ಕಟ್ಟೆಗೆ ಒಡ್ಡು ..

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿಮಣ್ಣ ಒಡನಾಟರಂಗಭೂಮಿಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು.

‘ಅಲ್ಲೆ ಆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

ಒಕ್ಕಲುತನದ ವಿಸ್ಮಯಗಳನ್ನು ಕೆಲವೊಮ್ಮೆ ವಿವರಿಸಲಾಗಲ್ಲ. ಹೊಲಗದ್ದೆ, ಕೆರೆಕಟ್ಟೆಗಳೊಳಗಿಂದ ಅಂಬಿನ ಪಸ್ಮೆಯನ್ನು ಸವಿದು ಸವಿದು ಫಲವತ್ತತೆಯ ಕಳೆ ಅವುಚಿಕೊಂಡು ತನ್ನ ಮೊಗವನ್ನು ಸಿಂಗರಿಸಿಕೊಂಡೆ ಗಗನದ ಕಡೆಗೆ ನಡೆದೇ ನಡೆಯುವಂತೆ ನೇರ ಬೆಳೆದು ಅಗಲಕ್ಕೆ ಹರಡಿ ಹಸಿರು ಗರಿ, ಗೊನೆ ಹೊತ್ತು ನಿಂತು ಕಾಲಕಾಲಕ್ಕೆ ಮಾಗುವ ತೆಂಗು ನಮ್ಮ ಮನೆಗಳಲ್ಲಿ ಎಷ್ಟೆಲ್ಲ ಪ್ರಯೋಜನವಾಗಿ ಬಂದು ಬಿಡುತ್ತದೆಂದರೆ ಒಲೆಯಲ್ಲಿ ಅನಲ ಹತ್ತಿದರೆ ಈಳಿಗೆ ಮಣೆಗೆ ಕಾಯೋಳು, ನೀರೊಲೆಗೆ ಕಂಕಿ, ಎಡೆಮಟ್ಟೆ, ಮಟ್ಟೆ, ಚಿಪ್ಪು, ಕುರಂಬಳೆ, ತೆಂಗಿನ ಸ್ಯಾಲೆ ಹೀಗೆ ನಮ್ಮ ಬದುಕಿನ ಅಂಗಳದಲ್ಲಿ ಚೆಲ್ಲಿಕೊಳ್ಳುವ ಪರಿಯೇ ಅನನ್ಯ.

ನಂಜುಂಡ ಕವಿ ತನ್ನ ಕಾವ್ಯವೊಂದರಲ್ಲಿ “ಕಡಲುಗಳು ಆ ‘ನಾಡಸಿರಿ’ಯ ಮೊಗವ ನೋಡೆ ಬಿಡದೆ ಐತಂದುವೆಂಬಂತೆ” ಎಂಬುದಾಗಿ ಕನ್ನಡ ನಾಡಿನ ಸಿರಿಯನ್ನು ವರ್ಣಿಸುತ್ತಾನೆ. ಇದನ್ನು ಓದುವಾಗಲೆಲ್ಲ ಕನ್ನಡ ನಾಡಿನ ಸೊಬಗಿನಲ್ಲಿ ನನ್ನೂರಿನ ಒಕ್ಕಲುತನದ ಬೇರುಗಳಾದ ಕಟ್ಟೆಗಳು ಕೂಡ ಪಾಲು ಗಳಿಸಿವೆಯೇನೋ ಎಂಬಂತೆ ಸಂತಸ ಧರಿಸುತ್ತೇನೆ. ಅಪ್ಪ ದೊಡ್ಡಪ್ಪಂದಿರು ಊರಿನ ಅನೇಕ ಒಕ್ಕಲುಗಳು ತಗ್ಗು ಇರುವ ಪ್ರದೇಶಗಳಿಗೆ ಒಡ್ಡು ಕಟ್ಟಿ ತೆಂಗಿನ ತೋಟ ಮಾಡಿದ್ದಾರೆ. ಇವುಗಳಿಗೆಲ್ಲ ನುರ್ಸುಮಜ್ಜನ ಕಟ್ಟೆ, ಸಿಂಗ್ದಳ್ಳೇರ್ ಕಟ್ಟೆ, ಒಡ್ಗಟ್ಟೆ ಹೀಗೆ ಇರುವ ಹೆಸರುಗಳು ಕಟ್ಟೆಯ ಫಲವತ್ತತೆಗೆ ಹಗಲಿರುಳು ದುಡಿದವರ ಅಂಕಿತವನ್ನೇ ಗುರುತಾಗಿ ಹೊಂದಿವೆ.

ನಮ್ಮೂರಿನ ಬಹುಪಾಲು ಮಕ್ಕಳ ಬಾಲ್ಯ ಈ ಕಟ್ಟೆಗಳ ತೇವದಲ್ಲಿ ರಂಗೆದ್ದಿದೆ. ರಜೆಯ ಕಾಲವನ್ನು ಈ ಕಟ್ಟೆಗಳ ಅಂಗಳದಲ್ಲಿ ಕಳೆದ ನನಗೆ ಅನಂತವನ್ನು ಮುಟ್ಟಿ ಬಂದಷ್ಟು ಬೆರಗುಗಳು ಕಂಡಿವೆ. ನನ್ನ ದೊಡ್ಡಪ್ಪ ನುರ್ಸುಮಜ್ಜನ ಕಟ್ಟೆಯಲ್ಲಿ ಬೆಳಗು ಬೈಗುಳಗಳನ್ನು ಕಂಡವರು. ಈ ಕಟ್ಟೆಗೆ ಒಡ್ದು ಕಟ್ಟಿಸಿದ ಮೇಲೆ ಮಳೆಗಾಲದಲ್ಲಿ ಸುತ್ಮುತ್ಲು ನೀರೆಲ್ಲ ಬಂದು ಈ ಕಟ್ಟೆಗೆ ಬೀಳವು. ಅಡವಿಯಲ್ಲಿ ಬಿದ್ದು ಸಾಗುವ ಅದೆಷ್ಟು ಕಸಕಡ್ಡಿ ತರಾವರಿ ಮೃಚ್ಛವೆಲ್ಲ ಏಕಗೊಂಡಂತೆ ಬಂದು ಈ ಒಡ್ಡಿನ ಮೂಲಕ ಕಟ್ಟೆಯ ಹೃದಯ ಸೇರಿದರೆ ಅಬ್ಬಾ! ಅಚ್ಚರಿಗಳು ಜನಿಸುತ್ತವೆ.

ನಾವು ಚಿಕ್ಕವರಿದ್ದಾಗ ಕಂಡ ದೊಡ್ಡ ಮಳೆಗಳು ನಮ್ಮೂರಿನ ಎಲ್ಲಾ ಕಟ್ಟೆ ತೋಟಗಳನ್ನು ಮಕ್ಕಳಂತೆ ಬೆಳೆಸಿವೆ. ಎಲ್ಲಿ ಅಂಬಿನ ಅಭಾವ ಕಾಣಿಸಿದರು ಈ ಕಟ್ಟೆಗಳಲ್ಲಿ ಮಾತ್ರ ಕಾಣಲ್ಲ. ಮೊದಲಿನಂತೆ ದೊಡ್ಮಳೆಗಳು ಬರದಿದ್ರು ಬಂದ ಮಳೆ ನೀರನ್ನು ಕಡುಬೇಸಗೆಯವರೆಗೂ ತನ್ನೊಡಲಿಗೆ ತುಂಬಿಕೊಳ್ಳುವ ಈ ನೆಲಗಳು ತೆಂಗಿನ ಬೇರುಗಳು ಒಣಗದಂತೆ ಕಾಪಿಟ್ಟುಕೊಂಡಿವೆ. ಕಾಯಿ ಕಿತ್ತು ಮನೆಮುಂದಿನ ಅಂಗಳಕ್ಕೆ ಏರಿದರೆ ಓಡಾಡೋ ಊರಗ್ಳು ಜನ್ವೆಲ್ಲ ಕೇಳೋರೆ.. ಕಟ್ಟೆಗ್ಳು ಕಾಯ್ ಕಿತ್ರ? ಅಬಬಾ ಏನ್ ಗಾತ್ರ ಬಂದವ್ನೋಡು ಕಾಯ್ಗುಳು; ಎತ್ತೆತ್ಲಗ್ಳು ಮಣ್ಣೆಲ್ಲ ಒತ್ಕಂಬಂದು ಕಟ್ಟೆಗೆ ಕೂಡುತ್ನೋಡು ಮಳ್ಗಾಲ ಅದ್ಕೆ ಆ ಕಟ್ಟೆನೆಲ ಇಂಥಾ ಪಸ್ಲು ಕೊಡದು ಅನ್ನೋರು.

ಮಳ್ಗಾಲ ಸರಿಯಾಗಿ ಆಗ್ದಿದ್ರು ಇಲ್ಲಿನ ತೋಟಗಳು ಹದ ಕಳ್ಕಮಲ್ಲ. ಅದೆಷ್ಟು ಫಲವತ್ತಾದ ಮಣ್ಣು ನೀರು ಇಲ್ಲಿ ಇಂಗೆವೊ ಅವೆಲ್ಲ ಪಸ್ಲಾಗಿ ಒಕ್ಕಲನ್ನು ನಡೆಸಿವೆ. ನರ್ಸುಮಜ್ಜನ ಕಟ್ಟೆಯ ಬದಿಗೆ ಬೆಸ್ಕಂಡಂಗೆ ಹರಿಯುವ ಈಸ್ಲಳ್ಳ ಕೆಂಪ್ಗು ಕಂಪ್ಗಲೆ ಹೊಳ್ಯುತ್ತೆ. ಸಣ್ಣ ಮಳೆ ಅನ್ದಾಡಿರು ಸುತ್ಲು ಸರ್ದಗ್ಳು ನೀರೆಲ್ಲ ಒದ್ಗಿ “ಈಸ್ಲಳ್ಳ” ಸೇರುತ್ತವೆ. ನಾವೆಲ್ಲ ದೋಣಿಬಾವೆಗ್ ನರ‍್ಬಿಳಂಗೆ ಮಳ್ಬಂದ್ರೆ ಸಾಕು ಈಸ್ಲಳ್ಳ ಬರುತ್ತೆ ಅಮ್ತ ಓಡ್ತಿದ್ವಿ ನೋಡಕೆ.  ಊರಗಿರೋ ದೊಡ್ಡರೆಲ್ಲ ಅದ್ಲುಸರು, ಏ ಅಳ್ಳುತ್ಕಡಿಕೆ ಓಗ್ಬ್ಯಾಡ್ರಿ; ಕೆಂಪ್ನೆಲ ಮದ್ಲೆ ರಾವು ಯರ‍್ಗನ ಏನನ ಆದ್ರೆ ಏನ್ಮಾಡದು? ಅನ್ನೋರು. ರಾವು ಜನಗಳ ಮನ್ಸಿಗಾತೆ ರ‍್ತು ನಮ್ಗಂತು ಎಂದೂ ಏನು ಆಗಿಲ್ಲ. ಬರ‍್ರೋ ಅಂತ ಬರ್ಗುಟ್ಕಂಡು ಹರ್ಯೋ ಹಳ್ಳ ನೋಡಕೆ ಕಣ್ಣೆಳ್ಡು ಸಾಲ್ವು. ನಮ್ಮ ಭಾಗದಲ್ಲಿ ಈ ಹಳ್ಳದ ಸುತ್ತೆಲ್ಲ ಹಬ್ಬಿರುವುದು ವಿಸ್ತಾರವಾದ ಕೆಂಪು ತಿರೆಯೇ. ನಮ್ಮೂರಿನ ಜನಕ್ಕೆ ರಾವು ನೆಲವಿದು ಅಂತ ಭಯವಿಡಿದಿದೆ.

ಬಸ್ರೇರು, ಬಾಣ್ತೇರು,ಉಡ್ಗರ‍್ಮಕ್ಳು ಅತ್ಕಡಿಕೋಗ್ಬ್ಯಾಡ್ರಿ ಅಂದ್ರು ಮಕ್ಳಾಗಿದ್ದಾಗ ನಾವು ಆಗವಷ್ಟು ಈ ಹಳ್ದಗೆ ಲೆಗ್ಗಿಕ್ಕಿದೀವಿ. ಹಳ್ದಗೆ ಸಿಗೋ ತರಾವರಿ ಕೆಂಪು ಬಿಳಿ ಗೋರಿ ಕಲ್ಗುಳ್ನೆಲ್ಲ ಮಡ್ಲಿಗೆ ತುಂಬ್ಕಂಡು ಹಜರ‍್ದಗಿರೋ ಗೂಡ್ಗುಳ್ಗೆಲ್ಲ ಒಟ್ಟಿ ವರ್ಷವೆಲ್ಲ ಅಚ್ಚಿಂಕಲ್ಲಾಡಿದೀವಿ. ಇದೇ ಕೆಂಪು ನೆಲದಲ್ಲಿ ಉಬ್ಬೆ ಮಳೆ ಬಂದ್ರು ಸಾಕು ಅಣ್ಬೆ ಎದ್ದಾಳ್ತವೆ ಅಂತ ಊರ್ ಜನ್ವೆಲ್ಲ ಏಳವತ್ಗೆ ಅಡ್ಡಾಡಿ ಸಂಚಿಗಂಟ್ನಂಗೆ ಒಂದೊಂದ್ ಗಂಟು ಅಣ್ಬೆ ಉಡಿಕ್ಕೆಂಡು ಕಟ್ಕಂಬರರು. ನಾನು ದೊಡ್ಡಪ್ಪನ ಜೊತೆ ಅಣ್ಬೆ ತರಕೋಗ್ತಿದ್ದ ದಿನಗಳಲ್ಲಿ ನೆಲದೊಳಗಿನ ಅಚ್ಚರಿಗಳನ್ನೆಲ್ಲ ಕುರಿತು ಕಬ್ಬದಂತೆ ವರ್ಣಿಸೋರು. ನಾವು ಎಂಟು ಜನ ಮಕ್ಕಳಿಗೂ ನೆಲದ ಜೀವಬೇರಿನ ಪ್ರಜ್ಞೆ ಕುರಿತು ಅಪೂರ್ವ ಪ್ರವರಗಳನ್ನು ಹೇಳಿಕೊಟ್ಟ ಮೊದಲ ಗುರುಗಳೆಂದರೆ ದೊಡ್ಡಪ್ಪಂದಿರು ಮತ್ತು ಅಪ್ಪನೆ.

ಕೆಂಪು ನೆಲವೆಂದು ಮಕ್ಕಳನ್ನು ಓಗಕೆ ಬಿಡದೆ ತಡೆಯುತ್ತಿದ್ದ ಈ ನೆಲದಲ್ಲಿ ನಮ್ಮೂರಿನ ಕೃಷಿ ಮಹತ್ವವೆಂಬಂತೆ ಸಾಗಿದೆ. ಹೆಚ್ಚು ಫಸಲು ಕೊಡುವ ಈ ಭಾಗಕ್ಕೆ ರಾವು ನೆಲ ಅಂತ ಯಾಕೆ ಕರುದ್ರೋ ಕಾಣೆ. ಈ ಭಾಗದಲ್ಲಿ ಇರುವ ಅಡವಿಯಲ್ಲೇ ನಮ್ಮೂರಿನ ದನಕರು ಕುರಿಗಳು ತಿಂದುಂಡು ಬೆಳೆದಿವೆ. ಈ ಭಾಗದಲ್ಲಿ ಇರುವ ಕಿರುಬನದ ನಡುವೆ ನನ್ನಜ್ಜ ಬ್ಯಾಸಿಗ್ನಗ ದನ ಕರಿಗೆ ನೀರಾಗ್ಲಿ ಅಂತ ಒಂದು ಕಟ್ಟೆ ಕಟ್ಸಿರಂತೆ. ಇವತ್ತಿಗೂ ಇದು ‘ಅಡ್ವಜ್ಜನ ಕಟ್ಟೆ’ ಅಂತಲೇ ಹೆಸರುವಾಸಿ.

ಕಡುಬಿಸಿಲ ದಿನಗಳಲ್ಲಿ ಗಿಡ್ಕೆ ಮೇಯಕೋದ ದನ್ಗುಳ್ನೆಲ್ಲ ನೀರ್ ಕುಡ್ಸಕೆ ಇದೇ ಕಟ್ಟೆಗೆ ಒಡಿತೀವಿ ಈಗಲೂ ಕೂಡ. ಫೆಬ್ರವರಿ ತಿಂಗಳು ಬಂದ್ರೆ ನಮ್ಮೂರಿಗೆ ಊರೆ ಗಮ್ಗುಡುತ್ತೆ. ಈ ಸಣ್ಣ ಅಡವಿಯಲ್ಲಿ ಇರುವ ಜಾಲ್ಗಿರಿ ಮರ್ಗುಳು ಅನಂತ ಗಮಲೊತ್ತ ಹೂ ಬಿಟ್ಟು ಸೆಳಿತವೆ. ಈ ಜಾಲ್ಗಿರಿ ಹೂ ಆಕ್ಲಾಗತಕಲು ನಮ್ ತಲೆ, ನಮ್ಮೂರು, ಊರಗ್ಳು ಮನೆಗಿರೋ ದೇವ್ರ್ ಪೋಟ್ಗುಳು ಎಲ್ಲ ಎಲ್ಲವೂ ಗಮ್ಗುಟ್ಟಿದ್ದೆ ಗಮ್ಗುಟ್ಟಿದ್ದು. ಒತ್ತಿಳಿಸ್ಕಂಡು ದನ ಕರ‍್ಯರು ಊರಕ್ಬಂದ್ರೆ ಸಾಕು ಓಡ್ತಿದ್ವಿ ನಾವು. ಯಾಕಂದ್ರೆ ದಿನಾಲೂ ಒಲ್ಲಿಬಟ್ಟೆ ತುಂಬಾ ಜಾಲ್ಗಿರಿ ಹೂ ತುಂಬ್ಕಂಡು ಇವ್ರು ಗಮ್ಗುಟ್ಕಂಡೆ ಬರರು. ಓರ‍್ಗೆಲ್ಲ ತಲಕೆಲ್ಡೆಲ್ಡು ಹೂವಿನ ಕೊನೆ ಕೊಡರು. ಶಾಲೆ ಇಲ್ಲ ಅಂದ ದಿನ್ವೆಲ್ಲ ನಾವು ಕೂಡ ಜಾಲ್ಗಿರಿ ಗಿಡ ಸಿಗತಕಲು ಜೀ ಇಕ್ತಿದ್ವಿ( ಜೀ ಇಕ್ಕದು ಅಂದ್ರೆ ಉಸ್ರು ಕಟ್ಟಿ ಒಡದು) ಸಾಕಾಗುವಷ್ಟು ಹೂವಿನಲ್ಲಿ ಆಡಿ ಮುಡಿದು ಎಂತ ಉಳ ಉಪ್ಡೆಗು ಹೆದ್ರುದಲೆ ಮೂಗಿಗಿಡಿದು ಪರಿಮಳ ಸವಿದೇ ತರ‍್ತಿದ್ವಿ. ಜಾಲಗಿರಿಯ ಗಮಲೇ ನಾವು ಕಂಡ ನಿಜಸಗ್ಗ.

ಇದೇ ಫೆಬ್ರವರಿ ಮಾಸದಲ್ಲಿ ಮರಡಿ ಹಣ್ಣು ಈ ಕಿರು ಕಾಂತಾರದಲ್ಲಿ ಫಸ್ಲಾಗುತ್ತವೆ. ಹೂ ಹಣ್ಣು ಮುಗಿವ ತನಕವೂ ನಾವೆಲ್ಲ ಕಾನನದ ಕೂಸುಗಳೆ. ಈ ಅಡವಿಯ ಫಲವತ್ತಾದ ತರ್ಗನ್ನೆಲ್ಲ ಮಳೆಗಾಲ ನರ್ಸುಮಜ್ಜನ ಕಟ್ಟೆಯುದರಕ್ಕೆ ಸೇರ್ಸೋದು. ಅಲ್ಲಿ ತೆಂಗು ತುಂಬು ಫಲವಾಗಿ ಒಕ್ಕಲಿಗೆ ಕಸುವು. ಹೀಗೆ ನಿಜ ಸಂಪತ್ತಾದ ಈ ನೆಲಗಳು ಊರನ್ನು ಮಣ್ಮಕ್ಕಳನ್ನು ಕಾಯುತ್ತಲೇ ಬಂದಿವೆ. ಊರ ಸುತ್ತಲೂ ಅನೇಕ ಒಡ್ದು ಕಟ್ಟಿಸಿಕೊಂಡ ಕಟ್ಟೆಗಳಿವೆ. ನರ್ಸುಮಜ್ಜನ ಕಟ್ಟೆಯಂತೆಯೇ ನನ್ನೂರಿನ ಹೃದಯವೇ ಆದ ದೊಡ್ಡಳ್ಳದ ಬಡ್ಡೆಗೆ ಇರುವ ಇನ್ನೊಂದು ಕಟ್ಟೆ ‘ಒಡ್ಗಟ್ಟೆ’ ಇಲ್ಲಿಯೂ ತೆಂಗು ಹೆಚ್ಚು.

ಕಟ್ಟೆಹೊಲ ಇರೋರು ದೆಸ್ವಂತ್ರು ನಮ್ಮ ಕಡೆ. ಎಂದೂ ಈ ನೆಲದಲ್ಲಿ ಫಸ್ಲು ಕೈಕೊಡಲ್ಲ. ಒಡ್ಗಟ್ಟೆಯ ಬುಡವನ್ನು ಸವರಿಕೊಂಡೇ ಹರಿಯುವ ದೊಡ್ಡಳ್ಳ ನನ್ನೂರಿನ ಗಣಿ. ಈ ಕಟ್ಟೆಯಲ್ಲಿ ನಿಚ್ಚವೂ ಹಸಿರು ಕಳೆ ಆರದಂತೆ ಸಾಕಿದ ದೊಡ್ಡಳ್ಳದ ರಿಣ ತೀರಿಸಲಾಗದು. ಈ ಕಟ್ಟೆಯ ಬಡ್ಡೆಯಲ್ಲೇ ಇರುವ ನೂರಾರು ನೇರಲೆಹಣ್ಣಿನ ಮರದ ಬುಡದಲ್ಲಿ ನನ್ನೂರಿನ ಮಕ್ಕಳೆಲ್ಲ ಮಂಗಗಳಾಗಿ ನಲಿದಿದ್ದೇವೆ. ಒಡ್ಗಟ್ಟೆ ಹಾಲು ದದಿ ಆಜ್ಯ ಒದಗುವ ಮನಿದ್ದಂಗೆ ನಮಗೆ. ಹಣ್ಣು ಹಂಪ್ಲು ಕೊಟ್ಕಂಡು ದೊಡ್ಡಳ್ಳದ ಮೀನು ಮರಿ ತಿನ್ನಿಸ್ಕಂಡು, ಮಳ್ಳಕ್ ನೂಕಿ ಆಡಿಸ್ಕಂಡು ಎಷ್ಟೆಲ್ಲ ಮುದಗಳ ಜೊತೆಗೆ ನಮ್ಮನ್ನು ಬೆಳೆಸಿದ ಒಡ್ಗಟ್ಟೆಯ ಉದರದೊಳಗಿನವಳೇ ಸದಾ ನಾನು.

ನನ್ನ ಅಪ್ಪ ಸಿಂಗ್ದಳ್ಳೇರ್ ಕಟ್ಟೆಯನ್ನು ಕೊಂಡು ಅಲ್ಲಿಯೂ ತೆಂಗನ್ನು ನೆಡಿಸಿದರು. ತರುವಾಯ ಇದಕ್ಕೂ ಒಡ್ಡು ಕಟ್ಟಿಸಿದರು. ಮಳ್ಗಾಲದ ಒಟ್ಟು ಜಲವನ್ನು ತಾನೇ ಕುಡಿದಂತೆ ವರ್ಷವೆಲ್ಲ ಪಸ್ಮೆಯಿಂದ ಹಸಿರುಚೆಲ್ಲಿಕೊಂಡು ಕಂಗೊಳಿಸುತ್ತದೆ. ನಮ್ಮ ಮನೆಗೆ ಕಟ್ಟೆ ತಂದ ಬಲ ಅಷ್ಟಿಷ್ಟಲ್ಲ. ಬಿದ್ ಕಾಯ್ಗುಳ್ನ ಆಯಕೆ ಅಂತ ನಸುಕಿಗೆ ದೊಡ್ಡಪ್ಪನ ಜೊತೆಗೆ ಕಟ್ಟೆಗೆ ಓಡ್ತಿದ್ವಿ. ಒತ್ತುಟ್ಟಿ ಮೂರಾಳುದ್ದ ಏರಿರು ಮನೆದ್ಯಾನ ಬಿಟ್ಟು ಕಟ್ಟೆ ನೀರಗಾಡ್ಕಂಡು ಸುತ್ಲು ದೊಗ್ರಗಿರ ಏಡಿಕಾಯಿಡ್ಕಂಡು ಎಚ್ಚಾಗವಷ್ಟು ಜೇಡಿಮಣ್ ನರ‍್ಕಂಡು ಕುಣಿದು ಕುಪ್ಪಳಿಸೋದೆ ನಮ್ಮ ಕಾಯಕ.

ನಮ್ಮ ಕಟ್ಟೆಯ ಮಗ್ಲಿಗೆ ಅಂಟ್ಕಂಡಂಗೆ ಬೋರಜ್ನಾರ ಕಟ್ಟೆ ಇತ್ತು. ಎಲ್ಲ ಕಟ್ಟೆಗಳಂತೆ ಇದು ಕೂಡ ಒಡ್ಡು ಕಟ್ಟಿಸಿಕೊಂಡು ಒಕ್ಕಲುತನದ ಮೆರುಗಿಗೆ ಸೊಡರಾದ ಕಟ್ಟೆಯೇ. ನಮ್ ಕಟ್ಟೆಯಿಂದ ಅವರ ಕಟ್ಟೆಗೆ ಜಿಗ್ದು ಬೈಸಿಕೊಂಡ ನೆನಪುಗಳು ಅಮರ ನನಗೆ.. ಊರ್ ಸುತ್ತ ಇರ ಕಟ್ಟೆ ನೀರಗೆಲ್ಲ ಆಡಿರು ಸಾಲ್ದು ಇವ್ಕೆ ಅಂತೆಲ್ಲಾ ವಿರೋಧ ಬಂದ್ರು ಮೆರಿತಿದ್ವಿ. ಕಟ್ಟೆಯೊಡಲಿನ ತೆಂಗಿನ ನೆರಳಲ್ಲಿ ಕಗ್ಗಾಯಿ, ಮಡ್ಗೊನೆ ಕಾಯಿ, ಒಣ್ಕಾಯಿ, ಎಳ್ನೀರು, ಆಲ್ಲಿರ‍್ಕ ಏನು ಬಿಡ್ದಂಗೆ ತಿಂದ್ಕಂಡು ಒತ್ಮುಣುಕ್ಸಿದೀವಿ ಎಷ್ಟೋ ದಿನ.

ಮನೆಯ ವಾತಾಯನದಿಂದ ತಣ್ಣಗಿನ ನೀರಿನ ಮೇಗಳ ಗಾಳಿಯನ್ನು ಕಳಿಸಿಕೊಡುವ ಊರಿಗೆ ಅಂಟಿಕೊಂಡಂತಿರುವ ದಾಸೇಗೌಡನ ಕಟ್ಟೆಯಲ್ಲಂತು ಹಿರಿಯರು ಕಿರಿಯರೆನ್ನದೆ ಏಡಿ ಹಿಡಿಯುತ್ತ ಕಾಲಕಳೆದಿದ್ದೇವೆ. ಇಲ್ಲಿ ಜೋಪು ನೀರಿಳಿದು ಆ ನೀರಲ್ಲೇ ಅಗಲನೆಯ ಹಸಿರೊದ್ದ ಕೇಜ್ಗೆ ಮೆಳೆ ಇದೆ. ಎಷ್ಟು ಸಲ ಇಲ್ಲಿ ರ‍್ಪಗಳು ಕಾಣಿಸಿದರು ಅಂಜದೆ ಕೇಜ್ಗೆ ತೆನೆ ಕಿತ್ತು ಗರಿಗಳನ್ನು ಹೊಲಿದು ತಲೆತುಂಬ ಮುಡ್ಕಂಡು ಪರಿಮಳಿಸುವುದೇ ನಮಗೆ ಬಲು ಹಿಗ್ಗಿನ ಕೆಲಸ.  ದಾಸೇಗೌಡನ ಕಟ್ಟೆಯ ಜೊತೆಗೆ ಊರಿನೆಲ್ಲರ ಮಹಾಮೈತ್ರಿ. ನೋವು ನಲಿವುಗಳನ್ನೆಲ್ಲ ಇಲ್ಲಿಯ ನೀರಿಗೊಪ್ಪಿಸಿ ಹಗುರಾಗಿದ್ದೇವೆ.

ಕಟ್ಟೆಗಳೆಂಬ ಹುಣ್ಣಿಮೆಗಳು ಕೊಟ್ಟ ತಣ್ಣನೆಯ ಬೆಳಕಿನಲ್ಲಿ  ಊರಿನ ಒಕ್ಕಲುಗಳು ವಿಕಾಸ ಕಂಡಿವೆ. ನನ್ನೂರಿಗೆ ಹಸಿರು ಬಳಗವಾದ ಈ ಕಟ್ಟೆಗಳು ನಮಗೆಲ್ಲಾ ಮರ‍್ವಳಿ ಬೆಳ್ಸುದ್ರೆ ಆಗುವ ಅನುಕೂಲಗಳ ಜ್ಞಾನಕೊಟ್ಟಿವೆ. ಕಟ್ಟೆಗಳ ಉಳಿವಿಗೆ ನಿತ್ಯ ದುಡಿವ ಅನ್ನದಾತರ ಬೇಸಾಯದ ಒಲುಮೆಯೇ ತಪಸ್ಸಿನಂತೆ ಕಂಡಿದೆ.

December 23, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಮೇಘನಾ

    ಜಲ ಜಗತ್ತಿನ ಜೀವನಾಡಿ ಅದ ರಿಂದಲೇ ಎಲ್ಲ ನಾಗರೀಕತೆಗಳ ಉಗಮ ಆದ್ದ ರಿಂದಲೇ ಅಂದಿನ ತಾಯಂದಿರು ” ಕೆರೆಯಂ ಕಟ್ಟಿಸು ಬಾವಿಯಮ್ ಸವೆಸು “ಎಂದು ಅರುಹುತ್ತಿದ್ದರು ಅವರು ಬಿಟ್ಟು ಹೋದ ಕೆರೆ ಕಟ್ಟೆ ಬಾವಿಗಳ ರಕ್ಷಣೆ ನಮ್ಮೆಲ್ಲರ ಹೊಣೆ ಆ ಜಾವಬ್ದಾರಿ ನಿಭಾಯಿಸಲು ಅಗತ್ಯವಾದ ಪ್ರೀತಿ ತುಂಬುತ್ತದೆ ನಿಮ್ಮ ಬರಹ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: