ಕಣ್ಣಲ್ಲಿ ಕುಳಿತ ಮರಣ ಊರು ಬಿಡುತ್ತಿಲ್ಲ

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು.

ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.

ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ ದೊಡ್ಡದು.

ಅಲ್ಲೆ ಕಡೆ ನೋಡಲಾ…’ ಎಂದು ನಿಮಗೆ ತೋರಿಸುತ್ತಿರುವುದು ಅವರ ಊರಿನ ಆತ್ಮವನ್ನು.

ಹಲವು ಬಿನ್ನ ಬಿನ್ನ ಮಹತ್ವಗಳಿಗೆ ಹೆಸರಾದ ನಮ್ಮ ಊರು ಅಕ್ಷರ ಪರಂಪರೆಯೇ ಗೊತ್ತಿಲ್ಲದ ಒಂದಷ್ಟು ಹಿರಿಯರಿಂದ ಬೆಳಕು ಕಂಡಿದೆ. ಇವರಿಗೆ ಅಕ್ಕರಗಳ ಪರಿಚಯವಿಲ್ಲದಿದ್ದರೂ ಪ್ರಕೃತಿ ಲೋಕದ ಒಳ ಧ್ಯಾನಗಳು ಗೊತ್ತು. ಇವರೆಲ್ಲಾ ಗಿಡ ಮರ ನೀರು ನೆರಳನ್ನು ನಂಬಿ ಬದುಕಿದವರು ಹಾಗೆಯೇ ಅನೇಕರನ್ನು ಬದುಕಿಸಿದವರು ಕೂಡ.

ಊರಿನ ನೆರೆಯಲೆಲ್ಲಾ ಸಿಗುವ ಗಿಡಮರಗಳಲ್ಲಿಯೇ ಅನೇಕ ಕಾಯಿಲೆಗಳಿಗೆ ಮದ್ದನ್ನು ಕಂಡು ಕೊಂಡ ಹಿರಿಯರು ದಿನವೂ ಅನೇಕ ಹಳ್ಳಿಗಳಿಂದ ಬರುವ ಜನರ ಬಳಿ ಕಾಯಿಲೆಯ ಸ್ವರೂಪಗಳನ್ನು ಕೇಳಿಕೊಂಡು ಅದಕ್ಕೆ ತಕ್ಕಂತೆ ಮದ್ದು ಅರೆದು ಗುಣಪಡಿಸುತ್ತಿದ್ದುದನ್ನು ಎದುರೆ ಕುಳಿತು ನೋಡಿದ್ದೇನೆ. ನಮ್ಮ ಮನೆಗೆ ಬಸ್ಮಂಗಿ ಎನ್ನುವ ಊರಿನಿಂದ ಈರಜ್ಜ ಅಂತ ಬರೋರು ದೊಡ್ಡಪ್ಪ ಮತ್ತು ಈರಜ್ಜ ದಿನವಿಡೀ ಹಜಾರದಲ್ಲಿ ಕುಳಿತು ಎಂತೆಂತದ್ದೊ ಬೇರು ಎಲೆಗಳನ್ನು ವಿಂಗಡಿಸಿ ಅರೆದು ಡಬ್ಬಗಳಿಗೆ ತುಂಬಿಸಿಟ್ಟುಕೊಳ್ಳೋರು.

ಈರಜ್ಜನೇ ಇಂತಿಂತ ಕಾಯಿಲೆಗೆ ಇಂತಿಂತದೆ ಮದ್ದು ಎಂದು ಗಿಡ ಮರಗಳ ಬಳಿಯೆಲ್ಲಾ ಕರೆದುಕೊಂಡು ಹೋಗಿ ದೊಡ್ಡಪ್ಪನಿಗೆ ಹೇಳಿ ಕೊಡೋರು. ಈರಜ್ಜನಿಂದಲೇ ನಮ್ಮ ಮನೆಗೆ ಗಿಡಮೂಲಿಕೆಯ ಜೊತೆ ಸಖ್ಯ ಬೆಳೆದದ್ದು. ಪ್ರತಿ ಭಾನುವಾರ ಬೆಳಿಗ್ಗೆ ಹೊತ್ತುಹುಟ್ಟುವ ವೇಳೆಗೆ ಮನೆಯ ಬಳಿ ಜನ ಸೇರಿರೋರು. ಕೈಮಸ್ಕಿಗೆ ಔಷಧಿ ಅರೆಯುವ ಕ್ರಿಯೆ ಆರಂಭವಾಗಿರುತ್ತಿತ್ತು. ನಾವು ಮದ್ದು ಕೊಡುವ ಕೆಲಸ ಮುಗಿಯುವವರೆಗೂ ದೊಡ್ಡಪ್ಪನ ಜೊತೆಗೇ ಇರುತ್ತಿದ್ದೆವು. ಏಳು ತರಹದ ಗಿಡಮೂಲಿಕೆಗಳಿಂದ ಇದಕ್ಕೆ ಮದ್ದು ಮಾಡ್ತಾ ಇದ್ದದ್ದು.

ಬಿಳಿ ಎಕ್ಕದ ಮೂರು ಕುಡಿ ತಂದು ಬೆಲ್ಲ ಏಲಕ್ಕಿ ಸೇರಿಸಿ ಅರೆದು ಒಂದು ಗುಳಿಗೆ ಕಟ್ಟಿ ನೀರು ಮುಟ್ಟುವ ಮೊದಲೇ ನುಂಗ್ಸೋರು ಇದು ಒಂದು ತರದ್ದು.

ಇನ್ನೊಂದು ತುಂಬೇ ಎಲೆ, ಮರಾಳೆ ಗಿಡದ ಕುಡಿ, ಬೇಟೆ ಗಿಡದ ಚಕ್ಕೆ, ಆಡುಮುಟ್ಟದ ಬಳ್ಳಿಯ ಒಂದು ಎಲೆ, ದೇವದಾರೆ ಗಿಡದ ಎಲೆ, ಬಿಳಿ ಹುಲಿಗಿಡದ ಚಿಗುರು ಇಷ್ಟನ್ನು ಸೇರಿಸಿ ಅರೆದು ಒಂದು ದಪ್ಪನೆಯ ಒಣಕಾಯಿ ಸುಲಿದು ಆ ಕಾಯಿ ನೀರಲ್ಲಿ ಅರೆದ ಮದ್ದನ್ನು ರಾತ್ರಿ ಹಾಕಿಟ್ಟು ಬೆಳಿಗ್ಗೆ ಆಳೊಟ್ಟೆಗೆ ಈ ನೀರು ಮದ್ದು ಕುಡಿಯಲು ಹೇಳುವರು. ಎಂತಾ ಕೈಮಸ್ಕೆ ಆಗಿದ್ದರೂ ಇದಕ್ಕೆ ಗುಣ ಆಗೋದು. ಮೂರು ದಿನ ರಾಗಿ ಮುದ್ದೆ ಬೇಳೆ ಸಾರು ತಿಂದ್ಕೊಂಡು ಪತ್ಯ ಇರಬೇಕಿತ್ತು.

ದಿನವಿಡೀ ಬೇರೆ ಬೇರೆ ಕಾಯಿಲೆಗಳಿಗೆ ಮದ್ದು ಹಾಕಿಸಿಕೊಳ್ಳಲು ಬರುವವರ ಸಂಖ್ಯೆಯೇನೂ ಕಡಿಮೆ ಇರಲಿಲ್ಲ. ಅರ್ಪತಿ ಆದವರು ವಿಪರೀತ ಬರೊರು. ಈ ಅರ್ಪತಿ ಎಂದರೆ ಒಂದು ಬಾಳೆಕಾಯಿ ಗಾತ್ರ ಗೆಡ್ಡೆ ಶರೀರದ ಯಾವ ಭಾಗದಲ್ಲಾದರೂ ಕಾಣಿಸಿಕೊಳ್ಳೋದು. ಕೊಂಡ ಮಾವಿನಸೊಪ್ಪನ್ನು ಕರೇಮೇಕೆ ಹಾಲಲ್ಲಿ ಅರೆದು ಒಂದು ಕೋಳಿ ಪುಕ್ಕದಲ್ಲಿ ಗೆಡ್ಡೆಯ ಮೇಲೆಲ್ಲಾ ಸವರುತ್ತಿದ್ದರು. ಮೂರು ನಾಲ್ಕು ಊಟೆ ಸವರೋ ವೇಳೆಗೆ ಅರ್ಪತಿ ಮಾಯ್ದಿರೋದು.

ಮೈಮೇಲೆ, ತಲೆಯಲ್ಲಿ, ಎಂತದ್ದೇ ಗುಳ್ಳೆಗಳು ಎದ್ದರೂ ತಬ್ಸೇ ಮರದ ಸೊಪ್ಪು ತಂದು ಏಳು ಮೆಣಸು, ಏಳು ಬೆಳ್ಳುಳ್ಳಿ ಅರೆದು ಸೇರಿಸಿ ನಿಂಬೆ ಹುಳಿ ಬೆರೆಸಿ ಗುಳ್ಳೆಗೆ ಹಚ್ಚಿ ಒಂದು ಗಂಟೆ ಬಿಟ್ಟು ಬಿಸಿ ನೀರಿನಲ್ಲಿ ತೊಳೆಯಲು ಹೇಳೋರು. ಮೂರ್ನಾಲ್ಕು ದಿನಗಳಲ್ಲಿ ಗುಳ್ಳೆಗಳು ಒಡೆದು ಅಂಗೇ ಒಣಗಿ ವಾಸಿಯಾಗ್ತಾ ಇದ್ವು.

ಎಳೆಯ ಮಕ್ಕಳಿಗೆ ಸೆಳವು ಅಂತಾ ಆಗೋದು ಅಳ್ಳೆ ಕೀಳುವ ಈ ರೋಗದಿಂದ ಬಳಲುವ ಎಳೆಯ ಮಕ್ಕಳಿಗೆ  ಯಾವ ಅಪಾಯಗಳು ಆಗದಂತೆ ಮದ್ದು ಕೊಡೋರು. ಸ್ವಲ್ಪ ಹೊತ್ತಿನಲ್ಲೇ ವಾಂತಿಯಾಗಿ ಆ ಮಕ್ಕಳು ಗುಣವಾಗುತ್ತಿದ್ದುದನ್ನು ಮುಂದೆಯೇ ಕುಳಿತು ನೋಡಿದ್ದೇನೆ. ದೊಡ್ಡವರು ಚಿಕ್ಕವರು ಎನ್ನದೆ ಎಲ್ಲರನ್ನು ಕಾಡುತ್ತಿದ್ದ ಗದ್ವಾಲಮ್ಮ ಆದ್ರೆ ತುಂಬೆಸೊಪ್ಪು ಸುಣ್ಣ ಅರೆದು ರಂಗ್ಳುಸಿ ಸವರಿದರೆ ಎರಡು ಮೂರು ದಿನದಲ್ಲಿ ವಾಸಿಯಾಗ್ತಾಯಿತ್ತು.

ಶಂಕ್ತಾಳು ಆಗಿದೆ ಅಂತ ತುಂಬಾ ಜನ ಬರೋರು ಇದಕ್ಕೆ ಹಚ್ಚುತ್ತಿದ್ದ ಮದ್ದನ್ನು ಮಾತ್ರ ನಮಗೆ ತೋರಿಸುತ್ತಿರಲಿಲ್ಲ. ಅಮಾವಾಸ್ಯೆಯಲ್ಲಿ ರಾತ್ರಿ ಹೋಗಿ ಈ ಗಿಡದ ಚೆಕ್ಕೆ ತಂದು ಮದ್ದು ಸಿದ್ದಮಾಡಿ ಕೊಡೋರು.

ಹೊಲ ಮನೆಗಳಲ್ಲಿ ಕೆಲಸ ಮಾಡುವಾಗ ಆಕಸ್ಮಿಕವಾಗಿ ಕೈಕಾಲುಗಳನ್ನು ಕಡ್ಕೊಂಡು ಗಾಯವಾದ್ರೆ ಕನ್ನೇಹಲ್ಬು ಅಡಕೆಸೊಪ್ಪಿನ ರಸ ತಂದು ಗಾಯದ ಮೇಲೆ ಹಿಂಡುತ್ತಿದ್ದರು. ಮರು ದಿವಸ ಕೂಡುಮರದ ಚಕ್ಕೆ ತಂದು ಪುಡಿ ಮಾಡಿ ವಿಳ್ಳೇದೆಲೆಯಲ್ಲಿ ಸೇರಿಸಿ ಕಟ್ಟುತ್ತಿದ್ದರು. ಎಂತದ್ದೇ ಗಾಯವಾದ್ರು ವಾರದೊಳಗೆ ಕೂಡ್ಕಂಡು ಮಾದಿರೋದು.

ಕಣ್ಹತ್ತಿರೆ ಹೆಚ್ಚು ನೀರು ನಿಲ್ಲುವ ಜಾಗದಲ್ಲಿ ಬೆಳೆದ ಹುಲಿಕಡ್ಡಿಯನ್ನು ಮುರ್ಕೊಂಡು ಬಂದು ಅಂಗ್ತಂಗ್ಳ ಮಲಗಿಸಿ ಕಣ್ಣಿಗೆ ರಸ ಊದುತ್ತಿದ್ದರು. ಈ ರಸ ಕಣ್ಣಿಗೆ ಇಳಿದರೆ ಸಾಕು ಬೆಳ್ಳಗಾಗಿ ಒಂದೇ ದಿನದಲ್ಲಿ ವಾಸಿಯಾಗ್ತಾ ಇದ್ವು. ನಾವೆಲ್ಲಾ ಈಗಲೂ ಕಣ್ಣತ್ತಿದರೆ ಹುಲಿಗಿಡದ ರಸವನ್ನೇ ಬೇನೆಗೆ ಬಳಸುತ್ತೇವೆ.

ಹೀಗೆ ಹಲವು ಕಾಯಿಲೆಗಳಿಗೆ ಮದ್ದು ಕೊಟ್ಟ ದೊಡ್ಡಪ್ಪ ಇದನ್ನೆಲ್ಲಾ ಉಚಿತವಾಗಿ ಹಗಲಿರುಳು ಎನ್ನದೆ ಮಾಡಿದವರು. ಬಂದ ಜನವೆಲ್ಲಾ ಕಷ್ಟ ಸುಖ ಅಂತ ಹೇಳ್ಕೊಂಡು ಸಂಜೆ ಮಾಡ್ಕೊಂಡೆ ತಮ್ಮೂರುಗಳಿಗೆ ಹೋಗೋರು.

ನಮ್ಮೂರಿನಲ್ಲಿ ಮತ್ತು ನೆರೆ ಊರುಗಳಲ್ಲಿ ದನ ಕರುಗಳಿಗೆ ಕುಂದು ಅಂತ ಆಗೋದು. ಈ ಕಾಯಿಲೆಯಿಂದ ಮೇವು ನೀರು ಬಿಟ್ಟು ಬಳಲುವ ದನ ಕರುಗಳಿಗೆಲ್ಲಾ ಮದ್ದು ಕೊಡುವ ಕರೇ ತಿಮ್ಮಜ್ಜ ಅಂತ ಇನ್ನೊಬ್ಬರು ಹಿರಿಯರು ಇದ್ರು. ಮೂರು ತರಹದ ಗಿಡಮೂಲಿಕೆಗಳಲ್ಲಿ ಮದ್ದು ಮಾಡಿ ಗೊಟ್ಟದಲ್ಲಿ ಕುಡಿಸಿ ಕುಂದಿನಿಂದ ಬಳಲುವ ದನಕರುಗಳನ್ನು ಉಳಿಸುತ್ತಿದ್ದರು. ಇದು ಸಾಂಕ್ರಾಮಿಕದ ಹಾಗೆ.

ಒಂದು ದನಕ್ಕೆ ಕಿವಿ ಬೆಚ್ಚಗಾಗಿ ಮುಷ್ಣಿ ಒಣಗಿದರೆ ಊರಿನಲ್ಲಿ ಎಲ್ಲಾ ದನಗಳಿಗೂ ಹಬ್ಬುತ್ತಿತ್ತು. ಆಗೆಲ್ಲಾ ಕರೇ ತಿಮ್ಮಜ್ಜನಿಗೆ ಮದ್ದು ಮಾಡುವುದೇ ಕೆಲಸ. ಮಾಮೂಲಿನಂತೆ ಜಾನುವಾರುಗಳು ಗುಣ ಕಾಣುವವರೆಗೂ ಈ ಅಜ್ಜ ನಿದ್ರಿಸುತ್ತಿರಲಿಲ್ಲ. ಇವರನ್ನೆಲ್ಲಾ ನೋಡಿ ಧನ್ಯರಾಗಿದ್ದೇವೆ ನಾವು.

ಹೊಂಗೇಎಣ್ಣೆ ತುಂಬಿಕೊಂಡ ಮಣ್ಣಿನ ದೀಪ ತನ್ನಷ್ಟಕ್ಕೆ ನಿರಾಳವಾಗಿ ಉರಿಯುತ್ತಿದೆ. ಸುಶೀಲಕ್ಕನ ರೋಧನೆ ಮಾತ್ರ ಮೌನದಿರುಳನ್ನು ಪ್ರಶ್ನಿಸುವಂತೆ ಸದ್ದಿಲ್ಲದ ಊರಿನಲ್ಲಿ ಒಂದೇ ಸಮನೆ ಅಯ್ಯೋ ಅಪ್ಪಾ ಅಮ್ಮಾ, ಪಾತಪ್ಪ ಕೈಬಿಡಬ್ಯಾಡ ನನ್ನ ಅಂತ ಕೂಗಾಡುವ ಸದ್ದಿಗೆ ಅಮ್ಮನ ಜೊತೆ ಎದ್ದು ಓಡಿದೆವು. ಓಬಳಜ್ಜಿನ ಕರೀರಿ ಅನ್ನೋ ಮಾತುಗಳು ಕೇಳಿ ಬರುತ್ತಿದ್ದವು. ಊರಿನಲ್ಲಿ ಯಾರಿಗಾದ್ರು ಹೆರಿಗೆ ನೋವು ಕಾಣಿಸಿಕೊಂಡರೆ ಓಬಳಜ್ಜಿ ತಾಯಿ ಕೂಸು ಮನೆ ಜನ ನಿಟ್ಟುಸಿರು ಬಿಟ್ಟು ಸಲೀಸಾತು ಎಲ್ಲವೂ ಎನ್ನುವವರೆಗೂ ಹೆರಿಗೆ ಮನೆಯಿಂದ ಹೋಗುತ್ತಿರಲಿಲ್ಲ.

ನಾವೆಲ್ಲಾ ಇವರನ್ನು ಓಬಳದೊಡ್ಡಮ್ಮ ಎಂದೇ ಕರೆಯುತ್ತಿದ್ದೆವು. ನಮ್ಮ ಊರಿನಲ್ಲಿ ನಾನು ಪಿಯುಸಿಗೆ ಬರುವವರೆಗೂ ನರ್ಸು ಡಾಕ್ಟರ್ ಅಂತ ಯಾರು ಬಂದದ್ದೇ ಇಲ್ಲ. ಊರಲ್ಲಿ ಯಾರೇ ಬಿಮ್ಮನ್ಸೆಯರಿದ್ದರೂ ಓಬಳ ದೊಡ್ಡಮ್ಮನೇ ಇವರಿಗೆಲ್ಲಾ ವೈದ್ಯೆ. ಅಕ್ಷರ ಒಂದು ತಿಳಿಯದ ಇವರು ಹೆರಿಗೆ ಸಲೀಸಾಗಿ ಮಾಡುತ್ತಿದ್ದರು. ನನ್ನಾದಿಯಾಗಿ ಊರಿನ ಎಷ್ಟೋ ಮಕ್ಕಳು ಇವರ ಕೈಯಲ್ಲೇ ಜನಿಸಿದ್ದು ಎಂದು ಅಮ್ಮಂದಿರು ಹೇಳುತ್ತಾರೆ.

ನನ್ನ ಮನೆಯ ಎದುರೆ ಇರುವ ಸುಶೀಲಕ್ಕನಿಗೆ ಚೊಚ್ಚಲ ಹೆರಿಗೆ ನೋವು ತಾಳಲಾರದೆ ತನ್ನ ಮನೆದೇವರು ಪಾತಪ್ಪನನ್ನು ಕೈಬಿಡಬೇಡ ಎಂದು ಒರಲುವ ಧೀನ ಸ್ಥಿತಿಯನ್ನು ನೋಡಿ ನಡುಗಿದ್ದೆ ಅವತ್ತು. ಬೆಳಗಿನ ಜಾವದ ವೇಳೆಗೆ ಊರಿನ ಯಾರು ಯಾರೋ ಬಂದರೂ ಬರುವುದರ ಜೊತೆಗೆ ಗಾಳಿ ಸೆಟ್ಕನ್ನು ಕರೆತಂದರು. ಸುಶೀಲಮ್ಮ ಏನೇನೋ ಮಾತಾಡ್ತಾ ಆವ್ಳೆ ಯಾವುದೋ ಗಾಳಿ ಸೆಟ್ಕು (ದೆವ್ವ) ಆಗೈತೆ ಸರಿಯಾಗಿ ನಾಕು ಸದ್ರೆ ಬಿಟ್ಟುಹೋಗೋದು ಅಂತಾ ಅನುಭವಸ್ಥ ಓಬಳ ದೊಡ್ಡಮ್ಮನ ಯಾವ ಮಾತನ್ನೂ ಕೇಳದೆ ಸತ್ತ ಮಗುವಿಗೆ ಜನ್ಮವಿತ್ತ ಹಸಿ ಮೈ ಬಾಣಂತಿಯನ್ನು ವಿಕಾರವಾಗಿ ಸದ್ರು.

ಹೊತ್ತುಟ್ಟುವ ವೇಳೆಗೆ ಬಾಣ್ತಿನ ಬದುಕಲು ಬಿಡದಂಗೆ ಕಳಿಸೇಬಿಟ್ಟರು. ಬಂದಿದ್ ಗಾಳಿ ಮಗ ಬಾಣ್ತಿ ಇಬ್ಬರನ್ನೂ ಬಿಡಲಿಲ್ಲ ತಗೊಂಡೇ ಹೋಯ್ತು ಇನ್ನೆಂತಾ ಅನಿಷ್ಟ ಗಾಳಿನೋ ಅಂತೆಲ್ಲಾ ಕಂದಾಚಾರಗಳನ್ನು ಪುಷ್ಠೀಕರಿಸಿ ಮಾತಾಡಿಕೊಳ್ತಾ ಜಾಗ ಖಾಲಿ ಮಾಡಿದ್ರು. ಬಂದ್ರೆ ಸೊಪ್ಪಿನ ರಸ ಸತ್ತವರ ಮೇಲೆ ಬಿಟ್ರೆ ಬದುಕ್ತರಂತೆ ಅಂತ ಊರೆಲ್ಲಾ ಯಾರೋ ಸುದ್ದಿ ಹಬ್ಬಿಸಿದ್ರು. ಏಳನೇ ತರಗತಿ ಓದುತ್ತಿದ್ದ ನಾವೆಲ್ಲಾ ರಸವೇ ಬರದ ಬಂದ್ರೇ ಕುಡಿಯನ್ನು ಕಿತ್ತು ರಸ ತರಲು ಒದ್ದಾಡಿದೆವು.

ಮೌಡ್ಯವು ಬಲಿಕೊಟ್ಟು, ಮುಗ್ದತೆಯು ಜೀವಬೇಕೆಂದು ಕಾತರಿಸಿದ ಕಾಲ ಅದು. ಓಬಳ ದೊಡ್ಡಮ್ಮನಂತವರು ಇದ್ದು ಇಂತಾ ದುರಂತ ಘಟಿಸಿಹೋಯಿತು. ನಾನು ನೋಡಿದ ಕರಾಳ ಸಾವು ಸುಶೀಲಕ್ಕನದು. ದಿನವಿಡೀ ಶಾಲೆಯ ಮಖ ನೋಡದೆ ಬಂದ ಬಂದವರ ಹಿಂದೆ ಬಿದ್ದು ಉಸಿರಿಲ್ಲದ ಸುಶೀಲಕ್ಕನನ್ನು ಕಂದನನ್ನು ನೋಡಿ ನೋಡಿ ಅಳುವವರ ಜೊತೆ ಸೇರಿ ಅತ್ತಿದ್ದೆವು.

ನಮ್ಮ ಊರಿನಲ್ಲಿ ಯಾರಿಗೆ ಜ್ವರ ಬಂದರೂ ನನಗೆ ಗೊತ್ತಿದ್ದ ಹಾಗೆ ನಾವೆಂದೂ ಆಸ್ಪತ್ರೆಯ ಬಾಗಿಲು ತುಳಿದವರಲ್ಲ. ಮನೆಯ ಯಾರಾದರೂ ಹೋಗಿ ಈ ಓಬಳ ದೊಡ್ಡಮ್ಮನನ್ನು ಕರೆತಂದು ಕರಿಯ ಬಳೆಗೋರಿಯನ್ನು ಗಣಗಣ ಕಾಯಿಸಿ ಕೆಂಡದ ಬಣ್ಣ ಹಿಡದ ಮ್ಯಾಲೆ ಸುಟ್ಟಿಗೆ ಹಾಕ್ಸೋರು ಪವಾಡವೆಂಬಂತೆ ಜ್ವರ ಬಿಟ್ಟು ಹೋಗುತ್ತಿದ್ದ ನೆನಪುಗಳು ನನಗೆ ಮಾಸಿಲ್ಲ. ಒಳ್ಳೆಯದನ್ನು ಮಾಡಲೆಂದೆ ಇದ್ದ ಇಂತ ಹಿರಿಜೀವಗಳಿದ್ದು ಸುಶೀಲಕ್ಕ ಅಕಾಲಿಕ ಮರಣ ಹೊಂದಿದ್ದು ಇನ್ನೂ ಕಣ್ಣೊಳಗೆ ಕುಳಿತಿದೆ.

ಇವತ್ತಿಗೂ ಈ ಸಾವು ಊರುಬಿಟ್ಟಿಲ್ಲ. ಅವತ್ತು ಅಟ್ಟಹಾಸದಿ ಚಂದ್ರಬಿಂಬವು ಕೆಸರು ನೀರಿನಲ್ಲೂ ಮೂಡಿತ್ತು. ಬಿಂಬದೊಳಗಣ ಬೊಂಬೆಯಂತೆ ಚಂದಿರನ ಮೊಗ ನೋಡುತ್ತಿದ್ದೆ. ಅಲ್ಲೂ ಕಪ್ಪನೆ ಚುಕ್ಕಿಯೊಂದು ಹುಟ್ಟಿ ರಪ್ಪನೇ ಬೆಳಕಾಯಿತು.

ಒಂದು ಮರವು ಇನ್ನೊಂದಕ್ಕಿಂತ ಭಿನ್ನ ಹೇಗೆ ಎಂಬುದನ್ನು ಗ್ರಹಿಸಲು ಅವೆರಡರ ಬೇರುಗಳನ್ನು ಕಿತ್ತು ಹೋಲಿಸುವ ಅಗತ್ಯವಿಲ್ಲ ಅನ್ನೋ ಮಾತನ್ನು ಎಚ್.ಎಸ್.ಆರ್. ಹೇಳ್ತಾರೆ. ಹಾಗೆ ಒಬ್ಬರಿಗಿಂತ ಒಬ್ಬರು ಭಿನ್ನವಾಗಿ ಅನೇಕ ಕಾಯಿಲೆಗಳಿಂದ ಬಳಲುವವರನ್ನು ಆರೈಕೆ ಮಾಡಿ ಊರಿಗೆ ಬೆಳಕಾದ ಹಿರಿಯ ಜೀವಗಳು ಇದ್ದರೂ ಭಾವಶೂನ್ಯತೆಗೆ ಒಳಗಾದವರು ಸೃಷ್ಟಿಸಿರುವ ಮೌಡ್ಯಗಳನ್ನು ಮಾತ್ರ ಇಲ್ಲವಾಗಿಸಲು ಆಗದಿರುವುದು ದುರಂತ.

October 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ವಿಫಲ ಪ್ರೇಮಕ್ಕೆ ಐದು ಉದಾಹರಣೆಗಳು

ವಿಫಲ ಪ್ರೇಮಕ್ಕೆ ಐದು ಉದಾಹರಣೆಗಳು

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

7 ಪ್ರತಿಕ್ರಿಯೆಗಳು

 1. Kavishree

  ಹೌದು ಆಂಟಿ ಈ ಇಂಗ್ಲಿಷ್ ಮೆಡಿಸಿನ್ಗಳ ಹಾವಳಿಯಿಂದ ಹಾಯುರ್ವೇದ ಕಣ್ಮರೆಯಾಗುತ್ತಿದೆ ಇದು ಒಂದು ರೀತಿಯ ದುರಂತ.

  ಪ್ರತಿಕ್ರಿಯೆ
 2. ಕಾವ್ಯ

  ಪಾರಂಪರಿಕವಾಗಿ ನಮ್ಮ ಹಿರಿಯರು ಬಳಸುತ್ತಿದ್ದ ಆಯುರ್ವೇದ ಗಿಡಮೂಲಿಕೆಗಳ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು. ನಮ್ಮ ಹಿರಿಯರ ಆಹಾರ ಪದ್ಧತಿ ಮತ್ತು ನಿತ್ಯ ಜೀವನದಲ್ಲಿ ಗಿಡಮೂಲಿಕೆಗಳ ಬಳಕೆಯಿಂದಲೇ ಅವರು ಅಷ್ಟು ಸದೃಢ, ಆರೋಗ್ಯವಂತರಾಗಿ ಇರಲು ಸಾಧ್ಯವಾದುದು. ಅಂತಹ ಅಮೂಲ್ಯವಾದ ಗಿಡಮೂಲಿಕೆಗಳ ಬಳಕೆ ಈಗಿನ ಅಲೋಪಥಿ ಎದುರು ನಿದಾನವಾಗಿ ಕಣ್ಮರೆಯಾಗುತ್ತಿದೆ. ಶಾಲೆ ಮೆಟ್ಟುಲು ಅತ್ತದ,ಅಕ್ಷರ ಜ್ಞಾನವೂ ಇಲ್ಲದ ನಮ್ಮ ಹಿರಿಯರು ಮಾಡುತ್ತಿದ್ದ ಮದ್ದು ಎಂತಹ ಕಾಯಿಲೆಗಳನ್ನು ವಾಸಿ ಮಾಡುತ್ತಿದ್ದವು.ಈಗಲೂ ಸಹ ನಮ್ಮ ಅಜ್ಜಿ ಕೈಮಸ್ಕಿಗೆ ಮದ್ದುನ್ನು ಕೊಡುತ್ತಾರೆ. ನಾನು ಚಿಕ್ಕವಳಿದ್ದಾಗ ನಮ್ಮ ಅಜ್ಜಿ ಯಾರಿಗೆ ಜ್ವರ ಬಂದರು ಕರಿ ಬಳೆಯನ್ನು ದೀಪದ ಬೆಂಕಿಯಲ್ಲಿ ಚನ್ನಾಗಿ ಕಾಯಿಸಿ ಸುಟುಕಿ ಹಾಕುವಾಗ ಹೆದರಿ ಮೊಲೆ ಸೇರುತ್ತಿದ್ದೆವು. ಸುಟುಕಿ ಹಾಕಿದ ನಂತರ ಅಚ್ಚರಿ ಎಂಬಂತೆ ಜ್ವರವು ಮಾಯಾವಾಗುತಿತ್ತು.ಇದೆಂತಹ ಚಿಕಿತ್ಸಾಪದ್ಧತಿ,ಅದು ಹೇಗೆ ಜ್ವರ ವಾಸಿಯಾಗುತ್ತಿತ್ತು ಈಗಲೂ ತಿಳಿಯದು. ಹೆರಿಗೆ ಸಮಯದಲ್ಲಿಸರಾಗವಾಗಿ ಹೆರಿಗೆ ಮಾಡಿಸಿ ತಾಯಿಮಗುವಿನ ಜೀವ ಉಳಿಸಿ ಅವರ ಆರೈಕೆ ಮಾಡುತ್ತಿದ್ದ ನಮ್ಮ ಅಜ್ಜಿಯಂದಿರು ಯಾವ ಡಾಕ್ಟರ್ಗಳಿಗೂ ಕಡಿಮೆ ಇನ್ನಿಲ್ಲ. ಅವರ ಬಗ್ಗೆ ತಿಳಿಸಿದಕ್ಕೆ ನಿಮಗೆ ವಂದನೆಗಳು. ನಮ್ಮ ಹಿರಿಯರ ಆಹಾರ ಪದ್ಧತಿಯ ಬಗ್ಗೆ ಇನ್ನು ಹೆಚ್ಚಿನ ಲೇಖನ ಬರೆಯಿರಿ. ಅವರ ಜೀವನ ಶೈಲಿ ಆಹಾರ ಪದ್ಧತಿ ಅಳವಡಿಸಿಕೊಂಡರೆ ಚಿಕ್ಕ ವಯಸ್ಸಿಗೆ ಕಾಯಿಲೆ ಬೀಳುವುದು ತಪ್ಪುತ್ತದೆ.

  ಪ್ರತಿಕ್ರಿಯೆ
 3. Vishwas

  ಓದುಗರಿಗೆ, ಅಕ್ಕನ ಲೇಖನದಿಂದ ಸಿಗುವ ತಾತ್ಪರ್ಯವಿದು. ನನಗೆ ಸಿಕ್ಕ ಪ್ರೇರಣೆಯಿದು.

  ಅಕ್ಕನ‌‌ ದೊಡ್ಡಪ್ಪ, ಈರಜ್ಜ, ಪ್ರಾಣಿಗಳ ಗುಣಮುಖ ಮಾಡುವ ಕರೇ ತಿಮ್ಮಜ್ಜ, ಓಬಳ ದೊಡ್ಡಮ್ಮರೆಲ್ಲರನ್ನೂ ಗಮನಿಸಿ, ಅಳವಡಸಿಕೊಳ್ಳುವ ಮುಖ್ಯ ಅಂಶ “ಜನರ/ಪ್ರಾಣಿಗಳ ಬೇನೆಗೆ, ನೋವಿಗೆ ಸ್ಪಂದಿಸೋ ಪರಿ”‌ ಮತ್ತು ಬಣ್ಣ, ಪಂಥ, ಜಾತಿ, ಲಿಂಗ, ಜನಾಂಗಳೆಂಬ ಭೇದ ಭಾವವಿಲ್ಲದೆ, ಸ್ಪಂದಿಸಿ, ರೋಗ ಬಾದಿತರನ್ನು ಗುಣಮುಖ ಪಡಿಸುವ “ಹೃದಯ ವೈಶಾಲ್ಯತೆ” . ಇದಕ್ಕೆ ಮುಖ್ಯ ಕಾರಣ, ನಿಸರ್ಗ, ಗಿಡ ಮರ ಬೇರು ತೊಗಟೆ, ಪ್ರಾಣಿ ಪಕ್ಷಿಗಳ ಸಂಕುಲಗಳೊಂದಿಗೆ ‘ಅವರಿಗಿರುವ ನಂಟು’. ಆ‌‌ ನಂಟೇ, ಅವುಗಳನ್ನು ನಮ್ಮ ನೆಂಟನಾಗಿಸುತ್ತದೆ. ಆ ನೆಂಟನು, ರೋಗ ರುಜಿನ, ಕಾಯಿಲೆ ಕಸಾಲೆಗಳ ವಾಸಿ ಮಾಡುವ **ಧನ್ವಂತರಿಯೂ**ಆಗುವುದೆನ್ನುವ ಜ್ಞಾನೋದಯ.

  #ಸ್ವಯಂ ಸಂಜೀವಿನಿ :
  ಗಾಳಿ ಸೋಕಿರೋದು ಆ ತುಂಬು ಗರ್ಭಿಣಿ ತಾಯಿಗಲ್ಲ, ಆಕೆಯನ್ನು ಬಡಿದು ದೆವ್ವ ಬಿಡಿಸಲ್ಹೇಳಿದ *ನಾಮಕಾವಸ್ಥೆಯ ಅನುಭವಸ್ಥನಿ/ರಿಗೆ*, ‘ಮನೋಮೂಢತೆ’ ಎಂಬ ಗಾಳಿ.
  ಮೂಲಿಕೆ ಮೂಲಕವೇ ಮನ:ಶುದ್ಧಿಯಾಗುವುದಾದರೆ, ಆ ಮೂಲಿಕೆಗೆಳ ಹೆಸರು ‘ವಿಶಾಲವಾದ ಚಿಂತನೆ’,
  ಹಾಗೂ ‘ಒಳ್ಳೆಯ ಮನಸ್ತತ್ವ’ ಹೊರತಾಗಿ “ಸುಶೀಲಕ್ಕನ ಸಾವಲ್ಲ”.

  ಪ್ರತಿಕ್ರಿಯೆ
 4. T S SHRAVANA KUMARI

  ಎಂದರೋ ಮಹಾನುಭಾವುಲು ವಾರಂದರಿಕೂ ವಂದನಮುಲು

  ಪ್ರತಿಕ್ರಿಯೆ
 5. ಮೇಘನಾ

  ಆಯುರ್ವೇದ ನಿಧಾನವಲ್ಲ ಜನ ಆಯುರ್ವೇದಕ್ಕೆ ಬರುವುದು ನಿಧಾನ ಆದ್ರೂ ನಮ್ ಜನಕ್ಕೆ ಹಿತ್ಲು ಗಿಡ ಮದ್ದಲ್ಲ , ಈ corona ಕಾಲದಲ್ಲಾದ್ರು ಆಯುವ್ರ್ವೇದಕ್ಕೆ ವಿಶ್ವಮನ್ನಣೆ ಸಿಗುತ್ತೇನೋ ಎಂಬ ನಂಬಿಕೆ ಮೂಡಿತ್ತು ಆದ್ರೆ ಅದು ಕೇವಲ ಮರೀಚಿಕೆ ಆಗಿದೆ ಹೀಗಿರೋವಾಗ ಆಯುವೇದ ಹಾಗೂ ನಾಟಿ ಔಷದಿ ಆಲ್ಟರ್ನೇಟಿವ್ ಔಷದಿ ಅಲ್ಲ ಇದು ನೇಟಿವ್ ಮತ್ತು 100% ಪ್ರಿವೆಂಟಿವ್ ಎಂದು ಅರಿವು ಮೂಡಿಸುತ್ತದೆ ನಿಮ್ಮ ಈ ಬರಹ

  ಪ್ರತಿಕ್ರಿಯೆ
 6. ಗೀತಾ ಎನ್ ಸ್ವಾಮಿ

  ಮೀ ಪ್ರೇಮಕು ಧನ್ಯವಾದಮುಲು ಶ್ರವಣ ಮೇಡಂ.

  ಪ್ರತಿಕ್ರಿಯೆ
 7. Chaitrashree R Nayak

  ಅಲ್ಲೆ ಆ ಕಡೆ ನೋಡಲಾ ಎಂಬ ನಿಮ್ಮ ಅಂಕಣದಿಂದ ನನ್ನ ಮನಸ್ಸಿನ ಮೂಲೆಯಲ್ಲಿದ್ದ ನಮ್ಮ ಹಿಂದಿನ ಮನೆತನದ ಪರಂಪರೆಯನ್ನು ನೆನೆಯಲು ಸಹಾಯವಾಯಿತು. ಯಾವುದೇ ಧರ್ಮ ಜನಾಂಗಗಳ ಭೇದಭಾವವಿಲ್ಲದೆ ಸುತ್ತೇಳು ರಿಗೂ ಹಿತ್ತಲ ಗಿಡ ಮೂಲಿಕೆಗಳಿಂದ ಕಾಯಿಲೆಗಳ ವಾಸಿ ಮಾಡುತ್ತಿದ್ದ ತಾತ ನೆನಪಾಯಿತು. ತಾತನಿಗೆ ಗಿಡಮೂಲಿಕೆಗಳ ಹೇಳಿಕೊಟ್ಟ ಬಸ್ಮಂಗಿ ಈರಜ್ಜನಿಗೆ ನನ್ನದೊಂದು ನಮಸ್ಕಾರ. ಕರೆ ನಿಮ್ಮಜ್ಜನ ಮದ್ದಿನಿಂದ ಜಾನುವಾರುಗಳು ಗುಣಮುಖವಾಗುತ್ತದೆ. ನಿಮ್ಮ ಎಲ್ಲಾ ಅಂಕಣಗಳನ್ನು ಓದುತ್ತಿದ್ದರೆ ನನಗನ್ನಿಸುತ್ತದೆ, ನಾನು ಒಂದು ತಲೆಮಾರು ಹಿಂದಿನ ಅವಳ ಆಗಬೇಕಿತ್ತು ಎಂದು. ಏಕೆಂದರೆ ಇವೆಲ್ಲವನ್ನು ಕಣ್ಣಿನಿಂದ ನೋಡಿ ಮುಕ್ತವಾಗಿ ಅನುಭವಿಸುತ್ತಿದ್ದೆ ಧನ್ಯವಾದಗಳು

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: