ನಾಳೆಯ ವಿಶ್ವಾಸ ಕಾಯುವ ಬುಡ್ಡಿ ದೀಪ

ವಿಜಿ

“ಹೊತ್ತಿನಲ್ಲಿದ್ದಾಳೆ” ಅನ್ನುವ ಶಬ್ದ ಉತ್ತರ ಕನ್ನಡದ ಒಕ್ಕಲ ಕೇರಿಗಳಲ್ಲಿನ ಕಿರುದಾರಿಗಳಲ್ಲಿ ನಡೆವವರ ಕಿವಿಯ ತುಂಬುವುದುಂಟು. ಹೆಣ್ಣುಮಗಳೊಬ್ಬಳು ಬಸುರಿ ಎಂಬ ಒಸಗೆಯನ್ನು ಮನದಿಂದ ಮನಕ್ಕೆ ನುಡಿವ ಶಬ್ದ ಅದು. ಹೀಗೆ, ತಾಯಾಗುವವಳ ಚೈತನ್ಯವನ್ನು “ಹೊತ್ತು” ಎಂದು ಪರಿಭಾವಿಸುವ ಘನವಂತಿಕೆಯನ್ನು ಬೆರಗಿನಿಂದ ಧ್ಯಾನಿಸುತ್ತ ಬೆಳೆದಿದ್ದೇನೆ. ಸಮಯದ ಬಗೆಗೆ ನನ್ನೊಳಗೆ ನಿಕ್ಕಿಯಾಗಿರುವ ಪ್ರಜ್ಞೆ ಇಂಥದ್ದೊಂದು ನೆಲದ ದೃಢತೆಯನ್ನು ಹೊಂದಿರುವುದಾಗಿದೆ.

ಮಂದಿ ಸುಳಿವ ಅಲೆ ತಣ್ಣಗಾಗುತ್ತಿದ್ದಂತೆ ರಾತ್ರಿಯಲ್ಲಿ ದೇವರು ನಡೆದು ಬರುತ್ತಾನಂತೆ. ಪಂಜಿನ ಬೆಳಕಿನಂಥ ಬೆಳಕಿನೊಂದಿಗೆ ಮೈಯಿದ್ದೂ ಮೈಯಿಲ್ಲದಂಥ ದೇವರು ನಡೆದು ಹೋಗುವ ಚಿತ್ರ, ಹಾಗೆ ದೇವರ ಕಂಡೆನೆಂದವರ ಮಾತುಗಳಿಂದ ನೇರ ನನ್ನ ಮನಸ್ಸಲ್ಲಿ ಅಚ್ಚೊತ್ತಿದೆ. ಮಳೆಗಾಲದಲ್ಲಿ ಬೆಟ್ಟದ ಹಳ್ಳ ಪ್ರವಾಹದೋಪಾಧಿಯಲ್ಲಿ ಬಿಚ್ಚುವುದು ಮಂದಿಯೆಲ್ಲ ಮಲಗಿರುವ ರಾತ್ರಿಯಲ್ಲೇ. ಮತ್ತು, ಮಂದಿ ಎಚ್ಚರಾಗುತ್ತಿದ್ದಂತೆ ತುಂಬಿ ಆರ್ಭಟಿಸುತ್ತಿದ್ದ ಹಳ್ಳ ಮೊದಲಿನ ಸ್ಥಿತಿಯನ್ನು ಹೊಂದುತ್ತದೆ ಎಂಬ ಮಾತುಗಳನ್ನು ಕೇಳಿಸಿಕೊಂಡ ಎಳೆತನ ನನ್ನದು. ಕಡೆಗೂ ಎಲ್ಲ ಸದ್ದುಗಳ ಬಳಿಕ ಗಾಢವಾಗುವುದು ಮೌನವೇ ತಾನೆ?

ಶುದ್ಧ ಸಂಗತಿಯೊಂದರ ಸಂಗಾತದಲ್ಲಿನ ಬೆಚ್ಚಗಿನ ಭಾಸ, ಕಳೆದು ಹೋಗುತ್ತಿರುವ ಅಥವಾ ದೂರವಾಗುತ್ತಿರುವ ಅಂತಹುದೊಂದರ ನೆನಪಿನಲ್ಲಿಯೂ ಸಿಗುತ್ತಿರುವುದು ಆ ಸಂಗತಿಯ ಹಿರಿಮೆಯಿಂದಾಗಿಯೇ ಇರಬೇಕು. ಅದರೊಳಗಿನ ಚೈತನ್ಯದಿಂದಾಗಿಯೇ ಇರಬೇಕು.

ನನ್ನ ನೆನಪುಗಳ ಹಾದಿಯಲ್ಲಿ ಇಂತಹುದೇ ಎಷ್ಟೋ ಸಂಗತಿಗಳು ಮೀಯುತ್ತಿವೆ. ಹುಲ್ಲು ಹೊದಿಕೆಯ ಮನೆಗೆ ವರ್ಷಕ್ಕೊಮ್ಮೆ ಹೊಸ ಹುಲ್ಲು ಹೊದೆಸಿ, ಕಂಬಳವೆಂದು ನನ್ನೂರ ಜನ ಸಂಭ್ರಮಿಸುತ್ತಿದ್ದ ದಿನಗಳಿದ್ದವು. ದೀಪಾವಳಿಯಂದು ಮನೆಯ ಹಸುವಿನ ಬಾಯಲ್ಲಿ ರೊಟ್ಟಿಯಿಟ್ಟು, ನೊಗ ಹೊತ್ತು ಜಡ್ಡಾದ ಹೆಗಲ ದನದ ಮೈನೇವರಿಸಿ, ಅದರ ಕಣ್ಣೊಳಗೇನಾದರೂ ನಗೆ ಹೊಳೆಯುತ್ತದೆಯೇ ಎಂದು ಕಾದು ಕೂರುತ್ತಿದ್ದ ಎಳವೆಯ ದಿನಗಳಿದ್ದವು. ಅವೊಂದೂ ಈಗ ಇಲ್ಲ. ಎದೆಯೊಳಗೆ ಚಿಲಿಪಿಲಿಗುಟ್ಟುವ ನೆನಪುಗಳು ಮಾತ್ರ, ಗಾಳಿಗೆ ಹೆದರುತ್ತಲೇ ನಾಳೆಯ ವಿಶ್ವಾಸ ಕಾಯುವ ಬುಡ್ಡಿ ದೀಪದ ಹಾಗೆ ಬೆಳಕು ತೂಗುತ್ತಲೇ ಇವೆ.

ನನ್ನೂರ ಹುಲ್ಲು ಹೊದಿಕೆಯ ಮನೆಗಳು ಹೆಂಚು ಕಂಡಿವೆ. ವಾರ್ಷಿಕ ಕಂಬಳದ ಶ್ರಮ, ವ್ಯಯ ಕಮ್ಮಿಯಾಗಿದೆ. ಆದರೆ, ಅಲ್ಲಿ ದಕ್ಕುತ್ತಿತ್ತಲ್ಲ, ಅದೆಂತುಹುದೋ ಆಪ್ತತೆ – ಅದು ಮುಗಿದು ಹೋದುದನ್ನು ಕಾಣಬೇಕಾಗಿರುವ ಪೀಳಿಗೆಯವನಾಗಿ ನನ್ನೊಳಗೆ ಮಡುಗಟ್ಟುವ ವ್ಯಾಕುಲ ಮಾತಿನ ಚೌಕಿಯಲ್ಲಿ ಬರಲಾರದಂತಹುದು. ನಾನು ಹುಟ್ಟಿದ ಮನೆಯಂಗಳದಲ್ಲಿದ್ದ ತುಳಸಿ ಕಟ್ಟೆ ನಾನು ಬೆಳೆಯತೊಡಗಿದ ಮನೆಯಲ್ಲಿ ಇರಲಿಲ್ಲ. ಹಾಗೆಂದು, ಮನೆಯಂಗಳದಲ್ಲಿ ತುಳಸಿ ಕಟ್ಟೆ ಬೇಕೆಂಬ ಒತ್ತಾಯವೂ ನನ್ನೊಳಗೆ ಸುಳಿದದ್ದಿಲ್ಲ. ಕಾಡಿನ ಸೆರಗಿನಲ್ಲಿ ತಣ್ಣಗೆ ತನ್ನ ಪಾಡಿಗೆ ತಾನಿದ್ದ ಹಳ್ಳಿಯ ಯಾವುದೋ ಮೂಲೆಯಲ್ಲಿ ಹೆಣ್ಣುಮಕ್ಕಳ ಜೊತೆ ಕುಂಟೋಬಿಲ್ಲೆಯಾಡುತ್ತಿದ್ದಾಗಿನ ನನ್ನ ಹೆಜ್ಜೆ ಗುರುತುಗಳ ಮೇಲೆ ಎಷ್ಟು ಮಣ್ಣ ಪದರುಗಳು ಬಂದಾಯಿತೊ ಯಾರಿಗೆ ಗೊತ್ತು?

…ಹಳವಂಡಗಳು, ತಲ್ಲಣಗಳು, ಹೀಗೇ ಎಂದು ಬಿಡಿಸಿ ಹೇಳಲಾರದ ಆತಂಕಗಳು. ಈ ನಿದ್ದೆಗೇಡಿ ಜಂಜಡಗಳ ಹೂಂಕಾರಗಳ ನಡುವೆಯೇ, ಜಗತ್ತಿನಲ್ಲಿ “ಹೊತ್ತಿನಲ್ಲಿರುವ” ಹೆಂಗಸರೆಲ್ಲ ಸುಖ ಪ್ರಸವ ಕಾಣಲಿ ಎಂದು ಹಂಬಲಿಸುವಾಗ ನಾವು ಮಿದುವಾಗುತ್ತೇವೆ. ಕಲ್ಲು ಕರಗುವ ಸಮಯ ಅದು. 

nature1.jpgnature1.jpg

‍ಲೇಖಕರು avadhi

June 2, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: