ಕತೆಯ ಪಾತ್ರವೊಂದು ಎದುರಲ್ಲಿ ನಿಂತಾಗ…

ಅಮರೇಶ ನುಗಡೋಣಿ

ಹಿಂದಿನ ವಾರ ಊರಿಗೆ ಹೋದಾಗ ಕ್ಷೌರಿಕ ಮಹಂತೇಶ ಭೇಟಿಯಾಗಿ ಮಾತಾಡಿಸಿದ್ದ. ಆತನ ತಂದೆ ರಾಚಪ್ಪ ನಮ್ಮೂರಿಗೆ ವಲಸೆ ಬಂದು ಕ್ಷೌರಿಕ ಕಸುಬನ್ನು ಶುರು ಮಾಡಿದ್ದನು. ಅವರು ೩೦ ವರ್ಷಗಳಿಂದ ನಮ್ಮೂರಲ್ಲಿದ್ದಾರೆ. ಆದರೆ ರಾಜಪ್ಪ ಟೀಬಿ ಕಾಯಿಲೆಯಿಂದ ತೀರಿಕೊಂಡಿದ್ದನು. ಮಗ ಮಹಂತೇಶ ಕಸುಬನ್ನು ಮುಂದುವರಿಸಿದ್ದ. ರಾಚಪ್ಪ ಮನೆ ಮನೆಗೆ ಹೋಗಿ ಕ್ಷೌರ ಮಾಡುತ್ತಿದ್ದಾಗ ನಾನು ಸಿರಿವಾರದ ಶಾಲೆಗೆ ದಿನ ಹೋಗಿ ಬರುತ್ತಿದ್ದೆ. ಊರ ಜನ ಬಹುತೇಕ ರಾಚಪ್ಪನಿಂದಲೇ ಕ್ಷೌರ ಮಾಡಿಸಿಕೊಳ್ಳುತ್ತಿದ್ದರು. ಮಗ ಕಸುಬಿಗೆ ನಿಂತ ಮೇಲೆಯೂ ಸಹ. ಆದರೆ ಈಗ ಅವನಿಂದ ಕ್ಷೌರ ಮಾಡಿಸಿಕೊಳ್ಳುತ್ತಿದ್ದಾರಂತೆ. ಶಾಲೆ-ಕಾಲೇಜಿಗೆ ಹೋಗುವ ಚಿಕ್ಕೋರು ಮಹಂತೇಶನನ್ನು ಇಷ್ಟಪಡುವುದಿಲ್ಲವಂತೆ. ಆದರೂ ಮಹಂತೇಶ ಕ್ಷೌರ ಮಾಡುವುದನ್ನು ನಿಲ್ಲಿಸಿಲ್ಲ. ಜತೆಗೆ ವ್ಯವಸಾಯವನ್ನೂ ಮಾಡುತ್ತಿದ್ದಾನೆ.

heege.jpgರಾಚಪ್ಪ ನಮ್ಮೂರಿಗೆ ವಲಸೆ ಬಂದ ಮೇಲೆ ನಮ್ಮ ಮನೆಗೆ ಆಪ್ತವಾಗಿದ್ದನು. ನಾನು ಚಿಕ್ಕವನಾಗಿದ್ದಾಗಿನಿಂದಲೂ ಈ ರಾಚಪ್ಪ ಮತ್ತು ಆತನ ಹೆಂಡತಿ, ಮಕ್ಕಳನ್ನು ಸಮೀಪದಿಂದ ನೋಡುತ್ತ ಬಂದಿದ್ದೆ. “ಒತ್ತೆ” ನನ್ನ ಪ್ರಕಟವಾದ ಮೊದಲ ಕಥೆ. ಅದು ೧೯೮೭ರಲ್ಲಿ ತರಂಗ ಪತ್ರಿಕೆಯಲ್ಲಿ “ತಿಂಗಳ ಬಹುಮಾನಿತ ಕಥೆ”ಯಾಗಿ ಪ್ರಕಟವಾಗಿತ್ತು. ಅದು ಈ ಕ್ಷೌರಿಕ ರಾಚಪ್ಪನ ಬದುಕಿನ ಕಥೆಯಾಗಿತ್ತು. ನಮ್ಮೂರಲ್ಲಿ ಆ ಕಥೆಯನ್ನು ಓದಿದ ಕೆಲವರು ಮಹಂತೇಶನಿಗೆ ಹೇಳಿದರು. ಆಗ ರಾಚಪ್ಪ ಬದುಕಿರಲಿಲ್ಲ. ನಮ್ಮೂರ ಬಸವಣ್ಣ ದೇವರ ಗುಡಿಯಲ್ಲಿ ರಾತ್ರಿ “ಒತ್ತೆ” ಕಥೆಯನ್ನು ಒಬ್ಬರು ಓದಿದರಂತೆ. ಹತ್ತಾರು ಮಂದಿ ಕುಂತು ಕೇಳಿದರಂತೆ. “ನಮ್ಮೂರ ಹುಡುಗ ಕಥೆ ಬರೆದಿದ್ದಾನೆಂಬ” ಹೆಮ್ಮೆ, ಜತೆಗೆ ನಾಳೆ ನಮ್ಮದನ್ನೂ ಹಿಂಗೇ ಬರೆದರೆ ಗತಿಯೇನು?” ಎಂದು ಯೋಚಿಸಿದ್ದರಂತೆ. ಮಹಂತೇಶನೂ ಓದಿದ ಕಥೆಯನ್ನು ಕೇಳಿದ್ದನಂತೆ. ನಾನು ಆಗ ನಮ್ಮೂರಲ್ಲಿ ಇರಲಿಲ್ಲ.

ಒಂದು ದಿನ ನಾನು ಊರಿಗೆ ಬಂದದ್ದನ್ನು ನೋಡಿದ ಮಹಂತೇಶ ಮನೆಗೆ ಬಂದ. ಅಣ್ಣ ನನಗೆ ಸೂಚನೆ ಕೊಟ್ಟಿದ್ದ. ಚಹ ಕುಡಿದ ಮಹಂತೇಶ ಅಂಜುತ್ತಲೇ, “ನೀನು ಬರೆದ ಕಥೆ ಗುಡಿಯಾಗ ಓದಿದ್ರಪ್ಪ. ನಾನೂ ಕುಂತು ಕೇಳಿದೆ. ಎಲ್ಲ ಸರಿ ಐತೆ. ಮುಚ್ಚಿಡಾದ್ರಾಗ ಏನೈತೆ? ಆದ್ರ…” ಎಂದು ಮಾತು ನಿಲ್ಲಿಸಿದ. ನನಗೆ ನಿಜವಾಗಿಯೂ ಭಯವಾಯ್ತು. “ಆ ಕತೆ – ನಿಮ್ಮದಲ್ಲ” ಅಂತ ಹೇಳಲು ನನಗೆ ಮನಸ್ಸಾಗಲಿಲ್ಲ. ಹೆಸರುಗಳೂ ಸ್ವಲ್ಪ ಬೇರೆಯಾಗಿದ್ದವು. ಕೆಲವು ನಿಜ ನಾಮಗಳೇ ಉಳಿದಿದ್ದವು. ನಾನು ಮಾತಾಡಲು ಹೋಗಲಿಲ್ಲ. ನಮ್ಮಣ್ಣನೇ, “ಮಹಂತ, ಅವನಿಗೆ ತಿಳಿದಿಲ್ಲ. ಬರದಾನಾ. ಮುಂದ ಇಂತದ್ದು ಬರಿಬ್ಯಾಡ ಅಂತ ಹೇಳೀನಿ. ನೀನು ಹೋಗು” ಅಂದ. ಮಹಂತೇಶ ಮೆಲ್ಲಗೆ, “ಅದಲ್ಲಪ್ಪ ಗೌಡ, ನಿಮಗೆ ಗೊತ್ತಿಲ್ಲದ್ದೇನಾದ? ನಾವು ಲಿಂಗ ಕಟ್ಟಿದ ಕ್ಷೌರಿಕ ಕಸುಬಿನ ಪೈಕಿ, ನಾವೂ ಲಿಂಗಾಯತರಂಗೆ. ಬಸವಣ್ಣನ ಮಂದಿ ನಾವು. ಮಾಂಸ, ಹೆಂಡ ತಿನ್ನದಿಲ್ಲ. ಲಿಂಗ ಕಟ್ಟಲಾರದ ಕ್ಷೌರಿಕ ಕಸುಬಿನವರು ಬ್ಯಾರೆ ಮಂದಿ ಇದಾರೆ. ಅವ್ರು ಮಾಂಸ, ಹೆಂಡ ಎಲ್ಲಾ ತಿನ್ತಾರಾ, ಕುಡಿತಾರಾ. ನಾವು ಲಿಂಗದ ಕ್ಷೌರಿಕರು. ನೀನು ಬರೆದ ಕಥೆಯಾಗಾ ನಾವು ಮಾಂಸ, ಹೆಂಡ ತಿಂಬುವ, ಕುಡೀವ ಮಂದಿಯೆಂತಾ ಬರೆದಿದ್ದಿ. ನಾವು ಆ ಪೈಕಿ ಅಲ್ಲ” ಎಂದು ನೊಂದು ಹೇಳಿದ. ನಾನು ಹಾಗೆ ಬರೆದದ್ದು ನಿಜ. ರಾಚಪ್ಪನಿಗೆ ಟೀಬಿ ರೋಗ ಬಂದಿತ್ತು. ನಮ್ಮೂರಿಗೆ ವಲಸೆ ಬಂದಿದ್ದ ಆರ್.ಎಂ.ಪಿ ಡಾಕ್ಟರ್ ಒಬ್ಬರು ರಾಚಪ್ಪನಿಗೆ ಈ ರೋಗಕ್ಕೆ ಮಾಂಸ, ಹೆಂಡವೇ ಮದ್ದು ಎಂದು ಹೇಳಿದ್ದನಂತೆ. ಅದರಂತೆ ರಾಚಪ್ಪ ಅದನ್ನೂ ರೂಢಿಸಿಕೊಂಡಿದ್ದ ಎಂದು ಕಥೆಯಲ್ಲಿ ಬರೆದಿದ್ದೆ.

“ಅದು ಕಥೆ. ಅದರಲ್ಲಿ ಏನೆಲ್ಲಾ ಸೇರಿಕೊಂಡಿರುತ್ತದೆ” ಎಂದು ಹೇಳಲು ತೊಡಗಲಿಲ್ಲ. ಸುಮ್ಮನಿದ್ದು ಚಿಂತೆಗೆ ತೊಡಗಿದೆ. ಬರೆದದ್ದು ಆಯಿತು. ಈಗೇನು ಮಾಡುವುದು! ಮುಂದೆ ಬರೆಯುವುದಿಲ್ಲ ಎಂದು ಹೇಳಬೇಕೆನಿಸಿತು. ಅದರಿಂದ ಪ್ರಯೋಜನವಾಗುವುದಿಲ್ಲ ಎಂದುಕೊಂಡು, ಹಾಗೂ ಹೀಗೂ ಸರಿಪಡಿಸಲು ಒದ್ದಾಡಿದೆ. ಹಾಗೆ ನೋಡಿದರೆ, ಮಹಂತೇಶ ಸಿಟ್ಟಿನಿಂದ ಬಂದಿರಲಿಲ್ಲ. ರಾಜಕೀಯವೂ ಆತನಿಗೆ ಗೊತ್ತಿರಲಿಲ್ಲ. ಸ್ವಲ್ಪ ಸಿಟ್ಟಿನಿಂದ ಮಾತಾಡಿದ್ದರೆ, ಆತ ಎದ್ದು ಹೋಗುತ್ತಿದ್ದ ಅಷ್ಟೆ! ನಾನು, ಅಣ್ಣ ಆತನಿಗೆ ಗದರಿಸಲು ಹೋಗಲಿಲ್ಲ.

heege.jpgಮಹಂತೇಶನೇ ತನ್ನ ಬಕ್ಕಣದಿಂದ ತರಂಗ ಪತ್ರಿಕೆ ತೆಗೆದು “ನೀನು ಇದರಾಗ ನಮ್ಮಪ್ಪ ಮಾಂಸ ತಿಂತಾನಾ, ಹೆಂಡ ಕುಡೀತಾನ, ಮಕ್ಕಳು, ಹೆಣ್ತಿ ಆತನ ಜತೆಗೆ ತಿಂತಾರಂತ ಬರೆದಿದ್ದೆಲ್ಲಪ್ಪಾ. ಅದನ್ನು ಕಾಟು ಹಾಕು” ಅಂತ ಪತ್ರಿಕೆ ಕೊಟ್ಟ. ಯಾರಿಂದಲೋ  ಅದನ್ನು ಇಸ್ಕೊಂಡು ತಂದಿದ್ದ. ನನಗೆ, ಅಣ್ಣನಿಗೆ ನಗು ಬಂತು. ಮಹಂತೇಶ ಅಕ್ಷರ ಓದುವಷ್ಟು ಶಾಲೆಗೆ ಹೋಗಿರಲಿಲ್ಲ. ಮಕ್ಕಳು ತಪ್ಪು ಬರೆದಿದ್ದರೆ ಮಾಸ್ತರರು ಅಡ್ಡಗೆರೆ ಎಳೆದು (ಕಾಟು ಹಾಕಿ) ಹಾಕುತ್ತಿದ್ದರಲ್ಲ ಹಾಗೆ ಕಾಟು ಹಾಕಲು ಹೇಳಿದ. “ಇಲ್ಲ ಮಹಂತ. ಹಂಗ ಬರೆದಿಲ್ಲ. ಈ ಪತ್ರಿಕೆಯಲ್ಲಿ ಕಾಟು ಹಾಕಿದರೆ, ಇನ್ನೊಂದ್ರಲ್ಲಿ ಇರ್ತದ” ಅಂತ ಅಣ್ಣ ಏನೋ ಹೇಳಿದ. ನಾನು ಮೂಕನಾಗಿ ಕುಳಿತಿದ್ದೆ. ಮಹಂತೇಶ ಏನೋ ಯೋಚಿಸಿದ. “ಅಂಗದೇನು? ಮತ್ತೆ ಇನ್ನೊಂದು ಕತೆ ಬರಿ. ಅದರಾಗ ಮಾಂಸ ತಿನ್ನದಿಲ್ಲ. ಹೆಂಡ ಕುಡಿಯದಿಲ್ಲ ಅಂತ ಬರಿ” ಎಂದು ಹೇಳಿದ. ನನಗೆ ಮಾತು ಬರಲಿಲ್ಲ. ಅಣ್ಣನೇ “ಆಯ್ತಪ್ಪ, ನೀನು ಅಷ್ಟು ಮಾಡು” ಎಂದು ನನಗೆ ಹೇಳಿದ.

ಮೊನ್ನೆ ಮಹಂತೇಶ ಕಂಡಾಗ ನನಗೆ ಆ ಘಟನೆ ನೆನಪಾಯ್ತು. ಅದಾಗಿ ಇಪ್ಪತ್ತು ವರ್ಷಗಳಾದವು. ಮಹಂತೇಶನಿಗೆ ಅದು ನೆನಪಿದೆಯೋ ಇಲ್ಲವೋ!

‍ಲೇಖಕರು avadhi

September 3, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಿನಿಮಾ ತಯಾರಿಯ ತಮಾಷೆಗಳು…

-ಕೃಷ್ಣ ಮಾಸಡಿ ನಾನು ಬಾಲ್ಯದಲ್ಲಿ ಹೊನ್ನಾಳಿ ಮತ್ತು ರಾಂಪುರ ಜಾತ್ರೆಯಲ್ಲಿ ಹಾಕುತ್ತಿದ್ದ ಟೂರಿಂಗ್ ಟಾಕೀಸುಗಳಲ್ಲಿ ನೆಲದಲ್ಲಿ ಹಾಗೂ ಆಗಾಗ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This