ಕತೆಯ ಬಾಜೂ ಕೂತು:ಒಂದಿಡೀ ಪರಂಪರೆಯ ದುಃಖ…

-ಮಾಧವಿ ಪಟಗಾರ

ಅಲ್ಲೊಬ್ಬಳು ಬಡವೆ. ಮನುಷ್ಯತ್ವವೇ ಇಲ್ಲದ ಗಂಡನೊಂದಿಗೆ ಬಾಳುವೆ ನಡೆಸಬೇಕಾಗಿರುವ, ಎಲ್ಲ ಕಷ್ಟಗಳನ್ನೂ ’ನನ್ನ ಕರ್ಮ’ ಎಂದು ಒಪ್ಪಿಕೊಂಡು ಮೌನದಲ್ಲೇ ದುಃಖ ನುಂಗಿಕೊಳ್ಳುವ ಹೆಣ್ಣು. ಅವಳಿಗೊಬ್ಬ ಹಿತೈಷಿ ಸ್ನೇಹಿತ. ಅವಳ ಕಷ್ಟಕ್ಕೆ ಮರುಗುವವನು. ಅವಳಿಗಾಗಿ ಕಾಳಜಿ ವಹಿಸುವವನು.

ಆದರೆ ಬದುಕಿನ ಚಿತ್ರಗಳು ಯಾವಾಗಲೂ ಸುಂದರವಲ್ಲ. ಅವು ಆತನ ಸ್ನೇಹ ಭಾವವನ್ನೇ ಕಂಗೆಡುವಂತೆ ಮಾಡುವಂಥವು. ಅವನ ಮಾನವೀಯ ಹೆಜ್ಜೆಗಳಿಗೆ ಅಲ್ಲಿ ನೆಲವೆಂಬುದಿಲ್ಲ.

ಶ್ರೀಕೃಷ್ಣ ಆಲನಹಳ್ಳಿಯವರ ’ ಸಂಬಂಧ’ ಕತೆ ವಿನಾಕಾರಣ ಒಳ್ಳೆಯ ಜೀವವೊಂದು ಅನುಭವಿಸುವ ಅನ್ಯಾಯ ಮತ್ತು ತಲ್ಲಣಗಳನ್ನು ಮನ ಕರಗುವ ಹಾಗೆ ಹೇಳುತ್ತದೆ.

“ಇನ್ಮೇಲೆ ಎಲ್ಲೂ ಹೊರಗೆ ಹೋಗ್ಬಾರ‍್ದಂತೆ. ನಂಗೆ ಮದುವೆ ಮಾಡ್ತಾರಂತೆ. ಅದಕ್ಕೆ ಯಾರ ಜೊತೆಯೂ ಮನೆಗೆ ಬಂದರೂ ಮಾತಾಡಬಾರ‍್ದಂತೆ” ಸಂಪ್ರದಾಯಸ್ತ ಹಿರಿಯರ ಕಟ್ಟಳೆಗಳನ್ನು ಅಷ್ಟೊಂದು ವಿಧೇಯಳಾಗಿಯೇ ಪಾಲಿಸಿದವಳಿಗೆ ಸಿಕ್ಕಿದ್ದು ಅದೆಂಥ ಬದುಕು?

ಮನುಷ್ಯತ್ವದ ಗಂಧಗಾಳಿಯೂ ಇಲ್ಲದಂಥ ಏನಾದರೂ ಅವನ ಬಗ್ಗೆ ಕಿಂಚಿತ್ತೂ ಕೋಪಗೊಳ್ಳದ ಪ್ರೀತಿ. ಆದರೆ ಅದೆಲ್ಲವೂ ಆ ಗಂಡನೆಂಬುವನ ಸಣ್ಣತನದ ಮುಂದೆ ಯಾವ ಅರ್ಥವನ್ನೂ ಪಡೆಯದೇ ಹೋಗುತ್ತದೆ.ಎಂಟೇ ವರ್ಷಗಳ ಹಿಂದೆ ಯೌವನ ತುಂಬಿ ಉಕ್ಕುತ್ತಿದ್ದವಲ ಕಣ್ಣುಗಳಲ್ಲೀಗ ಅವತ್ತಿನ ಬಟ್ಟಲು ಕಂಗಳ ಬೆಳಕಿಲ್ಲ. ನಿಸ್ತೇಜಗೊಂಡ ಮುಖ ಒಂದು ದೊಡ್ಡ ಸ್ಥಿತ್ಯಂತರವೇ ಈ ಎಂಟು ವರ್ಷಗಳ ಅವಧಿಯಲ್ಲಿ ಆಗಿಬಿಟ್ಟಿರುವುದರ ಬಗ್ಗೆ ಹೇಳುತ್ತಿದೆ.

ಬಿರುಗಾಳಿಯಂಥದ್ದರ ಬೀಸಿಗೆ ಸಿಕ್ಕಂತಾಗಿ ನಲುಗಿದ ಲಲಿತೆ ಮಾತ್ರ ಈಗಿರುವುದು. ಈ ಕಾಲಾವಧಿಯಲ್ಲಿ ಆಕೆ ಐದು ಮಕ್ಕಳನ್ನು ಹೆತ್ತುದಾಗಿದೆ. ಒಂದು ಮಗು ಸತ್ತಿದೆ. ಮೂರನೇ ಮಗಳು ಎಲ್ಲೋ ಆಡಿಕೊಂಡಿದ್ದಾಗ ನಾಯಿ ಕಚ್ಚಿದ್ದರಿಂದ ಡಾಕ್ಟರಿಗೆ ತೋರಿಸಲೆಂದು ಆಸ್ಪತ್ರೆಗೆ ಕರೆ ತಂದಿದ್ದಾಳೆ. ಆಗಲೇ ಕಥಾನಾಯಕನಿಗೆ ಎದುರಾಗಿ ’ನಾನು ಲಲಿತ, ನೆನಪಾಗಲಿಲ್ಲವ’ ಎಂದದ್ದು ಅವಳು.

ಮಾರನೇ ದಿನ ಚಾಮುಂಡಿಪುರದ ಕೊಳಕು ಗಲ್ಲಿಯಲ್ಲಿದ್ದ ಅವಳ ಮನೆಯನ್ನು ಹುಡುಕಿಕೊಂಡು ಹೋದವನಿಗೆ ಅಲ್ಲಿ ನಾಲ್ಕು ಕಡೆಯೂ ಕಾಲೂರಿ ನಿಂತಿದ್ದ ಬಡತನ ಕಣ್ಣಿಗೆ ರಾಚುತ್ತದೆ,ಎದೆ ಕಲಕಿದಂತಾಗುತ್ತದೆ. ಅವಳ ಗಂಡನೆಂಥ ಸೌಜನ್ಯಹೀನನೆಂಬುದು ತಿಳಿಯುತ್ತದೆ.

ಆದರೆ ಅವಳ ಮನಸ್ಸು ಮಾತ್ರ ಹೂಶುದ್ಧ ” ಬೇಜಾರು ಮಾಡಿಕೋ ಬೇಡಿ, ಅವರ ರೀತಿಯೇ ಹಾಗೆ” ಎಂದು ಗಂಡನ ಅಸಜ್ಜನಿಕೆಗೆ ಕ್ಷಮೆ ಯಾಚಿಸುತ್ತಾಳೆ.ನಾಯಿಯಿಂದ ಕಚ್ಚಿಸಿಕೊಂಡ ಅವಳ ಮಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ಇಲ್ಲಿನ ಡಾಕ್ಟರು ಹೇಳಿರುತ್ತಾರೆ. ಆದರೆ ಗಂಡನ ಉಪೇಕ್ಷೆ, ಮೃಗ ಮನಸ್ಸು ಮಗಳನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲು ಬಿಡಲೇ ಇಲ್ಲ. ’ಅಷ್ಟು ಹಣ ಎಲ್ಲಿಂದ ತರೋದು, ಸ್ವಲ್ಪ ದಿನ ಹೀಗೆ ಕಿರಚ್ತಾ ಕಿರಚ್ತಾ ಹಾಗೇ ನಿಂತೋಗ್ತದೆ ಎಂದಿದ್ದನಂತೆ ಆತ.

ಅವಳ ಕಷ್ಟ ಗೊತ್ತಾದ ಕಥಾನಾಯಕನಿಗೆ ಆಕೆಗೆ ಹೇಗಾದರೂ ನೆರವಾಗಬೇಕು ಎಂಬ ಹಂಬಲ. ನನಗೂ ಲಲಿತಳಿಗೂ ಏನು ಸಂಬಂಧ, ಯಾಕಾಗಿ ನಾನಿಷ್ಟು ತಲೆ ಕೆಡಿಸಿಕೊಳ್ಳಬೇಕು. ಹೀಗೇಕೆ ಒಂದೊಂದು ಸಲ ತೀರ ಉದ್ವೇಗಕ್ಕೆ ಒಳಗಾಗುತ್ತೇನೆ ಎಂತಲೂ ಅನ್ನಿಸುವುದಿದೆ ಆತನಿಗೆ. ಆದರೆ, ’ಮನುಷ್ಯರು ಅಂದ್ಮೇಲೆ ಒಬ್ಬರಿಗೊಬ್ಬರು ದುಃಖದಲ್ಲಿ ಆಗದಿದ್ರೆ ಹುಟ್ಟಿ ಏನು ತಾನೆ ಮಾಡಿದ ಹಾಗಾಯ್ತು’ ಎಂಬ ಅವ್ವನ ಮಾತು ಸದಾ ಅವನೊಳಗೆ ನುಡಿಯುತ್ತಿದೆ. ಅದೇ ಕಾರಣದಿಂದ ತಾನೇ ದುಡ್ಡು ತೆಗೆದುಕೊಂಡು ಹೋಗಿ ಅವಳ ಮುಂದಿಟ್ಟು ಮಗಳನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳುತ್ತಾನೆ.

ಮನುಷ್ಯ ಸಂಬಂಧದ ಅರ್ಥವೇ ಗೊತ್ತಿಲ್ಲದ ಅವಳ ಗಂಡನಿಗೆ ಮಾತ್ರ ಇದೆಲ್ಲವೂ ಬೇರೆಯೇ ಆಗಿ ಕಾಣಿಸುತ್ತದೆ. ಅವಳನ್ನು ಸತ್ತು ಹೋಗುವ ಹಾಗೆ ಹೊಡೆಯುತ್ತಾನೆ. ಈ ನಡುವೆ ನಾಯಿಯಿಂದ ಕಚ್ಚಿಸಿಕೊಂಡ ಹುಡುಗಿಯೂ ಸತ್ತು ಹೋಗುತ್ತಾಳೆ.

ಹೋಗಿ ನೋಡಿದರೆ ಲಲಿತೆ ಜೀವಚ್ಛವ. ಮಲಗಿದಲ್ಲಿಂದ ಏಳಲೂ ಆಗದ ಹಾಗೆ ಪೆಟ್ಟು ತಿಂದು ಬಿದ್ದಿದ್ದಾಳೆ. ತನ್ನಿಂದಲೇ ಆಕೆಗೆ ಅನ್ಯಾಯವಾಯಿತು ಎಂದು ಆತ ಪರಿತಪಿಸಿದರೆ, ಅಂಥ ಸಂಕಟದಲ್ಲೂ ಮಾತುಗಳನ್ನೇ ಕಳೆದುಕೊಂಡಂಥ ಸ್ಥಿತಿಯಲ್ಲೂ ಆಕೆ ಅದನ್ನು ’ಇಲ್ಲ’ವೆಂದು ನಿರಾಕರಿಸುತ್ತಾಳೆ. ಆ ಎರಡೂ ಒಳ್ಳೆಯ ಮನಸ್ಸುಗಳ ಮಧ್ಯೆ ಮಾತ್ರ ಹೆಪ್ಪುಗಟ್ಟಿದ ಮೌನ. ಭಯಗೊಳಿಸುವಂಥ ಮೌನ.

ಲಲಿತೆಯಂಥವಳ ದೌರ್ಭಾಗ್ಯದ ಮೌ
ನ ಶಾಸನದಲ್ಲಿ ಒಂದಿಡೀ ಪರಂಪರೆಯ ದುಃಖ ಮತ್ತು ತಲ್ಲಣಗಳೇ ಮಡುಗಟ್ಟಿವೆ ಎಂಬುದೊಂದೇ ಕಠೋರ ಸತ್ಯ.

‍ಲೇಖಕರು avadhi

September 18, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This