'ಕತ್ಳು ಸತ್ಯ' ಅವರ ಪುಸ್ತಕಗಳನ್ನು ಕೊಳ್ಳುತ್ತೀರಾ..?

-ಮಂಜುನಾಥ ಕೊಳ್ಳೇಗಾಲ
ನನ್ನ ಬರಹಗಳು

ಮೊನ್ನೆ ಸತ್ಯ ಇದ್ದಕ್ಕಿದ್ದಹಾಗೆ ಫೋನಾಯಿಸಿ “ನನ್ನ ಲೈಬ್ರರಿ sale ಮಾಡಬೇಕು ಅಂತಿದೀನಿ ಮಂಜು” ಅಂದಾಗ ಒಂದು ಕ್ಷಣ ಅವರು ಜೋಕ್ ಮಾಡುತ್ತಿದ್ದಾರೆನ್ನಿಸಿತು. ಕೂಲಾಗಿ “ಸರಿ ಮಾಡಿ, ಎಷ್ಟು ಬೇಕು ಹೇಳಿ ಕೊಡೋಣ” ಎಂದೆ. ನಾವು ಆಗಾಗ ಭೆಟ್ಟಿಯಾದಾಗೆಲ್ಲಾ ಅದೂ ಇದು ಕಾಡುಹರಟೆಯ ನಡುವೆ ಏನಾದರೂ ಹಣಕಾಸಿನ ಕಷ್ಟ-ಸುಖದ ವಿಷಯ ಬಂದರೆ “ನನ್ನ ಲೈಬ್ರರಿ ತಗೊಂಡು ಎರಡು ಸಾವಿರ ಕೊಡಿ ಮಂಜು” ಎನ್ನುವುದು, ನಾನು “ಅದು ತುಂಬಾ ಜಾಸ್ತಿಯಾಯಿತು” ಎಂದು ನಗೆಯಾಡುವುದು ವಾಡಿಕೆ. ಒಂದು ಕ್ಷಣ ಮೌನದ ನಂತರ ಹೇಳಿದರು “ಇಲ್ಲ ಮಂಜು, ನಾನು serious ಆಗಿ ಹೇಳ್ತಾ ಇದೀನಿ”.
ಅರೇ, ಹೌದಲ್ಲ. ಮೊನ್ನೆ ತಾನೆ ಹಠಾತ್ತಾಗಿ ತಮ್ಮನನ್ನು ಕಳೆದುಕೊಂಡ ದುಃಖದಲ್ಲಿದ್ದ ಸತ್ಯ ಜೋಕ್ ಮಾಡುವ ಮನಸ್ಥಿತಿಯಲ್ಲೇನೂ ಇಲ್ಲ ಎಂದು ಹೊಳೆಯಿತು. ಮತ್ತೆ? ನಿಜಕ್ಕೂ ಲೈಬ್ರರಿ ಮಾರಿಬಿಡುತ್ತಿದ್ದಾರೆಯೇ? ಕ್ಷಣ ನಂಬಲಾಗಲಿಲ್ಲ. ಹಾಗೊಂದುವೇಳೆ ಇದು ಜೋಕ್ ಅಲ್ಲವೆಂದಾದರೆ, ಈ ಮಾತು ಸತ್ಯನ ಬಾಯಲ್ಲಿ ಬರಲು ಸಾಧ್ಯವೇ ಇರಲಿಲ್ಲ. ಏಕೆಂದರೆ ನಾನು ಬಾಲ್ಯದಿಂದಲೂ ಬಲ್ಲ ಈತ ತಮ್ಮ ಪುಟ್ಟ ಲೈಬ್ರರಿ ಕಟ್ಟಿ ಬೆಳೆಸಿಕೊಂಡಿದ್ದ ಪರಿಯನ್ನು ಕಣ್ಣಾರೆ ಕಂಡಿದ್ದೆ.
ಚಿಕ್ಕಂದಿನಲ್ಲೇ ಸಿನೆಮಾ-ನಾಟಕ-ಸಾಹಿತ್ಯಗಳ ಗೀಳು ಹತ್ತಿಸಿಕೊಂಡು, ಮುಂದೊಮ್ಮೆ ಅದೇನೋ ಸಾಧಿಸುವ ಕನಸು ಕಣ್ಣಲ್ಲಿಟ್ಟುಕೊಂಡು ಓದು ಬಿಟ್ಟು ಊರು ಬಿಟ್ಟು ಬೆಂಗಳೂರು ಸೇರಿದ ಹುಡುಗ, ಕಲಾವಿದನಾಗಿ ಸಾಕಷ್ಟು ಬೆಳೆಯುತ್ತಾ, ಸಿಜಿಕೆ, ಬಿ.ವಿ.ಕಾರಂತ ಇತ್ಯಾದಿ ಘಟಾನುಘಟಿಗಳೊಂದಿಗೆ ದುಡಿಯುತ್ತಾ ಕಲೆಯ ಬದುಕನ್ನು ರೂಪಿಸಿಕೊಂಡರು. ಹವ್ಯಾಸಿ ರಂಗಭೂಮಿ ವಲಯದಲ್ಲಿ “ಕತ್ಲು ಸತ್ಯ” ಎಂದೇ ಹೆಸರಾಗಿದ್ದ ಸತ್ಯನಾರಾಯಣ, “ಬಾವಿ”, “ಡಾಂಬರು ಬಂದದ್ದು” ಇತ್ಯಾದಿ ಸ್ವತಃ ಕೆಲವು ನಾಟಕಗಳನ್ನೂ ರಚಿಸಿದ್ದಲ್ಲದೇ, ರಂಗಕರ್ಮಿ/ನಿರ್ದೇಶಕರಾಗಿ ಕೂಡ ಸಾಕಷ್ಟು ಹೆಸರು ಮಾಡಿದರು.
ಅರಸನ ಅಂಕೆಯಿಲ್ಲದೆ ದೆವ್ವದ ಕಾಟವಿಲ್ಲದೆ ಮನಸ್ಸಿಗೆ ಸರಿಕಂಡದ್ದನ್ನು ಮಾಡುತ್ತಾ, ತನಗಿಷ್ಟವಾದ ಬದುಕು ಬದುಕುವ, ಸರಳಾತಿಸರಳ ಜೀವನ ಶೈಲಿಯ ಸತ್ಯ ನಮಗೆಲ್ಲಾ ಒಂದುರೀತಿ ಅಸೂಯೆ ಹುಟ್ಟಿಸಿದ್ದ ವ್ಯಕ್ತಿ. ಈ ಸಿನಿಮಾ-ನಾಟಕಗಳ ಗೀಳಿಗೆ ಹತ್ತಿಕೊಂಡಂತೆ ಬಂದಿದ್ದ ಮತ್ತೊಂದು ಗೀಳು ಪುಸ್ತಕಗಳದು. ನಾವೆಲ್ಲಾ ಬೇಜಾರಾದಾಗ TV, ಸಿನೆಮಾ ನೋಡಿದರೆ ಈ ಮನುಷ್ಯ ಸುಳಿಯುತ್ತಿದ್ದುದು ಪುಸ್ತಕದ ಅಂಗಡಿಗಳ ಮುಂದೆ. ಊರಲ್ಲಿ ಎಲ್ಲಿ ಪುಸ್ತಕ ಮೇಳವಾದರೆ ಅಲ್ಲಿ ಸತ್ಯ ಹಾಜರು, ಕೈಗೊಂದು ಐದೋ ಆರೋ ಪುಸ್ತಕ ಖರೀದಿಸಿದ್ದೇ ಸೈ. ಕೊಳ್ಳಲು ಸೆಕೆಂಡ್ ಹ್ಯಾಂಡ್, ಫಸ್ಟ್ ಹ್ಯಾಂಡ್, ಅಗ್ಗ, ದುಬಾರಿಯ ಪ್ರಶ್ನೆ ಬರುತ್ತಲೇ ಇರಲಿಲ್ಲ. ಪುಸ್ತಕ ಅಪರೂಪದ್ದಾದರೆ, ಮೌಲಿಕವಾದದ್ದಾದರೆ ಅದು ಮನೆ ಸೇರಲೇಬೇಕು.
ಪುಸ್ತಕದ ಆಯ್ಕೆಯಲ್ಲಿ, ಆಟದ ಸಾಮಾನು ಆಯ್ದುಕೊಳ್ಳುವ ಹುಡುಗನ ತನ್ಮಯತೆ ಇರುತ್ತಿತ್ತು. ತಂದದ್ದು ಅಲಂಕಾರಕ್ಕಲ್ಲ, ಮುಂದೆರಡು ಮೂರು ದಿನ ಪಟ್ಟು ಹಿಡಿದು ಅದನ್ನು ಓದಿ ಮುಗಿಸಬೇಕು. ಬಹಳಷ್ಟು ಪುಸ್ತಕಗಳನ್ನು ಪುಸ್ತಕಮೇಳಗಳಲ್ಲೇ ಖರೀದಿಸುತ್ತಿದ್ದುದರಿಂದ, ಅದರಲ್ಲಿ ಬಹಳಷ್ಟು “ಭಾರಿ” ಪುಸ್ತಕಗಳೇ ಆದ್ದರಿಂದ ಇದೊಂದು ದುಬಾರಿ ಹವ್ಯಾಸವಾಗಿ ಪರಿಣಮಿಸಿತ್ತು. ಇವತ್ತು ಒಂದು ನೂರು ರುಪಾಯಿ ಉಳಿದರೆ ಒಂದು ಪುಸ್ತಕ್ಕಾದರೂ ಆಗುತ್ತದೆ ಎಂದು ಯೋಚಿಸುತಿದ್ದ ಸತ್ಯ, ಗಳಿಸಿದ, ಉಳಿಸಿದ ಹಣವನ್ನೆಲ್ಲಾ ಪುಸ್ತಕ ಕೊಳ್ಳಲು ಸುರಿಯುತ್ತಿದ್ದರು. ಹೀಗಾಗಿ ಈ ಪುಟ್ಟ ಲೈಬ್ರರಿ ಕೇವಲ ಲೈಬ್ರರಿ ಆಗಿರದೆ ಅವರ ವ್ಯಕ್ತಿತ್ವದ ಒಂದು ಭಾಗವಾಗಿತ್ತು. ಸುಮಾರು ೨೫೦೦ ಪುಸ್ತಕಗಳಿರುವ ಆ ಲೈಬ್ರರಿಯಲ್ಲಿ ಒಂದೊಂದು ಪುಸ್ತಕವೂ ಎಲ್ಲೆಲ್ಲಿ ಇದೆ, ಯಾವಾಗ ಕೊಂಡದ್ದು, ಅದರ ಹೂರಣವೇನು, ಯಾವ ಪುಸ್ತಕದ ಅಟ್ಟೆ ಎಲ್ಲಿ, ಯಾವಾಗ, ಏಕೆ ಹರಿದಿದೆ ಇತ್ಯಾದಿ ವಿವರಗಳನ್ನೆಲ್ಲಾ ಕರಾರುವಾಕ್ಕಾಗಿ ತಿಳಿಸಬಲ್ಲಷ್ಟು ತಾದಾತ್ಮ್ಯ ಸಿದ್ಧಿಸಿತ್ತು ಆ ಪುಸ್ತಕಗಳ ಜೊತೆ.ಬಂದವರೆದುರು ಈ ಸಂಗ್ರಹವನ್ನು ಪ್ರದರ್ಶಿಸುವುದೇ ಹೆಮ್ಮೆ. ಅದು ನಿಜ ಕೂಡ. Afterall, the collection was an owner’s pride.

ಇಂಥಾ ಮನುಷ್ಯ ತಾನು ಕಟ್ಟಿ ಬೆಳೆಸಿದ ಈ ಪುಟ್ಟ ಭಂಡಾರವನ್ನು ಮಾರಿಬಿಡಬೇಕೆಂದರೆ, ಬಂದಿರುವ ತುರ್ತು ಸಾಕಷ್ಟು serious ಆಗಿರಲೇ ಬೇಕೆನ್ನಿಸಿತು. ಈ ವೈಯಕ್ತಿಕ ಪ್ರಶ್ನೆಯನ್ನು ನಾನು ಕೇಳದಿದ್ದರೂ, ಅವರು ತಮ್ಮದೇ ಆಗಿ ಉಳಿದಿದ್ದ ಈ ಏಕಮಾತ್ರ “ಆಸ್ತಿ”ಯನ್ನು ಮಾರಿಬಿಡುವ ನಿರ್ಧಾರಕ್ಕೆ ಬರುವ ಮುನ್ನ ಸುಮಾರು ಎರಡು ತಿಂಗಳ ಕಾಲ ತೊಳಲಾಟವನ್ನನುಭವಿಸಿದ್ದರೆನ್ನುವುದು ತಿಳಿಯುತ್ತಿತ್ತು. ಬಂದ ಕುತ್ತು ಕ್ಷಣಿಕವೇ ಇರಬಹುದು, ಸ್ವಲ್ಪ ಉಸಿರು ಕಟ್ಟಿ ತಡೆದರೆ ಆ ಕುತ್ತು ಹೊರಟುಹೋಗಬಹುದು, ಆದರೆ ಇದು ಮಾತ್ರ ಖಂಡಿತ ಆಗಬಾರದು, ಏಕೆಂದರೆ ಇದು ವ್ಯಕ್ತಿತ್ವದ ಒಂದು ಭಾಗ, ಐಹಿಕ ಸಮಸ್ಯೆಗಳಿಗೋಸ್ಕರ ಮಾರಿಕೊಳ್ಳುವುದಲ್ಲ. ತಾತ್ಕಾಲಿಕವಾಗಿಯಾದರೂ ಏನಾದರೂ ಮಾಡಿ, ಈ ಪುಸ್ತಕಭಂಡಾರವನ್ನು ಉಳಿಸಿಕೊಡಲು ಸಾಧ್ಯವೇ ಇತ್ಯಾದಿ ಯೋಚಿಸಿದೆ.
ಆದರೆ ನಾವು ಯಾರೂ ಏನೂ ಮಾಡಲು ಸಾಧ್ಯವಾಗದಷ್ಟು ದೊಡ್ಡದಿತ್ತು ಅವರ ಆರ್ಥಿಕ ಅಗತ್ಯಗಳು; ಮತ್ತೂ ಈ ಲೈಬ್ರರಿಯ ಮಾರಾಟ ಕೂಡ ಅವರ ಇಡೀ ಅಗತ್ಯದಲ್ಲಿ ಕೇವಲ ತುರ್ತಿನ ಅಗತ್ಯಗಳಿಗೆ ಮಾತ್ರ ಸರಿಹೊಂದುವಂತಿತ್ತು. ಲೈಬ್ರರಿ ಮಾರದೆ ಬೇರೆ ದಾರಿಯೇ ಇರಲಿಲ್ಲ. ನಾನು ಇಷ್ಟೆಲ್ಲಾ ಚಿಂತಿಸುತ್ತಿರುವಾಗ ಸತ್ಯ ಹೇಳಿದ ಮಾತು ಇದು. “ನೀವಿರುವ ಈ ಪರಿಸ್ಥಿತಿಯಲ್ಲಿ ಈ ಲೈಬ್ರರಿ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂದು ನನಗೆ ಗೊತ್ತು, ಆದರೆ ನಾನು ನಿಮ್ಮನ್ನು ಕೇಳುತ್ತಿರುವುದು ಈ ಬಗ್ಗೆ ಬರೆಯಿರಿ ಅಂತ ಮಾತ್ರ. ನನಗೆ ಗೊತ್ತು, ನನ್ನಷ್ಟೇ ಹುಚ್ಚರು ಯಾವಯಾವುದೋ ಮೂಲೆಯಲ್ಲಿ ಬಹಳಷ್ಟು ಜನ ಇರುತ್ತಾರೆ, ಅವರೊಂದಿಗೆ ಸಂಪರ್ಕ ಸಾಧಿಸುವುದು ಮಾತ್ರ ನಮ್ಮ ಸಧ್ಯದ ಕೆಲಸ; ನಿಮಗೂ ನನ್ನಂಥದೇ ಆಸಕ್ತಿಯಿರುವುದರಿಂದ ನಿಮ್ಮ ಮಿತ್ರರ ಗುಂಪಿನಲ್ಲಿ ಖಂಡಿತಾ ಸಮಾನ ವ್ಯಸನಿಗಳು ಇದ್ದಾರು ಎನ್ನುವುದು ನನ್ನ ನಂಬಿಕೆ”
ಇನ್ನು ನೇರ ವ್ಯವಹಾರಕ್ಕೆ. ಪ್ರಾಚೀನ ಸಾಹಿತ್ಯದಿಂದ ಹಿಡಿದು ಆಧುನಿಕ ಸಾಹಿತ್ಯದವರೆಗೆ, ಪಾಶ್ಚಾತ್ಯದಿಂದ ಪೌರ್ವಾತ್ಯದವರೆಗೆ, ಕಾವ್ಯ, ನಾಟಕ, ಇತಿಹಾಸ, ಆಧ್ಯಾತ್ಮ, ವಿಜ್ಞಾನ, ಕಲೆ, ರಂಗಭೂಮಿ ಹೀಗೆ ಹತ್ತು ಹಲವು ಕ್ಷೇತ್ರಕ್ಕೆ ಸಂಬಂಧಿಸಿದ ಸುಮಾರು ಎರಡೂವರೆ ಸಾವಿರಕ್ಕೂ ಹೆಚ್ಚು ಪುಸ್ತಕಗಳಿರುವ ಈ ಲೈಬ್ರರಿಗೆ ಅವರು ನಿರೀಕ್ಷಿಸುವ ಒಟ್ಟಂದದ ಬೆಲೆ ಎರಡು ಲಕ್ಷ ರುಪಾಯಿಗಳು (ಸರಾಸರಿ ಪುಸ್ತಕವೊಂದಕ್ಕೆ ೮೦ ರುಪಾಯಿಗಳು). ಪುಸ್ತಕವೊಂದರ ಮೌಲ್ಯ ಯಾವಾಗಲೂ ಅದರ ಮುಖಬೆಲೆಗಿಂತ ಬಹು ಹೆಚ್ಚಿನದು, ಮತ್ತು ಒಂದೊಂದು ಪುಸ್ತಕಗಳ ಬೆಲೆಯ ಮೊತ್ತಕ್ಕಿಂತಾ ಇಡೀ ಪುಸ್ತಕ ಭಂಡಾರದ “ಸಂಗ್ರಹ” ಹೆಚ್ಚು ಬೆಲೆ ಬಾಳುವಂಥದ್ದು ಎಂಬುದು ಯಾವುದೇ ಪುಸ್ತಕಪ್ರೇಮಿಗೆ ತಿಳಿದ ವಿಷಯ.
ಮಾರಾಟಕ್ಕಿರುವುದು ಇಡೀ ಲೈಬ್ರರಿಯೇ ಹೊರತು individual ಪುಸ್ತಕಗಳಲ್ಲ. ಒಬ್ಬ ವ್ಯಕ್ತಿ, ಅಲ್ಲದಿದ್ದರೆ ಒಂದು ಗುಂಪು ಕೂಡ ಇದನ್ನು ಖರೀದಿಸಬಹುದು, ಆದರೆ ಇಡೀ ಲೈಬ್ರರಿಯನ್ನು ಒಟ್ಟಿಗೆ ಖರೀದಿಸಬೇಕೆನ್ನುವುದಷ್ಟೇ ಷರತ್ತು, ಇಲ್ಲವೆಂದರೆ ಅದು ತಮ್ಮ ಹಣಕಾಸಿನ ಅಗತ್ಯವನ್ನು ಪೂರೈಸದು, ಹಾಗೂ ಪುಸ್ತಕಗಳನ್ನು ಹರಿದು ಹಂಚುವುದು ಭಾವನಾತ್ಮಕವಾಗಿ ನೋವಿನ ವಿಷಯ ಎಂದು ಅವರ ಅಭಿಪ್ರಾಯ. ಹಾಗೂ ಕೊಂಡವರು ಕೂಡ ಆ ಸಂಗ್ರಹವನ್ನು ಹಾಗೆಯೇ ನೋಡಿಕೊಂಡಾರೆನ್ನುವುದು ಆಶಯ ಕೂಡ.
ಪುಸ್ತಕ ಸಂಗ್ರಹದ ಕೆಲವು ಚಿತ್ರಗಳುhttp://picasaweb.google.co.in/ksmanjunatha/SatyaLibrary# ಇಲ್ಲಿವೆ.
ಆಸಕ್ತರು ಸತ್ಯನಾರಾಯಣರನ್ನು ನೇರವಾಗಿ ಸಂಪರ್ಕಿಸಬಹುದು ಮತ್ತು ಬೆಂಗಳೂರಿನಲ್ಲಿರುವ ಅವರ ಮನೆಗೆ ಭೇಟಿನೀಡಿ ಪುಸ್ತಕ ಸಂಗ್ರಹವನ್ನು ನೋಡಬಹುದು. ಅವರ ಮೊಬೈಲ್ ಸಂಖ್ಯೆ  94487 03864
ಪುಸ್ತಕ ಸಂಗ್ರಹವನ್ನು ಮಾರುವ ನಿರ್ಧಾರವೇ ನೋವಿನ ನಿರ್ಧಾರ; ಕೊನೆಯ ಪಕ್ಷ ಅದನ್ನು ಮಾರುವ ಪ್ರಕ್ರಿಯೆ ಹೆಚ್ಚು ನೋವಿಲ್ಲದೆಯೇ ನಡೆಯಲೆಂಬುದು ವೈಯಕ್ತಿಕವಾಗಿ ನನ್ನ ಹಾರೈಕೆ. ಏಕೆಂದರೆ ಇದು ಕೇವಲ ಲೈಬ್ರರಿಯೊಂದನ್ನು ಮಾರುವ/ಕೊಳ್ಳುವ ಪ್ರಶ್ನೆಯಲ್ಲ, ಬದಲಿಗೆ ಜೀವನ ಶೈಲಿ/ಮೌಲ್ಯವೊಂದರ ಬಗೆಗಿನ ನಂಬಿಕೆಯ ಪ್ರಶ್ನೆ. ವ್ಯಕ್ತಿಯೊಬ್ಬ materialistic ಆಯಾಮಗಳಿಲ್ಲದೆಯೂ ಆತ್ಮಸಂತೋಷಕ್ಕೋಸ್ಕರವೇ ಬದುಕಬಹುದು ಎಂಬ ನಂಬಿಕೆಗೆ ಪೆಟ್ಟಾಗುವುದಾದರೆ ಅಂಥಾ ಜೀವನಶೈಲಿಯ ಬಗ್ಗೆ ನಾವು ಪುಟಗಟ್ಟಲೆ ಬರೆಯುವುದು, ವರ್ಷಗಟ್ಟಲೆ ಕನಸುವುದು ಎಲ್ಲ ವ್ಯರ್ಥವೆಂದೇ ನನ್ನ ನಂಬಿಕೆ

‍ಲೇಖಕರು avadhi

May 7, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

 1. Rajani

  Avrallidda tadatmya odi hemme annistu haage egina anivaryate bagge kheda kooda. Nimma haraike ottige nammadu manadumbida haraikegalive. Satya avrige shubhavagali.

  ಪ್ರತಿಕ್ರಿಯೆ
 2. ಜಯದೇವ

  ಆತ್ಮೀಯರೇ
  ನನ್ನ ನಿಮ್ಮ ಬರಹ ಓದಿ ನಿಜಕ್ಕೂ ಬೇಸರವಾಯಿತು. ಶುಷ್ಕ ಭರವಸೆಗಳಿಂದ ಯಾರ ಜೀವನವೂ ಹಣಕಾಸಿನ ತೊಂದರೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ನನ್ನ ಆಲೋಚನೆ ಸರಿ ಎನಿಸಿತು. ನನ್ನ ಬಳಿ ಅವರೆಲ್ಲ ಪುಸ್ತಕ ಕೊಳ್ಳುವಷ್ಟು ಹಣವಿಲ್ಲ. ಆದರೆ, ಅಷ್ಟು ತಾದತ್ಮವಾಗಿ ಕಟ್ಟಿ ಬೆಳೆಸಿದ ಪುಸ್ತಕ ಪ್ರೀತಿಯನ್ನು ಬದುಕಿನ ತಿರುವುಗಳಿಗೆ ಎರೆವು ಕೊಡಬೇಕು ಎಂದಾಗ ಮಾತ್ರ ನೋವಾಗುತ್ತಿದೆ.ಸಾಧ್ಯವಾದಷ್ಟು ಅಷ್ಟು ಪ್ರೀತಿಯಿಂದ ಕೊಂಡ ಅವರ ಪುಸ್ತಕಗಳು ಅವರಲ್ಲಿ ಉಳಿಯುವಂತಹ ವ್ಯವಸ್ಥೆಯಾಗಲಿ ಎಂಬುದು ನನ್ನ ಸದ್ಯದ ಮಟ್ಟಿಗಿನ ಹಾರೈಕೆ.
  ಜಯದೇವ, ಮೈಸೂರು.

  ಪ್ರತಿಕ್ರಿಯೆ
 3. Priyanka Mallikajun

  Sir i felt so sad, anyway his problems get solved means that is enough. My dad Mr.Mallikarjun he’s really intrested to buy those books, I think u have know my dad he has joined you in photography camp in Hampi. really it was beautiful photographs. I personally admired by seeing those photographs.

  ಪ್ರತಿಕ್ರಿಯೆ
 4. ಸರ್ವಮಂಗಳಾ

  ಅಪಮಾನ, ಸಿಟ್ಟು,ನೋವು, ಏಕಾಕಿತನ – ಎಷ್ಟೋ ಬಾರಿ ಹಸಿವನ್ನೂ ಮರೆಸಿಬಿಡುವ, ಎಂದೂ ಮೋಸ ಮಾಡದ, ದ್ರೋಹ ಬಗೆಯದ ಈ ಗೆಳೆಯರನ್ನು ಕಳೆದುಕೊಳ್ಳುವ ಸಂಕಟ ಅರ್ಥವಾದರೂ ನೆರವು ನೀಡಲಾಗದ ಅಸಹಾಯಕತೆ. ಸತ್ಯ ಅವರ ಸಮಸ್ಯೆಗೆ ಬೇಗ ಪರಿಹಾರ ಸಿಗಲಿ- ಸರ್ವಮಂಗಳಾ

  ಪ್ರತಿಕ್ರಿಯೆ
 5. ಮಂಜುನಾಥ

  ನನ್ನ ಕಳಕಳಿಯ ಲೇಖನವನ್ನು ಪ್ರಕಟಿಸಿದ್ದಕ್ಕಾಗಿ “ಅವಧಿ”ಗೆ ಧನ್ಯವಾದಗಳು.
  ಗೆಳೆಯರೇ, ಈ ವಿಷಯದಲ್ಲಿ ಸಣ್ಣದೊಂದು update. ಈ ಲೇಖನ ನನ್ನ ಬ್ಲಾಗು, ಸಂಪದ ಮತ್ತಿತರ ಸಹ-ಬ್ಲಾಗಿಗರ ತಾಣಗಳಲ್ಲಿ ಪ್ರಕಟವಾದಮೇಲೆ ಸಾಕಷ್ಟು ಪ್ರತಿಕ್ರಿಯೆ ಹರಿದು ಬಂದಿದೆ. ಕೆಲ ಉತ್ಸಾಹಿ ಗೆಳೆಯರು ಒಟ್ಟಾಗಿ ಈ ಪುಸ್ತಕ ಸಂಗ್ರಹವನ್ನು ಕೊಳ್ಳುವ ಮತ್ತು ಒಂದು ಸಾರ್ವಜನಿಕ ವಾಚನಾಲಯವನ್ನೂ ಆರಂಭಿಸುವ ಯೋಜನೆ ರೂಪಿಸಿದ್ದೇವೆ. ವಿವರಗಳಿಗೆ http://sampada.net/blog/ksmanjunatha/26/05/2010/25608 ಇಲ್ಲಿ ನೋಡಿ. ಇದಕ್ಕಾಗಿ ಸಾಕಷ್ಟು ಹಣದ ಕೊಡುಗೆಯೂ ಹರಿದು ಬಂದಿದೆ. ಸಧ್ಯಕ್ಕೆ ಸತ್ಯ ಅವರ ತುರ್ತಿನ ಅಗತ್ಯಕ್ಕಾಗಿ ರೂ. ಐವತ್ತು ಸಾವಿರವನ್ನು ಬಿಡುಗಡೆ ಮಾಡಿದ್ದೇವೆ. ಉಳಿದದ್ದನ್ನು ಇನ್ನೆರಡು ಕಂತುಗಳಲ್ಲಿ ಬಿಡುಗಡೆ ಮಾಡಿ ಅವರ ಪುಸ್ತಕ ಸಂಗ್ರಹವನ್ನು ಕೊಳ್ಳುವ ಯೋಜನೆಯಿದೆ. ಈ ಬಗ್ಗೆ ವಿಚಾರ ವಿನಿಮಯಕ್ಕಾಗಿ ಸಮಾನ ಆಸಕ್ತರ gmail group ಕೂಡ ಆರಂಭಗೊಂಡಿದೆ. ಆಸಕ್ತರು ಈ ತಂಡಕ್ಕೆ ಸೇರಬಹುದು http://groups.google.co.in/group/we-care-books
  ನಿಮ್ಮವ
  ಮಂಜುನಾಥ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: