ಕಡಲಂತರಾಳವ ಬಲ್ಲವರಾರು?

ಶಿವಲೀಲಾ ಹುಣಸಗಿ ಯಲ್ಲಾಪುರ

ಪ್ರತಿ ದಿನವೂ ಪ್ರೀತಿಯ ಹುಚ್ಚ ಹಿಡಿಸಿದವ ಒಮ್ಮಿಂದೊ ಮ್ಮೆಲೆ ಮೌನವಾಗಿದ್ದು, ಕೊನೆಗವನು ನನಗರಿವಿಲ್ಲದೆ ಮಂಪರು ಆವರಿಸಿದಂತೆ ಕೋಮಾಗೆ ಜಾರಿದ್ದು ವಿಚಿತ್ರವಾದರೂ ಸತ್ಯವಾಗಿತ್ತು. ಅಂದೆಲ್ಲ ಅವನ ತುಂಟಾಟಕೆ ಮನಸ್ಸು ಕಸಿವಿಸಿಗೊಂಡು ಇವನಿಂದ ದೂರ ಸರಿದರೇ ಸಾಕಪ್ಪಾ ಅನ್ನಿಸಿದ್ದು ಸುಳ್ಳು ಎಂಬಂತೆ ಭಾಸವಾಗುತ್ತಿತ್ತು. ಮನದಲೊಂದು ಬೇಡಿಕೆ ದೇವರಿಗೆ “ಹೇ ದೇವಾ ಅವನ ಪ್ರಾಣ ಬದುಕಿಸಿಕೊಡು.” ಅವನ ನಂಬಿದದವರ ಕೈ ಬಿಡದಂತೆ ಮರುಜನ್ಮ ನೀಡೆಂದು ಮರಗುತ್ತಿತ್ತು. ಹೌದು ಇಷ್ಟೆಲ್ಲ ಅನ್ನಿಸುವುದು ನನಗ್ಯಾಕೆ ಎಂಬ ಪ್ರಶ್ನೆಗೆ ಉತ್ತರವಿಲ್ಲ. ನಿಜವಾದ ಚಿಂತೆ ಪ್ರಾರಂಭವಾಗಿದ್ದು ಇಲ್ಲಿಂದ ಅಂತ ಗೊತ್ತಾಗಲಿಲ್ಲ.

ಅದೊಂದು ಸಂಜೆ ಕಡಲಿನ ದಂಡೆಯ ಮೇಲೆ ನಡೆದಾಡುತ್ತಿರುವಾಗ, ವಿಶಾಲ ನೀಲಿ ಅಲೆಗಳಿಗೆ ಕೆಲವೊಂದು ಹುಡುಗರು ಮೈಯೊಡ್ಡಿ ಈಜಾಡುತ್ತಿದ್ದರು. ಅಲೆಗಳು ಆಗಾಗ ನನ್ನ ಪಾದಗಳಿಗೆ ಮುತ್ತಿನ ಹೊಳೆ ಹರಿಸಿ ಕಡಲ ಗರ್ಭದೊಳಗೆ ಎಳೆದಂತಾಗಿ ಪಾದದಡಿಯ ಮರಳು ಸೆಳೆಯುತ್ತಿತ್ತು. ಅಲ್ಲಿ ನೀಳಕಾಯದ ಸುಂದರ ಕಟುಮಸ್ತಾದ ಯುವಕ ಈಜುತ್ತ ನನ್ನೆಡೆಗೆ ಕಾರಂಜಿಯಂತೆ ನೀರ ಚಿಮ್ಮುತ್ತಿದ್ದ, ಹಾಗೂ ಹಾಯ್ ಬ್ಯೂಟಿ… ಎಂದು ಕಣ್ಣು ಹೊಡೆದು, ಕೈ ಮಾಡಿದಾಗ ಹೃದಯ ಬಾಯಿಗೆ ಬಂದಂತಾಗಿತ್ತು.

ಅತ್ತ ರವಿಯು ಬಾನಂಗಳದಿಂದ ನೀಲ ಸಾಗರದಿ ಮರೆಯಾಗುತ್ತಿದ್ದಂತೆ ಕಡಲ ಭೋರ್ಗರೆಯುವ ಸದ್ದು ಎಂಥವರನ್ನು ಬೆಚ್ಚಿ ಬೀಳಿಸುವಂತಿತ್ತು. ಆ ಕ್ಷಣಕೆ ಹೆದರಿ ಬೇಗಬೇಗ ಮನೆಯತ್ತ ಹೆಜ್ಜೆ  ಹಾಕ ತೊಡಗಿದೆ.ದಾರಿ ಸಾಗದಿರುವುದಕ್ಕೆ ಕಾಲ್ನಡಿಗೆಗೊಂದಿಷ್ಟು ಶಾಪ ಹಾಕುತ್ತ ಹೆಜ್ಜೆ ಹಾಕಿದರೂ ನಡಿಗೆ ಮಾತ್ರ ನಿಧಾನಗತಿಯಲ್ಲಿ ಸಾಗುತ್ತಿತ್ತು. ಇಂದು ತುಂಬಾ ಹೊತ್ತು ವಾಕಿಂಗ್ ಮಾಡಿದೆ. ಅದಕ್ಕೆ ಕಾಲು ಸೋತಿದೆ, ಇನ್ನು ಮುಂದೆ ಹೀಗೆಲ್ಲಾ ಮಾಡಬಾರದೆಂದು ಮನಸ್ಸಲ್ಲೇ ಅಂದು ಕೊಳ್ಳುತ್ತಿದ್ದರೂ, ಹೃದಯ ಬಡಿತ ಮಾತ್ರ ಹೆಚ್ಚುತ್ತಲೇ ಇತ್ತು. ಯ್ಯಾರೋ ನನ್ನ ಹಿಂಬಾಲಿಸಿದಂತೆ ಭಾಸವಾಗುತ್ತಿತ್ತು. ಹಿಂತಿರುಗಿ ನೋಡಿದರೆ ಯ್ಯಾರೂ ಇಲ್ಲ ಸಮಾಧಾನದ ನಿಟ್ಟುಸಿರು.

ಛೇ… ಎಂಥ ಯೋಚನೆ? ಈಗ ಇಂಥ ಚಿಂತೆ ಬೇಕಾ? ಎನ್ನುತ್ತಿತ್ತು ಮನದ ಮೂಲೆಯಲ್ಲೊಂದು ಮರುಕದ ನಗೆ ಚಿತ್ತ ಕೆಡಿಸಿತ್ತು. ನನ್ನ ಬದುಕು ಮೊದಲೇ ರವಿ ಮುಳುಗಿದ ಸ್ಥಿತಿಯಂತಾಗಿತ್ತು. ಬದುಕಿನ ತುಂಬ ಇರುಳು ಮನೆಮಾಡಿ ಮೌನವಾಗಿತ್ತು. ಸಂಸಾರವೆಂಬ ರಥದ ಕೊಂಡಿ ಕಳಚಿ ವರುಷಗಳೇ ಕಳೆದಿದ್ದವು. ಒಂಟಿ ಜೀವ ಬೇಕಾಬಿಟ್ಟಿಯಾಗದಿರಲೆಂದು ನನ್ನಷ್ಟಕ್ಕೆ ನಾನು ಬೇಲಿ ಹಾಕಿಕೊಂಡು ಎಲ್ಲ ಆಸೆ ಆಕಾಂಕ್ಷೆಗಳ ಕತ್ತು ಹಿಸುಕಿ ನಿರ್ಮೋಹಿಯಾಗಲು ತೀರ್ಮಾನಕ್ಕೆ ಬಂದಾಗಿತ್ತು.

ತಾನೆಂದರೆ ಗಟ್ಟಿ, ಬಲಿಷ್ಠ ಎಂಬ ಮುಖವಾಡ ಹಾಕಿಕೊಂಡು ಸಮಾಜದಲ್ಲಿ ಬದುಕುವ ಸಾಹಸ ಮಾಡುತ್ತಿದ್ದೆ. ಗಂಡ ಬಿಟ್ಟವಳೆಂದರೆ ನೋಡುವ ದೃಷ್ಟಿಯೇ ಬೇರೆ. ಎಲ್ಲರೂ ತಮ್ಮ‌‌‌ ಅನುಕೂಲಕ್ಕೆ ಸ್ವಂತದ್ದಾಗಿ ಭಾವಿಸಿಕೊಳ್ಳುವರೆಂಬುದನ್ನು ಮನಗಂಡಿದ್ದೆ. ಅನುಕಂಪ ತೋರಿ ಬರುವವರಿಂದ ಮಾರು ದೂರ ಹೋಗಿ ನಿಲ್ಲುತ್ತಿದ್ದೆ. ಎಂದಿಗೂ ಆತ್ಮ ಸ್ಥೈರ್ಯ ಕಳೆದು ಕೊಂಡು ಯಾರ ಹಿಡಿತಕ್ಕೂ‌ ಸಿಗದೇ ಸ್ವತಂತ್ರವಾಗಿ ಬಾಳಬೇಕೆಂದು ನಿಶ್ಚಯಿಸಿದ್ದೆ.

ವಯಸ್ಸಾಗಿರುವುದು ದೇಹಕ್ಕೆ ಮನಸ್ಸಿಗೆಂದು ಮುಪ್ಪಾಗದಿರಲೆಂದು ಸದಾ ಲವಲವಿಕೆಯಿಂದ ದಿನ ಕಳೆಯುತ್ತಿದ್ದೆ. ಅನೇಕರು ಹಿರಿಯ, ಕಿರಿಯ, ಸ್ನೇಹಿತರು ನನ್ನೊಂದಿಗೆ‌ ಚೈತನ್ಯದಿಂದ ಬೆರೆಯುತ್ತಿದ್ದರು. ಸಂಜೆಯಾದಂತೆ ಅವರೆಲ್ಲ‌ ಮರಳಿ‌ಗೂಡಿಗೆ ಎಂಬಂತೆ ತಮ್ಮ ತಮ್ಮ ಮನೆಗಳಿಗೆ ನಿರ್ಗಮಿಸಿದ ಮೇಲೆ ನನ್ನ ಇಡೀ ದಿನದ ನಗುವಿಗೊಂದು ಬ್ರೇಕ್ ಬಿದ್ದಂತೆ. ಆಗ ನನಗೆ ಆಸರೆಯಾಗುವುದು ಈ ವಿಶಾಲವಾದ ಕಡಲು. ನನ್ನೆಲ್ಲ ಆಶೋತ್ತರಗಳಿಗೆ ಅಲೆಗಳು ನೀಡುವ ಸಾಂತ್ವಾನ, ನನ್ನ ದುಃಖಗಳನ್ನು ತಾನೇ ಹೊದ್ದಂತೆ ಆಗಾಗ ಉಬ್ಬರ ಇಳಿತಗಳು.

ಇಂಥ ಸ್ಥಿತಿಯಲ್ಲಿ ನನ್ನವರೆಂಬು‌ವವರು ಯ್ಯಾರು ಇಲ್ಲ. ಇದ್ದರೂ ಅವರಾರಿಗೂ ನಾನು ಬೇಡವಾದವಳು. ಹೀಗಿರುವಾಗ ಈ ಅನುಭವ ಬೇಕಾ? ಎನ್ನುವ ಪ್ರಶ್ನೆ. ಹೃದಯವನ್ನು ಸೂಜಿಯಿಂದ ಚುಚ್ಚುತ್ತಿದ್ದರೂ ನೋವು ಕಾಣಿಸದೇ ಹಿತವೆನಿಸುತಿತ್ತು… ಛೀ.. ಛೀ ಸರಿಯಲ್ಲ. ನಾನು ತಪ್ಪು ಮಾಡುತ್ತಿರುವೆ. ಎನ್ನುತ್ತಲೇ ಮನೆಯದುರಿನ ಲೈಟಿನ ಕಂಬಕ್ಕೆ ಜೋರಾಗಿ ಹಾದು ತಲೆಸುತ್ತು ಬಂದಂತಾಗಿ ಕಂಟ್ರೋಲ್ ಮಾಡಿಕೊಳ್ಳುತ್ತಾ ಬಾಗಿಲು ಬೀಗ ತೆಗೆದು ಒಳ ಸೇರಿ ಸೋಫಾ ಮೇಲೆ ಒರಗಿದೆ. ಕಣ್ಣು ಮುಚ್ಚಿದರೆ ಆ ಯುವಕನ ಬಿಂಬ.

ನೆನೆದಾಗೊಮ್ಮೆ ಮೈಪುಳಕಗೊಳ್ಳುತ್ತಿತ್ತು. ಅವನಾರೋ ಗೊತ್ತಿಲ್ಲ. ನನ್ನ ನೋಡಿ ಹಾಗೆ ವರ್ತಿಸಿದ್ದು ತಮಾಷೆಯಾ? ಬೇಕಂತಲೇ ಮಾಡಿರಬಹುದಾ? ನನ್ನ ಪರಿಸ್ಥಿತಿ ಗೊತ್ತಾಗಿರಬಹುದಾ..? ನನ್ನ ಪರೀಕ್ಷೆ ಮಾಡಲು ಇರಬಹುದಾ? ಎಂದೆಲ್ಲ ಯೋಚಿಸುತ್ತ ನಿದ್ರೆಗೆ ಜಾರಿದ್ದು ಗೊತ್ತಾಗದೆ, ಎದೆಯಳೊಂದು ಸಂಚಲನದ ಜ್ವಾಲೆ ದಹಿಸುತ್ತಿತ್ತು.

ನಾನು ಪ್ರೀತಿಯಲ್ಲಿ ನಂಬಿಕೆ ಇಟ್ಟವಳು. ಮದುವೆಯಾದವನನ್ನು ಶಕ್ತಿ ಮೀರಿ ಪ್ರೀತಿಸಬೇಕೆಂಬ ಕನಸ ಹೊತ್ತವಳು. ಅವನ ಚಿತ್ತದ ನಕ್ಷತ್ರ, ಶಶಿಯೆಲ್ಲ ನಾನಾಗಬೇಕು, ನನ್ನವ ನನ್ನ ಹೊರತು ಮತ್ಯಾರನ್ನು ಕಣ್ಣೆತ್ತಿಯೂ ನೋಡದಂತೆ ಪ್ರೀತಿಯ ಭದ್ರಕೋಟೆಯ ಕಟ್ಟಿದ್ದೆ. ಮೊದಮೊದಲು ಎಲ್ಲವೂ ಸರಿಯಾಗೆ ಇತ್ತು. ಪ್ರೀತಿಗೇನೂ ಕೊರತೆಯಿರದೇ ಕಡಲಿನ ಅಲೆಗಳ ಮೇಲೆ ಗೂಡು ಕಟ್ಟಿದಂತೆ ಬೆಸೆದುಕೊಂಡಿತ್ತು ನಮ್ಮ ಆತ್ಮ.ಬರಬರುತ್ತ ಆತ್ಮದೊಳೊಂದು ಚಿಕ್ಕ ಬಿರುಕು. ನನ್ನವನಿಗೆ ಸುಖದ ಅಮಲು ಅತಿಯಾಗಿ ಬೇಕಿತ್ತು.

ನಾನು ತಾಯಿಯಾಗುವ ಸುದ್ದಿ ಕೇಳಿದಾಗಂತೂ ಕೆಂಡಾಮಂಡಲವಾಗಿದ್ದನ್ನು ಕಂಡು ಹೆದರಿದ್ದೆ. ಇಷ್ಟು ಬೇಗ ಮಕ್ಕಳು ಬೇಡವೆಂದು ರಂಪ ಮಾಡಿ ಪರಿಚಯದ ವೈದ್ಯ ರಿಂದ ಅಬಾಷನ್ ಮಾಡಿಸಿದ್ದ. ಇದು ಅವನ ಪ್ರೀತಿಯೆಂದೆ ಭಾವಿಸಿ ಅವ ಹೇಳಿದ ಹಾಗೆ ಕುಣಿಯುವ ಸೂತ್ರದ ಗೊಂಬೆಯಾಗುತ್ತಿರುವುದು ಗೊತ್ತಾಗಲಿಲ್ಲ. ಅತಿಯಾಗಿ ಹೊಟ್ಟೆಯಿಳಿಸಿದ ಪರಿಣಾಮ ನನ್ನ ದೇಹ ಬಳಲಿ ಬೆಂಡಾಗಿತ್ತು.

ಅನಾರೋಗ್ಯ ಕಾಡತೊಡಗಿತು. ಹೆಣ್ಣು ಬಾಳೆಗಿಡದಂತೆ, ಫಲ ನೀಡುವಾಗೆಲ್ಲ ಬರಸಿಡಿಲು ಉದರಕೆ. ನಿಜವಾಗಲೂ ಇವನ ಕೈಹಿಡಿದವಳಾ? ಪ್ರೇಮದ ಕನಸಿಗೆ ಮುಳ್ಳಹಾಸಿ ಸಿಡಿಲು, ಮಿಂಚ ಹರಿಸಿ ಸುಖಿಸಿದ್ದನ್ನು ಕಂಡಾಗೆಲ್ಲ ನುಚ್ಚು ನೂರಾದ ಭಾವಗಳು ಕಡಲಿನ ಗರ್ಭದೊಳಗೆ ಅವಿತಂತೆ. ಅವನಿಗಿನ್ಯಾರೋ ಜೊತೆಯಾಗಿರುವ ಸುದ್ದಿ ತಲ್ಲಣಗೊಳಿಸಿತ್ತು. ಬರೀ ತನ್ನ ಶಿಸ್ತು, ಸೌಂದರ್ಯದ ಮೇಲೆ ವಿಶ್ವಾಸ. ಕಳೆಗುಂದುತ್ತಿರುವ ನನ್ನ ಕಾಳಜಿ ದಿನದಿಂದ ದಿನಕ್ಕೆ ಕಡಿಮೆಯಾಗ ತೊಡಗಿದ್ದು ನನ್ನ ಅಸ್ಥಿರ ಬದುಕಿಗೆ ನಾಂದಿ ಹಾಡಿದಂತೆ ಭಾಸವಾಗುತ್ತಿತ್ತು.

ಅವನಿಗೂ ನಾ ಬೇಡವಾಗಿತ್ತು. ಒಲ್ಲದವನ ತೆ ಬದುಕಲು ನನ್ನ ಒಳಗೂ ಒಂದು ಯುದ್ದ ನಡೆದಿತ್ತು. ನಾನು ಕಲಿತವಳು ಸಣ್ಣಪುಟ್ಟ ಕೆಲಸಕ್ಕೆ ಸೇರಿ ನನ್ನ ಹೊಟ್ಟೆ ತುಂಬಬಲ್ಲೆ ಎಂಬ ನಿರ್ಧಾರ ಮಾಡಿದ್ದೆ. ಆದರೆ ನಾನೇ ದೂರ ಸರಿದರೆ ಅಪವಾದ ಬರುವುದೆಂದು ಹೆದರಿ ಗಂಡನೇ ನನಗೆ ವಿಚ್ಛೇದನ ನೀಡಲೆಂದು ನೋವ ನುಂಗಿದ್ದೆ. ಹೆಣ್ಣು ಎಲ್ಲ ನೋವನ್ನು ತನ್ನೆದೆಯೊಳಗೆ ಬಚ್ಚಿಟ್ಟುಕೊಂಡು ನಗುನಗುತ್ತಿದ್ದುದು, ಬುಗಿಲೆದ್ದ ಒಳಸುಳಿಗಳು ಸ್ಪೋಟಗೊಳ್ಳುವವರೆಗೂ ಕಡಲು ಶಾಂತ. ಎದೆಯೊಳಗಿದ್ದ  ವಿಷವೆಲ್ಲ ಕಕ್ಕಿದಂತೆ. ಕಾರ್ಕೊಟ ಸರ್ಪವು ತಾಕಕ್ಕಿದ ವಿಷದಿಂದ ತಾನೆ ಸತ್ತಂತೆ ಭಾಸವಾದರೂ.. ಪತ್ನಿಯೆಂಬ ಪಟ್ಟ ನನ್ನದಲ್ಲವೆಂದು ಸಾರಿ ಸಾರಿ ಹೇಳುತ್ತಿತ್ತು. ಅಂತೂ.. ನಿರೀಕ್ಷೆಯಂತೂ ಸುಳ್ಳಾಗಲಿಲ್ಲ. ಅವನಾಡಿದ ಪ್ರತಿಯೊಂದು ಮಾತುಗಳು.. ಕಣ್ಮುಂದೆ ಗಿರಗಿಟ್ಲೆ ಹೊಡೆದಂತೆ..

ಗುಯ್ ಗುಟ್ಟತ್ತಿತ್ತು. ‘ನೋಡೆ ನೀನು ನನಗೆ ಯೋಗ್ಯವಾದ ಹೆಂಡತಿಯಲ್ಲ’ ನಿನ್ನ ಪ್ರೀತಿಸಲು ಕಾರಣಗಳಿಲ್ಲ. ನಿಮ್ಮ ಮನೆಯವರ ಒತ್ತಾಯಕ್ಕೆ, ಒಲ್ಲದ ಮನಸ್ಸಿಂದ ಒಪ್ಪಿದ್ದೆ. ಅವರು ನೀಡಿದ ವರೋಪಚಾರವೆಲ್ಲ ಮುಗಿತು. ಇನ್ನು ನೀನು ನನ್ನ ಜೋತೆ ಇರಬೇಕೆಂದರೆ ನಾನು ಹೇಳಿದ ಹಾಗೆ ಬಿದ್ದಿರಲು ಸಿದ್ಧಳಿದ್ದರೆ ಇರು, ನನ್ನ ಪ್ರಶ್ನೆ ಮಾಡುವಂತಿಲ್ಲ. ಇಲ್ಲವಾದರೇ ನಿನ್ನ ದಾರಿ ನಿನಗೆ ನನ್ನ ದಾರಿ ನನಗೆ. ಜೀವನಾಂಶಕ್ಕೇನೂ ಕೊಡಲಾರೆ ತಿಳಿತಾ? ಒಪ್ಪಿಗೆ ಇದ್ದರೆ ಇರು, ಇಲ್ಲಾ ಸೈ ಮಾಡಿ ನಿನಗೇನು ಬೇಕು ಎಲ್ಲಾ ತಗೊಂಡ ಹೋಗು. ಮತ್ತೆ ನನಗೆಂದಿಗೂ ಮುಖ ತೋರಿಸಬೇಡ ಎಂದು ಎದ್ದು ಒಳಗೆ ಹೋದ ಗಂಡನನ್ನೆ ದಿಟ್ಟಿಸುತ್ತಿದ್ದೆ.

ಎಷ್ಟಾದರೂ ಹೆಣ್ಣಲ್ಲವೇ ನಾನು? ಉದರಕ್ಕೊಂದು ಬಲಿಷ್ಠ ಬೀಜವೂ ನೆಲೆನಿಲ್ಲದೇ ಕಸದ ತೊಟ್ಟಿ ಸೇರಿತು. ಸುಖದ ಗ್ರಹಚಾರಕೆ ಬರಿದಾದ ಒಡಲು. ನನ್ನ ಮಾತಿಗೆ ಎಲ್ಲಿದೆ ಬೆಲೆ. ಕಲಿತಿನಿ ಅಂದ್ರು ಸರಿಯಾಗಿ ಕಲಿಸದೇ ಅತಂತ್ರ ಮಾಡಿದ ಹೆತ್ತವರಿಗೂ, ಸಮಾಜದ ಕಟ್ಟು ಪಾಡುಗಳಿಗೂ ಶಾಪವಿಟ್ಟು ದಿಂಬಿಗೊರಗಿ ಅತ್ತಿದ್ದೆ ಬಂತು. ಸಂತೈಸಲು ಬರುವನೆಂಬ ಒಂದು ಚೂರು ಆಸೆಯಿತ್ತು.

ಅದು ಕೂಡ.. ಬೋರ್ಗಲ್ಲ ಮೇಲೆ ಮಳೆ ಹೊಯ್ದಂತೆ. ಪರಿಣಾಮವೇನು ಆಗಲಿಲ್ಲ. ಗಟ್ಟಿ ಮನಸ್ಸು ಮಾಡಿ ಸೈ ಮಾಡಿ ನಡತೆಗೆಟ್ಟವನ ಪತ್ನಿಯಾಗಿರ ಬಯಸದೇ ಬರಿಗೈಲಿ, ಉಟ್ಟಬಟ್ಟೆಯ ಕಳಚಿ ಬರಲೇನು ಅನ್ನಿಸದೆ ಇರಲಿಲ್ಲ. ಮಾನ ಮರ್ಯಾದೆಗಾದರೂ ಅಂಜಬೇಕಲ್ಲ. ತವರು ಮನೆ ಗೆ ಬಂದಾಗ ಅನುಸಂಧಾನ ನಡೆದರೂ ಪ್ರಯೋಜನಕ್ಕೆ ಬರಲಿಲ್ಲ. ಕೊನೆಗೆ ಗೂಬೆ ಕೂರಿಸಿದ್ದು ನನ್ನ ಮೇಲೆ.

ಬಂಜೆ ಯೆಂಬ ಪಟ್ಟ ಕಟ್ಟಿ ಅಸೂಯೆ, ನಿಂದನೆಗಳು ನನ್ನ ಚುಚ್ಚಿ ತಿನ್ನತೊಡಗಿದರೇ, ಅತ್ತ ಅಳಿಯ ಒಳ್ಳೆಯವ ಪಾಪ, ಇವಳ‌ದೇ ತಪ್ಪು, ಇಂಥಹ ಗೊಡ್ಡಮ್ಮೆ ಕಟ್ಟಿಕೊಂಡು ಅವನಾದ‌ ರೂ ಹೇಗೆ ಬಾಳಿಯಾನು? ಎಂಬ ತಲೆ, ಕಾಲುಗಳಿಲ್ಲದ ಚರ್ಚೆಗಳು.

ನಾನು ಸಾಯಬೇಕೆಂದು ಕಡಲಿಗೆ ಹಾರಿದ್ದು,‌ ಬೆಸ್ತರು ಕಾಪಾಡಿದ್ದು ಯ್ಯಾಕಾದರೂ ಬದುಕಿಸಿದೇ ಎಲ್ಲವನ್ನು ಬಚ್ಚಿಟ್ಟುಕೊಳ್ಳುವ ನೀನು ನಾ ಸತ್ತ ಮೇಲಾದರೂ ದಡಕೆಸೆಯಬಾರದೇ ಎಂದು ರೋಧಿಸಿದರೂ, ಕಡಲಿನ ಅಂತರಾಳ ಬಲ್ಲವರಾರು? ಕಡಲು ನನ್ನ ನೋಡಿ ನಕ್ಕಂತೆ ಭಾಸವಾಗುತ್ತಿತ್ತು.

ಆಯುಷ್ಯ ಗಟ್ಟಿಯಿದೆ ಬದುಕಿದಳೆಂದು ಆಡಿಕೊಳ್ಳುವವರಿ ಗೇನು ಕೊರತೆಯಿರಲಿಲ್ಲ. ಪಾಪಿಗಳೂ ಎಲ್ಲಿ ಮುಳುಗಿದರೂ ಮೊಳಕಾಲು ನೀರು ಎಂಬ ಗಾದೆ ನನ್ನ ಜೀವನದಲ್ಲಿ ಅನ್ವಯವಾಗಿದ್ದು ದುರಂತವೇ. ಬಳಲಿದ ನನ್ನ ಆರೈಕೆ ಮಾಡುವ ನನ್ನ ಅಕ್ಕ ಭಾವ ತುಂಬಾ ಕಾಳಜಿ ತೋರುತ್ತಿದ್ದರು.

ಒಂದು ರಾತ್ರಿ ಯಾರೋ ಉಸಿರು ಬಿಗಿದಂತೆ ಭಾಸವಾಗಿ ಎಚ್ಚರಗೊಂಡು ಕಣ್ಣ ಬಿಟ್ಟಾಗ ಪಕ್ಕದಲ್ಲಿ ಭಾವ..! ಏನ್ ಭಾವ ಏನ್ ಬೇಕಿತ್ತು ಅಂದಾಗ ಭಾವನ ನಡವಳಿಕೆ ಅರ್ಥವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಭಾವ ಏನೋ ಉಪಕಾರ ಮಾಡುವವನಂತೆ ಬಳಿಬಂದಾಗ ಅಕ್ಕಾ ಎಂದು ಚೀರಿದ್ದೆ ತಡ ಭಾವ ನಾಪತ್ತೆಯಾಗಿದ್ದ. ಅಂದಿನಿಂದ ನನ್ನ ಸ್ಥಾನದ ಅರಿವು ಮನವರಿಕೆಯಾಗಿತ್ತು. ನನಗಾರು ದಿಕ್ಕಿಲ್ಲವೆಂದು ಹಂಗಿನಲಿ ಬದುಕುವುದಕ್ಕಿಂತ ಸ್ವಾವಲಂಬಿಯಾಗಿ ಬದುಕುವುದು ಶ್ರೇಷ್ಠ.

ಮನೆ ಬಿಟ್ಟು ಕೆಲಸ ಹುಡುಕಲು ಶುರುಮಾಡಿದೆ. ಕಲಿತ ಅರ್ಹತೆಗೆ ಅಡಿಕೆ ವರ್ತಕ ಸಂಸ್ಥೆಯಲ್ಲಿ ಮೇಲ್ವಿಚಾರಕಿಯಾಗಿ ಕೆಲಸಕ್ಕೆ ಸೇರಿಕೊಂಡು ಊರು ಬಿಟ್ಟು ಒಂಟಿಯಾಗಿ ಇರುವುದನ್ನು ಅಭ್ಯಾಸ ಮಾಡಿಕೊಂಡಿದ್ದೆ. ನೆಮ್ಮದಿಯಿಂದ ಕಾಲ ಕಳೆಯು ತ್ತ ಆರೋಗ್ಯದಲ್ಲಿ ಸುಧಾರಣೆ, ಮನಸ್ಸಿನ ಕಹಿ ನೆರಳುಗಳು ಕ್ರಮೇಣ ಕರಗುತ್ತ, ಹೊಸ ಮನುಷ್ಯಳಾಗಿ ಬದುಕಲು ಅನುವಾಗಿತ್ತು.

ಎಲ್ಲ ನೋವುಗಳನ್ನು ಮರೆತು ನಾನು ನಾನಾಗಿ ಸ್ವಚ್ಛಂದವಾಗಿ ಹಾರುವ ಹಕ್ಕಿಯಂತೆ ಮಾರ್ಪಾಟಾಗಿದ್ದು ನನ್ನೊಳಗೊಂದು ಅವಿತ ಆತ್ಮಸ್ಥೈರ್ಯದ ಗೂಡು ನನಗ‌ರಿವಿಲ್ಲದೆ ಸಿದ್ದವಾಗುತ್ತಿತ್ತು. ಯಾವ ಭಯ, ಒತ್ತಡಗಳು ಬಾಧಿಸಲಿಲ್ಲ. ಕಡಲಂಚಿನಲ್ಲಿ ಹೊಸ ಜೋಡಿಗಳು ಕೈ ಕೈ ಹಿಡಿದು ಅಡ್ಡಾಡುವುದನ್ನು ಕಂಡಾಗ, ನಾನು ಹೀಗೆ ಆಸೆ ಪಟ್ಟಿದ್ದೆ. ಆದರೆ ಅದು ನೆರವೇರಲಿಲ್ಲ. ಮರಳ ಮೇಲೆ “ಆಯ್ ಹೇಟ್ ಯು” ಎಂದು ಗೀಚಿ ಬಂದಿದ್ದೆ.

ಅದ್ಯಾವ ಗಳಿಗೆಯೋ ಕಾಣೆ ಆ ಯುವಕ ಮನದಲ್ಲಿ‌ ಅಳಿಸದ ಬಿಂಬವಾಗಿ ಕೂತು ಬಿಟ್ಟಿದ್ದೆ. ನನ್ನ ಭ್ರಮೆಯಾಗ ದಿರಲೆಂದು ಭಗವಂತನಲ್ಲಿ ಬೇಡಿದ್ದೆ. ಮಾರನೆ ದಿನ ಗೆಳತಿ ಯರೊಂದಿಗಿದ್ದರೂ ಮನಸ್ಸು ಮಾತ್ರ ಕಡಲತ್ತ ಸೆಳೆಯಿತ್ತಿತ್ತು. ಆದಷ್ಟು ಬೇಗ ಹೋಗಬೇಕು ಅವನ ಮುಖ ಸರಿಯಾಗಿ ನೋಡಬೇಕು, ಮಾತಾಡಿಸಬೇಕು ಎಂದು ಬಂದಾಗ ಯ್ಯಾರು ಬಂದಿರಲಿಲ್ಲ. ಸಮಯ ಜಾರುತ್ತಿದ್ದರೂ ಆ ಯುವಕನ ಪತ್ತೆ ಇರಲಿಲ್ಲ. ನಿರಾಸೆಯಾಯಿತು. ಈ ವಯಸ್ಸಿಗೆ ಪ್ರೀತಿನಾ? ಎಂದು ಭಾರವಾದ ಮನಸ್ಸಿಂದ ಮರಳಿದೆ.

ಪುನಃ ಮಾರನೇ ದಿನ ಹೋದಾಗ ಕಂಗಳಿಗೆ ಹೊಳಪು ಯುವಕ ಈಜಾಡುತ್ತಿದ್ದ. ದೂರದಲ್ಲಿದ್ದುದರಿಂದ ನಾನು ಸುಮ್ಮನಾದರೂ ಕಳ್ಳ ಮನಸು ಅತ್ತ ಕಡೆಯೇ ವಾಲುತ್ತಿತ್ತು. ಅವನು ನನ್ನ ಗಮನಿಸುತ್ತಿಲ್ಲವೆನಿಸಿ ಸಾಕು ನೋಡಿಯಾಯಿತು, ಹೊರಡೋಣವೆಂದು ಯೋಚಿಸುತ್ತಿರುವಾಗಲೇ ಜೋರಾದ ಅಲೆಯೊಂದು ನನ್ನ ಕಡಲೊಳಗೆ ಸೆಳೆದು ಬಿಟ್ಟಿತು. ಕಡಲ ಸೆಳೆತ ಎಂಥವರ ಎದೆಯನ್ನು ಒಮ್ಮೆನಡು‌‌‌ಗಿಸುವುದಂತೂ ಸತ್ಯ. ಮೊದಲೇ ಈಜು ಬರದ ನಾನು ಆಯತಪ್ಪಿ ನೀರೋಳಗೆ ಮುಳುಗಿ ಉಸಿರು ಕಟ್ಟಿದಂತಾಗಿ ಇನ್ನೇನು ಮುಗಿಯಿತೆಲ್ಲ ಅನಿಸುವಾಗ, ಎಳೆತದ ರಭಸಕ್ಕೆ ಮುಳುಗುವ ನನ್ನ ಯ್ಯಾರೊ ಬಲವಾಗಿ ಹಿಡಿದಪ್ಪಿ ಎಳೆದಂತಾಗಿತ್ತು. ಯಾವ ಎಚ್ಚರವೂ, ಅರಿವು ನನಗಿರಲಿಲ್ಲ.

ಕಡಲದಂಡೆಯಲಿ ನನ್ನೊಳಡಗಿದ್ದ ಕಡಲಾಮೃತವ ಹೊರಗೆ ತಗೆಯುವ ಪ್ರಯತ್ನ ಉಸಿರು ನಿಂತು ನಿಸ್ತೇಜವಾದ ನನಗೆ ಯ್ಯಾರೋ ದೀರ್ಘವಾದ ಚುಂಬನದಿಂದ ಉಸಿರ ನೀಡಿ ಬದುಕಿಸಿದಂತಾಗಿತ್ತು. ನಾನಾರ ತೊಡೆಯ ಮೇಲೆ ಮಲಗಿರುವೆನೆಂದು ದೃಷ್ಟಿ ಹಾಯಿಸಿದಾಗ ಹೃದಯ ಬಡಿತ ಹೆಚ್ಚಾದ ಅನುಭವ. ಸಾವರಿಸಿಕೊಂಡು ಎಳಲು ಪ್ರಯತ್ನಿಸಿದರು ಆಗಲಿಲ್ಲ. ಆತಂಕ ಮಡುಗಟ್ಟಿತ್ತು.

ರಟ್ಟೆ ಹಿಡಿದು ನಿಧಾನವಾಗಿ ಎಬ್ಬಿಸಿ, ಹೇಳಿ ಎಲ್ಲಿ ನಿಮ್ಮ ಮನೆ? ಬಿಡುತ್ತಿನಿ. ಈಜು ಬರೋದಿಲ್ಲಾಂದ್ರೆ ಅಲೆಗಳಿಂದ ದೂರ ಇರಬೇಕು ತಾನೆ? ಇಂಥ ಸುಂದರ ಯುವತಿ ಕಂಡರೆ ಕಡಲು ಸುಮ್ಮನೆ ಬಿಟ್ಟಿತೇ ಇನ್ನು ನನ್ನ ಗತಿಯೇನು? ಎನ್ನುತ್ತ  ನಡೆಯಲಾಗದ ನನ್ನ ಅನಾಯಾಸವಾಗಿ ತನ್ನ ಬಾಹು ಬಂಧನದಲ್ಲಿ ಬಂಧಿಸಿ ತನ್ನ ಕಾರಿನತ್ತ ನಡೆದ. ಇಲ್ಲೆ ಹತ್ತಿರವಿದೆ ನಿಮಗ್ಯಾಕೆ ತೊಂದರೆ, ನಾನು ನಡಕೊಂಡು ಹೋಗತಿನಿ ಎಂದು ಹೇಳಿದರೂ, ಇಷ್ಟು ದಿನಗಳ ಮೇಲೆ ನಿನ್ನ ಕಣ್ಣತುಂಬ ನೋಡುವ ಅವಕಾಶದಿಂದ ವಂಚಿತನನ್ನಾಗಿ ಮಾಡಬೇಡಿ.

ಕಾರು ಮನೆಯ ಮುಂದೆ ನಿಂತಿದ್ದು ಗಮನುಸಲೇ ಇಲ್ಲ. ಯಾಕಾದರೂ ಮನೆಗೆ ಬಂದೆನೋ ಹೀಗೆ ಇದ್ದಿದ್ದರೆ ಎಷ್ಟು ಚೆನ್ನ.. ಎಂದು ಮೈಮರೆತಾಗ ಹಲೋ ಬ್ಯೂಟಿ.. ಮನೆಗೆ ಹೋಗೋ ಮನಸಿಲ್ಲದಿದ್ದರೆ ಹೇಳಿ, ಒಂದ ರೌಂಡ್ ಸಿಟಿ ಸುತ್ತಾಕಿ ಕರಕೊಂಡ ಬಂದ ಬಿಡತಿನಿ. ಅನ್ನುವ ಅವನ ಮಾತು ಮನಸ್ಸಿಗೂ ಹೃದಯಕ್ಕೂ ಹಿತವಾಗಿತ್ತು. ಬಾಯಿಮಾತಿಗೆ ಬೇಡ ಬೇಡ ಎನ್ನುತ್ತ ಸಾವರಿಸಿಕೊಂಡು ಮನೆಯೋಳಗೆ ಹೋಗಿ ಬೈ ಎಂದು ಟಾಟಾ ಮಾಡಿ ಬಾಗಿಲು ಜಡಿದೆ.

ಅಂದು ನಾನಿದ್ದ ರೂಮಿನ ಗೋಡೆಗಳಿಗೆಲ್ಲ ಜೀವ ಬಂದಂತಿತ್ತು. ಏನೋ ಸಿಕ್ಕ ಸಂತಸ. ಅದು ಶಾಶ್ವತವಾದ್ದೇ ಎಂಬ ಆತಂಕ. ಸತ್ತ ಬೇರಿಗೆ ನೀರೆರೆದು ಚಿಗುರ ಚಿಗುರಿಸಲು ದೈವ ಸಂಕಲ್ಪವಾದಂತೆ. ಪ್ರಶಾಂತವಾದ ಕಡಲಿನ ಅಲೆಗಳ ನೆನೆದಾಗೊಮ್ಮೆ ನನ್ನ ಬದುಕು ಇಷ್ಟು ಪ್ರಶಾಂತವೇ? ಅರಿವಿನಂಚಿನಲಿ ಮರೆವಿನ ನೌಕೆ ಹತ್ತಿರುವೆ. ಕನಸು ಕಾಣುವ ಸ್ಥಿತಿಯನ್ನು ಉಹಿಸಲು ಸಾಧ್ಯವಿಲ್ಲ. ಆದರೂ ಆ ಯುವಕನು ಅರಿಯದೆ ತಪ್ಪು ಮಾಡುತ್ತಿರುವುದನ್ನು ತಪ್ಪಿಸಿವುದು ನನ್ನ ಕರ್ತವ್ಯವೆಂದು ತೀರ್ಮಾನಿಸಿದೆ.

ಕಾಲಿಂಗ್ ಬೆಲ್ ಶಬ್ದ ಕೇಳಿ.. ಎಚ್ಚರಗೊಂಡು ಬಾಗಿಲು ತೆಗೆದಾಗ ಆ ಯುವಕ. ಎದೆ ಝಲ್ ಎಂದು ಒಂದೇ ಸಮನೆ ಬಡಿಯಲಾರಂಭಿಸಿತು. ಹಾಗೆ ನಿಂತ ನನ್ನ ಮೆಲ್ಲನೆ ಒಳ ಸರಿಸಿ, ನಿಧಾನ ಕಣ್ರಿ ಕುಳಿತುಕೊಳ್ಳಿಯೆಂದು ನನ್ನ ಸೋಪಾ ಮೇಲೆ ಕುಳ್ಳಿಸಿ ತಾನು ತಂದಿದ್ದ ಹಣ್ಣುಹಂಪಲ ನೀಡಿ, ಆರೋಗ್ಯ ಹೇಗಿದೆ ಚಿನ್ನ..? ಎಂದು ಕೈಹಿಡಿದು ವಿಚಾರಿಸಿದಾಗ ಕಂಗಳಿಂದ ಕಣ್ಣೀರು ಜಾರುತ್ತಿತ್ತು.

ಹೇ….ಡಾರ್ಲಿಂಗ್ ಕಣ್ಣೀರಾ? ಸಾರಿ ನೋವು ಮಾಡಿದೆ ನಾ? ಎಂದು ಆತಂಕದಿಂದ ಕೇಳುವ ಅವನ ಭಾವ ನಿಜವಾಗಲೂ ಆಶ್ಚರ್ಯ ಮೂಡಿಸಿತ್ತು. ಏನಿಲ್ಲ ಕಣ್ರಿ. ನೀವ್ಯಾಕೆ ತೊಂದರೆ ತಗೊಂಡಿರಿ. ನಾ ಚೆನ್ನಾಗಿದ್ದಿನಿ. ನೋಡಿ ನೀವು ಗೀವು ಅಂತ ಮಾತಾಡಬೇಡಿ. ನನಗೂ ಒಂದು ಹೆಸರಿದೆ ‘ವಿಜಯ’ ಅಂತ ನಿಮಗೆ ಹೇಗೆ ಬೇಕೋ ಹಾಗೆ ಕರೀರಿ. ನಿಮ್ಮ ಹೆಸರು ‘ಜಯ’ ಅಲ್ಲವಾ? ನಿಮಗ್ಯಾರು ಹೇಳಿದರು? ಅಯ್ಯೋ ನಿಮ್ಮ ಬಗ್ಗೆ ನನಗೆಲ್ಲಾ ಗೊತ್ತು ಕಣ್ರಿ. ನಾವು ನಮಗಿಷ್ಟವಾದವರ ಚರಿತ್ರೆ ಓದಿ ತಿಳಕೊಂಡಿದ್ದಿವಿ.
ಅಂದರೆ ನಿಮಗೆ ನನ್ನ ಬಗ್ಗೆ ಗೊತ್ತಾ? ಗೊತ್ತಿದ್ದು ನನ್ನ ಇಷ್ಟ ಪಟ್ರಾ? ಹಾಗಿದ್ದರೆ ಇದನ್ನು ಇಲ್ಲೆ ಬಿಟ್ಟುಬಿಡಿ.

ನಿಮ್ಮ ಬದುಕು ರೂಪಿಸಿಕೊಳ್ಳಿ. ನನ್ನಿಂದ ಯಾವ ಲಾಭವು ಇಲ್ಲ. ನನ್ನ ಜೀವನದಲ್ಲಿ ಎಲ್ಲ ಮುಗಿದು ಹೋದ ಅಧ್ಯಾಯ ಎಂದು ಚಹಾ ತರಲು ಒಳಬಂದು. ಗ್ಯಾಸ್ ಹಚ್ಚಿ ಪಾತ್ರೆಯಿಟ್ಟು ಚಾಪುಡಿ ಬದಲು ಮಸಾಲೆ ಪುಡಿ ಹಾಕಿದ್ದು ಕಂಡು, ಚೆಲ್ಲಿ ಮತ್ತೆ ಇಟ್ಟೆ. ತಲೆಯ ತುಂಬ ನೂರು ವಿಚಾರಗಳು. ಯ್ಯಾರೋ ಹಿಂದಿನಿಂದ ಅಪ್ಪಿದಂತಾಗಿ ತಿರುಗಿದರೆ ವಿಜಯ ಮುಗುಳ್ನಗುತ್ತಾ.. ಜಯಾ “ಐ ಲವ್ಯೂ” ಎಂದವನ ಎದೆಯಲ್ಲಿ ನನಗರಿವಿಲ್ಲದೆ ಕರಗಿದೆ. ನಿನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿರುವೆ. ಬೇರೆನೂ ಯೋಚಿಸಬೇಡ. ಹಿಂದೆ ಅನುಭವಿಸಿದ ನೋವು ಸಾಕು. ಇನ್ನೂ ಮುಂದೆ ನೆಮ್ಮದಿಯಿಂದ ಇರುವಂತೆ ಪ್ರೀತಿಸುವೆ ಎನ್ನುತ ಗಲ್ಲಕೆ ಮುತ್ತನಿಟ್ಟ.

ನೋಡಿ ವಿಜಯ ನೀವು ತಿಳಿದಷ್ಟು ಸುಲಭವಲ್ಲ. ಈ ಸಮಾಜದಲ್ಲಿ ಬದುಕುವುದು. ಮೊದಲೇ ನಾನು ಗಂಡ ಬಿಟ್ಟವಳೆಂಬ ಹಣೆಪಟ್ಟಿ ಹೊತ್ತವಳು. ನೀವು ಕನಿಕರಕ್ಕಾಗಲೀ ಸಾಂತ್ವನಕ್ಕಾಗಲಿ ಬಯಸುವುದು ಬೇಡ. ನಿಮ್ಮ ಮನೆ‌ಯಲ್ಲಿ ನಿನಗಾಗಿ ಸಾವಿರ ಕನಸು ಕಂಡಿರುವರು. ಅವರೆಲ್ಲರ ಆಸೆಗಳು ನನ್ನಿಂದ ನಿರಾಶೆಯಾಗಬಾರದು. ನಿಮ್ಮ ಬದುಕನ್ನು ಇನ್ನೊಬ್ಬರು ಬೆರಳು ತೋರಿಸಿ ನಗುವಂತಾದರೆ ದುರಂತ.

ಇದನ್ನೆಲ್ಲ ಇಲ್ಲೇ ಬಿಡಿ. ನಿಮಗೆ ಒಳ್ಳೆಯದಾಗುತ್ತೆ. ನನ್ನ ಬದುಕು ಹೀಗೆ ಇರಬೇಕೆಂದು ಭಗವಂತನ ನಿರ್ಣಯ ಅದರಂತೆ ಬದುಕ‌ಲು ಬಿಡಿ ಎಂದು ಅಂಗಲಾಚಿ ರೋಧಿಸಿದೆ. ಅವನ ಬಿಗಿತ ಬಲವಾಗಿತ್ತು. ನೋಡು ಸಮಾಜದ ಬಗ್ಗೆ ಚಿಂತೆಯಿಲ್ಲ. ನೀನು ನನ್ನ ಪ್ರೀತಿಸುತ್ತಿಯಾ ಇಲ್ಲವಾ ಹೇಳು ಅಷ್ಟೇ…

ಹೇಗೆ ಹೇಳಲಿ ವಿಜಯ? ಒಂಟಿ ಬದುಕಿಗೆ ಆಸರೆ ಬೇಕು ನಿಜ. ಆದರೆ ಅದು ಪುನಃ ನೋವಾಗುವ ಬದುಕಿಗಲ್ಲ. ಹೇ ಚಿನ್ನ… ನೋಡು ನಾಳೆ ಕಡಲತೀರಕೆ ಸಾಯಂಕಾಲ ಬಾ ಮಾತಾಡೋಣ. ಪ್ರೀತಿಯಿದ್ದರೆ ಬಾ… ಇಲ್ಲವಾದರೆ ಬೇಡ. ಒತ್ತಾಯದ ಪ್ರೀತಿ ನನಗೆ ಅಗತ್ಯವಿಲ್ಲ. ನಿನ್ನ ಮೌನದ ಹೋರಾಟ, ಸಹನೆ, ನಂಬಿಕೆ, ಅದಕ್ಕೂ ಮಿಗಿಲಾಗಿ ನಿನ್ನ ಕಂಗಳಲ್ಲಿರುವ ನಿಸ್ವಾರ್ಥ ಪ್ರೇಮ, ಸರಳತೆ ಇವು ನನ್ನ ನಿನ್ನತ್ತ ಸೆಳೆದಿದ್ದು ನಿಜ. ಕಹಿ ನೂರಿರಲಿ ಸಿಹಿ ನೀಡಬೇಕೆಂಬ ಆಸೆ ನಿರೀಕ್ಷೆಯಲ್ಲಿರುವೆ. ಬರದಿದ್ದರೆ ನೀ ಯಾವತ್ತು ನನ್ನ ಕಾಣಲಾರೆ… ನನ್ನುಸಿರು ನೀನಾಗಬೇಕೆಂಬ ಬಯಕೆ. ನೀ ಸಿಗದ ಈ ನನ್ನ ಜೀವನ ಅಂತ್ಯ ಕಾಣುವುದಂತೂ ಸತ್ಯ. ಎಂದು ತೆರೆದ ಬಾಗಿಲ ಮುಚ್ಚಿ ಮರೆಯಾದ.

ಹೊಸ ಚೈತನ್ಯಕೆ ಶೃಂಗಾರಗೊಳ್ಳಲು ಮನ ಹಾತೊರೆದು ಕನ್ನಡಿ ಕನಸಿಗೆ ಮುನ್ನುಡಿ ಬರಿದಂತಿತ್ತು. ದೇಹ ಸ್ಪಂದಿಸದಿದ್ದರೂ, ಭಾವ ಸ್ಪಂದನ ಮಾಡಿ ನರನಾಡಿಗಳಲ್ಲಿ ಪ್ರೀತಿಯ ಟಾನಿಕ್ ಓಡಾಡುತ್ತಿತ್ತು. ಅವನಿಗರಿವಿಲ್ಲದೆ ನನ್ನ ತೋಳಲಿ ಬಂಧಿಸಿ ಹಣೆಗೆ, ಗಲ್ಲಕೆ ಮುತ್ತನಿಟ್ಟು ನನ್ನ ಮನಸ ಹಗುರ ಮಾಡಿದವ. ನಿನ್ನ ಕಣ್ಣ ರೆಪ್ಪೆಯಂತೆ ಕಾಯವೆನೆಂದು ಹೇಳುವವನ ಒಪ್ಪುವ ಮನಸ್ಥಿತಿ ನನ್ನದಲ್ಲವೆಂದು ಹೇಗೆ ಅರುಹಲಿ?

ಬಯಸುವಾಗ ಸಿಗದ ಪ್ರೀತಿ. ಅರಳುವ ಮನಕೆ ಮೊದಲ ಪ್ರೇಮವ ನೀಡಲಾದಿತೆ? ಅರಿಯೋ ನನ್ನ ಮನಸಾ? ಕಡಲು ತಿರಸ್ಕರಿಸಿರುವುದು ನನಗೆ ಹೊಸತಲ್ಲ. ನೋವುಂಡವಳಿಗೆ ಪ್ರೇಮವೆಂದರೆ ಆತಂಕ. ವಿಜಯನ ಪ್ರೀತಿ ನಿಸ್ವಾರ್ಥವಾದರೂ‌ ನಾನು ಪರಿಶುದ್ದ ಪ್ರೇಮವ ನೀಡಲಾದಿತೆ? ಸಮಾಜ ನನ್ನ ಚುಚ್ಚಿ ಚುಚ್ಚಿ ಸಾಯಿಸದೇ?ಈಗಿರುವ ನಿಂದನೆಗಳಿಗೆ ಸತ್ತು ಹೋಗಿರುವೆ‌. ಇನ್ನೂ  ಇದೊಂದಾದರೆ ನಾನು ಹುದುಗುವುದು ಖಚಿತ. ಅರ್ಥವಾಗ ಸ್ಥಿತಿ.

ಎಂಥ ಧರ್ಮ ಸಂಕಟ. ಹೇಗೆ ನಿಭಾಯಿಸಲಿ. ನಾನೋ ಪುನಃ ಚಿಗುರದ ಬರಡು ಮರ. ಕೊರಡು ಕೊನರುವುದಯ್ಯ ಎಂಬಂತ ಸ್ಥಿತಿ ನಿಜವಾದಿತೆ? ಆದರೂ ಬೇಡ ಹುಚ್ಚು ಮನಸು ಕೊನೆಗೆ ಸರಿಯಾಗುವುದು. ಬಿಸಿರಕ್ತ ಇರಲಿ ಮೌನವಾಗಿದ್ದರೆ ಒಳಿತೆಂದು ಸುಮ್ಮನಾದೆ. ಮಾರನೇ ದಿನ ಸಂಜೆಯಾದಂತೆ ಎದೆಯ ಬಡಿತ ವೇಗವಾಗಿ ಬಡಿದುಕೊಳ್ಳುತ್ತಿತ್ತು. ಹೋಗಿ ಬಿಡಲೇ ಅನ್ನಿಸಿದರೂ…

ನಾವೇನು ಯುವ ಪ್ರೇಮಿಗಳೇ… ನಾ ಬರದಿದ್ದರೆ ನನಗಿಷ್ಟವಿಲ್ಲವೆಂದು ದೂರ ಹೋಗುವುದಂತೂ ಗ್ಯಾರಂಟಿ. ದೇವರೆ ಧೈರ್ಯ ಕೊಡು, ವಿಜಯಗೆ ಬುದ್ದಿ ಕೊಡು ಎಂದು ಬೇಡಿದೆ. ಅಂತೂ ಸಂಜೆ ಜಾರಿ ರಾತ್ರಿ ಆವರಿಸಿದಂತೆ ಮನಸ್ಸು ನಿರಾಳವಾಗಿತ್ತು. ಕಾರಣ ವಿಜಯ ಪೋನ್ ಮಾಡಿರಲಿಲ್ಲ. ಹಾಗೆ ಎಲ್ಲ ಒಳ್ಳೆ ಯದಾಗಲಿ ಪ್ರಭುವೇ ಎಂದು ಧ್ಯಾನದಲ್ಲಿ ತೊಡಗಿದೆ.

ಪೋನ್ ರಿಂಗಣಿಸುತ್ತಿತ್ತು… ನೋಡಿದರೆ ಅನೌನ್ ನಂಬರ್ ಎತ್ತಲೋ ಬೇಡವೋ ಎನ್ನುತ್ತ  ಹಲೋ… ಎಂದೆ ನಿಮಗೆ ವಿಜಯ ಗೊತ್ತಾ… ನನಗೆ ಹೆದರಿಕೆ, ನಡುಗುತ್ತ ಹೌದೆಂದೆ. ಏನಾಯಿತು ವಿಜಯಗೆ? ಎಂದು ಆತಂಕದಿಂದ ಕೇಳಿದೆ. ನೋಡಿ ಮೇಡಂ ವಿಜಯರವರಿಗೆ ಅಪಘಾತವಾಗಿದೆ. ತಲೆಗೆ ಬಲವಾದ ಪಟ್ಟು ಬಿದ್ದು ಪ್ರಜ್ಞೆ ತಪ್ಪಿರುವರು, ರಕ್ತ ತುಂಬಾ ಹೋಗಿದೆ ಎನ್ನುವಾಗಲೇ ಗಂಟಲು ಬಿಗಿದಂತಾಗಿ ಎಲ್ಲಿದ್ದಾರೆ ಸರ್… ಎಂದೆ.

ಸರಕಾರಿ ಆಸ್ಪತ್ರೆ ಬನ್ನಿ ಎಂದು ಪೋನ್ ಕಟ್ಟಾಯಿತು. ಅಯ್ಯೋ ದೇವರೇ… ಎಂದು ಆಟೋ ಹತ್ತಿ ತಲುಪಿದೆ. ಎಮರ್ಜೆನ್ಸಿ ವಾರ್ಡನಲ್ಲಿ ಮೌನವಾಗಿ ಮಲಗಿದ ವಿಜಯನ ಕಂಡು ಕರುಳು ಕಿತ್ತು ಬಂದಂತಾಯಿತು. ಈ ಸ್ಥಿತಿಗೆ ನಾನೇ ಕಾರಣ ನನ್ನಿಂದ ಯಾರಿಗೂ ಸುಖವಿಲ್ಲವಲ್ಲವೆಂದು ಅಳು ತಡೆಯಲಾರದೇ ವಿಜಯನ ಕೈ ಹಿಡಿದು ಕಣ್ಣಿಗೊತ್ತಿಕೊಂಡೆ.

ನನ್ನ ಕ್ಷಮಿಸಿಬಿಡು ವಿಜಯ. ನೀನು ಈರೀತಿ ಮಾಡಕೊತಿಯಂತ ಭಾವಿಸಿರಲಿಲ್ಲ. ಪ್ರಜ್ಞೆ ತಪ್ಪಿದ ವಿಜಯನ ಆರೈಕೆಯಲ್ಲಿ ಹಗಲುರಾತ್ರಿ ಕಳೆದಿರುವುದು ಗೊತ್ತಾಗಲಿಲ್ಲ. ವಿಜಯ ಎಚ್ಚರಗೊಂಡಾಗ ಅವನ ಕಣ್ಣೆದುರು ನನ್ನ ಕಂಡು ಅವನ ಕಂಗಳು ಎಲ್ಲವನ್ನು ಹೇಳಿತ್ತು. ವಿಜಯ ಏನಿದು? ಜೀವದ ಜೊತೆ ಹುಡುಗಾಟವಾ? ಏನಾದರೂ ಹೆಚ್ಚುಕಮ್ಮಿಯಾಗಿದ್ದರೆ ಏನ್ ಗತಿ? ನಿಮ್ಮ ಮನೆಯವರಿಗೆಲ್ಲ ಹೇಳಿಲ್ಲವಾ? ವಿಜಯ ನಕ್ಕು.. ಜಯಾ ನೀ ನನಗೊಸ್ಕರ ಬಂದೆ ಬರುತ್ತಿ ಯಾ ಅಂತ ಗೊತ್ತಿತ್ತು. ಇಷ್ಟೆಲ್ಲ ಪ್ರೀತಿ ಇಟ್ಟಕೊಂಡು ನನ್ನ ದೂರ ತಳ್ಳತಿಯಲ್ಲಾ? ಸರಿನಾ ಹೇಳು?

ನೀ ಬರಲಿಲ್ಲವಲ್ಲ ಎಂದು ಈ ಜೀವ ಬೇಡವೆನಿಸಿ ಬೈಕ್ ಮೇಲೆ ದೂರ ಹೊರಟಿದ್ದೆ, ಆದರೆ ನೋಡು ನಿನ್ನ ಪ್ರೀತಿ ಬದುಕಿಸಿತು. ನನಗೆ ಯ್ಯಾರೂ ಇಲ್ಲ ಜಯಾ. ನಾನೊಬ್ಬ ಅನಾಥ. ಈ ಅನಾಥನ ಬಾಳಿಗೆ ಬೆಳಕಾಗಿ ಬರುವೆಯಾ? ಮಾತು ಬರದಂತಾ‌ಗಿತ್ತು. ವಿಜಯ ನಿನ್ನಂದ ದೂರಾಗಿ ಬದುಕುವ ಶಕ್ತಿ ನನಗೂ ಇಲ್ಲ. ಭಗವಂತನ ಇಚ್ಛೆ ಇದೆ ಇರಬೇಕು. ನಮ್ಮಿಬ್ಬರ ಸಂಗಮ. ವಿಜಯಗೆ ಎಲ್ಲಿಲ್ಲದ ಹಿಗ್ಗು‌. ಆಸ್ಪತ್ರೆಯೆಂಬುದು ಗಮನಿಸ‌ದೇ ಬರಸೆಳೆದು ಅಪ್ಪಿ ಮುತ್ತಿಟ್ಟು ನಕ್ಕಾಗ ಬಳ್ಳಿಗೊಂದು ಮರ ಆಸರೆ ಎಂಬ ಸಾರ್ಥಕ ಭಾವ ಜಿನುಗುತ್ತಿತ್ತು. ಕಡಲ ಮೊರೆತಗಳು ಮಾರ್ದನಿಸುತ್ತಿದ್ದವು..

‍ಲೇಖಕರು Avadhi

November 30, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಂದು, ನಾನು ವಿದ್ಯಾರ್ಥಿಗಳ ಮುಂದೆ ತಲೆ ತಗ್ಗಿಸಿದೆ…

ಅಂದು, ನಾನು ವಿದ್ಯಾರ್ಥಿಗಳ ಮುಂದೆ ತಲೆ ತಗ್ಗಿಸಿದೆ…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

‘ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ’

‘ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ 'ಅರೇ... ಹೋದ......

2 ಪ್ರತಿಕ್ರಿಯೆಗಳು

  1. Shivaleela

    ಪ್ರಕಟಿಸಿದ್ದಕ್ಕೆ ಧನ್ಯವಾದಗಳು ಅವಧಿ

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Sneha NayakCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: