ಕಣಿವೆಯಣ್ಣನ “ಸಂದಾಯಿ”

ಸುನೀತ ಕುಶಾಲನಗರ

ಕೊಡಗಿನ ಕೆಲವೇ ಕೆಲವು ಕಾದಂಬರಿಕಾರರಲ್ಲಿ ಮುಂಚೂಣಿಯಲ್ಲಿರುವವರು ಭಾರದ್ವಾಜ ಕೆ ಆನಂದತೀರ್ಥರವರು. ಇವರ “ಸಂದಾಯಿ” ಕಾದಂಬರಿಯನ್ನು ಓದಲು ಕಾತರದಿಂದ ಕಾಯುತ್ತಿದ್ದೆವು. ಪುಸ್ತಕ ಕೈ ಸೇರಿದ ಕ್ಷಣದಿಂದ ಓದಲಾರಂಭಿಸಿ ಮುಗಿಸುವವರೆಗೂ ಕಾದಂಬರಿಯುದ್ದಕ್ಕೂ ಎಳೆದೊಯ್ದ ಕುತೂಹಲ ಕೊನೆ ಕೊನೆಗಂತೂ ಮುಂದೇನಾಗಬಹುದೆಂಬ ಭಯ, ಆತಂಕ ವೇಗದ ಉಸಿರಿನ ಜೊತೆ ಕಣ್ಣೂ ಓಡಿ ಮುಕ್ತಾಯ ಕಂಡಿತು.

ಕಥಾ ನಾಯಕನ ಸುತ್ತ ಹೆಣೆಯುವ ಘಟನೆಗಳು, ಅವನ ಬದುಕಿನ ಹಾದಿಯಲ್ಲಿ ಎದುರಾಗುವ ಬಡತನ, ಗ್ರಾಮೀಣ ಬದುಕು, ಬೇರೆ ಬೇರೆ ವ್ಯವಹಾರಗಳನ್ನು ಪರೀಕ್ಷೆ ಮಾಡಿ ಸೋಲುವ ಅಮ್ಮ, ಅಪ್ಪನ ನಿರುತ್ಸಾಹದ ಮನಸ್ಥಿತಿ ನಮ್ಮ ನೆರೆ ಹೊರೆಯದ್ದೇ ಎಂಬಂತೆ. ಅಪಘಾತವೊಂದಕ್ಕೆ ಸ್ಪಂದಿಸುವುದರಿಂದ ಬದಲಾಗುವ ಕಥಾನಾಯಕನ ಬದುಕಿಗೆ ದಕ್ಕುವ ತಿರುವು ಕಥಾವಸ್ತುವಾಗಿ ಮುಂದುವರಿಯುತ್ತದೆ.

ದಾಂಪತ್ಯ ಜೀವನದಲ್ಲಿ ಗಂಡನಿಗೆ ಮತ್ತೊಬ್ಬಳು ಹೆಂಡತಿಯನ್ನು ಸಹಿಸಲಾಗದೆ ಉಸಿರುಗಟ್ಟಿಸುವ ಅಸಮಾಧಾನದ ಅನಾವರಣ ಮಾಡಿರುವುದು ಕಾದಂಬರಿಕಾರರು ಹೆಣ್ಣು ಮನಸ್ಸಿನ ಒಳಹೊಕ್ಕಂತೆ ಅಥವಾ ಹೆಣ್ಣೇ ಆದಂತೆ. ರಾಜಕೀಯ ಲೋಕವನ್ನು ಅರೆದು ಕುಡಿದಂತೆ ಕಂಡೂ, ಕೇಳಿ ಅನುಭವಿಸಿದ್ದನ್ನು ಅಷ್ಟೇ ನಿರ್ಭೀಡೆಯಿಂದ ಕಥೆಯ ಪಾತ್ರಗಳ ಮೂಲಕ ಕಥೆಯ ಪಾತ್ರಗಳಲ್ಲಿಳಿಸಿದ್ದಾರೆ. ಆರ್ಥಿಕವಾಗಿ ಸದೃಢರಾದರೆ ಯಾವ ಕೆಲಸವೂ ಸುಲಭ ಎಂಬುದನ್ನು ಆಗ್ಗಾಗ್ಗೆ ಕೆಲವು ಸಂದರ್ಭಗಳಲ್ಲಿ ಉಲ್ಲೇಖಿಸುತ್ತಾರೆ.

ಅನ್ಯ ಧರ್ಮೀಯರನ್ನು ಸ್ವೀಕರಿಸಲು ಒಪ್ಪದ ಮನಸ್ಥಿತಿ, ಕಾರಣ, ಅದಕ್ಕಾಗಿ ಏನು ಬೇಕಾದರೂ ಮಾಡುವ ಆವೇಶ, ತನಗೆ ಬದುಕು ಕಟ್ಟಲು ಕಾರಣರಾದವರ ಋಣ ತೀರಿಸಲು ಕೊಲೆ ಮಾಡಲು ತಯಾರಾಗುವ ನಾಯಕನ ಮನಸ್ಸು ಕೊನೆ ಕೊನೆಗೆ ಓದುಗರನ್ನು ಭಾವೋದ್ವೇಗಕ್ಕೆ ಎಳೆದೊಯ್ದು ಅಂತ್ಯವಾದರೂ ಅಮಾಯಕ ಯುವಕನೊಬ್ಬ ಅಪಘಾತಕ್ಕೀಡಾಗಿ ಸಾವಿಗೀಡಾಗುವುದು ಓದುಗರ ತಲೆಯಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.

ಕಾದಂಬರಿ ಬರೆಯುವುದರಲ್ಲಿ ಪಳಗುತ್ತಲೇ ಸೈ ಅನಿಸಿಕೊಂಡ ಕೈ ಮತ್ತು ಹೊಸತನ ಭಾರದ್ವಾಜರಿಗೆ ಬಹಳ ಹಿಂದೆಯೇ ಸಿದ್ಧಿಸಿದೆ. ತನ್ನ ಪಾಡಿಗೆ ತಾನು ಎಂಬಂತೆ ಬರಹದಲ್ಲಿ ತೊಡಗಿ ಯಾವುದೇ ಪ್ರಶಸ್ತಿಗಳ ಹಂಬಲ ಮತ್ತು ಹಮ್ಮುಬಿಮ್ಮುಗಳಿಲ್ಲದೆ ತನ್ನದೇ ಸಿದ್ಧಾಂತಗಳಲ್ಲಿ ಬದುಕುತ್ತಾ ಸಾಕಷ್ಟು ಕಾದಂಬರಿಗಳನ್ನು ಓದುಗರಿಗೆ ಉಣಬಡಿಸಿದ್ದಾರೆ. ಬಳಸುವ ಗ್ರಾಮೀಣ ಭಾಷೆ, ಯಾವುದೇ ಮುಲಾಜಿಲ್ಲದೆ ಬಿಚ್ಚಿಡುವ ಸತ್ಯ ಇವರ ಕತೆಗಳಲ್ಲಿ ಎದ್ದು ಕಾಣುವಂತದ್ದು.

ರಾಜಕೀಯದಲ್ಲಿ ಆಸಕ್ತಿಯಿಲ್ಲದ್ದು ಕಾರಣವಿರಬಹುದು, ಓದುವಾಗ ಕೆಲವು ಪುಟಗಳನ್ನು ಹಾರಿಸಿಕೊಂಡು ಓದಿದ್ದೂ ಇದೆ. ಕೊಡಗಿನ ಅದರಲ್ಲೂ ಕುಶಾಲನಗರ ಆಸುಪಾಸಿನ ಊರುಗಳೇ ಕತೆಯ ತಾಣವಾಗಿರುವುದರಿಂದ ಕುಶಾಲನಗರ ಹೆಸರಿನ ಹಿನ್ನೆಲೆ ಮತ್ತು ಸಂಕ್ಷಿಪ್ತ ಇತಿಹಾಸ ಕಥೆಯಲ್ಲಿ ನಿರೀಕ್ಷಿದ್ದು ಬಹುಶಃ ರಾಜಕೀಯವೇ ವಸ್ತುವಾಗಿದ್ದಕ್ಕಿರಬಹುದೇನೋ…

‘ಸಂದಾಯಿ’ ಅದ್ಭುತ ಕಾದಂಬರಿಯಾಗಿದ್ದು ಓದಲೇಬೇಕಾದ ಹಾಗು ಸಂಗ್ರಹಯೋಗ್ಯ ಕೃತಿಯಾಗಿದೆ. ಸುಂದರ ಪ್ರಕೃತಿ ಸೌಂದರ್ಯದ ಕಣಿವೆಯಲ್ಲಿ ನೆಲಸಿ ನಮ್ಮೆಲ್ಲರಿಗೂ ಕಣಿವೆಯಣ್ಣನೇ ಆಗಿರುವ ಭಾರದ್ವಾಜರಿಂದ ಮತ್ತಷ್ಟು ಕಾದಂಬರಿಗಳ ಸುಖ ಪ್ರಸವಕ್ಕೆ ಸಾಧ್ಯವಾಗಲಿ ಮತ್ತು ಎಲ್ಲರ ಮನೆಯ ಪುಸ್ತಕ ಭಂಡಾರವನ್ನು ಸೇರಿಕೊಳ್ಳಲಿ.

‍ಲೇಖಕರು Avadhi

December 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರೈತ ಆಂದೋಲನಕ್ಕೆ ಕಾವ್ಯ ಪ್ರತಿಕ್ರಿಯೆ- ಹೊನ್ನಾರು ಒಕ್ಕಲು

ರೈತ ಆಂದೋಲನಕ್ಕೆ ಕಾವ್ಯ ಪ್ರತಿಕ್ರಿಯೆ- ಹೊನ್ನಾರು ಒಕ್ಕಲು

ಕಿರಣ್‌ ಭಟ್ ಸ್ವಾತಂತ್ರ್ಯಾನಂತರದ ಅತಿ ದೊಡ್ಡ ಆಂದೋಲನ. ರೈತ ಆಂದೋಲನ ನೂರು ದಿನ ದಾಟಿದೆ. ದಿನದಿನಕ್ಕೂ ಶಕ್ತಿ ಹೆಚ್ಚಿಸಿಕೊಳ್ಳುತ್ತ ದೇಶವೆಲ್ಲ...

ಒಂದು ಅಪೂರ್ವ ಆತ್ಮಕಥೆ – ‘ಬೊಪ್ಪ ನನ್ನನ್ನು ಕ್ಷಮಿಸು’

ಒಂದು ಅಪೂರ್ವ ಆತ್ಮಕಥೆ – ‘ಬೊಪ್ಪ ನನ್ನನ್ನು ಕ್ಷಮಿಸು’

ನಾ ದಿವಾಕರ‌ ಒಬ್ಬ ವ್ಯಕ್ತಿಯ ಬದುಕು ರೂಪಿಸುವಲ್ಲಿ ಬಾಲ್ಯ ಮತ್ತು ಯೌವ್ವನ ಮಹತ್ತರ ಪಾತ್ರ ವಹಿಸುತ್ತವೆ. ನಾವು ಬೆಳೆದ ಪರಿಸರ, ನಮ್ಮ ಸುತ್ತಲೂ...

4 ಪ್ರತಿಕ್ರಿಯೆಗಳು

 1. Kavitha A Y

  ಕಾದಂಬರಿಯನ್ನು ನನಗೂ ಓದಬೇಕೆನಿಸಿದೆ. ತುಂಬಾ ಸುಂದರವಾಗಿ ಪುಸ್ತಕದ ಬಗ್ಗೆ ಬರೆದಿದ್ದೀರ. ಧನ್ಯವಾದಗಳು ಸುನೀತ ಮೇಡಂ ಗೆ.

  ಪ್ರತಿಕ್ರಿಯೆ
 2. ಜಗಧೀಶ ಸಾಗರ್

  ಉತ್ತಮ ರಿವ್ಯೂ. ಕುತೂಹಲ ಕೆರಳಿಸುವ ಕಾದಂಬರಿ. ಓದುವ ಹಂಬಲ.

  ಪ್ರತಿಕ್ರಿಯೆ
 3. ಸಂಗೀತ ರವಿರಾಜ್

  ಕಾದಂಬರಿ ಓದುವ ಹಂಬಲವಾಗಿದೆ ಸುನಿತಕ್ಕ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: