ಕತ್ತಿಯಂಚಲ್ಲಿ ಹೈದರಾಲಿ…

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ.

ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ.

ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ.

ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ ಸುಷ್ಮಿತಾ ‘ಮಣ್ಣಪಳ್ಳದ ಮೂಕಿಚಿತ್ರ’ದಲ್ಲಿ ಊರಿನ ಯಾರೂ ಕಾಣದ ಚಿತ್ರಗಳನ್ನು ಕಟ್ಟಿ ಕೊಡಲಿದ್ದಾರೆ.

ನಮ್ಮೂರಿಗೆ ಹೈದರಾಲಿ ಬಂದು ಇಪ್ಪತ್ತು ವರ್ಷಗಳಾಗಿವೆ ಅಷ್ಟೇ. ಅಷ್ಟರಲ್ಲೇ ಅವನ ಕಾಲಿನ ಬಲ ಮತ್ತು ಕತ್ತಿಯ ಝಳಕ್ಕೆ ಸೋತು ಮಣಿಪಾಲ ಅವನಿಗೆ ಉಳಿಯುವುದಕ್ಕೆ ಜಾಗ ಕೊಟ್ಟಿದೆ. ಆದರೆ ಮಣಿಪಾಲಿಗರಿಗೆ ಈ ಹೈದರಾಲಿ ಯಾವ ಸೇನಾ ನಾಯಕನೂ ಆಗದೆ, ದಿನ ತಮ್ಮ ಮನೆಯ ದಾರಿಯಲ್ಲಿಯೇ ಕಂಡರೂ ಗೊತ್ತೇ ಇಲ್ಲದ ಪರವೂರಿಗ ಅಷ್ಟೇ.

ದೇಶದ ಮೂಲೆ ಮೂಲೆಯಿಂದ ಭಕ್ತರು ನಂಬಿ ಹೋಗುವ ತಿರುಪತಿ ಅವನೂರು. ಆದರೆ ಊರಲ್ಲಿರುವ ಗದ್ದೆ, ಹೊಲ, ದನ, ಕರುಗಳೆಲ್ಲ ನಂಬಿ ದಿನ ದೂಡೋಕೆ ಎಲ್ಲಾಗುತ್ತೆ ಅಂತ ಉಳಿದವರ ಹಾಗೆ ಆ ಊರು ಬಿಟ್ಟು ಈ ಶಹರಕ್ಕೆ ಬಂದವನು. ಬೇಸಾಯವನ್ನು ಬಿಟ್ಟು ಬರುವಾಗ ಅಲ್ಲಿಂದ ತಂದದ್ದು ಬಾಳಿಕೆ ಬರುವ ಮರದ ತುಂಡಿಗೆ ಕೂರಿಸಿದ, ಕಾಲಲ್ಲಿ ಮೆಟ್ಟುವ, ಕತ್ತಿ ಸಾಣೆ ಹಾಕುವ ರಾಟೆಯೊಂದನ್ನು ಮಾತ್ರ. ಅದನ್ನೇ ಹೊತ್ತು ಮನೆ ಮನೆಗೆ ತಿರುಗುವುದು, ಮುಂಡಾದ ಸಲಕರಣೆಗಳಿಗೆ ಸಾಣೆ ಹಿಡಿಯುವುದು, ಹರಿತ ಮಾಡುವುದು ಹೈದರಾಲಿಯ ದುಡಿಮೆ.

ಮಣಿಪಾಲಕ್ಕೆ ಶರಹದ ಛಾಯೆ ಬಂದಾಗಿನಿಂದ ಈ ತರದ ಉಪಉದ್ಯೋಗಗಳೆಲ್ಲ ಮರೆಯಾಗಿದೆ. ಮೊದಮೊದಲು ಸಾಣೆ ಹಿಡಿಯುತ್ತಿದ್ದ ಊರಿನವರೆಲ್ಲ ಒಂದೋ ಉದ್ಯೋಗ ಬದಲಿಸಿದ್ದಾರೆ, ಇಲ್ಲವೋ ನಿಲ್ಲಿಸಿದ್ದಾರೆ.

ಹೊಸ ಜೀವನ ಶೈಲಿಯೊಂದಿಗೆ ಬಂದ ವಿನೂತನ ರೀತಿಯ ಚಾಕು, ಚೂರಿ, ಕತ್ತಿಗಳು, ಹೊಸ ನಮೂನೆಯ ಹರಿತಗೊಳಿಸುವ ಮಷೀನುಗಳು ಮತ್ತು ಪುನಃ ಪುನಃ ಸಾಣೆ ಹಿಡಿಯುವುದನ್ನು ನಿಲ್ಲಿಸಿದ ಊರಿನವರು ಇವರ ಕೆಲಸವನ್ನು ಒಂದು ಹಂತದಲ್ಲಿ ಕಡಿಮೆ ಮಾಡಿಸಿಯೂ ಇದ್ದರೂ. ಇದೇ ಹೊತ್ತಲ್ಲಿ ಆಂಧ್ರದ ಹಳ್ಳಿಗಳಿಂದ ತಮ್ಮ ವಿಶಿಷ್ಟ ರಾಟೆಯನ್ನು ಹಿಡಿದು ಹೈದರಾಲಿ ಮತ್ತು ಗೆಳೆಯರು ಮಣಿಪಾಲಕ್ಕೆ ಬಂದಿದ್ದು.

ಬಿಸಿಲಿಗೆ ಸುಟ್ಟ ಮುಖ ಮತ್ತು ಕೆಂಪು ಕಣ್ಣು, ಬೆನ್ನಿಗೆ ಬಿದ್ದ ರಾಟೆಯನ್ನು ನೋಡಿದರೆ ಇವನ ಉದ್ಯೋಗವನ್ನು ಯಾರೂ ಬೇಕಾದರೂ ಊಹಿಸಬಹುದು. ಹಲಸಿನ ಹಲಗೆಗೆ ಜೋಡಿಯಾಗಿ ಕಬ್ಬಿಣದ ಚಕ್ರ ಇರುವ ಇದೇ ರಾಟೆಯನ್ನು ಬೆನ್ನ ಹಿಂದೆ ಹಿಡಿದು ಮಣಿಪಾಲ, ಪರ್ಕಳ, ಕೋಡಿ, ಕನ್ಯಾನ, ಮಲ್ಪೆ ಹೀಗೆ ಅವನು ಸುತ್ತದೆ ಇರುವ ಹತ್ತಿರದ ಊರುಗಳೇ ಇಲ್ಲ.

ಇಪ್ಪತ್ತು ವರ್ಷದಲ್ಲಿ ತನ್ನ ಕಾಲ ಬಲದಲ್ಲೇ  ಉಡುಪಿ ಜಿಲ್ಲೆಯ ಮೂಲೆ ಮೂಲೆಗಳನ್ನೂ ಹೈದರ್ ತಿರುಗಿದ್ದಾನೆ. ಅತೀ ದೂರ ಹೋಗಲಿಕ್ಕಾಗದ ದಿನಗಳಲ್ಲಿ ಮಣಿಪಾಲದ ಸುತ್ತ-ಮುತ್ತ, ಅಕ್ಕ-ಪಕ್ಕ ಎಲ್ಲವೂ ಅವನಿಗೆ ನಿತ್ಯ ನೌಕರಿಯ ದಾರಿ.

ವರ್ಷದ ಯಾವ ದಿನವಾದರೂ ಬೆಳ್ಳಂಬೆಳಗ್ಗೇ ಕಲ್ಸಂಕದ ತನ್ನ ಸಣ್ಣ ಕೋಣೆಯನ್ನು ಬಿಟ್ಟು, ಮರದ ರಾಟೆಯನ್ನು ಹೆಗಲಿಗೇರಿಸಿ ಮಣಿಪಾಲದ ಗುಡ್ಡ ಹತ್ತಲಿಕ್ಕೆ ಶುರು ಮಾಡಿದರೆ ಅವನು ಥೇಟು ಸೈನಿಕನಂತೆಯೇ ಕಾಣುವುದು. ಹಿಂದೆ ಹೋದ ದಾರಿ ತಪ್ಪಿಸಿ ಹೊಸ ದಾರಿ, ಹೊಸ ಊರು, ಹೊಸ ಮನೆಗಳನ್ನು ಹುಡುಕುದರೊಂದಿಗೆಯೇ ಅವನ ದಿನ ಶುರು.

“ಕತ್ತಿ… ಚೂರಿ… ಚಾಕು… ಸಾಣೆ… ಸಾಣೆ … ಸಾಣೆ… ಸಾಣೆ…” ಎಂದು ಕೂಗುತ್ತಾ ಪ್ರತೀ ಮನೆಯ ಬಾಗಿಲನ್ನು ಹಾದು ಹೋಗುವಾಗಲೂ ಧನಿಯ ಸ್ತರವನ್ನು ಇನ್ನಷ್ಟು ಏರಿಸಿ ಅವರ ಗಮನ ಸೆಳೆಯಲು ಪ್ರಯತ್ನಿಸಿ, ಮನೆಯ ಯಾರದರೂ ಹೊರಗೆ ಕಂಡರೆ ತನ್ನ ತೆಲುಗು ಮತ್ತು ಉರ್ದು ದಾಟಿಯ ಕನ್ನಡದಲ್ಲಿ “ಒಂದು ಕತ್ತಿ ಸಾಣೆ ಹಿಡಿದಕ್ಕೆ ನಲವತ್ತು, ಚೂರಿ ಸಾಣೆಗೆ ಮೂವತ್ತು, ಹೊಸ ಚೂರಿಗೆ ಎಂಬತ್ತು” ಎನ್ನುತ್ತಾ ತಮ್ಮ ದುಡಿಮೆಗೆ ತಾವೇ ಹಾಕಿಕೊಂಡ ಬೆಲೆಯನ್ನ ಬಾಯಿಪಾಠ ಒಪ್ಪಿಸುವಾಗ ನೀವೇ ಬೋಣಿ ಮಾಡಿಯಮ್ಮ ಹೆಚ್ಚು ದೂರ ನಡೆಯುವುದು ಇವತ್ತಾದರೂ ತಪ್ಪಿತು ಎಂದು ಒಳಗೊಳಗೇ ಹೇಳಿಕೊಳ್ಳುತ್ತಿರುತ್ತಾನೆ.

ಹೊತ್ತು ಕಂತುವವರೆಗೂ ಮನೆ, ಹೋಟೆಲ್, ಅಂಗಡಿ ಬಾಗಿಲು ಹೀಗೆ ಎಲ್ಲೆಲ್ಲಾ ತನ್ನ ಅವಶ್ಯಕತೆ ಇರಬಹುದು ಎಂಬ ಲೆಕ್ಕಾಚಾರದಲ್ಲೇ ತಿರುಗಿ ದಿನ ದೂಡುತ್ತಾನೆ. ಮತ್ತೆ ಸಂಜೆ ತನ್ನ ರೂಮಿಗೆ ಬಂದು ನಾಳೆ ಯಾರ್ಯಾರು ಯಾವ ದಿಕ್ಕಿಗೆ ಹೋಗುವುದು ಎಂಬ ಮಾತಿನಲ್ಲೇ ದಿನ ಮುಗಿಸುತ್ತಾನೆ.

ಅಂತಹ ಪಾಕ ಪ್ರವೀಣರಲ್ಲದ ಇವನು ಗೊತ್ತಿದ್ದಷ್ಟು ಅಡಿಗೆ ಮಾಡಿ ರಾತ್ರಿ ಉಣ್ಣುವುದು ಮತ್ತು ಅದೇ ತಂಗಳನ್ನ ಮಾರನೇ ದಿನ ಕಟ್ಟಿಕೊಂಡು ಕೆಲಸಕ್ಕೆ ಹೋರಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾನೆ. ರಾಟೆಯ ಭಾರವೇ ಹೊರಲಾಗದು ಅನ್ನಿಸಿದ ದಿನವಂತೂ ನೀರು ಮತ್ತು ತಂಗಳ ಡಬ್ಬಿಯನ್ನು ಬಿಟ್ಟು ಖಾಲಿ ಹೊಟ್ಟೆ ದಿನ ಮುಗಿಸಿದ್ದೂ ಇದೆ. ಆದರೆ ಎಂತ ನಿರಾಸೆಯ ದಿನದಲ್ಲೂ ಊರಿಗೆ ವಾಪಸ್ಸು ಹೋಗಿ ಬಿಡುವೆ ಅನ್ನುವ ವಿಚಾರವೇ ಮಾಡಿಲ್ಲ.

ನಾಲ್ಕು ಐದು ತಿಂಗಳಿಗೊಮ್ಮೆ ತಿರುಪತಿಗೆ ಹೋಗಿ ಬರುವ ಅಭ್ಯಾಸದ ಮಧ್ಯದಲ್ಲೇ ಹೈದರನಿಗೆ ಮದುವೆ ಕೂಡ ಮಾಡಿಸಿದ್ದಾರಂತೆ. ಅವನು ನಡೆದು ನಡೆದು ಸುಸ್ತಾಗಿ ಇನ್ನೇನು ರೂಮಿಗೆ ಹೋಗಿ ಮಲಗಿಯೇ ಬಿಡೋಣ ಅಂದೆನಿಸಿದಾಗೆಲ್ಲ ಪಾಕೆಟ್ ಜೇಬಿನಿಂದ ಹೆಂಡತಿ ಖಲೀಫಾಳ ಫೋಟೋ ತೆಗೆದು ನೋಡಿ ಇನ್ನೂ ಎರಡು ಮೂರು ಗಂಟೆ ಜಾಸ್ತಿಯೇ ನಡೆದು ಬಿಡುತ್ತಾನಂತೆ.

“ಊರಲ್ಲಿ ಅಂತ ಸೌಕರ್ಯ ಏನೂ ಇಲ್ಲ. ಹಾಗಂತ ಇಲ್ಲೂ ಅವಳನ್ನ ಕರೆಸೋಕೆ ಆಗಲ್ಲ. ನನ್ನೊಟ್ಟಿಗೆ ರೂಮಲ್ಲಿ ನಮ್ಮೂರಿನ ಸಾಥಿಗಳು ಇಬ್ಬರು ಇದ್ದಾರೆ. ಅವರಿಗೂ ನನ್ನದೇ ಕೆಲಸ. ಸದ್ಯಕ್ಕೆ ಖಲೀಫಾ ಮನೇಲಿ ಅಪ್ಪನನ್ನ ನೋಡಿಕೊಂಡು ಇದಾಳೆ. ಅನ್ನೋವಾಗ ಅವನ ಮುಖ ಸಪ್ಪಗಾಗುತ್ತದೆ. 

“ಸಾಧ್ಯ ಆದರೆ ಒಂದು ಅಂಗಡಿ ಹಾಕಿ ಕೂತು ಬಿಡಬೇಕು ಅನ್ನೋ ಆಸೆ. ಎಷ್ಟು ಅಂತ ನಡೆಯೋದು?  ಆದರೆ ಅದಕ್ಕೂ ದುಡ್ಡು ಬೇಕಲ್ಲ. ಅಲ್ಲದೆ ಈಗೀಗ ನಮ್ಮ ಹಾಗೆ ಸಾಣೆ ಹಿಡಿಯೋರು ಈಗ ಊರಲ್ಲಿ ಸುಮಾರು ಜನ ಆಗಿದ್ದಾರೆ. ನಮ್ಮನ್ನ ನೋಡಿ ಊರಲ್ಲಿ ಸಾಣೆ ಬಿಟ್ಟವರೂ ವಾಪಸ್ಸು ಶುರು ಮಾಡಿದ್ದಾರೆ. ನಾವು ಕೂತಲ್ಲೇ ಇದ್ದರೆ ನಮ್ಮಲ್ಲಿಗೆ ಯಾರು ಬರ್ತಾರೆ? ನಮ್ಮನ್ನ ಮನೆ ಬಾಗಿಲಲ್ಲಿ ನೋಡಿಯಾದರೂ ಅವರಿಗೆ ಮೊಂಡು ಕತ್ತಿ ನೆನಪಾಗಿ ಒಂದಿಷ್ಟು ವ್ಯಾಪಾರ ಆಗೋಗುತ್ತೆ.” ಎಂಬುದು ಅವನ ವಿಚಾರ.

“ದಿನಕ್ಕೆ ಹತ್ತು ಮನೆಯಲ್ಲಿ ನಿಲ್ಲಿಸಿದರೂ ಜೀವನಕ್ಕೆ ಬೇಕಾದಷ್ಟು ಆಗುತ್ತೆ. ಆದರೆ ದುಡಿಮೆ ದೇವರು ಕೊಟ್ಟ ಹಾಗೆ. ಕೆಲವು ದಿನ ಖಾಲಿ ಕೈ ಮತ್ತು ಖಾಲಿ ಹೊಟ್ಟೆ. ಹೇಗಾದರೂ ಬದುಕದೆ ಇರೋಕೆ ಆಗುತ್ತಾ? ಎಷ್ಟು ದಿನ ರಾಟೆಯ ಚಕ್ರ ನನ್ನ ಕಾಲ ಬಲಕ್ಕೆ ಓಡುತ್ತೋ ಅಷ್ಟು ದಿನ ಅಪ್ಪ ಮತ್ತು ಖಲೀಫಾ ಹೊಟ್ಟೆ ತುಂಬಿ ಊಟ ಮಾಡುತ್ತಾರೆ.

ನನಗೂ ಇಲ್ಲೇ ಇರೋದು ಅಭ್ಯಾಸ ಆಗಿ ಹೋಗಿದೆ. ವಾಪಸ್ಸು ತಿರುಪತಿಗೆ ಹೋಗಿ ಏನು ಮಾಡುವುದು? ಸದ್ಯಕ್ಕಂತೂ ಇಲ್ಲೇ ಬದುಕು. ಮಕ್ಕಳು ಮರಿ ಆದ ಮೇಲೆ ನೋಡುವ” ಎಂದು ಅವನಂದದ್ದು ಅತೀ ಮುಗ್ದತೆಯಲ್ಲೇ.

ಇಲ್ಲಿ ಕಣ್ಣಿಗೆ ಕಾಣುವ ಉದ್ಯೋಗಗಳ ಪಟ್ಟಿಗಿಂತ ಕಾಣದುದರ ಪಟ್ಟಿಯೇ ಉದ್ದ. ಅದರೊಟ್ಟಿಗೆ ಅವುಗಳನ್ನು ನಂಬಿ ಬದುಕುವ ದುಡಿಮೆಗಾರರ ಸಂಖ್ಯೆಯೂ ಕೂಡ. ಕೆಲವೊಮ್ಮೆಯಂತೂ ಸಾಣೆ ಹಾಕುವವರು ಇಲ್ಲದೇ ಇದ್ದರೂ ನಮ್ಮಂತ ಮಣಿಪಾಲಿಗರಿಗೆ ಅದು ಹೆಚ್ಚು ವ್ಯತ್ಯಾಸವನ್ನೇನು ಮಾಡುವುದಿಲ್ಲ.

ನಮಗೆ ಇವತ್ತು ಕೊಂಡದ್ದು ಮೊಂಡಾದರೆ ಮತ್ತೊಂದು ಖರೀದಿಸಿದರಾಯಿತು. ಇನ್ನು ಅತೀ ಅಗತ್ಯವಿರುವ ಹರಿತ ಸಲಕರಣೆಗಳನ್ನು ಬಳಸುವ ಉದ್ದಿಮೆದಾರರಿಗೆ ತಕ್ಕುದಾದ ಮಷೀನುಗಳೂ ಮಾರುಕಟ್ಟೆಗೆ ಬಂದಿವೆ. ಸಣ್ಣ ಪುಟ್ಟ ಕೂಲಿ ಕಾರ್ಮಿಕರು ದುಡ್ಡು ಕೊಟ್ಟು ಸಾಣೆ ಹಾಕಿಸಿಕೊಳ್ಳುವಷ್ಟು ಸ್ಥಿತಿವಂತರಲ್ಲ. ಆದರೆ ಇವೆಲ್ಲವನ್ನು ಮೀರಿ ಹೈದರಾಲಿ ತನ್ನ ರಾಟೆಯಲ್ಲಿಯೇ ಬದುಕು ಕಟ್ಟಿಕೊಳ್ಳುವುದಕ್ಕೆ ಊರಿಡೀ ನಡೆಯುತ್ತಾನೆ.

ಬದುಕುವುದಕ್ಕೆ ನಡೆದು ನಡೆದು ಅವನ ಕಾಲು ಕೂಡ ಸಾಣೆ ಹಿಡಿದ ಕತ್ತಿಯಷ್ಟೇ ಹರಿತವಾಗಿದೆಯಷ್ಟೆ. ಮಣಿಪಾಲದ ಹಾದಿ ಬೀದಿಯಲ್ಲೂ ಅವನ ಹೆಜ್ಜೆ ಗುರುತಿದೆಯಾದರೂ ಹೈದರಾಲಿ ಇಲ್ಲಿನ ಇತಿಹಾಸದಲ್ಲಿ ಉಳಿಯುವುದೇ ಇಲ್ಲ. ಯಾಕೆಂದರೆ ದುಡಿಮೆಗೆ ನಡೆಯುವವರ ಹೆಜ್ಜೆಗಳು ಲೆಕ್ಕಕ್ಕೆ ಸಿಗುವುದಿಲ್ಲ.

ಇಲ್ಲಿರುವ ವಿಡಿಯೋವನ್ನೂ ನೋಡಿ..

October 13, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ವಿಫಲ ಪ್ರೇಮಕ್ಕೆ ಐದು ಉದಾಹರಣೆಗಳು

ವಿಫಲ ಪ್ರೇಮಕ್ಕೆ ಐದು ಉದಾಹರಣೆಗಳು

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: