ಕಂಗಾಲಾಗಿಸಿದ ಮುಷ್ಕರ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ಪ್ರಜಾವಾಣಿ’ ‘ಸುಧಾದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.

‘ಸಂಯುಕ್ತ ಕರ್ನಾಟಕ’ ‘ವಾರ್ತಾ ಭಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ. 

|ಕಳೆದ ವಾರದಿಂದ|

ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡ ನಂತರ, ಎಂಭತ್ತರ ದಶಕದ ಪೂರ್ವಾರ್ಧದಲ್ಲಿ ಪ್ರಜಾವಾಣಿ ಸಂಪಾದಕೀಯ ವಿಭಾಗದಲ್ಲಿ ಕೆಲವೊಂದು ಕ್ಷಿಪ್ರ ಬದಲಾವಣೆಗಳಾದವು. ಸಹಜವಾಗಿಯೇ ಈ ಬದಲಾವಣೆಗಳು ತವಕ-ತಲ್ಲಣಗಳನ್ನುಂಟುಮಾಡಿದ್ದವು. ಸದಾಶಿವನಿಗೆ ಸಹಾಯಕ ಸಂಪಾದಕ ಹುದ್ದೆಗೆ ಬಡ್ತಿ ನೀಡಿ ʼಸುಧಾ’ಕ್ಕೆ ವರ್ಗಾಯಿಸಲಾಯಿತು. ಕೆಲವೇ ದಿನಗಳಲ್ಲಿ ʼಸುಧಾ’ ಕೆಲಸದ ಜೊತೆಗೆ ʼಮಯೂರ’ ಸಂಪಾದಕತ್ವವನ್ನೂ ಸದಾಶಿವನಿಗೆ ವಹಿಸಲಾಯಿತು. ʼಮಯೂರ’ದ ಇಂಪ್ರಿಂಟ್ ನಲ್ಲಿ ಸಂಪಾದಕರೆಂದು ಅವರ ಹೆಸರನ್ನು ಪ್ರಕಟಿಸಲಾಯಿತು. ನಮ್ಮ ಪೀಳಿಗೆಯ ಸರೀಕರಲ್ಲಿ ಈ ಭಾಗ್ಯ ಪಡೆದ ಅದೃಷ್ಟಶಾಲಿ ಸದಾಶಿವ! ಆದರೆ ಆ ʼಭಾಗ್ಯ’ವೂ ಅಲ್ಪಾಯುವಾಯಿತೆನ್ನುವುದು ಬೇರೆ ಮಾತು.

ನನ್ನನ್ನು ಜನರಲ್ ಡೆಸ್ಕ್ ನಿಂದ ʼಸಾಪು’ಗೆ ಸದಾಶಿವನ ಜಾಗಕ್ಕೆ ವರ್ಗಾಯಿಸಲಾಯಿತು. ೧೯೮೧ರ ಡಿಸೆಂಬರಿನಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ನನಗೆ ಬಡ್ತಿಯೂ ದೊರೆಯಿತು. ನನ್ನ ಕವಿದಿದ್ದ ನಿರಾಸೆ ಸ್ವಲ್ಪಮಟ್ಟಿಗೆ ಹಿಂದೆ ಸರಿದು ಮೊದಲಿನ ಉತ್ಸಾಹದಿಂದ ವೈಕುಂಠರಾಜು ಮಾಗದರ್ಶನದಲ್ಲಿ ʼಸಾಪು’ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡೆ.

೧೯೮೩ ಒಂದು ದುಃಸ್ವಪ್ನದ ವರ್ಷವೆಂದರೆ ಅದು ಅತಿಶಯೋಕ್ತಿಯಾಗದು. ವರ್ಷದ ಶುರುವಿಗೇ ಪ್ಯಾಕಿಂಗ್ ವಿಭಾಗದ ಕಾಮ್ರೇಡುಗಳ ಕೆಲವು ಸಮಸ್ಯೆಗಳಿಂದಾಗಿ ಕಾರ್ಮಿಕ ಅಶಾಂತಿ ತಲೆದೋರಿತು. ಪ್ಯಾಕಿಂಗ್ ವಿಭಾಗ, “ಓವರ್ ಟೈಂ” ವಿಭಾಗ ಎಂದೇ ಹೆಸರು ಪಡೆದಿತ್ತು. ಅಲ್ಲಿನ ಕೆಲಸದ ಸ್ವರೂಪ ಮತ್ತು ಒತ್ತಡಗಳಿಂದಾಗಿ ಅಲ್ಲಿ ಕೆಲಸ ಮಾಡುತ್ತಿದ್ದವರಿಗೆ ಓವರ್ ಟೈಂ ಕೊಡುವುದು ಅನಿವಾರ್ಯ ಎಂಬಂಥ ಸ್ಥಿತಿ ಉಂಟಾಗಿತ್ತು.

ಓವರ್ ಟೈಂ ಎಂದರೆ ಆ ಕೆಲಸದ ಅವಧಿಗೆ ಎರಡುಪಟ್ಟು ಸಂಬಳ ನೀಡಬೇಕಾಗುತ್ತಿತ್ತು. ಆ ವಿಭಾಗದ ಸಂಬಳದ ಬಿಲ್ ಪ್ರತಿ ತಿಂಗಳೂ ಏರುತ್ತಲೇ ಹೋಗಿತ್ತು. ಈ ʼಓವರ್ ಟೈಂ’ ತಗ್ಗಿಸಲು ಆಡಳಿತ ಮಂಡಳಿ ನಿರ್ಧರಿಸಿತು. ಈ ಸಂಬಂಧ ಕಾರ್ಮಿಕ ಸಂಘದ ಜೊತೆ ಮಾತುಕತೆಯನ್ನೂ ನಡೆಸಿತು. ಆಗ ಪತ್ರಿಕಾ ನೌಕರರ ಎರಡು ಸಂಘಟನೆಗಳಿದ್ದವು. ಒಂದು, ಕಾರ್ಯನಿರತ ಪತ್ರಕರ್ತರ, ‘ಕರ್ನಾಟಕ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್’ (ಕೆ.ಯು.ಡಬ್ಲ್ಯು.ಜೆ), ಇನ್ನೊಂದು ಪತ್ರಿಕಾ ನೌಕರರರ ʼಬೆಂಗಳೂರು ನ್ಯೂಸ್ ಪೇಪರ್ ಎಂಪ್ಲಾಯೀಸ್ ಯೂನಿಯನ್’ (ಬಿ.ಎನ್.ಇ.ಯು).

ಕಲಾವಿದ ಜಿ ಕೆ ಸತ್ಯ  ಕೆ.ಯು.ಡಬ್ಯು.ಜೆ. ಅಧ್ಯಕ್ಷರಾಗಿದರು. ಎಂ ಸಿ ನರಸಿಂಹನ್ ಬಿ.ಎನ್.ಇ.ಯು ಅಧ್ಯಕ್ಷರಾಗಿದ್ದರು. ಬಿ.ಎನ್.ಇ.ಯು ಮುಷ್ಕರಕ್ಕೆ ಮುಂದಾಯಿತು. ರಹಸ್ಯ ಮತದಾನದಲ್ಲಿ ಕಾರ್ಮಿಕರು ಮುಷ್ಕರದ ಪರ ಮತ ಹಾಕಿದರು. ಆಗ ಕೆ.ಯು.ಡಬ್ಲ್ಯು.ಜೆ ಕಾರ್ಮಿಕರನ್ನು ಬೆಂಬಲಿಸುವ ನಿರ್ಣಯ ತೆಗೆದುಕೊಂಡಿತು. ಹೀಗಾಗಿ, ಕಾರ್ಯನಿರತ ಪತ್ರಕರ್ತರಾದ ನಾವೂ ಮುಷ್ಕರದಲ್ಲಿ ಭಾಗಿಗಳಾದೆವು. ʼಪ್ರವಾ’ ಇತಿಹಾಸದಲ್ಲೇ ಕಂಡರಿಯದಂಥ ಮುಷ್ಕರ ಇದಾಯಿತು.

ಮುಷ್ಕರ ಐವತ್ಮೂರು ದಿನಗಳಷ್ಟು ಸುದೀರ್ಘಕಾಲ ನಡೆದು ನಾವೆಲ್ಲ ಹೈರಾಣೆದವು. ಸುಮಾರು ಒಂದು ತಿಂಗಳ ಕಾಲ ಯಾವುದೇ ರೀತಿಯ ನಿರ್ಣಾಯಕ ಮಾತುಕತೆ, ಸಂಧಾನವಿಲ್ಲದೆಯೇ ಕಳೆಯಿತು. ನಂತರ ಸರ್ಕಾರದ ಕಾರ್ಮಿಕ ಇಲಾಖೆ ಸಂಧಾನಕ್ಕೆ ಮುಂದಾಗಿ ಕಾರ್ಮಿಕರು ಮತ್ತು ಆಡಳಿತ ವರ್ಗದ ಪ್ರತಿನಿಧಿಗಳ ಸಭೆಗಳು ಶುರುವಾದವು.

ಇಬ್ಬರೂ ತಮ್ಮ ಪಟ್ಟುಗಳನ್ನು ಬಿಟ್ಟುಕೊಡದೆ ನಿಲುವುಗಳಿಗೆ ಅಂಟಿಕೊಂಡಿದ್ದರಿಂದ ಸಂಧಾನ ಮಾತುಕತೆಯಲ್ಲಿ ಏನೊಂದು ಪ್ರಗತಿಯೂ ಕಾಣಲಿಲ್ಲ. ಯಾವುದೇ ನಿರ್ಧಾರಕ್ಕೆ ಬರದೆ ಸಭೆಗಳು ಮುಂದೂಡಲ್ಪಡುತ್ತಿದ್ದವು. ಈ ಮಧ್ಯೆ ಆಡಳಿತ ವರ್ಗ ಮುಷ್ಕರ ಅಕ್ರಮ ಎಂದು ಘೋಷಿಸಿ ಆ ತಿಂಗಳ ಸಂಬಳ ಪಾವತಿಸಲಿಲ್ಲ. ನಮ್ಮಲ್ಲಿ ಬಹುತೇಕ ಮಂದಿಯಲ್ಲಿ ಕಷ್ಟಕಾಲಕ್ಕೆ ಉಳಿತಾಯ ಎಂಬುದು ಇರಲಿಲ್ಲ.

ಸ್ನೇಹಿತರು, ಮಾರ್ವಾಡಿಗಳ ಹತ್ತಿರ ಸಾಲಮಾಡಿ ಮೂವತ್ತು ನಲವತ್ತು ದಿನಗಳ ಕಾಲ ಸಂಸಾರ ತೂಗಿಸಿದ್ದಾಯಿತು. ಸೆಟ್ಟರು ಮುಷ್ಕರದ ವಿಷಯ ತಿಳಿದು ದಿನಸಿಯನ್ನು ಸಾಲವಾಗಿ ಕೊಟ್ಟರು. ಆದರೆ ಹಾಲಿನವರಿಗೆ, ತರಕಾರಿಯವರಿಗೆ, ಮಕ್ಕಳ ಶಾಲೆಯ ಫೀಜು, ವ್ಯಾನು ಶುಲ್ಕಗಳಿಗೆ ಸಾಲ ಹೇಳುವಂತಿರಲಿಲ್ಲ.

ನಮ್ಮ ಎಂಜಿ ರಸ್ತೆಯಲ್ಲೇ ಭೋರಿಲಾಲ್ ಎಂಬ ಪಾರ್ಸಿ ಲೇವಾದೇವಿದಾರನೊಬ್ಬನಿದ್ದ. ಸದಾಶಿವ ಈ ಭೋರಿಲಾಲನಿಗೆ ನನ್ನ ಪರಿಚಯ ಮಾಡಿಕೊಟ್ಟಿದ್ದರು. ವೈಎನ್ಕೆ ಅವರಿಂದ ಸದಾಶಿವನಿಗೆ ಭೋರಿಲಾಲನ ಪರಿಚಯವಾಗಿತ್ತು. ನಾವು ತಿಂಗಳ ಕೊನೆಯಲ್ಲಿ ಕೈ ಬರಿದಾದಾಗ ಭೋರಿಲಾಲನ ಬಳಿ ಹೋಗಿ ಪೋಸ್ಟ್ ಡೇಟೆಡ್ ಚೆಕ್ ಕೊಟ್ಟು ನೂರಿನ್ನೂರು ಸಾಲ ತೆಗೆದುಕೊಳ್ಳುತಿದ್ದವು. ಭೋರಿಲಾಲ್ ಒಂದು ತಿಂಗಳಿಗೆ ನೂರು ರೂಪಾಯಿಗೆ ಎಂಟು ರೂಪಾಯಿ ಬಡ್ಡಿ ಮುರಿದುಕೊಂಡು ತೊಂಬತ್ತೆರಡು ರೂಪಾಯಿ ಕೊಡುತ್ತಿದ್ದ. ಒಮ್ಮೊಮ್ಮೆ ಹತ್ತು ರೂಪಾಯಿ ಮುರಿದುಕೊಳ್ಳತ್ತಿದ್ದುದೂ ಉಂಟು.

ಮುಷ್ಕರದ ಸಮಯದಲ್ಲಿ ನಮಗೆ ಸಂಬಳ ಬರಲಿಲ್ಲವಾದ್ದರಿಂದ ಹಿಂದಿನ ತಿಂಗಳು ನಾವು ಕೊಟ್ಟ ಚೆಕ್ ಬೌನ್ಸ್ ಆಗಿ ಭೋರಿಲಾಲನೂ ಸಾಲ ನಿಲ್ಲಿಸಿ ಬಿಟ್ಟ. ಬಡ್ಡಿ ಮುರಿದುಕೊಂಡು ಸಾಲ ಕೊಡುವ ಮಾವಳ್ಳಿಯ ಇನ್ನೊಬ್ಬ ಲೇವಾದೇವಿದಾರನ್ನು ಇಂದಿರಾತನಯರು ಬಹಳ ಹಿಂದೆಯೇ ನನಗೆ ಪರಿಚಯಿಸಿದ್ದರು. ಆತನಿಂದ ಸಾಲ ಪಡೆದು ದಿನಗಳನ್ನು ದೂಡಿದ್ದಾಯಿತು. ಮುಷ್ಕರ ಐವತ್ತನೆ ದಿನಕ್ಕೆ ಕಾಲಿಟ್ಟಿತು. ಕೊನೆಗೆ ಶ್ರೀ ಹರಿಕುಮಾರ್ ಅವರೇ ಸಂಧಾನದ ಮೇಜಿಗೆ ಬಂದರು. ಪರಿಹಾರ ಕಾಣಿಸಿದರು. ಐವತ್ಮೂರು ದಿನಗಳ ನಂತರ ನಾವು ಕೆಲಸಕ್ಕೆ ವಾಪಸಾದೆವು.

ನಾವು ಮುಷ್ಕರದ ಬಿಸಿಯಿಂದ ಚೇತರಿಸಿಕೊಂಡು ಮತ್ತೆ ಉತ್ಸಾಹದಿಂದ ಕೆಲಸದಲ್ಲಿ ತೊಡಗಿಕೊಂಡ ಕೆಲವೇ ದಿನಗಳಲ್ಲಿ ‘ಪ್ರವಾ’ ಸಂಪಾದಕೀಯ ವಿಭಾಗದಲ್ಲಿ ಕೆಲವೊಂದು ಮಹತ್ವದ ಬದಲಾವಣೆಗಳಾದವು. ನಿವೃತ್ತಿಗೆ ಒಂದು ವರ್ಷ ಬಾಕಿಯಿದ್ದಾಗಲೇ, ಒಂದು ದಿನ ಬೆಳಗ್ಗೆ ಟೈಂ ಆಫೀಸಿನಲ್ಲೇ ವೈಎನ್ಕೆ ಅವರಿಗೆ ಪರ್ಸನಲ್ ಡಿಪಾರ್ಟ್ ಮೆಂಟಿನಿಂದ ಒಂದು ಲಕೋಟೆ ನೀಡಲಾಯಿತು. ಅದು, ವೈಎನ್ಕೆ ಅವರನ್ನು ಸಂಪಾದಕ ಸ್ಥಾನದಿಂದ ಪದಚ್ಯುತಿಗೊಳಿಸಿ, ಸಂಪಾದಕೀಯ ಸಲಹೆಗಾರರನ್ನಾಗಿ ನೇಮಿಸಿದ ಆದೇಶವಾಗಿತ್ತು. ಎಂ.ಬಿ.ಸಿಂಗ್ ಅವರನ್ನು ‘ಪ್ರವಾ’ ಸಂಪಾದಕರನ್ನಾಗಿ ನೇಮಿಸಲಾಗಿತ್ತು. ‘ಸುಧಾ’ ಹೊಣೆಗಾರಿಕೆಯನ್ನು ಜಿ ಎಸ್ ಸದಾಶಿವ ಅವರಿಗೆ ವಹಿಸಲಾಯಿತು. ವೈಎನ್ಕೆ ಅವರಿಗೆ ಕೂರಲು ಪ್ರತ್ಯೇಕ ಸ್ಥಳದ ವ್ಯವಸ್ಥೆ ಮಾಡಲಾಯಿತು. ಅವರು ನಾಮಕಾವಸ್ಥೆ ಸಲಹೆಗಾರರಾಗಿದ್ದರು. ಪ್ರತಿದಿನ ಬಂದು ಒಂದಷ್ಟು ಸಮಯವಿದ್ದು ಹೋಗುತ್ತಿದ್ದರು. ೧೯೮೪ರಲ್ಲಿ ನಿವೃತ್ತಿ ಹೊಂದಿದರು.೧೯೮೩ರ ಇನ್ನೊಂದು ಬದಲಾವಣೆ ಎಂದರೆ ಬಿ ವಿ ವೈಕುಂಠರಾಜು ಅವರನ್ನು ಸಾಪ್ತಾಹಿಕ ಪುರವಣಿಯಿಂದ ಪಲ್ಲಟಗೊಳಿಸಿದ್ದು.

೧೯೮೩ರ ಮಧ್ಯ ಭಾಗದಲ್ಲಿ ವೈಕುಂಠರಾಜು ಅವರನ್ನು ʼಸಾಪು’ದಿಂದ ತೆಗೆದು ಅವರಿಗೆ ಚೀಫ್ ಫೀಚರ್ ರೈಟರ್ ಹುದ್ದೆ ನೀಡಲಾಯಿತು. ತಮ್ಮನ್ನು ʼಸಾಪು’ ದಿಂದ ಬರಖಾಸ್ತು ಮಾಡಲು ಅನಂತಮೂರ್ತಿಯವರ ಒತ್ತಡವೇ ಕಾರಣವೆಂದು ಸಿ ವಿ ರಾಜಗೋಪಾಲ್ ಹೇಳಿದ್ದಾಗಿ ಬಿ ವಿ ವಿ ‘ತಹತಹ’ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ. “ಇದು ನಿಜವೇ ಎಂದು ಅನಂತಮೂರ್ತಿಗೆ ಪತ್ರ ಬರೆದೆ, ‘ಒಬ್ಬ ಮನುಷ್ಯ ಒಂದೇ ಜಾಗದಲ್ಲಿರುವುದು ಅವನಿಗೂ ಒಳ್ಳೆಯದಲ್ಲ ಸಮಸ್ತರಿಗೂ ಒಳ್ಳೆಯದಲ್ಲ ಎನ್ನುವ ದೃಷ್ಟಿಯಿಂದ ನಾನು ಹರಿಕುಮಾರ್‌ ಗೆ ಹೇಳಿದ್ದು ನಿಜ. ಆದರೆ ನೀವಿದ್ದಿದ್ದರೆ ಚೆನ್ನಾಗಿತ್ತು” ಎಂದು ಅನಂತಮೂರ್ತಿಯವರು ಉತ್ತರಿಸಿದ್ದಾಗಿಯೂ ಬಿ ವಿ ವಿ ಬರೆದಿದ್ದಾರೆ.

ವೈಕುಂಠರಾಜು ಅವರನ್ನು ಬೇರೆ ಹುದ್ದೆಗೆ ಬದಲಾಯಿಸಿದ ನಂತರ ಸಾಪ್ತಾಹಿಕ ಪುರವಣಿಯ ಪೂರ್ಣ ಹೊಣೆಯನ್ನ ನನಗೆ ವಹಿಸಲಾಯಿತು. ವೈಕುಂಠರಾಜು ಅವರು ಚೀಫ್ ಫೀಚರ್ ರೈಟರಾಗಿ ಒಂದು ಫೀಚರನ್ನೂ ಬರೆಯಲಿಲ್ಲ. ಸಹಾಯಕ ಸಂಪಾದಕರ ಕೊಠಡಿಯಲ್ಲಿ ಕುಳಿತು ವಾಚಕರವಾಣಿ ಪತ್ರಗಳನ್ನು ನೋಡಿ ಪರಿಷ್ಕರಿಸುವ ಕೆಲಸ ಮಾಡುತ್ತಿದ್ದರು. ಹುದ್ದೆ ಬದಲಾವಣೆಯಿಂದ ಅಸಮಾಧಾನಗೊಂಡಿದ್ದ ಬಿ ವಿ ವಿ ‘ಪ್ರವಾ’ದಲ್ಲಿದ್ದುಕೊಂಡೇ ‘ವಾರ ಪತ್ರಿಕೆ’ಯ ಸಿದ್ಧತೆ ನಡೆಸಿದ್ದರು.

೧೯೮೪ರ ಜನವರಿಯಲ್ಲಿ ರಾಜೀನಾಮೆ ನೀಡಿದರು. ಅವರು ರಾಜೀನಾಮೆ ನೀಡಿದ ಮರುದಿನವೇ ‘ಪ್ರವಾ’ ಮೊದಲ ಪುಟದಲ್ಲಿ ‘ವಾರ ಪತ್ರಿಕೆ’ ಪ್ರಕಟಣೆಯ ಜಾಹೀರಾತು ಪ್ರಕಟವಾಗಿ ಆಡಳಿತವರ್ಗಕ್ಕೆ ಸ್ವಲ್ಪ ಇರುಸುಮುರುಸಾಯಿತು. ಆಡಳಿತ ವರ್ಗ ತಮ್ಮ ಪತ್ರಿಕೆಯ ಜಾಹೀರಾತನ್ನು ಪ್ರಕಟಿಸುವುದಿಲ್ಲವೆಂಬ ಶಂಕೆಯಿಂದಲೋ ಏನೋ ಬಿ ವಿ ವಿ ರಾಜೀನಾಮೆಗೂ ಮುನ್ನ ಜಾಹೀರಾತು ಸಂಸ್ಥೆ ಮೂಲಕ ಜಾಗ ಕಾಯ್ದಿರಿಸಿ, ಜಾಹೀರಾತು ವಿಭಾಗದ ಮ್ಯಾನೇಜರಿಗೂ ಜಾಹೀರಾತಿನ ವಿಷಯ ಗೊತ್ತಾಗದಂತೆ ಕೊನೆ ಗಳಿಗೆಯಲ್ಲಿ ಜಾಹೀರಾತಿನ ಬ್ಲಾಕ್ ನೀಡುವಂತೆ ರಹಸ್ಯವಾಗಿ ಪ್ರಕಟಣೆಗೆ ವ್ಯವಸ್ಥೆ ಮಾಡಿದ್ದರು.

ವೈಕುಂಠರಾಜು ಅವರ ʼವಾರಪತ್ರಿಕೆ’ ಜಾಹೀರಾತು ಪ್ರಕಟವಾದೊಂದೆರಡು ದಿನಗಳಲ್ಲೇ ʼಕನ್ನಡ ಪ್ರಭ’ ರಂಗನಾಥ್ ಅವರು ನನ್ನನ್ನು ಮತ್ತು ಸದಾಶಿವನನ್ನು ಸಂಪರ್ಕಿಸಿ ಭೇಟಿ ಮಾಡುವ ಇರಾದೆ ವ್ಯಕ್ತಪಡಿಸಿದರು. ಭೇಟಿಯಾದಾಗ, ರಂಗನಾಥ್, “ನಾನು ಮತ್ತು ಸದಾಶಿವ ರಾಜೀನಾಮೆ ಕೊಟ್ಟು ʼವಾರಪತ್ರಿಕೆ’ ಸೇರಿದರೆ ಅದು ಪ್ರಚಂಡ ಯಶಸ್ಸು ಗಳಿಸುವುದರಲ್ಲಿ ಅನುಮಾನವೇ ಇಲ್ಲ. ನೀವಿಬ್ಬರು ನಿಮ್ಮ ಪಿಎಫ್ ಹಣವನ್ನು ಅದರಲ್ಲಿ ಬಂಡವಾಳವಾಗಿ ತೊಡಗಿಸಿ ಪಾಲುದಾರರರೂ ಆಗಬಹುದು” ಎಂಬ ಸಲಹೆಯನ್ನು ನಮ್ಮ ಮುಂದಿಟ್ಟರು. ಇದು ರಂಗನಾಥ್ ಅವರ ಸಲಹೆಯೋ ಅಥವಾ ಅವರು ಬಿ ವಿ ವಿ ಅವರ ರಾಯಭಾರಿಯಾಗಿ ಈ ಮಾತುಗಳನ್ನಾಡಿದ್ದರೋ ತಿಳಿಯದು. ಆದರೆ ನಮ್ಮ ನಮ್ಮ ಕೌಟುಂಬಿಕ ಹಿನ್ನೆಲೆಯಲ್ಲಿ, ʼಪ್ರವಾ’ ಬಿಟ್ಟು ಇಂಥ ಅಪಾಯಕಾರಿ ಸಾಹಸಕ್ಕಿಳಿಯುವ ಸ್ಥಿತಿಯಲ್ಲಿ ನಾವಿರಲಿಲ್ಲ.

|ಮುಂದಿನ ಸಂಚಿಕೆಯಲ್ಲಿ|

December 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ |ಕಳೆದ ಸಂಚಿಕೆಯಿಂದ|...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This