ಕಣ್ಣನು ಕಡಿದರು ನಿದ್ದೆಯೆ ಬಾರದು..

ಕೊಡಲು ಕೊಳ್ಳಲು ಒಲವು ಬಿಟ್ಟು ಬೇರೆ ಉ೦ಟೆ ಬಾಳಲಿ?

ಕೊಟ್ಟುದೆಷ್ಟೋ ಪಡೆದುದೆಷ್ಟೋ ನಮ್ಮ ನ೦ಟೇ ಹೇಳಲಿ..

-ಎಚ್.ಎಸ್.ವೆಂಕಟೇಶಮೂರ್ತಿ

ಕೊನೆ ಕೊನೆಗೆ ಆಕೆಗೆ ನಿದ್ದೆಯೇ ಬರುತ್ತಿರಲಿಲ್ಲ. ಪ್ಲೀಜ್…ನೀವು ಮಲಗಬೇಡಿ….ನನ್ನ ಹತ್ರ ಮಾತಾಡ್ತಾ ಇರಿ….ಹೇಗಾದರೂ ಮಾಡಿ ಬೆಳಕು ಹರಿಸಿ…ಬೆಳಗಾದರೆ ಅಡ್ಡಿಯಿಲ್ಲ….ನನ್ನ ಸೊಸೆಯ ಜೋಡಿ ನಾನು ಮಾತಾಡುತ್ತಾ ಕಾಲ ಕಳೆಯುತ್ತೇನೆ….ನೀವು ಹಗಲೆಲ್ಲಾ ನಿದ್ದೆ ಮಾಡಿ….ರಾತ್ರಿ ಮಾತ್ರ …. ಆಯಿತು ಎನ್ನುತ್ತಾನೆ ಗಂಡ. ರಾತ್ರಿಯೆಲ್ಲಾ ಅವಳು ಮತ್ತೆ ಮತ್ತೆ ಹನಿಯುವ ಮಳೆಯ ಹಾಗೆ ಏನಾದರೂ ಮಾತಾಡುತ್ತಾಳೆ….ಪಕ್ಕದ ಕೋಣೆಯಲ್ಲಿ ಮಲಗಿರುವ ಮಕ್ಕಳಿಗೆ ನಿದ್ದೆಗೇಡಾಗಬಾರದೆಂಬ ಕಾಳಜಿಯಲ್ಲಿ ಬಲು ಮೆಲ್ಲಗೆ…ಪಿಸುಧ್ವನಿಯಲ್ಲಿ. ಆಕೆ ಮಾತಾಡುತ್ತಿದ್ದುದಾದರೂ ಏನು? ಅವಳಿನ್ನೂ ಲಂಗದ ಹುಡುಗಿಯಾಗಿದ್ದಾಗ ಗೆಳತಿಯರ ಕೂಡ ಕೆರೆಯ ಬಯಲಿಗೆ ಹೋಗಿದ್ದು. ಅಲ್ಲಿ ಪ್ರಶಸ್ತವಾದ ಬಂಡೆಯೊಂದನ್ನು ಆರಿಸಿ, ಬಂಡೆಯನ್ನು ತೊಳೆದು, ಒರೆಸಿ, ಇನ್ನೊಂದು ಪುಟ್ಟ ಕಲ್ಲಲ್ಲಿ ಮನೆಯಿಂದ ತಂದ ಹುಣಿಸೇಹಣ್ಣು, ಉಪ್ಪು, ಮೆಣಸಿನ ಕಾಯಿ, ಬೆಳ್ಳುಳ್ಳಿ, ಜೀರಿಗೆ, ಚೂರು ಬೆಲ್ಲ ಎಲ್ಲ ಸೇರಿಸಿ, ಹದವಾದ ಪಾಕವಾಗುವಂತೆ ಕುಟ್ಟುತ್ತಾ ಇದ್ದುದು…ಒಮ್ಮೆ ಹೀಗೆ ಈ ಗೆಳತಿಯರೆಲ್ಲಾ ಕೂಡಿ ಒಂದು ಮುಷ್ಟಿ ಗಾತ್ರದ ಕುಟ್ಟುಂಡಿ ಕುಟ್ಟಿದ್ದಾರೆ. ನಾಗರತ್ನ, ಸರೋಜ, ನಿಮ್ಮಿ…ಎಲ್ಲರ ಬಾಯಲ್ಲೂ ನಾಲಗೆ ಕೆಳಗಿಂದ ಬಳ ಬಳ ಬಳ ನೀರು ಸುರಿಯುತ್ತಾ ಇದೆ. ಕುಟ್ಟುಂಡಿಯ ವಾಸನೆ ಮೂಗನ್ನೆಲ್ಲಾ ವ್ಯಾಪಿಸಿದೆ. ಚೂರು ಚೂರು ಬಾಯಿಗೆ ಹಾಕಿಕೊಂಡು ರುಚಿ ನೋಡುತ್ತಾರೆ. ಏಯ್…ಉಪ್ಪು ಸ್ವಲ್ಪ ಕಮ್ಮಿ ಆಗಿದೆಯಲ್ಲವಾ? ಇನ್ನೊಂದು ಎರಡು ಹಳ್ಳು ಸೇರಿಸು ಅನ್ನುತ್ತಾಳೆ ಸರೋಜ. ಮತ್ತೆ ಉಪ್ಪಿನ ಹರಳು ಸೇರಿಸಿ ಕುಟ್ಟುಂಡಿ ನಾದತೊಡಗುತ್ತಾರೆ. ರತ್ನಾ… ಹಂಚೀಕಡ್ಡಿ ತಂದಿದೀಯೇನೆ…ಎಂದು ರಾಜಮ್ಮ ರತ್ನನ್ನ ಕೇಳುತ್ತಾಳೆ…..ರತ್ನ ನಕ್ಕು ನೀನೊಬ್ಳೇ ಜಾಣೆ…ನಾವೆಲ್ಲ ಬುದ್ದುಗಳು ಅಲ್ಲವಾ..? ಎಂದು ಹುಸಿ ಮುನಿಸಿ ತೋರಿಸಿ ಹುಬ್ಬು ಗಂಟು ಹಾಕುತ್ತಾಳೆ. ಈಗ ಬಂಡೆಯಿಂದ ಕುಟ್ಟುಂಡಿ ಬಿಡಿಸಿಕೊಳ್ಳಬೇಕು. ಆಮೇಲೆ ಸಣ್ಣ ಸಣ್ಣ ಗೋಲಿ ಮಾಡು ಆ ಗೋಲಿಗಳನ್ನು ಹಂಚೀಕಡ್ಡಿಗೆ ಚುಚ್ಚಿಕೊಂಡು ಲಾಲಿಪಪ್ಪಿನ ಥರ ನಾಲಗೆ ಮೇಲೆ ಹೊರಳಿಸುತ್ತಾ ಚೀಪುವುದು….ನುಣ್ಣಗಿದ್ದ ಕುಟ್ಟುಂಡಿಯ ಗೋಲಿ ಕ್ರಮೇಣ ತರಿ ತರಿಯಾಗುತ್ತಾ ರುಚಿ ದುಪ್ಪಟ್ಟಾಗುವುದು…ಏಯ್…ಇನ್ನೂ ಎಷ್ಟು ಹೊತ್ತೇ…? ಬೇಗ ಬಂಡೆಯಿಂದ ಕುಟ್ಟುಂಡಿ ಎಬ್ಬೇ….ಕುಟ್ಟುಂಡಿ ಬಂಡೆಗೆ ಅಂಟಿಕೊಂಡು ಬಿಟ್ಟಿದೆ. ರತ್ನಗೆ ಅದನ್ನು ಬಂಡೆಯಿಂದ ಬಿಡಿಸುವುದು ಆಗುತ್ತಿಲ್ಲ. ರಾಜಮ್ಮ, ಸರೋಜನೂ ಈಗ ಕೈ ಹಾಕುತ್ತಾರೆ. ಎಲ್ಲ ಸೇರಿ ಆ ಕಡೆ ಈ ಕಡೆ ಕುಟ್ಟುಂಡಿ ಎಳೆಯುತ್ತಿರುವಾಗ ಮುಂಡೇದು ಸಟಕ್ಕನೆ ಕಲ್ಲಿಂದ ಕಿತ್ತುಕೊಂಡು ಕೆರೆಗೆ ಜಾರಿಬಿಡೋದೆ…. ತುತ್ತುರಿ ನೀರಿನ ಪಾಲಾಯ್ತು…ಜಂಬದ ಕೋಳಿಗೆ ಗೋಳಾಯ್ತು….ಎಲ್ಲರ ಕಣ್ಣಲ್ಲೂ ಎಷ್ಟು ಪ್ರಯತ್ನ ಮಾಡಿದರೂ ನಿಲ್ಲದೆ ಮೆಲ್ಲಗೆ ಜಿನುಗುತ್ತಿರುವ ಕಣ್ಣೀರು…ಎಲ್ಲಾ…ಈ..ಸರೋಜಿಯಿಂದ ಆದದ್ದು….ಅಷ್ಟು ಜೋರಾಗ ಎಳೆಯೋದು…ಜೋರಾಗಿ ಎಳೆದದ್ದು ನಾನಲ್ಲ…ರತ್ನಿ….ಹೀಗೆ ಒಬ್ಬರನ್ನೊಬ್ಬರು ಬೈದುಕೊಳ್ಳುತ್ತಾ, ಎಲ್ಲ ತಮ್ಮ ಅದೃಷ್ಟ ಹೀಯಾಳಿಸಿಕೊಳ್ಳುತ್ತಾ ಬೆರಳಿಗೆ ಅಂಟಿದ್ದ ಕುಟ್ಟುಂಡಿ ಚೀಪಿಕೊಂಡು , ಕೆರೆಯಲ್ಲಿ ಕೈ ತೊಳೆದು, ಕೈ ಲಂಗಕ್ಕೆ ಒರೆಸಿಕೊಂಡು ಮನೆ ದಾರಿ ಹಿಡಿಯುತ್ತಾರೆ….ಇದು ಒಂದು ಕಥೆ.

 

ಹೆಂಡತಿ ಈ ಕಥೆ ಹೇಳಿದಾಗ ಗಂಡನಿಗೆ ಅವಳು ತನ್ನ ಹೈಸ್ಕೂಲ್ ದಿನಗಳಲ್ಲಿ ಗೆಳತಿಯರ ಜೋಡಿ ತೆಗೆಸಿದ್ದ ಒಂದು ಫೋಟೊ ನೆನಪಾಗುತ್ತೆ. ಮಧ್ಯೆ ರಾಜಲಕ್ಷ್ಮಿ. ಈ ಕಡೆ ಸರೋಜ. ಆ ಕಡೆ ನಾಗರತ್ನ. ಎಲ್ಲ ಮುಖ ಗಂಟು ಹಾಕಿಕೊಂಡು ಕೂತಿದ್ದಾರೆ. ಎಲ್ಲರ ಕೈಯಲ್ಲೂ ನೆಹರೂ ಚಿತ್ರ ಇರುವ ನೋಟ್ ಬುಕ್. ಅದನ್ನು ಎದೆಗೆ ಅಡ್ಡ ಹಿಡಿದುಕೊಂಡಿದ್ದಾರೆ. ಆಗಷ್ಟೆ ಮೂಡುತ್ತಿದ್ದ ತಮ್ಮ ಪುಟ್ಟ ಪುಟ್ಟ ಎದೆಗಳು ಫೋಟೋದಲ್ಲಿ ಕಾಣಬಾರದೆಂದೇ? ಈ ನೋಟ್ ಬುಕ್ ಯಾಕೆ ಅಡ್ಡ? ಎಂದು ಮದುವೆಯಾದ ಹೊಸದರಲ್ಲಿ ಗಂಡ ಹೆಂಡತಿಯನ್ನು ಹಾಸ್ಯ ಮಾಡುತ್ತಾ ಇದ್ದ! ಥೂ ನಿಮ್ಮ..ಮುಖಾ ನೋಡಿ ಅಂದರೆ…ಮತ್ತೇನೊ ನೋಡತಾರೆ….. ನಿದ್ದೆಯಿಲ್ಲದ ರಾತ್ರಿಗಳಲ್ಲಿ ಹೆಂಡತಿ ಹೇಳಿದ ಇನ್ನೊಂದು ಕಥೆ…ಒಳ್ಳೆ ಹುಣ್ಣಿಮೆ ರಾತ್ರಿ….ಆಕಾಶದಲ್ಲಿ ಇಷ್ಟಗಲ ಚಂದ್ರ ಬಂದುಬಿಟ್ಟಿದ್ದಾನೆ. ರಾಮಗಿರಿ ಗುಡ್ಡವನ್ನ ಉರುಳುತ್ತಾ ಉರುಳುತ್ತಾ ಚಂದ್ರನ ಬಂಡಿಗಾಲಿ ಹತ್ತುತಾ ಇದೆಯೋ ಅನ್ನುವ ಹಾಗೆ ಕಾಣುತಾ ಇದೆ…. ಗೆಳತಿಯರೆಲ್ಲಾಸೇರಿ ಕಣ್ಣಾಮುಚ್ಚಾಲೆ ಆಡುತಾ ಇದ್ದಾರೆ. ಬಾವಿಯ ಕಟ್ಟೆಯ ಹಿಂದೆ ಒಂದು ಸಣ್ಣ ಮುಡುಕು ಇದೆ. ಅಲ್ಲಿ ರಾಜಲಕ್ಷ್ಮಿ ಬಚ್ಚಿಟ್ಟುಕೊಂಡಿದ್ದಾಳೆ.ಕೃಷ್ಣ ಹುಡುಗನಾದುದರಿಂದ ಅವನನ್ನು ಯಾರೂ ಆಟಕ್ಕೆ ಸೇರಿಸಿಕೊಂಡಿಲ್ಲ. ಅದು ಅವನ ಅಸಮಾಧಾನಕ್ಕೆ ಕಾರಣ…ಇದೆಲ್ಲಾ ಅಕ್ಕನದೇ ಕಿತಾಪತಿ ಅಂತ ಅವನಿಗೆ ರಾಜಲಕ್ಷ್ಮಿಯ ಮೇಲೆ ಕೋಪ…ಅವನು ರತ್ನಗೆ ಕಣ್ಸನ್ನೆ ಮಾಡಿ ಅಕ್ಕ ಬಾವಿಕಟ್ಟೆಯ ಹಿಂದಿನ ಮುಡುಕಿನಲ್ಲಿ ಬಚ್ಚಿಟ್ಟುಕೊಂಡಿದ್ದಾಳೆ ಎಂದು ಸೂಚಿಸುತ್ತಾನೆ….ಕೃಷ್ಣನ ಕೈತವ ನೋಡಲ್ಲಿ! ಅದು ಮುಡುಕಿನಿಂದ ಅಕ್ಕನಿಗೂ ಕಾಣುತ್ತಾ ಇದೆ. ತಮ್ಮನ ಮೇಲೆ ಬ್ರಹ್ಮೇತಿ ಸಿಟ್ಟು ಬರುತ್ತೆ ಅವಳಿಗೆ. ರತ್ನ ಈಗ ಸ್ವಲ್ಪ ನಾಟಕ ಮಾಡುತ್ತಾಳೆ. ಕೃಷ್ಣನ ಸೂಚನೆ ತಾನು ಗ್ರಹಿಸಿಲ್ಲ ಎಂಬಂತೆ ಒಂದು ಕ್ಷಣ ಅಲ್ಲಿ ಇಲ್ಲಿ ಹುಡುಕಾಡಿ ಆಮೇಲೆ ಬರುತ್ತಾಳೆ ನೋಡಿ ಬಾವಿ ಕಟ್ಟೆಯ ಮುಡುಕಿಗೆ….ಸಿಕ್ಲೂ…ಅಂತ ಅವಳು ರಾಜಲಕ್ಷ್ಮಿಯನ್ನು ಮುಟ್ಟಿದ್ದೇ ಅವಳು ಕೋಪದಿಂದ ಮುಖ ಕೆಂಪಗೆ ಮಾಡಿಕೊಂಡು ಕೃಷ್ಣನ ಬೆನ್ನಿನ ಮೇಲೆ ಒಂದು ಗುದ್ದಲು ಅವನನ್ನು ಅಟ್ಟಿಸಿಕೊಂಡು ಓಡುತ್ತಾಳೆ. ಅವನು ಹನುಮಂತನಹಾಗೆ ಚಂಗನೆ ಕಾಂಪೌಂಡು ಹಾರಿ ಮನೆಯೊಳಕ್ಕೆ ನುಸುಳಿ ಬಿಡುತ್ತಾನೆ. ಅಪ್ಪ ಜಗಲಿಯ ಮೇಲೇ ನಿಂತಿದ್ದಾರೆ. ಏ…ರಾಜಿ…ಎಷ್ಟು ಹೊತ್ತಾಯ್ತು ಈಗ….ನೀನಿನ್ನೂ ಸಣ್ಣೋಳು ಅಂದುಕೊಂಡೆಯಾ….ನಿಂಗೆ ಮೈ ಮೇಲೆ ನದರಿದೆಯಾ….ಎಂದು ಓಡುತ್ತಿದ್ದ ಅವಳ ಬೆನ್ನಿಗೆ ಕೈ ಚಾಚಿದಾಗ ಉದ್ದವಾದ ಎರಡು ಜಡೆಗಳಲ್ಲಿ ಒಂದು ಅವರ ಕೈಗೆ ಸಿಗುತ್ತೆ. ಹಾರುಜಿಂಕೆ ಲಗಾಮು ಜಗ್ಗಿದ ಹಾಗೆ ಥಟ್ಟನೆ ನಿಂತಾಗ ಅಪ್ಪ, ದಬ ದಬ ಅವಳ ಬೆನ್ನಿಗೆ ಎರಡು ಹೇರುತ್ತಾರೆ. ಅವರ ಕೈ ಹೊಡೆಯುವ ಮೊದಲು ಆಕಾಶಕ್ಕೆ ಏರಿದರು ಬೆನ್ನಿನ ಮೇಲೆ ಇಳಿಯುವಾಗ ತನ್ನ ವೇಗ ಕಡಿಮೆ ಮಾಡಿಕೊಂಡು, ಮುಷ್ಟಿ ಸಡಿಲಾಗಿ, ಗುದ್ದಿನ ಸದ್ದು ಅವರ ಬಾಯಿಂದ ಮಾತ್ರ ಹೊರಹೊಮ್ಮುತ್ತೆ….

ಇನ್ನೊಂದು ಕಥೆ….ದಿನಾ ಸಂಜೆಯಾದರೆ ಲಾಟೀನಿ ಗಾಜು ವರೆಸಿ, ಬತ್ತಿಯ ಕರಕು ತೆಗೆದು, ಸೀಮೆ ಎಣ್ಣೆ ಹಾಕಿ , ಲಾಟೀನು ಹಚ್ಚಿಡುವುದು ರಾಜಿಯ ಕೆಲಸ…. ಒಂದು ಸಂಜೆ ಅವಳು ಆ ಕೆಲಸ ಮಾಡುತ್ತಿರುವಾಗ, ಮಲ್ಲಾಡಿಹಳ್ಳಿಯಿಂದ ಅವಳ ಮದುವೆಯಾಗಲಿರುವ ವರ ಧುತ್ತೆಂದು ಬಂದುಬಿಡೋದೆ? ರಾಜಿಗೆ ಗಾಭರಿಯಾಗುತ್ತದೆ. ಅವನನ್ನು ಎದುರಿಸುವ ಯಾವ ಸಿದ್ಧತೆಯನ್ನು ಅವಳು ಮಾಡಿಕೊಂಡಿಲ್ಲ. ಉಟ್ಟುಕೊಂಡಿರೋದು ಮಾಸಿದ ಪಿಸುಕಲು ಲಂಗ. ಎದೆಯ ಮೇಲೆ ದಾವಣಿ ಕೂಡ ಹೊದ್ದುಕೊಂಡಿಲ್ಲ. ಕುಕ್ಕರುಗಾಲಲ್ಲಿ ಕೂತು ಲಾಟೀನು ಒರೆಸುತ್ತಿರುವ ವಿಲಕ್ಷಣ ಭಂಗಿ. ಹಾಳು ಲಂಗ ಬೇರೆ ಮೊಣಕಾಲ ತನಕ ಮೇಲೆ ಸರಿದುಬಿಟ್ಟಿದೆ. ಅವಳ ಫಜೀತಿ ಏನಾಗಿರ ಬೇಡ. ಆ ಗಡಿಬಿಡಿಯಲ್ಲಿ ಲಾಟಿನಿನ ಗಾಜು ಕೈ ಜಾರಿ ಕೆಳಕ್ಕೆ ಬಿದ್ದು ಫಳ್ ಅಂತ ಸದ್ದು…ಏನೇ ಏನಾಯ್ತೆ? ಅಂತ ಒಳಗಿನಿಂದ ಅಪ್ಪನ ಧ್ವನಿ….ಆವತ್ತು ಇನ್ನೊಂದು ಗುದ್ದು ಅವಳ ಬೆನ್ನ ಮೇಲೆ ಗ್ಯಾರಂಟಿ ಬೀಳಬೇಕಾಗಿತ್ತು. ಆದರೆ ಅಪ್ಪ ಹೊರಗೆ ಬಂದು ನೋಡಿದಾಗ ಬಾಗಿಲ ಬಳಿ ಉದ್ದಕ್ಕೆ ಭಾವಿ ಅಳಿಯಂದಿರು ನಿಂತು ಕೊಂಡಿದ್ದಾರೆ. ತಮ್ಮ ಮುಖದಲ್ಲಿದ್ದ ಕೋಪದ ಗುರುತನ್ನು ತಕ್ಷಣ ನಗೆಯಾಗಿ ಪರಿವರ್ತಿಸುವ ಹುಚ್ಚು ಹೋರಾಟದಲ್ಲಿ ಅವರೀಗ ತೊಡಗಿದ್ದಾರೆ. ಅದು ನಗೆಯೂ ಅಲ್ಲ; ಕೋಪವೂ ಅಲ್ಲ ಅಂತಹ ಒಂದು ಮಿಸಲಭಾಜಿ ರಸಾಯನ! ನಮ್ಮ ರಾಜಿ ಭಾಳ ಹುಷಾರಿ…ಒಂದು ದಿನ ಹಿಂಗೆ ಗಾಜು ಗೀಜು ಒಡೆದೋಳಲ್ಲ…ಈವತ್ತೆಲ್ಲೋ ಕೈ ಜಾರಿರಬೇಕು ಅಷ್ಟೆ…ಎಂದು ಯಾರಿಗೆ ತಾವು ಹುಸಿ ಗುದ್ದು ಹಾಕಬೇಕಿತ್ತೋ ಅವಳ ಪರವಾಗಿ ನಿಂತು ಸಣ್ಣಗೆ ವಾದಮಾಡಲಿಕ್ಕೆ ಶುರು ಹಚ್ಚುತ್ತಾರೆ!…..ಆಮೇಲೆ ರಾಜು ಈ ಕಥೆ ಮತ್ತೆ ಮತ್ತೆ ಹೇಳಿ…ನೀವು ಆವತ್ತು ಸರಿಯಾದ ಹೊತ್ತಿಗೆ ಬಂದು ನನ್ನ ಕಾಪಾಡಿದಿರಿ ಕಣ್ರೀ…ಥ್ಯಾಂಕ್ಸ್ ನಿಮಗೆ ಅನ್ನುತ್ತಾ ಮೂಗು ಕುಣಿಸುತ್ತಾ ಇದ್ದಳು…. ಇಂತಹವೇ ಕಥೆಗಳು. ಎಲ್ಲ ಅವಳ ಬಾಲ್ಯಕ್ಕೆ ಸಂಬಂಧಿಸಿದ್ದು. ಬಾಲ್ಯ ಬಿಟ್ಟರೆ ಬೇರೆ ಯಾವ ವಯೋಮಾನದ ಕಥೆಗಳನ್ನೂ ಆ ಎರಡು ತಿಂಗಳು ಅವಳು ಹೇಳಲಿಲ್ಲ….ತಾನು ನೆನ್ನೆ ಏನು ಹೇಳಿದ್ದೆ ಎನ್ನೋದು ಅವಳಿಗೆ ಮರೆತು ಹೋಗುತ್ತಿತ್ತು…ಕಥೆಗಳು ಮತ್ತೆ ಮತ್ತೆ ಪುನರಾವರ್ತನೆಗೊಳ್ಳುತ್ತಿದ್ದವು. ಮಧ್ಯೆ ಮಧ್ಯೆ ನನ್ನ ತೋಳಿಗೆ ತಿವಿತಿವಿದು ನನಗೆ ನಿದ್ದೆ ಬಂದಿದೆಯೋ, ಎಚ್ಚರದಲ್ಲೇ ಇದ್ದೀನೋ ಎಂದು ಅವಳು ಪರೀಕ್ಷೆ ಮಾಡುತಾ ಇದ್ದಳು… ನನಗೆ ಕೆಲವೊಮ್ಮೆ ಜೊಂಪು ಹೊಡೆಯೋದು…ರೀ….ಅಂತ ಅವಳು ಗಲ್ಲ ಹಿಡಿದು ಅಲ್ಲಾಡಿಸಿ…ಹೋಗ್ರೀ…ನಿದ್ದೆ ಮಾಡುತಾ ಇದ್ದೀರಿ….ಇಲ್ಲ ಕಣೆ…ಕಣ್ಣು ಮುಚ್ಚಿಕೊಂಡೇ ಕಥೇ ಕೇಳ್ತಿದೀನಿ…ಬುರಡೆ…ನಾನು ಏನು ಹೇಳ್ತಾ ಇದ್ದೆ ಹೇಳಿ ಮತ್ತೆ…. ಹೀಗೆ ಎರಡು ತಿಂಗಳು ಇಬ್ಬರೂ ನಿದ್ದೆಯಿಲ್ಲದೆ ಕಳೆದೆವು. ಬೆಳಗಾಗುತಾ ನಾನು ಮೇಲೆ ಹೋಗಿ ಮಲಗಿಬಿಡುತ್ತಾ ಇದ್ದೆ. ಹಗಲೆಲ್ಲಾ ಶಾಲು ಅವಳ ಜೊತೆ ಮಾತಾಡುತಾ ಇರೋಳು. ಸಂಜೆ ವೇದ ಆಫೀಸಿಂದ ಬಂದವಳೇ ಅವಳ ಬಳಿ ಕೂತುಕೊಳ್ಳುತ್ತಾ ಇದ್ದಳು. ರಾತ್ರಿ ಮಲಗುವ ತನಕ ಸುಮ.

ಹೀಗೆ ನಮ್ಮ ನಿದ್ರಾ ರಹಿತ ದಿನಚರಿ ಸಾಗುತಾ ಇತ್ತು. ಕೆಲವು ರಾತ್ರಿ ಈವತ್ತೂ ಏನೂ ಕಥೆ ಹೊಳೀತಿಲ್ಲ…ಏನು ಮಾಡಲಿ ಎಂದು ಅಳುವಿನ ಸ್ವರದಲ್ಲಿ ಪೆಚ್ಚಾಗಿ ನುಡಿಯೋಳು…ದೇವರ ಧ್ಯಾನ ಮಾಡು ಅನ್ನುತ್ತಿದ್ದೆ. ಕರಿಸಿದ್ಧಾ ಕರಿಸಿದ್ಧಾ ಎಂದು ಪಿಸಿಗುಡುತ್ತಾ ಕಣ್ಣು ಮುಚ್ಚಿ ಮಲಗೋಳು. ಆಶ್ಚರ್ಯ…ಅವಳು ಯಾವಾಗಲೂ ರಾಮ ಕೃಷ್ಣ ಶಿವಾ ಎನ್ನುತ್ತಿದ್ದಳೇ ವಿನಾ ತನ್ನ ಹುಟ್ಟೂರಿನ ದೇವರಾದ ಕರಿಸಿದ್ಧನ ಹೆಸರು ಯಾವತ್ತೂ ಹೇಳಿದೋಳಲ್ಲ….ಆದರೆ ಸಾಯುವ ಕೊನೆಯ ದಿನಗಳಲ್ಲಿ ಕರಿಸಿದ್ಧ ಅವಳ ಮನಸ್ಸನ್ನು ಆಕ್ರಮಿಸಿಕೊಂಡುಬಿಟ್ಟಿದ್ದ. ಮನಸ್ಸಿನ ಯಾವ ಮುಡುಕಿನಲ್ಲಿ ಆ ಹೆಸರು ಹುದುಗಿಕೊಂಡಿತ್ತೋ. ಕರಿಸಿದ್ಧ ಅಸಾಮಾನ್ಯ ಶಕ್ತಿಶಾಲಿ ದೇವರು ಎಂದು ಅವಳು ದೃಢವಾಗಿ ನಂಬಿದ್ದಳು. ಅವಳ ತಮ್ಮನಿಗೆ ಲಿವರ್ರಿಗೆ ಸಂಬಂಧಿಸಿದ ಕಾಹಿಲೆ ಉಲ್ಬಣಿಸಿ, ದಾವಣಗೆರೆ ಆಸ್ಪತ್ರೆಯಲ್ಲಿ ಎರಡು ತಿಂಗಳು ಇದ್ದರೂ ಗುಣವಾಗದೆ ವಿಷಮಿಸಿದಾಗ, ಮಗುವನ್ನು ರಾಮಗಿರಿಗೆ ವಾಪಸ್ ಕರೆತಂದರಂತೆ. ಹೊಟ್ಟೆ ಗುಡಾಣದ ದಪ್ಪ ಆಗಿತ್ತಂತೆ. ಅವನು ಉಳಿಯುವುದಿಲ್ಲ ಎನ್ನುವುದೇ ಖಾತ್ರಿಯಾಗಿದ್ದ ದಿನಗಳು ಅವು. ಆಗ ತಾಯಿ ಮನಸ್ಸು ತಡೆಯದೆ ದಿನಾ ಅವರು ಬೆಟ್ಟದ ಮೇಲಿನ ದೇವಸ್ಥಾನಕ್ಕೆ ಮಗುವನ್ನು ಕರೆದುಕೊಂಡು ಹೋಗೋರಂತೆ. ಕರಿಸಿದ್ಧ ಕುರುತಪ್ಪಣೆಯಲ್ಲಿ ಸೂಚಿಸಿದ್ದ ಸೊಪ್ಪು ತಂದು ಕಶಾಯ ಮಾಡಿ ಬೆಳಿಗ್ಗೆ ಒಂದು ಲೋಟ , ರಾತ್ರಿ ಒಂದು ಲೋಟ ಕುಡಿಸೋರಂತೆ. ಅದನ್ನೇ ಮೈಗೆ ಹಚ್ಚಿ ಸ್ನಾನ ಮಾಡಿಸೋರಂತೆ. ಅದೇನು ಪವಾಡವೋ! ಹುಡುಗ ತಿಂಗಳೊಪ್ಪತ್ತಲ್ಲಿ ಚೇತರಿಸಿಕೊಂಡು ಮತ್ತೆ ಮೊದಲಿನಂತೆ ಆದನಂತೆ…ಇದನ್ನು ಹೇಳುತ್ತಾ ನಮ್ಮ ಕರಿಸಿದ್ಧ ಸ್ವಾಮಿ ಮನಸ್ಸು ಮಾಡಿದರೆ ಅವನಿಗೆ ನನ್ನ ನೋವು ಕಡಿಮೆ ಮಾಡೋದು ಕಷ್ಟಾನೆ…? ನನ್ನ ಅವನ ಮಡಿಲಿಗೆ ಕರೆದುಕೊಳ್ಳೋದು ಕಷ್ಟಾನೆ? ಎನ್ನೋಳು. ರೂಮಿನಲ್ಲಿ ನಮ್ಮ ಜೋಡಿಮಂಚ ಸೇರಿಸಿ ಹಾಕಿದ್ದೆವಲ್ಲಾ. ಅವಳ ಆರೋಗ್ಯ ಸ್ಥಿತಿ ಇಷ್ಟು ಉಲ್ಬಣಿಸಿರುವಾಗ ಈ ಜೋಡಿ ಹಾಸಿಗೆ ವಿಚಿತ್ರವಾದ ಸಂಕೋಚವನ್ನು ನನ್ನಲ್ಲಿ ಉಂಟುಮಾಡುತ್ತಿತ್ತು. ಒಂದು ಸಂಜೆ ಅವನ್ನು ಬೇರ್ಪಡಿಸಿ ದೂರ ದೂರ ಮಾಡಿದೆ. ಯಾಕೆ ಹೀಗೆ ಮಾಡಿದಿರಿ ಎಂದು ಅವಳು ಕೇಳಲೂ ಇಲ್ಲ. ಎರಡು ದಿನ ಹೀಗೆ ಕಳೆದಿರಬಹುದು. ರಾತ್ರಿ ನನ್ನ ಕೊನೇ ಸೊಸೆ ಸುಮಾ ಬಂದಿದ್ದಳು. ಅವಳು ಬಾಗಿಲು ಮುಂದೆ ಮಾಡಿ…ಮಾವ ತಪ್ಪು ತಿಳೀ ಬೇಡಿ…ಮಂಚಗಳನ್ನ ಯಾಕೆ ನೀವು ಹೀಗೆ ಬೇರೆ ಮಾಡಿದ್ದು? ಅದು ಅಮ್ಮಂಗೆ ಎಷ್ಟು ಬೇಜಾರು ಮಾಡಿರಬಹುದು? ಸರಿಯಲ್ಲ ಮಾವು ನೀವು ಮಾಡಿದ್ದು….ನಾನು ಮಂಚ ಮತ್ತೆ ಸೇರಿಸುತ್ತೇನೆ…ನಿಮಗೆ ನನ್ನ ಮೇಲೆ ಕೋಪ ಬಂದರೂ ಪರವಾಗಿಲ್ಲ..ಎಂದಳು….ನಾನು ಕೆಲವು ನಿಮಿಷ ತೆಪ್ಪಗೆ ಕೂತಿದ್ದೆ. ಅವಳು ಹೇಳಿದ್ದು ಸರಿ ಅನ್ನಿಸಿತು. ಆ ಚಿಕ್ಕ ಹುಡುಗಿಗೆ ತಿಳಿದಷ್ಟು ನನಗೆ ತಿಳೀಲಿಲ್ಲವಲ್ಲ ಎಂದು ತಲೆತಗ್ಗಿಸಿದೆ. ರಾತ್ರಿ ಮತ್ತೆ ಮಂಚ ಸೇರಿರೋದು ನೋಡಿ…ಓ…ಮತ್ತೆ ಬದಲಾಯಿತಾ….ಮೂವತ್ತು ವರ್ಷದ ಅಭ್ಯಾಸ ನಿಮ್ಮನ್ನು ಬಿಟ್ಟು ಮಲಗೋದು ಕಷ್ಟ ನನಗೆ…ಎನ್ನುವಾಗ ನನ್ನ ಪತ್ನಿಯ ಕಣ್ಣಲ್ಲಿ ಧಾರಾಕಾರ ನೀರು ಸುರಿಯುತ್ತಾ ಇತ್ತು….

ಚಿತ್ರ ಕೃಪೆ – ಅಂತರ್ಜಾಲ *******

]]>

‍ಲೇಖಕರು avadhi

February 14, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಚ್ ಎಸ್ ವಿ ಕಾಲಂ: ಮತ್ತೆ, ಮರೆತ ಇತಿಹಾಸದ ಮರುಗಳಿಕೆ..

ತಾವರೆಯ ಬಾಗಿಲು-೧೮ ಎರಡು ಸಾವಿರ ವರ್ಷಗಳ ಹಿಂದೆ ತೆಂಕಣಭಾರತದ ದೇಶ-ಕಾಲ-ಪರಿಸ್ಥಿತಿ ಹೇಗಿತ್ತೆಂದು ನಾವು ಊಹಿಸುವುದೂ ಸಾಧ್ಯವಿಲ್ಲ. ಮರೆತು ಹೋದ...

ಎಚ್ ಎಸ್ ವಿ ಕಾಲಂ: ಕಾವ್ಯದಲ್ಲಿ ಭಾಷೆಯಲ್ಲದ ಭಾಷೆಯ ಮಿಡುಕಾಟ..

ತಾವರೆಯ ಬಾಗಿಲು-೧೬ ಕಾವ್ಯಕ್ಕೆ ಭಾಷೆಯೇ ಮೂಲ ಸಾಮಗ್ರಿ. ಭಾಷೆಯ ಮೂಲಕ ಕವಿಗಳು ತಮ್ಮ ಲೌಕಿಕಾಲೌಕಿಕ ಅನುಭವಗಳನ್ನು ಅಭಿವ್ಯಕ್ತಿಸುತ್ತಾರೆ. ಹಾಗೆ...

8 ಪ್ರತಿಕ್ರಿಯೆಗಳು

 1. lakshmi.shankar.joshi.

  ninne nimma anatma kathana khareediside.adestu naviragi sanna sanna ghatanegalannu saha dakhalisutta hogutteeri.nijakkoo ascharya enusuttade.

  ಪ್ರತಿಕ್ರಿಯೆ
  • h s v murthy

   ಅಕ್ಕಚ್ಚುವಿನ ಅರಣ್ಯಪರ್ವ ಗಮನಿಸಿರುವಿರಾ? ದಯಮಾಡಿ ಓದಿ.
   ಎಚ್ಚೆಸ್ವಿ

   ಪ್ರತಿಕ್ರಿಯೆ
 2. sujyothi

  badhukina sukshma samvedaneyannu tumba chennagi heliddiri. nanage nimma ella barahagalu mattu adaralliru badukina satya tumba tumba ista.

  ಪ್ರತಿಕ್ರಿಯೆ
 3. D.RAVI VARMA

  ಸರ್ ನಮಸ್ಕಾರಾ,ಒಮ್ಮೆ ಹೊಸಪೇಟೆಯಲ್ಲಿ ಸವಿತಾ ಯಜಿ ಮನೆಯಲ್ಲಿದ್ದಾಗ ಬೆಟ್ಟಿ ಮಾಡಿದ್ದೆ,ನೀವು,ನಿಮ್ಮ ಬದುಕು,ನಿಮ್ಮ ಚಿಂತನೆ ,ನಿಮ್ಮ ಬರಹ ,ನೀವು ಮಾತಾಡಿದಂತೆ ಬದುಕುತ್ತಿರುವವರು. ನಿಮ್ಮ ಮಾತಿಗೂ, ನಿಮ್ಮ ಸಾಹಿತ್ಯಕ್ಕೂ ಗ್ಯಾಪ್ ಇಲ್ಲ. ನಿಮ್ಮ ಬದುಕಿನ ಚಿತ್ರ ನೋಡುತ್ತಿದಂತೆ ಕಣ್ಣಲ್ಲಿ ನೀರು ಮೂಡಿಬಂತು ,ಆದರೆ ನಿಮ್ಮ ಬದುಕಿನ ಪ್ರೀತಿ ,ನಿಮ್ಮ ಮನೆಯವರ ಜೊತೆ ನೀವು ಬದುಕಿದ ರೀತಿ ,ಎಲ್ಲವು ನಿಜಕ್ಕೂ ನನಗೆ ಶಾಕ್ ನೀಡುತ್ತಿವೆ, ನಾನು ನಿಮ್ಮಬದುಕಿನ ಬರಹದ ಒಬ್ಬ ಮೌನ ಅಭಿಮಾನಿ .
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
  • h s v murthy

   ಆ ದಿನ ನೆನೆಯುತ್ತಾ ಇರುತ್ತೇನೆ. ಯಾಜಿ ದಂಪತಿಗಳ ಆತಿಥ್ಯ ಮರೆಯಲಿಕ್ಕುಂಟೆ?
   ಎಚ್ಚೆಸ್ವಿ

   ಪ್ರತಿಕ್ರಿಯೆ
 4. h s v murthy

  ಪ್ರಿಯ ಮಿತ್ರರೇ,
  ನಿಮ್ಮ ಪ್ರೀತಿಗೆ ತುಂಬ ಆಭಾರಿ.
  ಅನಾತ್ಮಕಥನದ ಎರಡನೇ ಭಾಗ ಅಕ್ಕಚ್ಚುವಿನ ಅರಣ್ಯಪರ್ವ ಅಂಕಿತದ ಮೂಲಕ ಪ್ರಕಟವಾಗಿದೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿ.
  ಪ್ರೀತಿಪೂರ್ವಕ
  ಎಚ್ಚೆಸ್ವಿ

  ಪ್ರತಿಕ್ರಿಯೆ
 5. Dr.N.Someswara

  ನಮ್ಮ ಮನಸ್ಸಿನಲ್ಲಿ ಮೂರು ಭಾಗಗಳಿವೆ.
  ೧. ಪ್ರಜ್ಞಾ ಮನಸ್ಸು (ಕಾನ್ಷಿಯಸ್ ಮೈಂಡ್)
  ೨. ಪ್ರಜ್ಞಾ ಪೂರ್ವ ಮನಸ್ಸು (ಪ್ರಿ-ಕಾನ್ಷಿಯಸ್ ಮೈಂಡ್)
  ೩. ಅಪ್ರಜ್ಞಾ ಮನಸ್ಸು (ಅನ್-ಕಾನ್ಷಿಯಸ್ ಮೈಂಡ್)
  • ನಮ್ಮೆಲ್ಲರ ಅನುಭವಕ್ಕೆ ಬರುವ ಮನಸ್ಸಿನ ಭಾಗ. ದೈನಂದಿನ ಬದುಕಿನಲ್ಲಿ ಪ್ರಜ್ಞಾ ಮನಸ್ಸಿನದೇ ಕಾರುಬಾರು. ಸ್ಮರಣ ಶಕ್ತಿಯೂ ಸಹ ಪ್ರಜ್ಞಾ ಮನಸ್ಸಿನ ಒಂದು ಅಂಗ.
  • ಇದು ಸ್ಮರಣ ಶಕ್ತಿಯ ಒಂದು ಭಾಗ. ಆದರೆ ಇವನ್ನು ಪ್ರಜ್ಞಾಪೂರ್ವಕವಾಗಿ ನೆನಪಿನಲ್ಲಿ ಇಟ್ಟುಕೊಂಡಿರುವುದಿಲ್ಲ. ನೆತ್ತಮನಾಡಿ ಭಾನುಮತಿ ಸೋಲ್ತಡೆ ಪದ್ಯವನ್ನು ಕುಮಾರವ್ಯಾಸ ಎಷ್ಟು ಚೆನ್ನಾಗಿ ಬರೆದಿದ್ದಾನಲ್ಲ ಎಂದಾಗ, ಅದನ್ನು ಪಂಪ ಬರೆದದ್ದು ಕುಮಾರವ್ಯಾಸನಲ್ಲ ಎಂದು ಥಟ್ ಎಂದು ಉತ್ತರವನ್ನು ನೀಡುತ್ತೇವೆ. ಹೀಗೆ ಉತ್ತರ ನೀಡಲು ನೆರವಾಗುವ ಭಾಗವೇ ಪ್ರಿ-ಕಾನ್ಷಿಯಸ್ ಭಾಗ.
  • ಅಪ್ರಜ್ಞಾ ಮನಸ್ಸು ನಮ್ಮ ಮನಸ್ಸಿನ ಗೋಡೌನ್! ನಮ್ಮ ಸಮಾಜ ಒಪ್ಪಲಾರದು ಎನ್ನುವಂತಹ ಭಾವನೆಗಳು, ವಿಚಾರಗಳು, ಒತ್ತಡಗಳು, ನೆನಪುಗಳು, ನೋವುಗಳು, ನಲಿವುಗಳು, ದ್ವಂದ್ವಗಳು, ವರ್ತನೆಗಳೆಲ್ಲ ಇಲ್ಲಿ ಸಂಗ್ರಹವಾಗಿರುತ್ತವೆ. ಆದರೂ ಇವು ವ್ಯಕ್ತಿಯ ಅರಿವಿಗೆ ಬರುವುದಿಲ್ಲ.
  • ಮರಣ ಸನ್ನಿಹಿತ ಸಮಯದಲ್ಲಿ, ಅದರಲ್ಲೂ ಕ್ಯಾನ್ಸರ್ ಪೀಡಿತರಾಗಿ, ಕ್ಯಾನ್ಸರ್ ಕಣಗಳು ಮಿದುಳಿಗೆ ಗುಳೇ ಹೊರಟು ತಮ್ಮ ವಸಾಹತನ್ನು ಸ್ಥಾಪಿಸಿಕೊಳ್ಳುವಂತಹ ಸಮಯದಲ್ಲಿ ಅಪ್ರಜ್ಞಾ ಮನಸ್ಸು ಜಾಗೃತವಾಗುತ್ತದೆ. ಯಾವುದೇ ಭಿಡೇ ಇಲ್ಲದೇ ಎಲ್ಲವನ್ನು ಹೇಳಿಕೊಳ್ಳಲಾರಂಭಿಸುತ್ತದೆ. ಅದರಲ್ಲೂ ಬಾಲ್ಯದ ನೆನಪುಗಳು ವಿಪರೀತ. ಜೀವಮಾನ ಪೂರ್ತಿ ನೆನಪುಗಳ ಭಾರದಿಂದ ಬಾಗಿದ್ದ ಮನಸ್ಸು ಈಗ ಸ್ವಲ್ಪ ಹಗುರಾಗುತ್ತದೆ.
  • ನನ್ನ ತಾಯಿ ಮರಣಿಸುವ ಸಂದರ್ಭದಲ್ಲಿ ಆಕೆಯ ಅಪ್ರಜ್ಞಾ ಮನಸ್ಸನ್ನು ಕಂಡಿದ್ದೇನೆ. ಈರುಳ್ಳಿ ಹುಳಿಯನ್ನು ಮಾಡುವ ವಿಧಾನವನ್ನು ಕಲಿಸಿದ ರಜಪೂತ ಮಹಿಳೆಯೊಬ್ಬರನ್ನು ಪದೇ ಪದೇ ಸ್ಮರಿಸುತ್ತಿದ್ದರು. ಬಯಲುನಾಟಕದಲ್ಲಿ ಸೀತೆಯ ಅಂಜಲಿಯಲ್ಲಿ ಹನುಮಂತನು ಹಾಕಿದ ಉಂಗುರವನ್ನು ನೆನೆದು, ಸೀತೆ ಹಾಡಿದ ಹಾಡನ್ನು ಹಾಡುತ್ತಿದ್ದರು. ನನಗೆ ಅರ್ಥವಾಗದ ಅನೇಕ ವಿಚಾರಗಳನ್ನು ಮಾತನಾಡುತ್ತಿದ್ದರು.
  • ಎಚ್ಚೆಸ್ವಿಯವರ ಈ ಬರಹ ಮಾನವ ಮನಸ್ಸಿನ ಅಜ್ಞಾತ ಮುಖವೊಂದನ್ನು ಅನಾವರಣ ಮಾಡುವಲ್ಲಿ ಯಶಸ್ವಿಯಾಗಿದೆ. ಎಚ್ಚೆಸ್ವಿಯವರು ಮತ್ತಷ್ಟು ಬರೆಯಿಲಿ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: