ಕಥೆಗಳು ಬೆಳಗಲಿ “ಛಂದ”ದಿಂದ

vasudhendra.jpgಸೊಂಡೂರಿನ ಬಾಗಿಲಲ್ಲೆ ಸಾಫ್ಟ್ ವೇರ್ ಲೋಕದ ಮೋಡ, ಮಳೆ, ಗಾಳಿ, ಬಿಸಿಲು… ಇವೆಲ್ಲ ಕಾಣುವಂತಾದರೆ ಹೇಗಿದ್ದೀತು? ಇಂಥ ಅಚ್ಚರಿಯನ್ನು ನಿಶ್ಚಯಿಸಿದವರು ಕಥೆಗಾರ ವಸುಧೇಂದ್ರ. ಒಂದು ಪುಟ್ಟ ಊರಿನಲ್ಲೂ ಓದುಗರ ಗ್ರಹಿಕೆಗೆ ದಕ್ಕುವ ಹಾಗೆ, ಎಲ್ಲ ಬೆರಗಿನಿಂದ ನೋಡುವ ಐಟಿ ಕ್ಷೇತ್ರದ ಮನುಷ್ಯಲೋಕವನ್ನು, ಮನಸ್ಸುಗಳ ಲೋಕವನ್ನು ಅಕ್ಷರಗಳಲ್ಲಿ ಸೆರೆ ಹಿಡಿದು ಕೊಡುತ್ತಿರುವವರು ವಸುಧೇಂದ್ರ.

ವಸುಧೇಂದ್ರ ಬಳ್ಳಾರಿಯ ಸೊಂಡೂರಿನ ಕಕ್ಷೆ ದಾಟಿ ಬಂದು ಬಹು ಕಾಲವೇ ಆಯಿತು. ಆದರೆ ಅವರ ಬರವಣಿಗೆಯ ಬಯಲಲ್ಲಿ ಮಾತ್ರ ಸೊಂಡೂರು ಒಂದು ಊರಾಗಿ, ಪ್ರೀತಿ ಚಿಮ್ಮಿಸುವ ಸೆಲೆಯಾಗಿ, ರೂಪಕವಾಗಿ ಇನ್ನೂ ತನ್ನೆಲ್ಲ ಚೈತನ್ಯದೊಂದಿಗೇ ಇದೆ. “ನಮ್ಮ ವಾಜಿನ್ನೂ ಆಟಕ್ಕೆ ಸೇರಿಸಿಕೊಳ್ರೋ” ಎಂಬ ಅವರ ಕಥೆಯಾಗಲಿ, ಅವರ ಪ್ರಬಂಧಗಳಾಗಲಿ ಕಟ್ಟಿಕೊಡುವ ಬಳ್ಳಾರಿ ಸೀಮೆಯ ಚಿತ್ರಗಳು ಭಾವುಕವಾಗಿ ಮಾತ್ರವಲ್ಲ, ಇವತ್ತಿನ ಸವಾಲುಗಳ ಎದುರಲ್ಲಿ ಬದಲಾಗುತ್ತಿರುವ ಅಂಥ ಎಲ್ಲ ಊರುಗಳ ಚಹರೆಯನ್ನೂ ಹಿಡಿದಿಡುವ ರೇಖೆಗಳೊಂದಿಗೂ ವ್ಯಕ್ತವಾಗುತ್ತವೆ. “ಚೇಳು” ಅವರ ಹೊಸ ಕಥಾ ಸಂಕಲನ.

ವಸುಧೇಂದ್ರ ಕನ್ನಡ ಕಥೆಗಳ ಲೋಕಕ್ಕೆ ಕೊಡುತ್ತಿರುವ ಮತ್ತೊಂದು ಕೊಡುಗೆ, ಐಟಿ ಕ್ಷೇತ್ರದ ರೂಪಕ ಚಿತ್ರಗಳು. ವಿvasudhendra4.jpgಲಕ್ಷಣ ಯಾಂತ್ರಿಕತೆ ಮತ್ತು ಆರ್ಥಿಕತೆಯೇ ಪ್ರಧಾನವಾದ ಪ್ರಪಂಚದಲ್ಲಿನ ಮನಸ್ಸು ಮನಸ್ಸುಗಳ ನಡುವಿನ ಕದನವನ್ನು ವಸುಧೇಂದ್ರ ನಿರೂಪಿಸುತ್ತಾರೆ. ಆ ಯಾಂತ್ರಿಕತೆ, ಆ ಅರ್ಥ ವ್ಯಾಮೋಹದ ಬಳಿಕವೂ, ಅದರ ಹೊರತಾದ ತನ್ನೊಳಗಿನ ಮತ್ತಾವುದೋ ಮಿಡಿತಕ್ಕಾಗಿ ಮನುಷ್ಯ ಕಾಯುವುದನ್ನು, ತಹತಹಿಸುವುದನ್ನು, ತೀವ್ರ ಯಾತನೆಯಲ್ಲಿ ಬೇಯುವುದನ್ನು  ವಸುಧೇಂದ್ರ ಹೃದಯ ತಟ್ಟುವ ಹಾಗೆ ಹೇಳುತ್ತಾರೆ. ಐಟಿ ಲೋಕ ಸೊಂಡೂರಿನ ಬಾಗಿಲಲ್ಲೂ ಎದೆಯೊಡೆದು ಬೀಳುವುದು ಆಗಲೇ.

ಇಷ್ಟು ಗಾಢವಾಗಿ ಬರೆಯುವ ವಸುಧೇಂದ್ರ, ಇದನ್ನೂ ಮೀರಿದ ಇನ್ನೂ ಒಂದು ಕಾರಣಕ್ಕಾಗಿ ಮುಖ್ಯರಾಗುತ್ತಾರೆ. ಅದು, ಹೊಸ ಬರಹಗಾರರನ್ನು ಕುರಿತ ಅವರ ಕಾಳಜಿ. ಅವರ “ಛಂದ ಪುಸ್ತಕ” ಈ ಕಾಳಜಿಯ ಸಾಕಾರ ರೂಪ. ಹೊಸದಾಗಿ ಬರೆಯುತ್ತಿರುವ ಎಷ್ಟೋ ಬರಹಗಾರರು ಸಂಕೋಚಗಳನ್ನೂ ಸಂಕಟಗಳನ್ನೂ ಮೀರಿ ಕತ್ತಲಿಂದೀಚೆಗೆ ಬರಲಾರದ ಸ್ಥಿತಿಯಲ್ಲಿರುವುದು, ಸ್ವತಃ ಗ್ರಾಮೀಣ ಪರಿಸರದವರಾದ ವಸುಧೇಂದ್ರ ಅವರಿಗೆ ಗೊತ್ತು. ಹೊಸ ಕಥೆಗಾರರ ಶೋಧಕ್ಕೆಂದೇ ಪ್ರತಿ ವರ್ಷವೂ ಅವರು ಛಂದದ ಮೂಲಕ ಕಥಾ ಸಂಕಲನಗಳ ಹಸ್ತಪ್ರತಿ ಸ್ಪರ್ಧೆ ಏರ್ಪಡಿಸುತ್ತಾರೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಎಲ್ಲ ಹೊಸಬರನ್ನೂ ಪ್ರೀತಿಯಿಂದ ಓದುತ್ತಾರೆ. ಅರ್ಹರಾದವರ ಬರವಣಿಗೆಗೆ ಪ್ರಶಸ್ತಿ ನೀಡಿ, ಅವರ ಪುಸ್ತಕ ಪ್ರಕಟಿಸುವ ಹೊಣೆಯನ್ನೂ ಹೊರುತ್ತಾರೆ. ಪುಸ್ತಕವನ್ನು ಒಪ್ಪಗೊಳಿಸಿ ಪ್ರಕಟಿಸುವುದು ಮಾತ್ರವಲ್ಲದೆ, ಅದರ ಬಿಡುಗಡೆ ಕಾರ್ಯಕ್ರಮದವರೆಗೂ ವಸುಧೇಂದ್ರರ ಕಾಳಜಿಯಲ್ಲಿ ಅಚ್ಚುಕಟ್ಟುತನ ಕಾಣಿಸುತ್ತದೆ.

ಛಂದದ ಈ ಶ್ರದ್ಧೆಯೇ, ಅದಕ್ಕೆ ಎಲ್ಲರ ಪ್ರೀತಿ, ಮೆಚ್ಚುಗೆಯನ್ನು ತಂದಿದೆ. ಛಂದ ವಸುಧೇಂದ್ರ ಅವರ ಮಂದಸ್ಮಿತದ ಹಾಗೇ ಇದೆ. ಛಂದದ ಕ್ರಿಯಾಶೀಲತೆಯಲ್ಲೇ ಅದಮ್ಯ ಪುಸ್ತಕ ಪ್ರೀತಿ ಮತ್ತು ಪ್ರತಿಭಾವಂತ ಹೊಸಬರನ್ನು ರಂಗಕ್ಕೆ ಕರೆಯುವ ಹಿರಿ ಗುಣ ಬೆರೆತ, ಆಪ್ತವಾದ ಛಂದಸ್ಸು ಇದೆ.

ಕಥೆಗಳು ಬೆಳಗಲಿ ಛಂದದಿಂದ.        

‍ಲೇಖಕರು avadhi

June 27, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

2 ಪ್ರತಿಕ್ರಿಯೆಗಳು

 1. ವಸುಧೇಂದ್ರ

  ಮಾನ್ಯರೆ,

  ನೀವ್ಯಾರೋ ನನಗೆ ಗೊತ್ತಿಲ್ಲ. ಆದರೂ ಪ್ರೀತಿಯಿಂದ ನನ್ನ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನು ಬರೆದಿರುವುದು ನನ್ನನ್ನು ಆರ್ದ್ರಗೊಳಿಸಿದೆ. ನಿಮಗೆ ಧನ್ಯವಾದಗಳು.

  ನಿಮ್ಮ ಅವಧಿ ಪ್ರಯತ್ನ ಚೆನ್ನಾಗಿದೆ. ಒಳ್ಳೆಯದಾಗಲಿ.

  ವಸುಧೇಂದ್ರ

  ಪ್ರತಿಕ್ರಿಯೆ
 2. ಸುಪ್ತದೀಪ್ತಿ

  ಸುಂದರ ಅವಧಿ,
  ಚಂದದ ಅಕ್ಷರಲೋಕದಲ್ಲಿ ‘ಛಂದ’ದ ಬಗ್ಗೆ, ಅದರ ಕರ್ತೃ ‘ವಸು’ ಬಗ್ಗೆ ಆತ್ಮೀಯವಾಗಿ ಉಲ್ಲೇಖಿಸಿದ್ದೀರಿ. ನಿಮಗೆ ನನ್ನದೆರಡು ನಮನಗಳು.

  ಹೀಗೇ ಬರೆಯುತ್ತಿರಿ, ಓದಲು ನಾವಿದ್ದೇವಲ್ಲ.
  ಇಂತಿ,
  ಜ್ಯೋತಿ (ಸುಪ್ತದೀಪ್ತಿ)

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: