ಕತ್ತಲೆಗೇ ಕಾಯಬೇಕಾದ ಇವರ ಪಾಡು ನೋಡಿ!

ಉಷಾ ಕಟ್ಟೇಮನೆ

ಹಿರಂಗವಾಗಿ ಹೇಳಿಕೊಳ್ಳಲು ಸಾಧ್ಯವಾಗದಂತಹ ಹಲವಾರು ಸಮಸ್ಯೆಗಳು ಹೆಣ್ಣುಮಕ್ಕಳಲ್ಲಿವೆ. ಅದು ಗಂಡು ಪ್ರಪಂಚಕ್ಕೆ ಅರ್ಥವಾಗಲು ಸಾಧ್ಯವೇ ಇಲ್ಲ. ಅರ್ಥವಾಗಬೇಕೆಂದು ನಾವು ಹಠ ಮಾಡುವುದು ಕೂಡ ಅರ್ಥವಿಲ್ಲದ್ದು.

ನಮ್ಮ ಗ್ರಾಮಾಂತರ ಪ್ರದೇಶದ ಶಾಲೆಗಳಿಗೆ ವಿಶಾಲವಾದ ಆಟದ ಮೈದಾನವಿರುತ್ತದೆ. ಕೊಠಡಿಗಳ ಸಂಖ್ಯೆ ಕಡಿಮೆಯಿದ್ದರೂ ಕಟ್ಟಡಕ್ಕೆ ಹೆಂಚಿನ ಮಾಡಿರುತ್ತದೆ. ಮೈದಾನದ ತುದಿಯಲ್ಲಿ ಬಾವಿಯಿರುತ್ತದೆ. ಶಾಲೆಯ ಸುತ್ತಲೂ ನಳನಳಿಸುವ ಕೈದೋಟವಿರುತ್ತದೆ.

ಹಳ್ಳಿಗಾಡಿನ ಶಾಲೆಗಳಲ್ಲಿ ಕಟ್ಟಡ, ಪರಿಸರ ಎಲ್ಲಾ ಎಷ್ಟೇ ಚೆನ್ನಾಗಿದ್ದರೂ ಶೌಚಾಲಯದ ವ್ಯವಸ್ಥೆ ಇರುವುದಿಲ್ಲ. ಹೆಣ್ಣುಮಕ್ಕಳಂತೂ ಮೂತ್ರ ವಿಸರ್ಜನೆಗಾಗಿ ಪಡುವ ಪಾಡು ಅತ್ಯಂತ ಮುಜುಗರದ್ದು. ಬಹುಶಃ ಶಾಲಾ ಕಟ್ಟಡಗಳನ್ನು ಕಟ್ಟುವವರು, ಅದರ ಮೇಲುಸ್ತುವಾರಿ ನೋಡಿಕೊಳ್ಳುವವರು, ಸರಕಾರ ಎಲ್ಲದರಲ್ಲೂ ಗಂಡಸರದೇ ಪ್ರಾಬಲ್ಯ. ಪ್ರಾಬಲ್ಯವೇನು ಬಂತು, ಅದರಲ್ಲಿ ಭಾಗಿಯಾಗುವವರೆಲ್ಲ ಅವರೇ. ಎಷ್ಟಾದರೂ ಪ್ರಕೃತಿ ಕರೆಗ ಮೋಟುಗೋಡೆಯನ್ನು ಅವಲಂಬಿಸುವವರು ತಾನೆ! ಹಾಗಾಗಿ ಅವರಿಗೆ ಹೆಂಗಸರ ಸಂಕಟ, ಸಮಸ್ಯೆಗಳು ಅರ್ಥವಾಗುವುದೇ ಇಲ್ಲ. ದೂರ ಪ್ರಯಾಣದ ರಾತ್ರಿ ಬಸ್ಸುಗಳಲ್ಲಿ ಸುಲಭ್ ಶೌಚಾಲಯ ಇರುವೆಡೆಗಳಲ್ಲಿ ಡ್ರೈವರ್ ಎಂದೂ ಬಸ್ ನಿಲ್ಲಿಸುವುದೇ ಇಲ್ಲ. ಗಂಡಸರಿಗೆ ಬಯಲು ಪ್ರದೇಶವೇ ಬೇಕು ತಾನೆ?

ನಾವು ಶಾಲೆಗೆ ಹೋಗುವ ಕಾಲದಲ್ಲಾದರೆ ಶೌಚಾಲಯ ಇಲ್ಲದಿರುವುದು ಅಂತಹ ಸಮಸ್ಯೆಯೆಂದೇನೂ ಅನ್ನಿಸುತ್ತಿರಲಿಲ್ಲ. ಯಾಕೆಂದರೆ ಶಾಲೆಯ ಸುತ್ತಮುತ್ತ ಎತ್ತರವಾಗಿ ಬೆಳೆದ ಪೊದೆ ಗಿಡಗಳ ಮರೆಯಿತ್ತು. ಇಲ್ಲವಾದರೂ, ದೇಹಬಾಧೆಯನ್ನು ತಡೆದುಕೊಳ್ಳುವುದು ಹೆಣ್ಣುಮಕ್ಕಳಿಗೆ ಸಾಮಾನ್ಯ ತಾನೆ?

ಈಗ ಈ ವಿಚಾರ ಅಷ್ಟು ಸರಳವಾಗಿಲ್ಲ.

ಪ್ರಪಂಚದಾದ್ಯಂತ ಈಗ ಹೆಣ್ಣುಮಕ್ಕಳು ದೈಹಿಕವಾಗಿ ಬಹುಬೇಗನೆ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಹಿಂದೆಲ್ಲಾ ಸರಾಸರಿ ಹನ್ನೆರಡರಿಂದ ಹದಿನಾರು ವರುಷಕ್ಕೆ ಋತುಚಕ್ರ ಆರಂಭವಾಗುತ್ತಿತ್ತು. ಅದು ಈಗ ಎಂಟಕ್ಕೆ ಇಳಿದಿದೆ ಎಂದು ಚೀನಾದಲ್ಲಿ ನಡೆಸಿದ ಸಮೀಕ್ಷೆಯೊಂದು ಹೇಳುತ್ತಿದೆ. ಶೀತ ಪ್ರದೇಶಕ್ಕಿಂತ ಉಷ್ಣ ವಲಯದಲ್ಲಿ ಹುಡುಗಿಯರು ಬಹುಬೇಗನೆ ಕೌಮಾರ್ಯವನ್ನು ದಾಟಿ ಬರುತ್ತಾರೆ.

ನಾಲ್ಕನೇ ಕ್ಲಾಸಿನಲ್ಲಿ ಓದುತ್ತಿದ್ದ ಬಾಲೆಯೊಬ್ಬಳು ಋತುಮತಿಯಾಗಿದ್ದಳು. ಅವಳ ಅಮ್ಮ ದಿಕ್ಕು ತೋಚದೆ ಅಳುತ್ತ ಕುಳಿತದ್ದು, ಆ ಹುಡುಗಿ ಪಿಳಿಪಿಳಿ ಕಣ್ಣು ಬಿಡುತ್ತಾ, “ನನ್ನಿಂದ ಏನು ತಪ್ಪಾಗಿದೆ” ಎಂದು ತೋಚದೆ ಗಲಿಬಿಯಾದದ್ದು ಇತ್ತೀಚೆಗೆ ನನ್ನ ಗಮನಕ್ಕೆ ಬಂದ ವಿಚಾರ.

ಹೆಣ್ಣುಮಕ್ಕಳಿಗೆ ಇಂಥದೊಂದು ಸೂಕ್ಷ್ಮ ಸಮಯದಲ್ಲಾದರೂ ತೀರಾ ಖಾಸಗಿ ಪರಿಸರ ಬೇಕು. ನಿರ್ಭೀತಿಯಿಂದ ಯಾವುದೇ ಅಳುಕು ಇಲ್ಲದೆ ಅದಕ್ಕೆ ತಕ್ಕ ವ್ಯವಸ್ಥೆಯನ್ನು ಮಾಡಿಕೊಳ್ಳುವ ವಾತಾವರಣ ಬೇಕು. ಆದರೆ ಅಂಥ ಪರಿಸರ ನಮ್ಮ ಗ್ರಾಮಂತರ ಶಾಲೆಗಳಲ್ಲಿ ಎಲ್ಲಿದೆ?

ನಮ್ಮ ಕಾಲದಲ್ಲಾದರೆ ವಾರಗಟ್ಟಲೆ ಶಾಲೆಗೆ ಬಾರದಿದ್ದರೂ ಯಾರೂ ಕೇಳುತ್ತಿರಲಿಲ್ಲ. ಈಗಿನ ಕಲಿಕಾ ವಿಧಾನ, ಬೋಧನಾ ಕ್ರಮ ಎಲ್ಲವೂ ಭಿನ್ನ. ಹಾಗಾಗಿ ನಾಲ್ಕೈದು ದಿವಸ ರಜೆ ಹಾಕುವಂತಿಲ್ಲ. ಸ್ಯಾನಿಟರಿ ನ್ಯಾಪ್ ಕಿನ್ನುಗಳು ದುಬಾರಿ. ಅವು ನಗರ ಪ್ರದೇಶದ ಹೆಣ್ಣುಮಕ್ಕಳಿಗೆ ಮಾತ್ರ ಎಟುಕಬಲ್ಲವು.

ನಗರ ಪ್ರದೇಶದಲ್ಲಿ ಓದುತ್ತಿರುವ ಹೆಣ್ಣುಮಕ್ಕಳು ಈ ವಿಚಾರದಲ್ಲಿ ಪುಣ್ಯವಂತರು. ಅಲ್ಲಿ ಶಾಲೆಗಳಲ್ಲಿ ಹುಡುಗಿಯರಿಗೆಂದೇ ಪ್ರತ್ಯೇಕ ಶೌಚಾಲಯಗಳಿರುತ್ತವೆ. ಕೆಲವು ಶಾಲಾ ಕಾಲೇಜುಗಳಲ್ಲಿ ಮಹಿಳೆಯರಿಗಾಗಿಯೇ ವಿಶ್ರಾಂತಿ ಕೊಠಡಿಗಳಿರುತ್ತವೆ. ಅದೂ ಅಲ್ಲದೆ ಕೆಲವು ಶಾಲೆಗಳಲ್ಲಿ ಹುಡುಗಿಯರಿಗೆ ತುರ್ತು ಸನ್ನಿವೇಶಗಳಲ್ಲಿ ಸ್ಯಾನಿಟರಿ ಪ್ಯಾಡ್ ಗಳನ್ನೇ ಒದಗಿಸುವ ವ್ಯವಸ್ಥೆ ಇದೆ. ಅದಕ್ಕಾಗಿಯೇ ನಿರ್ದಿಷ್ಟ ಮಹಿಳಾ ಟೀಚರ್ ಗಳಿರುತ್ತಾರೆ.

ಖಾಸಗಿ ಶಾಲೆಗಳಲ್ಲಿ ಮಹಿಳಾ ಶಿಕ್ಷಕಿಯರೇ ಅಧಿಕ ಸಂಖ್ಯೆಯಲ್ಲಿರುತ್ತಾರೆ. ಹಾಗಾಗಿ ಅವರು ಕೆಲವು ಸಂದರ್ಭಗಳಲ್ಲಿ ಆಪ್ತ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸುತ್ತಾರೆ. ಗುಣ, ನಡತೆಗಳಿಂದ ಹಿಡಿದು ಬಟ್ಟೆಬರೆಯ ತನಕ ಅಕ್ಕನಂತೆ, ಗೆಳತಿಯಂತೆ, ತಾಯಿಯಂತೆ ಮಾರ್ಗದರ್ಶನ ನೀಡುತ್ತಾರೆ. ಈ ಭಾಗ್ಯ ಗ್ರಾಮಾಂತರ ಶಾಲೆಯ ಮಕ್ಕಳಿಗೆ ಎಲ್ಲಿಂದ ಬರಬೇಕು?

ನಮ್ಮ ಶಿಕ್ಷಣ ಪದ್ಧತಿಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಯಾರೂ ಗಂಭೀರವಾಗಿ ತೆಗೆದುಕೊಂಡೇ ಇಲ್ಲ. ಮಕ್ಕಳ ಮನಸ್ಸು ಚಿಗುರೊಡೆಯುವ ಕಾಲ ಅದು. ಅದು ಕೀಳರಿಮೆಯಿಂದ ಮುದುಡುವಂತೆ ಮಾಡಬಾರದು. ಮುಕ್ತವಾಗಿ ಹಾರಾಡಲು ಏನೆಲ್ಲಾ ವ್ಯವಸ್ಥೆ ಮಾದಬೇಕೋ ಅದನ್ನು ಮಾಡಲೇಬೇಕು.

ಶಾಲೆಗೊಂದು ಶೌಚಾಲಯ ಕಟ್ಟುವುದಕ್ಕೆ ಲಕ್ಷಗಟ್ಟಲೆ ಹಣವೇನೂ ಬೇಕಾಗುವುದಿಲ್ಲ. ಊರಿನ ಗಣ್ಯ ವ್ಯಕ್ತಿಯೊಬ್ಬ ತನ್ನ ವೈಯಕ್ತಿಕ ಹಣದಿಂದಲೇ ಇದನ್ನು ಮಾಡಬಹುದು. ಚೆನ್ನಾಗಿ ಸಂಪಾದನೆಯಿರುವ, ವಿದೇಶಗಳಲ್ಲಿ ವಾಸಿಸುತ್ತಿರುವ ಹಳೆ ವಿದ್ಯಾರ್ಥಿಯೊಬ್ಬನೂ ಇದನ್ನು ಮಾಡಬಹುದು. ಅಥವಾ ಊರಿನ ಯುವಕ ಮಂಡಲ-ಯುವತಿ ಮಂಡಲದಂತಹ ಸಾಮಾನ್ಯ ಸಂಘಟನೆ ಕೂಡ ಈ ವೆಚ್ಚವನ್ನು ಭರಿಸಬಹುದು. ಊರಿನಲ್ಲಿ ಯಾರಾದರೂ ಸತ್ತಾಗ ಅಥವಾ ಧಾರ್ಮಿಕ ಕಾರ್ಯಗಳನ್ನು ನಡೆಸುವಾಗ ಮಾಡುವ ಅನ್ನ ಸಂತರ್ಪಣೆಯಲ್ಲಿ ವಿನಿಯೋಗವಾಗುವ ಹಣದಲ್ಲಿ ಒಂದಂಶವನ್ನು ಉಪಯೋಗಿಸಿಕೊಂಡರೂ ಶೌಚಾಲಯ ನಿರ್ಮಾಣವಾಗುತ್ತದೆ. ಮದುವೆಗೆ ಖ್ರ್ಚಾಗುವ ಹಣದಲ್ಲಿ ಶಾಲೆ ಕಟ್ಟಡವೇ ನಿರ್ಮಾಣವಾಗಬಹುದು. ಅದು ಬೇರೆ ವಿಚಾರ.

ನಮ್ಮ ಶಾಲೆಯಲ್ಲಿ ಶೌಚಾಲಯ ಇದೆ ಬಿಡ್ರಿ ಎಂದು ಕೆಲವರು ಅನ್ನಬಹುದು. ಆದರೆ ಅವುಗಳಿಗೆ ನೀರಿನ ವ್ಯವಸ್ಥೆ ಇದೆಯಾ ನೋಡಿ. ಖಂಡಿತವಾಗಿಯೂ ಇರುವುದಿಲ್ಲ. ನಮ್ಮಲ್ಲಿ ಶೌಚಾಲಯ ನಿರ್ಮಿಸುವ ವಿನ್ಯಾಸವೇ ವಿಚಿತ್ರ. ಮೇಲ್ಛಾವಣಿ ಇಲ್ಲದ ಅರ್ಧ ಎತ್ತರಿಸಿದ ಗೋಡೆಗಳು. ಅದರೊಳಗೆ ಉದ್ದನೆಯ ಜಾಗವನ್ನೇ ಮೋಟುಗೋಡೆಗಳಿಂದ ವಿಂಗಡಿಸಿ ಸ್ವಲ್ಪ ಎತ್ತರಿಸಿದ ಜಾಗ. ನಡೆದಾಡಲು ಕಿರು ಹಾದಿ. ಒಳಗೆ ಪ್ರವೇಶಿಸಿದೊಡನೆ ವಿಸರ್ಜನೆ ಮಾಡಲು ಕುಳಿತವರ ಹಿಂಬದಿ ಕಣ್ಣಿಗೆ ಬೀಳುತ್ತದೆ. ಪ್ರೈವೆಸಿಯೇ ಇಲ್ಲದ, ವಾಕರಿಕೆ ಬರುವ ಜಾಗ. ಇಂತಹ ಪರಿಸರದಲ್ಲಿ ತಮ್ಮ ಹೆಣ್ತನವನ್ನು ಕಾಪಾಡಿಕೊಂಡು ನಮ್ಮ ಹುಡುಗಿಯರು ಬೆಳೆಯಬೇಕು. ಹುಡುಗಿಯರ ಹೆಣ್ತನದ ವಿಷಯದಲ್ಲಿ ನಮ್ಮ ಸಮಾಜ ಕಣ್ಣು ಮುಚ್ಚಿ ಕೂತಿದೆ. ಅಥವಾ ಅಸಡ್ಡೆಯಿಂದ ವರ್ತಿಸಿದೆ.

ಬಹುಶಃ ನಮ್ಮ ಗಂಡಸರಿಗೆ ಮಹಿಳೆಯರ ಒಳ ಜಗತ್ತು ಅರ್ಥವಾಗುವುದೇ ಇಲ್ಲವೇನೊ. ಸ್ನಾನಕ್ಕಾಗಿ, ಬಹಿರ್ದೆಶೆಗಾಗಿ ಕತ್ತಲಾಗುವುದನ್ನೇ ಕಾಯುತ್ತ ಕುಳಿತಿರುವ ಎಷ್ಟೊಂದು ಮಹಿಳೆಯರು ನಮ್ಮ ಸುತ್ತಮುತ್ತಲೂ ಇದ್ದಾರೆ. ಸ್ವಲ್ಪ ಪ್ರಯತ್ನ ಪಟ್ಟರೆ ಇವರ ಬದುಕು ಹಸನುಗೊಳ್ಳಲು ಸಾಧ್ಯವಿಲ್ಲವೇ?

(“ಹಂಗಾಮ”ದಿಂದ ಹೆಕ್ಕಿದ್ದು) 

‍ಲೇಖಕರು avadhi

August 12, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚೇತನಾ ಎಂಬ ‘ಗಾನಾ ಜೋಯ್ಸ್

ಚೇತನಾ ಎಂಬ ‘ಗಾನಾ ಜೋಯ್ಸ್

' ಕನಸುಗಾರ ವೆಂಕಟ್ರಮಣ ಗೌಡರು 'ಹಂಗಾಮ' ಆರಂಭಿಸಿದಾಗ ಮೂಡಿ ಬಂದ ವಿಶಿಷ್ಟ ಲೇಖಕಿ ಗಾನಾ ಜೋಯ್ಸ್. ಈಗ ಈಕೆ ಚೇತನಾ ತೀರ್ಥಹಳ್ಳಿ. ಈಗಾಗಲೇ...

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಹಳೆಯ ನೆನಪು ಮತ್ತು ಒಂದು ಹೊಸ ಪುಸ್ತಕ ಈಗ ಅದೆಲ್ಲ ಮಜಾ ಅನಿಸತ್ತೆ. ನಾನು ಒಂದನೇ ಕ್ಲಾಸಿಂದ ಫಸ್ಟ್ ಬಿಎಸ್ಸಿ ವರೆಗೂ ಒಂದೇ ಒಂದು ನೋಟ್ಸೂ...

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

-ನಟರಾಜ್ ಹುಳಿಯಾರ್ 'ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡಿ'ನ ಸ್ಥಿತಿಯನ್ನು ನಿಷ್ಠುರ ಸ್ತ್ರೀವಾದಿ ದೃಷ್ಟಿಕೋನದಿಂದ ಗ್ರಹಿಸಿ ಚೇತನಾ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This