ಕಣ್ಣ ರೆಪ್ಪೆಯ ಮೂಲಕ ಪಾರ್ಶ್ವವಾಯು ಎದುರಿಸಿದ ಜಾನ್ ಬಾಬಿ

gali2.gif

 

 

ಗಾಳಿ ಬೆಳಕು

ನಟರಾಜ್ ಹುಳಿಯಾರ್

ದಾ ಏನಾದರೂ ಮಾತಾಡಿ ನಗುತ್ತಿದ್ದ, ನಗಿಸುತ್ತಿದ್ದ ಕವಿ ಕೆ.ಎನ್.ಶಿವತೀರ್ಥನ್ ಹಾಸಿಗೆಯ ಮೇಲೆ ಕರುಣಾಜನಕವಾಗಿ ಮಲಗಿದ್ದರು. ಅವರು ಕಷ್ಟಪಟ್ಟು ಹೊರಳುತ್ತಿದ್ದಂತೆ, ಬಲಭಾಗಕ್ಕೆ ಪಾರ್ಶ್ವವಾಯು ಬಡಿದ ದೇಹದ ಸ್ಥಿತಿ ನಮ್ಮಿಬ್ಬರನ್ನು ಘಾಸಿಗೀಡು ಮಾಡತೊಡಗಿತು. ಮಾತು ಕಳೆದುಕೊಂಡಿದ್ದ ಕವಿ, ಆ..ಆ… ಎನ್ನುತ್ತಾ ತಮ್ಮ ದೇಹದ ಸ್ಥಿತಿಯನ್ನು ಎಡಗೈಯಿಂದ ತೋರಿಸಲೆತ್ನಿಸಿದರು. ಅಲ್ಲಿ ಒಣ ಸಮಾಧಾನದ ಮಾತುಗಳು ಅರ್ಥಹೀನವಾಗಿದ್ದವು.

ಕವಿ ಶಿವತೀರ್ಥನ್ ಅವರನ್ನು ಬಲ್ಲವರಿಗೆ ಅವರನ್ನು ಈ ಸ್ಥಿತಿಯಲ್ಲಿ ನೋಡುವುದು ಕಷ್ಟವಿರಬಹುದು. ಅವರನ್ನು ಕಂಡ ತಕ್ಷಣ ಮೈಸೂರಿನ ಗೋವಿಂದರಾಜ್ ಹಾಗೂ ನನಗೆ ಈ ದೃಶ್ಯವನ್ನು ನೋಡಲೇಬಾರದಿತ್ತೇನೋ ಅನ್ನಿಸಿತು. ಆದರೆ ಯಾವುದೇ ಮನುಷ್ಯನಲ್ಲಿ ಜಡಗೊಂಡ ಚೈತನ್ಯ ತನಗೆ ಪ್ರಿಯರಾದ ವ್ಯಕ್ತಿಗಳನ್ನು ಕಂಡಾಗ ಸ್ವಲ್ಪವಾದರೂ ಗರಿಗೆದರುವ ಹಾಗೆ, ಶಿವತೀರ್ಥನ್ ಅವರ ದೇಹದಲ್ಲೂ ಆಗತೊಡಗಿತು. ಶಿವತೀರ್ಥನ್ ಬೆಂಗಳೂರಿಗೆ ಬಂದಾಗ ಹೋಟೆಲಿನ ರೂಮೊಂದರಲ್ಲಿ ಫ್ಯಾಶನ್ ಟೀವಿ ಚಾನಲ್ ನೋಡುತ್ತಿದ್ದುದನ್ನು ನೆನಪಿಸಿ ರೇಗಿಸಿದೆ. ತಕ್ಷಣ ಅವರು ನಗಲಾರಂಭಿಸಿದರು. ನಗು ಗಂಟಲಲ್ಲಿ ಹೂತು ಹೋದಂತಿದ್ದರೂ, ಮೈ ಒಂಚೂರು ತ್ರಾಣ ಪಡೆಯಲಾರಂಭಿಸಿತ್ತು. ಕೈ ಸನ್ನೆಯಲ್ಲಿ, ಬಾಯಿಂದ ಹೊರಡುವ ಆ ಆ ಎಂಬ ದನಿಯಲ್ಲಿ ಏನೇನನ್ನೋ ಸೂಚಿಸಲೆತ್ನಿಸಿದ ಶಿವತೀರ್ಥನ್ ಸ್ಲೇಟು, ಚಾಕ್ ಪೀಸ್ ತರಿಸಿ ಎಡಗೈಯಲ್ಲಿ “ಕೀರಂ ಹೇಗಿದ್ದಾರೆ?” ಎಂದು ಬರೆದರು.

ನಾನು ಮೇಲೆದ್ದು, “ಅವರು ಗುಂಡು ಹಕ್ಕೊಂಡು ಖುಷಿಯಾಗಿದ್ದಾರೆ” ಎಂದು ಅಭಿನಯಿಸಿ ತೋರಿಸಿದ ತಕ್ಷಣ ಶಿವತೀರ್ಥನ್ ನಗು ನಿಲ್ಲಿಸಲೇ ಇಲ್ಲ. ಅವರ ಮೈಯಲ್ಲಿ ಚೈತನ್ಯವಿರುವ ಭಾಗವೆಲ್ಲ ನಗತೊಡಗಿತು. ನಾವು ಯಾರನ್ನಾದರೂ ನೆನೆಸಿಕೊಂಡಾಗ ಆ ವ್ಯಕ್ತಿಯ ಬಗ್ಗೆ ನಮ್ಮೊಳಗೆ ಹೆಚ್ಚು ಉಳಿದಿರುವ ಯಾವುದೋ ಒಂದು ಮುಖ ಥಟ್ಟನೆ ಕಾಣಿಸಿಕೊಳ್ಳುತ್ತದಲ್ಲವೆ? ಪ್ರಾಯಶಃ ಶಿವತೀರ್ಥನ್ ಅವರನ್ನು ಬಲ್ಲ ಮಿತ್ರರಿಗೆಲ್ಲ ತಕ್ಷಣ ನೆನಪಿಗೆ ಬರುವುದು ಅವರ ಸಹಜ ಗಹಗಹ ನಗೆ. ಇಂಥ ಶಿವತೀರ್ಥನ್ ಅವರನ್ನು ನಾವು ನಗಿಸಲೆತ್ನಿಸುತ್ತಿದ್ದೆವು. ಶಿವತೀರ್ಥನ್ ಹಾಗೂ ಆಲನಹಳ್ಳಿ ಕೃಷ್ಣ ಮೈಸೂರಿನ ಯಾವುದೋ ಬೀದಿಯ ಮೂಲೆಯಲ್ಲಿ ರಾತ್ರಿ ಹರಟೆ ಹೊಡೆಯುತ್ತಾ ನಗತೊಡಗಿದರೆಂದರೆ ಇಡೀ ಮೈಸೂರಿಗೇ ಕೇಳಿಸುತ್ತಿತ್ತಂತೆ! ಇವತ್ತು ಶಿವತೀರ್ಥನ್ ನಮ್ಮ ಸಾಧಾರಣ ತಮಾಷೆಗೆ ನಕ್ಕು ಜೀವ ತುಂಬಿಕೊಳ್ಳಲೆತ್ನಿಸುತ್ತಿದ್ದರು.

“ಆತ್ಮ ಚರಿತ್ರೆ ಬರೀರಿ ಎಂದು ಎರಡು ವರ್ಷದಿಂದ ಹೇಳುತ್ತಿದ್ದೆ. ನೀವು ಬರೆಯಲೇ ಇಲ್ಲ” ಎಂದರೆ, ಎಡಗೈಯನ್ನು ತಮ್ಮ ಎದೆಯ ಹತ್ತಿರ ಇಟ್ಟು, “ಇಲ್ಲಿ ಆತ್ಮವೇ ಇಲ್ಲ” ಎಂದು ನಕ್ಕರು.

“ನೀವು ಹಾಸಿಗೆಯಲ್ಲಿ ಮಲಗಿ ಹಿಂದಿನ ಹಾಗೆ ತಮಾಷೆ ಮಾಡಿ ನಗಲೆತ್ನಿಸುತ್ತಾ ಇರುವುದನ್ನು ನೋಡಿದರೆ ನಿಮ್ಮ ಬಲವೆಲ್ಲ ಮತ್ತೆ ಒಗ್ಗೂಡುವುದರ ಬಗ್ಗೆ ನಂಬಿಕೆ ಬರುತ್ತಿದೆ” ಎಂದು ಬರೆದುಕೊಟ್ಟೆ. ಹಾಗೆ ನಂಬಿಕೊಳ್ಳಲು ನಾನೂ ಗೋವಿಂದರಾಜ್ ಪ್ರಯತ್ನಿಸಿದೆವು. ನಾನು ಬರೆದ ಮಾತನ್ನ ಕೇಳಿಸಿಕೊಂಡ ಶಿವತೀರ್ಥನ್ “ಹೇಗೋ ಏನೋ” ಎಂಬಂತೆ ಕೈಯಾಡಿಸಿದರು. ನನಗೆ “ಏನೂ ಆಗಿಲ್ಲ ನಾನು ಹಾಗೇ ಇದ್ದೇನೆ ಎಂದು ನಂಬಿಕೊಳ್ಳುವ ರೀತಿ ಇರುವುದೇ ಈಗ ಅವರ ದೊಡ್ಡ ಶಕ್ತಿ” ಎಂದರು ಗೋವಿಂದರಾಜ್.

ನನ್ನಂಥ ಹತ್ತಾರು ಜನರಿಗೆ ಅಪಾರ ಸಂತೋಷದ ಗಳಿಗೆಗಳನ್ನು ಕೊಟ್ಟ ಶಿವತೀರ್ಥನ್ ಅವರ ಸ್ಥಿತಿಯ ಬಗ್ಗೆ ಪ್ರೊಫೆಸರ್ ರಾಜಾರಾಂ ಅವರಲ್ಲಿ ತೋಡಿಕೊಂಡ ತಕ್ಷಣ “ಡೈವಿಂಗ್ ಬೆಲ್ ಅಂಡ್ ದಿ ಬಟರ್ ಫ್ಲೈ” ಪುಸ್ತಕ ಹಾಗೂ ಸಿನಿಮಾದ ಬಗ್ಗೆ ಹೇಳತೊಡಗಿದರು. ಕವಿ ಲಿಂಗದಹಳ್ಳಿ ಚೇತನ್ ಕುಮಾರ್ ಪತ್ತೆ ಮಾಡಿಕೊಟ್ಟ ಈ ಸಿನಿಮಾವನ್ನು ಶಿವತೀರ್ಥನ್ ಮತ್ತು ಮನೆಯವರಿಗೆ ಕಳಿಸಬೇಕೆಂದುಕೊಳ್ಳುತ್ತಾ ಸಿನಿಮಾ ನೋಡಿದರೆ, ಮಾನವ ದೇಹ ಹಾಗೂ ಬುದ್ಧಿಯ ಹೋರಾಟದ ಹೊಸ ಮುಖವೇ ಕಾಣತೊಡಗಿತು.

ಜಾನ್ ಡೊಮಿನಿಕ್ ಬಾಬಿ ಮೂರು ವಾರಗಳಿಂದ ಕೋಮಾದಲ್ಲಿದ್ದಾನೆ. ಫ್ರೆಂಚ್ ಪತ್ರಿಕೆಯೊಂದರ ಸಂಪಾದಕನಾಗಿದ್ದ ಬಾಬಿಗೆ ಇದ್ದಕ್ಕಿದ್ದಂತೆ ಸ್ಟ್ರೋಕ್ ಆಗಿದೆ. ಇದೀಗ ಪ್ರಜ್ಞೆ ಬಂದಿರುವ ಬಾಬಿಯ ಹತ್ತಿರ ಡಾಕ್ಟರು ಮಾತಾಡುತ್ತಿದ್ದಾರೆ. ಅದು ಬಾಬಿಗೆ ಅರ್ಥವಾಗುತ್ತಿದೆ. “ಆದರೆ, ಡಾಕ್ಟರೇ ನನ್ನ ಮಾತೇಕೆ ನಿಮಗೆ ಕೇಳಿಸುತ್ತಿಲ್ಲ” ಎಂದು ಬಾಬಿಯ ಮನಸ್ಸು ಚೀರುತ್ತಿದೆ…

ಮಾರನೆಯ ದಿನ ನರಶಾಸ್ತ್ರಜ್ಞ ಡಾ. ಅಲನ್ ಲೆಪಾಗ್ ಬಂದಿದ್ದಾರೆ. “ನಿನಗೆ ಸೆರೆಬ್ರೋವಾಸ್ಕುಲಾರ್ ಅಪಘಾತ ಆಗಿದೆ. ಇದರಿಂದಾಗಿ ನಿನ್ನ ಮಿದುಳು ಮತ್ತು ಸ್ಪೈನರ್ ಕಾರ್ಡಿನ ನಡುವಣ ಕೊಂಡಿ ಕಳಚಿಹೋಗಿದೆ. ಮೊದಲಾಗಿದ್ದರೆ ಇಷ್ಟಕ್ಕೇ ನೀನು ಸತ್ತೆ ಅಂತ ತೀರ್ಮಾನಿಸುತ್ತಿದ್ದರು. ಈಗ ಹಾಗಲ್ಲ ನಾವು ನಿನ್ನನ್ನು ಇನ್ನಷ್ಟು ಕಾಲ ಜೀವಿಸೋ ಥರ ಮಾಡಬಲ್ಲೆವು” ಎನ್ನುತ್ತಾರೆ ಲೆಪಾಗ್.

“ಇದು ಜೀವನಾನಾ?” ಎಂದುಕೊಳ್ಳುತ್ತಾನೆ ಬಾಬಿ.

“ಈಗ ನೇರವಾಗಿ ವಿಷಯಕ್ಕೆ ಬರೋಣ. ನಿನಗೆ ಸಂಪೂರ್ಣ ಪಾರ್ಶ್ವವಾಯು ಬಡಿದಿದೆ. ಇದಕ್ಕೆ “ಲಾಕ್ಡ್ ಇನ್ ಸಿಂಡ್ರೋಮ್” ಅಂತಾರೆ. ಹಾಗೆ ನೋಡಿದರೆ ನೀನು ಸಿಗರೇಟು ಸೇದ್ತಾ ಇರಲಿಲ್ಲ, ಈ ಸ್ಟ್ರೋಕ್ ಗೆ ಕಾರಣಾನೇ ಗೊತ್ತಾಗ್ತಾ ಇಲ್ಲ, ಆದರೆ ಒಂದು ಭರವಸೆ ಇದೆ. ಅದೇನೂ ಅಂದ್ರೆ ನಿನ್ನ ಮಿದುಳು ಚೆನ್ನಾಗಿ ಕೆಲಸ ಮಾಡ್ತಾ ಇದೆ. ನಿನ್ನ ಒಂದು ಕಣ್ಣು ಕೆಲಸ ಮಾಡ್ತಾ ಇದೆ. ಹಾಂ, ನಿನ್ನ ನೋಡಿಕೊಳ್ಳೋಕೆ ಇಬ್ಬರು ಸುಂದರಿಯರು ಇರ್ತಾರೆ. ಟ್ರೈ ಮಾಡೋಣ” ಎನ್ನುತ್ತಾರೆ ಡಾ.ಲೆಪಾಗ್.

ಮಾರನೆಯ ದಿನ ಹೆನ್ರಿಟ್ ಮತ್ತು ಮಾರೀ ಎಂಬ ಇಬ್ಬರು ಸುಂದರಿಯರು ಥೆರಪಿ ಮಾಡಲು ಒಳಬಂದರೆ “ನಾನೇನು ಸ್ವರ್ಗದಲ್ಲಿದ್ದೀನಾ!” ಎನಿಸುತ್ತದೆ ಬಾಬಿಗೆ.

“ನಾನು ಸ್ಪೀಚ್ ಥೆರಪಿಸ್ಟ್. ನಿನ್ನ ನಾಲಿಗೆ ಮತ್ತು ತುಟಿಗಳ ಮೇಲೆ ವರ್ಕ್ ಮಾಡೋಳು” ಎನ್ನುತ್ತಾಳೆ ಹೆನ್ರಿಟ್. “ಇದೊಳ್ಳೆ ತಮಾಷೆಯಾಗಿದೆಯಲ್ಲ!” ಎನಿಸುತ್ತದೆ ಬಾಬಿಗೆ.

“ಈಗ ಒಂದು ಕೆಲಸ ಮಾಡೋಣ. ನಾನೀಗ ಕೆಲವು ಪ್ರಶ್ನೆ ಕೇಳ್ತೀನಿ. ನೀನು ಒಂದು ಸಲ ರೆಪ್ಪೆ ಬಡಿದರೆ “ಹೌದು” ಅಂತ. ಎರಡು ಸಲ ರೆಪ್ಪೆ ಬಡಿದರೆ “ಇಲ್ಲ” ಅಂತ. ಈಗ ಹೇಳು. “ನಾನು, ಅಂದರೆ ಹೆನ್ರಿಟ್, ಗಂಡಸಾ?” ಬಾಬಿಯ ರೆಪ್ಪೆ ಎರಡು ಸಲ ಬಡಿಯುತ್ತದೆ. “ನಾನು ಹೆಂಗಸಾ” ಎಂದಾಗ ಬಾಬಿಯ ರೆಪ್ಪೆ ಒಂದು ಸಲ ಬಡಿಯುತ್ತದೆ. ಅಂದರೆ, ಬಾಬಿಯ ಈ ಹೊಸ ಭಾಷೆಯ ಕಲಿಕೆ ಶುರುವಾಗಿದೆ.

ಬಾಬಿಯ ಹೆಂಡತಿ ಬರುತ್ತಾಳೆ. ಅವನ ರೆಪ್ಪೆ ಭಾಷೆಯ ಮೂಲಕ ಅವನ ಜೊತೆ ಮಾತಾಡುತ್ತಾಳೆ. ಹಾಸಿಗೆಯ ಮೇಲೆ ಮಲಗಿ, ಹೆಂಡತಿಯ ದುಃಖ ನೋಡುತ್ತಿರುವ ಬಾಬಿಗೆ ಇವಳನ್ನ, ಮಕ್ಕಳನ್ನ ಸರಿಯಾಗಿ ನೋಡಿಕೊಳ್ಳಲಿಲ್ಲವಲ್ಲಾ, ಇನ್ನು ಮುಂದೂ ನೋಡಿಕೊಳ್ಳೋಕಾಗಲ್ಲವಲ್ಲಾ ಎಂದು ದುಃಖವಾಗುತ್ತದೆ.

ಮತ್ತೆ ಮರುದಿನ ಥೆರಪಿಸ್ಟ್ ಹೆನ್ರಿಟ್ ಬರುತ್ತಾಳೆ. ಹಾಂ, ನಾವೆಲ್ಲ ಸೇರಿ ಒಂದು ಮೆಥೆಡ್ ಹುಡುಕಿದೀವಿ. ನಾನೀಗ ಆರ್,ಇ,ಎ,ಆರ್,ಐ,ಎನ್- ಹೀಗೆ ಅಕ್ಷರ ತೋರಿಸ್ತೀನಿ. ನೀನು ಏನಾದರೂ ಹೇಳಬೇಕೂಂತ ಅನ್ನಿಸಿದಾಗ ರೆಪ್ಪೆ ಮಿಟುಕಿಸು. ನಾನು ಒಂದೊಂದೇ ಅಕ್ಷರ ಓದ್ತೀನಿ. ನಿನಗೆ ಬೇಕಾದ ಮೊದಲನೇ ಅಕ್ಷರ ಬಂದಾಗ ಒಂದ್ಸಲ ರೆಪ್ಪೆ ಬಡಿ. ನಾನು ಬರ್ಕೋತೀನಿ. ಇದೇ ಥರ ಶಬ್ದ, ವಾಕ್ಯ ಮಾಡೋಣ. ಒಂದು ಪದ ಮುಗಿದ ಮೇಲೆ ಎರಡು ಸಲ ರೆಪ್ಪೆ ಬಡಿ. ಓಕೆ!”

ಈ ರೆಪ್ಪೆ ಬಡಿತದ ಮೂಲಕ ಶಬ್ದ ರಚನೆ ಬಾಬಿಗೆ ತ್ರಾಸವೆನ್ನಿಸತೊಡಗುತ್ತದೆ. ಆಮೇಲೆ ನೀರಿನಲ್ಲಿ ಥೆರಪಿ ಮಾಡುತ್ತಿದ್ದರೆ “ದೊಡ್ಡ ಮಗೂ ಥರ ಆಡಿಸ್ತಿದಾರಲ್ಲ” ಎನಿಸಿ ನಗೆಪಾಟಲು ಎನಿಸುತ್ತದೆ. “ಒಬ್ಬ ಹುಚ್ಚ ಮಾತ್ರ ನಗೋದಿಕ್ಕೆ ಏನೂ ಇರದಿದ್ದರೂ ನಗ್ತಾ ಇರ್ತಾನೆ” ಅಂದ ಕವಿಯೊಬ್ಬನ ಮಾತು ನೆನಪಿಗೆ ಬರುತ್ತದೆ.

ಹೆಂಡತಿ ಬಾಬಿಗೆ ಕನ್ನಡಿ ತೋರಿಸಿ ಮುತ್ತು ಕೊಡುವುದನ್ನು ಕಲಿಸಲೆತ್ನಿಸುತ್ತಾಳೆ. ಕನ್ನಡಿ ಕಿತ್ತೆಸೆಯಬೇಕೆನಿಸುತ್ತದೆ ಬಾಬಿಗೆ. ಹೆಂಡತಿ ಅವನ ಪತ್ರಿಕೆಯ ಬಗ್ಗೆ ಮಾತಾಡುತ್ತಾಳೆ. ಪತ್ರಿಕೆಯ ಗಂಡು ಮಾಡೆಲ್ ಗಳ ಬಗ್ಗೆ ಅವಳ ಚಿಂತೆ! ಹೆಂಡತಿ ಎಷ್ಟು ಸುಂದರವಾಗಿದ್ದಾಳೆ ಎನಿಸುತ್ತದೆ ಬಾಬಿಗೆ. ಬಾಬಿಯನ್ನು ನೋಡಲು ಪಿಯರ್ ರೋಸನ್ ಬರುತ್ತಾನೆ. ಅವನದೊಂದು ವಿಚಿತ್ರ ಕತೆ. ಬಾಬಿ ಒಂದು ಸಲ ವಿಮಾನದಲ್ಲಿ ತನಗೆ ಬುಕ್ ಆಗಿದ್ದ ಸೀಟನ್ನು ಪಿಯರ್ ರೋಸನ್ ಅರ್ಜೆಂಟಾಗಿ ಹಾಂಕ್ ಕಾಂಗ್ ಗೆ ಹೋಗಬೇಕಾದ್ದರಿಂದ ಅವನ ಮೇಲೆ ದಯೆ ತೋರಿಬಿಟ್ಟುಕೊಡುತ್ತಾನೆ. ಆದರೆ ವಿಮಾನ ಅಪಹರಣಕ್ಕೊಳಗಾಗಿ ಪಿಯರ್ ರೋಸನ್ ಬೈರೂತ್ ನಲ್ಲಿ ನಾಲ್ಕು ವರ್ಷ ಒತ್ತೆಯಾಳಾಗಿರುತ್ತಾನೆ. ಅದನ್ನು ಹೇಳುತ್ತಾ ಕಣ್ಣೀರೊರೆಸಿಕೊಳ್ಳುತ್ತಾನೆ, ಪಿಯರ್.

ಬಾಬಿಗೆ ಪಾಪಪ್ರಜ್ಞೆ ಆವರಿಸತೊಡಗುತ್ತದೆ. ಮತ್ತೆ ಹೆನ್ರಿಟ್ ಪಾಠ ಶುರುವಾಗುತ್ತದೆ. ಒಂದೊಂದೇ ಅಕ್ಷರಕ್ಕೆ ಬಾಬಿ ರೆಪ್ಪೆ ಬಡಿದಂತೆ, ಕೊನೆಗೆ “ಐ ವಾಂಟ್ ಟು ಡೈ” ಎಂಬ ವಾಕ್ಯ ಮೂಡುತ್ತದೆ. “ಹಾಂ! ಎಷ್ಟು ಧೈರ್ಯ ನಿನಗೆ! ನಿನಗಾಗಿ ಕಾಳಜಿ ತೋರಿಸೋರು, ಇಷ್ಟೊಂದು ಪ್ರೀತಿಸೋರು ಇದಾರೆ. ಹೀಗಿದ್ದೂ ನಾನು ಸಾಯಬೇಕು ಅಂತೀಯಲ್ಲ?” ಎನ್ನುತ್ತಾಳೆ ಹೆನ್ರಿಟ್.

ಮಾರನೆಯ ದಿನ ಲಾರೆಟ್ ಎಂಬ ಗೆಳೆಯ ಬರುತ್ತಾನೆ. ಅವನಿಗೆ ಬಾಬಿಯ ರೆಪ್ಪೆಯ ಭಾಷೆ ಅನುಸರಿಸುವುದು ಕಷ್ಟವಾಗಿ ಅಲ್ಲಿಂದ ಹೊರಡುತ್ತಾನೆ. ರಾತ್ರಿಯಿಡೀ ಬಾಬಿಯ ಕಣ್ಣು ನೋಡುತ್ತಲೇ ಇದೆ. ಗಡಿಯಾರದ ಮುಳ್ಳು ೨-೩೦ ತೋರಿಸುತ್ತಿದೆ. ಕಣ್ಣ ಮುಂದೆ ಕಳೆದ ಕಾಲದ ಚಿತ್ರಗಳು ಹಾದುಹೋಗುತ್ತವೆ. “ನನ್ನಿಡೀ ಜೀವನ ವೈಫಲ್ಯಗಳ ಸರಣಿಯಂತೆ ಕಾಣುತ್ತಿದೆ” ಎನಿಸುತ್ತದೆ ಬಾಬಿಗೆ. “ನಾನು ಪ್ರೀತಿಸಲಾಗದ ಹೆಂಗಸರು, ಕೈ ತಪ್ಪಿದ ಅವಕಾಶಗಳು, ನಾನೇ ಜಾರಿಹೋಗಲು ಬಿಟ್ಟ ಸಂತೋಷದ ಗಳಿಗೆಗಳು… ಯಾರು ಗೆಲ್ಲುತ್ತಾರೆ ಎಂಬುದು ಗೊತ್ತಿದ್ದರೂ ಗೆಲ್ಲುವವನ ಮೇಲೆ ಬೆಟ್ಸ್ ಕಟ್ಟದ ರೇಸುಗಳು… ನಾನೇನು ಕುರುಡಾಗಿದ್ದೆನೆ? ಮೂರ್ಖನಾಗಿದ್ದೆನೆ?” ಎನಿಸತೊಡಗುತ್ತದೆ.

ಇಲ್ಲಿಂದಾಚೆಗೆ ಇನ್ನೊಂದು ಘಟ್ಟ. ಹಿಂದೊಮ್ಮೆ ಬಾಬಿ ಪ್ರಕಾಶಕಿಯೊಬ್ಬಳಿಗೆ ಪುಸ್ತಕ ಬರೆದು ಕೊಡಲು ಒಪ್ಪಿದ್ದ. “ಈಗಲೂ ಬಾಬಿ ಪುಸ್ತಕ ಬರೆಯಬಲ್ಲ” ಎಂದು ಹೆನ್ರಿಟ್ ಆ ಪ್ರಕಾಶಕಿಗೆ ಫೋನ್ ಮಾಡುತ್ತಾಳೆ. ಬಾಬಿಯ ರೆಪ್ಪೆ ಭಾಷೆಯ ಮೂಲಕ ಕ್ಲಾಡಾ ಎಂಬ ಹುಡುಗಿ ಅಪಾರ ಸಹನೆಯಿಂದ ಬರೆದುಕೊಳ್ಳಲಾರಂಭಿಸುತ್ತಾಳೆ. ಲ್ಯಾಟಿನ್ ಭಾಷೆಯಲ್ಲಿ ಈ ಥರದ ಬರವಣಿಗೆಯನ್ನು ಅಮೆನ್ಯುಸಿಸ್ ಎನ್ನುತ್ತಾರೆ. “ಕಿಟಕಿಯ ಸವೆದ ಪರದೆಯ ಮೂಲಕ ಬೆಳಗಾಗಿದೆ ಎಂದು ವಾಂಗ್ಲೋ ಘೋಷಿಸುತ್ತದೆ. ನನ್ನ ಹಿಮ್ಮಡಿ ನೋಯುತ್ತದೆ. ನನ್ನ ತಲೆಯ ಮೇಲೆ ಹೆಣ ಭಾರವಿದೆ. ನನ್ನಿಡೀ ಮೈ ಒಂದು ಬಗೆಯ ಡೈವಿಂಗ್ ಉಡುಪಿನಲ್ಲಿ ಹುದುಗಿಬಿಟ್ಟಿದೆ. ಈಗ ಒಂಟಿ ದಡದಲ್ಲಿ ತಬ್ಬಲಿಯಂತೆ ನಿಂತು ಚಲನೆಯಿಲ್ಲದ ಪಯಣದ ಟಿಪ್ಪಣಿ ಬರೆವ ಕೆಲಸ ನನ್ನದು” -ಹೀಗೆ ಬಾಬಿಯ ಬರಹ ಶುರುವಾಗುತ್ತದೆ. ನೆನಪು, ಫ್ಯಾಂಟಸಿ, ವಾಸ್ತವ ಮುಂತಾಗಿ ಎಲ್ಲ ಬಗೆಯ ಚಿತ್ರಗಳೂ ಅಲ್ಲಿ ಮೂಡುತ್ತವೆ.

ಒಂದು ವಾರದ ಕೊನೆಗೆ ಸಮುದ್ರದ ದಡದಲ್ಲಿ ಫಾದರ್ಸ್ ಡೇ ಆಚರಿಸಲು ಬಾಬಿಯ ಮಕ್ಕಳು ಮತ್ತು ಹೆಂಡತಿ ಇದ್ದಾರೆ. ಹೆಂಡತಿಯ ಹಾರುತ್ತಿರುವ ಸ್ಕರ್ಟ್ ನಿಂದ ಇಣುಕುತ್ತಿರುವ ಬಾಬಿಯ ಕಣ್ ಸೆಳೆಯುತ್ತದೆ.

ಬಾಬಿ ಹೇಳಿದ್ದನ್ನ ಕ್ಲಾಡ್ ಬರೆಯುತ್ತಾ ಹೋಗುತ್ತಾಳೆ: “ನನಗೆ ಭಾನುವಾರ ಎಂದರೆ ಭಯ. ಇವತ್ತು ಫಿಸಿಯೋಥೆರಪಿಸ್ಟ್ ಬರಲ್ಲ. ಭಾನುವಾರ ಅನ್ನೋದು ದೀರ್ಘ ಮರುಭೂಮಿಯ ಹಾಗೆ…” ಹೀಗೆ ಬರಹ ಮುಂದುವರೆಯುತ್ತದೆ. ಈಜು ಕೊಳದಲ್ಲಿ ಡೈವಿಂಗ್ ಸೂಟ್ ನಲ್ಲಿ ಜಲಚಿಕಿತ್ಸೆಗೆ ಒಳಗಾಗುತ್ತಿರುವ ಬಾಬಿಗೆ ತಾನು ಬರೆಯುತ್ತಿರುವ ಅನುಭವ ಕಥನಕ್ಕೆ ಪ್ರೆಜರ್ ಕುಕರ್ ಅಥವಾ ಡೈವಿಂಗ್ ಬೆಲ್ ಅಂತ ಹೆಸರಿಡಬಹುದು ಅನಿಸುತ್ತದೆ.

ಒಂದು ದಿನ ಅವನ ತಂದೆಯ ಫೋನ್ ಬರುತ್ತದೆ. ಫೋನನ್ನು ಬಾಬಿಯ ಕಿವಿಗೆ ಇಡಲಾಗಿದೆ. “ನೀನು ನಿನ್ನ ದೇಹದಲ್ಲಿ, ನಾನು ನನ್ನ ಅಪಾರ್ಟ್ ಮೆಂಟ್ ನಲ್ಲಿ ಲಾಕ್ಡ್ ಇನ್ ಸಿಂಡ್ರೋಮ್ ನಲ್ಲಿ ಸಿಕ್ಕಿಬಿದ್ದಿದ್ದೇವೆ” ಎಂದು ತಂದೆ ಅಳಲಾರಂಭಿಸುತ್ತಾನೆ. ಐನಸ್ ಎಂಬ ಅವನ ಹಳೆಯ ಪ್ರೇಯಸಿ “ನಾನು ಬರಲೇ” ಎಂದು ಬಾಬಿಯ ಪತ್ನಿ ಸಿಲಿನಾ ಎದುರೇ ಫೋನ್ ಮಾಡುತ್ತಾಳೆ. ಬಾಬಿ ರೆಪ್ಪೆ ಭಾಷೆಯ ಮೂಲಕ “ಪ್ರತಿ ದಿನ ನಿನಗಾಗಿ ಕಾಯುತ್ತಿರುವೆ” ಎನ್ನುತ್ತಾನೆ.

ಪವಾಡಗಳಾಗುವುದಿಲ್ಲವೆಂದು ಬಾಬಿಗೆ ಗೊತ್ತಿತ್ತು. ಆದರೂ ಏನಾದರೂ ಪವಾಡವಾಗಿ ನಾನು ಹಾಡಬಲ್ಲೆ ಎಂದುಕೊಳ್ಳುತ್ತಾನೆ. ಅವನು ಹಾಡಬಲ್ಲನೆಂದು ಎಲ್ಲರೂ ಹುರಿದುಂಬಿಸುತ್ತಾರೆ. ಆದರೆ ಕೊನೆಗೂ ಹಾಡಲಾಗದ ಬಾಬಿಯ ಪುಸ್ತಕವೇ ಅವನ ಹಾಡಾಗಿತ್ತು. ಜಾನ್ ಡೊಮಿನಿಕ್ ಬಾಬಿ “ದಿ ಡೈವಿಂಗ್ ಬೆಲ್ ಅಂದ್ ದಿ ಬಟರ್ ಫ್ಲೈ” ಪುಸ್ತಕವನ್ನು ಎರಡು ಲಕ್ಷ ಸಲ ತನ್ನ ಎಡಗಣ್ಣಿನ ರೆಪ್ಪೆ ಬಡಿದು ಬರೆಸಿದ. ಇದನ್ನು ಬರೆದುಕೊಂಡವರ ಸಹನೆಯಂತೂ ಊಹಿಸಲೂ ಅಸಾಧ್ಯವಾದುದು. ಈ ಪುಸ್ತಕ ಪ್ರಕಟವಾದ ಮೊದಲ ವಾರವೇ ಅದರ ಒಂದೂವರೆ ಲಕ್ಷ ಪ್ರತಿಗಳು ಖರ್ಚಾದವು.

ನಮ್ಮ ಕವಿ ಶಿವತೀರ್ಥನ್ ಸ್ಥಿತಿ ಬಾಬಿಗಿಂತ ಎಷ್ಟೋ ಪಾಲು ಮೇಲು ಎನ್ನಬಹುದು. ಅವರ ಗೆಳೆಯರು, ಹತ್ತಿರದವರು ಸ್ವಲ್ಪ ಸಹನೆಯಿಂದ ಅವರೊಡನೆ ಇದ್ದರೆ, ಶಿವತೀರ್ಥನ್ ಕ್ರಮೇಣ ಎಡಗೈಯಲ್ಲಿ ಬರೆಯಲಾರಂಭಿಸಿ ತಮ್ಮ ಚೈತನ್ಯವನ್ನು ಮರಳಿ ಪಡೆಯಬಹುದು ಎನಿಸುತ್ತದೆ.

‍ಲೇಖಕರು avadhi

April 11, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ...

ಬರಲಿರುವ ದುರಂತದ ಮುನ್ಸೂಚನೆ..

'ರೈತ, ದಲಿತ ಸಂಘಟನೆಗಳ ಜೊತೆ ಮತ್ತೆ ಹೊರಡೋಣ' ಗಾಳಿಬೆಳಕು -ನಟರಾಜ್ ಹುಳಿಯಾರ್ ನಾನು ಮತ್ತು ನನ್ನ ವಾರಗೆಯವರು ನಮ್ಮ ಹದಿಹರೆಯದಲ್ಲಿ ಕ್ಲಾಸ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This