ಕಂಠದಾನದಿಂದ ನಿರ್ದೇಶನಕ್ಕೆ..

ಕನ್ನಡ ರಂಗಭೂಮಿಯ ಮಹತ್ವದ ಹೆಸರು ಚಂಪಾ ಶೆಟ್ಟಿ.

ಕಾಲೇಜು ರಂಗ ಶಿಬಿರದ ಮೂಲಕ ರಂಗಭೂಮಿ ಪ್ರವೇಶಿಸಿದ ಈಕೆ ನಂತರ ಚಿತ್ರರಂಗದಲ್ಲಿ ಕಂಠದಾನ ಕಲಾವಿದೆಯಾಗಿ ಹೆಸರು ಮಾಡಿದರು.

ರಂಗ ಮಂಟಪ’ ತಂಡದ ಸ್ಥಾಪಕಿಯೂ ಹೌದು. ಈ ತಂಡಕ್ಕೆ ‘ಗಾಂಧಿ ಬಂದ’ ನಿರ್ದೇಶಿಸಿ ಸೈ ಅನಿಸಿಕೊಂಡರು. ನಂತರ ವೈದೇಹಿಯವರ ‘ಅಕ್ಕು’ ಅಮ್ಮಚ್ಚಿ ಎಂಬ ನೆನಪು ಆಗಿ ಚಿತ್ರ ನಿರ್ದೇಶಕಿಯೂ ಆದರು.ಒಂದು ಸುಂದರ ಕಾವ್ಯದಂತಿರುವ ‘ಅಮ್ಮಚ್ಚಿ ಎಂಬ ನೆನಪು’ ತೆರೆಯ ಮೇಲೆ ಅರಳಿದ ಕಥೆ ನಿಮ್ಮ ಮುಂದೆ..

ಇತ್ತೀಚೆಗೆ, ನಮ್ಮ ತಂಡದ ಮೈತ್ರಿ ಶ್ರೀನಿವಾಸ್ ಅವರು 2012 ರಲ್ಲಿ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ನನ್ನ ಸಂದರ್ಶನದ ಫೋಟೋವನ್ನ ವಾಟ್ಸಾಪ್ ನಲ್ಲಿ ಕಳುಹಿಸಿದಾಗ, ಶೀರ್ಷಿಕೆ ನೋಡಿ ನಾನು ಶಾಕ್ ಆಗಿದ್ದೆ.

ಸಂದರ್ಶನದ ಜೊತೆ, ದೊಡ್ಡಕ್ಷರಗಳಲ್ಲಿ “ಸಿನೆಮಾ ನಿರ್ದೇಶಿಸುವಾಸೆ ” ಎಂಬ ಶೀರ್ಷಿಕೆ… ಅರೆ, ಈ ಆಸೆ ಆಗಲೇ ನನಗೆ ಇತ್ತಾ? ಹಾಗಾದರೆ, 2018 ರಲ್ಲಿ ಸಿನೆಮಾ ನಿರ್ದೇಶಿಸಿದ ನನಗೆ ಈ ಬಯಕೆ ಶುರವಾದದ್ದು ಯಾವಾಗ? ಅಂತೆಲ್ಲಾ ನನ್ನನ್ನೇ ನಾನು ಇಂಟರ್ವ್ಯೂ ಮಾಡಿಕೊಳ್ಳಲು ತೊಡಗಿದಾಗ ನೆನಪುಗಳ ಸರಮಾಲೆ ಬಿಚ್ಚಿಕೊಂಡಿತ್ತು..

ಹೌದು, ಯಾವುದೇ ಕ್ರಿಯಾಶೀಲ ಕೆಲಸವೂ ಅಷ್ಟೇ, ಇಂದು ಹುಟ್ಟಿ ನಾಳೆ ಬೆಳೆಯುವುದಲ್ಲ. ಎಂದೋ ಮನದೊಳಗೆ ಬಿತ್ತಿದ್ದು ,ಎಂದೋ ಚಿಗುರೊಡೆದು ,ಮತ್ತೆಂದೋ ಮರವಾಗಿ ಬೆಳೆಯುತ್ತದೆ..

1997 ರಲ್ಲಿ ಕೇಸರಿ ಹರವೂ ಅವರ ನಿರ್ದೇಶನದ ‘ಭೂಮಿಗೀತ’ ಸಿನೆಮಾದ ಮೂಲಕ ಕಂಠದಾನ ಕ್ಷೇತ್ರಕ್ಕೆ ಕಾಲಿಟ್ಟು ನಂತರ ಉಪೇಂದ್ರ ಅವರ “A’ ಚಿತ್ರದ ಮುಖಾಂತರ ಕಂಠದಾನವನ್ನು ವೃತ್ತಿಯಾಗಿ ತೆಗೆದುಕೊಂಡಾಗಿನಿಂದ, ಸತತವಾಗಿ ಇಪ್ಪತ್ಮೂರು ವರ್ಷಗಳ ಕಾಲ ಸಿನೆಮಾ, ಧಾರಾವಾಹಿ, ಸಾಕ್ಷಚಿತ್ರ, ನಿರೂಪಣೆ, ಕಾರ್ಟೂನ್, ಹೀಗೆ ಎಲ್ಲೆಲ್ಲಿ ಅವಶ್ಯವೋ ಅಲ್ಲೆಲ್ಲಾ ಧ್ವನಿಯನ್ನು ದುಡಿಸಿಕೊಡಿದ್ದೆ… ಕಂಠದಾನ ನನ್ನ ಅಚ್ಚುಮೆಚ್ಚಿನ ಕೆಲಸ. ವಿವಿಧ ಪಾತ್ರಗಳು, ವಿವಿಧ ರೀತಿಯ ಎಮೋಷನ್ಸ್ , ಪ್ರತಿ ದಿನವೂ ಹೊಸತನ ಹೊಸ ಚ್ಯಾಲೆಂಜಸ್…

ಹಲವಾರು ನಿರ್ದೇಶಕರ ಸಿನೆಮಾಗಳಿಗೆ ಡಬ್ ಮಾಡುವಾಗ ಸಿನೆಮಾದ ರಷಸ್ ಗಳನ್ನು ನೋಡುತ್ತಾ, “ಇದು ಹೀಗಿರಬೇಕಿತ್ತು, ಈ ದೃಶ್ಯ ಬೇಕಿರಲಿಲ್ಲವೇನೋ, ಇಲ್ಲಿ ಅಭಿನಯ ಸರಿಯಾಗಿಲ್ಲ, ಇದು ಅದ್ಭುತವಾದ ದೃಶ್ಯ, ಇಂತಾ ಸೀನ್ ನ ಕಲ್ಪನೆ ಹೇಗೆ ಬಂತು? ಈ ಪಾತ್ರಕ್ಕೆ ಇವರು ಒಪ್ಪುತ್ತಿಲ್ಲ” ಅಂತೆಲ್ಲಾ ಮನದೊಳಗೇ ಚಿತ್ರ ವಿಮರ್ಶೆ ಮಾಡುತ್ತಾ ನನ್ನೊಳಗಿನ ನಿರ್ದೇಶಕಿ ತನ್ನ ಕೆಲಸವನ್ನು ಮಾಡುತ್ತಲೇ ಇದ್ದಳೆಂಬುದು ನನಗೆ ಅರಿವಾಗಿದ್ದು ತಡವಾಗಿ…

ಚಿತ್ರ ನಿರ್ದೇಶನ ಮಾಡಬೇಕೆಂಬುದು ನನ್ನ ಕನಸು. ಮಾತ್ರವಲ್ಲ, ನಮ್ಮ ತಂಡದ ಆಸೆ ಕೂಡಾ ಆಗಿತ್ತು… ಹಾಗಾಗಿ ನನ್ನ ಈ ಸಿನೆಮಾ ನಿರ್ದೇಶನದ ಕನಸನ್ನು ವ್ಯಕ್ತಪಡಿಸಿದಾಗ ಇಡೀ ತಂಡ ಸಂಭ್ರಮದಿಂದ ಸಿದ್ಧವಾಗಿಬಿಟ್ಟಿತು…ಯಾವ ಕತೆ?, ಯಾರ ಕತೆ? ಎಂಬ ಎಲ್ಲರ ಕುತೂಹಲದ ಪ್ರಶ್ನೆಗಳಿಗೆ ನನ್ನ ಉತ್ತರವೂ ಸಿದ್ಧವಾಗಿತ್ತು…

“ಅಮ್ಮಚ್ಚಿಯ ಅಂತ್ಯವೇ ಸಿನೆಮಾದ ಆರಂಭ..”

“ಈಗಲೂ ನೆನೆಯುತ್ತೇನೆ ಆ ಕಣ್ಣುಗಳನ್ನು.. ಮಿಣಕ್ಕನೆ ಮುಚ್ಚಿ ತರೆದು ನಕ್ಕ, ಅಮ್ಮಚ್ಚಿಯ ಅದೇ ಕಣ್ಣುಗಳನ್ನು”
ಅಮ್ಮಚ್ಚಿ ಕತೆಯ ಕ್ಲೈಮ್ಯಾಕ್ಸ್ ನಲ್ಲಿ ವೈದೇಹಿ ಮೇಡಂ ಬರೆದ ಈ ಸಾಲುಗಳು ನನ್ನನ್ನು ಕಾಡಿದ್ದು ಎಷ್ಟೆಂದರೆ, ಅಮ್ಮಚ್ಚಿ ಸಿನೆಮಾ ಆಗಲು ಕಾರಣವಾಗುವಷ್ಟು …

ವೈದೇಹಿಯವರ ಎಲ್ಲ ಕತೆಗಳಂತೆ ‘ಅಕ್ಕು’ ಮತ್ತು ‘ಅಮ್ಮಚ್ಚಿ’ ಕೂಡ ಅತ್ಯಂತ ಸೂಕ್ಷ್ಮ ಸಂವೇದನೆಗಳನ್ನು ಒಳಗೊಂಡ ಕತೆಗಳು… ಇದನ್ನು ರಂಗದ ಮೇಲೆ ತರುವಾಗ ಅಂತಹ ಅನೇಕ ಸಂವೇದನೆಗಳನ್ನು ಪ್ರೇಕ್ಷಕರಿಗೆ ಮುಟ್ಟಿಸಲು ಸಾಧ್ಯವಾಗಿರಲಿಲ್ಲ… ಮೇಲೆ ತಿಳಿಸಿದ ಕ್ಲೈಮ್ಯಾಕ್ಸ್ ನಲ್ಲಿ ನಕ್ಕು, ಮಿಟುಕಿಸುವ ಅಮ್ಮಚ್ಚಿಯ ಕಣ್ಣಿನ ಹೊಳಪು ಸಿನೆಮಾದಲ್ಲಿ ಕಾಣುವಂತೆ ರಂಗದ ಮೇಲೆ ಕಾಣಿಸಲು ಸಾಧ್ಯವಿರಲಿಲ್ಲ,… ಕತೆಯಲ್ಲಿನ ಇಂತಾ ಅನೇಕ ಸೂಕ್ಷ್ಮ ಗಳನ್ನು ಪರಿಣಾಮಕಾರಿಯಾಗಿ ಹೇಳಬೇಕೆಂದೇ , ನಾಟಕವಾದ ಅದೇ ಮೂರು ಕತೆಗಳನ್ನು ಸಿನೆಮಾ ಮಾಡಲು ನಿರ್ಧರಿಸಿದ್ದೆ…

ಇದೀಗ ಮತ್ತೊಮ್ಮೆ ಆತಂಕ, ವೈದೇಹಿ ಮೇಡಂ ಅವರ ಪರ್ಮಿಷನ್ ಗಾಗಿ…. ನಾಟಕಕ್ಕೇನೋ ಒಪ್ಪಿಬಿಟ್ಟರು, ಸಿನೆಮಾಗೆ ಏನನ್ನುವರೋ ಅಂತ ಅನುಮಾನದಲ್ಲಿಯೇ ಕಾಲ್ ಮಾಡಿದೆ, “ಮೇಡಂ, ಅಕ್ಕು ಸಿನೆಮಾ ಮಾಡಬೇಕೆಂದಿದ್ದೇವೆ “… ತಕ್ಷಣವೇ ಆ ಕಡೆಯಿಂದ ಮೇಡಂ , ” ಮಾಡಬಹುದು ಕಣೇ ಯಾರು ಡೈರೆಕ್ಟರ್ ? ” ಅನ್ನುವುದೇ? ನಾನೇ ಎಂದು ಹೇಳಲು ಸಂಕೋಚವಾಗಿ “ಯೋಚಿಸಿಲ್ಲ ಮೇಡಂ” ಅಂದು ಬಿಟ್ಟೆ. ಅದಕ್ಕೆ ಅವರು, “ಸರಿ, ಹಾಗಾದರೆ, ಯಾರು ಡೈರೆಕ್ಟ್ ಮಾಡುತ್ತಾರೆ ಹೇಳು ಆಮೇಲೆ ನೋಡೋಣ” ಆಂದರು….

ಕಾಲ್ ಕಟ್ ಆದ ಮೇಲೆ ಎಲ್ಲರಿಂದ ಬೈಸಿಕೊಂಡಿದ್ದೆ.. ಸ್ವಲ್ಪ ದಿನದ ನಂತರ ಸ್ಕ್ರಿಪ್ಟ್ ಮೇಲೆ ಇನ್ನಷ್ಟು ಕೆಲಸ ಮಾಡಿ ಇನ್ನಷ್ಟು ಕಾನ್ಫಿಡೆನ್ಸ್ ತುಂಬಿಕೊಂಡು ಮೇಡಂಗೆ ಕಾಲ್ ಮಾಡಿ ಕಾನ್ಫಿಡೆನ್ಸ್ ನಿಂದಲೇ “ಸಿನೆಮಾ ಮಾಡುತ್ತೇವೆ ಮೇಡಂ, ನಾನೇ ಡೈರೆಕ್ಟ್ ಮಾಡುತ್ತೇನೆ” ಅಂತ ಅವರು ಕೇಳುವ ಮೊದಲೇ ಹೇಳಿಬಿಟ್ಟಿದ್ದೆ.

ಕೂಡಲೇ ಅವರು “ಹಾಗಾದರೆ ಅಡ್ಡಿ ಇಲ್ಲ ಕಣೇ ಮಾಡು” ಅಂದುಬಿಟ್ಟರು. . ಮತ್ತೊಮ್ಮೆ ಶಾಕ್ ಆಗುವ ಸರದಿ ನನ್ನದು.., ನಿನಗೆ ಏನು ಅನುಭವ ಇದೆ? ಎಷ್ಟು ಸಿನೆಮಾ ಕೆಲಸ ಮಾಡಿದ್ಯಾ? ಎಂಬೆಲ್ಲಾ ಪ್ರಶ್ನೆಗಳಿಗೆ ಸಿದ್ಧಳಾಗಿ, ಉತ್ತರಿಸಲು ತಯಾರಾಗಿದ್ದವಳಿಗೆ, ಒಮ್ಮೆಲೇ ಸಲೀಸಾಗಿ ಸಿಕ್ಕ ಪರ್ಮಿಷನ್ನಿಂದ ಖುಷಿ ,ಆಶ್ಚರ್ಯ, ಎಲ್ಲವೂ ಆಗಿತ್ತು…

ಆದರೆ ನಾನು ಅಂದುಕೊಂಡಷ್ಟು ಸಲೀಸಾಗಿ ಒಪ್ಪಿದ್ದಲ್ಲ, ವೈದೇಹಿ ಮೇಡಂ.. ಅವರೇ ತಿಳಿಸಿದಂತೆ, ಅವರೊಳಗೊಂದು ಮಂಥನ ನಡೆದೇ ಇತ್ತು…ನನಗೆ ಸಿಕ್ಕ ಈ ಪ್ರೀತಿಯ ಒಪ್ಪಿಗೆಯ ಬಗ್ಗೆ ಕುತೂಹಲದಿಂದ ಒಮ್ಮೆ ಕೇಳಿದಾಗ ಅವರು ಕೊಟ್ಟ ಉತ್ರರ ಹೀಗಿತ್ತು… “ನಾನು ಸುಮ್ಮನೆ ಹೂಂ ಅಂದಿದ್ದಲ್ಲವೆ. ಹಾಗೆ ಅಂದಿದ್ದರೆ ನನ್ನ ಕತೆ ಸಿನೆಮಾ ಆಗಬೇಕು ಎಂಬ ಒಳ ಆಸೆ ಇದ್ದಂತೆ . ಇದು ಹಾಗಲ್ಲ…

ಒಂದು :. ನಿನ್ನ ಇಡೀ ತಂಡದ ಕಾಳಜಿ ಮತ್ತು ಮನೋಧರ್ಮ ಆಗಲೇ ನನಗೆ ಮಂದಟ್ಟಾಗಿತ್ತು. ಆ ದೃಷ್ಟಿಯಿಂದ ಒಂದು ಗಟ್ಟಿ ವಿಶ್ವಾಸ ಬೆಳೆದಿತ್ತು.

ಎರಡು : ಸಿನಿಮಾ ರಂಗದಲ್ಲಿ ನಿರ್ದೇಶಕಿಯರು ಬೆರಳೆಣಿಕೆಯಷ್ಟು ಮಂದಿ. ಅಷ್ಟೇ ಸಾಕೆ ಒಪ್ಪಲು? ಸಾಲದು.

ಮೂರು : ನಿರ್ದೇಶಿಸಲು ಮುಂದೆ ಬರುವವರಿಗೆ ಪ್ರತಿಭೆ ಮತ್ತು ಖಚಿತತೆ ಬೇಕು. ನಿನ್ನಲ್ಲಿ ನಾನವನ್ನು ಕಂಡುಕೊಂಡಿದ್ದೆ.
ನೀನು ಸಿನಿಮಾ ಕೆಡಿಸುವುದಂತೂ ಇಲ್ಲ ಎಂಬ ಗ್ಯಾರಂಟಿ ಇತ್ತು.
ಇಂತಹ ಹೆಣ್ಣಿಗೆ ಅವಕಾಶ ಕೊಡದೆ ಇರುವುದೆ? ಅವಕಾಶ ವನ್ನೇ ಕೊಡದೆ ನಿರ್ದೇಶಕಿಯರ ಕೊರತೆ ಇತ್ಯಾದಿ ಮಾತಾಡುವುದು ಹಿಪಾಕ್ರಸಿ ಅಲ್ಲವೆ? ನನ್ನೊಳಗೆ ಈ ಎಲ್ಲ ಮಂಥನ ಇದ್ದೇ ಇತ್ತು “…..

ವೈದೇಹಿ ಮೇಡಂ ಅವರ., ನಮ್ಮ‌ ತಂಡದ ಮೇಲಿನ ಈ ತುಂಬು ಪ್ರೀತಿ , ವಿಶ್ವಾಸ , ಸಿನೆಮಾ ಮಾಡುವ ನಮ್ಮ ಅತಿದೊಡ್ಡ ಸಾಹಸಕ್ಕೆ ಬಲ ನೀಡಿತ್ತು.. ಎಲ್ಲರೂ ಎಷ್ಟು ಖುಷಿಯಾಗಿದ್ದೆವೆಂದರೆ, ಅಂದು ಸಂಜೆ ಎಲ್ಲಾ ಸೇರಿ ಮನೆಯಲ್ಲೇ ಪಾರ್ಟಿ ಮಾಡಿ ಸಿನೆಮಾ ಆಗೇಬಿಟ್ಟಿತು ಅನ್ನುವ ಹಾಗೆ ಸಂಭ್ರಮಿಸಿದ್ದೆವು., ಆದರೆ ಅಂದುಕೊಂಡ ಕೂಡಲೇ ಆಗಿಬಿಡಲು ಇದು ನಾಟಕ ಅಲ್ಲವಲ್ಲ..

ಸಿನೆಮಾಗೆ ಎಲ್ಲಾ ಸಾಧ್ಯತೆಗಳಿಗಿಂತ ಮುಖ್ಯವಾಗಿ ಬೇಕಾದದ್ದು ಹಣ… ನಮ್ಮಲ್ಲಿ ಯಾರೂ, ಸಿನೆಮಾಕ್ಕೆ ಹಣ ಹಾಕುವಷ್ಟು ಶ್ರೀಮಂತರಲ್ಲ , ಇದೇ ಆತಂಕದಲ್ಲಿದ್ದ ನನಗೆ, ನೀನು ಸ್ಕ್ರಿಪ್ಟ್ ಪಕ್ಕಾ ಮಾಡು ನೋಡೋಣ ಎಂಬ ಭರವಸೆ, ತಂಡದಿಂದ..

ನಮ್ಮ ತಂಡವೇ ಹಾಗೇ ಏನದರೂ ಮಾಡಬೇಕೆಂದರೆ ಮಾಡೇ ತೀರಬೇಕೆನ್ನುವ ಛಲ.. ಅದೇ ಭರವಸೆಯಲ್ಲಿ ಸಿನೆಮಾಕ್ಕೆ ಹೊಂದುವ ಹಾಗೇ ಕೆಲವು ಬದಲಾವಣೆಯೊಂದಿಗೆ ಚಿತ್ರಕತೆ ಸಿದ್ಧಮಾಡಿದೆ.. ಮೇಡಂ ಸಂಭಾಷಣೆಯನ್ನೂ ಬರೆದುಕೊಟ್ಟರು… ಹಣಹಾಕಲು ಸಾಧ್ಯವಿರುವ ಕೆಲವು ಪರಿಚಿತರ ಪಟ್ಟಿಯೂ ಸಿದ್ಧಗೊಂಡಿತು. ತಾತ್ಕಾಲಿಕವಾಗಿ ಸಿನೆಮಾ ಕಛೇರಿಯಾಗಿ ಬದಲಾಗಿದ್ದ ನಮ್ಮ ಮನೆಯಲ್ಲಿಯೇ ಸಿನೆಮಾ ಕುರಿತಂತೆ ಕೆಲವು ಸಭೆಗಳೂ ನಡೆದಿದ್ದವು. ಅಂತದ್ದೇ ಒಂದು ಸಭೆಯಲ್ಲಿ ಇದ್ದಕಿದ್ದಂತೆ ತೀರ್ಮಾನವೊಂದು ಆಗಿಬಿಟ್ಟಿತ್ತು..

ಅದೇನೆಂದರೆ, “ಬೇರೆ ಯಾರೋ ನಮ್ಮ ಸಿನೆಮಾಗೆ ಹಣ ಹಾಕುವುದು ಬೇಡ.. ಯಾರೊಬ್ಬರಿಗೂ ಬರ್ಡನ್ ಆಗದೇ ನಮ್ಮಲ್ಲಿಯೇ ಸಾಧ್ಯವಾದವರು ಹಲವರು ಸೇರಿಕೊಂಡು ಚಿತ್ರ ನಿರ್ಮಾಣ ಮಾಡೋಣ” ಎಂದು…, ಗಂಡನೆನ್ನುವ ಕರ್ಮಕ್ಕೆ ಪಾಪ, ಮೊದಲು ಪ್ರಕಾಶ್ ಶೆಟ್ಟಿಯವರೇ ಮುಂದೆ ಬಂದು, “ಮೊದಲು ಬಜೆಟ್ ಮಾಡೋಣ ನಾನು ಒಂದು ಶೇರ್ ಹಾಕುತ್ತೇನೆ, ಬೇರೆ ಯಾರಾದರೂ ಮುಂದೆ ಬರಬಹುದು ಆದರೆ ಒಂದು ಕಂಡೀಷನ್, ಯಾರು ಹಣ ಹಾಕಿದರೂ ಅದು ಹಿಂದೆ ಬರದಿದ್ದರೂ ತೊದರೆಯಿಲ್ಲ ಎನ್ನುವ ಧೈರ್ಯದಿಂದಲೇ ಹಾಕಬೇಕು ” ಎಂದರು.

ಅದೇ ಉತ್ಸಾಹದಲ್ಲಿ ಗೀತಾ ಸುರತ್ಕಲ್, ಡಾ. ರಾಧಾಕೃಷ್ಣ ಉರಾಳರು, ನನ್ನ ತಮ್ಮನ ಹೆಂಡತಿ ವಂದನಾ ಸಿನೆಮಾ ನಿರ್ಮಾಣಕ್ಕೆ ಕೈಜೋಡಿಸಲು ಮುಂದಾದರು..

ಮುಂದೆ ಅಂದುಕೊಂಡದ್ದಕ್ಕಿಂತ ಬಜೆಟ್ ಜಾಸ್ತಿಯಾದಾಗ ಆಪತ್ಬಾಂಧವರಂತೆ ಜೊತೆಗೂಡಿದವರು ಸ್ನೇಹಿತ ಮುನಿವೆಂಕಟಪ್ಪನವರು…., ಅಂತೂ ಅಮ್ಮಚ್ಚಿ ತರೆಗೆ ಬರಲು ತಯಾರಾಗತೊಡಗಿದಳು… ಸಿನೆಮಾದಲ್ಲಿ ಅಕ್ಕುಗಿಂತ ಅಮ್ಮಚ್ಚಿ ಕತೆ ಕೇಂದ್ರ ಬಿಂದು ಎನ್ನುವ ಕಾರಣಕ್ಕೆ ಸಿನೆಮಾಗೆ “ಅಮ್ಮಚ್ಚಿಯೆಂಬ ನೆನಪು ” ಎಂಬ ಹೆಸರನ್ನೇ ಇಡಲಾಯಿತು…‌

ಆದರೆ, ನಮ್ಮ ನಿರ್ಮಾಣ ಸಂಸ್ಥೆಗೆ ಒಂದು ಹೆಸರು ಬೇಕಲ್ಲಾ , ರಂಗಭಾಷೆಯಲ್ಲಿ “ಏಪ್ರಾನ್”ಎಂದರೆ, ರಂಗದ ಮುಂದುವರೆದ ಭಾಗ ಎಂದು…. “ರಂಗ ಮಂಟಪ” ತಂಡದ ಮುಂದುವರೆದ ಭಾಗ ಚಿತ್ರನಿರ್ಮಾಣ… ಹಾಗಾಗಿ, “ಏಪ್ರಾನ್ ಪ್ರೊಡಕ್ಷನ್ಸ್” ಎಂಬ ಹೆಸರಿನಲ್ಲಿ ಅಧಿಕೃತವಾಗಿ ರಿಜಿಸ್ಟರ್ ಆಗಿ “ಅಮ್ಮಚ್ಚಿ”ಯನ್ನು ತೆರೆಗೆ ತರಲು ತಂಡ ಸಜ್ಜಾಯಿತು…

‍ಲೇಖಕರು ಚಂಪಾ ಶೆಟ್ಟಿ

September 20, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾಡಿದ ‘ನಾರಸಿಂಹ’

ಕಾಡಿದ ‘ನಾರಸಿಂಹ’

ಕಿರಣ್ ಭಟ್ ಅಭಿನಯ: ನೃತ್ಯನಿಕೇತನ ಕೊಡವೂರುರಚನೆ: ಸುಧಾ ಆಡುಕಳಸಂಗೀತ, ವಿನ್ಯಾಸ, ನಿರ್ದೇಶನ: ಡಾ.ಶ್ರೀಪಾದ ಭಟ್ನೃತ್ಯ: ಮಾನಸಿ ಸುಧೀರ್,...

ಕಾಲದಾ ಕನ್ನಡಿ

ಕಾಲದಾ ಕನ್ನಡಿ

ವಿಜಯಾ ಮೋಹನ್ ಇದ್ಯಾಕುಡುಗಿ ಇಂಗೆ ಕಂಬ ನಿಂತಂಗೆ ನಿಂತು ಬುಟ್ಟೆ, ಇದು ಕಳ್ಳು ಬಳ್ಳಿಯೆಂಬ ಅತ್ತಿಗೆಯ ದೊಡ್ಡಮ್ಮನ ಮಾತು. ಅವಳು ಅಂಗೆ...

ಕುವೆಂಪು ಮನೆ ‘ಉದಯರವಿ’ಸ್ಮಾರಕವಾಗಲಿ

ಕುವೆಂಪು ಮನೆ ‘ಉದಯರವಿ’ಸ್ಮಾರಕವಾಗಲಿ

ಜಿ ಟಿ ನರೇಂದ್ರ ಕುಮಾರ್ ರಾಷ್ಟ್ರಕವಿ ಕುವೆಂಪು ರವರು ಮೈಸೂರಿನಲ್ಲಿ ಸ್ವತಃ ಕಟ್ಟಿಸಿದ ಬಾಳಿ ಬದುಕಿದ ಮನೆ. ಈ ಮನೆಗೆ ಸರ್ವೋದಯ ಚಳುವಳಿಯ...

೧ ಪ್ರತಿಕ್ರಿಯೆ

  1. T S SHRAVANA KUMARI

    ಅಮ್ಮಚ್ಚಿಯೆಂಬ ನೆನಪು ಚಿತ್ರ ಮತ್ತು ನಾಟಕ ಎರಡನ್ನೂ ನೋಡಿದ್ದೇನೆ
    ಸೊಗಸಾಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: