕೆ ಉದ್ಯೋಗ ಅರಸಿ ಬರುವವರು ಆ ಭಾಷಾ ಸಂಸ್ಕೃತಿಯನ್ನು ಅಪ್ಪಿಕೊಳ್ಳಬೇಕಾದದ್ದು ಅನಿವಾರ್ಯ. ಒಕ್ಕೂಟ ವ್ಯವಸ್ಥೆಯಲ್ಲಿ ಉದ್ಯೋಗ ವಲಸೆಯನ್ನು  ಅಲ್ಲಗಳಿಯಲಾಗದು ಮತ್ತು ಬದುಕು ಕೊಟ್ಟ ನಾಡಿನ ಭಾಷೆ ಮತ್ತು ಸಂಸ್ಕೃತಿಯನ್ನೂ ಸಹ ತಿರಸ್ಕರಿಸಲಾಗದು.  ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಲಸೆ ಹೋಗಿ ಅಲ್ಲೆ ಬದುಕಿನ ನೆಲೆ ಕಂಡುಕೊಳ್ಳುವ ಪ್ರತಿಯೊಬ್ಬನ ಬಾಧ್ಯತೆ ಮತ್ತು ಆದ್ಯತೆ ಅಲ್ಲಿನ ಭಾಷೆಯಾಗಿರಲೇಬೇಕು .

ಉದ್ಯೋಗ ಸೃಷ್ಟಿಯ ಮೂಲವಾದ ಬಂಡವಾಳದ ಹೂಡಿಕೆದಾರರು ಆರ್ಥಿಕತೆಯ ಹೊರತಾದ ಸುರಕ್ಷತೆಗಾಗಿ ಅಲ್ಲಿನ ಜನ ಜೀವನ ವ್ಯವಸ್ಥೆಯನ್ನು ಪರಿಗಣಿಸುತ್ತಾರೆ ಎನ್ನುವುದು ಸುಳ್ಳಲ್ಲ ಮತ್ತು ಆ ಜನಜೀವನ ಅವರ ಭಾಷೆ ಮತ್ತು ಸಂಸ್ಕೃತಿಯ ಮೇಲೆ ನಿಂತಿರುತ್ತೆ ಅನ್ನೋದು ಅಷ್ಟೇ ಸತ್ಯ. ಯಾವಾಗ ಔದ್ಯೋಗಿಕ ವಲಸಿಗರು ಆ ನೆಲದ ಭಾಷಾ ಸಂಸ್ಕೃತಿಯ ಭಾಗವಾಗದೆ ಹೋದರೆ ಮುಂದೊಂದು ದಿನ ಆ ನೆಲದ ಸ್ವರೂಪವೇ ಬದಲಾಗಿ ಬಿಡಬಹುದು ಮತ್ತು ಅದು ಮುಂದೆ ಉದ್ಯೋಗ ಸೃಷ್ಟಿಯ ಮೂಲವಾದ ಬಂಡವಾಳ ಒಳಹರಿವಿನ ಮೇಲೆ ಪರಿಣಾಮ ಬೀರಬಹುದು.  ಅಂತಹ ಆತಂಕದಲ್ಲಿ ನಾವಿದ್ದೇವೆ.

ಕರ್ನಾಟಕ ಅದರಲ್ಲೂ ಬೆಂಗಳೂರು ಕಳೆದ ಎರಡು ದಶಕಗಳಲ್ಲಿ ಉದ್ಯೋಗ ಸೃಷ್ಟಿಯಲ್ಲಿ ದೇಶದ ಪಾಲಿನ ಅಕ್ಷಯ ಪಾತ್ರೆಯಾಗಿದೆ. 2000 ನೇ ಇಸವಿಯಲ್ಲಿ 55  ಲಕ್ಷದಷ್ಟಿದ್ದ ಬೆಂಗಳೂರಿನ ಜನಸಂಖ್ಯೆ ಈಗ 1.23 ಕೋಟಿಯಾಗಿದೆ. ಅಂದರೆ ಬರೋಬ್ಬರಿ 124 % ಹೆಚ್ಚಳ ಮತ್ತು ಇದು ಔದ್ಯೋಗಿಕ ವಲಸೆಯ ಪರಿಣಾಮ ಅನ್ನೋದರಲ್ಲಿ ಎರಡು ಮಾತಿಲ್ಲ. ಒಂದು ಅಂದಾಜಿನ ಪ್ರಕಾರ ಕಳೆದ ಎರಡು ದಶಕದಲ್ಲಿ ಸುಮಾರು ಅರ್ಧ ಕೋಟಿಯಷ್ಟು ಜನ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ವಲಸೆ ಬಂದಿದ್ದಾರೆ ಮತ್ತು ಹೆಚ್ಚು ಕಡಿಮೆ ಅವರೆಲ್ಲ ಇಲ್ಲೇ ತಮ್ಮ ಶಾಶ್ವತ ನೆಲೆ ಕಂಡುಕೊಂಡಿದ್ದಾರೆ . 

ಆದರೆ ಅವರೆಷ್ಟರ ಮಟ್ಟಿಗೆ ಈ ನೆಲದ ಸಂಸ್ಕೃತಿಯ ಭಾಗವಾಗಿದ್ದಾರೆ ಅನ್ನೋದೆ  ಮಿಲಿಯನ್ ಡಾಲರ್ ಪ್ರಶ್ನೆ. ಇದರಲ್ಲಿ ಬಹುಪಾಲು ಜನ ಇಲ್ಲಿನ ಭಾಷೆ ಮತ್ತು ಸಂಸ್ಕ್ರತಿಯ ಜೊತೆ ಇನ್ನೂ ಸುರಕ್ಷಿತ ಅಂತರ ಕಾಯ್ದುಕೊಂಡೆ  ಬಂದಿದ್ದಾರೆ ಮತ್ತು ಅದಕ್ಕೆ ಇಲ್ಲಿನ ಸ್ಥಳೀಯರಾದ ನಮ್ಮ ಸಹಕಾರವು ಸಾಕಷ್ಟಿದೆ. ಇದರ ಪರಿಣಾಮವೆ ಇಂದು ಬೆಂಗಳೂರಿನಲ್ಲಿ ಕನ್ನಡವನ್ನು ಹುಡುಕಬೇಕಾದ ಪರಿಸ್ಥಿತಿ . ಇಂದು ಬೆಂಗಳೂರಿನಲ್ಲಿ ಕನ್ನಡದ ಸ್ಥಿತಿಗತಿಯ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. 

ಬೆಂಗಳೂರಿನಲ್ಲಿ ಕನ್ನಡದ ಬಗೆಗಿನ ನಮ್ಮ ನಿರ್ಲಕ್ಷ ಹೀಗೆ ಮುಂದುವರಿದರೆ ಮುಂದಿನ ಎರಡು ದಶಕ ಸಾಕು ಬೆಂಗಳೂರು ಕನ್ನಡೇತರ ಪ್ರದೇಶವಾಗಲು.  ಹಾಗೇನೆ ನಾವು ಇದನ್ನು ಸ್ವಲ್ಪ ಗಂಭೀರವಾಗಿ ತಗೆದುಕೊಂಡರೆ ಒಂದೇ ದಶಕ ಸಾಕು ಇಡೀ ಬೆಂಗಳೂರನ್ನು ಕನ್ನಡಮಯ ಮಾಡಲು.  ಒಮ್ಮೆ ಒಬ್ಬ ವಲಸಿಗ ಇಲ್ಲಿನ ಭಾಷೆ ಕಲಿತರೆ ಸಾಕು, ಆ ಭಾಷೆಯ ಸಂಸ್ಕೃತಿ ಮತ್ತು ಜನಜೀವನ ಸಹಜವಾಗಿಯೇ ಆತನನ್ನು ತನ್ನೊಳಗೆ ಸೇರಿಸಿಕೊಂಡು ಬಿಡುತ್ತದೆ.

ಆದರೆ ನಾವು ಎಷ್ಟರ ಮಟ್ಟಿನ ಉದಾರಿಗಳೆಂದರೆ ಒಬ್ಬ ವಲಸೆಗಾರನಿಗೆ ನಮ್ಮ ಭಾಷೆಯನ್ನು ಪರಿಚಯಿಸುವುದರ ಬದಲು ಆತನ ಮಾತೃ ಭಾಷೆ ತಮಗೆ ಗೊತ್ತು ಅನ್ನೋವುದರ ಗೊಡ್ಡು ಪ್ರತಿಷ್ಠೆ ತೋರಿಸಲೋಸುಗ  ಆತನ ಭಾಷೆಯಲ್ಲೇ ವ್ಯವಹರಿಸುತ್ತೇವೆ ಮತ್ತು ನೇರವಾಗಿ ಈ ನೆಲದ ಭಾಷೆಯ ಅಸ್ಮಿತೆಗೆ ಮಾರಕರಾಗುತ್ತೇವೆ. ಅವರ ಭಾಷೆಯನ್ನು ನಾವು ಒಪ್ಪಿಕೊಳ್ಳಬಾರದು ಅನ್ನೋದು ತಪ್ಪು , ಅದು ನಮ್ಮ ಆಯ್ಕೆ, ಜೊತೆಗೆ ನಮ್ಮ ನೆಲದ ಭಾಷೆಯನ್ನು ನಾವು ಆತನಿಗೆ ಕಲಿಸಬೇಕಾದದ್ದು ನನ್ನ ಮೇಲೊರೋ ಈ ಮಣ್ಣಿನ ಋಣ ಮತ್ತು ಸದ್ಯದ ಅಗತ್ಯ ಸಹ.

ವೈಜ್ಞಾನಿಕ ಸಮೀಕ್ಷೆಯ ಪ್ರಕಾರ ಒಬ್ಬ ಸಾಮಾನ್ಯ ವ್ಯಕ್ತಿಗೆ ಕನಿಷ್ಠ ಐದು ಬಾಷೆಗಳನ್ನ ಕಲಿಯುವ ಸಾಮರ್ಥ್ಯವಿದೆ .ಮಾತೃ ಭಾಷೆ ಮತ್ತು ಸಂವಾಹನ ಭಾಷೆಯ ಜೊತೆಗೆ ಬದುಕಿನ ಬಾಷೆಯನ್ನು ಕಲಿಯಬೇಕಾದುದ್ದು ಅನಿವಾರ್ಯ . ಕನ್ನಡ ನಾಡಿನಲ್ಲಿ ಬದುಕಿನ ನೆಲೆ ಕಂಡ ಪ್ರತಿಯೊಬ್ಬರೂ ಕನ್ನಡಿಗರಾಗಿ ,ಕನ್ನಡ ಭಾಷೆ, ಸಂಸೃತಿ ಮತ್ತು ಸಂಪ್ರದಾಯಗಳನ್ನು ಅನುಕರಿಸಬೇಕಾಗಿದ್ದು ಈ ಮಣ್ಣಿನ ಅಗತ್ಯ .

ನಮ್ಮಲ್ಲಿಗೆ ಬದುಕು ಅರಸಿ ಬಂದವರಿಗೆ ನಮ್ಮ ಭಾಷೆಯನ್ನು ಪರಿಚಯಿಸಬೇಕಾಗಿರುವುದು ಪ್ರತಿಯೊಬ್ಬ ಕನ್ನಡಿಗನ ಭಾದ್ಯತೆಯನ್ನುವುದನ್ನು  ಮರೆಯಬಾರದು. ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡಲ್ಲಿ ಮಾತಾಡುವಂತಾದರೆ ಕನ್ನಡಿಗರಾದ ನಮಗೆ ಹೆಮ್ಮೆ ಮತ್ತು ವಿವಿಧತೆಯಲ್ಲಿ ಏಕತೆಯ ಮಂತ್ರಕ್ಕೆ ಮತ್ತಷ್ಟು ಮೆರಗು. ಈ ನಿಟ್ಟಿನಲ್ಲೂ ನಾವು ನಮ್ಮ ಬದ್ಧತೆಯನ್ನು ತೋರಿಸುವ ಅನಿವಾರ್ಯತೆಯಿದೆ .

‍ಲೇಖಕರು Avadhi

October 31, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆಗ ನೀವೇನು ಮಾಡುತ್ತೀರಿ ಎಂಬುದೇ ಕಥೆ!

ಆಗ ನೀವೇನು ಮಾಡುತ್ತೀರಿ ಎಂಬುದೇ ಕಥೆ!

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

5 ಪ್ರತಿಕ್ರಿಯೆಗಳು

 1. ಪ್ರೀತೇಶ್ ಶೆಟ್ಟಿ

  ಸಂಸ್ಕೃತಿ ಯ ಉಳಿವಿಗೆ ನಮ್ಮ ಕಾಣಿಕೆಯನ್ನು ನೆನಪಿಸಿದ ಸತೀಶ್ ರಿಗೆ ಧನ್ಯವಾದಗಳು

  ಪ್ರತಿಕ್ರಿಯೆ
 2. ಲಲಿತಾ ಸಿದ್ಧಬಸವಯ್ಯ

  ಸರಿಯಾದ ಮಾತು. ನಾನು ಕಳೆದ ಎಂಟು ವರ್ಷಗಳಿಂದ ಬೆಂಗಳೂರು ಕನ್ನಡಿಗರನ್ನು ನೋಡುತ್ತಿರುವೆ. ಅವರಿಗೆ ಮೊದಲಿಗೆ ತಾವು ಕನ್ನಡಿಗರು ಎನ್ನುವುದೇ ಅವಮಾನ . ಎರಡನೆಯದು ಮನೆಕೆಲಸದ ಹೆಣ್ಣು ಮಕ್ಕಳಿಂದ ಕಾರ್ಪೊರೇಟ್ ಜನರವರೆಗೆ ಕನ್ನಡದವರು ಹಿಂದಿ, ತಮಿಳು, ತೆಲುಗು , ಮಲೆಯಾಳ ಕಲಿತು ಅವರೊಡನೆ ತಗ್ಗಿಬಗ್ಗಿ ವ್ಯವಹರಿಸುತ್ತಾರೆ.

  ನಮ್ಮ ಲೇಔಟಿನಲ್ಲಿ ಇಪ್ಪತ್ತು ವರ್ಷದಿಂದ ಇರುವ ತಮಿಳು ಕುಟುಂಬದ ತಾಯಿ ಈಗ ಸ್ವಲ್ಪ ಕನ್ನಡ ಬರುತ್ತೆ ಅಂತಾರೆ. ಅವರ ಇಬ್ಬರು ಮಕ್ಕಳು ಬೆಂಗಳೂರಿನಲ್ಲಿ ‌ ಹುಟ್ಟಿ ಬೆಳೆದು ಈಗ ಪಿಯುಸಿಯಲ್ಲಿದ್ದಾರೆ. ಒಂದಕ್ಕರ‌ ಕನ್ನಡ ಮಾತು ಆಡಲ್ಲ, ಬಂದರೂ ಆಡಲ್ಲ. ಹಾಗೇಯೇ ಯಶಸ್ವಿಯಾಗಿ ಬೆಂಗಳೂರಿನಲ್ಲಿ ‌ಜೀವಿಸುತ್ತಿದ್ದಾರೆ. ಮುಂದೆ ಇಲ್ಲಿಯೇ‌ ತಮಿಳು ಸಂಬಂಧ ಹುಡುಕಿ‌ ಮದುವೆಯಾಗಿ ‌ ಮಕ್ಕಳು ಹೆತ್ತು ಅವರಿಗೂ ಕನ್ನಡ ಒಂದಕ್ಷರ ಕಲಿಸಲ್ಲ.

  ಯಾರು ಕಾರಣ ಇದಕ್ಕೆ ವೀರಕನ್ನಡಿಗರಲ್ಲದೆ ?

  ಪ್ರತಿಕ್ರಿಯೆ
 3. Vivek U. B

  ಒಂದು ಭಾಷೆ ಶ್ರೀಮಂತವಾಗಿರುವುದು ಆ ಭಾಷೆಯನ್ನು ಹೆಚ್ಚು ಜನರು ಮಾತನಾಡಿದಾಗ…ಹೊರತು ವರ್ಷಕ್ಕೆ ಎಷ್ಟು ಕೃತಿಗಳು ರಚನೆಯಾದವು ಎಂಬುದನ್ನಾಧರಿಸಿ ಅಲ್ಲ. ನಗರೀಕರಣಕ್ಕೆ ನಾವು ಆತುಕೊಂಡ ನಂತರ ಅಲ್ಲಿ ನಮ್ಮತನದ ತ್ಯಾಗ ನಮ್ಮ ಅರಿವಿಲ್ಲದಂತೆ ಆಗುತ್ತದೆ. ಇದು ಅನಿವಾರ್ಯ. ಯಾವುದೇ ರಾಜ್ಯಕ್ಕೆ ಹೋದರೂ ಅಲ್ಲಿಯ ಭಾಷೆಯನ್ನು ಕಲಿಯಲು ಹೋದವನಿಗೆ ಮೊದಲು ಆಸಕ್ತಿ ಇರಬೇಕು. ಉದಾಹರಣೆಗೆ ನಾವು ಮುಂಬೈಗೆ ಹೋದಾಗ ಹಿಂದಿ, ಮರಾಠಿಯನ್ನು ಕಲಿಯುತ್ತೇವೆ. ಇಲ್ಲಿ ಕೂಡ ಹೊರರಾಜ್ಯದಿಂದ ಬಂದು ಕನ್ನಡ ಕಲಿತು….ಮಕ್ಕಳಿಗೆ ಕನ್ನಡ ಕಲಿಸಿದವರಿದ್ದಾರೆ. ಹಾಗೆ ನೋಡಿದರೆ ನಾವು ಕನ್ನಡಿಗರೇ ನಮ್ಮ ಭಾಷೆಯನ್ನು ಕೊಲ್ಲುತ್ತಿದ್ದೇವೆ. ಸಂದರ್ಭ ಬಂದಾಗ ಕೂಗಿ….ಮತ್ತೆ ಮೌನಕ್ಕೆ ಶರಣಾಗುತ್ತೇವೆ. ಕನ್ನಡದ ಜಾಗ್ರತಿ, ಹೋರಾಟದ ಹೆಸರಲ್ಲಿ ಒಂದಿಷ್ಟು ಹಣ ಮಾಡಬಹುದು ಅಷ್ಟೆ. ನೀವು ನಗರೀಕರಣ…..ಜಾಗತೀಕರ ಅಥವಾ ಡಾಂಬರೀಕರಣ ಏನೇ ಮಾಡಿ ಅಲ್ಲಿ ನಷ್ಟ….ಕಷ್ಟಗಳಿರುತ್ತವೆ…

  ಪ್ರತಿಕ್ರಿಯೆ
 4. Siddalingesh Siddu Ckm

  ನಿಮ್ಮ ಉದಾಹರಣೆಗಳು ಸರಿಯಾಗಿವೆ, ಕೆಲವು ಬಾರಿ ನಾವೂ ಸಹ ತಿಳಿಯದೆ ಅದೇ ರೀತಿ ಮಾಡುತ್ತೇವೆ, ಅದು ಅಲ್ಲಿ ಭಾಷೆಯನ್ನು ಕಲಿಯುವ ನಮ್ಮ ಕುತೂಹಲವನ್ನು ತೋರಿಸುತ್ತದೆ, ಅದೇ ಸಮಯದಲ್ಲಿ ನಾವು ಅವರಿಗೆ ನಮ್ಮ ಮೂಲ ಪದಗಳನ್ನು ಕಲಿಸುತ್ತೇವೆ, ಅದು ಕೇವಲ ಬೆಂಗಳೂರಿನಲ್ಲಿಲ್ಲ, ಇದು ಎಲ್ಲಾ ನಗರಗಳಲ್ಲೂ ಒಂದೇ ಆಗಿರುತ್ತದೆ, ಮತ್ತು ಅದು ವ್ಯಕ್ತಿಯಿಂದ ವ್ಯಕ್ತಿಗೆ ಅವಲಂಬಿತವಾಗಿರುತ್ತದೆ, ಈಗ ಕರ್ನಾಟಕದ ಎಲ್ಲಾ ಯುವಕರು ನಮ್ಮ ಭಾಷೆಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಪ್ರಾರಂಭಿಸಿದರು, ಇದು ಒಳ್ಳೆಯ ಸಂಕೇತವಾಗಿದೆ. ನಿಮಗೆ ತಿಳಿದಿರುವಂತೆ ನಾನು ಭಾರತದ ಎಲ್ಲಾ ಮೆಟ್ರೋ ನಗರಗಳನ್ನು ಉಳಿಸಿಕೊಂಡಿದ್ದೇನೆ, ಆದ್ದರಿಂದ ನನ್ನ ಅನುಭವದ ಆಧಾರದ ಮೇಲೆ ನಾನು ನನ್ನ ಕಾಮೆಂಟ್‌ಗಳನ್ನು ಹಾಕುತ್ತಿದ್ದೇನೆ, ಅದರಲ್ಲಿ ನೀವು ಏನಾದರೂ ತಪ್ಪು ಕಂಡುಕೊಂಡರೆ ನನ್ನನ್ನು ಕ್ಷಮಿಸಿ

  ಪ್ರತಿಕ್ರಿಯೆ
 5. Ravi Hk

  ತುಂಬಾ ಒಳ್ಳೆಯ ವಿಚಾರಳನ್ನು ಮಂಡನೆ ಮಾಡಿದ್ದೀರಾ ನಾಡು ನುಡಿ ಸಂಸ್ಕೃತಿ ಯನ್ನು ಚೆನ್ನಾಗಿ ಅರ್ಥಸಿದ್ದಿರಿ ಧನ್ಯವಾದಗಳು ಗುರುಗಳೆ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: