ಕಡಲ ಕಿನಾರೆಯಲ್ಲಿ ಸಿಕ್ಕ ವೈದೇಹಿ ಎಂಬ ಅಚ್ಚರಿ!

ಜಯಶ್ರೀ ಬಿ ಕದ್ರಿ

ವೈದೇಹಿ ಎಂಬ ಅಚ್ಚರಿ ನನಗೆ ಸಿಕ್ಕಿದ್ದು ಕುಂದಾಪುರದ ಕಡಲ ಕಿನಾರೆಯಲ್ಲಿ. ತುಷಾರ ಮಾಸ ಪತ್ರಿಕೆಯವರು ಉದಯೋನ್ಮುಖ ಲೇಖಕಿಯರಿಗೋಸ್ಕರ ‘ಕೇಳು ಸಖಿ’ ಎಂಬ ಕಮ್ಮಟ ಹಾಗೂ ಸಂವಾದ ಏರ್ಪಡಿಸಿದ್ದರು. ಅಲ್ಲಿ ವೈದೇಹಿ ಹಾಗೂ ಭುವನೇಶ್ವರಿ ಹೆಗಡೆಯವರೊಂದಿಗೆ ನಾವು 25 ಲೇಖಕಿಯರು ಎರಡು ದಿನ ಕಳೆಯುವ ಅವಕಾಶ.

ಪದವಿ, ಸ್ನಾತಕೋತ್ತರ, ಪ್ರೊಫೇಶನಲ್ ಕೋರ್ಸ್ ಗಳು ಅದು, ಇದು ಹೀಗೆ ಎಲ್ಲ ಓದಿಕೊಂಡೂ ಆಗೀಗ ವಿಹಲ್ವರಾಗುವ, ಬೋರಾಗುತ್ತದೆಯೆಂದೋ ಸ್ಫೂರ್ತಿ ಇಲ್ಲವೆಂದೋ, ಶುದ್ಧ ಸೊಂಬೇರಿತನದಿಂದ ಜೀವನದ ಅರ್ಥಕ್ಕೋಸ್ಕರ ತಡಕಾಡುತ್ತಿರುವಾಗ ವೈದೇಹಿ ಹಾಗೂ ಭುವನೇಶ್ವರಿ ಹೆಗಡೆಯವರಂತಹ ಲೇಖಕಿಯರು, ಅವರ ಕತೆ, ಲೇಖನಗಳಲ್ಲಿನ ಗಟ್ಟಿ ಅಂತಃಸತ್ವದ  ಹೆಣ್ಣುಮಕ್ಕಳು ನಮ್ಮನ್ನು ಪೊರೆಯುತ್ತಾರೆ.

ವೈದೇಹಿಯವರ ಸಮಗ್ರ ಸಾಹಿತ್ಯದ ಹೊಸ ಆವೃತ್ತಿ 2017ರಲ್ಲಿ ಹೊರ ಬಂದಿದ್ದು ಅದನ್ನು ಓದುವ ಭಾಗ್ಯ ನನ್ನದಾಯಿತು. ಆ ಕುರಿತು ಒಂದು ಬರಹ. ಎಲ್ಲ ಸೃಷ್ಟಿಶೀಲ ಮನಸ್ಸುಗಳಿಗೆ ಸ್ಫೂರ್ತಿಯಾಗಿ,  ಜೀವನ ಪ್ರೀತಿಯ ಸಂಕೇತವಾಗಿ, ಜಗತ್ತನ್ನು ಪೊರೆವ ವಿಶಿಷ್ಟ ಕಾಣ್ಕೆಯ ಸಂಕೇತದಂತೆಯೇ ಈ ಕತೆಗಳಿವೆ. ಈ ಪುಸ್ತಕದಲ್ಲಿನ 90 ಕಥೆಗಳನ್ನು ಪ್ರಾಮಾಣಿಕವಾಗಿ ಓದಿ ನನ್ನ ಗ್ರಹಿಕೆಗೆ, ಪರಿಧಿಗೆ ದಕ್ಕಿದ್ದನ್ನು, ನನಗೆ ವಿಶಿಷ್ಟ್ಟವೆಂದು ಅನಿಸಿದ, ನನ್ನನ್ನು ತಾಕಿದ ಅಂಶಗಳ, ಆ ಮೂಲಕ ವೈದೇಹಿ ಎಂಬ  ಅಚ್ಚರಿಯ ಬಗ್ಗೆ ಹೇಳಲಿಚ್ಚಿಸುತ್ತೇನೆ.

1979ರಿಂದ 2020ರ ವರೆಗೆ, ಹೆಚ್ಚು ಕಡಿಮೆ 41 ವರ್ಷಗಳ ಒಳ ನೋಟಗಳಿರುವ, 20 ಹಾಗೂ 21ನೇ ಶತಮಾನದ ಸಾಕ್ಷಿಪ್ರಜ್ಞೆಯಂತೆ ಇರುವ ಕಥೆಗಳಿವು. ಅದರಲ್ಲೂ  ಮಹಿಳೆಯರ ಸಂವೇದನೆಯನ್ನು ತಣ್ಣಗೆ, ನಿರ್ಭಿಡೆಯಿಂದ ಹೇಳಿ ಮುಗಿಸುವ, ಸ್ಪಷ್ಟವಾದ ಚಿಂತನೆಗಳಿರುವ, ಒಂದು ರೀತಿಯ ತಾತ್ವಿಕ ಹೊಳಹುಗಳನ್ನು ಕೊಡುವ ನಿರ್ವ್ಯಾಜದ ಕಥೆಗಳು. ನಮ್ಮ ಭಾವ ಜಗತ್ತನ್ನು ಉಳಿಸುವ, ನಮ್ಮ ಮೈಯಲ್ಲಿ ವಿದ್ಯುತ್ ಪ್ರವಾಹ ಹರಿಸಲು ಶಕ್ತವಾಗಿರುವ, ಮನುಷ್ಯ ಮನಸಿನ ಅನಂತ ಸಾಧ್ಯತೆಗಳನ್ನು ಈ ಕಥೆಗಳು ಹೇಳುತ್ತವೆ.

ಪುಸಕದ ‘ನೆನಕೆ’ಯಲ್ಲಿ ಟೀಚರುಗಳು, ದೊಡ್ದಮ್ಮ, ದೊಡ್ಡಪ್ಪ ಇವರನ್ನೆಲ್ಲ ನೆನೆಸಿಕೊಳ್ಳುವ, ‘ಕುಂದಾಪುರದ ಧೂಪ ದೇವದಾರು ಗಾಳಿ ಮರಗಳಿಗೆ’ ಎನ್ನುವ ವಾಕ್ಯ ರೋಮಾಂಚನಗೊಳಿಸುತ್ತದೆ. ಓದು, ಸಾಂಸ್ಕೃತಿಕ ಚಟುವಟಿಕೆಗಳು, ವ್ಯಕ್ತಿಗಳ ಕಥೆಗಳನ್ನು ‘ಆಲಿಸುವಿಕೆ’, ನಮ್ಮ ಅಂತರಂಗ ದ್ರವ್ಯವನ್ನು ಪುಷ್ಟಿಗೊಳಿಸುತ್ತವೆ ಎನ್ನುವ ವೈದೇಹಿಯವರ ಮಾತಿಗೆ ಸಾಕ್ಷಿಯಾಗಿ ಈ ಕಥೆಗಳಿವೆ.

ಯಾಕೋ ಈ ಪುಸ್ತಕ ಕೈಗೆತ್ತಿಕೊಂಡಾಗ, ಅದರ ಮುಖಪುಟದಲ್ಲಿನ ಟೊಂಗೆ ಟೋಂಗೆಗಳ ವಿನ್ಯಾಸ ನೋಡಿದಾಗ ಈ ಪುಸ್ತಕದ ಬಗ್ಗೆ ಬರೆಯಲೇ ಬೇಕೆನಿಸಿತು. ಕೆ ವಿ ಸುಬ್ಬಣ್ಣ ಅವರು ಮುನ್ನುಡಿಯಲ್ಲಿ ಬರೆದಿರುವಂತೆ ಒಂದು ರೀತಿಯ ‘ಮಂದ’ ಶೃತಿಯ ಸೊಬಗು ವೈದೇಹಿ ಅವರ ವ್ಯಕಿತ್ವದಲ್ಲೂ ಕಥೆಗಳಲ್ಲೂ ಅನುರಣಿಸುತ್ತವೆ. ಇನ್ನು ವೈದೇಹಿ ಅವರ ಕಥೆಗಳಲ್ಲಿ ಬೇರೆ ಬೇರೆ ಸ್ತ್ರೀ ಪಾತ್ರಗಳು. ‘ಒಲೆ ಬೇರೆ ಆದರೂ ಉರಿ ಒಂದೇ’ ಎನ್ನುವಂತೆ ಗೃಹಿಣಿಯರಿಗೆ, ವೃತ್ತಿಪರ ಮಹಿಳೆಯರಿಗೆ, (ಹಾಗೆ ನೋಡುವುದಿದ್ದರೆ ಎಲ್ಲ ಮಾನವರಿಗೆ) ಅವರದ್ದೇ ಆದ ಒಡಲುರಿ ಇದ್ದೇ ಇರುತ್ತದೆ.

ಇನ್ನು ಸಿನೆಮಾ ನೋಡಿ ಭಾವುಕರಾಗುವ, ಕಾದಂಬರಿ ಓದಿ ರಮ್ಯಾದ್ಭುತ, ಭ್ರಾಮಕ ಬದುಕಿನಲ್ಲಿ ತಮ್ಮ ದೈನಂದಿನ ಜಡತೆಯನ್ನು, ನೀರಸತೆಯನ್ನು ಮರೆಯಲು, ಒಂದಷ್ಟು ಬಣ್ಣ ತುಂಬಿಕೊಳ್ಳಲು ಪ್ರಯತ್ನಿಸುವವರನ್ನು ವೈದೆಹಿಯವರು ಲಘುವಾಗಿ ಛೇಡಿಸದೆ ಇಲ್ಲ. ‘ಬರೀ ಒಂದು ಪೆಟ್ಟಿಗೆ’ ಕಥೆಯಲ್ಲಿನ ಸುನಂದಕ್ಕನ ಬಗ್ಗೆ ‘ಕಾದಂಬರಿ ಗೀದಂಬರಿ ಓದಿ ರಾಶಿ ಮಾಡುವ ಸುನಂದಕ್ಕ ಏನು ಹೇಳಿದರೂ ಬೇಗ ನಂಬಿಕೆಯೇ ಬರುವುದಿಲ್ಲ’ ಒಂದು ಸಣ್ಣ ಜೀರಿಗೆಯಂತಹ ಘಟನೆಯನ್ನು ಒಳ್ಳೇ ಪುಸ್ತಕ ಭಾಷೆಯಲ್ಲಿ ರಮ್ಯ ಮಾಡಿ ಹೇಳುವುದರಲ್ಲಿ ಅವರನ್ನು ಬಿಟ್ಟವರಿಲ್ಲ’ ಎಂದು ಕೀಟಲೆ ಮಾಡುತ್ತಾರೆ.

ತನ್ಮ ಜೀವನ ಪ್ರೀತಿಯನ್ನೇ ಕುಗ್ಗಿಸುವ, ಚೈತನ್ಯವನ್ನೇ ಉಡುಗಿಸುವ ಪಿತೃ ಯಾಜಮಾನ್ಯ ಪದ್ಧತಿಯ ಕ್ರೌರ್ಯಗಳನ್ನು ‘ಅಮ್ಮಚ್ಚಿಯೆಂಬ ನೆನಪು’ ‘ವಾಣಿ ಮಾಯಿ’ಯಂತಹ ಕತೆಗಳು ದಾಖಲಿಸುತ್ತವೆ. ಅದೇ ರೀತಿ ಆ ಪಾಪದ ಹೆಣ್ಣುಮಕ್ಕಳ ತೀವ್ರವಾದ, ಆದರೆ ಅಸಹಾಯಕ ಪ್ರತಿಭಟನೆಗಳನ್ನು ಕೂಡ. ಹೆಣ್ಣಿಗೆ ಆರ್ಥಿಕ ಸ್ವತಂತ್ರ್ಯ ಬೇಕು ಎನ್ನುವುದನ್ನು ವೈದೇಹಿ ಅವರು ಚಿತ್ರಿಸುವ ವಿಧ ನಮ್ಮ ಹೃದಯವನ್ನು ಕಲಕಿ ಬಿಡುತ್ತದೆ. ಸಿನೆಮಾ ನೋಡಲು ಅರ್ಧ ಟಿಕೆಟ್ ಸಿಗದೆ ಮಂಜುನಾಥಯ್ಯನವರ ಹೆಂಡತಿ ಸಂಕಟಗೊಳ್ಳುವ ಪರಿ ನೋಡಿ. ”ಎಷ್ಟು ನೂರು ಮುಡಿ ಅಕ್ಕಿ ಹುಟ್ಟುವಳಿ ಇದ್ದರೇನಾಯಿತು? ಮನೆಯಲ್ಲಿ ತಾನು ಬಗ್ಗಿದ ಬೆನ್ನು ಎತ್ತದೆ ಗೇಯ್ದರೇನಾಯಿತು?  ಹಾಗಾದರೆ ಒಂದು ದಮಡಿಯನ್ನಾದರು ಹೆಚ್ಚಿಗೆ ತನ್ನ ಬಳಿ? ಇರುವಷ್ಟನ್ನಾದರೂ ತಾನು ಬೇಡಿ ಪರದೇಶಿಯಂತೆ ಕೇಳಿ ತೆಗೆದುಕೊಳ್ಳಬೇಕಾಯಿತಲ್ಲವೆ?”

ವೈದೇಹಿಯವರ ಕತೆಗಳ ಹಿರಿಮೆ ಇರುವುದು ಅವು ನಮ್ಮ ಅಂತರಂಗದಲ್ಲಿ, ಅದರಲ್ಲೂ ಮಹಿಳೆಯರ ಮನಸ್ಸಿನಲ್ಲಿ ಎಬ್ಬಿಸುವ ಅಲೆಗಳಲ್ಲಿ. ಹೆಣ್ಣಿನ ಲೈಂಗಿಕತೆಯನ್ನು ಸಹಾನುಭೂತಿಯಿಂದ, ಅಷ್ಟೇ ಸಹಜವಾಗಿ ವ್ಯಕ್ತಪಡಿಸುವ ‘ಸೌಗಂಧಿಯ ಸ್ವಗತಗಳು’. ‘ಹಗಲು ಗೀಚಿದ ನೆಂಟ’ ಕತೆಯಲ್ಲಿನ ತಣ್ಣಗಿನ ಕ್ರೌರ್ಯ, ‘ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗಳು’ ಕತೆಯ ಪಿತೃ ಯಾಜಮಾನ್ಯ, ‘ಒಂದು ಕಳ್ಳ ವೃತ್ತಾಂತ’ದ  ಬಡತನದ, ಹಸಿವಿನ ವ್ಯಥೆ.. ಹೀಗೆ.

1. ಮರ ಗಿಡ ಬಳ್ಳಿ
2. ಅಂತರಂಗದ ಪುಟಗಳು
3. ಗೋಲ
4. ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗಳು
5. ಅಮ್ಮಚ್ಚಿಯೆಂಬ ನೆನಪು
6. ಕ್ರೌಂಚ ಪಕ್ಷಿಗಳು
7. ಕತೆ ಕತೆ ಕಾರಣ

ಹೀಗೆ ಒಟ್ಟು 7 ಕಥಾ ಸಂಕಲನಗಳು ಈ ಸಮಗ್ರ ಸಂಪುಟದಲ್ಲಿ ಇವೆ. ಇವುಗಳಲ್ಲಿನ ಕೆಲವು ಪಾತ್ರಗಳಂತೂ ನಮ್ಮನ್ನು ಇಡಿಯಾಗಿ ಅಲುಗಾಡಿಸುವ ಶಕ್ತಿ ಉಳ್ಳವುಗಳು.  ‘ಬೆದಕಾಟ ಬದುಕಲ್ಲ’ ಕತೆಯ ಅಂಜು ‘ಸೌಗಂಧಿಯ ಸ್ವಗತಗಳು’ ಕತೆಯ ಸುಗಂಧಿ, ‘ಒಂದು ಅಪರಾಧ ತನಿಖೆ’ಯ ‘ನಾನು’ ಎಂಬ ಹೆಸರಿದ್ದೂ ಹೆಸರಿರದ ಕುಸುಮಾ,  ‘ಅಂತರಾಳದ ಬದುಕು’ ಕತೆಯ ಚಿಕ್ಕಮ್ಮ, ‘ಅಂತರಂಗದ ಪುಟಗಳು’ ಕತೆಯ ಅಚಲಾ, ‘ಗುಲಾಬಿ ಮೃದು ಪಾದಗಳು’ ಕತೆಯ ಸರಿತಾ.. ಹೀಗೆ. ಶಕುಂತಲೆ, ಅಕ್ಕು, ವಾಸಣ್ಣ,  ಅಭಾ ಹೀಗೆ ಈ ಎಲ್ಲ ಪಾತ್ರಗಳು ನಮ್ಮ ಅಕ್ಕ ಪಕ್ಕವೇ ಕುಳಿತು ಮಾತನಾಡುತ್ತ, ನಮ್ಮ ನಿಟ್ಟುಸಿರಿನ ದನಿಗಳೊಂದಿಗೆ ತಾವೂ ಕಾಲು ನೀಡಿ ‘ಪಟ್ಟಾಂಗ’ ಮಾಡುತ್ತಿರುವಂತೆ ಭಾಸವಾಗುತ್ತದೆ. ಹೀಗಾಗಿಯೇ ವೈದೇಹಿಯವರ ಕತೆಗಳು ಒಂದು ಅದ್ಭುತ ಕಥಾ ಯಾನ, ಸ್ಮೃತಿಪಟಲದ ಪಯಣ.

‍ಲೇಖಕರು Avadhi

December 5, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This